ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕೇ ನೀರು ಪಾಲಾಗುವ ಸಂದರ್ಭದಲ್ಲೂ ಹೋರಾಟ ನಿಲ್ಲಿಸದ ನೀರೆ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ನಾವು ಸೌರವ್‌ ಗಂಗೂಲಿಯನ್ನು ಟೀಮಿನಿಂದ ಕೈಬಿಟ್ಟಾಗಲೂ ಬೀದಿಗಿಳಿಯುತ್ತೇವೆ. ಫೈನಲ್‌ನಲ್ಲಿ ಸೋತಿದ್ದೇಕೆ ಎಂದು ಕಲ್ಲನ್ನೂ ಹೊಡೆಯುತ್ತೇವೆ. ರಸ್ತೆ ಸರಿಯಿಲ್ಲ, ಕರೆಂಟ್‌ ಬಂದಿಲ್ಲ ಎಂದು ಭಿತ್ತಿಪತ್ರ ಹಿಡಿದು ಧರಣಿಯನ್ನೂ ಕೂರುತ್ತೇವೆ. ಇರಾಕ್‌ ಮೇಲೆ ಸಮರ ಸಾರಿದ್ದಕ್ಕಾಗಿ ಅಮೆರಿಕದ ವಿರುದ್ಧ ಘೋಷಣೆಯನ್ನೂ ಕೂಗುತ್ತೇವೆ. ಬರ, ನೆರೆ ಪರಿಹಾರ ನೀಡಿಲ್ಲ ಎಂದು ಹರತಾಳವನ್ನೂ ನಡೆಸುತ್ತೇವೆ. ಅಷ್ಟಕ್ಕೂ ನಲ್ಲಿ ನೀರಿನಿಂದ ಗ್ಯಾಟ್‌ ಒಪ್ಪಂದದವರೆಗೂ ಪ್ರತಿಭಟನೆ ಮಾಡುವವರು ನಾವು.

ಈ ಧರಣಿ, ಮುಷ್ಕರ, ಪ್ರತಿಭಟನೆ, ಹೋರಾಟ, ಬಹಿಷ್ಕಾರಗಳೂ ಅಷ್ಟೇ- ನಮ್ಮ ನಿತ್ಯ ಬದುಕಿನ ಅಂಗಗಳಾಗಿವೆ. ಯಾವುದೇ ದಿನದ ಪತ್ರಿಕೆಗಳನ್ನು ತೆಗೆದು ನೋಡಿ ಈ ಸುದ್ದಿಗಳಿಲ್ಲದ ಸಂಚಿಕೆಗಳೇ ಇರುವುದಿಲ್ಲ. ನಾವೆಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಹೋರಾಟಗಾರರೇ. ಆದರೆ ನಮ್ಮ ಹೋರಾಟ, ಹಾರಾಟ, ಮುಷ್ಕರಗಳು ವಾರ ಇಲ್ಲವೆ, ತಿಂಗಳೊಳಗೆ ಸತ್ತು ಹೋಗುತ್ತವೆ. ಏಕೆಂದರೆ ನಮ್ಮ ಮನಸ್ಥಿತಿಯೇ ಅಂಥದ್ದು. ದೀರ್ಘಕಾಲ ಹೋರಾಡುವ ಜಾಯಮಾನ ನಮ್ಮದಲ್ಲ. ಇಂಥ ನಮ್ಮ ನಡುವೆಯೇ ಒಬ್ಬ ಹೆಣ್ಣು ಮಗಳಿದ್ದಾಳೆ. ಆಕೆಗೂ ಗೊತ್ತು, ತನ್ನ ಹೋರಾಟ ಯಶಸ್ವಿಯಾಗುವುದಿಲ್ಲ, ಹಿಡಿದ ಕಾರ್ಯವನ್ನು ಸಾಧಿಸಲಾಗುವುದಿಲ್ಲ, ಉದ್ದೇಶ ಈಡೇರುವುದಿಲ್ಲ, ಆಳುವವರ ಮನಸ್ಥಿತಿ ಬದಲಾಗುವುದಿಲ್ಲ ಅಂತ. ಆದರೂ ಮನೆ-ಮಠ ಬಿಟ್ಟು, ವೈಯಕ್ತಿಕ ಜೀವನವನ್ನೇ ಮರೆತು, ವ್ಯಕ್ತಿಗತ ನಿಂದನೆ, ನೋವುಗಳನ್ನು ನುಂಗಿಕೊಂಡು ಒಂದೇ ವಿಷಯವನ್ನಿಟ್ಟುಕೊಂಡು ಕಳೆದ 20ವರ್ಷಗಳಿಂದಲೂ ಅವಿರತ ಹೋರಾಟ ನಡೆಸುತ್ತಲೇ ಇದ್ದಾಳೆ.

- ಮೇಧಾ ಪಾಟ್ಕರ್‌!

Medha Patkarಆಕೆ ಹುಟ್ಟಿದ್ದು 1954, ಡಿಸೆಂಬರ್‌ 1ರಂದು. ಬಾಂಬೆಯಲ್ಲಿ. ಮನೆಯ ತುಂಬೆಲ್ಲ ಸಮಾಜವಾದದ ವಾತಾವರಣ. ಸಾಮಾಜಿಕ ನ್ಯಾಯದ ಧ್ವನಿ. ಕಾರ್ಮಿಕ ಚವಳಿಯದ್ದೇ ಕೂಗು. ಅಪ್ಪ ವಸಂತ್‌ ಖಾನೋಲ್ಕರ್‌ ಆ ಕಾಲಕ್ಕೇ ಕಾರ್ಮಿಕ ನಾಯಕರೆನಿಸಿದ್ದರು. ಸ್ವಾತಂತ್ರ್ಯಚಳವಳಿಯಲ್ಲೂ ಪಾಲ್ಗೊಂಡಿದ್ದರು. ಅಮ್ಮ ಇಂದು ಖಾನೋಲ್ಕರ್‌ ‘ ಸ್ವಧರ್‌’ ಎಂಬ ಮಹಿಳಾ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಂತಹ ವಾತಾವರಣ ಮೇಧಾ ಮೇಲೆ ಗಾಢ ಪ್ರಭಾವ ಬೀರಿತ್ತು. ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸ್‌ನಿಂದ ಸಮಾಜಸೇವೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಆಕೆ, ಸ್ವಯಂ ಸೇವೆ ಸಂಸ್ಥೆಯಾಂದನ್ನು ಸೇರಿ ಐದು ವರ್ಷಗಳ ಕಾಲ ಮುಂಬೈನ ಕೊಳೆಗೇರಿಯಲ್ಲಿ ಶ್ರಮಿಸಿದಳು. ಈಶಾನ್ಯ ಗುಜರಾತ್‌ನ ಬುಡುಕಟ್ಟು ಜನಾಂಗದವರ ಹಾಗೂ ರೈತರ ಬವಣೆ ಆಕೆಯ ಮೇಲೆ ಎಂತಹ ಪ್ರಭಾವ ಬೀರಿತೆಂದರೆ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿದ್ದ ತಮ್ಮ ಕೆಲಸವನ್ನು ತೊರೆದು, ಪಿಎಚ್‌ಡಿಯನ್ನು ಅರ್ಧಕ್ಕೇ ಬಿಟ್ಟು ಜನರನ್ನು ಸಂಘಟಿಸುವಂತೆ ಮಾಡಿತು.

-ಅದೇ ನರ್ಮದಾ ಬಚಾವೋ ಆಂದೋಲನ.

1985ರಲ್ಲಿ ಗುಜರಾತ್‌, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸತತ ಪ್ರವಾಸ ಕೈಗೊಂಡ ಆಕೆ ಜನರನ್ನು ಸಂಘಟಿಸಿ ರ್ಯಾಲಿ, ಜಾಥಾಗಳನ್ನು ಹಮ್ಮಿಕೊಂಡರು. ಅಲ್ಲಿನ ಪ್ರತಿ ಹಳ್ಳಿಗೂ ಭೇಟಿಕೊಟ್ಟರು. ನರ್ಮದಾ ಕಣಿವೆ ಅಭಿವೃದ್ಧಿ ಯೋಜನೆಯ ನೈಜಚಿತ್ರಣ ನೀಡುವಂತೆ, ವಿವರ ಕೊಡುವಂತೆ ಸರಕಾರದ ಮೇಲೆ ಒತ್ತಡ ಹೇರಲಾರಂಭಿಸಿದರು. ಹೀಗೆ ಮಾಹಿತಿಗಾಗಿ ಮೊದಲು ಆಂದೋಲನ ಆರಂಭವಾಯಿತು. ಆದರೆ ಸರ್ದಾರ್‌ ಸರೋವರ್‌ ಸೇರಿದಂತೆ ಒಟ್ಟು 30 ಭಾರಿ, 70ಮಧ್ಯಮ ಹಾಗೂ 3100 ಸಣ್ಣ ಆಣೆಕಟ್ಟುಗಳನ್ನು ನರ್ಮದಾ ನದಿಯುದ್ಧಕ್ಕೂ ನಿರ್ಮಾಣ ಮಾಡುವ ಯೋಜನೆಯ ವಸ್ತುನಿಷ್ಠ ಮಾಹಿತಿಯನ್ನು ನೀಡುವ ಬದಲು ಸರಕಾರ ಜನರ ಧ್ವನಿಯನ್ನೇ ಹತ್ತಿಕ್ಕಲು ಮುಂದಾಯಿತು. ಏಕೆಂದರೆ ನರ್ಮದಾ ಸಾಗರ್‌ ಯೋಜನೆಯಾಂದೇ ಸುಮಾರು 254 ಹಳ್ಳಿಗಳನ್ನು ನೀರುಪಾಲು ಮಾಡಲಿತ್ತು. ಒಟ್ಟು 37ಸಾವಿರ ಹೆಕ್ಟೇರ್‌ ಅರಣ್ಯ ಹಾಗೂ ಕೃಷಿ ಭೂಮಿ ಮುಳುಗಡೆಯಾಗಲಿತ್ತು. 3 ಲಕ್ಷದ 20 ಸಾವಿರ ಜನರನ್ನು ನಿರ್ವಸಿತರನ್ನಾಗಿಸಲಿತ್ತು.

ಇಂತಹ ವಸ್ತುಸ್ಥಿತಿಯನ್ನೇ ಮರೆಮಾಚಿ ಜನರನ್ನು ಕತ್ತಲಲ್ಲಿಡುವ ಪ್ರಯತ್ನ ನಡೆದಿತ್ತು. ಆದರೆ ಅಪಾರ ಹಾನಿಯ ಅಪಾಯವನ್ನರಿತ ಮೇಧಾ ಪಾಟ್ಕರ್‌, ನರ್ಮದಾ ಯೋಜನೆಯ ‘ಅಭಿವೃದ್ಧಿ’ ಭರವಸೆಯನ್ನೇ ಪ್ರಶ್ನಿಸಿದರು. ಹೀಗೆ ಮಾಹಿತಿಒದಗಿಸುವಂತೆ ಒತ್ತಾಯಿಸಿ ಪ್ರಾರಂಭವಾದ ನರ್ಮದಾ ಬಚಾವೋ ಆಂದೋಲನ, ಯೋಜನೆಯನ್ನೇ ಸ್ಥಗಿತಗೊಳಿಸುವಂತೆ ಒತ್ತಡ ಹೇರುವ ಚಳವಳಿಯಾಯಿತು. ನ್ಯಾಯಕ್ಕಾಗಿ ಹೋರಾಟ ಮತ್ತು ವಸ್ತುಸ್ಥಿತಿ ಸಮಗ್ರ ವಿಶ್ಲೇಷಣೆಯೆಂಬ ಸರಳ ಮಾರ್ಗಗಳ ಮೂಲಕ ಮೇಧಾ ಪಾಟ್ಕರ್‌ ಸರ್ಕಾರದ ವಿರುದ್ಧ ಟೊಂಕ ಕಟ್ಟಿ ನಿಂತರು. ಪ್ರತಿ ಬಾರಿ ಮುಂಗಾರು ಪ್ರಾರಂಭವಾದಾಗಲೂ ಮುಳುಗಡೆಯ ಅಪಾಯವನ್ನೆದುರಿಸುತ್ತಿರುವ ಹಳ್ಳಿಗಳಲ್ಲಿ ಟೆಂಟು ಕಟ್ಟಿಕೊಂಡು ಹೋರಾಟ ಮುಂದುವರಿಸಿದರು. ನೀರು ಪಾಲಾಗುವ ಅಪಾಯವನ್ನೂ ಲೆಕ್ಕಿಸಲಿಲ್ಲ. ಡ್ಯಾಂ ನಿರ್ಮಾಣ ಕಾರ್ಯ ನಡೆಯುವ ಸ್ಥಳದಲ್ಲಿ ಒಂಟಿಯಾಗಿ ರಾತ್ರಿಯಿಡೀ ಮಲಗಿದ್ದೂ ಇದೆ.

ಒಬ್ಬ ಹೆಣ್ಣು ಮಗಳು ಕೇಂದ್ರ ಸರ್ಕಾರ ಮತ್ತು ಮೂರು ರಾಜ್ಯಸರ್ಕಾರಗಳನ್ನು ಎದುರಿಸಿ ನಿಲ್ಲುವುದು ಸಾಮಾನ್ಯ ಮಾತೆ? ಸರ್ಕಾರವಾದರೂ ತನ್ನ ವಿರುದ್ಧ ಧ್ವನಿಯೆತ್ತುವವರನ್ನು ಸುಮ್ಮನೆ ಬಿಟ್ಟೀತೆ?

1994ರಲ್ಲಿ ನರ್ಮದಾ ಬಚಾವೋ ಆಂದೋಲನದ ಕಚೇರಿ ಮೇಲೆ ದಾಳಿ ನಡೆಯಿತು. ಕೊನೆಗೆ ಮೇಧಾ ಪಾಟ್ಕರ್‌ ಅವರ ಬಂಧನವೂ ಆಯಿತು. ಸಹಿಸದ ಸರ್ಕಾರ ಪೊಲೀಸರ ಮೂಲಕ ಥಳಿಸಲೂ ಹೇಸಲಿಲ್ಲ. ಮೇಧಾ ಅವರ ಮೇಲೆ ಆಕ್ರಮಣ, ಹಲ್ಲೆ ನಡೆದವು. ಆಕೆ ವಿದೇಶಿ ಏಜೆಂಟ್‌ ಎಂಬ ಆರೋಪವನ್ನೂ ಹೊರಿಸಿತು. ಅಭಿವೃದ್ಧಿ ವಿರೋಧಿ ಎಂಬ ಹಣೆಪಟ್ಟಿಯನ್ನು ಕಟ್ಟಿತು. 1991ರಲ್ಲಂತೂ 22 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಆಕೆ ಮರಣವನ್ನಪ್ಪುವಂತಹ ಸ್ಥಿತಿ ಬಂದೊದಗಿತ್ತು. ಆದರೂ ತನ್ನ ಸಂಕಲ್ಪವನ್ನು ಮಾತ್ರ ಬಿಡಲಿಲ್ಲ.

1994, ಮೇ ತಿಂಗಳಲ್ಲಿ ಸರ್ದಾರ್‌ ಸರೋವರ್‌ ಅಟೆಕಟ್ಟು ನಿರ್ಮಾಣ ವಿವಾದವನ್ನು ಸುಪ್ರೀಂಕೋರ್ಟ್‌ಗೆ ಎಳೆದು ತಂದರು. ರಾಜ್ಯಸರ್ಕಾರ ಸದ್ದಿಲ್ಲದೆ ಅಣೆಕಟ್ಟೆ ಎತ್ತರವನ್ನು ಹೆಚ್ಚಿಸಲು ಪ್ರಯತ್ನಿಸಿದಾಗಲೆಲ್ಲ, ಬುಡಕಟ್ಟು ಜನರು ಮತ್ತು ಆದಿವಾಸಿಗಳನ್ನು ಸಂಘಟಿಸಿ ಭಾರಿ ಪ್ರತಿಭಟನೆ ನಡೆಸಲಾರಂಭಿಸಿದರು. ತಾಳ್ಮೆ ಕಳೆದುಕೊಂಡ ಸರ್ಕಾರ 1996ರಲ್ಲಿ ಮತ್ತೆ ಮೇಧಾ ಅವರನ್ನು ಬಂಧಿಸಿತು. ಆದರೂ ಹೋರಾಟ ನಿಲ್ಲಲಿಲ್ಲ. ಇತ್ತ ಸರ್ಕಾರ ಕೂಡ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಜನರನ್ನು ಒಕ್ಕಲೆಬ್ಬಿಸಲಾರಂಭಿಸಿತು. ಹೀಗೆ ಸರ್ಕಾರದ ನಿಜಬಣ್ಣ ಬಯಲಾಗತೊಡಗಿತು. ಮೇಧಾ ಧ್ವನಿಗೆ ಬಲ ಬರಲಾರಂಭಿಸಿತು.

ಹಾಗಂತ ಮೇಧಾ ಅಭಿವೃದ್ಧಿ ವಿರೋಧಿಯೂಅಲ್ಲ. ವಾಸ್ತವವನ್ನು ಒಪ್ಪಿಕೊಳ್ಳಲು ಹಿಂಜರಿಯುವುದೂ ಇಲ್ಲ. ಆದರೆ ಸರ್ಕಾರದ ಮಾತು ಮತ್ತು ಕೃತಿಗಳ ನಡುವಿನ ವ್ಯತ್ಯಾಸ ಅವರಿಗೆ ಗೊತ್ತು. ಅದಕ್ಕೂ ಮುಖ್ಯವಾಗಿ ನರ್ಮದಾ ಕಣಿವೆ ಅಭಿವೃದ್ಧಿ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಒಟ್ಟು ಸುಮಾರು 6 ಲಕ್ಷ ಜನರನ್ನು ನಿರ್ವಸತಿಗರನ್ನಾಗಿಸುವುದಲ್ಲದೆ ಪರಿಸರ ಸಮತೋಲನದ ಮೇಲೆ ಅಪಾಯಕಾರಿ ಪರಿಣಾಮವನ್ನುಂಟು ಮಾಡಲಿದೆ. ಅಲ್ಲದೆ ವಿಶ್ವ ವ್ಯಾಪಾರ ಸಂಘಟನೆಯೆಂಬ ವೇದಿಕೆಯನ್ನುಪಯೋಗಿಸಿಕೊಂಡು ಸುಮಾರು 40 ಸಾವಿರ ಕೋಟಿ ರೂ.ಗಳನ್ನು ಈ ಯೋಜನೆಯಲ್ಲಿ ತೊಡಗಿಸುತ್ತಿರುವ ವಿಶ್ವಬ್ಯಾಂಕ್‌ನ ಲಾಭಕೋರತನವೂ ಮೇಧಾ ಪಾಟ್ಕರ್‌ಗೆ ಗೊತ್ತು.

ಅಭಿವೃದ್ಧಿ ಹೆಸರಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದರೂ ಸರ್ಕಾರ ವಿಶ್ವಬ್ಯಾಂಕ್‌ನ ಏಜೆಂಟ್‌ನಂತೆ ವರ್ತಿಸುತ್ತಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಇಷ್ಟಾಗಿಯೂ, ಈಗಾಗಲೇ 20ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿರುವ ಈ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬುದು ಮೇಧಾಗೂ ಗೊತ್ತು. ಅದನ್ನು ಒಪ್ಪಿಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. ಆದರೆ ಆಕೆ ಭಾರಿ ಅಣೆಕಟ್ಟುಗಳ ನಿರ್ಮಾಣದ ವಿರುದ್ಧ ಮಾಡಿದ ಹೋರಾಟಕ್ಕೆ ಈಗ ನಮ್ಮ ದೇಶದಲ್ಲಿ ಮಾತ್ರವಲ್ಲ, ವಿಶ್ವಮನ್ನಣೆ ದೊರೆತಿದೆ. ನರ್ಮದಾ ಬಚಾವೋ ಆಂದೋಲನದ ಮೂಲಕ ಆಕೆ ಎತ್ತಿದ ಧ್ವನಿ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ.

ಈ ಮಧ್ಯೆ ದೇಶದ ಸುಮಾರು 150 ಸಂಘಟನೆಗಳ ಸೂರಾಗಿರುವ ‘ನ್ಯಾಷನಲ್‌ ಆಲಯನ್ಸ್‌ ಫಾರ್‌ ಪೀಪಲ್ಸ್‌ ಮೂವ್‌ಮೆಂಟ್‌’ನ ದಾರಿ ದೀಪವೂ ಮೇಧಾ ಅವರಾಗಿದ್ದಾರೆ. ಹೀಗೆ ಮೇಧಾ ಪ್ರಾರಂಭಿಸಿದ ಹೋರಾಟದಿಂದಾಗಿ ನದಿ ಜೋಡಣೆ ಯೋಜನೆಯ ಬಗ್ಗೆಯೂ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಬೃಹತ್‌ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದರೆ ವಿಶ್ವಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಮತ್ತಿತರ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ 5.6ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆ ಹರಿದು ಬರಲಿದೆ. ಆಗ ನಮ್ಮ ಕೃಷಿ ಕ್ಷೇತ್ರವೂ ದಾಸ್ಯಕ್ಕೊಳಗಾಗುತ್ತದೆ. ಕೃಷಿ ಮಾರುಕಟ್ಟೆಯನ್ನು ತೆರೆದು ವಿದೇಶಿ ಉತ್ಪನ್ನಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕಾಗುತ್ತದೆ. ಮಿಗಿಲಾಗಿ ನದಿಗಳೂ ಕೂಡ ಕೆಲವೇ ವ್ಯಾಪಾರಿಗಳಿಗೆ ಬಿಕರಿಯಾಗುತ್ತವೆ. ವಿಶ್ವವ್ಯಾಪಾರ ಸಂಘಟನೆಯ ಇಂತಹ ಧೂರ್ತ ಉದ್ದೇಶದ ವಿರುದ್ಧ ಇಂದು ಧ್ವನಿ ಕೇಳಿಬರುತ್ತಿದ್ದರೆ ಅದಕ್ಕೆ ಕಾರಣ ಮೇಧಾ ಪಾಟ್ಕರ್‌.

ಇಷ್ಟಾಗಿಯೂ ಸರ್ದಾರ್‌ ಸರೋವರದಲ್ಲಿ ಡ್ಯಾಂ ನಿರ್ಮಾಣವಾಗುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಇತ್ತ ಹಿಂಸೆ , ಕಿರುಕುಳ, ವಿದೇಶಿ ಏಜೆಂಟ್‌ ಎಂಬ ಆರೋಪಗಳ ನಡುವೆಯೂ ಹೋರಾಟ ನಡೆಸುತ್ತಿರುವ ಮೇಧಾಗೂ ಗೊತ್ತು ಗುರಿ ತಲುಪುವ, ಕಾರ್ಯಸಾಧನೆಯಾಗುವ ಯಾವುದೇ ಭರವಸೆಯಿಲ್ಲ ಎಂದು. ಆದರೆ ಆಕೆಯ ಸಂಕಲ್ಪವನ್ನು ಕದಲಿಸಲೂ ಇದಾವುದರಿಂದಲೂ ಸಾಧ್ಯವಾಗಿಲ್ಲ. ಆಕೆಯ ಹೋರಾಟಕ್ಕೆ 20ವರ್ಷಗಳು ತುಂಬಿವೆ. ಬಹುಶಃ ಸ್ವಾತಂತ್ರ್ಯ ಹೋರಾಟ ಬಿಟ್ಟರೆ ನರ್ಮದಾ ಬಚಾವೋ ಆಂದೋಲನದಷ್ಟು ದೀರ್ಘ ಹೋರಾಟ ನಮ್ಮ ದೇಶದಲ್ಲಿ ನಡೆದಿಲ್ಲ. ಅದೂ ಒಂದೇ ವಿಷಯವನ್ನಿಟ್ಟುಕೊಂಡು. ಹಾಗಾಗಿಯೇ ಮೇಧಾ ವಿಶಿಷ್ಟವೆನಿಸುವುದು. ಆಕೆಯ ಹೆಸರು ಜನಮಾನಸದಲ್ಲಿ ಸೇರಿ ಹೋಗಿರುವುದು. ಪ್ರತಿ ಅಟೆಕಟ್ಟು ನಿರ್ಮಿಸುವಾಗಲೂ ಆಕೆಯ ಹೆಸರನ್ನು ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಬೃಹತ್‌ ಅಟೆಕಟ್ಟು ನಿರ್ಮಾಣದ ಬಗ್ಗೆ ಆಕೆ ಮೂಡಿಸಿದ ಅರಿವು ಮತ್ತು ಜಾಗೃತಿ ಅಂಥದ್ದು.

ನಾಳೆ ಸರ್ದಾರ್‌ ಸರೋವರ್‌ ಅಟೆಕಟ್ಟು ಎದ್ದು ನಿಲ್ಲಬಹುದು. ಇದನ್ನು ಮೇಧಾ ಪಾಟ್ಕರ್‌ ಸೋಲು ಎಂದು ನಾವು ಭಾವಿಸಬೇಕಿಲ್ಲ. ನರ್ಮದಾ ಬಚಾವೋ ಆಂದೋಲನದ ಮೂಲಕ ಆಕೆ ಎಬ್ಬಿಸಿದ ಜಾಗೃತಿ ಕ್ರಾಂತಿಯೇ ಆಕೆಯ ಅತಿ ದೊಡ್ಡ ಗೆಲುವು.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X