• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರಾಧ್ಯಕ್ಷರ ವಿಮಾನವೆಂದರೆ ಹಾರಾಡುವ ರಾಷ್ಟ್ರಪತಿ ಭವನ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಅದರಲ್ಲೇನೂ ವಿಶೇಷವಿರಲಿಕ್ಕಿಲ್ಲ. ನೀವು ಅನೇಕ ಸಲ ವಿಮಾನ ನೋಡಿರಬಹುದು. ಅನೇಕ ಸಲ ಅದರಲ್ಲಿ ಪ್ರಯಾಣಿಸಿರಬಹುದು. ನಾಲ್ಕೈದು ಸಲ ವಿಮಾನದಲ್ಲಿ ಪಯಣಿಸಿದ ಬಳಿಕ ಬೋರಾಗುತ್ತದೆ. ಕಡೆಕಡೆಗೆ ಅದೊಂದು ಶಿಕುಷೆಯೆನಿಸುವಷ್ಟು ಸಂಕಟವಾಗುತ್ತದೆ. ಆದರೆ ಬೇರೆ ಗತಿಯಿರುವುದಿಲ್ಲ ನೆಚ್ಚಿಕೊಳ್ಳಲೇಬೇಕು. ಆದರೆ ನೀವೊಮ್ಮೆ ಭಾರತದ ರಾಷ್ಟ್ರಪತಿಗಳು ಪಯಣಿಸುವ ವಿಶೇಷ ವಿಮಾನದೊಳಗೆ ಕಾಲಿಡಬೇಕು, ಅದರಲ್ಲಿ ಪಯಣಿಸಬೇಕು. ಒಂದು ಅಮೋಘ ಅನುಭವ, ವಿಚಿತ್ರ ಅಚ್ಚರಿ ಹಾಗೂ ಒಂದಷ್ಟು ರೋಮಾಂಚಕಾರಿ ಕ್ಷಣಗಳು ನಿಮ್ಮದಾಗುವುದು ನಿಶ್ಚಿತ. ವಿಮಾನವೇರುತ್ತಿರುವಂತೆ ಎಂಥವನಿಗೂ ಅದರ ಗಾತ್ರ, ಅಗಾಧತೆಯೇ ಮೂಕವಿಸ್ಮಿತಗೊಳಿಸುತ್ತದೆ.

ಹೊಸದಿಲ್ಲಿಯ ಪಾಲಂ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ರಾಷ್ಟ್ರಪತಿಗಳ ವಿಶೇಷ ಏರ್‌ ಇಂಡಿಯಾ ವಿಮಾನ ತಂಜಾವೂರ್‌ ನಿಂತಿದ್ದರೆ ಇರುವೆ ಓಡಾಡಿದರೂ ಅದರ ಹೆಜ್ಜೆ ಗುರುತಿನ ಜಾಡು ಹಿಡಿಯುವಂಥ ಭದ್ರತೆ. ಭೂಮಿಗೆಲ್ಲ ಕಣ್ಣು. ಅಂಗಾಂಗಳಿಗೆಲ್ಲ ಪೊಲೀಸರ ಸ್ಪರ್ಶ. ಅಂಗುಲಂಗುಲದಲ್ಲೂ ಕಣ್ಗಾವಲಿನ ಹಾಸು. ದೈತ್ಯ ಹಡಗಿನಂಥ ವಿಮಾನ ಆಕಾಶಕ್ಕೆ ಧುಮುಕಿದರೆ ಹಾರಾಡುವ ರಾಷ್ಟ್ರಪತಿ ಭವನ (Flying Rashtrapati Bhavan) ದೊಳಗೆ ಕುಳಿತ ಅನುಭವ.

ಹೌದು ಇದು ಹಾರಾಡುವ ರಾಷ್ಟ್ರಪತಿ ಭವನವೇ ಅಂದರು ಏರ್‌ಕ್ರಾಫ್ಟ್‌ ಸೆಕ್ಯೂರಿಟಿ ಅಧಿಕಾರಿ ಅಶೋಕ್‌ಕುಮಾರ್‌. ರಾಷ್ಟ್ರಪತಿಗಳು ವಿಮಾನದಲ್ಲಿದ್ದಾರೆಂಬುದನ್ನು ಬಿಟ್ಟರೆ ಹಾಗೂ ಅವರು ಹಾರಾಡುತ್ತಿದ್ದಾರೆಂಬುದನ್ನು ಬಿಟ್ಟರೆ ಅವರು ರಾಷ್ಟ್ರಪತಿ ಭವನದೊಳಗೇ ಇದ್ದಾರೆ. ಅಲ್ಲಿದ್ದಾಗ ಹೇಗೆ ಕಾರ್ಯನಿರ್ವಹಿಸುತ್ತಾರೋ ಅವರು ಇಲ್ಲಿಯೂ ಹಾಗೇ ಇರಬಹುದು. ಅಲ್ಲಿ ಅವರಿಗೆ ಯಾವ್ಯಾವ ಆಡಳಿತ ಯಂತ್ರ, ಆಡಳಿತ ವ್ಯವಸ್ಥೆಗಳಿರುತ್ತವೆಯೋ ವಿಮಾನದಲ್ಲೂ ಅವೆಲ್ಲ ಇವೆ. ಅಲ್ಲಿ ಅವರ ಸೇವೆಗೆ ನಿರತರಾಗಿರುವ ಆಧಿಕಾರಿ ಗಣ, ಸಿಬ್ಬಂದಿ ಇಲ್ಲೂ ಅವರ ಜತೆ ಇದ್ದಾರೆ. ರಾಷ್ಟ್ರಪತಿಗಳು 30 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿರಲಿ ಒಂದು ಕ್ಷಣ ಕೂಡ ಭೂಮಿಯ ಸಂಪರ್ಕ ಕಡಿದುಕೊಳ್ಳುವುದಿಲ್ಲ. ಎಲ್ಲ ಮಾಹಿತಿ, ವಿವರಗಳು ಅವರಿಗೆ ಕಾಲಕಾಲಕ್ಕೆ ಲಭ್ಯ. ಭಾರತದ್ದೊಂದೇ ಅಲ್ಲ ಜಗತ್ತಿನ ಎಲ್ಲ ವಿದ್ಯಮಾನಗಳೂ ಸಹ. ರಾಷ್ಟ್ರಪತಿಗಳ ವಿಮಾನದ ಭದ್ರತಾ ಅಧಿಕಾರಿ ಸಣ್ಣ ಸಣ್ಣ ಸೂಕ್ಷ್ಮ ವಿವರಗಳನ್ನು ಒಪ್ಪಿಸುತ್ತಿದ್ದ.

ರಾಷ್ಟ್ರಪತಿಗಳು ವಿದೇಶ ಪ್ರಯಾಣಕ್ಕೆ ಹೊರಡುವುದಕ್ಕಿಂತ ಸುಮಾರು ಹದಿನೈದು ದಿನಗಳ ಮೊದಲು ಏರ್‌ ಇಂಡಿಯಾ ವಿಶೇಷ ವಿಮಾನ ರಾಷ್ಟ್ರಪತಿ ಭವನದ ಸುಪರ್ದಿಗೆ ಒಳಪಡುತ್ತದೆ. ವಿಮಾನದ ಎಲ್ಲ ಆಸನಗಳನ್ನು ಬಿಚ್ಚಿ, ಕಾರ್ಪೆಟ್ಟನ್ನು ತೆಗೆದು, ವಿಮಾನದ ಗೋಡೆಗಳಿಗೆ ಅಂಟಿಸಿದ ಅಲಂಕಾರಿಕ ಪೇಪರ್‌ಗಳನ್ನು ಕಿತ್ತು ಹೊಸ ವಿನ್ಯಾಸಕ್ಕೆ ಅಣಿಗೊಳಿಸಲಾಗುತ್ತದೆ. ಮೆತ್ತನೆಯ ಕಾರ್ಪೆಟ್ಟು, ಆಸನಗಳಿಗೆ ಹೊಸ ಹೊದಿಕೆ, ವಿಶಾಲವಾದ ಹಜಾರವನ್ನು ಸಿದ್ಧಪಡಿಸಲಾಗುತ್ತದೆ. ರಾಷ್ಟ್ರಪತಿಗಳಿಗಾಗಿ ವಿಶೇಷ ಭವ್ಯ ಕೋಣೆಯನ್ನು ಸಿಂಗರಿಸಲಾಗುತ್ತದೆ. ಅದರೊಳಗೆ ಏನುಂಟು ಏನಿಲ್ಲ? ರಾಷ್ಟ್ರಪತಿಗಳಿಗೆ ಮೀಸಲಾಗಿರುವ ಕೋಣೆಯಾಳಗೆ ಹೊಕ್ಕರೆ ಪುಟ್ಟ ರಾಷ್ಟ್ರಪತಿ ಭವನದ ಪುಟ್ಟ ಹಜಾರ ಅದರೊಳಗೊಂದು ಪುಟ್ಟ ಕೋಣೆ. ರಾಷ್ಟ್ರಪತಿಯವರಿಗಾಗಿ ವಿಶಾಲವಾದ ಮಲಗುವ ಕೋಣೆ. ಅಲ್ಲೊಂದು ಮೆತ್ತನೆಯ ಪಲ್ಲಂಗ. ಮೂಲೆಯಲ್ಲೊಂದು ಟಿವಿ. ಅದಕ್ಕೆ ಹೊಂದಿಕೊಂಡಂತೆ ಪುಟ್ಟ ಲೈಬ್ರರಿ. ಪಕ್ಕದ ಟೀಪಾಯಿ ಮೇಲೆ ಹತ್ತಾರು ದೇಶಗಳ ನೂರಾರು ಪತ್ರಿಕೆ ಹಾಗೂ ಮ್ಯಾಗಜಿನ್‌ಗಳು. ಬೆಡ್‌ ರೂಮಿನಿಂದ ಹೊರಬಿದ್ದರೆ ಕಾನ್‌ಫರೆನ್ಸ್‌ ರೂಮ್‌. ರಾಷ್ಟ್ರಪತಿಗಳು 10-15 ಮಂದಿ ಜತೆ ಪುಟ್ಟ ಸಭೆ ನಡೆಸಬಹುದು. ಅದರ ಪಕ್ಕದಲ್ಲಿರುವ ಕೋಣೆ ರಾಷ್ಟ್ರಪತಿಗಳ ಕಚೇರಿ. ಅಲ್ಲಿ ದೊಡ್ಡ ಟೇಬಲ್‌, ಭಾರತ ಸರ್ಕಾರದ ಲಾಂಛನವಿರುವ ಕುರ್ಚಿ, ಫೋನ್‌, ಫ್ಯಾಕ್ಸ್‌, ಇಂಟರ್‌ಕಾಮ್‌, ಫೈಲುಗಳ ರಾಶಿ. ರಾಷ್ಟ್ರಪತಿಗಳು ತಮ್ಮ ದೈನಂದಿನ ಸರ್ಕಾರಿ ಕೆಲಸ, ಕಾರ್ಯಗಳನ್ನು ಈ ಕಚೇರಿಯಿಂದ ನಿರ್ವಹಿಸಬಹುದಾದಷ್ಟು ಸುಸಜ್ಜಿತ. ಇಲ್ಲೂ ಕೂಡ ಅವರು ಐದಾರು ಮಂದಿ ಜತೆ ಮಾತುಕತೆ ನಡೆಸಬಹುದಾದ ವ್ಯವಸ್ಥೆ. ಈ ಕೋಣೆಗೆ ಹೊಂದಿಕೊಂಡಂತೆ ಡೈನಿಂಗ್‌ ರೂಮ್‌. ರಾಷ್ಟ್ರಪತಿಗಳು ಆರು ಮಂದಿ ಜತೆ ಊಟಕ್ಕೆ ಕುಳಿತುಕೊಳ್ಳಬಹುದು. ಪಕ್ಕದಲ್ಲಿ ಸ್ನಾನಗೃಹ.

ರಾಷ್ಟ್ರಪತಿಗಳ ಈ ಕೋಣೆಗೆ ಭದ್ರ ಭದ್ರತೆ. ಯಾರೂ ಕೂಡ ನುಸುಳುವಂತಿಲ್ಲ. ಹಾಗೆಂದು ಯಾರೂ ಹೋಗಬಾರದೆಂದೇನೂ ಇಲ್ಲ. ನಾಲ್ಕೂ ದಿಕ್ಕಿಗೆ ಕೆಂಪುದೀಪಗಳ ಡು ನಾಟ್‌ ಡಿಸ್ಟರ್ಬ್‌ ಸೂಚನೆಯಿದ್ದರೂ ಪೂರ್ವಾನುಮತಿ ಪಡೆದು ರಾಷ್ಟ್ರಪತಿಯವರನ್ನು ಭೇಟಿ ಮಾಡಬಹುದು. ಅದೃಷ್ಟವಿದ್ದರೆ ಅವರ ಜತೆ ಕುಳಿತು ಊಟ ಮಾಡಬಹುದು. ರಾಷ್ಟ್ರಪತಿಗಳ ಸಹಾಯ, ಆರೈಕೆಗಾಗಿ ಗಗನಸಖಿಯರು, ಅವರ ಆಪ್ತ ಸಿಬ್ಬಂದಿ ಸದಾ ಸಜ್ಜು. ಹೆಜ್ಜೆ ಹೆಜ್ಜೆಗೂ ಪ್ರೊಟೊಕಾಲ್‌, ಶಿಷ್ಟಾಚಾರವೆಂಬ ಬಡಿವಾರ. ಸಾಮಾನ್ಯ ವಿಮಾನದಲ್ಲಿ ಸುಮಾರು 100 ಮಂದಿ ಕುಳಿತುಕೊಳ್ಳಬಹು ದಾದಷ್ಟು ಜಾಗ ರಾಷ್ಟ್ರಪತಿಯವರಿಗೊಬ್ಬರಿಗೇ ಮೀಸಲು. ಉಳಿದೆಡೆ ಅವರ ಅಧಿಕಾರಿಗಳು, ಆಪ್ತ ಸಹಾಯಕ ವರ್ಗ, ಭದ್ರತೆ, ಶಿಷ್ಟಾಚಾರಅಧಿಕಾರಿಗಳು, ವೈದ್ಯರು, ಪರ್ತಕತರು, ವಿಮಾನ ತಂತ್ರಜ್ಞರು ಹಾಗೂ ಗಗನಸಖಿಯರು. ಎರಡು ಅಂತಸ್ತುಗಳಿರುವ ಈ ವಿಮಾನದಲ್ಲಿ ರಾಷ್ಟ್ರಪತಿಯವರ ಕೋಣೆಯ ಹೊರತಾಗಿ ಯಾರು ಎಲ್ಲಿ ಬೇಕಾದರೂ ಓಡಾಡಬಹುದು. ಪತ್ರಕರ್ತರಿಗೆ ಬರೆಯಲು, ಓದಲು ವಿಶೇಷ ಆಸನ ವ್ಯವಸ್ಥೆ. ಬರೆಯುವುದಕ್ಕಾಗಿ ಟೇಬಲ್ಲು. ಲ್ಯಾಪ್‌ಟಾಪ್‌ ಕಂಪ್ಯೂಟರ್‌ ಬಯಸಿದರೆ ಲಭ್ಯ. ವಿಮಾನದಲ್ಲಿ ವರದಿಗಳನ್ನು ಬರೆದು ಅಲ್ಲಿಂದಲೇ ಫ್ಯಾಕ್ಸ್‌ ಮಾಡಬಹುದು! ಅಲ್ಲಿಂದಲೇ ಈ ಮೇಲ್‌ ಮೂಲಕವೂ ಕಳಿಸಬಹುದು! ಕ್ಷಣಾರ್ಧದಲ್ಲಿ ನಮ್ಮ ವರದಿ ಪತ್ರಿಕಾ ಕಚೇರಿಯಲ್ಲಿ ಪ್ರತ್ಯಕ್ಷ. ವಿಮಾನದಿಂದಲೇ ಫೋನ್‌ ಮಾಡಿ ಕಳಿಸಿದ ವರದಿ ಸರಿಯಾಗಿ ಮೂಡಿದೆಯಾ ಎಂಬುದನ್ನೂ ಖಾತ್ರಿಪಡಿಸಿಕೊಳ್ಳಬಹುದು. ಅದ್ಭುತವೆನಿಸುವಂಥ ಸಂಪರ್ಕ ವಿಧಾನ.

ಒಂದು ರೀತಿಯಲ್ಲಿ ಇಡೀ ವಿಮಾನ ಹಾರಾಡುವ ಹೋಟೆಲು. ಸುಮಾರು 540 ಮಂದಿ ಕುಳಿತುಕೊಳ್ಳುವ ಆ ವಿಮಾನದಲ್ಲಿ ಇದ್ದವರು ಕೇವಲ 130 ಮಂದಿ. ಇಷ್ಟೊಂದು ಮಂದಿಗೆ ವಸತಿ, ಊಟ, ತಿಂಡಿ, ತೀರ್ಥದ ವ್ಯವಸ್ಥೆ. ಉತ್ತರ ಭಾರತ, ಚೈನೀಸ್‌, ಪಂಜಾಬಿ, ಗುಜರಾತಿ ಮೂಲದ ಊಟದ ಪೈಕಿ ಯಾವುದಾದರೊಂದನ್ನು (ಅಥವಾ ಎಲ್ಲವನ್ನೂ) ಆರಿಸಿಕೊಳ್ಳಬಹುದು. ಮೊದಲೇ ನಿಮ್ಮ ಆಯ್ಕೆ ತಿಳಿಸಿದ್ದರೆ ಅದನ್ನು ಕೂಡ ಸೇವಿಸಬಹುದು. ಊಟಕ್ಕೆ ಮೊದಲು ಹಾಗೂ ಮಧ್ಯ ಮಧ್ಯ ಮದ್ಯ. ಅದರಲ್ಲೂ ವಿವಿಧ ಬಗೆ-ಸ್ಕಾಚ್‌, ಶಾಂಪೇನ್‌, ವಿಸ್ಕಿ, ಬಿಯರ್‌, ವೋಡ್ಕಾ, ವೈನ್‌. ಇವುಗಳಲ್ಲಿ ಹತ್ತಾರು ಬ್ರಾಂಡುಗಳು. ಓಪನ್‌ ಬಾರ್‌ಗೆ ಹೋದರೆ ಪರಿಚಾರಕ ನೀವು ಹೇಳಿದಷ್ಟು ಮದ್ಯ ಸುರಿದು ಕೊಡುತ್ತಾನೆ. ಸಿಗರೇಟು ಸೇವನೆಗೆ ಮನಾ ಇಲ್ಲ. ಫೋಟೊ, ಚಿತ್ರೀಕರಣಕ್ಕೂ ನಿಷೇಧವಿಲ್ಲ. ಇದ್ಯಾವುದರ ಉಸಾಬರಿಯೇ ಬೇಡವೆಂದು ಏಕಾಂತ ಬಯಸಿದರೆ ಲೈಬ್ರರಿಯಲ್ಲಿ ಹೋಗಿ ಕುಳಿತುಕೊಳ್ಳಬಹುದು. ಮೊದಲೇ ತಿಳಿಸಿದ್ದರೆ ನೀವು ಬಯಸುವ ಎಲ್ಲ ಪತ್ರಿಕೆಗಳನ್ನೂ ಓದಬಹುದು. ಇದೂ ಬೋರಾದರೆ ಸಿನಿಮಾ ನೋಡಬಹುದು, ಸಂಗೀತ ಕೇಳಬಹುದು. ಅದೂ ಹಿಡಿಸದಿದ್ದರೆ ವಿಮಾನ ಹಾರಿಹೋಗುತ್ತಿರುವ ಊರುಗಳ ಬಗ್ಗೆ ಗೈಡ್‌ ಮಾಹಿತಿ ಪುರಾಣಕ್ಕೆ ಕಿವಿಗೊಡಬಹುದು. ಅಷ್ಟೊತ್ತಿಗೆ ಕಣ್ಣೊಳಗೆ ನಿದ್ದೆ ತುಂಬಿದರೆ ಕುಳಿತ ಆಸನವನ್ನೇ ಹಾಸಿಗೆಯಂತೆ ಬಿಚ್ಚಿಕೊಂಡು ಬೆಚ್ಚನೆಯ ರಗ್ಗು ಹೊದ್ದು ಮಲಗಬಹುದು. ಪ್ರಾಯಶಃ ಭಾರತದ ಯಾವ ವಿಮಾನದಲ್ಲೂ ಇದರಂಥ ಅಪರೂಪದ ಆದರಾತಿಥ್ಯ, ಸೌಲಭ್ಯ, ಐಷಾರಾಮಿತನ ರಾಷ್ಟ್ರಪತಿಗಳ ವಿಮಾನದಲ್ಲಿ ಕುಕ್ಕರಗಾಲು ಹಾಕಿ ಕುಳಿತುಕೊಂಡಿರುತ್ತವೆ.

ಭಾರತದ ರಾಷ್ಟ್ರಪತಿಗಳ ವಿಮಾನ ನೋಡಿಯೇ ಮೂಗಿನ ಮೇಲೆ ಬೆರಳಿಟ್ಟರೆ ಹೇಗೆ?

ಅಮೆರಿಕ ಅಧ್ಯಕ್ಷನ ವಿಮಾನವನ್ನೊಮ್ಮೆ ನೋಡಬೇಕು(ನಾನು ಹತ್ತಾರು ಸಲ ನೋಡಿದ್ದೇನೆ, ಸಿನಿಮಾದಲ್ಲಿ) ಅಧ್ಯಕ್ಷನ ವಿಮಾನಕ್ಕೆ ಏರ್‌ಫೋರ್ಸ್‌ ಒನ್‌ ಅಂತಾರೆ. ಅಮೆರಿಕದಲ್ಲಿ ವೈಟ್‌ ಹೌಸ್‌ ಬಿಟ್ಟರೆ ಅಧಿಕಾರತ್ವದ ಸಂಕೇತವೆಂದರೆ ಏರ್‌ಫೋರ್ಸ್‌ ಒನ್‌. ಅಧ್ಯಕ್ಷನ ವಿಮಾನ ಕುರಿತೇ ಏನಿಲ್ಲವೆಂದರೂ ಹದಿನೈದು ಸಿನಿಮಾಗಳಾಗಿವೆ. ಹ್ಯಾರಿಸನ್‌ ಫೋರ್ಡ್‌ ಅಮೆರಿಕ ಅಧ್ಯಕ್ಷನಾಗಿ ನಟಿಸಿದ ಏರ್‌ಫೋರ್ಸ್‌ ಒನ್‌ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ವಿಮಾನದಲ್ಲಿಯೇ ಮಾಡಲಾಗಿದೆ. ಅಧ್ಯಕ್ಷನ ವಿಮಾನ ಅಪಹರಣವೇ ಚಿತ್ರದ ಕತೆ. ಅಧ್ಯಕ್ಷನ ವಿಮಾನ ನೋಡಬೇಕೆನಿಸಿದರೆ ಈ ಸಿನಿಮಾ ನೋಡಬೇಕು.

ಅಮೆರಿಕ ಅಧ್ಯಕ್ಷನ ವಿಮಾನವೊಂದು ಅದ್ಭುತಲೋಕ. ಮೂರು ಅಂತಸ್ತುಗಳಿರುವ ಈ ವಿಮಾನದಲ್ಲಿ ಎರಡು ನೂರು ಮಂದಿ ಕುಳಿತುಕೊಳ್ಳಬಹುದು. ಈಜುಕೊಳ, ಫುಟ್ಬಾಲ್‌ ಮೈದಾನ ಬಿಟ್ಟರೆ ಉಳಿದ ಸಕಲ ಸೌಲಭ್ಯಗಳೂ ಈ ವಿಮಾನದಲ್ಲಿವೆ. ಅದಕ್ಕಾಗಿಯೇ ಈ ವಿಮಾನಕ್ಕೆ ಅಷ್ಟೆಲ್ಲ ಪ್ರಾಮುಖ್ಯ. ಅಮೆರಿಕ ಅಧ್ಯಕ್ಷ ಎಲ್ಲಿಗೇ ಹೋಗುವುದಿದ್ದರೂ ಈ ವಿಮಾನದಲ್ಲಿಯೇ ಹೋಗುವುದು. ಬೇರೆ ಯಾರೂ ಇದನ್ನು ಉಪಯೋಗಿಸುವಂತಿಲ್ಲ. ಭಾರತದ ರಾಷ್ಟ್ರಪತಿ ವಿದೇಶ ಪ್ರಯಾಣ ಮಾಡದ ಸಂದರ್ಭದಲ್ಲಿ ಅವರ ವಿಮಾನ ಪ್ರಯಾಣಿಕರ ಸಂಚಾರಕ್ಕೆ ಮೀಸಲಾಗಿರುತ್ತದೆ. ಅಮೆರಿಕ ಅಧ್ಯಕ್ಷನಿಗೆ ಒಂದಲ್ಲ ಎರಡು ವಿಮಾನಗಳು. ಇವೆರಡೂ ಏರ್‌ಫೋರ್ಸ್‌ ಒನ್‌. ಒಂದು ಕೈ ಕೊಟ್ಟರೆ ಮತ್ತೊಂದು.

ಈ ವಿಮಾನದ ಆಂತರಿಕ ವಿನ್ಯಾಸಕ್ಕೆ ಏನಿಲ್ಲವೆಂದರೂ ಎರಡು ವರ್ಷಗಳಾದರೂ ಬೇಕು. ಅಷ್ಟೊಂದು ವೈಭವೋಪೇತವಾಗಿ, ಸುಸಜ್ಜಿತವಾಗಿ ಸಿದ್ಧಪಡಿಸಲಾಗುತ್ತದೆ. ವಿಶ್ವದ ಮೂರನೇ ಒಂದರಷ್ಟು ದೂರವನ್ನು ಅಂದರೆ ಸುಮಾರು 12,600 ಕಿ.ಮೀ.ದೂರವನ್ನು ಒಂದೇ ನೆಗೆತಕ್ಕೆ ಕ್ರಮಿಸಬಲ್ಲುದು. ಪೆಟ್ರೋಲ್‌ ಭರ್ತಿಗೂ ಮಧ್ಯೆ ಇಳಿಯಬೇಕಿಲ್ಲ. ಈಗಿನ ಅಧ್ಯಕ್ಷನ ವಿಮಾನ ಒಮ್ಮೆ ನೆಗೆದರೆ ಪೆಟ್ರೋಲ್‌ ತುಂಬಿಸಿಕೊಳ್ಳಲು ಇಳಿಯಬೇಕಿಲ್ಲ. ಆಕಾಶದಲ್ಲಿಯೇ ಮತ್ತೊಂದು ವಿಮಾನ ಬಂದು ಪೆಟ್ರೋಲ್‌ ತುಂಬಿ ಹೋಗುವಂಥ ವ್ಯವಸ್ಥೆಯಿದೆ. ಸುಮಾರು ಎರಡು ಸಾವಿರ ಮಂದಿಗೆ ಸಾಕಾಗುವಷ್ಟು ಊಟ, ಉಪಾಹಾರ ಸಂಗ್ರಹಿಸಿಟ್ಟುಕೊಳ್ಳುವಷ್ಟು ಜಾಗವಿದೆ. ವಿಮಾನದೊಳಗೆ ಆಪರೇಷನ್‌ ಥಿಯೇಟರ್‌, ಜೀವರಕ್ಷಕ ಔಷಧಗಳು ಹಾಗೂ ಎಂಟು ವೈದ್ಯರನ್ನೊಳಗೊಂಡ ತಂಡ ಯಾವತ್ತೂ ಸಿದ್ಧವಾಗಿರುತ್ತದೆ.

ಏರ್‌ಫೋರ್ಸ್‌ ಒನ್‌ ಕೂಡ ಹಾರಾಡುವ ವೈಟ್‌ಹೌಸ್‌ ಇದ್ದಂತೆ. ವೈಟ್‌ಹೌಸ್‌ನಲ್ಲಿರುವ ಅಧ್ಯಕ್ಷನ ಕಚೇರಿ-ಓವಲ್‌ ಆಫೀಸ್‌-ಯಲ್ಲಿರುವಂಥ ಪುಟ್ಟ ಕಚೇರಿ ವಿಮಾನದೊಳಕ್ಕಿದೆ. ವಿಮಾನದಲ್ಲಿ ಅಧ್ಯಕ್ಷ 50 ಮಂದಿಯ ಸಭೆಯನ್ನುದ್ದೇಶಿಸಿ ಮಾತನಾಡುವಂಥ ಸಭಾಂಗಣವಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ವಿಮಾನ ಹಾರುತ್ತಿರುವಾಗ ಏರ್‌ಫೋರ್ಸ್‌ ಒನ್‌ ನ್ನು ಮಿಲಿಟರಿ ಕಮಾಂಡ್‌ ಸೆಂಟರ್‌ ಎಂದೂ ಪರಿಗಣಿಸಲಾಗುತ್ತದೆ. ವಿಮಾನದಲ್ಲಿ ಅಧ್ಯಕ್ಷ ಹಾರುತ್ತಿದ್ದ ಸಂದರ್ಭದಲ್ಲಿ ಕೆಳಗಡೆ ಅಣುಬಾಂಬ ದಾಳಿಯಂಥ ಘಟನೆ ಸಂಭವಿಸಿದರೆ ಮೇಲಿನಿಂದಲೇ ಪ್ರತಿದಾಳಿ ನಡೆಸಲು ಅಧ್ಯಕ್ಷ ಆದೇಶ ಕೊಡಬಹುದು. ಅಷ್ಟೇ ಅಲ್ಲ ಅಣುಬಾಂಬ್‌ ತುಂಬಿದ ಕೋಠಿಗಳನ್ನು ಪ್ರವೇಶಿಸುವ ಗುಪ್ತ ಸಂದೇಶವನ್ನು ಅಧ್ಯಕ್ಷ ಮೇಲಿನಿಂದಲೇ ಕಳಿಸುವ ನಿಯಂತ್ರಣ ಕೊಠಡಿ ಸಹ ವಿಮಾನದಲ್ಲಿದೆ.

1963ರ ನವೆಂಬರ್‌ 22ರಂದು ಅಧ್ಯಕ್ಷನಾಗಿದ್ದ ಜಾನ್‌ ಎಫ್‌.ಕೆನಡಿ ಡಲ್ಲಾಸ್‌ನಲ್ಲಿ ಗುಂಡಿಗೆ ಬಲಿಯಾದಾಗ, ಹತ್ಯೆ ನಡೆದ ಸ್ಥಳದಿಂದ ರಾಜಧಾನಿ ವಾಷಿಂಗ್ಟನ್‌ ಡಿ.ಸಿ.ಗೆ ಮೃತದೇಹವನ್ನು ಏರ್‌ಫೋರ್ಸ್‌ ಒನ್‌ನಲ್ಲಿ ಒಯ್ಯಲಾಯಿತು. ಅದೇ ವಿಮಾನದಲ್ಲಿ ಉಪಾಧ್ಯಕ್ಷನಾಗಿದ್ದ ಲಿಂಡನ್‌ ಜಾನ್ಸನ್‌ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸಿದ. ಜಗತ್ತಿನ ಯಾವ ದೇಶದ ಅಧ್ಯಕ್ಷನೂ ವಿಮಾನದಲ್ಲಿ ಅಧಿಕಾರದ ಗೌಪ್ಯತೆ ಹಾಗೂ ಪ್ರಮಾಣವಚನ ಸ್ವೀಕರಿಸಿದ ನಿದರ್ಶನ ಸಿಗುವುದಿಲ್ಲ. ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಪ್ರಮಾಣ ಬೋಧಿಸಿದ. ಲಿಂಡನ್‌ ನೂತನ ಅಧ್ಯಕ್ಷ ಎಂದು ವಿಮಾನದಲ್ಲೇ ಘೋಷಿಸಲಾಯಿತು.

ಸೆಪ್ಟೆಂಬರ್‌ 11ರಂದು ನ್ಯೂಯಾರ್ಕ್‌ನ ಅವಳಿ ಗೋಪುರ ಹಾಗೂ ವಾಷಿಂಗ್ಟನ್‌ನ ಪೆಂಟಗನ್‌ ಮೇಲೆ ದಾಳಿ ನಡೆಯುತ್ತಿದ್ದಂತೆ ಏರ್‌ಫೋರ್ಸ್‌ ಒನ್‌ ಕೂಡ ಭಯೋತ್ಪಾದಕರ ದಾಳಿಗೆ ತುತ್ತಾಗಬಹುದೆಂದು ಭಯಪಡಲಾಗಿತ್ತು. ಅಂದು ಫ್ಲೋರಿಡಾದಿಂದ ವಾಷಿಂಗ್ಟನ್‌ಗೆ ಬರುವ ಬದಲು ಅಧ್ಯಕ್ಷ ಬುಷ್‌ ವಿಮಾನ ಮೂರು ಕಡೆ ಮಾರ್ಗ ಬದಲಿಸಿತು. ಏರ್‌ಫೋರ್ಸ್‌ ಒನ್‌ಗೆ ಇರುವಂಥ ಭದ್ರತೆ ಯಾವುದೇ ದೇಶದ ಅಧ್ಯಕ್ಷನಿಗೂ ಇರಲಿಕ್ಕಿಲ್ಲ. ಆಕಾಶದಲ್ಲೂ ಏರ್‌ಫೋರ್ಸ್‌ ಒನ್‌ನ್ನು ಆರು ಜೆಟ್‌ ವಿಮಾನಗಳು ಸುತ್ತುವರಿದಿರುತ್ತವೆ.

ರಾಷ್ಟ್ರಾಧ್ಯಕ್ಷರ ವಿಮಾನವೆಂದರೆ ತಮಾಷೀನಾ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more