• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೂರು ಕೋಟಿ ಭಾರತೀಯರ ಮಧ್ಯೆ ಒಂದು ‘ರತ್ನ’ ಸಿಗಲಿಲ್ಲವಾ?

By Staff
|
Vishweshwar Bhat ವಿಶ್ವೇಶ್ವರ ಭಟ್‌

ಅಂಥವ ಒಬ್ಬನೇ ಒಬ್ಬನೂ ಸಿಗಲಿಲ್ಲವಾ?

ಹಾಗಂತ ಈಗ ಕೇಳಬೇಕಾಗಿದೆ. ನೂರು ಕೋಟಿ ಜನರಿರುವ ಈ ಬೃಹದ್ಭವ್ಯ ದೇಶದಲ್ಲಿ ಒಬ್ಬನಿಗೂ ವರ್ಷ ಭಾರತರತ್ನ ಸಿಗಲಿಲ್ಲ. ಯಾಕೆಂದರೆ ಈ ಸರಕಾರದ ದೃಷ್ಟಿಯಲ್ಲಿ ಈ ರಾಷ್ಟ್ರದಲ್ಲಿ ಒಬ್ಬನೇ ಒಬ್ಬ ಭಾರತರತ್ನ ಪ್ರಶಸ್ತಿಗೆ ಲಾಯಕ್ಕಾಗುವವನು ಇಲ್ಲ. ಹೀಗಾಗಿ ನಾವು-ನೀವೆಲ್ಲ ಕಾತರದಿಂದ ನಿರೀಕ್ಷಿಸಿದ್ದ ಅತ್ಯುಚ್ಚ ನಾಗರೀಕ ಪ್ರಶಸ್ತಿಯನ್ನು ಈ ವರ್ಷ ಯಾರಿಗೂ ಕೊಟ್ಟಿಲ್ಲ. ವೆರಿ ಸಿಂಪಲ್‌.

 There are no Ratnas in MahaBharat2005ನೂರು ಕೋಟಿಗೆ ಒಂದೇ ಒಂದು ರತ್ನ ಸಿಗಲಿಲ್ಲವೆಂದರೆ ಅದು ನಾಚಿಕೆಗೇಡು ಅಲ್ಲದೇ ಮತ್ತೇನು? ಹಾಗೆಂದು ಈ ಮಹಾನ್‌ ದೇಶದಲ್ಲಿ ಭಾರತರತ್ನಗಳು ಇಲ್ಲವೆಂದಲ್ಲ. ಇದ್ದಾರೆ ಹಾಗೂ ಖಂಡಿತವಾಗಿಯೂ ಇದ್ದಾರೆ. ಆದರೆ ಅವರೆಲ್ಲರೂ ಸರಕಾರದ ಕಣ್ಣಿಗೆ ರತ್ನಗಳಾಗಿ ಕಾಣುತ್ತಿಲ್ಲ. ಹೀಗಾಗಿ ಯಾರಿಗೂ ಕೊಟ್ಟಿಲ್ಲ. ಭಾರತರತ್ನವೆಂಬ ಪ್ರಶಸ್ತಿ ಅಂಗಡಿಯಲ್ಲಿ ಈ ವರ್ಷ ಯಾವುದೇ ವ್ಯಾಪಾರ ಕುದುರಿಲ್ಲ.

ಕೆಟ್ಟವರಿಗೆ, ಅಪಾತ್ರರಿಗೆ ಉನ್ನತ ಪ್ರಶಸ್ತಿಯನ್ನು ಕೊಟ್ಟಾಗ ಹೇಗೆ ಪ್ರಶಸ್ತಿಯ ಮೌಲ್ಯ ಕುಂದುವುದೋ, ಹಾಗೆಯೇ ಯೋಗ್ಯರಿಗೆ ಕೊಡದಿದ್ದಾಗಲೂ ಅದರ ಮಹತ್ವ ಕಡಿಮೆಯಾಗುತ್ತದೆ. ಪ್ರಶಸ್ತಿಯನ್ನು ಯಾರಿಗೂ ಕೊಟ್ಟಿಲ್ಲವೆಂದರೆ ಯೋಗ್ಯರು ಯಾರು ಸಿಕ್ಕಿಲ್ಲ ಎಂದೇ ಅರ್ಥ. ಪ್ರಶಸ್ತಿಯ ಪಾವಿತ್ರ್ಯ,ಘನತೆ, ಗೌರವವನ್ನು ಎತ್ತಿಹಿಡಿಯುವುದಕ್ಕಾಗಿ ಕಂಡಕಂಡವರಿಗೆಲ್ಲ ಭಾರತರತ್ನ ಕೊಡಲಾಗುವುದಿಲ್ಲ. ಹಾಗೆ ಕೊಡಲು ಅದು ರಾಜ್ಯೋತ್ಸವ ಪ್ರಶಸ್ತಿ ಅಲ್ಲ. ಆದರೆ ನೂರು ಕೋಟಿಗೊಬ್ಬನೂ ಸಿಗದಿದ್ದರೆ, ಆಗ ಆ ಪ್ರಶಸ್ತಿಯ ಬಗ್ಗೆ ಸ್ವಲ್ಪ ಯೋಚಿಸಬೇಕಾಗುತ್ತದೆ.

ಭಾರತರತ್ನವನ್ನು ಯಾರಿಗೂ ಕೊಡದೇ ಹಾಗೆ ಬಚ್ಚಿಟ್ಟುಕೊಂಡಿದ್ದು ಇದೇ ಮೊದಲೇನಲ್ಲ. ಹಿಂದೆ ಅನೇಕ ಸಲ ಈ ಪ್ರಶಸ್ತಿಯನ್ನು ಕೊಡದಿರುವ ನಿದರ್ಶನಗಳಿವೆ. 1954ರಲ್ಲಿ ಸ್ಥಾಪಿಸಲಾದ ಭಾರತರತ್ನ ಪ್ರಶಸ್ತಿಯನ್ನು ಪ್ರತಿವರ್ಷದಂತೆ ಇಲ್ಲಿಯವರೆಗೆ ಕೊಟ್ಟಿದ್ದರೆ 51ಮಂದಿಗೆ ಕೊಡಬೇಕಿತ್ತು. ಆದರೆ ಕೇವಲ 40ಮಂದಿಗೆ ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಒಂದೇ ವರ್ಷ ಇಬ್ಬರಿಗೆ, ಮೂವರಿಗೆ ನೀಡಿದ್ದೂ ಉಂಟು.(ಉದಾಹರಣೆಗೆ 1999ರಲ್ಲಿ ರವಿಶಂಕರ್‌, ಅಮರ್ತ್ಯಸೇನ್‌ ಹಾಗೂ ಗೋಪಿನಾಥ್‌ ಬಾರ್ಡೋಲಾಯ್‌ ಅವರಿಗೆ ನೀಡಲಾಗಿತ್ತು.) 1992ರಲ್ಲಿ ಸತ್ಯಜಿತ್‌ ರೇ ಅವರಿಗೆ ಭಾರತರತ್ನ ಕೊಟ್ಟ ಬಳಿಕ 1997ರಲ್ಲಿ ಡಾ.ಅಬ್ದುಲ್‌ ಕಲಾಮ್‌ ಅವರಿಗೆ ಕೊಡುವವರೆಗೆ ಈ ಐದು ವರ್ಷಗಳಲ್ಲಿ ಯಾರಿಗೂ ಕೊಟ್ಟಿರಲಿಲ್ಲ. ಆ ವರ್ಷ ಒಂದೇ ಸಲ ಡಾ.ಕಲಾಂ, ಗುಲ್ಜಾರಿಲಾಲ್‌ ನಂದಾ ಹಾಗೂ ಅರುಣಾ ಅಸಫ್‌ ಅಲಿಗೆ(ಮರಣೋತ್ತರ) ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ಯಾವುದೇ ಮಾನದಂಡಗಳಿಲ್ಲ. ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳಿಲ್ಲ. ಆಯ್ಕೆಯ ಮಾಪನಗಳಿಲ್ಲ. ಆಯಾ ಕಾಲದಲ್ಲಿ ಅಧಿಕಾರದಲ್ಲಿರುವವರ ಮನಸ್ಸಿಗೆ ಬಂದಂತೆ ಈ ಪ್ರಶಸ್ತಿ ಕೊಟ್ಟುಕೊಂಡು ಬರಲಾಗಿದೆ. ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ನೀಡಬಹುದೆಂಬುದನ್ನು ಬಿಟ್ಟರೆ, ಮತ್ತ್ಯಾವ ಮಾನದಂಡವೂ ಇಲ್ಲ. ಈ ಪ್ರಶಸ್ತಿಯನ್ನು ಸ್ಥಾಪಿಸುವಾಗ ನಿಧನರಾದವರಿಗೆ ಕೊಡಬಾರದೆಂಬ ನಿಯಮವನ್ನು ರೂಪಿಸಿದ್ದರಿಂದ ಮಹಾತ್ಮಗಾಂಧಿ ಭಾರತರತ್ನಕ್ಕೆ ಭಾಜನರಾಗಲಿಲ್ಲ. ಮುಂದಿನ ವರ್ಷ ಈ ನಿಯಮವನ್ನು ಸಡಿಲಿಸಿ, ಮರಣೋತ್ತರ ಪ್ರಶಸ್ತಿ ನೀಡಬಹುದೆಂದು ನಿಯಮವನ್ನು ಮಾರ್ಪಡಿಸಲಾಯಿತು. ಮೊದಲ ವರ್ಷವೇ ಡಾ.ಎಸ್‌.ರಾಧಾಕೃಷ್ಣನ್‌, ಸಿ.ರಾಜಗೋಪಾಲಾಚಾರಿ ಹಾಗೂ ಡಾ.ಸಿ.ವಿ.ರಾಮನ್‌ಗೆ ಭಾರತರತ್ನ ಕೊಡಲಾಯಿತು. ಸಡಿಲಿಸಿದ ನಿಯಮದ ಪ್ರಕಾರ, ಮಹಾತ್ಮ ಗಾಂಧಿಗೆ ಪ್ರಶಸ್ತಿ ಕೊಡಬಹುದಿತ್ತು. ಆದರೆ ಮೊದಲು ಮೂವರಿಗೆ ನೀಡಿದ ಬಳಿಕ ಕೊಟ್ಟರೆ, ಮಹಾತ್ಮ ಗಾಂಧಿಯನ್ನು ಅವಮಾನಿಸಿದಂತಾಗುತ್ತದೆಂದು ಭಾವಿಸಿ ಅವರನ್ನು ಪಕ್ಕಕ್ಕಿಡಲಾಯಿತು. ಹೀಗಾಗಿ ಇಂದಿಗೂ ಮಹಾತ್ಮಗಾಂಧಿಗೆ ಭಾರತರತ್ನ ಕೊಟ್ಟಿಲ್ಲ.

ಆದರೆ ಇದನ್ನು ಯಾರ್ಯಾರಿಗೆ, ಯಾವಾಗ ಕೊಟ್ಟಿದ್ದಾರೆಂಬುದನ್ನು ಗಮನಿಸಿ. ಆಚಾರ್ಯ ವಿನೋಬಾ ಭಾವೆಯವರಿಗೆ ಈ ಪ್ರಶಸ್ತಿಯನ್ನು ಕೊಡುವುದಕ್ಕಿಂತಲೂ ಎಂಟು ವರ್ಷಗಳ ಹಿಂದೆ ರಾಷ್ಟ್ರಪತಿ ಹುದ್ದೆಗೆ ಸ್ವಲ್ಪವೂ ಘನತೆ ತಂದುಕೊಡದ, ಬಾಯಿಬಿಟ್ಟು ಹೇಳಿ ಎಲ್ಲೆಡೆಯೂ ಸನ್ಮಾನ ಮಾಡಿಕೊಳ್ಳುತ್ತಿದ್ದ, ಸಣ್ಣಪುಟ್ಟ ಆಸೆ, ಆಕಾಂಕ್ಷೆಗಳನ್ನು ಅದುಮಿಟ್ಟುಕೊಳ್ಳಲಾಗದ ಸಣ್ಣ ಮನುಷ್ಯ ವರಾಹಗಿರಿ ವೆಂಕಟಗಿರಿ ಎಂಬುವವರಿಗೆ ಈ ಭಾರತರತ್ನ ಪ್ರಧಾನ ಮಾಡಲಾಗಿತ್ತು. ವಿ.ವಿ.ಗಿರಿಯನ್ನು ನಾವು ಹೇಗೆ ನೆನಪಿಕೊಳ್ಳಬೇಕೋ ಗೊತ್ತಿಲ್ಲ. ಕಾರಣ ಅವರು ನೆನಪಲ್ಲಿ ಉಳಿಯುವಂತಹ ಯಾವ ಕೆಲಸವನ್ನು ಮಾಡಲಿಲ್ಲ. ಅವರೆಂದೂ ವೃತ್ತಿ ರಾಜಕಾರಣಿಗಳಿಗಿಂತ ಭಿನ್ನವಾಗಿ ವರ್ತಿಸಲಿಲ್ಲ. ಕ್ಷುಲ್ಲಕ ಆಮಿಷಗಳಿಗೆ ಅವರು ಸುಲಭವಾಗಿ, ನಾಚಿಕೆಬಿಟ್ಟು ಕೈಯಾಡ್ಡುತ್ತಿದ್ದರು. ನಿಮ್ಮ ಹೆಸರಲ್ಲೊಂದು ಲೇಔಟ್‌ ಮಾಡಿ, ನಿಮಗೆರಡು ಪುಕ್ಕಟೆ ಸೈಟು ಕೊಡುತ್ತೇನೆಂದು ಹೇಳಿದರೆ ಈ ಮನುಷ್ಯ ರಾಷ್ಟ್ರಪತಿ ಭವನದ ಮೆಟ್ಟಿಲಿಳಿದು ಬೆಂಗಳೂರಿನ ಗಿರಿನಗರದ ತನಕ ಬಂದು ಹೋಗುತ್ತಿದ್ದ. ಅವರಿಗೂ ಒಂದು ಇರಲಿ ಅಂತ ಭಾರತರತ್ನ ಪ್ರಶಸ್ತಿ ಕೊಟ್ಟಿದ್ದಾಯಿತು!

ಮರುದು ಗೋಪಾಲನ್‌ ರಾಮಚಂದ್ರನ್‌ ಅಂದ್ರೆ ಯಾರಿಗೂ ಗೊತ್ತಾಗುವುದಿಲ್ಲ. ಎಂ.ಜಿ.ರಾಮಚಂದ್ರನ್‌ ಅಂದ್ರೆ ಗೊತ್ತು ಗೊತ್ತು. ನಾವು ಅವರಿಗೂ ಒಂದು ಕೊಟ್ಟೆವು. ಈ ದೇಶ ಕಂಡ ಮಹಾನ್‌ ಮುತ್ಸದ್ಧಿ, ಧೀರೋದಾತ್ತ ನಾಯಕ ಉಕ್ಕಿನ ಮನುಷ್ಯ ಎಂದೇ ಕರೆಸಿಕೊಂಡ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಹಾಗೂ ಭಾರತದ ಸಂವಿಧಾನ ಶಿಲ್ಪಿ, ದಲಿತರಿಗೆ ಧ್ವನಿಯಾದ ಡಾ.ಭೀಮರಾವ್‌ ರಾಮಜೀ ಅಂಬೇಡ್ಕರ್‌ ಅವರಿಗಿಂತ ಮೊದಲು ಎಂಜಿಆರ್‌ಗೆ ಭಾರತರತ್ನ ಕೊಟ್ಟವರು ನಾವು. ಎಂಜಿಆರ್‌ ಅವರು ಒಬ್ಬ ಉತ್ತಮ ನಟರಾಗಿದ್ದರು. ಫುಲ್‌ಸ್ಟಾಪ್‌. ಅದಕ್ಕಿಂತ ಹೆಚ್ಚಾಗಿ ನಾವು ನೆನಪಿಸಿಕೊಳ್ಳುವಂತಹ ಮಹತ್ಕಾರ್ಯವನ್ನೇನನ್ನೂ ಅವರು ಮಾಡಲಿಲ್ಲ. ಅವರು ಮುಖ್ಯಮಂತ್ರಿಯಾಗಿ ಮಾಡಿದ್ದು ಅಧಿಕಾರ ಹಾಗೂ ಸಮಯಸಾಧಕ ರಾಜಕಾರಣವನ್ನೇ. ಭಾರತರತ್ನ ಕೊಡುವಂತಹ ರಾಜಕಾರಣಿಯೂ ಅವರಾಗಿರಲಿಲ್ಲ. ಅವರಿಗಿಂತಲೂ ಭಲೇ ಉತ್ತಮ ನಟರು ಇದ್ದರು. ಆದರೆ ಇವೆಲ್ಲವನ್ನು ನಿರ್ಲಕ್ಷಿಸಿ ಎಂಜಿಆರ್‌ಗೆ ಭಾರತರತ್ನ ಒಪ್ಪಿಸಿ ಕೃತಾರ್ಥರಾದವರು ನಾವು. ತಮಿಳುನಾಡಿನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಳೆಸಲು ಹಾಗೂ ಎಐಎಡಿಎಂಕೆಯಾಂದಿಗಿನ ಮೈತ್ರಿಯನ್ನು ಗಟ್ಟಿಗೊಳಿಸಿಕೊಳ್ಳಲು ಅಂದಿನ ಪ್ರಧಾನಿ ರಾಜೀವ್‌ಗಾಂಧಿಗೆ ಹೊಳೆದಿದ್ದು ಭಾರತರತ್ನ ಪ್ರಶಸ್ತಿ, ನೆನಪಾದವರು ಎಂಜಿಆರ್‌!

ಇಂದಿರಾಗಾಂಧಿ, ಕಾಮರಾಜ್‌, ಎಂಜಿಆರ್‌, ರಾಜೀವ್‌ಗಾಂಧಿಯವರಿಗೆಲ್ಲ ಭಾರತರತ್ನವನ್ನು ಹಂಚಿದ ಬಳಿಕ ನೆನಪಾದವರು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌. ಇಂದಿರಾ ಗಾಂಧಿ ಪ್ರಧಾನಿಯಾಗಿರುವಷ್ಟು ವರ್ಷವೂ ತನ್ನ ಅಪ್ಪನ ಸರೀಕರಾಗಿದ್ದ ಪಟೇಲ್‌ಗೆ ಭಾರತರತ್ನ ಕೊಡದಿರಲು ನಿರ್ಧರಿಸಿದ್ದರು. ಅಷ್ಟೇ ಅಲ್ಲ ತಮ್ಮ ನಿರ್ಧಾರದಂತೆ ನಡೆದುಕೊಂಡರು. ನೆಹರುಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ, ಪ್ರಧಾನಿ ಅಭ್ಯರ್ಥಿಯೆಂದು ಕರೆಸಿಕೊಂಡಿದ್ದ ಪಟೇಲ್‌ ಬಗ್ಗೆ ಇಂದಿರಾ ಹಗೆತನ ಭಾರತರತ್ನ ಪ್ರಶಸ್ತಿಯಲ್ಲೂ ಹೊರಬಿದ್ದಿತ್ತು. ಪ್ರತಿಸಲ ಗಣರಾಜ್ಯೋತ್ಸವಕ್ಕಿಂತ ಮುನ್ನ ಭಾರತರತ್ನ ಪ್ರಶಸ್ತಿಗೆ ಸಂಭಾವ್ಯ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಸರ್ದಾರ್‌ ಪಟೇಲ್‌ ಹೆಸರು ಇರುತ್ತಿತ್ತು. ಈ ಪಟ್ಟಿಯನ್ನು ಇಂದಿರಾ ಮುಂದೆ ಹಿಡಿದಾಗ ಪಟೇಲ್‌ ಹೆಸರಿನ ಮುಂದೆ ಅವರು ದೊಡ್ಡದಾಗಿ ಕಾಟು ಹಾಕುತ್ತಿದ್ದರು. ಇಂಥ ಪಟ್ಟಿಗಳು ಅವರ ಮುಂದೆ ವರ್ಷಕ್ಕೊಂದು ಬಾರಿಯಂತೆ ಹದಿನೆಂಟು ಸಲ ಬಂದವು. ಉಹುಂ, ಅವರು ಕೊನೆಗೂ ಪಟೇಲ್‌ಗೆ ಭಾರತರತ್ನ ನೀಡಲು ಒಪ್ಪಲೇ ಇಲ್ಲ. ಅವರ ಮಗ ರಾಜೀವ್‌ಗಾಂಧಿ ಕೂಡ ತಾಯಿ ಹಠವನ್ನೇ ಮುಂದುವರೆಸಿದರು. ಅವರು ಪ್ರಧಾನಿಯಾಗಿದ್ದಾಗಲೂ ಪಟೇಲ್‌ ಹೆಸರಿನ ಮುಂದೆ ದೊಡ್ಡ ಕಾಟು! ಗಾಂಧಿ ಕುಟುಂಬದ ಯಾರೇ ಪ್ರಧಾನಿ ಗದ್ದುಗೆಯಲ್ಲಿರಲಿ, ಅವರಿರುವತನಕ ಪಟೇಲ್‌ಗೆ ಮಾತ್ರ ಆ ಪ್ರಶಸ್ತಿ ದಕ್ಕುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. 1991ರಲ್ಲಿ ಚಂದ್ರಶೇಖರ್‌ ಪ್ರಧಾನಿಯಾಗುವತನಕ ಪಟೇಲ್‌ರ ಆತ್ಮ ಪ್ರಶಸ್ತಿಗೆ ಕಾಯಬೇಕಾಯಿತು.

ಜಯಪ್ರಕಾಶ್‌ ನಾರಾಯಣ್‌ ಅವರಿಗೂ ಈ ಮಾತು ಅನ್ವಯ. 1980ರಿಂದ ಪ್ರತಿವರ್ಷವೂ ಜೆಪಿ ಹೆಸರು ಸಂಭಾವ್ಯರ ಹೆಸರಿನಲ್ಲಿ ಬಂದು ಹೋಗುತ್ತಿತ್ತು. ಪಿ.ವಿ.ನರಸಿಂಹರಾಯರು ಜೆಪಿಗೆ ‘ರತ್ನ’ಕೊಡಲು ಒಲವು ತೋರುತ್ತಿದ್ದಾರೆಂಬುದು ಗೊತ್ತಾದಾಗ ಕಾಂಗ್ರೆಸ್‌ನ ಕೆಲವು ನಾಯಕರು ಇಂದಿರಾ ಆಳ್ವಿಕೆಯನ್ನು ವಿರೋಧಿಸಿದ, ಅವರ ವಿರುದ್ಧ ಸಮರ ಸಾರಿದ ವ್ಯಕ್ತಿಗೆ ಆ ಪ್ರಶಸ್ತಿ ಕೊಡುವುದನ್ನು ಪ್ರತಿಭಟಿಸಿದರು. ನರಸಿಂಹರಾಯರು ಅಲ್ಲಿಗೆ ಸುಮ್ಮನಾದರು. ಜೆಪಿ ನಿಧನರಾದ 19ವರ್ಷಗಳ ಬಳಿಕ 1998ರಲ್ಲಿ ಅವರಿಗೆ ಭಾರತರತ್ನ ಬಂತು! ಮೊರಾರ್ಜಿ ದೇಸಾಯಿ ಎಂಬ ಘಾಟಿ, ಜಿಗುಟು ಮನುಷ್ಯನಿಗೆ ಈ ಪ್ರಶಸ್ತಿ ಹೇಗೆ ಬಂತೋ ಆ ದೇವನೇ ಬಲ್ಲ. ಸ್ವತಂತ್ರ ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಏಕೈಕ ಕಾರಣಕ್ಕೆ ಅವರಿಗೂ ಭಾರತಾಂಬೆಯ ರತ್ನ ಮುಡಿಸಲಾಯಿತು. ಚಂದ್ರಶೇಖರ್‌ ಮನಸ್ಸು ಮಾಡದಿದ್ದರೆ ಮೊರಾರ್ಜಿಗೂ ಸಿಗುತ್ತಿರಲಿಲ್ಲ.

ಭಾರತರತ್ನಕ್ಕೆ ಭಾರತೀಯರು ಯಾರು ಸಿಗದಿದ್ದಾಗ ಅಂದರೆ ನಮ್ಮಲ್ಲಿ ಈ ಪ್ರಶಸ್ತಿಗೆ ಯೋಗ್ಯರಿಲ್ಲ ಎಂದು ತೀರ್ಮಾನಿಸಿದಾಗ ವಿದೇಶಿಯರನ್ನು ಕರೆಸಿ ನಾವು ಅವರಿಗೆ ಪ್ರದಾನ ಮಾಡಿ ಸಂತೃಪ್ತರಾಗಿದ್ದೇವೆ. ಮದರ್‌ ಥೆರೇಸಾ, ಖಾನ್‌ ಅಬ್ದುಲ್‌ ಗಫಾರ್‌ಖಾನ್‌, ನೆಲ್ಸನ್‌ ಮಂಡೇಲರಿಗೆ ಭಾರತರತ್ನ ಗರಿ ತೊಡಿಸಿದ್ದೇವೆ. ಮದರೆ ಥೆರೇಸಾಗೆ ಯಾಕೆ ಈ ಪ್ರಶಸ್ತಿ ಕೊಡಬಾರದು ಎಂಬ ಪ್ರಶ್ನೆ ಎದುರಾದಾಗ ಅವರು ಹುಟ್ಟಾ ಭಾರತೀಯರಲ್ಲ ಎಂಬ ಪ್ರಶ್ನೆ ಎದುರಾಯಿತು. ಹೌದಲ್ಲ. ಈ ಕಾರಣದಿಂದ ಅವರಿಗೆ ಕೊಡುವಂತಿಲ್ಲ. ಆದರೆ ಅವರಿಗೆ ಕೊಡಲೇಬೇಕು. ಏನು ಮಾಡುವುದು? ಭಾರತರತ್ನ ಪ್ರಶಸ್ತಿಯ ಆಯ್ಕೆಯ ನಿಯಮಗಳನ್ನೇ ಬದಲಾಯಿಸಿದರಾಯಿತು. ಇಂದಿರಾಗಾಂಧಿ ಅದನ್ನೇ ಮಾಡಿದರು. 1980ರಲ್ಲಿ ಮದರೆ ಥೆರೇಸಾಗೆ ಭಾರತರತ್ನ ಕೊಡಲೆಂದೇ ವಿದೇಶಿಯರಿಗೂ ಈ ಪ್ರಶಸ್ತಿ ಕೊಡಬಹುದೆಂಬ ನಿಯಮ ರೂಪಿಸಿದರು.(ಇದಕ್ಕಾಗಿ ಸೋನಿಯಾಗಾಂಧಿಯವರು ಸ್ವಲ್ಪವೂ ಶ್ರಮಪಡಬೇಕಿಲ್ಲ. ಆ ಕೆಲಸವನ್ನು ಅವರ ಅತ್ತೆಯೇ ಮಾಡಿ ಹೋಗಿದ್ದಾರೆ.)ಮುಂದೊಂದು ದಿನ ಅಧಿಕಾರದಲ್ಲಿದ್ದವರು ಪಾಕ್‌ ಪ್ರಧಾನಿಗೋ, ಬ್ರಿಟನ್‌ ಪ್ರಧಾನಿಗೋ ಭಾರತರತ್ನವನ್ನು ಕೊಟ್ಟು ಕೃತಾರ್ಥರಾದರೂ ಅಚ್ಚರಿಪಡಬೇಕಿಲ್ಲ.

ಎನ್‌ಡಿಎ ಸರಕಾರ 2001ರಲ್ಲಿ ಲತಾ ಮಂಗೇಶ್ಕರ್‌ ಹಾಗೂ ಷಹನಾಯ್‌ ವಾದಕ ಬಿಸ್ಮಿಲ್ಲಾ ಖಾನ್‌ಗೆ ಭಾರತರತ್ನ ಕೊಟ್ಟ ಬಳಿಕ ಈ ಪ್ರಶಸ್ತಿಗೆ ಯಾವನೇ ಆರ್ಹನೂ ಸಿಕ್ಕಿಲ್ಲ! ಭಾರತರತ್ನ ಕೊಡುವಾಗಲೂ ಜಾತಿ, ಪಕ್ಷ, ಪ್ರದೇಶ, ಸಿದ್ಧಾಂತಕ್ಕೆ ಪ್ರಮುಖ ಪ್ರಾಶಸ್ತ್ಯ. ಈ ಎಲ್ಲ ಬೇಡಿಕೆ ಈಡೇರಿಸಿದರೆ ವ್ಯಕ್ತಿಯ ಅರ್ಹತೆಗಳ ಪರಿಗಣನೆ. ಭಾರತರತ್ನ ಪ್ರಶಸ್ತಿಯನ್ನು ಯಾರಿಗೂ ಕೊಡದೇ ಬಚ್ಚಿಟ್ಟುಕೊಳ್ಳುವ ಬದಲು ಹತ್ತಾರು ವರ್ಷಗಳ ಮೊದಲೇ ಎಂ.ಎಸ್‌.ಸುಬ್ರಮಣ್ಯಂ ಮುಂತಾದವರಿಗೆ ಕೊಡಬಹುದಿತ್ತು. ಮರಣೋತ್ತರವಾಗಿ ನೀಡುವ ಬದಲು ಬದುಕಿರುವಾಗಲೇ ನೀಡಿದರೆ ಪಡೆದ ಜೀವ ಧನ್ಯವಾಗುತ್ತದೆ. ಏಳು ವರ್ಷಗಳ ಹಿಂದೆಯೇ ಸುಬ್ಬುಲಕ್ಷ್ಮಿಗೆ ಭಾರತರತ್ನ ಸಿಕ್ಕಾಗ ಅವರಿಗಾದ ಸಂತಸ, ಅವರ ಸಂಗೀತಪ್ರೇಮಿಗಳಿಗಾದ ಸಂತಸ ಎಂಥದ್ದಿರಬಹುದು? ಅದೇ ಈ ಸಲ ಮರಣೋತ್ತರವಾಗಿ ನೀಡಿದ್ದರೆ? ವ್ಯತ್ಯಾಸ ಗಮನಿಸಿ.

ಈ ಪ್ರಶಸ್ತಿಯನ್ನು ಪಡೆದವರು ಮಾತ್ರ ‘ಭಾರತರತ್ನ’ಗಳಲ್ಲ. ಇದನ್ನು ಪಡೆಯದ ‘ಭಾರತರತ್ನ’ರಿದ್ದಾರೆ. ಆದರೆ ಅಧಿಕಾರದಲ್ಲಿದ್ದವರು ಕುರುಡರಾಗಿ ಅವರನ್ನು ಹುಡುಕಿಲ್ಲ ಅಷ್ಟೆ. ಪಡೆದು ‘ರತ್ನ’ರಾಗುವುದಕ್ಕಿಂತ ಪಡಯದೇ ‘ಮಹಾತ್ಮ’ರಾಗುವುದು ಲೇಸು. ಈ ಭಾವನೆ ಆವರಿಸಿಕೊಳ್ಳುವ ಮೊದಲು ಈ ಪ್ರಶಸ್ತಿಗೆ ಅಂಟಿರುವ ಗೆದ್ದಲುಗಳನ್ನು ನಿವಾರಿಸಬೇಕಾಗಿದೆ. ಭಾರತರತ್ನವೆಂದರೆ ಸತ್ತವರಿಗೆ, ಕೈಲಾಗದವರಿಗೆ, ವಯಸ್ಸಾದವರಿಗೆ, ಇನ್ನೇನು ಕ್ಷಣಗಣನೆ ಮಾಡುವವರಿಗೆ ಕೊಡುವ ಗೌರವ ಆಗಬಾರದು. ಏನಂತೀರಿ?

(ಸ್ನೇಹಸೇತು: ವಿಜಯಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more