• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೂರುಪಾರು ಸಾಲಮಾಂತ್ರಿಕ ಯೂನಸ್‌ಗೆ ಶಾಂತಿನೊಬೆಲ್‌

By Staff
|
Vishweshwar Bhat ವಿಶ್ವೇಶ್ವರ ಭಟ್‌
ನಮಗೆ ಇವರೆಲ್ಲರೂ ಗೊತ್ತು. ಭಾರೀ ಆಮಿಷವೊಡ್ಡಿ ಜನರಿಂದ ಹೇರಳ ಹಣ ಸಂಗ್ರಹಿಸಿ ರಾತ್ರೋರಾತ್ರಿ (ಗುಡ್‌ನೈಟ್‌ ಅಲ್ಲ)ಗುಡ್‌ ಬೈ ಎಂದು ಹೇಳಿ ಮೊನ್ನೆ ಮೊನ್ನೆ ಸಾವಿರಾರು ಜನರಿಗೆ ಪಸಂದಾಗಿ ಪಂಗನಾಮ ಹಾಕಿದ ವಿನಿವಿಂಕ್‌ ಶಾಸ್ತ್ರಿ ಬಗ್ಗೆ ಗೊತ್ತು. ಇದಕ್ಕೂ ಅರವತ್ತು ವರ್ಷಗಳ ಮೊದಲೇ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಸರ್‌.ಸಿ.ವಿ.ರಾಮನ್‌, ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯನವರಂಥ ದಿಗ್ಗಜರಿಂದ ಲಾಗಾಯ್ತು ಸಾವಿರಾರು ಜನರಿಂದ ಎಲ್ಲೂ ಇಲ್ಲದ ಬಡ್ಡಿ ಕೊಡ್ತೇನೆಂದು ಕೋಟಿಗಟ್ಟಲೆ ಹಣ ಸಂಗ್ರಹಿಸಿ ಅನಂತರ ಎಲ್ಲರಿಗೂ ಮೂರು ನಾಮ ಹಾಕಿದ ಧರ್ಮರತ್ನಾಕರ ಬಿ.ಎನ್‌. ಗೋಪಾಲರಾವ್‌ ಕತೆಯನ್ನೂ ಕೇಳಿದ್ದೇವೆ. ಈ ಎರಡೂ ಘಟನೆಗಳ ನಡುವೆ ಅವೆಷ್ಟೋ ‘ಬಡ್ಡಿ ಮಕ್ಕಳು’ ಮುಗ್ಧ ಜನರಿಗೆ ಆಸೆ ತೋರಿಸಿ ಅವರ ದುಡ್ಡು ಹೊಡೆದವರನ್ನೂ ಬಲ್ಲೆವು. ಡಬ್ಲಿಂಗ್‌, ಮನಿ ಸರ್ಕ್ಯುಲೇಶನ್‌, ರೊಟೇಶನ್‌ ರಿಂಗ್‌ ಮುಂತಾದ ಹೆಸರುಗಳಲ್ಲಿ ಬಂದವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಬೆವರು ಸುರಿಸಿ ದುಡಿದ ಹಣವನ್ನೆಲ್ಲ ಅವರ ಪಾದಕ್ಕೆ ಸುರುವಿ ಮೈಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡವರನ್ನೂ ಬಲ್ಲೆವು. ಯಾರನ್ನೂ ನಂಬುವಂಥ ಸ್ಥಿತಿ ಇಲ್ಲ ಕಣ್ರೀ ಎನ್ನುತ್ತಲೇ ಬಡ್ಡಿ ಆಸೆಗೆ ಬಿದ್ದು ಗಳಿಸಿದ್ದೆಲ್ಲವನ್ನೂ ಈ ಬ್ಲೇಡ್‌ ಕಂಪನಿಗಳಲ್ಲಿ ತೊಡಗಿಸಿ ಪದೇ ಪದೆ ಮೋಸ ಹೋಗುತ್ತಿದ್ದರೂ ಇವರನ್ನೆಲ್ಲ ತಮ್ಮ ಮನಸ್ಸಿನ ವಿಶ್ವಾಸದ ಸಂದೂಕಿನಲ್ಲಿಯೇ ಇಟ್ಟುಕೊಂಡಿರುವವರನ್ನೂ ನೋಡಿದ್ದೇವೆ. ಈತ ಆತನ ಹಾಗೆ ಮೋಸ ಮಾಡಲಿಕ್ಕಿಲ್ಲ ಎಂಬ ಹೊಸ ಭರವಸೆಯಾಂದಿಗೆ ಖಾತೆ ಕಿರ್ದಿ ತೆರೆಯುತ್ತೇವೆ. ಹಾಗೇ ಮತ್ತೆ ಮೋಸ ಹೋಗುತ್ತೇವೆ.

ಹಾಗೆಂದು ಎಲ್ಲರೂ ಹೀಗೇ, ಎಲ್ಲವೂ ಬ್ಲೇಡ್‌ ಕಂಪನಿಗಳೇ ಎಂಬ ನಿರ್ಧಾರಕ್ಕೆ ಬರಬೇಕಿಲ್ಲ. ಕೆಲವರು ನಮ್ಮ ಕಣ್ಮುಂದೆ ಅದ್ಭುತವೆನಿಸುವ ಫೈನಾನ್ಸ್‌ ಕಂಪನಿಗಳನ್ನು ನಡೆಸುತ್ತಿದ್ದಾರೆ. ಆರ್ಥಿಕ ಕ್ರಾಂತಿಗೆ ಕಾರಣರಾಗಿದ್ದಾರೆ. ನಿಮಗೆ ಮಹಮ್ಮದ್‌ ಯೂನಸ್‌ ಎಂಬುವವನ ಬಗ್ಗೆ ಹೇಳಬೇಕು. ಒಂದು ಕ್ಷಣ ವಿನಿವಿಂಕ್‌ ಶಾಸ್ತ್ರಿ ಹಾಗೂ ಗೋಪಾಲರಾಯನನ್ನು ಪಕ್ಕಕ್ಕಿಟ್ಟು ಈ ಯೂನಸ್‌ ಎಂಬಾತ ಮಾಡಿದ ಅದ್ಭುತಗಳನ್ನು ನೋಡಬೇಕು. ಆತನ ಸಾಹಸ ನಮ್ಮ ನೆರೆ ದೇಶವಾದ ಬಾಂಗ್ಲಾದೇಶದಲ್ಲಿ ಆರಂಭವಾದರೂ, ಅಲ್ಲಿಗೂ ಇಲ್ಲಿಗೂ ತೀರಾ ವ್ಯತ್ಯಾಸವಿಲ್ಲದ್ದರಿಂದ ಇದನ್ನು ನಮ್ಮೂರಿನಲ್ಲಿ, ನಮ್ಮ ಮುಂದೆ ನಡೆದ ಘಟನೆಯೆಂದು ಭಾವಿಸಿದರೆ ಆತನ ಸಾಧನೆ ಅರ್ಥವಾದೀತು.

Peace Nobel for Bangladeshs micro-credit pioneerಬಾಂಗ್ಲಾದ ಚಿತ್ತಗಾಂಗ್‌ದಲ್ಲಿ ತಕ್ಕಮಟ್ಟಿಗಿನ ಅನುಕೂಲಸ್ಥ ಕುಟುಂಬದಲ್ಲಿ ಯೂನಸ್‌ ಹುಟ್ಟಿದ್ದು. ತಂದೆ ಅಕ್ಕಸಾಲಿಗನ ಜತೆಯಲ್ಲಿ ಕೆಲಸಕ್ಕಿದ್ದ. ತಾಯಿಗೆ ದಾನ-ಧರ್ಮದಲ್ಲಿ ಅಪಾರ ನಂಬಿಕೆ. ಯೂನಸ್‌ ಮೊದಲಿನಿಂದಲೂ ಗಂಭೀರ ಸ್ವಭಾವದವ. ವಿದ್ಯಾಭ್ಯಾಸದಲ್ಲಿ ತೀವ್ರ ಆಸಕ್ತಿ. ವಿಶ್ವವಿದ್ಯಾಲಯದಲ್ಲಿ ರ್ಯಾಂಕ್‌ ವಿಜೇತ. ಅಮೆರಿಕದಲ್ಲಿ ಪಿಎಚ್‌ಡಿ ವ್ಯಾಸಂಗಕ್ಕಾಗಿ ಫುಲ್‌ಬ್ರೆೃಟ್‌ ಸ್ಕಾಲರ್‌ಶಿಪ್‌ ಗಿಟ್ಟಿಸಿದವ. ಮನಸ್ಸು ಮಾಡಿದ್ದರೆ ಅಮೆರಿಕದಲ್ಲಿಯೇ ನೆಲೆಯೂರಬೇಕೆಂದು ತೀರ್ಮಾನಿಸಿದ. ಚಿತ್ತಗಾಂಗ್‌ ವಿಶ್ವವಿದ್ಯಾಲಯದಲ್ಲಿ ಆರ್ಥಿಕ(ಎಕನಾಮಿಕ್ಸ್‌) ವಿಭಾಗದ ಮುಖ್ಯಸ್ಥನಾಗಿ ಸೇರಿಕೊಂಡ. ತಾನಾಯಿತು ತನ್ನ ಕೆಲಸವಾಯಿತು. ಎರಡು ವರ್ಷ ಕ್ಲಾಸ್‌ರೂಮ್‌ ಪಾಠದಲ್ಲಿಯೇ ಕಳೆದುಹೋದವು. ಈ ಅವಧಿಯಲ್ಲಿ ಯೂನಸ್‌ಗೆ ಎಕನಾಮಿಕ್ಸ್‌ ಥಿಯರಿಗಳಿಂದ, ಪಾಠದಿಂದ ತನ್ನ ದೇಶದ ಬಡತನ, ಸುತ್ತಲಿನ ದಾರಿದ್ರ್ಯ ನಿವಾರಣೆಯಾಗುವುದಿಲ್ಲವೆಂಬ ಅಂಶ ಅರ್ಥವಾಗಲಾರಂಭಿಸಿತ್ತು. ಆದರೆ ಬೇರೆ ದಾರಿಯಿರಲಿಲ್ಲ.

1974ರಲ್ಲಿ ಬಾಂಗ್ಲಾ ತನ್ನ ಇತಿಹಾಸದಲ್ಲಿ ಕಂಡು ಕೇಳರಿಯದ ಬರಗಾಲಕ್ಕೆ ತುತ್ತಾಯಿತು. ಜನ ಹೊಟ್ಟೆಗಿಲ್ಲದೇ ಬೀದಿಬೀದಿಗಳಲ್ಲಿ ಸಾಯಲಾರಂಭಿಸಿದರು. ಹಣ, ಆಹಾರಗಳನ್ನು ಕಿತ್ತು ತಿನ್ನಲಾರಂಭಿಸಿದರು. ಜಾನುವಾರುಗಳ ಸಾವಿಗಂತೂ ಲೆಕ್ಕವೇ ಇಲ್ಲ. ನೀರು, ಆಹಾರ ಅರಸಿ ಜನ ಗುಳೆ ಹೊರಟರು. ಕ್ಷಾಮಕ್ಕೆ ಸಾಥಿಯಾಗಿ ಅಲ್ಲಲ್ಲಿ ಪ್ಲೇಗ್‌ ಸಹ ಕಾಣಿಸಿಕೊಂಡಿತು. ಯಾವುದೇ ಊರಿಗೆ ಹೋದರೂ ಕೊಳೆತು ನಾರುವ ಮೃತದೇಹಗಳು. ಜನರ ಸಂಕಟಕ್ಕೆ ಪಾರವೇ ಇಲ್ಲ.

ಈ ಬರಗಾಲ ಯೂನಸ್‌ ಜೀವನಗತಿಯನ್ನೇ ಬದಲಿಸಿತು. ತಾನು ಕಲಿತ, ಕಲಿಸುವ ಎಕನಾಮಿಕ್ಸ್‌ ತನಗಾಗಲಿ, ತನ್ನ ವಿದ್ಯಾರ್ಥಿಗಳಿಗಾಗಲಿ, ಸಮಾಜಕ್ಕಾಗಲಿ ಯಾವುದೇ ಉಪಕಾರವನ್ನೂ ಮಾಡುತ್ತಿಲ್ಲವೆಂದು ಮನವರಿಕೆಯಾಯಿತು. ನನ್ನ ಸುತ್ತಲಿರುವ ಸಾವಿರಾರು ಬಡಜನರು ಜೀವನವನ್ನು ಸುಧಾರಿಸುವುದು ಹೇಗೆ?ಈ ಬಡಜನರೆಲ್ಲ ಶತಶತಮಾನಗಳಿಂದ ಬಡವರಾಗಿಯೇ ಯಾಕೆ ಉಳಿದಿದ್ದಾರೆ?ಅವರನ್ನು ಮೇಲಕ್ಕೆತ್ತುವುದು ಹೇಗೆ?ನಾನೇನು ಮಾಡಬಹುದು?ಯೂನಸ್‌ ಯೋಚಿಸಲಾರಂಭಿಸಿದ. ಬಡವರ ಜೀವನ, ದಾರಿದ್ರ್ಯ ಅರಿಯಲು ಅವರ ಗುಡಿಸಲು ಬಾಗಿಲಿಗೆ ಹೋದ. ಬಿದಿರಿನ ಬುಟ್ಟಿ ನೇಯುವ ಮಹಿಳೆಯರ ಕಸುಬನ್ನು ಅಧ್ಯಯನ ಮಾಡಿದ. ನೂರು ರೂಪಾಯಿಗೆ ಪ್ರತಿದಿನ ಹದಿನೈದು ರೂ. ಬಡ್ಡಿಗೆ ಬಿದಿರನ್ನು ಧನಿಕನಿಂದ ಖರೀದಿಸಿ ಬುಟ್ಟಿ ಹೆಣೆಯುವ ಹೆಂಗಸರು ಅನಂತರ ಬುಟ್ಟಿಯನ್ನು ಧನಿಕರನಿಗೇ ಮಾರಬೇಕಾದಂಥ ಸ್ಥಿತಿ. ನೂರು ರೂ ಬಿದಿರಿನಲ್ಲಿ ತಯಾರಿಸಿದ ವಸ್ತುಗಳನ್ನು ಆತ ಮುನ್ನೂರು ರೂ.ಗೆ ಮಾರುತ್ತಾನೆ. ಅದನ್ನು ಹೆಣೆದ ಮಹಿಳೆಗೆ 25ರೂ. ಮಾತ್ರ ಸಿಗುತ್ತದೆ.

ಬಿದಿರು ಖರೀದಿಸುದಷ್ಟು ಶಕ್ತಿ ಅವಳಲ್ಲಿ ಇಲ್ಲ. ಇದ್ದಿದ್ದರೆ ಆಕೆ ಧನಿಕನಲ್ಲಿ ಸಾಲ ಕೇಳಬೇಕಾಗಿರಲಿಲ್ಲ. ಈ ನೂರು, ಇನ್ನೂರು, ಸಾವಿರ ರೂಪಾಯಿಗೆ ಪರಿತಪ್ಪಿಸುವ ಬಹಳ ದೊಡ್ಡ ಅಸಂಘಟಿತ ವರ್ಗವೇ ಇರುವುದು ಯೂನಸ್‌ ಗಮನಕ್ಕೆ ಬಂದಿತು. ದಿನವಿಡೀ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಸಿಗುವುದು ದಿನಕ್ಕೆ ಹದಿನೈದಿಪ್ಪತ್ತು ರೂಪಾಯಿ. ಇವರ ಸಹಾಯಕ್ಕೆ ಯಾರೂ ಬರುವುದಿಲ್ಲ. ಆ ಮಹಿಳೆಗೆ ಯೂನಸ್‌ ಐನೂರು ರೂ. ಕೊಟ್ಟರು. ಅವಳ ಸಮಸ್ಯೆ ಬಗೆಹರಿಯಿತು. ಅಷ್ಟೇ ಅಲ್ಲ. ಅವಳ ಜೀವನವೇ ಕ್ರಮೇಣ ಬದಲಾಯಿತು. ತಾನು ಹೆಣೆದ ಬುಟ್ಟಿಯನ್ನು ಹತ್ತುರೂ. ಗೆ ಖರೀದಿಸುತ್ತಿದ್ದ ಧನಿಕನ ಹಿಡಿತದಿಂದ ತಪ್ಪಿಸಿಕೊಂಡು ಆಕೆ ಅದೇ ಬುಟ್ಟಿಯನ್ನು ನೂರು ರೂ.ಗೆ ಮಾರಲಾರಂಭಿಸಿದಳು!

ಆಕೆಯ ಸಮಸ್ಯೆಯೇನೋ ಬಗೆಹರಿಯಿತು. ಉಳಿದವರ ಗತಿಯೇನು? ಎಷ್ಟು ಮಹಿಳೆಯರಿಗೆಂದು ಹಣದ ಸಹಾಯ ಮಾಡುವುದು?ಈ ಮಹಿಳೆಯರ ಸಮಸ್ಯೆಗಳನ್ನು ಅಧ್ಯಯನ ಮಾಡಿದ ಯೂನಸ್‌, ಇವರಿಗೆ ಬೇಕಾಗಿರುವ ಸಣ್ಣ ಮೊತ್ತದ ಸಾಲದೊರಕಿಸಿ ಕೊಡಲು ಬ್ಯಾಂಕ್‌ಗಳನ್ನು ಸಂಪರ್ಕಿಸಿದರು. ‘ನಾವು ಬಡವರಿಗೆ ಸಾಲ ಕೊಡುವುದಿಲ್ಲ’ ಎಂದೇ ಮಾತುಕತೆ ಆರಂಭಿಸಿದ ಬ್ಯಾಂಕ್‌ ಅಧಿಕಾರಿಗಳು, ಅಂಥವರ ಜತೆ ಹಣಕಾಸು ವ್ಯವಹಾರ ಮಾಡುವುದೇ ಸಮಂಜಸವಲ್ಲ ಎಂದು ಯೂನಸ್‌ಗೆ ಬುದ್ಧಿ ಹೇಳಿ ಕಳಿಸಿದರು. ಇನ್ನೂರು, ಮುನ್ನೂರು ರೂ.ಸಾಲಕ್ಕೆ ಕಾಗದಪತ್ರಗಳ ಖರ್ಚು ಇನ್ನೂ ಜಾಸ್ತಿಯಾಗುತ್ತದೆಂದು ಗೇಲಿ ಮಾಡಿದರು. ಕೊಲ್ಯಾಟರಲ್‌ ಸೆಕ್ಯುರಿಟಿ ಕೊಡದೇ ಸಾಲ ಕೊಡುವುದು ಸಾಧ್ಯವಿಲ್ಲ ಎಂದು ಷರತ್ತು ಹಾಕಿದರು. ಯೂನಸ್‌ ಹಲವು ಅಧಿಕಾರಿಗಳನ್ನು ಭೇಟಿ ಮಾಡಿದ. ಅವರು ಕೇಳಿದ ಪ್ರಶ್ನೆಗಳಿಗೆ ಎಷ್ಟೇ ಸಮಜಾಯಿಸಿ ಕೊಟ್ಟರೂ ರೂಲ್ಸ್‌ ಗೀಲ್ಸು ಸಬೂಬು ಹೇಳಿ ಸಾಲ ನಿರಾಕರಿಸಿದರು. ಎರಡು ವರ್ಷ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇಷ್ಟು ಹಣ ಮೊತ್ತದ ಸಾಲಕ್ಕೆ ಬ್ಯಾಂಕ್‌ ಅಧಿಕಾರಿಗಳು ಈ ಪರಿ ಸತ್ತಾಯಿಸ್ತಾರಲ್ಲ, ಇಷ್ಟೆಲ್ಲ ಮಾಡಲು ನೂರಾರು ಕಾನೂನು ಬೋಧಿಸ್ತಾರಲ್ಲ ಅಂತ ಯೂನಸ್‌ಗೆ ಬೇಸರವಾಯಿತು. ಅವೆಲ್ಲಕ್ಕಿಂತ ಮುಖ್ಯವಾಗಿ ಬಡವರಿಗೆ ಸಾಲ ಕೊಡುವುದಿಲ್ಲವೆಂಬ ಅಧಿಕಾರಗಳ ಮನೋಭಾವ ಆತನಿಗೆ ಸಿಟ್ಟು ತರಿಸಿದವು. ಪ್ರತಿಭಟನೆ ಮಾಡಿ ಸುಮ್ಮನಾದರೆ ಏನನ್ನು ಸಾಧಿಸಿದಂತಾದೀತು?

ಇವ್ಯಾವವೂ ಪರಿಹಾರವಲ್ಲ. ಈ ಸಂಗತಿ ಯೂನಸ್‌ಗೆ ಗೊತ್ತಿತ್ತು. ಈ ಸಮಸ್ಯೆಗೆ ಒಂದೇ ಒಂದು ಉಪಾಯವೆಂದರೆ ತಾನೇ ಒಂದು ಬ್ಯಾಂಕನ್ನು ಸ್ಥಾಪಿಸುವುದು!

ಈ ನಿಟ್ಟಿನಲ್ಲಿ ಆತ ಮಾಡಿದ ಮೊದಲ ಕೆಲಸವೆಂದರೆ ವಿಶ್ವವಿದ್ಯಾಲಯದ ಪ್ರೊಫೆಸರ್‌ ಕೆಲಸಕ್ಕೆ ರಾಜೀನಾಮೆ ಬಿಸಾಕಿದ್ದು. ಯೂನಸ್‌ನ ಸ್ನೇಹಿತರು, ಮನೆಮಂದಿಯೆಲ್ಲ ಬುದ್ಧಿಮಾತು ಹೇಳಿದರು-‘ಈ ಸಮಾಜವನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ನಿನ್ನ ಕೆಲಸ, ಜೀವನ ಹಾಳುಮಾಡಿಕೊಳ್ಳಬೇಡ’ ಯೂನಸ್‌ ಕೇಳಲಿಲ್ಲ. ಬ್ಯಾಂಕ್‌ ಸ್ಥಾಪಿಸಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಬರೆದರು. ಅನುಮತಿ ಸಿಕ್ಕಿತು. 1983ರಲ್ಲಿ ಗ್ರಾಮೀಣ ಬ್ಯಾಂಕ್‌ ಅಸ್ತಿತ್ವಕ್ಕೆ ಬಂದಿತು.

ಆಗಲೂ ಜನ ಯೂನಸ್‌ನನ್ನು ಗೇಲಿ ಮಾಡಿದರು. ಕೆಲವೇ ದಿನಗಳಲ್ಲಿ ಬ್ಯಾಂಕು ತೋಪಾಗಲಿದೆಯೆಂದು ವದಂತಿಗಳನ್ನು ಹಬ್ಬಿಸಿದರು. ಯೂನಸ್‌ ತಲೆಕೆಡಿಸಿಕೊಳ್ಳಲಿಲ್ಲ. ಬ್ಯಾಂಕಿನ ಧ್ಯೇಯ, ಗುರಿಗಳೇ ವಿಶಿಷ್ಟವಾಗಿದ್ದವು. ಜನಪರವಾಗಿದ್ದವು. ಮನೆ-ಮಠ ಇಲ್ಲದವರಿಗೆ ಏನೂ ಆಸ್ತಿಯಿಲ್ಲದವರಿಗೆ, ಕಡುಬಡವರಿಗೆ ಮಾತ್ರ ಕಡಿಮೆ ಬಡ್ಡಿಗೆ

ಸಾಲ ನೀಡುವುದಾಗಿ ಯೂನಸ್‌ಪ್ರಕಟಿಸಿದ. ಈ ‘ವರ್ಗ’ಕ್ಕೆ ಸೇರಿದ ಮಹಿಳೆಯರು ಮಾತ್ರ ಸಾಲಕ್ಕೆ ಅರ್ಹರು ಎಂದು ಘೋಷಿಸಿದ. ಯೂನಸ್‌ಗೊಂದು ವಿಶ್ವಾಸವಿತ್ತು.-‘ಮಹಿಳೆಯರಿಗೆ ಸಾಲ ಕೊಟ್ಟರೆ ನಿಶ್ಚಿತವಾಗಿ ವಾಪಸ್‌ ಬರುತ್ತದೆ ಹಾಗೂ ಸಾಲ ನೀಡಿದ ಉದ್ದೇಶ ಈಡೇರುತ್ತದೆ. ಅವರೆಂದೂ ಕಟ್‌ಬಾಕಿದಾರರಾಗಲಾರರು’.

ಯೂನಸ್‌ ಲೆಕ್ಕಾಚಾರ ಫಲಿಸಿತು. ಆರಂಭದಲ್ಲಿ ಸಾವಿರ ರೂ.ಗಿಂತ ಕಡಿಮೆ ಹಣಕ್ಕೆ ಜೀತದಾಳುಗಳಂತೆ, ಗುಲಾಮರಂತೆ ಅಸಹನೀಯ ಬದುಕು ಸಾಗಿಸುತ್ತಿದ್ದವರ ಮನೆ ಬಾಗಿಲಿಗೆ ಹೋಗಿ ಗ್ರಾಮೀಣ ಬ್ಯಾಂಕಿನ ಧ್ಯೇಯೋದ್ದೇಶಗಳನ್ನು ಹೇಳಿ ಸಾಲವನ್ನು ವಿತರಿಸಿ ಬರುತ್ತಿದ್ದರೆ, ಐದಾರು ತಿಂಗಳಲ್ಲಿ ಸಾಲವನ್ನು ವಾಪಸ್‌ ಮಾಡುತ್ತಿದ್ದರು. ಹಳ್ಳಿಗರಿಗೆ ಬ್ಯಾಂಕಿಗೆ ಬಂದು ವ್ಯವಹರಿಸುವುದು ಕಷ್ಟವಾಗಬಹುದೆಂದು ಹಳ್ಳಿಹಳ್ಳಿಗಳಲ್ಲಿ ಸಾವಿರಾರು ನಿರುದ್ಯೋಗಿ ಯುವಕರನ್ನು ಪ್ರಚಾರಕರೆಂದು ನೇಮಿಸಲಾಯಿತು. ಮನೆಬಾಗಿಲಿಗೆ ಸಾಲ ವಿತರಿಸುವ ಪದ್ಧತಿ ಆರಂಭವಾಯಿತು. ಸಾಲ ಪಡೆಯಲು ಸಹ ಯಾರದೇ ಗ್ಯಾರಂಟಿ ಬೇಕಾಗಿರಲಿಲ್ಲ.

ಅದೆಂಥ ಪವಾಡವಾಯಿತು ಅಂತೀರಿ, ಬ್ಯಾಂಕ್‌ ಶುರುವಾದ ಒಂದು ವರ್ಷದೊಳಗೆ ಎರಡು ಸಾವಿರ ಹಳ್ಳಿಗಳ ಹತ್ತು ಸಾವಿರ ಮಹಿಳೆಯರು ಸಾಲ ಪಡೆದರು. ಒಬ್ಬೇ ಒಬ್ಬ ಮಹಿಳೆ ಬಡ್ಡಿ ಪೀಕದೇ, ಅಸಲು ಕಟ್ಟದೇ ಮೋಸ ಮಾಡಲಿಲ್ಲ. ಜನಾರ್ದನ ಪೂಜಾರಿಯ ಸಾಲಮೇಳವಾಗಲಿಲ್ಲ. ನೋಡನೋಡುತ್ತಿದ್ದಂತೆ ಸಾಲ ಪಡೆದ ಮಹಿಳೆಯರ ಮುಖದಲ್ಲಿ ಮುಂದಹಾಸ. ಬದುಕನ್ನು ಬೇರೆಯವರಿಗೆ ಅರ್ಪಿಸಿದಂತಿದ್ದ ನಿರ್ಗತಿಕ ಹೆಂಗಸರು ಸ್ವತಂತ್ರ, ಸ್ವಾವಲಂಬಿ ಬಾಳ್ವೆ ಆರಂಭಿಸಿದ್ದರು. ಕುಡುಕ, ನಿರ್ಗತಿಕ ಗಂಡಸರನ್ನು ಕೆಲಸಕ್ಕೆ ಹಚ್ಚಿದ್ದರು. ಕಡಿಮೆ ಬಡ್ಡಿಗೆ ನೀಡುತ್ತಿದ್ದ ಸಾಲ ಅವರ ಜೀವನವನ್ನೇ ಪರಿವರ್ತಿಸಿತು. ಭಿಕ್ಷಾಟನೆ, ವೇಶ್ಯಾವಾಟಿಕೆಗಳಲ್ಲಿ ತೊಡಗಿದ್ದ ಅಸಂಖ್ಯ ಹೆಂಗಸರು ಬ್ಯಾಂಕಿನ ಮುಂದೆ ಸಾಲಕ್ಕೆ ನಿಂತರು. ಅವರೆಲ್ಲರಿಗೂ ಅವರ ಸಾಮರ್ಥ್ಯಕ್ಕನುಸಾರ ಕೇಳಿದಷ್ಟು ಸಾಲ ಹರಿದು ಬಂದಾಗ, ಇಂಥ ಸಾಲ ಪಡೆದು ಹೊಸ ಜೀವನ ಆರಂಭಿಸಿದ ಅಸಂಖ್ಯರ ನಿದರ್ಶನ ಎದುರಿಗಿದ್ದಾಗ, ಸಾಲದ ಹಣ ಎಗರಿಸುವ ಅಥವಾ ದುರುಪಯೋಗಿಸುವ ಪ್ರಶ್ನೆಯೇ ಬರಲಿಲ್ಲ. ನಿಧಾನವಾಗಿ ಗ್ರಾಮೀಣ ಬದುಕಿನ ಚಿತ್ರಣ ಬದಲಾಗತೊಡಗಿತು.

ಆಶ್ಚರ್ಯವಾಗಬಹುದು, ಗ್ರಾಮೀಣ ಬ್ಯಾಂಕ್‌ ಆರಂಭವಾಗಿ ಇಪ್ಪತ್ತೆರಡು ವರ್ಷಗಳಾದವು. ಈ ವರ್ಷಗಳಲ್ಲಿ ಇದು ವ್ಯಾಪಿಸಿದ ಪರಿ ಅದ್ಭುತ. ಬಾಂಗ್ಲಾದ 68ಸಾವಿರ ಹಳ್ಳಿಗಳ ಪೈಕಿ 41ಸಾವಿರ ಹಳ್ಳಿಗಳಲ್ಲಿ ಈ ಬ್ಯಾಂಕಿನ ಸೇವೆ ಲಭ್ಯವಿದೆ. ಸುಮಾರು 25ಲಕ್ಷ ಮಂದಿ ಈ ಬ್ಯಾಂಕಿನಿಂದ ಪ್ರಯೋಜನ ಪಡೆದಿದ್ದಾರೆ. ದೇಶಾದ್ಯಂತ 1500 ಶಾಖೆಗಳಿವೆ. ಫಲಾನುಭವಿಗಳ ಪೈಕಿ ಶೇ. 96ರಷ್ಟು ಮಹಿಳೆಯರೇ. ಕೇವಲ ಶೇ. 2ರಷ್ಟು ಮಂದಿ ಮಾತ್ರ ಬಾಕಿ, ಬಡ್ಡಿ, ಅಸಲು ಉಳಿಸಿ ಕೊಂಡಿದ್ದಾರೆ ಅಷ್ಟೆ. ಫಲಾನುಭವಿಗಳು ಹಾಗೂ ಸಾಲಗಾರರೇ ಬ್ಯಾಂಕಿನ ಒಡೆತನವನ್ನು ಹೊಂದುವಂತಾಗುವುದು. ಇವರೆಲ್ಲರಿಗೂ ಯೂನಸ್‌ ಸಾಲ ನೀಡುವಾಗಲೇ ಬ್ಯಾಂಕಿನ ಷೇರುಗಳನ್ನೂ ಕೊಟ್ಟಿದ್ದಾರೆ.

ಈಗ ಈ ಬ್ಯಾಂಕ್‌ನ ಗ್ರಾಹಕರು ಎಷ್ಟು ಸದೃಢರಾಗಿದ್ದಾರೆಂದರೆ ಬ್ಯಾಂಕ್‌ ಇವರಿಗೆ ಮನೆಸಾಲ ನೀಡುತ್ತಿದೆ. ಮೊದಲ ಬಾರಿಗೆ ಬ್ಯಾಂಕಿನಿಂದ ಐನೂರು, ಸಾವಿರ ರೂಪಾಯಿ ಸಾಲ ಡೆದವರು ಈಗ ನಾಲ್ಕೈದು ಲಕ್ಷ ರೂ. ಪಡೆದು ಮನೆ ಕಟ್ಟಿಸುವಷ್ಟು ಗಟ್ಟಿಯಾಗಿದ್ದಾರೆ. ಈ ಬ್ಯಾಂಕಿನಿಂದ ಸಾಲ ಪಡೆದ ಪ್ರತಿಯಾಬ್ಬರದೂ ಒಂದೊಂದು ಯಶೋಗಾಥೆ.

ಇಂದು ಯೂನಸ್‌ ಪ್ರಣೀತ ಗ್ರಾಮೀಣ ಬ್ಯಾಂಕಿನ ಯಶಸ್ಸಿನ ಕಥೆ ಕೇವಲ ಬಾಂಗ್ಲಾಕ್ಕೆ ಮಾತ್ರ ಸೀಮಿತವಾಗಿಲ್ಲ. 58ದೇಶಗಳಲ್ಲಿ ಈ ಮಾದರಿಯನ್ನು ಜಾರಿಗೊಳಿಸಲಾಗಿದೆ. ಅಲ್ಲೂ ಸಹ ಇದು ಪರಿಣಾಮಕಾರಿಯಾಗಿದೆ. ಅಮೆರಿಕದ ಅಂದಿನ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಸಹ ಯೂನಸ್‌ ಮಾದರಿಯನ್ನು ಅಮೆರಿಕದ ಕೆಲವು ಕಡೆ ಜಾರಿಗೊಳಿಸಿದ್ದರು. ಆತನಿಗೆ ನೊಬೆಲ್‌ ಪ್ರಶಸ್ತಿ ಕೊಡಬೇಕೆಂದು ಮನತುಂಬಾ ಹೊಗಳಿದ್ದರು.

ವಿನಿವಿಂಕ್‌, ಗೋಪಾಲರಾಯನ ಕೆಟ್ಟ ನೆನಪೇ ನಮ್ಮನ್ನು ಸದಾ ಕಾಡಬೇಕಿಲ್ಲ. ಯೋಚಿಸಿ ನೋಡಿ, ಯೂನಸ್‌ ಮಾಡಿದ್ದನ್ನು ನಮ್ಮ ಊರಿನಲ್ಲಿಯೂ ಮಾಡಬಹುದು. ಫಲಿತಾಂಶ ಮಾತ್ರಯಶಸ್ಸೇ.

(ಸ್ನೇಹ ಸೇತು ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more