• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸತು ಕಂಡಾಗ ಬೆರಗಾಗದಿದ್ದರೆ ನಮ್ಮ ಸಂವೇದನೆಗೆ ತುಕ್ಕು ಹಿಡಿದಿದೆಯೆಂದೇ ಅರ್ಥ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಈ ತಂತ್ರಜ್ಞಾನ ಯುಗದಲ್ಲಿ ನಮಗನಿಸಿದ್ದೆಲ್ಲವನ್ನೂ ಪಡೆಬಹುದಾಗಿದೆ ಸಂವೇದನೆ ಹೊರತಾಗಿ. ನಾವು ಕಳಕೊಂಡಿರುವುದೇ ಅದನ್ನು. ನಮ್ಮ ಮುಂದೆ ಏನೆಲ್ಲ ಬದಲಾವಣೆಗಳಾಗುತ್ತಿವೆ. ಎಷ್ಟೆಲ್ಲಾ ಆವಿಷ್ಕಾರಗಳಾಗುತ್ತಿವೆ. ಕಳೆದ ಹತ್ತು ವರ್ಷದ ಹಿಂದೆ ಇದ್ದ ಯಾವ ವಸ್ತುಗಳೂ ನಮ್ಮ ಮುಂದಿಲ್ಲ. ಗುಂಡುಸೂಜಿಯನ್ನೇ ತೆಗೆದುಕೊಳ್ಳಿ, ಎಷ್ಟೊಂದು ವಿಧಗಳು, ಎಷ್ಟೊಂದು ಬಣ್ಣಗಳು. ಬಾಲ್‌ ಪೆನ್ನುಗಳಲ್ಲಿನ ವೈವಿಧ್ಯಕ್ಕೆ ಎಣೆಯಿಲ್ಲ. ಇನ್ನು ಟಿವಿ, ಮೊಬೈಲು, ಫ್ರಿಜ್ಜು, ಸೌಂಡ್‌ ಸಿಸ್ಟಮ್‌ಗಳ ಮುಂದೆ ಕುಳಿತರೆ ಅವುಗಳ ವೈವಿಧ್ಯವೇ ದಾರಿ ತಪ್ಪಿಸುತ್ತವೆ. ಈಗ ಇವನ್ನೆಲ್ಲ ಖರೀದಿಸುವುದು ಸಮಸ್ಯೆಯಲ್ಲ. ಯಾವುದನ್ನು ಖರೀದಿಸಬೇಕೆಂಬುದೇ ಸಮಸ್ಯೆ.

ಡಿಸ್ನಿಲ್ಯಾಂಡ್‌ನಲ್ಲಿ ಪ್ರತಿ ಆರು ನಿಮಿಷಕ್ಕೊಂದು ಹೊಸ ವಸ್ತು ಹೊರಬರುತ್ತದೆ. ಒಂದರಂತೆ ಮತ್ತೊಂದಿಲ್ಲ. ಎಲ್ಲವುಗಳ ಬೆರಗು, ಬೆಡಗು ಬೇರೆ ಬೇರೆ. ನೈಕಿ ಕಂಪನಿಯು ಪ್ರತಿ ಮೂರು ತಾಸಿಗೆ ಹೊಸ ವಿನ್ಯಾಸದ ಬೂಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ನೋಕಿಯಾ ಕಂಪನಿ ಪ್ರತಿದಿನ ಹೊಸ ಹ್ಯಾಂಡ್‌ಸೆಟ್‌ ತಯಾರಿಸುತ್ತದೆ. ದಿನದಿಂದ ದಿನಕ್ಕೆ ಮೊಬೈಲ್‌ ಗಾತ್ರ, ಉಪಯೋಗ ಬದಲಾಗುತ್ತಿದೆ. ಮೊದಲ ದಿನ ಬಳಸಿದ ಮೊಬೈಲಿಗೂ ಇಂದಿನದಕ್ಕೂ ಹೋಲಿಕೆ ಸಾಧ್ಯವಾಗದಷ್ಟು ಮಾರ್ಪಾಟು. ಅಂದು ನೋಡಿದ ಮೊಬೈಲು ಡಬ್ಬಾ. ಹೆಂಡತಿ ಹಾಗೂ ಮೊಬೈಲ್‌ಗೆ ಸ್ವಲ್ಪ ಕಾದರೆ ಹೊಸ ಮಾಡೆಲ್‌ ಸಿಗುತ್ತವೆ ಎಂಬುದು ವಕ್ರತುಂಡೋಕ್ತಿಯಾದರೂ ವಾಸ್ತವ.

ಅಂದರೆ ಯಾವ ಪರಿ ನಮ್ಮ ಸುತ್ತಲಿನ ಪರಿಸರ ಬದಲಾಗುತ್ತಿದೆಯೆಂದರೆ ಕಲ್ಪಿಸಿಕೊಳ್ಳಲು ಅಸಾಧ್ಯ. ಸದ್ಯದಲ್ಲಿಯೇ ಹೊಸ ಮೊಬೈಲು ಬರಲಿದೆ. ಅದು ನಮ್ಮ ಯೋಚನೆಯನ್ನು ಗ್ರಹಿಸಿ ಅದಕ್ಕೆ ತಕ್ಕ ಹಾಗೆ ವರ್ತಿಸುತ್ತದೆ. ಉದಾಹರಣೆಗೆ ತಟ್ಟನೆ ಟಿವಿಯಲ್ಲಿ ರಾಬ್ಡಿದೇವಿ ಸಂದರ್ಶನ ನೋಡಬೇಕೆನಿಸಿತೆನ್ನಿ. ಆದರೆ ಕಚೇರಿಯಲ್ಲಿರುವ ನಿಮಗೆ ಅದನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣಕ್ಕೆಜೇಬಿನಲ್ಲಿರುವ ಮೊಬೈಲು ನಿಮ್ಮ ಯೋಚನೆಯನ್ನು ಸೆನ್ಸರ್‌ತಂತ್ರಜ್ಞಾನದಿಂದ ಗ್ರಹಿಸಿ ಮನೆಯಲ್ಲಿರುವ ರಿಮೋಟ್‌ಗೆ ಸಂದೇಶ ರವಾನಿಸುತ್ತದೆ. ರಾಬ್ಡಿ ಸಂದರ್ಶನ ರೆಕಾರ್ಡ್‌ ಆಗಿರುತ್ತದೆ. ಮನೆಗೆ ಹೋಗಿ ವೀಕ್ಷಿಸಬಹುದು. ಮುಂಬೈಯ ಧೀರೂಬಾಯಿ ಅಂಬಾನಿ ನಗರದಲ್ಲಿರುವ ರಿಲಯನ್ಸ್‌ ಇನ್ಫೋಕಾಮ್‌ನಲ್ಲಿ ಇಂಥ ಮೊಬೈಲನ್ನು ಸಿದ್ಧಪಡಿಸಲಾಗುತ್ತಿದೆ. ಮೊಬೈಲು ನಮ್ಮ ಜನಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆಯೆಂದರೆ, ಮನುಷ್ಯನ ದೇಹರಚನೆ ಚಿತ್ರ ಬಿಡಿಸಿ ಎಂದರೆ ಜತೆಯಲ್ಲಿ ಮೊಬೈಲು ಚಿತ್ರವನ್ನೂ ಬಿಡಿಸಬೇಕಾದೀತು.

ದಿನಕ್ಕೊಂದು ಹೊಸ ವಿನ್ಯಾಸದ ಮೊಬೈಲು, ಮಿಕ್ಸಿ, ಫ್ರಿಜ್ಜು, ಸ್ಕೂಟರ್‌, ಕಾರು, ಪೆನ್ನು, ರೀಫಿಲ್‌ ಬಂದರೂ ನಮಗೆ ಅಬ್ಬಾ ಅನಿಸುವುದಿಲ್ಲ. ಅವನ್ನೆಲ್ಲ ಕಂಡುಹಿಡಿದವರ್ಯಾರು ಎಂದು ತಿಳಿಯುವ ಸಣ್ಣ ಕುತೂಹಲವೂ ಇಲ್ಲ. ತಂತ್ರಜ್ಞಾನದ ವಿಸ್ಮಯದಿಂದ ನಾವು ಚಕಿತರಾಗುವುದನ್ನು ನಿಲ್ಲಿಸಿ ಎಷ್ಟೋ ವರ್ಷಗಳಾದವು. ಅದೆಲ್ಲ ಹೋಗಲಿ ನಮಗೆ ಮೊಬೈಲು, ಮಿಕ್ಸಿ ಕಂಡುಹಿಡಿದವರು ಯಾರೆಂಬುದೂ ಗೊತ್ತಿಲ್ಲ. ನಮಗೆ ಜಲಜನಕ, ಆಮ್ಲಜನಕ, ಕ್ಲೋರಿನು, ಗಂಧಕ, ಪುಟದೆಣ್ಣೆ ಕಂಡು ಹಿಡಿದವರು ಯಾರೆಂಬುದು ಗೊತ್ತು. ಗ್ರಾಮೋಫೋನು, ಸ್ಟೆಥಸ್ಕೋಪು, ಎಲೆಕ್ಟ್ರಿಕ್‌ಬಲ್ಬು, ಎಲೆಕ್ಟ್ರೋಡು ಕಂಡುಹಿಡಿದವರು ಗೊತ್ತು. ಅಣು, ಪರಮಾಣು, ರಾಕೆಟ್‌, ವಿಮಾನ ಹಾರಿಸಿದವರೆಲ್ಲರ ಪರಿಚಯವಿದೆ.

ಮಾರ್ಕೋನಿ ರೇಡಿಯಾ ಕಂಡುಹಿಡಿದಾಗ ದೊಡ್ಡ ಕ್ರಾಂತಿಯೇ ಆಗಿತ್ತು. ಆತನನ್ನು ಎಲ್ಲೆಡೆ ಸತ್ಕರಿಸಲಾಯಿತು. ಆತನಿಗೆ ‘ ಸರ್‌’ಗೌರವ ನೀಡಲಾಯಿತು. ಥಾಮಸ್‌ ಅಲ್ವಾ ಎಡಿಸನ್‌ ವಿದ್ಯುತ್‌ಬಲ್ಬನ್ನು ಆವಿಷ್ಕಾರ ಮಾಡಿದಾಗ ‘ಇದೊಂದು ಅದ್ಬುತ ಶೋಧ’ ಎಂದೇ ಬಣ್ಣಿಸಲಾಯಿತು. ನಾಗರಿಕತೆಯ ಬೆಳವಣಿಗೆಯಲ್ಲಿ ಬಲ್ಬ್‌ ಆವಿಷ್ಕಾರಕ್ಕೆ ಸಿಕ್ಕಷ್ಟು ಪ್ರಚಾರ ಮತ್ತೊಂದಕ್ಕೆ ಸಿಕ್ಕಿಲ್ಲ. ಬಿಲ್‌ ಬ್ರೆಯ್‌ಸಿನ್‌ ಎಂಬ ಸಮಾಜ ವಿಜ್ಞಾನಿಯ ಪ್ರಕಾರ ವಿದ್ಯುತ್‌ ಬಲ್ಬನ್ನು ಕಂಡು ಹಿಡಿಯದಿದ್ದರೆ ಈ ಜಗತ್ತು ಈ ಸ್ಥಿತಿಗೆ ಬರಲು ಇನ್ನೂ ಸಾವಿರ ವರ್ಷಗಳು ಬೇಕಾಗುತ್ತಿತ್ತು. ಇಂದಿಗೂ ಬಲ್ಬಿನ ಬುರುಡೆ ನೋಡಿದರೆ ಬೆಳಕಿಗಿಂತ ಎಡಿಸನ್‌ ಕಾಣುತ್ತಾನೆ. ಆದರೆ ಅಂಥ ವಿಸ್ಮಯ ಟಿವಿಯನ್ನು ಕಂಡುಹಿಡಿದಾಗ ಇರಲಿಲ್ಲ. ಟೇಪ್‌ರೆಕಾರ್ಡರ್‌, ಕಂಪ್ಯೂಟರ್‌, ರೊಬೋಟ್‌ ಬಂದಾಗ ಇರಲಿಲ್ಲ. ಈಗ ದೂರಸಂಪರ್ಕದಲ್ಲಿ ಕ್ರಾಂತಿಯನ್ನೆಬ್ಬಿಸಿದ ಮೊಬೈಲು ಈ ಪರಿ ವ್ಯಾಪಿಸಿಕೊಂಡಾಗಲೂ ನಮಗೆ ಅಚ್ಚರಿಯಾಗುತ್ತಿಲ್ಲ.

ಮೊದಲ ಬಾರಿಗೆ ಕಟ್ಟಿದ ವಾಚಿನ ಡೈಲ್‌ ಬಣ್ಣ, ಬೆಲ್ಡಿನ ಗಿಲೀಟು, ಖರೀದಿಸಿದ ಅಂಗಡಿ, ತಾರೀಖು ನಮಗೆ ಗೊತ್ತು. ಆದರೆ ಈ ಸೂಕ್ಷ್ಮ ಒಂದೆರಡು ವರ್ಷಗಳ ಹಿಂದೆ ಖರೀದಿಸಿದ ಟೀವಿ, ಮೊಬೈಲು ವಿಷಯದಲ್ಲಿ ಕಾಣೆಯಾಗಿ ಹೋಗಿದೆ. ಪ್ರತಿ ಉಪಕರಣ ಕಂಡಾಗ ಅದನ್ನು ಶೋಧಿಸಿದ ವ್ಯಕ್ತಿಯ ಬಗ್ಗೆ ತಿಳಿಯುವುದು ಇರಲಿ, ಕನಿಷ್ಠ ಆತನ ಶ್ರಮ, ಶ್ರದ್ಧೆಯನ್ನಾದರೂ ಕಂಡು ಒಂದು ಹಿಡಿ ಬೆರಗು ಮೂಡಿಸಿಕೊಳ್ಳದಿದ್ದರೆ ನಮ್ಮ ಸಂವೇದನೆಗೆ ತುಕ್ಕು ಹಿಡಿದಿದೆ ಎಂದೇ ಅರ್ಥ.

ಪ್ರತಿ ಸಂಶೋಧನೆಯ ಹಿಂದೆ ಒಂದು ಮನಸ್ಸು ಕೆಲಸ ಮಾಡಿರುತ್ತದೆ ಆ ಮನಸ್ಸಿನ ಹಿಂದೆ ಬೆಟ್ಟದಷ್ಟು ತಪಸ್ಸು ಇರುತ್ತದೆ. ಆ ತಪಸ್ಸಿನಲ್ಲೊಂದಷ್ಟು ಹಠ, ಸಂಯಮ, ಛಲವಿರುತ್ತದೆ. ಅದಕ್ಕಿಂತ ಮುಖ್ಯವಾಗಿ ಒಂದು ಉದ್ದೇಶವಿರುತ್ತದೆ ಹಾಗೂ ಅದು ಸದುದ್ದೇಶವಾಗಿರುತ್ತದೆ. ಇಷ್ಟನ್ನೂ ನಾವು ಗ್ರಹಿಸದಿದ್ದರೆ ನಮಗೆ ಅವು ಅರ್ಥವಾಗುವುದಿಲ್ಲ. ಅವುಗಳ ಮಹತ್ವ ತಿಳಿಯುವುದಿಲ್ಲ. ಅಷ್ಟಕ್ಕೂ ನಮಗೆ ಅಂಥ ಮನಸ್ಸನ್ನು ಗುರುತಿಸುವ ಚಿಟಿಕೆ ಕುತೂಹಲವಿಲ್ಲದಿದ್ದರೆ, ನಾವು ಯಾವುದಕ್ಕೂ ಬೆರಗುಗೊಳ್ಳದ ಜಡತ್ವವನ್ನು ಬೆಳೆಸಿಕೊಳ್ಳುತ್ತೇವೆ.

ಕೆಲ ತಿಂಗಳುಗಳ ಹಿಂದೆ ಸ್ನೇಹಿತರೊಬ್ಬರು ಆಪರೇಶನ್‌ ಮಾಡಿಸಿಕೊಂಡು ಆಸ್ಪತ್ರೆ ನಿವಾಸಿಯಾಗಿದ್ದರು. ಇಡೀ ಮೈಗೆ ನಲವತ್ತೇಳು ಕಡೆ ಹೊಲಿಗೆಗಳನ್ನು ಹಾಕಲಾಗಿತ್ತು. ಹರಿದ ಗೋಣಿ ಚೀಲಕ್ಕೆ ಹೊಲಿಗೆ ಹಾಕಿದಂತೆ ಕಾಣುತ್ತಿದ್ದರು. ‘ಅದ್ಯಾವ ಪುಣ್ಯಾತ್ಮ ಈ ಸೂಚರ್‌(ಹೊಲಿಗೆ) ಕಂಡುಹಿಡಿದನೋ ಏನೋ ಬದುಕಿದೆ. ಇಲ್ಲದಿದ್ದರೆ ನನ್ನ ಕತೆ ಮುಗಿದಿರುತ್ತಿತ್ತು. ಕೆಲ ದಿನಗಳ ನಂತರ ಹೊಲಿಗೆ ಹಾಕಿದ್ದು ಸಹ ಕಾಣದಂತೆ ಚರ್ಮ ಮೊದಲಿನಂತೆ ಕೂಡಿಕೊಂಡಿತು. ಈ ಸೂಚರ್‌ನ್ನು ಆವಿಷ್ಕಾರ ಮಾಡಿದವನಿಗೆ ನನ್ನ ನಮೋ ನಮೋ ಎಂದರು. ಇದೇ ಸ್ನೇಹಿತರು ಕೆಲ ದಿನಗಳ ಹಿಂದೆ ಕಚೇರಿಗೆ ಬಂದಾಗ ‘ಸಾರ್‌ ಈ ಪುಸ್ತಕ ಓದಿ. ನನ್ನ ಜೀವ ಉಳಿಸಿದವನ ಕತೆಯಿದು. ಆತ ಸೂಚರ್‌ ಕಂಡು ಹಿಡಿಯದಿದ್ದರೆ ನಾನು ಜೀವಂತ ಉಳಿಯುತ್ತಿರಲಿಲ್ಲ’ ಎಂದು ಪುಸ್ತಕ ಕೊಟ್ಟು ಹೋದರು.

Ambroise Pareಹದಿನಾರನೆ ಶತಮಾನದ ಫ್ರೆಂಚ್‌ ಮಿಲಿಟರಿ ಸರ್ಜನ್‌ ಡಾ. ಆ್ಯಂಬ್ರಾಯಿಸ್‌ ಪೆರೆ ಕತೆ. ಸೂಚರ್‌ ಕಂಡುಹಿಡಿದ ಪುಣ್ಯಾತ್ಮ. ಡಾ.ಪೆರೆ ಸೂಚರ್‌ನ್ನು ಶೋಧಿಸುವುದಕ್ಕಿಂತ ಮೊದಲು, ಸೇನೆಯಲ್ಲಿ ಗಾಯಗೊಂಡ ಸೈನಿಕರು ರಕ್ತಸ್ರಾವವಾಗಿ ಸಾಯುತ್ತಿದ್ದರು. ಆಳ ಗಾಯವಾದರೆ ವಾಸಿ ಮಾಡುವುದು ಕಷ್ಟವಾಗಿತ್ತು. ಕೆಲವೊಮ್ಮೆ ಗಾಯದ ಮೇಲೆ ಕಾದ ಕಬ್ಬಿಣದಿಂದ ಬರೆ ಎಳೆಯುವಂಥ ಬರ್ಬರ ಪದ್ಧತಿ ಕೂಡ ಚಾಲ್ತಿಯಲ್ಲಿತ್ತು. ಮೊದಲ ಬಾರಿಗೆ ತಾನು ಇಂಥ ಹೊಸ ವಿಧಾನ ಕಂಡುಹಿಡಿದಿದ್ದೇನೆಂದು ಡಾ.ಪೆರೆ ಹೇಳಿದಾಗ ಚಿಕಿತ್ಸೆಗೆ ಯಾರೂ ಮುಂದಾಗಲಿಲ್ಲ. ಆತನಿಗೆ ತನ್ನ ಆವಿಷ್ಕಾರದ ಚಮತ್ಕಾರ ಗೊತ್ತಿತ್ತು. ಕೊನೆಗೆ ಬೇರೆ ದಾರಿ ಕಾಣದೇ ಡಾ.ಪೆರೆ ತಮ್ಮ ತೊಡೆಯನ್ನು ಬ್ಲೇಡಿನಿಂದ ಸೀಳಿಕೊಂಡು ತಾವು ಶೋಧಿಸಿದ ಸೂಚರ್‌ನಿಂದ ಹೊಲಿದುಕೊಂಡರು. ಆಗ ಅನಸ್ತೇಶಿಯಾ ಇರಲಿಲ್ಲ. ರಕ್ತ ಸುರಿದು ಹೋಗುತ್ತಿದ್ದರೆ, ಅತೀವ ವೇದನೆಯನ್ನು ನುಂಗಿಕೊಂಡು ನೋಡುತ್ತಿದ್ದ ನೂರಾರು ವೈದ್ಯರು ಮೂಕವಿಸ್ಮಿತರಾಗಿ ನೋಡುತ್ತಿದ್ದರೆ, ಆ ನೋವು, ಸಂಕಟದ ನಡುವೆಯೂ ಡಾ. ಪೆರೆ ಒಳಗೊಳಗೇ ಸಂತಸಪಡುತ್ತಿದ್ದರು. ತಾನು ಕಂಡುಹಿಡಿದ ಸೂಚರ್‌ ವೈದ್ಯಕೀಯ ರಂಗದಲ್ಲಿ ಕ್ರಾಂತಿಕಾರಿ ಪರಿಣಾಮವನ್ನುಂಟು ಮಾಡಬಲ್ಲದೆಂಬ ಹೆಮ್ಮೆ ಅವರನ್ನು ತೋಯಿಸಿತ್ತು. ಡಾ. ಪೆರೆ ಆವಿಷ್ಕಾರ ಹೇಗಿತ್ತೆಂದರೆ ತೊಡೆ ಚರ್ಮ ಕೂಡಿಕೊಂಡಿತ್ತು. ಹೊಲಿಗೆ ಚರ್ಮದೊಳಗೆ ಕರಗಿಹೋಗಿತ್ತು. ಸೂಚರ್‌ ಶೋಧನೆಯ ಹಿಂದಿನ ಕಣ್ಣೀರ ಕತೆ ಅರ್ಥವಾಗದಿದ್ದರ ಸೂಚರ್‌ ಮಹತ್ವವೇ ಅರ್ಥವಾಗುವುದಿಲ್ಲ.‘ಅದೇನು ಮಹಾ? ಸೂಚರ್‌ ಹಾಕಿದರೆ ಸರಿ ಹೋಗುತ್ತದೆ’ ಎಂದು ನಾವು ಸಲೀಸಾಗಿ ಹೇಳುತ್ತೇವೆ. ಈ ಸಲೀಸು ಮಾತಿನ ಹಿಂದೆ ಅವೆಷ್ಟು ಕಣ್ಣೀರು ಹರಿದಿರಬಹುದು, ಅವೆಷ್ಟು ಮಂದಿ ಸತ್ತಿರಬಹುದೆಂಬುದನ್ನು ಊಹಿಸಿ.

ಅನಸ್ತೇಶಿಯಾ ಆವಿಷ್ಕಾರದ ಹಿಂದಿನ ಕತೆಯೂ ಹೀಗೆ. ಅನಸ್ತೇಶಿಯಾ ಶೋಧಿಸುವುದಕ್ಕಿಂತ ಮೊದಲು ಶಸ್ತ್ರಚಿಕಿತ್ಸೆ ಪೈಶಾಚಿಕವಾಗಿತ್ತು. ಆಪರೇಶನ್‌ ಎಂದು ವೈದ್ಯರು ಹೇಳಿದರೆ ರೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ. ಶಸ್ತ್ರಚಿಕಿತ್ಸೆಯ ನೋವಿಗಿಂತ ಆತ್ಮಹತ್ಯೆಯೇ ಲೇಸೆಂದು ಅವೆಷ್ಟು ಸಾವಿರ ಮಂದಿ ಪ್ರಾಣ ಕಳೆದುಕೊಂಡರೋ ಏನೋ? ಶಸ್ತ್ರಚಿಕಿತ್ಸೆಯೆಂದರೆ ರೋಗಿಯ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಏಳೆಂಟು ಜನ ಗಟ್ಟಿಯಾಗಿ ಹಿಡಿದು ಕೊಳ್ಳಬೇಕಾಗುತ್ತಿತ್ತು. ಹಲ್ಲು ಕೀಳುವ ಪ್ರಸಂಗ ಬಂದಾಗಲೂ ಹೀಗೆ. ಇಕ್ಕಳದಂಥ ಉಪಕರಣವನ್ನು ವೈದ್ಯ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು ಹಲ್ಲು ಕೀಳಲು ಹರಸಾಹಸ ಮಾಡುತ್ತಿದ್ದರೆ ರೋಗಿಯ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಇಂಥ ಸಂದರ್ಭದಲ್ಲಿ ರೋಗಿಯೇ ವೈದ್ಯರಿಗೆ ನಾಲ್ಕು ಬಾರಿಸಿದ್ದುಂಟು. ಏಕಕಾಲಕ್ಕೆ ನರಕಯಾತನೆಯ ಸಾಕ್ಷಾತ್‌ದರ್ಶನ ರೋಗಿ ಹಾಗೂ ವೈದ್ಯನಿಗೆ. ಸಣ್ಣ ಪುಟ್ಟ ಶಸ್ತ್ರಚಿಕಿತ್ಸೆಗೆ ಸತ್ತವರು ಸಾವಿರಾರು ಮಂದಿ. ಹರಿತವಾದ ಕತ್ತಿ, ಚಾಕು ಹಿಡಿದು ವೈದ್ಯರು ರೋಗಿಯ ಚರ್ಮ ಸೀಳುತ್ತಿದ್ದರೆ ರೋಗಿ ಮೂರ್ಛೆ ಹೋಗುತ್ತಿದ್ದ.

William Mortonವಿಲಿಯಂ ಮೊರ್ಟನ್‌ ಎಂಬ ವೈದ್ಯ ಅನಸ್ತೇಶಿಯಾ ಕಂಡು ಹಿಡಿಯುವ ತನಕ ಶಸ್ತ್ರಚಿಕಿತ್ಸೆ ಹೀಗೆಯೇ ಇತ್ತು. ಯಾವಾಗ ಅನಸ್ತೇಶಿಯಾ ಬಂತೋ ಶಸ್ತ್ರಚಿಕಿತ್ಸೆ ನೋವು ರಹಿತ ಕ್ರಿಯೆಯಾಯಿತು. ಅಪರೇಶನ್‌ಥಿಯೇಟರ್‌ಗೆ ರೋಗಿ ನಗುನಗುತ್ತಾ ಹೋಗಿ ಸುರಕ್ಷಿತರಾಗಿ ಮರಳುವಂತಾಯಿತು. ಮೊದಲ ಬಾರಿಗೆ ಮೊರ್ಟನ್‌ ಅನಸ್ತೇಶಿಯಾ ಕಂಡುಹಿಡಿದಾಗ ಪ್ರಯೋಗಕ್ಕೆಒಳಪಡಲು ಯಾರೂ ಮುಂದೆ ಬರಲಿಲ್ಲ. ಮೊರ್ಟನ್‌ ಮಾತಿನಲ್ಲಿ ನಂಬಿಕೆಯಿರಲಿಲ್ಲ. ಸಹೋದ್ಯೋಗಿಗಳನ್ನು ಕರೆದರೂ ಬರಲಿಲ್ಲ. ಮರಣಶಯ್ಯೆಯಲ್ಲಿರುವ ರೋಗಿಯನ್ನು ಮನವೊಲಿಸಿದರೂ ಆತ ಒಪ್ಪಲಿಲ್ಲ. ಇದರಿಂದ ವೊರ್ಟನ್‌ ವ್ಯಾಕುಲಗೊಂಡಿದ್ದ. ತನ್ನ ಆವಿಷ್ಕಾರವನ್ನು ಜಗತ್ತಿಗೆ ತಿಳಿಸೋಣವೆಂದರೆ ಅದು ಸಾಧ್ಯವಾಗದ ಬಗ್ಗೆ ದುಃಖಿತನಾಗಿದ್ದ. ತಂದೆಯ ಚಡಪಡಿಕೆ ಕಂಡು ಮೊರ್ಟನ್‌ನ ಮಗನೂ ಖಿನ್ನನಾಗಿದ್ದ.

ಕೊನೆಗೊಂದು ದಿನ ತಂದೆಗೆ ಹೇಳಿದ -‘ನೀನು ಶೋಧಿಸಿದ್ದನ್ನು ನನ್ನ ಮೇಲೆಯೇ ಪ್ರಯೋಗಿಸು. ನನ್ನ 6 ಬೆರಗಳುಗಳ ಪೈಕಿ ಒಂದನ್ನು ಕತ್ತರಿಸು’. ಮೊರ್ಟನ್‌ ಒಲ್ಲದ ಮನಸ್ಸಿನಿಂದ ಒಪ್ಪಿದ. ಅನಸ್ತೇಶಿಯಾ ಬಳಸಿ ಶಸ್ತ್ರಚಿಕಿತ್ಸೆಗೆ ರಂಗ ಸಿದ್ಧವಾಯಿತು. ಮೊರ್ಟನ್‌ನೂರಾರು ವೈದ್ಯರನ್ನು ಆಹ್ವಾನಿಸಿದ. ಅವರ ಮುಂದೆ ಶಸ್ತ್ರಚಿಕಿತ್ಸೆ ಶುರುಮಾಡಿದ. ಅನಸ್ತೇಶಿಯಾ ಪ್ರಯೋಗಿಸಿ ಆರನೆ ಬೆರಳನ್ನು ಕತ್ತರಿಸಿದಾಗ ಮಗ ನಗುನಗುತ್ತಲೇ ಇದ್ದ. ಆದರೆ ಅಲ್ಲೊಂದು ಯಡವಟ್ಟಾಗಿತ್ತು. ಅನಸ್ತೇಶಿಯಾಕ್ಕೆ ಬಳಸುವ ಎಲ್ಲ ದ್ರಾವಣಗಳ ಪೈಕಿ ಒಂದನ್ನು ಸೇರಿಸಲು ಮೊರ್ಟನ್‌ ಮರೆತಿದ್ದ. ಹೀಗಾಗಿ ಅನಸ್ತೇಶಿಯಾ ಪರಿಣಾಮ ಬೀರಿರಲಿಲ್ಲ. ಬೆರಳನ್ನು ಕತ್ತರಿಸಿದಾಗ ನೋವಿನಿಂದ ಚೀರಿದರೆ ತಂದೆಯ ಆವಿಷ್ಕಾರ ವ್ಯರ್ಥವಾಗುವುದೆಂದು ಮರಣಾಂತಿಕ ನೋವನ್ನು ನುಂಗಿ ಮಗ ನಗುನಗುತ್ತಿದ್ದ. ಶಸ್ತ್ರಚಿಕಿತ್ಸೆ ಮುಗಿದ ಬಳಿಕ ತಾನೆಸಗಿದ ಪ್ರಮಾದ ತಿಳಿಯಿತು. ಶಸ್ತ್ರಚಿಕಿತ್ಸೆ ವೀಕ್ಷಿಸಿದ ವೈದ್ಯರೆಲ್ಲ ಮೊರ್ಟನ್‌ನನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ತನಗಾಗಿನೋವುಂಡ ಮಗನನ್ನು ಬಿಗಿದಪ್ಪಿದ. ಇದು ವೈದಕೀಯ ರಂಗದ ಕ್ರಾಂತಿ ಎಂದು ಅವರೆಲ್ಲ ಪ್ರಶಂಸಿಸುತ್ತಿದ್ದರೆ, ಮಗನ ನೋವು ಕರುಳು ಹಿಂಡುತ್ತಿತ್ತು. ಇಂದು ಅನಸ್ತೇಶಿಯಾ ಇಲ್ಲದ ಆಸ್ಪತ್ರೆಗಳಿಲ್ಲ. ಅದಿಲ್ಲದೇ ಆಪರೇಷನ್‌ ಇಲ್ಲ ಆದರೆ ಮೊರ್ಟನ್‌ ಮಗನ ನೋವಿನ ‘ರುಚಿ’ ಅರಿಯದವರಿಗೆ ಅನಸ್ತೀಶಿಯಾದ ಮಹತ್ವ ಗೊತ್ತಾಗುವುದಾದರೂ ಹೇಗೆ?

ಮನಸ್ಸು ಶುಷ್ಕವಾಗುವ ಮೊದಲು ಸಂವೇದನೆ ಚಿಗುರುತ್ತಿರಲಿ ಸದಾ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more