ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತನಾದವನು ಸೂಕ್ಷ್ಮ ಸಂವೇದನೆ ಕಳೆದುಕೊಂಡಾಗ ಏನಾಗುತ್ತೆ ಅಂದ್ರೆ..

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಇದನ್ನು ಉಪದೇಶ ಎಂಬ ಭಾವಿಸಬೇಕಿಲ್ಲ. ಕಾರಣ ಅದರಲ್ಲಿ ನನಗೆ ನಂಬಿಕೆಯಿಲ್ಲ. ಇದನ್ನೊಂದು ಆತ್ಮನಿವೇದನೆ ಅಥವಾ ವೃತ್ತಿ ವಿಮರ್ಶೆ ಎಂದು ಭಾವಿಸಿದರೆ ಸಾಕು.

ಕೆಲವು ಸಂಗತಿಗಳು ಪತ್ರಿಕೆಗಳಲ್ಲಿ ಸುದ್ದಿಯಾಗುವುದೇ ಇಲ್ಲ. ಕಾರಣ ಅವು ಸುದ್ದಿಯೆಂದು ನಮಗೆ ಅನಿಸುವುದೇ ಇಲ್ಲ. ಏಕೆ?

ನಾಲ್ಕೈದು ದಿನಗಳ ಹಿಂದೆ ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಎಚ್‌. ಎಲ್‌. ನಾಗೇಗೌಡರು ಒಂದು ಹೇಳಿಕೆ ಕೊಟ್ಟರು. ಎಷ್ಟು ಮಂದಿ ಇದನ್ನು ಓದಿದ್ದಾರೋ ಗೊತ್ತಿಲ್ಲ. ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ‘ಜಾನಪದ ಲೋಕ’ ವನ್ನು ಮಾರ್ಚ್‌ ಒಂದರಿಂದ ಮುಚ್ಚುವುದಾಗಿ ಹೇಳಿದ್ದಾರೆ. ಸರಕಾರದ ಅಸಡ್ಡೆ , ನಿರ್ಲಕ್ಷ್ಯ, ಅವೈಜ್ಞಾನಿಕ ನೀತಿಗೆ ಬೇಸತ್ತು ಜಾನಪದಲೋಕಕ್ಕೆ ಬೀಗ ಹಾಕಲು ಅವರು ನಿರ್ಧರಿಸಿದ್ದಾರೆ. ಜಾನಪದಲೋಕ ಆರಂಭವಾದಂದಿ ನಿಂದ ಕೆಲಸ ಮಾಡುತ್ತಿದ್ದ ಹತ್ತೊಂಬತ್ತು ಮಂದಿ ದಿನಗೂಲಿ ನೌಕರರನ್ನು ಕಾಯಂಗೊಳಿಸಿ ಎಂದು ನಾಗೇಗೌಡರು ಆಯಾ ಕಾಲಘಟ್ಟದಲ್ಲಿ ಆಧಿಕಾರದಲ್ಲಿದ್ದ ಎಲ್ಲ ಅಧಿಕಾರಿಗಳ ಮುಂದೆ ‘ಭಿಕ್ಷಾಂದೇಹಿ’ ಎಂದು ಬೇಡಿದರು. ಅಧಿಕಾರಿಗಳು, ಮಂತ್ರಿಗಳು, ಮುಖ್ಯಮಂತ್ರಿಗಳ ಮುಂದೆ ಕೈಕಟ್ಟಿ ನಿಂತುಕೊಂಡರು.ಯಾರೂ ಸಹಕರಿಸಲಿಲ್ಲ.

H.L.Nagegowda‘ಪ್ರತಿ ವರ್ಷ 15 ಲಕ್ಷ ರೂ. ಅನುದಾನ ಕೊಡ್ತಾ ಇದ್ರಿ. ಏಕಾಏಕಿ ಹೇಳದೇ ಕೇಳದೇ 5 ಲಕ್ಷ ರೂ. ಕಡಿತ ಮಾಡಿದಿರಿ. ಹೀಗಾದರೆ ಹೇಗೆ ಜಾನಪದಲೋಕ ನಡೆಸುವುದು ?’ ಎಂದು ಪುನಃ ಗೌಡರು ಎಲ್ಲರ ಮುಂದೆ ನಿಂತರು. ಏನೂ ಪ್ರಯೋಜನವಾಗಲಿಲ್ಲ. ಜಾನಪದಲೋಕ ಉಳಿಸಿಕೊಳ್ಳಲು ಎಲ್ಲ ಹರಸಾಹಸ ಮಾಡಿ ಈಗ ಅವರು ಬೇರೆ ದಾರಿ ಕಾಣದೇ ಕೈಚೆಲ್ಲಿ ನಿಂತಿದ್ದಾರೆ. ತಾವು ಪ್ರೀತಿ, ಕಕ್ಕುಲಾತಿ, ಆಸ್ಥೆಯಿಂದ ಕಟ್ಟಿದ ಸಂಸ್ಥೆಗೆ ದೊಡ್ಡ ಬೀಗ ಜಡಿಯಲು ನಿರ್ಧರಿಸಿದ್ದಾರೆ.

ಇದು ಅಂಥ ಸುದ್ದಿಯಾಗಲೇ ಇಲ್ಲ. ಪತ್ರಿಕೆಗಳ ಒಳಪುಟಗಳಲ್ಲೆಲ್ಲೋ ಒಂದು ಮೂಲೆಯಲ್ಲಿ ಚಿಕ್ಕದಾಗಿ ಸುದ್ದಿಯಾಯಿತು. ಈ ಸುದ್ದಿಯನ್ನು ಎಷ್ಟು ಮಂದಿ ಓದಿದರೋ ಏನೋ, ಯಾರೂ ಪ್ರತಿಕ್ರಿಯಿಸಲಿಲ್ಲ. ‘ನಾಗೇಗೌಡರೇ, ಮುಚ್ಚಬೇಡಿ. ನಾವು ನಿಮ್ಮೊಂದಿಗಿದ್ದೇವೆ’ ಎಂದು ಯಾರೂ ಹೇಳಲಿಲ್ಲ. ಹೀಗಾಗಿ ಈ ಬಗ್ಗೆ ಎಲ್ಲಿಯೂ ಒಂದು ಸಣ್ಣ ಚರ್ಚೆಯೂ ಆಗಲಿಲ್ಲ.

ನಾಗೇಗೌಡರು ಜಾನಪದಲೋಕವನ್ನು ನಡೆಸಿಕೊಂಡು ಹೋಗುತ್ತಿರುವ ರೀತಿಗೆ ಭಿನ್ನಭಿಪ್ರಾಯಗಳಿರಬಹುದು. ತಮ್ಮ ಹಿತಾಸಕ್ತಿಯನ್ನು ಮೆರೆಯಲು ಅವರು ಜಾನಪದಲೋಕವನ್ನು ಬಳಸಿಕೊಳ್ಳುತ್ತಿದ್ದಾರೆಂಬ ಆರೋಪವಿರಬಹುದು. ಆ ಆರೋಪದಲ್ಲಿ ಸತ್ಯಾಂಶವೂ ಇರಬಹುದು. ಆದರೆ ಇಡೀ ಕನ್ನಡನಾಡು ಹೆಮ್ಮೆ ಪಡುವಂಥ, ಒಂದು ವಿಶ್ವವಿದ್ಯಾಲಯ ಮಾಡಬಹುದಾದಂಥ, ಆದರೆ ಮಾಡಲು ಸಾಧ್ಯವಾಗದಂಥ ಒಂದು ಅದ್ಭುತವನ್ನು ನಾಗೇಗೌಡರು ಜಾನಪದ ಲೋಕದಲ್ಲಿ ಸೃಷ್ಟಿಸಿದ್ದಾರೆ. ಈ ನೆಲದ ಸೊಗಡು, ಸೊಬಗು, ಸಂಸ್ಕೃತಿಯನ್ನು ಜಾನಪದದ ದೃಷ್ಟಿಕೋನದಲ್ಲಿ ಸಂಗ್ರಹಿಸಿ ಹಿಡಿದಿಡುವ ಕೆಲಸವನ್ನು ಅವರು ಮಾಡಿದ್ದಾರೆ. ಅವರ ಕಳಕಳಿಯ ಬಗ್ಗೆ ಯಾರೂ ಎರಡು ಮಾತನಾಡುವಂತಿಲ್ಲ. ಗೌಡರ ಸಾಧನೆಯನ್ನು ಈ ಸಮ್ಯಕ್‌ದೃಷ್ಟಿಯಿಂದ ನೋಡಬೇಕು. ಇಂಥ ಒಂದು ಹೆಮ್ಮೆಯ ಸಂಸ್ಥೆಯನ್ನು ಮುಚ್ಚುತ್ತೇನೆ ಅಂದ್ರೆ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯೂ ಆಗುವುದಿಲ್ಲ.

ನಮ್ಮ ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರು, ರಾಜಕಾರಣಿಗಳು ಚಕಾರವೆತ್ತುವುದಿಲ್ಲ. ‘ಅದೆಲ್ಲ ಅತ್ಲಾಗಿರಲಿ ಗೌಡ್ರೆ, ನಿಮ್ಮ ಒಡಲ ಸಂಕಟವೇನು’ ಅಂತಾನೂ ಕೇಳುವುದಿಲ್ಲ. ಹತ್ತಾರು ಗೂಡಂಗಡಿಗಳನ್ನು ತೆರವುಗೊಳಿಸಿದರೆ, ಎರಡು ವೈನ್‌ಶಾಪುಗಳನ್ನು ಮುಚ್ಚಿದರೆ ಕನಿಷ್ಠ ಒಂದು ಪ್ರತಿಭಟನೆಯಾದರೂ ದಾಖಲಾಗುತ್ತದೆ. ವಠಾರಕ್ಕೆ ನೀರು ಬಿಟ್ಟಿಲ್ಲ ಅಂದ್ರೆ ಕೆಲ ಹೆಂಗಸರು ಖಾಲಿ ಕೊಡ ಹಿಡಿದು ಬೊಬ್ಬೆಯನ್ನಾದರೂ ಹಾಕುತ್ತಾರೆ. ಒಬ್ಬ ಆಟೋಚಾಲಕನಿಗೆ ಆತನ ತಪ್ಪಿಗೆ ಪೋಲೀಸನೊಬ್ಬ ತಪರಾಕಿ ಹೊಡೆದರೆ ಅರ್ಧಗಂಟೆಯಾಳಗೆ ಎಲ್ಲ ಚಾಲಕರು ಆಟೋ ನಿಲ್ಲಿಸಿ ಬಂದ್‌ ಮಾಡಿ, ಪೊಲೀಸ್‌ ಕ್ಷಮೆಯಾಚಿಸುವ ತನಕ ಗಾಡಿ ಓಡಿಸದೇ ಪ್ರತಿಭಟಿಸುತ್ತಾರೆ. ಅಂಥದ್ದರಲ್ಲಿ ಕನ್ನಡಿಗರು ಹೆಮ್ಮೆ ಪಡುವ ಒಂದು ಸಂಸ್ಥೆಯನ್ನು ಮುಚ್ಚುವಂಥ ಸ್ಥಿತಿ ಬಂದಿದೆಯೆಂದರೆ ಯಾರೂ ಸಣ್ಣದಾಗಿ ಪ್ರತಿಭಟಿಸುವುದಿಲ್ಲ. ಬೇಕಾದರೆ ನೋಡಿ, ಮುಂದಿನ ವಾರದೊಳಗೆ ಬೆಂಗಳೂರಿನಲ್ಲಿರುವ ಎಲ್ಲ ಲೈವ್‌ಬ್ಯಾಂಡ್‌ಗಳನ್ನು ಮುಚ್ಚುತ್ತೇವೆ ಎಂದು ಸರಕಾರ ಹೇಳಲಿ, ಮರುದಿನದ ಪತ್ರಿಕೆಗಳಲ್ಲಿ ಅದು ಲೀಡ್‌ಸುದ್ದಿಯಾಗುತ್ತದೆ.

ಪೊಲೀಸರು ಹಠಾತ್‌ ಜಾಗೃತರಾಗುತ್ತಾರೆ. ಸರಕಾರದ ಮೇಲೆ ಒತ್ತಡ ತರುವುದು ಹೇಗೆಂಬುದನ್ನು ಲೈವ್‌ಬ್ಯಾಂಡ್‌ ಮಾಲೀಕರಿಗೆ ಹೇಳಿಕೊಡುತ್ತಾರೆ. ಲೈವ್‌ಬ್ಯಾಂಡ್‌ನಲ್ಲಿ ಹಾಡುವ ಗಾಯಕಿಯರು ತಮ್ಮ ಬದುಕಿನ ಮೇಲೆ ಬರೆಯೆಳೆಯಬೇಡಿ ಎಂದು ಬೀದಿಗಿಳಿಯುತ್ತಾರೆ. ಲೈವ್‌ ಬ್ಯಾಂಡ್‌ ಅಡ್ಡೆ ಮಾಲೀಕರು ಗುಟ್ಟಾಗಿ ಮಂತ್ರಿ, ಮುಖ್ಯಮಂತ್ರಿಯನ್ನು ಭೇಟಿ ಮಾಡಿ ‘ಸಂದಾಯ’ಮಾಡುತ್ತಾರೆ. ಲೈವ್‌ಬ್ಯಾಂಡ್‌ಗೆ ಹೋಗುವ ಶಾಸಕರೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅವರೂ ಮಂತ್ರಿಗಳು ಬೆನ್ನು ಸವರುತ್ತಾರೆ(ಕೆಲವು ಶಾಸಕರು, ಪೊಲೀಸರು ಹಾಗೂ ಮಂತ್ರಿಗಳು ಸೇರಿಕೊಂಡು ಕೆಲವು ಅಡ್ಡೆಗಳನ್ನು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ). ಲೈವ್‌ಬ್ಯಾಂಡ್‌ ಮುಚ್ಚಿಸಿ ಈ ನೆಲದ ಸಂಸ್ಕೃತಿ ಹಾಳಾಗಲು ಸರಕಾರವೇ ಕಾರಣ ಎಂಬಂಥ ಪರಿಸ್ಥಿತಿ ಒಂದು ವಾರದೊಳಗೆ ನಿರ್ಮಾಣವಾಗಿರುತ್ತದೆ. ಈ ವಿಷಯ ಕುರಿತು ನಮ್ಮ ಶಾಸನ ಸಭೆಗಳಲ್ಲಿ ದಿನಗಟ್ಟಲೆ ಚರ್ಚೆಯಾಗುತ್ತದೆ. ಎಲ್ಲ ಶಾಸಕರು ಚರ್ಚೆಯಲ್ಲಿ ಆಸ್ಥೆಯಿಂದ ಭಾಗವಹಿಸುತ್ತಾರೆ. ಒಂದೇ ವಾರದಲ್ಲಿ ಸರಕಾರ ತಾನು ನುಂಗಿದ್ದನ್ನು ಕಕ್ಕುತ್ತದೆ. ಲೈವ್‌ಬ್ಯಾಂಡ್‌ಗಳಲ್ಲಿ ಮಾದಕ ನೃತ್ಯ-ಸಂಗೀತ ಮುಂದುವರಿಯುತ್ತದೆ. ಲೈವ್‌ಬ್ಯಾಂಡ್‌ಗೆ ಕೊಟ್ಟ ಪರವಾನಗಿ ರದ್ದುಪಡಿಸಿದಂದಿನಿಂದ ಪುನಃ ಕೊಡುವ ತನಕ ಪತ್ರಿಕೆಗಳಲ್ಲಿ ವಿಷಯ ಜೀವಂತವಾಗಿರುತ್ತದೆ. ಅದೇ ‘ಜಾನಪದ ಲೋಕ ಮುಚ್ಚುತ್ತೇನೆ’ ಎಂದು ನಾಗೇಗೌಡರು ಹೇಳಿದರೆ, ಕೇಳೋರು ಇಲ್ಲ . ಬೇಡ ಅಂತ ಹೇಳೋರೂ ಇಲ್ಲ. ಜಾನಪದ ಲೋಕ ಮುಚ್ಚಬೇಡಿ ಅಂತ ಹೇಳಲಿಕ್ಕೆ ಅದೇನು ಲೈವ್‌ಬ್ಯಾಂಡಾ ? ವೈನ್‌ ಶಾಪಾ ?ನಮ್ಮ ಆದ್ಯತೆಗಳಾದರೂ ಯಾವುವು? ಲೈವ್‌ಬ್ಯಾಂಡ್‌ಗೆ ಕೊಡವಷ್ಟು ಆದ್ಯತೆಯಲ್ಲಿನ ಕಿರುಬಿಲ್ಲೆ ಕಿಮ್ಮತ್ತು ಜಾನಪದಲೋಕದಂಥ ಸಂಸ್ಥೆಗೆ ಸಿಗುವುದಿಲ್ಲ ಅಂದ್ರೆ ಹೇಗೆ ? ಏನು?

Keremane Shambhu Hegdeಎರಡು ವರ್ಷಗಳ ಹಿಂದೆ ಪ್ರಸಿದ್ಧ ಯಕ್ಷಗಾನ ಕಲಾವಿದ ಕೆರೆಮನೆ ಶಂಭುಹೆಗಡೆ ಅವರು ಸಹ ಹೇಳಿದ್ದರು- ‘ಸರಕಾರದ, ಅಧಿಕಾರಿಗಳ ಮರ್ಜಿ ಕಾದು ಕಾದು ಸುಸ್ತಾಗಿದ್ದೇನೆ. ನಮ್ಮನ್ನು ಅಬ್ಬೇಪಾರಿಗಳಂತೆ ಅಧಿಕಾರಿಗಳು ಕಾಣುತ್ತಾರೆ. ಯಾಕೋ ಸಾಕು ಅಂತ ಅನಿಸುತ್ತಿದೆ. ಮನಸ್ಸು ವ್ಯಾಕುಲಗೊಂಡಿದೆ. ಯಕ್ಷಗಾನ ತರಬೇತಿ ಶಾಲೆಯನ್ನು ಮುಚ್ಚಬೇಕೆಂದು ತೀರ್ಮಾನಿಸಿದ್ದೇನೆ’. ಸರಕಾರ ಕೊಡುತ್ತಿದ್ದ ಜುಜುಬಿ ಒಂದೆರಡು ಲಕ್ಷ ರೂ.ಗಳನ್ನು ಹಠಾತ್ತನೆ ಹಿಂದಕ್ಕೆಪಡೆಯಿತು. ಯಕ್ಷಗಾನದಂಥ ಶ್ರೀಮಂತ ಕಲೆಯಲ್ಲಿ ನಿರತರಾಗಿರುವವರ ಸಂಖ್ಯೆ ತೀರಾ ಕಡಿಮೆ. ಹೊಟ್ಟೆ ಪಾಡಿಗೆ ಇದನ್ನು ನೆಚ್ಚಿಕೊಂಡರೆ ಹೊಟ್ಟೆ ತುಂಬುವುದಿಲ್ಲ. ಹೀಗಾಗಿ ಇದನ್ನೇ ಬದುಕನ್ನಾಗಿ ಮಾಡಿಕೊಳ್ಳುವಂತಿಲ್ಲ . ಇಂಥ ಸ್ಥಿತಿಯಲ್ಲಿ ಯಾರೂ ಯಕ್ಷಗಾನ ಕಲಿಯಲು ಆಸಕ್ತಿ ತೋರುತ್ತಿಲ್ಲ . ಇಷ್ಟಾಗಿಯೂ ಮುಂದೆ ಅನುದಾನಕ್ಕೆ ಕೈಚಾಚಬೇಕು. ಸರಿ, ಇದನ್ನೇ ನಂಬಿ ಶಾಲೆ ಆರಂಭಿಸಿದರೆ ಸರಕಾರ ಯಾವಾಗ ಬೇಕಾದರೂ ಅನುದಾನ ನಿಲ್ಲಿಸಬಹುದು. ಶಂಭು ಹೆಗಡೆಯವರಿಗೆ ಅಂಥದೇ ಅನುಭವವಾಯಿ ತು. ಒಂದು ದಿನ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಆಗೋದಿಲ್ಲ ಅಂದುಬಿಟ್ಟರು. ಹೆಗಡೆಯವರು ಶಾಲೆ ಮುಚ್ಚಿಬಿಡ್ತೇನೆ ಅಂದರು. ಅದು ಒಂದು ಸಣ್ಣ ಸುದ್ದಿಯೂ ಆಗಲಿಲ್ಲ . ಜನ ಪ್ರತಿಕ್ರಿಯಿಸುವುದು, ಪ್ರತಿಭಟಿಸುವುದು ದೂರವೇ ಉಳಿಯಿತು. ಯಕ್ಷಗಾನ ತರಬೇತಿ ನೀಡುವಂಥ ಶಾಲೆಯನ್ನು ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ಯಾರೂ ದನಿಯೆತ್ತಲಿಲ್ಲ .

ನಾವೆಲ್ಲೋ ಸೂಕ್ಷ್ಮತೆಯನ್ನು , ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದೇವಾ ? ಪತ್ರಕರ್ತ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡರೆ ಆತನಿಗೆ ಎಲ್ಲವೂ ಶುಷ್ಕವಾಗುತ್ತವೆ. ನಾಗರಿಕತೆಯ ಅವನತಿ ಹಾಗೂ ಬೈಸಿಕಲ್‌ ಕಳ್ಳತನದ ನಡುವಿನ ಅಂತರ ಅರ್ಥವಾಗುವುದಿಲ್ಲ.

Sunderlal Bahugunaಇತ್ತೀಚಿನ ಪ್ರಸಂಗವೊಂದನ್ನು ಹೇಳಬೇಕು. ಬಹಳ ಕಾಲದ ನಂತರ ಬೆಂಗಳೂರಿಗೆ ಪರಿಸರವಾದಿ, ಚಿಪ್ಕೊ ಚಳವಳಿ ನಾಯಕ ಸುಂದರಲಾಲ್‌ ಬಹುಗುಣ ಬಂದಿದ್ದರು. ಇಲ್ಲಿನ ಪತ್ರಕರ್ತರೊಂದಿಗೆ ಒಂದು ಸಂವಾದ ಕಾರ್ಯಕ್ರಮ ವನ್ನು ಪ್ರೆಸ್‌ ಕ್ಲಬ್‌ನಲ್ಲಿ ಏರ್ಪಡಿಸಲಾಗಿತ್ತು . ಅವರಿಗಾಗಿ ಕುರ್ಚಿ, ಮೇಜು, ವೇದಿಕೆ ಸಿದ್ಧಗೊಂಡಿತ್ತು. ಆದರೆ ಬಹುಗು ಣ ಏಕಾಏಕಿ ಕ್ಲಬ್ಬಿನ ಹಸಿರು ಹುಲ್ಲು ಹಾಸಿನ ಮೇಲೆ ಹೋಗಿ ಕುಳಿತೇ ಬಿಟ್ಟರು. ಹಸಿರು ಹುಲ್ಲುಗಳೊಂದಿಗೆ ಮಾತಾಡಿದ ರು. ‘ಇಲ್ಲಲ್ಲ , ಅಲ್ಲಿಗೆ ಬನ್ನಿ’ ಎಂದರೆ ನಗರದಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತುಕೊಳ್ಳುವ ಸಂತಸವಿದೆಯಲ್ಲ ಅದ್ಭುತ ಅದ್ಭುತ ಎಂದರು. ಕುರ್ಚಿ ಮೇಲೆ ಕೂಡ್ರುವುದು ಸತ್ತ ಮರದ ಮೇಲೆ ಕೂತಂತೆ. ಅದಕ್ಕಿಂತ ಜೀವಂತ ಹುಲ್ಲೇ ವಾಸಿ ಎಂದರು. ಹೂಗೊಂಚಲನ್ನು ಕೊಟ್ಟಾಗ ‘ಹೂಗಳನ್ನೇಕೆ ಕೀಳುತ್ತೀರಿ, ಹೂಗಳು ಗಿಡಗಳ ಮೇಲಿದ್ದರೇ ಚೆಂದ. ಕಿತ್ತ ಕೂಡಲೇ ಅವುಗಳು ಕಳೆಗಂದುತ್ತವೆ. ಬಾಡಿ ಹೋಗುತ್ತವೆ’ಎಂದರು. ಪತ್ರಕರ್ತರೊಂದಿಗೆ ಮಾತನಾಡುತ್ತಾ ,‘ನಾನು ಕಳೆದ ಮೂರು ದಶಕಗಳಿಂದ ಭತ್ತ , ಅಕ್ಕಿ ಹಾಗೂ ಅದರ ಉತ್ಪನ್ನಗಳನ್ನು ಸೇವಿಸುತ್ತಿಲ್ಲ. ಏಕೆಂದರೆ ಭತ್ತ ಬೆಳೆಯಲು ಜಾಸ್ತಿ ನೀರು ಬೇಕು. ನಾನು ಹೀಗೆ ಮಾಡ್ತೀನಿ ಅಂತ ಅಕ್ಕಿ, ಅನ್ನ ಸೇವಿಸುವುದನ್ನು ಬೇರೆಯವರು ನಿಲ್ಲಿ ಸಿಲ್ಲ . ಅದು ನನಗೆ ಗೊತ್ತು. ಪರವಾಗಿಲ್ಲ , ಹಾಗಂತ ನಾನು ನನ್ನ ನಂಬಿಕೆಯಿಂದ ದೂರ ಸರಿಯುವುದಿಲ್ಲ’ ಎಂದು ಹೇಳಿದರು.

ಅಷ್ಟೇ ಅಲ್ಲ ಬಹುಗುಣ ಕಾಳಿ ನದಿಗುಂಟ ತಿರುಗಾಡುವಾಗ ಅಲ್ಲಿನ ನದಿ ನೀರು ಅದೆಷ್ಟು ಕಲುಷಿತವಾಗಿದೆಯೆಂಬುದನ್ನು ಮನವರಿಕೆ ಮಾಡಿಕೊಡಲು ಅಲ್ಲಿಂದ ಒಂದು ಬಕೆಟ್‌ನಲ್ಲಿನ ನೀರು ಹಿಡಿದು ತಂದಿದ್ದರು. ‘ನೋಡಿ ನಿಮ್ಮೂರ ನದಿ ನೀರು ಎಷ್ಟು ಹೊಲಸಾಗಿದೆ. ಪ್ರತಿದಿನ ವಿಧಾನ ಸೌಧಕ್ಕೆ ಹೋಗ್ತೀರಲ್ಲ ನಿಮ್ಮ ಮಂತ್ರಿಗಳಿಗೆ ತೋರಿಸಿ’ ಎಂದರು. ದುರ್ದೈವದ ಸಂಗತಿಯೆಂದರೆ ಬಹುಗುಣರ ಈ ಸಂದರ್ಶನ-ಸಂವಾದಕ್ಕೆ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರಲಿಲ್ಲ. ಒಬ್ಬ ಸಾಮಾನ್ಯ ರಾಜಕಾರಣಿ ಪತ್ರಿಕಾಗೋಷ್ಠಿಗೆ ಪ್ರೆಸ್‌ಕ್ಲಬ್‌ನಲ್ಲಿ ಏನಿಲ್ಲ ವೆಂದರೂ 30- 40 ಮಂದಿಯಿರುತ್ತಾರೆ. ಆದರೆ ಅಂದು 10-12 ಮಂದಿಯಿದ್ದರು. ಮರುದಿನದ ಪತ್ರಿಕೆಯಲ್ಲಿ ಬಹುಗುಣ ಹೇಳಿದ್ದು ಒಂದೆರಡು ಪತ್ರಿಕೆಗಳಲ್ಲಿ ಚಿಕ್ಕದಾಗಿ ಪ್ರಕಟವಾಗಿದ್ದರೆ, ಉಳಿದ ಪತ್ರಿಕೆಗಳಲ್ಲಿ ಆ ಸುದ್ದಿಗೆ ಜಾಗವಿರಲಿಲ್ಲ. ನಮಗೆ ಇನ್ನೂ ದೇವೇಗೌಡ, ಧರ್ಮಸಿಂಗ್‌, ಲಾಲೂ, ಸೋನಿಯಾ, ಆಡ್ವಾಣಿ ಹೇಳಿದ್ದು ಮಾತ್ರ ಸುದ್ದಿಯಾಗುತ್ತಿದೆ. ಧರ್ಮಸಿಂಗ್‌, ಮನ ಮೋಹನ್‌ ಸಿಂಗ್‌ ನಿತ್ಯವೂ ತಮ್ಮ ಸರಕಾರ ಐದು ವರ್ಷ ಬಾಳಿಕೆ ಬರುತ್ತದೆ ಎಂದು ಹೇಳಲಿ, ನಾವು ಶಿಸ್ತಿನಿಂದ ವರದಿ ಮಾಡುತ್ತೇವೆ. ಭ್ರಷ್ಟ್ರಾತಿಭ್ರಷ್ಟ ಮಂತ್ರಿ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಾತಾಡಿದರೆ ಒಪ್ಪವಾಗಿ ಟಿಪ್ಪಣಿ ಮಾಡಿಕೊಂಡು ವರದಿ ಒಪ್ಪಿಸುತ್ತೇವೆಯೇ ಹೊರತು, ಭ್ರಷ್ಟಾಚಾರದ ವಿರುದ್ಧ ಮಾತನಾಡಲು ನಿನಗ್ಯಾವ ನೈತಿಕ ಹೊಣೆಗಾರಿಕೆಯಿದೆ ಎಂದು ಪ್ರಶ್ನಿಸುವುದಿಲ್ಲ. ನಮಗೆ ರಾಜಕಾರಣಿಗಳ ಅಪದ್ಧ ಹೇಳಿಕೆಗಳು, ಆರೋಪಗಳು ರುಚಿಸುವಂತೆ ಸಾಮಾನ್ಯರ ಅಭಿಪ್ರಾಯವೂ ಮುಖ್ಯವೆಂದು ಅನಿಸುವುದಿಲ್ಲ. ಪಡಿತರ ಅಂಗಡಿ ಮುಂದೆ ಸೀಮೆ ಎಣ್ಣೆಗಾಗಿ ಮೈಲುದ್ದ ಸಾಲಿನಲ್ಲಿ ನಿಂತುಕೊಳ್ಳುವವರ ಬವಣೆ ಸುದ್ದಿಯೆಂದು ಅನಿಸುವುದಿಲ್ಲ. ಆ ಸುದ್ದಿ ಹಾಗೂ ಫೋಟೊ ಪ್ರಕಟಿಸುವುದನ್ನು ನಿಲ್ಲಿಸಿ ದಶಕವೇ ಆಯಿತು. ಯಾಕೆಂದರೆ ನಮ್ಮ ಮನೆಗಳಲ್ಲೂ ಸಿಲಿಂಡರ್‌ಗಳು ಬಂದು ದಶಕವೇ ಆಗಿದೆ. ಕೋಟಿ ತಿಂದವರು ನಮ್ಮ ಮುಂದೆ ಇರುವುದನ್ನು ಕಂಡೂ ಸುಮ್ಮನಿರುತ್ತೇವೆ. ಏಕೆಂದರೆ ನೂರು-ಇನ್ನೂರು ಕೋಟಿ ತಿಂದವರ ಮುಂದೆ ಕೋಟಿ ತಿಂದವನೇ ವಾಸಿ ಎಂದು ಆತನನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ.

ನಾಗೇಗೌಡರು ಶ್ರಮ, ಬಹುಗುಣರ ದೂರದರ್ಶಿತ್ವ, ಶಂಭು ಹೆಗಡೆಯವರ ಕಾಳಜಿ, ಕೈ ಜಗ್ಗುವ ಸಂಕಟ ಇವನ್ನೆಲ್ಲ ಇನ್ನೊಮ್ಮೆ ನೆನಪು ಮಾಡಿಕೊಳ್ಳಿ. ನಾವು ಸುದ್ದಿಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕೆಂದು ಅನಿಸುವುದಿಲ್ಲ ವೇ ಈಗ ಹೇಳಿ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X