ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಸದಾ ತಪ್ಪು ಮಾಡೊಲ್ಲ, ಆದ್ರೆ ನಮ್ಮಿಂದ ಆಗಾಗ ತಪ್ಪುಗಳಾಗುತ್ತವೆ

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಇದು ಸುದ್ದಿಮನ್ಯಾಗಿನ ಮಾತು, ಸುದ್ದಿಮನಿ ಕತಿ ಅಂತ ಅನಿಸಬಹುದು. ಆದರೂ ಕೇಳಿಸಿಕೊಳ್ಳಿ.

ಮೊನ್ನೆ ‘ಔಟ್‌ಲುಕ್‌’ ಪತ್ರಿಕೆಗೆ ಹತ್ತು ವರ್ಷ ತುಂಬಿತು. ಆ ಸಂದರ್ಭದಲ್ಲಿ ಪತ್ರಿಕೆ ಸಂಪಾದಕ ವಿನೋದ್‌ ಮೆಹ್ತಾ ಭಾಳ ಸೊಗಸಾದ ಭಾಷಣ ಮಾಡಿದರು. ಅವರ ಮಾತುಗಳನ್ನು ಕೇಳುವ ಮುನ್ನ ಅವರ ಕುರಿತೇ ನಾಲ್ಕು ಮಾತುಗಳನ್ನು ನಿಮ್ಮ ‘ಕಿವಿ’ಗೆ ಹಾಕಬೇಕು.

ವಿನೋದ್‌ ನಾನು ಅಗ್ದೀ ಇಷ್ಟಪಡುವ ಮೆಹ್ತಾ. ಭಾರತೀಯ ಪತ್ರಿಕೋದ್ಯಮಕ್ಕೆ ಚೆಂದ, ಚೆಲುವು, ಛಬುಕು, ಚಲನಶೀಲತೆ ತಂದುಕೊಟ್ಟ ಸಂಪಾದಕ. ಯಾವುದೇ ಪೂರ್ವಗ್ರಹ, ಸಿದ್ಧಾಂತ, ಸ್ಕೀಮುಗಳಿಲ್ಲದ, ಇವ್ಯಾವುದನ್ನೂ ಓದುಗರ ಮೇಲೆ ಹೇರಿ ಖುಷಿಪಡುವ ಸಂಪಾದಕನಲ್ಲ. ಹೊಗಳಿಕೆಗಿಂತ ತೆಗಳಿಕೆಯನ್ನು, ಆತ್ಮರತಿಗಿಂತ ನಿಂದನೆಯನ್ನು ಬಯಸುವ, ಅವನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಸಂಪಾದಕ. ‘ ನೀನು ಯಾವ ಸೀಮೆ ಸಂಪಾದಕ?ಬುದ್ಧಿಗೇಡಿ ಇದ್ದೀಯಾ, ನೀನು ಓದುಗರಿಗೆ ಮಾಡಬಹುದಾದ ಉಪಕಾರವೆಂದರೆ ನಿನ್ನ ಪತ್ರಿಕೆಯನ್ನು ಮುಚ್ಚುವುದು’ ಎಂದು ಸಿಡುಕ ಓದುಗ ದೊರೆ ಬೈಯ್ದು ಬರೆದ ಪತ್ರವನ್ನು ವಿನೋದ್‌ ಬಾಕ್ಸ್‌ ತೊಡಿಸಿ ಪ್ರಕಟಿಸಿದ್ದರು. ಇವರಷ್ಟು ಅದೃಷ್ಟಶಾಲಿ ಸಂಪಾದಕ ಮತ್ತೊಬ್ಬನಿರಲಿಕ್ಕಿಲ್ಲವೆಂದು ನನಗೆ ಅನೇಕ ಸಲ ಅನಿಸಿದೆ. ಇವರು ವೃತ್ತಿಯನ್ನು ಆರಂಭಿಸಿದ್ದೇ ಸಂಪಾದಕನಾಗಿ. ಭಾರತದ ಅತಿ ಕಿರಿಯ ಸಂಪಾದಕ. ಇಪ್ಪತ್ತೇಳಕ್ಕೆ ಇವರ ಸರೀಕರು ವೃತ್ತಿಗೇ ಕಾಲಿಡದ ಪ್ರಾಯದಲ್ಲಿ ಇವರು ಸಂಪಾದಕರಾಗಿದ್ದರು.

Vinod Mehtaತಮಾಷೆ ಕೇಳಿ, ಇವರು ‘ಡೆಬೋನೇರ್‌’ ಎಂಬ‘ಬೋಲ್ಡ್‌ ಆ್ಯಂಡ್‌ ಬ್ಯೂಟಿಫುಲ್‌’ ಪತ್ರಿಕೆ ಸೇರಿದಾಗ ಇಬ್ಬರು ಸಲಿಂಗಕಮಿಗಳು ಆ ಪತ್ರಿಕೆಯನ್ನು ನಡೆಸುತ್ತಿದ್ದರು. ಹುಡುಗಿಯರ ನಗ್ನ ಚಿತ್ರ ಬಿಟ್ಟು, ಹುಡುಗರ ನಗ್ನಚಿತ್ರಗಳನ್ನು ಪ್ರಕಟಿಸಿ ಅವರೇ ಮಜಾ ತೆಗೆದುಕೊಳ್ಳುತ್ತಿದ್ದರು. ವಿನೋದ್‌ ಇಂಥ ಪತ್ರಿಕೆಗೆ ಸಂಪಾದಕರಾಗಿ ಕಾಲಿಟ್ಟಾಗ ದೊಡ್ಡ ಸವಾಲಿತ್ತು. ಆ ಪತ್ರಿಕೆಗೆ ಯಾರೂ ಬರೆಯುತ್ತಿರಲಿಲ್ಲ. ಯಾರೂ ಸಂದರ್ಶನಕ್ಕೆ ಒಪ್ಪುತ್ತಿರಲಿಲ್ಲ. ಆ ಪತ್ರಿಕೆಯಲ್ಲಿ ಕಾಣಸಿಕೊಳ್ಳುವುದೇ ಅಪರಾಧ ಎಂಬ ಭಾವನೆಯಿತ್ತು. ಈ ಅಭಿಪ್ರಾಯ ಬದಲಿಸದೇ ಪತ್ರಿಕೆ ಸುಧಾರಿಸುವುದು ಅಸಾಧ್ಯವೆಂಬುದು ಗೊತ್ತಿತ್ತು.

ಮೊದಲಿಗೆ ಕ್ರಿಕೆಟಿಗೆ ಪಟೌಡಿಯನ್ನು ಒಪ್ಪಿಸಿದರು. ವಿನೋದ್‌ ಬರುವುದಕ್ಕಿಂತ ಮೊದಲು ಮುಂಬೈನ ಕಾಮಾಟಿಪುರದ ಸೂಳೆಯರಿಗೆ ನಾಲ್ಕೈದು ಸಾವಿರ ರೂಪಾಯಿ ಕೊಟ್ಟು ಅವರ ಅರೆನಗ್ನ ಚಿತ್ರಗಳನ್ನು ಡೆಬೋನೇರ್‌ ಪ್ರಕಟಿಸುತ್ತಿತ್ತು. ಅದು ಅನಿವಾರ್ಯವೂ ಆಗಿತ್ತು. ಅಂದದ ಹುಡುಗಿಯರಾರೂ ಪೋಸು ಕೊಡುತ್ತಿರಲಿಲ್ಲ. ‘ಯಾರ ಚಿತ್ರವೂ ಸಿಗದಿದ್ದಾಗ ನನ್ನ ಗರ್ಲ್‌ಫ್ರೆಂಡ್‌ ಚಿತ್ರ ಹಾಕಿದ್ದೆ. ಆಕೆ ನನ್ನನ್ನು ಬಿಟ್ಟು ಹೋದಳು’ ಎಂದು ಅವರೇ ಹೇಳಿಕೊಂಡಿದ್ದಾರೆ.

ಮೆಹ್ತಾ ಸಂಪಾದಕರಾದ ಒಂದು ವರ್ಷದೊಳಗೆ ಪತ್ರಿಕೆ ಜನಪ್ರಿಯವಾಯಿತು. ಅರೆನಗ್ನ ಚಿತ್ರಗಳಷ್ಟೇ ಅಲ್ಲ, ವೈಚಾರಿಕ ಲೇಖನಗಳಿಗೂ ‘ಡೆಬೋನೇರ್‌’ ಪ್ರಸಿದ್ಧವಾಯಿತು. ಇದರ ಜನಪ್ರಿಯತೆ ಎಷ್ಟು ಹೆಚ್ಚಿತೆಂದರೆ, ಅಟಲ್‌ ಬಿಹಾರಿ ವಾಜಪೇಯಿ ಸಂದರ್ಶನಕ್ಕೆ ಒಪ್ಪಿದರು. ಒಮ್ಮೆ ವಾಜಪೇಯಿ ಸಿಕ್ಕಾಗ, ‘ವಿನೋದ್‌, ನಿಮ್ಮ ಡೆಬೋನೇರ್‌ನಲ್ಲಿ ನನ್ನ ಸಂದರ್ಶನವನ್ನು ಬಹಳ ಚೆನ್ನಾಗಿ ಪ್ರಕಟಿಸಿದ್ದೀರಿ. ಅದನ್ನು ನನ್ನ ಹಾಸಿಗೆಯ ದಿಂಬಿನ ಅಡಿಯಿಟ್ಟು ಓದಬೇಕಾಯಿತು’ ಎಂದರು.

ಅಂದೇ ಡೆಬೋನೇರ್‌ ಬಿಡಲು ವಿನೋದ್‌ ನಿರ್ಧರಿಸಿದರು! ಸಂಪಾದಕನಾಗಿ ಏಳು ವರ್ಷಗಳಲ್ಲಿ ನೋಡಬಹುದಾದ, ಓದಬಹುದಾದ ಪತ್ರಿಕೆ ರೂಪಿಸಿ ಯಶಸ್ವಿಯಾದರೂ ತಾನಿರುವ ಜಾಗ ಇದಲ್ಲ ಎಂದು ಅವರಿಗೆ ಅನಿಸಿತು. ರಾಜೀನಾಮೆ ಬಿಸಾಕಿದರು.

ಅನಂತರ ಅವರು ದೇಶದ ಮೊದಲ ಭಾನುವಾರದ ಪತ್ರಿಕೆ ‘ದಿ ಸಂಡೇ ಅಬ್ಸರ್‌ವರ್‌’ ಆರಂಭಿಸಿದರು. ಅದೂ ಸಹ ಶೀಘ್ರ ಜನಪ್ರಿಯವಾಯಿತು. ಇಷ್ಟೊತ್ತಿಗೆ ವಿನೋದ್‌ಗೆ ಪ್ರಸಿದ್ಧಿ ಬಂದಿತ್ತು. ಬಳಿಕ ‘ದಿ ಇಂಡಿಯನ್‌ ಪೋಸ್ಟ್‌’ ಸಂಪಾದಕರಾದರು. ಆ ಪತ್ರಿಕೆಯೂ ಹಿಟ್‌ ಹಿಟ್‌. ಅನಂತರ ‘ದಿ ಪಯೋನಿಯರ್‌’ ಪತ್ರಿಕೆ ಸೇರಿ, ಅದಕ್ಕೆ ನೀಡಿದ ಕಾಯಕಲ್ಪವಿದೆಯಲ್ಲ ಭೇಷ್‌ ಭೇಷ್‌. ಮೆಹ್ತಾ ಸ್ಪರ್ಶವಿದ್ದರೆ ಯಾವ ಪತ್ರಿಕೆಯಾದರೂ ಎದ್ದು ನಿಲ್ಲುತ್ತದೆ ಎಂಬ ಮಾತು ಚಾಲ್ತಿಗೆ ಬಂತು. ಸಮಸ್ಯೆಯೆಂದರೆ ಅವರನ್ನು ಹಿಡಿದಿಟ್ಟುಕೊಳ್ಳುವುದು. ಜೇಬಿನಲ್ಲಿ ರಾಜೀನಾಮೆ ಪತ್ರ ಇಟ್ಟುಕೊಂಡೇ ಕಚೇರಿಗೆ ಬರುತ್ತಿದ್ದ ಅವರು, ಸ್ವಲ್ಪ ಕಿರಿಕಿರಿಯಾದರೂ ಅದನ್ನು ಮುಖಕ್ಕೆ ಬಿಸಾಕಿ ಬಂದು ಬಿಡುತ್ತಿದ್ದರು. ‘ ಔಟ್‌ಲುಕ್‌’ ನಲ್ಲಿ ಹತ್ತು ವರ್ಷ ಸಂಪಾದಕರಾಗಿರುವುದು ಅವರ ದೀರ್ಘ ಇನ್ನಿಂಗ್ಸ್‌. ‘ಇಂಡಿಯಾ ಟುಡೇ’ ಯಂಥ ದೈತ್ಯ ಪತ್ರಿಕೆ ಮಣಿಸಿದ ವಿನೋದ್‌ ಸಾಧನೆ, ಅದಕ್ಕೆ ಅವರು ರೂಪಿಸಿದ ಸೂತ್ರ, ಪತ್ರಿಕೋದ್ಯಮದಲ್ಲಿ ಒಂದು ಮೈಲಿಗಲ್ಲು. ಇವರಂತೆ ಮಾಂತ್ರಿಕ ದಂಡ ಹಿಡಿದ ಮತ್ತೊಬ್ಬ ಸಂಪಾದಕನನ್ನು ಭಾರತೀಯ ಪತ್ರಿಕೋದ್ಯಮ ಕಂಡಿಲ್ಲ.

ಇಂಥ ವಿನೋದ್‌ ಮೆಹ್ತಾ ‘ಔಟ್‌ಲುಕ್‌’ ದಶಮಾನೋತ್ಸವ ಸಂದರ್ಭದಲ್ಲಿ ಮಾಡಿದ ಭಾಷಣದ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಡುತ್ತಿದ್ದೇನೆ. ಈ ಮಾತಿನಲ್ಲಿ ಪತ್ರಿಕೆ, ಪತ್ರಕರ್ತ, ಸಂಪಾದಕ, ಪ್ರಕಾಶನ ಹಾಗೂ ಇಡೀ ವೃತ್ತಿಯ ಸೂಕ್ಷ್ಮ ಒಳಸುಳಿಗಳಿರುವುದರಿಂದ ನಿಮಗೂ ಇಷ್ಟವಾಗಬಹುದು.

  • ನಾನು ಕಳೆದ 30ವರ್ಷಗಳಿಂದ ಸಂಪಾದಕನಾಗಿದ್ದೇನೆ. ಅಪರೂಪಕ್ಕೊಮ್ಮೆ ಸೆಕ್ಸನ್ನು ಕವರ್‌ಪೇಜ್‌ ಲೇಖನ ಮಾಡಿ ಗಂಭೀರ ಪತ್ರಿಕೋದ್ಯಮವನ್ನು ಜನಪ್ರಿಯಗೊಳಿಸುವುದು ನನ್ನ ಗುರಿ. ಅದಕ್ಕಿಂತ ಮುಖ್ಯವಾಗಿದ್ದೇನೆಂದರೆ 2005ರ ಓದುಗನನ್ನು ಹೇಗೆ ಓದಲು ಹಚ್ಚುವುದು ಎಂಬುದು. ಈ ಓದುಗನಿದ್ದಾನಲ್ಲ ಆತ ಭಲೇ ಶಾಣ್ಯಾ. ಆತನ ಗಮನ ಸೆಳೆಯುವುದು ಹೇಗೆ? ರಾಜಕೀಯ ವರದಿಯನ್ನೇ ತೆಗೆದುಕೊಳ್ಳಿ. ನಾವು ಹೇಗೆ ರಾಜಕೀಯ ಸಂಬಂಧಿ ವರದಿ, ಲೇಖನ ಬರೆಯುತ್ತೇವೆ ನೋಡಿ. ಈ ಹೊಸ ಓದುಗನಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಅಂತಲ್ಲ. ಆಸಕ್ತಿಯಿದೆ. ಆದರೆ ನಾವು ವರದಿ ಮಾಡುತ್ತಿರುವ ರೀತಿಯಲ್ಲಿ ಆಸಕ್ತಿಯಿಲ್ಲ. ನಮ್ಮ ತಪ್ಪನ್ನು ಅವನ ಮೇಲೆ ಹೊರಿಸುವುದು ಸರಿಯಲ್ಲ.
  • ಯಾವುದೇ ಪತ್ರಿಕೆ ಅಥವಾ ಟೀವಿಗೆ ಸುದ್ಧಿಸ್ಫೋಟಕಗಳು ಅರ್ಥಾತ್‌ breaking news ಬಹಳ ಮುಖ್ಯ. ಅವು ಚರ್ಚೆ, ಸಂವಾದಕ್ಕೆ ಗುರಿಯಾಗಬೇಕು. ಪತ್ರಿಕೋದ್ಯಮ ಗುಣಮಟ್ಟ ಹೆಚ್ಚಿಸ ಬೇಕು. ಜನಾಭಿಪ್ರಾಯ ರೂಪುಗೊಳ್ಳಲು ಅನುವಾಗಬೇಕು. ಇಂದಿನ ದಿನಗಳಲ್ಲಿ breaking news ಇದೆಯಲ್ಲ ಅವು ದೊಡ್ಡ ಜೋಕ್‌ಗಳಾಗಿವೆ. ಬಜೆಟ್‌ ದಿನ ವಿತ್ತ ಸಚಿವರ ಸಂದರ್ಶನ ಪ್ರಸಾರವಾಗುತ್ತದೆ. ಎಲ್ಲ ಚಾನೆಲ್‌ಗಳು ‘ನಮ್ಮಲ್ಲಿ ಮಾತ್ರ’, exclusive ಎಂದು ಬರೆದುಕೊಳ್ಳುತ್ತದೆ. ಕೆಲ ದಿನಗಳ ಹಿಂದೆ ಟೀವಿ ಚಾನೆಲ್‌ ವೀಕ್ಷಿಸುತ್ತಿದ್ದೆ. ತಕ್ಷಣ breaking news ಎಂದು ಘೋಷಿಸಿದರು. ಕೆಲ ಸಮಯದ ಬಳಿಕ ಮತ್ತೊಂದು ಘೋಷಣೆ - ಹದಿನೈದು ನಿಮಿಷಗಳ ಹಿಂದೆ ನಾವು ಘೋಷಿಸಿದ breaking newsಗೆ ಹೊಸ ಸಂಗತಿಗಳನ್ನು ಸೇರಿಸುವಂಥದ್ದೇನೂ ಇಲ್ಲ.
  • ಅಭಿಪ್ರಾಯಭೇದ ಉತ್ತಮ ಪತ್ರಿಕೋದ್ಯಮದ ತಿರುಳು. ಓದುಗ ಅದೆಷ್ಟೇ ತೀಕ್ಷ್ಮ, ಖಾರವಾದ ಪತ್ರ ಬರೆಯಲಿ, ಅದನ್ನು ಪ್ರಕಟಿಸುವ ಛಾತಿ ಪತ್ರಿಕೆಗಿರಬೇಕು. ಇಂಥ ಪತ್ರಗಳನ್ನು ನಾನು ಆಹ್ವಾನಿಸುತ್ತೇನೆ ಹಾಗೂ ಪ್ರಕಟಿಸುತ್ತೇನೆ. ಪತ್ರಿಕೆ arguementative ಆಗಿರಬೇಕು. ನಮ್ಮನ್ನು ವಿರೋಧಿಸುವವರಿಗೆ ಜಾಗ ಮಾಡಿಕೊಡದಿದ್ದರೆ ನನ್ನ ಪತ್ರಿಕೆ ಡೆಡ್ಲಿ ಡಲ್‌ ಆಗುತ್ತಿತ್ತು.
  • ಪೂರ್ವಗ್ರಹಪೀಡಿತರಾಗಿರದ (unbiased) ಪತ್ರಕರ್ತರ ಅಗತ್ಯವಿದೆಯೆಂಬ ಭ್ರಮೆಯಿಂದ ಈಗಲಾದರೂ ಹೊರಬರಬೇಕು. ನನ್ನ 30ವರ್ಷಗಳ ವೃತ್ತಿ ಜೀವನದಲ್ಲಿ unbiased ಪತ್ರಕರ್ತನನ್ನು ನಾನು ಈ ತನಕ ಭೇಟಿ ಮಾಡಿಲ್ಲ. ನಮ್ಮ ಪೂರ್ವಗ್ರಹಗಳ ನಡುವೆಯೂ ನಾವು ವಿಷಯದ ಸತ್ಯಕ್ಕೆ ಎಷ್ಟು ಹತ್ತಿರವಾಗಿದ್ದೇವೆಂಬುದು ಮುಖ್ಯ.
  • ಪೂರ್ವಗ್ರಹ ಇರಬಹುದು, ಇರದಿರಬಹುದು, ಭಾರತದಲ್ಲಿ ರಾಜಕೀಯ ವರ್ಗ ಇದೆಯಲ್ಲ ಅದು ಪತ್ರಿಕೆಗಳನ್ನು ತೀರಾ ಗಂಭೀರವಾಗಿ ಪರಿಗಣಿಸಿದೆ. ಎಂಥ ವಿಚಿತ್ರ ನೋಡಿ, ನಾವು ಕೆಲವು ಮಂದಿ ಕಚೇರಿಯಲ್ಲಿ ಟೇಬಲ್‌ ಸುತ್ತುವರಿದು ರಾಜಕಾರಣಿಗಳ ಭವಿಷ್ಯ ನಿರ್ಧರಿಸುವವರೆಂಬಂತೆ ಪೋಸು ಕೊಡ್ತೇವೆ. ನಿಮಗೆ ಗೊತ್ತಿರಲಿ, ಪ್ರತಿದಿನ ನಾವು ಡೆಡ್‌ಲೈನ್‌ನಲ್ಲಿ ಕೆಲಸ ಮಾಡಬೇಕು ಹಾಗೂ ಎಲ್ಲರಿಗಿಂತ ಮೊದಲು ತಾಜಾ ಸುದ್ದಿ ಕೊಡಬೇಕು. ಹೀಗಾಗಿ ನಾವು ತಪ್ಪುಗಳನ್ನು ಮಾಡ್ತೇವೆ. ನಮ್ಮ ತೀರ್ಮಾನದಲ್ಲಿ ತಪ್ಪುಗಳಾಗುತ್ತದೆ. Facts ಕೊಡುವುದರಲ್ಲಿ ತಪ್ಪುಗಳಾಗುತ್ತವೆ. ಪೂರ್ವಗ್ರಹ ದೋಷಗಳಾಗುತ್ತದೆ. ತೀವ್ರ ಒತ್ತಡದಲ್ಲಿ ಕೆಲಸ ಮಾಡುವುದರಿಂದ ತಪ್ಪುಗಳಾಗುವುದು ಸಹಜ. ರಂಜನೆ, ಅತಿರಂಜನೆ ನಮ್ಮ ಕೆಲಸದ ಮುಖ್ಯಭಾಗ. ಅವು ನಿಮಗೆ ಮುಖ್ಯವಾಗಬೇಕಿಲ್ಲ. ನಾವು ಸಣ್ಣ ಅಪಸ್ವರವನ್ನು ಬಂಡಾಯದ ಬಾವುಟ ಎಂದೂ, ಕ್ಷುಲ್ಲಕ ಟೀಕೆ ತೀವ್ರ ಭಿನ್ನಾಭಿಪ್ರಾಯ ಎಂದೂ, ಸರಕಾರದಲ್ಲಿನ ತಳಮಳವೆಂದರೆ ಸರಕಾರ ಪತನ ಸನ್ನಿಹಿತ ಎಂದೂ ತಿಳಿಯುತ್ತೇವೆ. ವಿದೇಶಾಂಗ ನೀತಿಯಲ್ಲಿನ ಚಿಕ್ಕ ಬದಲಾವಣೆಯೆಂದರೆ ದೇಶವನ್ನು ಒತ್ತೆ ಇಟ್ಟಂತೆ. ಹೀಗೆಲ್ಲ ನಾವು ಭಾವಿಸುತ್ತೇವೆ. ಸೆನ್‌ಸೆಕ್ಸ್‌ 10ಪಾಯಿಂಟ್‌ ಕುಸಿದರೆ ದೇಶದ ಅರ್ಥ ವ್ಯವಸ್ಥೆಯೇ ಕುಸಿಯಿತೆಂದು ಬರೆಯುತ್ತೇವೆ. ಆದರೆ ನೀವು ಇವ್ಯಾವನ್ನೂ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಪತ್ರಿಕೆಯವರ ಪಾಲಿಗೆ ಬಿಕ್ಕಟ್ಟು, ಅಧಃಪತನ, ಕುಸಿತವೆಂದು ಕಾಣುವ ಎಲ್ಲ ಸುದ್ಧಿ 24ತಾಸುಗಳಲ್ಲಿ ಠುಸ್‌! ಪತ್ರಕರ್ತರು ಅಂದುಕೊಂಡಂತೆ ಏನೂ ಆಗಿರುವುದಿಲ್ಲ.
  • ಭಾರತದ ರಾಜಕೀಯವರ್ಗ ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿಯೇ ಕೆಲವು ಪತ್ರಕರ್ತರು ಹಾಗೂ ಸಂಪಾದಕರು ತಾವು ಬರೆದಿದ್ದನ್ನೆಲ್ಲ ಅಮೃತಶಿಲೆಯಲ್ಲಿ ಬರೆದಿಡಬೇಕೆಂದು ಬಯಸುತ್ತಾರೆ. ಈ ಕಾರಣಕ್ಕಾಗಿಯೇ ನಾನು ಸಾಕಿರುವ ನಾಯಿಗೆ ‘ ಸಂಪಾದಕ’ ಎಂದೇ ಹೆಸರಿಟ್ಟಿದ್ದೇನೆ. ಯಾಕೆ ಈ ಹೆಸರು ಅಂತ ಹೆಂಡತಿ ಕೇಳುತ್ತಾಳೆ. ಆಕೆಗೆ ಹೇಳುತ್ತೇನೆ-‘ಏಕೆಂದ್ರೆ ಆತ ಮೊಂಡ, ಜಿಗುಟ ಹಾಗೂ ತನಗೇ ಎಲ್ಲ ಗೊತ್ತಿದೆ ಎಂದು ಭಾವಿಸಿರುತ್ತಾನೆ’
  • ನಾವು ಯಾವತ್ತೂ ತಪ್ಪು ಮಾಡುವುದಿಲ್ಲ. ಆದರೆ ಆಗಾಗ ನಮ್ಮಿಂದ ತಪ್ಪುಗಳಾಗುತ್ತಿರುತ್ತದೆ. ಹಿಂದಿನ ಗುಜರಾತ್‌ ವಿಧಾನಸೌಭಾ ಚುನಾವಣೆಯಲ್ಲಿ ನರೇಂದ್ರ ಮೋದಿ, ಸರಕಾರ ರಚಿಸುವಷ್ಟು ಸೀಟು ಗಿಟ್ಟಿಸುವುದಿಲ್ಲ ಎಂದು ಬರೆದಿದ್ದೆವು. ಆದರೆ ನಾವು ಈ ಚುನಾವಣಾ ಫಲಿತಾಂಶದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ.
  • ಓದುಗರು ನಮ್ಮನ್ನು ಸ್ವಲ್ಪ ಕಡಿಮೆ ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಬಗ್ಗೆ ಓದುಗರು ಸ್ವಲ್ಪ ದಿವ್ಯ ನಿರ್ಲಕ್ಷ್ಯ
  • ತಾಳಬೇಕು. ನಿಮಗೊಂದು ಗುಟ್ಟನ್ನು ಹೇಳುತ್ತೇನೆ. ಪತ್ರಕರ್ತ ಅಥವಾ ಸಂಪಾದಕನನ್ನು ಭೇಟಿಯಾದಾಗ ಒಂದು ಮಾತನ್ನು ಹೇಳಿ, ನಾನು ನಿಮ್ಮ ಹಿಂದಿನ ಲೇಖನವನ್ನು ಓದಿಲ್ಲ ಅಥವಾ ನಿಮ್ಮ ಲೇಖನವನ್ನು ಓದುವುದೂ ಇಲ್ಲ. ನೀನು ಬರೆದ ಲೇಖನವನ್ನು ಓದುವುದಿಲ್ಲ ಎಂದು ಹೇಳಿದಾಗ ಆಗುವ ನೋವಿಗಿಂತ ಹೆಚ್ಚಿನ ನೋವು ಪತ್ರಕರ್ತ, ಸಂಪಾದಕನಿಗೆ ಬೇರೊಂದಿಲ್ಲ.
  • ಪತ್ರಕರ್ತ-ರಾಜಕಾರಣಿಗಳ ಮಧ್ಯೆ ಹೊಸ ಸಂಬಂಧ ಏರ್ಪಡಬೇಕಾಗಿದೆ. ನಾವಿಬ್ಬರೂ ಪರಮವೈರಿಗಳಲ್ಲ. ಹಾಗೆ ನಾವು ಶಾಶ್ವತ ಸ್ನೇಹಿತರೂ ಅಲ್ಲ. ರಾಜಕಾರಣಿಗಳಿಗೆ ಆಗಾಗ ತುಸು ಕಸಿವಿಸಿ, ಮುಜುಗರ ಮಾಡುತ್ತಿರಬೇಕು. ರಾಜಕಾರಣಿಗಳಿದ್ದ ಒಂದು ಔತಣಕೂಟಕ್ಕೆ ಹೋದಾಗ ಅಲ್ಲೊಂದು ಚರ್ಚೆ ಸಾಗಿತ್ತು. ನಾನು ಪ್ರವೇಶಿಸುತ್ತಿದ್ದಂತೆ ಅವರೆಲ್ಲರೂ ಸುಮ್ಮನಾದರು. ಅವರಲ್ಲೊಬ್ಬ ಹೇಳಿದ -‘ನಿಮ್ಮ ಕಂಪನಿ ನನಗೆ ತೀರಾ ಕಿರಿಕಿರಿಯಾಗುತ್ತದೆ’ ನಿಜಕ್ಕೂ ಅದು ಧೈರ್ಯದ ಮಾತಾಗಿತ್ತು. ನಾನು ಹೇಳಿದೆ - ‘ ಹೌದು. ನಮಗೆ ಕಿರಿಕಿರಿಯಾಗಬೇಕು.’
  • ಭಾರತದಲ್ಲಿ ಮಾಧ್ಯಮಗಳ ಪಾತ್ರವೇನು? ಅವುಗಳ ಹೊಣೆಗಾರಿಕೆಯೇನು? -ನನಗನಿಸುತ್ತದೆ, ಸರಕಾರಗಳು ಹೇಗೆ ಕೆಲಸ ಮಾಡುತ್ತಿವೆಯೆಂಬುದರ ಮೇಲೆ ನಿಗಾ ಇಡುವುದು ದೊಡ್ಡ ಹೊಣೆಗಾರಿಕೆ. ನಮ್ಮ ಹಣಕಾಸು ಪತ್ರಿಕೆಗಳು ಹೇಳುತ್ತವೆ, ನಾವು ಚೀನಾದೊದಿಗೆ ಸೆಣಸಬಹುದು. ಆ ರಾಷ್ಟ್ರವನ್ನು ಹಿಂದಕ್ಕೂ ಹಾಕಬಹುದು. ಆದರೆ ತಿಳಿದಿರಲಿ, 40ಕೋಟಿ ಮಂದಿಗೆ ದಿನಕ್ಕೆ 40ರೂ,ಗಿಂತ ಕಡಿಮೆ ಕಮಾಯಿಯಿದೆ. ನಾವು ಹೊಳೆಯುವ ಹಾಗೂ ಕತ್ತಲಿನ ಎಂಬ ಎರಡು ದೇಶಗಳನ್ನು ಸೃಷ್ಟಿಸಿದ್ದೇವೆ. ಕತ್ತಲಿನಲ್ಲಿರುವ ಭಾರತ ಹೊಳೆಯುವ ಭಾರತದ ಮುಂದೆ ನಮಗೆ ಕಾಣುವುದೇ ಇಲ್ಲ. ಎಲ್ಲಿಯ ತನಕ ಭಾರತ ಹೊಳೆಯುವುದಿಲ್ಲವೋ ಅಲ್ಲಿ ತನಕ ಅದು ಪ್ರಜಾಸತ್ತೆಯ ವೈಫಲ್ಯವೇ. ಫ್ರೆಂಚ್‌ ಜಲಾಂತರ್ಗಾಮಿ ನೌಕೆಗೆ ನಾವು 15ಸಾವಿರ ಕೋಟಿ ರೂ ತೆಗೆದಿಡುತ್ತೇವೆ. ಆದರೆ ಉದ್ಯೋಗ ಖಾತ್ರಿ ಯೋಜನೆಗೆ 12ಸಾವಿರ ಕೋಟಿ ರೂ ತೆಗೆದಿಡುತ್ತೇವೆ. ಇದು ಸೈದ್ದಾಂತಿಕ ಪ್ರಶ್ನೆಯಲ್ಲ. ಇದು ಎಡ-ಬಲ-ಮಧ್ಯದ ಪ್ರಶ್ನೆಯಲ್ಲ. ಇದು ಮಾನವೀಯ ಪ್ರಶ್ನೆ.
  • ಕಳೆದ 10ವರ್ಷಗಳಿಂದ ಒಂದೇ ಪತ್ರಿಕೆಯಲ್ಲಿದ್ದೇನೆ. ಇದು ನನ್ನ ಮಟ್ಟಿಗೆ ದಾಖಲೆ. ಇದಕ್ಕೆ ಕಾರಣ ನನ್ನ ಮಾಲೀಕ ರಾಜನ್‌ ರಹೇಜಾ. ಸಂಪಾದಕ-ಪ್ರಕಾಶಕನ ಸಂಬಂಧದ ಬಗ್ಗೆ ನಾನು ಮಹಾಭಾರತಕ್ಕಿಂತ ದೊಡ್ಡ ಪುಸ್ತಕ ಬರೆಯಬಲ್ಲೆ. ಆದರೆ ಆ ಪುಸ್ತಕದಲ್ಲಿ ರಾಜನ್‌ ಬಗ್ಗೆ ಒಂದೇ ಪುಟವಿರುತ್ತದೆ. ಯಾವುದೇ ಸಂಪಾದಕ ಬಯಸುವ ಪ್ರಕಾಶಕ ಅವರು. ರಾಜನ್‌ ಸಂತತಿ ಬೆಳೆಯಲಿ.
  • ನಾನು ಆಕಾಶದಲ್ಲಿರುವ ‘ ಸುಪ್ರೀಂ ಸಂಪಾದಕ’ನನ್ನು ಭೇಟಿಯಾದಾಗ ಆತನಿಗೆ ಹೇಳುತ್ತೇನೆ-ನಾನು ಸಣ್ಣಪುಟ್ಟ ತಪ್ಪುಗಳನ್ನು, ಪಾಪಗಳನ್ನು ಮಾಡಿದ್ದೇನೆ. ಆದರೆ ದೊಡ್ಡ ವಿಷಯಕ್ಕೆ ಸಂಬಂಧಿಸಿದಂತೆ ವೃತ್ತಿಗೆ ಸಂಪೂರ್ಣ ನಿಷ್ಠನಾಗಿದ್ದೇನೆ. ಅಷ್ಟೇ ಅಲ್ಲ ಈ ಪರಿ ಟೀವಿ ಆಕರ್ಷಣೆಯ ನಡುವೆಯೂ, ಟೀವಿ ನಿರೂಪಕ(anchor)ಆಗಲಿಲ್ಲ. ಮುದ್ರಣ ಮಾಧ್ಯಮಕ್ಕೇ ನಿಷ್ಠನಾಗಿದ್ದೇನೆ.ಆದ್ದರಿಂದ ನನ್ನನ್ನು ಸ್ವರ್ಗಕ್ಕೆ ಕಳಿಸು.
  • ಸಂಪಾದಕನಾಗಿ ನಾನು ಇನ್ನೂ ಕಲಿಯುತ್ತಲೇ ಇದ್ದೇನೆ. ಕಲಿಯುವುದು ಇನ್ನೂ ಸಾಕಷ್ಟಿದೆ. ‘ಯಾರೂ ಪರಿಪೂರ್ಣರಲ್ಲ’ ಎಂಬ ಮಾತನ್ನು ಎಂದಿಗೂ ಮರೆಯಬಾರದೆಂದು ಸದಾ ನನಗೆ ಹೇಳಿಕೊಳ್ಳುತ್ತೇನೆ.
ನಾನ್ಯಾಕೆ ವಿನೋದ್‌ ಮೆಹ್ತಾ ಅವರನ್ನು ಮೆಚ್ಚುತ್ತೇನೆಂಬುದು ಗೊತ್ತಾಗಿರಬಹುದು.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X