• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶತ್ರು ಹಾಗೂ ಶೀತದೊಂದಿಗೆ ಸೆಣಸುವ ಸೈನಿಕನಿಗೊಂದು ಸಲಾಮು !

By ವಿಶ್ವೇಶ್ವರ ಭಟ್‌
|

ಜುಲೈ 26ಬಂದರೆ...

ಕಾರ್ಗಿಲ್‌ ವಿಜಯ ದಿವಸದ ನೆನಪು ಅಮರಿಕೊಳ್ಳುತ್ತದೆ. ಆರು ವರ್ಷಗಳ ಹಿಂದೆ ಭಾರತದ ಕೆಚ್ಚಿನ, ಹೆಮ್ಮೆಯ ಸೈನಿಕರು ಪಾಕಿಸ್ತಾನ ಸೇನೆಯನ್ನು ಬಗ್ಗುಬಡಿದು ಸಂಭ್ರಮದಿಂದ ವಿಜಯ ಸಾಧಿಸಿದ ದಿನ. ಅಂದು ರೋರಿkು-ಲಾ ಪಾಸ್‌ದಿಂದ ಸಿಯಾಚಿನ್‌ವರೆಗೆ ನಿರ್ಲಿಪ್ತವಾಗಿ ಮಲಗಿದ ಹಿಮಗಿರಿಯ ಅಂಗಳದಲ್ಲಿ ಭಾರತ-ಪಾಕ್‌ ಸೇನೆ ಮುಖಾಮುಖಿಯಾದಾಗ ಟ್ಯಾಂಕರ್‌ಗಳು ಸಿಡಿದವು. ಬಾಂಬ್‌ಗಳು ಸ್ಫೋಟಿಸಿದವು. ವಿಮಾನಗಳು ಬಾಂಬ್‌ಗಳ ಮಳೆಗರೆದವು. ತುಫಾಕಿಗಳಿಂದ ಗುಂಡುಗಳು ಚರ್ಚರಗುಟ್ಟಿದವು. ಮೇ 8ರಿಂದ ಜುಲೈ 14ರವರೆಗೆ ನಡೆದ ಭೀಕರ ಕದನದಲ್ಲಿ 526 ಮಂದಿ ಭಾರತೀಯ ಸೈನಿಕರು ದೇಶಕ್ಕಾಗಿ ಪ್ರಾಣತೆತ್ತರು. ಸುಮಾರು 140 ಮಂದಿ ಗಾಯಗೊಂಡರು. 250 ಮಂದಿ ಯೋಧರು ಶಾಶ್ವತ ಅಂಗವಿಕಲರಾದರು.

ಕಾರ್ಗಿಲ್‌ ಯುದ್ಧಕ್ಕಾಗಿ ಪಾಕ್‌ ಸೇನೆ 16 ತಿಂಗಳುಗಳಿಂದ ವ್ಯವಸ್ಥಿತ ತಯಾರಿ ನಡೆಸಿತ್ತು. ಭಾರತೀಯ ಸೈನಿಕರಿಗೆ ಇದರ ಸುಳಿವು ಇರಲಿಲ್ಲ. ನಮ್ಮ ಸೈನಿಕರು ಬಂದೂಕುಗಳನ್ನು ಹೆಗಲಿಗೇರಿಸಿಕೊಳ್ಳುವ ಹೊತ್ತಿಗೆ ಪಾಕ್‌ ಸೈನಿಕರು ಗಡಿಯಾಳಗೆ ನುಗ್ಗಿ ಆರ್ಭಟಕ್ಕಿಳಿದಿದ್ದರು. ಹೇಗೆ ಶತ್ರುಪಡೆ ಏಕಾಏಕಿ ಮುನ್ನುಗ್ಗಿ ಬರುತ್ತಿದ್ದರೆ, ಅದೂ ತನ್ನ ಗಡಿಯಾಳಗೆ ಬಂದು ದುಪಳಿಗಿಳಿದರೆ ಎಂಥ ಸೈನಿಕನಿಗಾದರೂ ಒಂದಪ ಎದೆಯ ಗೂಡಿನೊಳಗೆ ಡವ್‌ ಎಂಬ ಸಣ್ಣ ದನಿ ಟಿಸಿಲೊಡೆಯುತ್ತದೆ. ಅಂದು ಭಾರತೀಯ ಸೈನಿಕರಿಗಾದದ್ದೂ ಅದೇ. ಆದರೆ ಕಂಗೆಟ್ಟು ಕಿಲುಬು ಹಿಡಿದು ಕುಳಿತುಕೊಳ್ಳುವ ಸಮಯ ಅದಾಗಿರಲಿಲ್ಲ. ಇಡೀ ಸೇನೆ ಎದ್ದು ನಿಂತಿತು. ತೀಕ್ಷ್ಣ ಪ್ರತಿರೋಧ ನೀಡಿತು. ಒಳಗೆ ಅಡಿಯಿಟ್ಟ ವೈರಿಪಡೆಯನ್ನು ಹಿಮ್ಮೆಟ್ಟಿಸಿತು. ಪಾಕ್‌ ಸೇನೆ ವಶಪಡಿಸಿಕೊಂಡಿದ್ದ ಟೈಗರ್‌ ಹಿಲ್‌ನ್ನು ತೆರವುಗೊಳಿಸಿ ಅಲ್ಲಿ ಭಾರತೀಯ ಸೈನಿಕರು ತ್ರಿವರ್ಣ ಧ್ವಜ ನೆಟ್ಟರು. ಜಗತ್ತಿನ ಅತಿ ಎತ್ತರದ ಹಾಗೂ ಅತಿ ಶೀತಲ ಸಮರಭೂಮಿಯೆಂದೇ ಕರೆಯಲಾಗುವ ಸಿಯಾಚಿನ್‌ನಿಂದಲೂ ಪಾಕ್‌ ಸೈನಿಕರು ಕಾಲ್ಕಿತ್ತರು. ಆರನೇ ವಾರದಲ್ಲಿ ಪಾಕ್‌ ಸೈನಿಕರು ಬಂದ ದಾರಿಯಲ್ಲೇ ಓಟಕಿತ್ತಿದ್ದರು.

ಕಾರ್ಗಿಲ್‌ ರಣಭೂಮಿಯಲ್ಲಿ ನಮ್ಮ ಸೈನಿಕರು ಸಂಭ್ರಮ ಆಚರಿಸುತ್ತಿದ್ದರೆ ಇಡೀ ದೇಶ ಪುಳಕಗೊಂಡು ಆ ಆನಂದದಲ್ಲಿ ಭಾಗಿದಾರಿಯಾಗಿತ್ತು. ಅಂದಿನ ಸರ್ಕಾರ ಜುಲೈ 26ನ್ನು ಕಾರ್ಗಿಲ್‌ ವಿಜಯ ದಿನ ಎಂದು ಘೋಷಿಸಿತು. ಕಾರ್ಗಿಲ್‌ ಯುದ್ಧದಲ್ಲಿ ಮಡಿದ ವೀರ ಸೇನಾನಿಗಳ ಅನುಪಮ ದೇಶಭಕ್ತಿ, ಸಾಹಸವನ್ನು ಸ್ಮರಿಸಿಕೊಳ್ಳಲು ಈ ದಿನವನ್ನು ಮೀಸಲಾಗಿಡೋಣವೆಂದು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೇಳಿದರು. ಪ್ರತಿವರ್ಷ ಈ ದಿನವನ್ನು ಕಾರ್ಗಿಲ್‌ ವಿಜಯ ದಿನವನ್ನಾಗಿ ಆಚರಿಸೋಣ ಎಂದರು. ಅವರ ಸರ್ಕಾರ ಇರುವ ತನಕ ಜುಲೈ 26 ಕಾರ್ಗಿಲ್‌ ಸ್ಮರಣೆಗೆ ಜಮಾ ಆಯಿತು.

ಡಾ.ಮನಮೋಹನ್‌ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಬಂತು. ಕಾರ್ಗಿಲ್‌ ವಿಜಯ ದಿವಸ ಆಚರಣೆ ಬೇಡ ಎಂದು ಬಿಟ್ಟಿತು. ಅದೇನು ಅಧಿಕಾರ ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದ ವಾಜಪೇಯಿಯ ವಿಜಯೋತ್ಸಾಹ ಆಚರಣೆ ಎಂದುಕೊಂಡು ಬಿಟ್ಟರೋ ಏನೋ? ಪಾಕ್‌ ಜತೆಗೆ ಶಾಂತಿ ಮಾತುಕತೆಗೆ ಕುಳಿತುಕೊಂಡಾಗ ಕಾರ್ಗಿಲ್‌ ವಿಜಯ ದಿವಸ ಆಚರಿಸುವುದು ಸರಿಯಲ್ಲ ಎಂದು ಸರ್ಕಾರ ಅಧಿಕೃತ ನೀಡಿತು. ಕಾರ್ಗಿಲ್‌ ಯುದ್ಧ ಗೆಲುವಿಗೆ ಅಂದಿನ ಬಿಜೆಪಿ ನೇತೃತ್ವದ ಸರ್ಕಾರ ತಾನೇ ಕಾರಣ ಎಂದು ಹೇಳಿ ಲಾಭ ಪಡೆದುಕೊಂಡಿದ್ದರಿಂದ ಈಗ ವಿಜಯ ದಿವಸ ಆಚರಿಸಿದರೆ ಅವರಿಗೆ ಕ್ರೆಡಿಟ್‌ ಹೋದೀತೆಂದು ಈಗಿನ ಸರ್ಕಾರ ಯೋಚಿಸಿತ್ತಾ? ಯಾವ ವಿಷಯದಲ್ಲಿ ರಾಜಕೀಯ ಇಣುಬಾರದಿತ್ತೋ ಅಲ್ಲಿ ಅದು ಇಣುಕಿತ್ತು.

ದೇಶದ ಸ್ವಾಭಿಮಾನ, ಗೌರವದ ವಿಷಯದಲ್ಲಿ ರಾಜಕೀಯ ತಲೆ ಹಾಕಲೇಬಾರದು. ಮೂಗು ತೂರಿಸಲೇಬಾರದು. ಕಾರ್ಗಿಲ್‌ ಯುದ್ಧದಲ್ಲಿನ ಗೆಲುವು ಭಾರತಕ್ಕೆ ಎಂಥ ಪ್ರತಿಷ್ಠೆಯ ವಿಷಯವಾಗಿತ್ತೆಂಬುದು ಎಲ್ಲರಿಗೂ ಗೊತ್ತು. ಅದಿರಲಿ.

ಒಮ್ಮೆ ಯುದ್ಧವೆಂಬುದು ಘೋಷಣೆಯಾದರೆ ಸೇನಾ ಶಿಬಿರಗಳಲ್ಲಿ ವಾತಾವರಣ ಹೇಗೆ ಸರ್ರಂತ ಬದಲಾಗುತ್ತದೆಂಬುದನ್ನು ಗಮನಿಸಬೇಕು. ಹಸೆಮಣೆಯಲ್ಲಿ ಕುಳಿತ ಯೋಧ ಆ ಕ್ಷಣದಲ್ಲಿಯೇ ಎದ್ದೇಳುತ್ತಾನೆ. ಅಪರೂಪಕ್ಕೆದು ತಾಯಿ-ತಂದೆ ನೋಡಲು ಬಂದ ಸೈನಿಕ ಹೊರಟು ನಿಲ್ಲುತ್ತಾನೆ. ವರ್ಷದಿಂದ ಹೆಂಡತಿ-ಮಕ್ಕಳ ಮುಖ ನೋಡದ ಯೋಧನಿಗೆ ಯುದ್ಧದ ಕಹಳೆ ಪುನಃ ಸೇನಾ ಡೇರೆಯತ್ತ ಹೊರಡುವ ಆದೇಶದಂತೆ ಕೇಳಿಸುತ್ತದೆ. ಅದೆಂಥ ಪರಿಸ್ಥಿತಿಯೇ ಇರಲಿ, ಬರಲಿ ಯಾವುದೇ ಸಬೂಬು ಹೇಳುವಂತಿಲ್ಲ. ಮುಂದೆ ಯಾರದೇ ಚಿತೆಯಿರಲಿ ಕಹಳೆ ಮೊಳಗಿದರೆ ಹೊರಡಬೇಕು. ಅದು ಎಲ್ಲಿಗಾದರೂ ಸೈ, ಎಂಥ ಕೆಲಸವಾದರೂ ಸೈ ಒಲ್ಲೆ ಎನ್ನುವಂತಿಲ್ಲ. ಯಾವ ನೆಪಕ್ಕೂ ಹರಗೀಸು ಕಿಮ್ಮತ್ತಿಲ್ಲ. ಯುದ್ಧಭೂಮಿಯಿಂದ ಬರುವ ಯಾವ ವಾರ್ತೆಯೂ ಖುಷಿಪಡುವಂತಿರುವುದಿಲ್ಲ ಎಂಬಂತೆ ಯಾವ ಪರಿಸ್ಥಿತಿ ಬರಬಹುದೋ ಏನೋ, ಅದೇನೇ ಇರಲಿ ಹೆಗಲಿಗೊಂದು ಬಂದೂಕು ಎತ್ತಿಹಾಕಿಕೊಂಡು ಸಮರರಂಗಕ್ಕೆ ಹೊರಟು ನಿಲ್ಲಬೇಕು. ಹಾಗೆಂದು ಸೈನಿಕನಾದವನು ಅಲ್ಲಿಗೆ ಹೋಗಲು ಹಿಂದೇಟು ಹಾಕುವುದಿಲ್ಲ. ಅವನಿಗೆ ಆ ರೀತಿಯ ಸಂಸ್ಕಾರವನ್ನೇ ಕೊಟ್ಟಿರುತ್ತಾರೆ.

ಲೇಹ್‌, ಝನಸ್ಕಾರ್‌, ಪೆಂಗಾಂಗ್‌ನಂಥ ಸೇನಾ ಶಿಬಿರಗಳಲ್ಲಿ ಕೆಲ ದಿನ ಕಳೆಯುವ ಅವಕಾಶ ಸಿಕ್ಕಿತ್ತು. ಚೀನಾದ ಗಡಿಗೆ ಅಂಟಿಕೊಂಡಿರುವ ಪೆಂಗಾಂಗ್‌ನಲ್ಲಿ ವರ್ಷದ ಯಾವುದೇ ಕ್ಷಣದಲ್ಲಿ ಹವಾಮಾನವೆಂಬುದು ಒಂದು ಡಿಗ್ರಿಗಿಂತ ಮೇಲೆದ್ದಿದ್ದು ಇಲ್ಲವೇ ಇಲ್ಲ. ಯಾವತ್ತೂ ಮೈನಸ್‌ನಲ್ಲಿ ಕೆಳಗಿಳಿದಿರುತ್ತದೆ. ಅಂಥ ಪ್ರದೇಶದಲ್ಲಿ ಕುಳಿತ ಸೈನಿಕ ಕಣ್ಣೆವೆ ಹಾಯುವತನಕ ಹಿಮ, ಹಿಮ ಹಾಗೂ ಹಿಮವನ್ನಷ್ಟೇ ನೋಡುತ್ತಿರಬೇಕು. ಕಷ್ಟ ಸುಖ ಹೇಳಿಕೊಳ್ಳಲು, ಒಂದು ಆಪಸ್ನಾತಿ ಮಾತನ್ನು ಹಂಚಿಕೊಳ್ಳಲು ಒಬ್ಬ ಸ್ನೇಹಿತ ಸಿಗುವುದಿಲ್ಲ. 24ಗಂಟೆ, ವಾರಕ್ಕೇಳು ದಿನ, ಮುನ್ನೂರಾ ಅರವತ್ತೆೈದು ದಿನ ಒಂದೇ ಸೇನಾ ಡೇರಿಯಲ್ಲಿ ಕುಳಿತಿರಬೇಕು. ಆತನಿಗೆ ಒಂದು ವಾರಕ್ಕಾಗುವಷ್ಟು ಆಹಾರವನ್ನು ಆತ ಇರುವಲ್ಲಿ ಪೂರೈಸಲಾಗುತ್ತದೆ. ಆನಂತರ ಆತನಿಗೆ ಒಂದು ವಾರ ಮನುಷ್ಯರ ದರ್ಶನವೇ ಆಗುವುದಿಲ್ಲ. ಇಡೀ ದಿನ ಮೈಯೆಲ್ಲ ಕಣ್ಣಾಗಿ ಬಂದೂಕು ಹಿಡಿದು ಕುಳಿತಿರಬೇಕು.

ಸಾವಿರಾರು ಮೈಲಿ ದೂರದಲ್ಲಿರುವ ಹೆಂಡತಿ, ಅಪ್ಪ, ಅಮ್ಮನ ಸಣ್ಣ ಮಾತನ್ನು ಆಲಿಸೋಣವೆಂದರೆ ಅಲ್ಲಿ ಅಂಥ ವ್ಯವಸ್ಥೆಯಿಲ್ಲ. ಮುದ್ದು ಮಗ, ಮಗಳ ಕಿಲ ಕಿಲ ಆಲಿಸಲು ಸಾಧ್ಯವಿಲ್ಲ. ಇಂಥ ಸ್ಥಾನದಲ್ಲಿ ಕುಳಿತ ಸೈನಿಕನ ಜೇಬನ್ನು ಕೆದಕಬೇಕು. ಹೆಂಡತಿ ಎಂದೋ ಬರೆದ ಪತ್ರಗಳ ಕಟ್ಟು, ಪ್ರೀತಿಸುವ ಜೀವಗಳ ಪೋಟೋ ಕಂತೆ, ತಾಯಿ ಗುಡಿಗೆ ಹೋಗಿ ಮಂತ್ರಿಸಿಕೊಂಡು ತಂದು ಕಟ್ಟಿದ ತಾಯತ, ಅಪ್ಪ ಕೊಟ್ಟ ದೇವರ ಚಿತ್ರ ತುಂಬಿರುತ್ತದೆ. ದಿನವಿಡೀ ಅವನ್ನೇ ನೋಡುತ್ತಿರಬೇಕು. ಪಂಗಾಂಗ್‌ನಲ್ಲಿ ಸಿಕ್ಕ ಲಕ್ಷಣ್‌ಸಿಂಗ್‌ ಹೇಳಿದ್ದ ಈ ಪರ್ವತ ಶ್ರೇಣಿಯಲ್ಲಿ ಕುಳಿತರೆ ನಾನೆಲ್ಲಿದ್ದೇನೆಂಬುವುದೇ ಗೊತ್ತಾಗುವುದಿಲ್ಲ. ಕೊನೆಕೊನೆಗೆ ನಾನು ಯಾರೆಂಬುದೂ ಮರೆತುಹೋಗುತ್ತದೆ. ಅಂಥ ಏಕಾಂತ, ಅಂಥ ನೀರವತೆ. ಎಷ್ಟೋ ಸಲ ದೂರದಲ್ಲಿನ ನನ್ನ ಕುಟುಂಬದವರನ್ನು ನೆನೆಸಿಕೊಂಡರೂ ಅವರ ದೃಶ್ಯ, ಚಿತ್ರಣ ಕಣ್ಮುಂದೆ ಬರುವುದಿಲ್ಲ. ನಮಗೆ ಹುಚ್ಚು ಹಿಡಿಯುವುದೊಂದು ಬಾಕಿ. ಆದರೆ ನಾವು ಮಾಡುವ ಕೆಲಸ, ದೇಶ ಕಾಯುವ ಕೆಲಸ ನೆನಪಿಸಿಕೊಂಡು ಜಾಗೃತನಾಗುತ್ತೇನೆ.

ಇದು ಕೇವಲ ಲಕ್ಷಣ್‌ಸಿಂಗ್‌ನ ಮಾತಲ್ಲ. ಆ ಹಿಮಕಣಿವೆಯಲ್ಲಿ ನಿಂತ ಪ್ರತಿ ಸೈನಿಕನ ಮಾತು ಕೂಡ. ಜೈಲು ಬೇಡ, ಟಿವಿಯೂ ಇಲ್ಲದ ನಿರ್ಜನ ಮನೆಯಲ್ಲಿ ಅಥವಾ ಯಾರೂ ಇಲ್ಲದ ಮನೆಯಲ್ಲಿ ಅಥವಾ ಎಲ್ಲರೂ ಇರುವ ನಮ್ಮ ಮನೆಯಲ್ಲೇ ನಾಲ್ಕು ದಿನ ಗೃಹಬಂಧನದಲ್ಲಿಟ್ಟರೆ ಬೋರೆಂದು ಬೊಕ್ಕಣ ಬಿದ್ದಿರುತ್ತೇವೆ. ಅಂಥದರಲ್ಲಿ ವರ್ಷಗಟ್ಟಲೆ ಮನುಷ್ಯ ಮಾತ್ರರನ್ನು ನೋಡದೇ, ಹೆತ್ತವರು, ಕಟ್ಟಿಕೊಂಡವರನ್ನು ಕಾಣದೇ ವರ್ಷಾರಭ್ಯ ಕೊರೆಯುವ ಶೀತದಲ್ಲಿ ಶೂನ್ಯವನ್ನು ದಿಟ್ಟಿಸುವಂತೆ ಕುಕ್ಕುರಬಡಿದು ಕುಳಿತಿರಬೇಕೆಂದರೆ... ಅದೇನು ಸಣ್ಣ ಕೆಲಸವಲ್ಲ. ಈ ಮಧ್ಯೆ ವೈರಿಗಳ ಆಕ್ರಮಣವಾದರೆ ಜೀವದ ಹಂಗು ತೊರೆದು ಸೆಣಸಬೇಕು, ಬದುಕಿ ಬಂದರೆ ಪುಣ್ಯ.

ಇನ್ನು ಸಿಯಾಚಿನ್‌ನಂಥ ಪ್ರದೇಶದಲ್ಲಿರುವ ಸೈನಿಕರ ಪಾಡಂತೂ ದೇವರಿಗೇ ಪ್ರೀತಿ. ಮೈನಸ್‌ 40-50 ಡಿಗ್ರಿ ಶೀತದಲ್ಲಿರುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಸಿಯಾಚಿನ್‌ನಲ್ಲಿ ಶತ್ರುಗಳ ಜತೆಗೆ ಹೋರಾಡುವುದಕ್ಕಿಂತ ಪ್ರಕೃತಿಯ ಜತೆಗೆ, ಶೀತದ ಜತೆಗೆ ಹೋರಾಡುವುದು ಇನ್ನೂ ಕಷ್ಟ. ಶತ್ರುಗಳ ಜತೆಗೆ ಸೆಣಸಿ ಸಾಯುವುದಕ್ಕಿಂತ ಹೆಚ್ಚಾಗಿ ಅಲ್ಲಿನ ಕೊರೆಯುವ ಚಳಿಗೇ ಹೆಚ್ಚು ಸೈನಿಕರು ಸಾಯುತ್ತಾರೆ. ಒಬ್ಬ ಸೈನಿಕನನ್ನು ಸಾಯಿಸಲು ಶಕ್ತಿಶಾಲಿ ಬುಲೆಟ್‌ಗಿಂತ 15 ಸೆಕೆಂಡುಗಳ ಒಂದು ಶೀತ ಮಾರುತದ ಹೊಡೆತ ಸಾಕು. ಸ್ವಿಸ್‌ ಜಾಕೆಟ್‌, ರಷ್ಯಾ ಬೂಟು, ಇಟಲಿಯ ಗ್ಲೌಸು, ಜೆಕೊಸ್ಲೋವಾಕಿಯಾ ಕನ್ನಡಕ ಹಾಕಿ ಮಣಭಾರದ ಬಟ್ಟೆ ತೊಟ್ಟರೂ ಚಳಿಯೆಂಬ ಪೆಡಂಭೂತ ಯಾವುದೋ ಕಿರು ರಂಧ್ರದಲ್ಲಿ ಹೊಕ್ಕಿತೆಂದರೆ ಪಚ್ಡ ! ಇಲ್ಲಿರುವ ಒಬ್ಬ ಸೈನಿಕನಿಗೆ ದಿನಕ್ಕೆ ಸರ್ಕಾರ ಏನಿಲ್ಲವೆಂದರೂ ಐದು ಸಾವಿರ ರೂಪಾಯಿ ಖರ್ಚು ಮಾಡುತ್ತದೆ. ಸಿಯಾಚಿನ್‌ಗೆ ಒಂದು ರೊಟ್ಟಿ ಕಳಿಸುವ ಹೊತ್ತಿಗೆ ಅದರ ಬೆಲೆ ಐನೂರು ಆಗಿರುತ್ತದೆ. ಇಲ್ಲಿನ ಸೈನಿಕರ ಮಲಮೂತ್ರವನ್ನು ಸಂಗ್ರಹಿಸಿ ವಿಮಾನದಲ್ಲಿ ಹೊತ್ತು ತರಲಾಗುತ್ತದೆ. ಇಲ್ಲಿ ಹೋರಾಡುವುದಿರಲಿ, ಜೀವ ಹಿಡಿದುಕೊಂಡು ಕುಳಿತುಕೊಳ್ಳುವುದೇ ದೊಡ್ಡ ಸಾಧನೆ. ಇಡೀ ದೇಶ ನಿಶ್ಚಿಂತೆಯಿಂದ ಮಲಗಬಹುದು. ಆದರೆ ಸಿಯಾಚಿನ್‌ನಲ್ಲಿ ಮಲಗುವಂತಿಲ್ಲ. ಅಲ್ಲಿ ರಾತ್ರಿ ಮುಸುಕಿದರೂ ಸೈನಿಕರು ಕಣ್ಣೊಳಗೆ ಎಚ್ಚರವೆಂಬ ಹಗಲನ್ನು ತುಂಬಿ ಕುಳಿತಿರಬೇಕು. ಶತ್ರು ಹಾಗೂ ಶೀತದ ಭಯ ಇಬ್ಬರೂ ಸುಳಿವು ಕೊಡದೇ ಎರಗುವ ಆಗಂತುಕರು !

ಎಷ್ಟೇ ಹಿಮ ಸುರಿಯಲಿ, ವೈರಿ ಪಡೆ ಅಬ್ಬರಿಸಲಿ, ಸಿಯಾಚಿನ್‌ನಲ್ಲಿರುವ ಭಾರತೀಯ ಸೈನಿಕ ಅಂಥ ಪರಿಸ್ಥಿತಿ ಬಂದರೆ ಮುಖ ಕಿವುಚುವುದಿಲ್ಲ. ಗುಂಡಿಗೆ ಎದೆ ಕೊಡಲು ಮುಂದೆ ನಿಂತಿರುತ್ತಾನೆ. ಆತನಿಗೆ ಇವೆಲ್ಲಕ್ಕಿಂತ ಭಾರತದ ಮಾನ, ಪ್ರತಿಷ್ಠೆ, ಸಾರ್ವಭೌಮತ್ವ ಹಿರಿದಾಗಿ ಕಾಣುತ್ತದೆ. ಹೀಗಾಗಿ ಆತ ಎಂಥ ತ್ಯಾಗಕ್ಕೂ ಸಿದ್ಧನಾಗಿರುತ್ತಾನೆ.

ಅಂದು ಕಾರ್ಗಿಲ್‌ ಯುದ್ಧದಲ್ಲಿ ಕ್ಯಾಪ್ಟನ್‌ ಸೌರಬ್‌ ಕಾಲಿಯಾ ಭಾರತೀಯ ಪಡೆಯ 280 ಸೈನಿಕರನ್ನು ಕಟ್ಟಿಕೊಂಡು ಮುನ್ನಡೆಯುತ್ತಿದ್ದ. ಜಾಟ್‌ ರೆಜಿಮೆಂಟ್‌ ಸೇರಿ ಕೇವಲ ನಾಲ್ಕು ತಿಂಗಳಾಗಿತ್ತು. ಯುದ್ಧಭೂಮಿಯಲ್ಲಿ ಈತನ ಸಾಹಸ, ಕೆಚ್ಚನ್ನು ಕಂಡು ಅಲ್ಲಿಯೇ ಆತನಿಗೆ ಹೆಚ್ಚಿನ ಜವಾಬ್ದಾರಿ ಕೊಡಲಾಗಿತ್ತು. ಈತನ ಜತೆಗೆ ಜವಾನರಾದ ಅರ್ಜುನ್‌ರಾಮ್‌, ಬನ್ವರ್‌ಲಾಲ್‌ ಬಗಾರಿಯಾ, ಭಿಕಾರಾಮ್‌, ಮೂಲಾರಾಮ್‌ ಹಾಗೂ ನರೇಶ್‌ಸಿಂಗ್‌ ಇದ್ದರು. ಪಾಕ್‌ ಸೇನೆಯ ಜಂಘಾ ಬಲ ಉಡುಗಿಸಿದ ಸಾಹಸಿಗಳು. ಸೌರಬ್‌ ಕಾಲಿಯಾ ಏಕಾಂಗಿಯಾಗಿ ಮುನ್ನಡೆಯುತ್ತಿದ್ದರೆ ಎದುರಾಳಿ ಪಾಳಯದಲ್ಲಿ ಆತಂಕ. ಪ್ರತಿಕೂಲ ವಾತಾವರಣವನ್ನು ಸಹ ಲೆಕ್ಕಿಸದೇ ತನ್ನ ಪಡೆಗೆ ಹುಮ್ಮಸ್ಸು ತುಂಬುತ್ತಿದ್ದ ಧೀಮಂತ. ಕೊನೆಯಲ್ಲಿ ಈತನ್ನು ಪಾಕ್‌ ಸೈನಿಕರು ಉಪಾಯಹೂಡಿ ಸೆರೆ ಹಿಡಿದು 22 ದಿನ ಹಿಂಸೆಕೊಟ್ಟು ಆನಂತರ ಅವನ ಗುರುತು ಸಹ ಸಿಗದಂತೆ ದೇಹವನ್ನು ಚೂರುಚೂರುಮಾಡಿ ಬಿಸಾಕಿದರು. ಆತನ ಕಣ್ಣು, ಕಿವಿಗೆ ಸಲಾಕೆಯಿಂದ ಚುಚ್ಚಲಾಗಿತ್ತು. ಹುಬ್ಬು ಮತ್ತು ಮೂಗು ನೋಡಿ ಆತನ ಸಹೋದರ ಕಾಲಿಯಾನನ್ನು ಪತ್ತೆ ಹಚ್ಚಿದರು. ಕಾಲಿಯಾ ಮೇಲೆ ಆ ಪರಿ ದ್ವೇಷ ಬರಬೇಕಾದರೆ ಆತ ವೈರಿ ಪಡೆಯನ್ನು ಅದೆಷ್ಟು ಸತಾಯಿಸಿರಬಹುದು ನೋಡಿ. ಪಾಕ್‌ ಸೇನೆ ಈ ರೀತಿ ನೂರಾರು ಯೋಧರನ್ನು ನಿರ್ದಯವಾಗಿ ಸಾಯಿಸಿತು. ಆದರೂ ಅವರಾರೂ ಧೃತಿಗೆಡಲಿಲ್ಲ. ವೈರಿ ಸೈನಿಕರನ್ನು ಸದೆಬಡಿದರು. ದೇಶಕ್ಕೆ ಭೂಷಣವಾಗುವಂಥ ಒಂದು ವಿಜಯವನ್ನು ತಂದು ಕೊಟ್ಟರು.

ಈ ಸೈನಿಕರು ಯುದ್ಧಕಣದಿಂದ ಗೆಲುವಿನ ಕಳೆಯಿಂದ ವಾಪಸು ಬರುತ್ತಿದ್ದರೆ ದೇಶಕ್ಕೆ ದೇಶವೇ ಎದ್ದುನಿಂತು ಸೆಲ್ಯೂಟ್‌ ಹೊಡೆದಿತ್ತು. ಕಾರ್ಗಿಲ್‌ ಸಂತ್ರಸ್ತರ ಹೆಸರು ಹೇಳಿ ಯಾರೇ ಬರಲಿ ಅವರ ಜೋಳಿಗೆತುಂಬಿ ಎಲ್ಲರೂ ದೇಶಪ್ರೇಮ ಮೆರೆದರು.

ಇಂಥ ವೀರ ಜವಾನರು ನಮ್ಮದೆನ್ನುವ ಹಣ, ಆಸ್ತಿ, ನೆಮ್ಮದಿ ಏನನ್ನೂ ಬಯಸುವುದಿಲ್ಲ. ಅವರು ಚೆಲ್ಲಿದ ರಕ್ತಕ್ಕೆ ಕಂಬನಿಯನ್ನೂ ಬಯಸುವುದಿಲ್ಲ. ಅವರು ಬಯಸುವುದು ಒಂದು ಅಭಿಮಾನ ತುಂಬಿದ ಮೆಚ್ಚುಗೆ ಮಾತು. ಅದನ್ನು ವ್ಯಕ್ತಪಡಿಸದಷ್ಟು ಕೃತಘ್ಞರಾಗಬಾರದು.

ಈ 26ಕ್ಕೆ ನಮ್ಮ ವೀರಯೋಧರ ನೆನಪಿಗೊಂದು ಸೆಲ್ಯೂಟ್‌ ಹಾಕೋಣ. ಜತೆಯಲ್ಲಿ ನೀವಿದ್ದೀರಿ, ಅಲ್ಲವಾ?

(ಸ್ನೇಹಸೇತು : ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four years ago, over 526 Indian soldiers died fighting Pakistani soldiers on the icy peaks of Kargil in Jammu and Kashmir. The battle was called Operation Vijay. A tribute to Kargil Soldiers by Vishveshwar Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more