• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣೆಯಲ್ಲಿ ಲಾಲು ಗೆದ್ದರೆ ಆತನಿಗೆ ಲಾಭ, ಸೋತರೆ ಬಿಹಾರಕ್ಕೆ ಲಾಭ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಲಾಲು ಪ್ರಸಾದ್‌ ಯಾದವ್‌ ಬಹುವಚನ ಪ್ರಯೋಗವನ್ನು ಮೆಚ್ಚುವುದಿಲ್ಲ. ಹೀಗಾಗಿ ಆತ ಯಾರಿಗೂ ಅದನ್ನು ಬಳಸುವುದಿಲ್ಲ. ಇಬ್ಬರಿದ್ದರೆ ಪರವಾಗಿಲ್ಲ , ಒಬ್ಬನಿಗೆ ಬಹುವಚನ ಪ್ರಯೋಗಿಸುವುದು ವ್ಯಾವಹಾರಿಕವಾಗಿ ಸರಿಯಲ್ಲವೆಂಬುದು ಅವನ ತರ್ಕ. ಅದೇನೇ ಇರಲಿ, ಲಾಲು ಮಾತ್ರ ಭಾರತದ ರಾಜಕಾರಣದ ವ್ಯವಹಾರ ಹಾಗೂ ವ್ಯಾಕರಣವನ್ನಂತೂ ಬದಲಿಸಿದ್ದಾನೆ. ಈ ದೇಶ ಕಂಡ ವಿಲಕ್ಷಣ, ವಿಚಿತ್ರ ಮತ್ತು ಪ್ರಭಾವಿ ರಾಜಕಾರಣಿ. ಅವನಂಥ ಮತ್ತೊಬ್ಬ ರಾಜಕಾರಣಿ ಇಲ್ಲ. ಈ ಮಾತು ಅವನ ಹೆಚ್ಚುಗಾರಿಕೆಯೂ ಹೌದು.

ಹೇಗಿದೆ ನೋಡಿ, ಕಳೆದ ಹದಿನೈದು ವರ್ಷಗಳಿಂದ ಬುದ್ಧನ ನಾಡಾದ ಬಿಹಾರವನ್ನು ಆಟಿಕೆ ಗೊಂಬೆಯಂತೆ ತನ್ನ ಮುಟಿಕೆಯಲ್ಲಿ ಕುಣಿಸುತ್ತಿದ್ದರೂ, ಯಾರಿಗೂ ಆತನನ್ನು ನಿಯಂತ್ರಿಸಲು ಆಗಿಲ್ಲ. ಕೊಂಕಿಸಲೂ ಆಗಿಲ್ಲ. ಕೊಂಕಿಸಲೂ ಆಗಿಲ್ಲ. ಪ್ರಜಾಸತ್ತೆ ಮಾಯ. ಹೀಗಂತ ಎಲ್ಲರೂ ಒಂದೂವರೆ ದಶಕದಿಂದ ಹೇಳುತ್ತಿದ್ದಾರೆ. ಆದರೆ ಏನೂ ಆಗಿಲ್ಲ. ಆಗುವುದೂ ಇಲ್ಲ. ಲಾಲುನನ್ನು ಹಜಕಾಡಿಸಲು ಸಾಧ್ಯವೇ ಇಲ್ಲವೆಂಬಂಥ ಸ್ಥಿತಿಯಿದೆ. ಲಾಲು ಸಾಮರ್ಥ್ಯದ ಬಗ್ಗೆ ದಿನವಿಡೀ ಟೀಕಿಸುವ, ಕೆಂಡಕಾರುವ ಜಾರ್ಜ್‌ ಫರ್ನಾಂಡಿಸ್‌, ನಿತೀಶ್‌ ಕುಮಾರ್‌, ಪಾಸ್ವಾನ್‌, ಶರದ್‌ ಯಾದವ್‌, ಸುಶೀಲ್‌ ಕುಮಾರ್‌ ಮೋದಿಯವರನ್ನು ಗುಟ್ಟಾಗಿ ಕೇಳಿ. ಅವರೆಲ್ಲ ಆತನ ಸಾಮರ್ಥ್ಯದ ಬಗ್ಗೆ ತಲೆದೂಗುತ್ತಾರೆ. ಕೆಲ ತಿಂಗಳ ಹಿಂದೆ ಜಾರ್ಜ್‌ ಫರ್ನಾಂಡಿಸ್‌ ಮಾತಿಗೆ ಸಿಕ್ಕಾಗ, ‘ಲಾಲುನ ಎಲ್ಲ ದುರಾಡಳಿತಗಳ ಮಧ್ಯವೂ ನನಗಂತೂ ಆತನನ್ನು ಸಂಪೂರ್ಣ ತಿರಸ್ಕರಿಸಲು ಸಾಧ್ಯವಾಗುತ್ತಿಲ್ಲ. ಆತ ಭಾರೀ ಆಸಾಮಿ. ಆತನ ಸಾಮರ್ಥ್ಯವೇ ಸಾಮರ್ಥ್ಯ. ಆತನೊಬ್ಬ ಭಲೇ ಪರಿಣಾಮಕಾರಿ ಸಂವಹನಕಾರ’ ಎಂದು ಹೇಳಿದ್ದರು.

ಜಾರ್ಜ್‌ಗೆ ಈ ಸಂಗತಿ ಚೆನ್ನಾಗಿ ಮನದಟ್ಟಾಗಿದೆ. ಕಾರಣ ಅವರು ತಮ್ಮೆಲ್ಲ ಬಲ ಉಪಯೋಗಿಸಿ ಲಾಲು ವಿರುದ್ಧ ಗುಟುರು ಹಾಕಿದರು. ಬೊಬ್ಬೆ ಹೊಡೆದರು. ಸಕಲ ಪಟ್ಟುಗಳನ್ನೂ ಹಾಕಿದರು. ಅಷ್ಟೇ ಅಲ್ಲ ಆತನನ್ನು ಎಲ್ಲ ವೇದಿಕೆಗಳಿಂದ ಹಳಿದರು. ಪ್ರಯೋಜನವಾಗಲಿಲ್ಲ. ಸರಿ, ಆತನ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದಾಗ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತಾದಾಗ ಆತನ ಕತೆ ಮುಗೀತು ಎಂದು ಅಂದು ಕೊಂಡರು. ಅವರಷ್ಟೇ ಅಲ್ಲ, ದೇಶದ ಜನರೂ ಅಂದುಕೊಂಡರು.

ಲಾಲು ಬೇರೆ ಪಟ್ಟು ಹೊಡೆದ. ಓದಲು ಬರೆಯಲು ಬಾರದ ತನ್ನಷ್ಟಕ್ಕೆ ಅಡುಗೆಮನೆಯಲ್ಲಿದ್ದ, ಕಾಲ ಕಾಲಕ್ಕೆ ಮಕ್ಕಳನ್ನು ಹೆತ್ತು ಕೊಡುತ್ತಿದ್ದ ಹೆಂಡತಿ ರಾಬ್ಡಿದೇವಿಯನ್ನು ಕರೆತಂದು ಮುಖ್ಯಮಂತ್ರಿ ಕುರ್ಚಿ ಮೇಲೆ ಲಾಲು ಕುಳ್ಳಿರಿಸಿದ. ದೇಶಕ್ಕೆ ದೇಶವೇ ಒಂದು ಕ್ಷಣ ನಿಬ್ಬೆರಗಾಯಿತು. ಹೆಂಡತಿಯನ್ನು ಸಿಯೆಮ್ಮು ಮಾಡಿದರೆ ಜನ ಏನೆಂದು ಭಾವಿಸಿಯಾರು ಎಂದು ಸಹ ಲಾಲು ಯೋಚಿಸಲಿಲ್ಲ. ಬೇರೆ ಯಾರೇ ಇದ್ದರೂ ಅಂಥ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಲಾಲು ಅವ್ಯಾವ ಸಂಗತಿಗಳನ್ನೂ ನಿರಾಕರಿಸಲಿಲ್ಲ. ಆತನಿಗೆ ನಾಚಿಕೆ, ಮಾನ, ಮರ್ಯಾದೆಗಿಂತ ಅಧಿಕಾರ ಮುಖ್ಯವಾಗಿತ್ತು. ಮೊದಲಿನ ಮೂರನ್ನು ಹಿಡಿದುಕೊಂಡರೆ ಕೊನೆಯದು ಸಿಗುತ್ತಿರಲಿಲ್ಲ. ಹೀಗಾಗಿ ಅಧಿಕಾರಕ್ಕಾಗಿ ಮೂರನ್ನೂ ಬಿಟ್ಟುಬಿಟ್ಟ !

1990ರಲ್ಲಿ ಅಧಿಕಾರಕ್ಕೆ ಬರುವಾಗ ಲಾಲು ಒಳ್ಳೆಯವನೇ ಆಗಿದ್ದ. ಜಯಪ್ರಕಾಶ್‌ ನಾರಾಯಣ್‌, ಡಾ.ಲೋಹಿಯಾ ಅವನಿಗೆ ಆದರ್ಶರಾಗಿದ್ದರು. ವಿದ್ಯಾರ್ಥಿ ನಾಯಕನಾಗಿದ್ದ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ತನ್ನ ಜೀವನದ ಉದ್ದೇಶ ಎಂದು ಹೇಳುತ್ತಿದ್ದ. ವಿದ್ಯಾರ್ಥಿ ಚಳವಳಿಯಲ್ಲಿ ಲಾಲು, ನಿತೀಶ್‌ಕುಮಾರ್‌, ಸುಶೀಲ್‌ ಮೋದಿಯನ್ನು ಬಂಧಿಸಿದಾಗ, ಜೈಲರ್‌ಗೆ ಕೋಳಿಯೂಟದ ಆಸೆ ತೋರಿಸಿ ಲಾಲು ಜೈಲಿನಿಂದ ಪರಾರಿಯಾಗಿ ಬಂದಿದ್ದ. ಮೊದಲ ಸಲ ಎಂಎಲ್‌ಎ ಆದಾಗ ಕಾಂಗ್ರೆಸ್‌ ನಾಯಕರ ಜತೆಯಲ್ಲೇ ಕಳೆಯುತ್ತಿದ್ದ ಲಾಲುಗೆ ಅಲ್ಲಿತನಕ ಪಾಟನಾದಲ್ಲಿ ಉಳಿದುಕೊಳ್ಳಲು ಸ್ವಂತ ಮನೆಯಿರಲಿ, ಬಾಡಿಗೆ ಮನೆಯೂ ಇರಲಿಲ್ಲ. ಬಿಹಾರ ಮೆಡಿಕಲ್‌ ಕಾಲೇಜಿನಲ್ಲಿ ನಾಲ್ಕನೆ ದರ್ಜೆ ನೌಕರನಾಗಿದ್ದ ಅಣ್ಣನ ಮನೆಯಲ್ಲಿದ್ದ. ಡಿಗ್ರಿ ಮುಗಿಸಿರುವುದಾಗಿ ಆತನೇ ಹೇಳಿಕೊಂಡರೂ, ಅವನು ಕಾಲೇಜಿನಲ್ಲಿ ಕುಳಿತಿದ್ದನ್ನು ಯಾರೂ ಕಂಡಿಲ್ಲ. ಆತನಿಗೆ ರಾಜಕೀಯದಲ್ಲಿ ಗಾಡ್‌ಫಾದರ್‌ಗಳು ಅಂತ ಯಾರೂ ಇರಲಿಲ್ಲ. ಆದರೆ ಆತನಿಗೊಂದು ಆದಮ್ಯ ಆತ್ಮವಿಶ್ವಾಸ ಹಾಗೂ ಮಹತ್ವಕಾಂಕ್ಷೆಗಳಿದ್ದವು. ಅದೇ ಅವನನ್ನು ಮುನ್ನಡೆಸಿದವು.

ಮೊದಲಬಾರಿಗೆ ಮುಖ್ಯಮಂತ್ರಿಯಾದಾಗ ಆತನಿಗೆ ಆಡಳಿತದ ಕಲ್ಪನೆಯಾಗಲಿ, ಸರಕಾರದ ಸ್ವರೂಪವಾಗಲಿ ಏನೇನೂ ಗೊತ್ತಿರಲಿಲ್ಲ. ಇಂಥ ಲಾಲು ಮುಂದೊಂದು ದಿನ ಈ ದೇಶದ ಪ್ರಧಾನಿ ಹುದ್ದೆಗೆ ‘ಟವೆಲ್ಲು ಹಾಸುವ’ ಕನಸು ಕಾಣುವಷ್ಟು ಅಥವಾ ತಾನೇ ಮುಂದಿನ ವಾರಸುದಾರ ಎಂದು ಹೇಳಿಕೊಳ್ಳುವಷ್ಟು ಎತ್ತರಕ್ಕೆ ಬೆಳೆಯಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ.

ಲಾಲುಗೆ ಇವೆಲ್ಲ ಸಾಧ್ಯವಾಗಿದ್ದರೂ ಹೇಗೆ ? ಒಬ್ಬ ಸಾಮಾನ್ಯ, ದಟ್ಟ ದರಿದ್ರ ಹಿನ್ನೆಲೆಯಿಂದ ಬಂದ ಲಾಲು ಈ ಪರಿ ಬೆಳೆದು ನಿಂತಿದ್ದಾದರೂ ಹೇಗೆ ? ದನಗಾಹಿಯ ಮಗನೊಬ್ಬ ಇಡೀ ಬಿಹಾರವನ್ನು ತನ್ನ ಹುಲ್ಲುಗಾವಲನ್ನಾಗಿ ಮಾಡಿಕೊಂಡಿದ್ದಾದರೂ ಹೇಗೆ ? ನಿಜಕ್ಕೂ ರೋಚಕ, ಶ್ಯಾನೇ ಅದ್ಬುತ. ಲಾಲುನನ್ನು ಬಿಟ್ಟು ಭಾರತ ರಾಜಕಾರಣದ ಬಗ್ಗೆ ಯೋಚಿಸುವ ಹಾಗಿಲ್ಲ. ಅಷ್ಟೊಂದು ದಟ್ಟವಾಗಿ ಆತ ಇಂದು ಆವರಿಸಿಕೊಂಡಿದ್ದಾನೆ.

ಇದನ್ನು ಆತನ ಸಾಧನೆಯೆನ್ನಬೇಕೋ, ವ್ಯವಸ್ಥೆಯ ಸೋಲೆನ್ನಬೇಕೋ, ಪರಿಸ್ಥಿತಿಯ ಅಸಹಾಯಕತೆಯೆನ್ನಬೇಕೋ ತಿಳಿಯುತ್ತಿಲ್ಲ. ಹಾಗೆ ನೋಡಿದರೆ ಲಾಲುಗೆ ನಾಯಕನಿಗಿರಬೇಕಾದ ಆದರ್ಶಗಳಾಗಲಿ, ಅರ್ಹತೆಯಾಗಲಿ, ದಾರ್ಶನಿಕತೆಯಾಗಲಿ, ದೂರದೃಷ್ಟಿಯಾಗಲಿ ಇಲ್ಲವೇ ಇಲ್ಲ. ಸಾಮಾನ್ಯ ನಾಯಕನಿಂದ ನಿರೀಕ್ಷಿಸಬಹುದಾದ ಚಾಕಚಕ್ಯತೆ, ಚಮತ್ಕಾರಗಳೂ ಇಲ್ಲ. ಆದರೂ ಇವೆಲ್ಲ ‘ಬೇಕು’ ಗಳಿರುವ ನಾಯಕರಿಗಿಂತ ಲಾಲು ಎತ್ತರಕ್ಕೆ ಬೆಳೆದಿದ್ದಾನೆ. ಲಾಲುನ ರಾಜಕೀಯ ವರಸೆಗಳನ್ನು ಹತ್ತಿರದಿಂದ ನೋಡಿದರೆ ಆತ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದು ಘೋಷಣೆಯ ರಾಜಕಾರಣ, ರಂಜನೆಯ ರಾಜಕೀಯ.

ಆತ ಗಂಭೀರವಾಗಿ ಕುಳಿತು ರಾಜಕೀಯ ಮಾಡಿದ್ದೇ ಕಡಿಮೆ. ಮುಖ್ಯಮಂತ್ರಿಯಾದಾಗ ಮೇಷ್ಟ್ರು ಇಲ್ಲದ ಶಾಲೆಗೆ ಹೋಗಿ ಪಾಠ ಮಾಡಿ ಬಂದ. ಸರಕಾರಿ ಕೆಲಸಬೇಕು ಅಂದ್ರೆ ಜಾಸ್ತಿ ಓದಬೇಡಿ ಅಂದ. ಸರಕಾರಿ ಆಸ್ಪತ್ರೆಗೆ ಹೋಗಿ ಡ್ಯೂಟಿ ಮೇಲಿಲ್ಲದ ವೈದ್ಯರನ್ನು ಮನೆಗೆ ಕಳಿಸಿದ. ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಟ್ರಾಫಿಕ್‌ ಕಾನ್‌ಸ್ಟೇಬಲ್‌ನಂತೆ ನಿಂತ. ದಾರಿಯಲ್ಲಿ ಹೋಗುವ ವಾಹನಗಳಿಗೆ ಕೈ ಮಾಡಿ ದಾರಿ ತೋರಿಸಿದ. ದಾರಿಹೋಕರಿಗೆ ಬರಪೂರು ಮನರಂಜನೆ. ತರಕಾರಿ ಮಂಡಿಗೆ ಹೋಗಿ ಅವರನ್ನುದ್ದೇಶಿಸಿ ಮಾತಾಡಿದ. ಅವರೊಂದಿಗೆ ದಾರಿ ಬದಿಯಲ್ಲಿ ಕುಳಿತು ಊಟ ಮಾಡಿದ. ದಾರಿಯಲ್ಲಿ ಸೈರನ್‌ ಕೂಗಿಸಿ ಕೊಂಡು ಹೋಗುವಾಗ ಸಿಕ್ಕ ಸಿಕ್ಕ ಓಣಿಗಳಲ್ಲಿ ವಾಹನ ಓಡಿಸುವಂತೆ ಹೇಳುತ್ತಿದ್ದ ಆತ ನೂರಾರು ಮಂದಿ ಸೇರಿದ್ದ ಜಾಗದಲ್ಲಿ ನಿಂತು ಅವರೊಂದಿಗೆ ಹರಟೆ ಹೊಡೆದ. ಹೆಲಿಕಾಪ್ಟರ್‌ನಲ್ಲಿ ಹೋಗುವಾಗ ಯಾವುದೋ ಹಳ್ಳಿ ಕಂಡ ಕೊಡಲೇ ಅಲ್ಲಿ ಕೆಳಗಿಳಿಸಿ ಅವರಿಗೆಲ್ಲ ಹೆಲಿಕಾಪ್ಟರ್‌ ತೋರಿಸಿ ರಂಜಿಸಿದ. ಹಳ್ಳಿಯ ಕೆಲ ಹೈಕಳುಗಳನ್ನು ಹೆಲಿಕಾಪ್ಟರ್‌ನಲ್ಲಿ ಕೂರಿಸಿಕೊಂಡು ರೌಂಡು ಹೊಡೆಸಿದ. ತಾನು ಅಲ್ಲಿಯೇ ಉಳಿದು ಯಾರದೋ ಮನೆಯಲ್ಲಿ ಚಹ ಕುಡಿದ. ಪಕ್ಕದಲ್ಲಿದ್ದ ಎಮ್ಮೆ, ದನಕರುಗಳ ಮೇಲೆ ಕುಳಿತು ಫೋಟೊ ತೆಗೆಸಿಕೊಂಡ. ಹರಿಜನ ಕೇರಿಗೆ ನುಗ್ಗಿ ಬಡಪಾಯಿ ಮಕ್ಕಳನ್ನು ಕರೆದು ಅವರಿಗೆಲ್ಲ ಸ್ವತಃ ಎಣ್ಣೆ ಸವರಿ ಬಿಸಿನೀರು ಸ್ನಾನ ಮಾಡಿಸಿದ. ಕ್ಷೌರಿಕರನ್ನು ಕರೆದುಕೊಂಡು ಹೋಗಿ ಕೂದಲು ಕತ್ತರಿಸಿದ. ಆ ಕೇರಿಯಲ್ಲಿ ಬಿದ್ದ ಸೆಗಣಿಯನ್ನು ಸ್ವತಃ ಎತ್ತಿದ. ಅದೇ ಊರಿನ ಮರದ ಕೆಳಗೆ ತನ್ನ ಮಂತ್ರಿಗಳನ್ನೆಲ್ಲ ಸೇರಿಸಿಕೊಂಡು ಕ್ಯಾಬಿನೆಟ್‌ ಸಭೆ ಮಾಡಿದ. ಅಧಿಕಾರಿಗಳ ದಂಡು ಜತೆಯಲ್ಲಿರುತ್ತಿತ್ತು. ಪಾಟನಾ ಬೀದಿಯಲ್ಲಿ ಒಬ್ಬನೇ ಕಾಲ್ನಡಿಗೆಯಲ್ಲಿ ಹೊರಟ. ಚಕ್ಕಡಿಯೇರಿ ವಿಧಾನಸೌಧಕ್ಕೆ ಹೋದ. ಸದನದಲ್ಲಿ ಖೈನಿ ಅಗೆಯುತ್ತಾ ಕಾಲಕ್ಷೇಪ ಮಾಡಿದ. ಮನೆಗೆ ಹಾಕಿದ್ದ ಗೇಟುಗಳನ್ನು ಕಿತ್ತು ಹಾಕಿಸಿದ.ಎಲ್ಲರನ್ನೂ ಮನೆಯಾಳಗೆ ಬಿಟ್ಟುಕೊಂಡ.ಅವರೆಲ್ಲರನ್ನು ಸುತ್ತಾಕುಳ್ಳಿರಿಸಿಕೊಂಡು ದಿನಗಟ್ಟಲೆ ಹರಟೆ ಹೊಡೆದ. ಮನೆತುಂಬಾ ಹಸುಗಳನ್ನು ಸಾಕಿದ, ಮನೆಯ ಮೂಲೆಯಲ್ಲೊಂದು ಹಾಲುಡೇರಿ ತೆಗೆದ. ಗೊಬ್ಬರ ಮಾರಿದ. ರಾತ್ರಿಯೆಲ್ಲ ಭಾಂಗ್‌ ಕುಡಿಯುತ್ತಾ ಮೋಜು ಉಡಾಯಿಸಿದ. ದರೋಡೆಕೋರರು, ಮಾಫಿಯಾ ದೊರೆಗಳನ್ನು ಹತ್ತಿರಕ್ಕೆ ಬಿಟ್ಟುಕೊಂಡ.

ಲಾಲು ಬಹುಬೇಗ ಜನಪ್ರಿಯನಾಗಿಬಿಟ್ಟ !

ಈ ಎಲ್ಲ ಗಿಮಿಕ್ಕುಗಳನ್ನು ಜನ ಮೆಚ್ಚಿದರು. ಜನರ ಹತ್ತಿರಕ್ಕೆ ಹೋಗಲು, ಹತ್ತಿರಕ್ಕೆ ಸೆಳೆಯಲು ಇದು ಸಹಾಯಕವಾಯಿತು. ದುರ್ದೈವವೆಂದರೆ ಲಾಲು ಇದೊಂದನ್ನೇ ಮಾಡಿದ. ಹೀಗೆ ಮಾಡುವುದೇ ದಂಧೆಯಾಗಿ ಮಾಡಿಕೊಂಡ. ರಾಜ್ಯದ ಅಭಿವೃದ್ಧಿ ಹಳ್ಳ ಹಿಡಿದು ಹೋಯಿತು. ನಿರುದ್ಯೋಗ ಹೆಚ್ಚಿತು. ಸರಕಾರಿ ಯೋಜನೆಗಳೆಲ್ಲ ದಿಕ್ಕುದೆಸೆಯಿಲ್ಲದಾದವು. ಇಡೀ ಆಡಳಿತ ವ್ಯವಸ್ಥೆ ಕುಸಿಯಿತು. ಬಂಡವಾಳಷಾಹಿಗಳು ಬಿಹಾರ ತೊರೆಯತೊಡಗಿದರು. ಕಾನೂನು , ಸುವ್ಯವಸ್ಥೆ ಹದಗೆಟ್ಟಿತು. ಅಪಹರಣ ಕೆಲವರ ಕಸುಬಾಯಿತು. (ಈಗಂತೂ ಅದು ದೊಡ್ಡ ಉದ್ಯೋಗ ) ಎಲ್ಲ ರಂಗಗಳಲ್ಲೂ ಆಡಳಿತ ಕುಸಿದು ಬಿತ್ತು.

ಲಾಲು ಆಗ ಎತ್ತಿಕೊಂಡಿದ್ದು ಜಾತಿ ಮಂತ್ರ . ಬಿಹಾರ ಮೊದಲಿನಿಂದಲೂ ಜಾತಿ ವಿಷ ಬೀಜಕ್ಕೆ ಹೆಸರುವಾಸಿ. ಮೇಲ್ಬರ್ಗ-ದಲಿತರ ವಿರುದ್ಧ ಸದಾ ಕಾದಾಟ. ಲಾಲು ಬಂದ ಬಳಿಕ ಇದು ಜಾಸ್ತಿಯಾಯಿತು. ಆತ ಒಂದು ಜಾತಿಯನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟಿದ. ಆಡಳಿತಷಾಹಿಯೂ ಜಾತಿಮಯವಾಯಿತು. ಅಲ್ಪ ಸಂಖ್ಯಾತರ ಓಲೈಕೆ ಆಡಳಿತಷಾಹಿಯೂ ಜಾತಿಮಯವಾಯಿತು. ಅಲ್ಪ ಸಂಖ್ಯಾತರ ಓಲೈಕೆಯ ಮಹತ್ವ ಲಾಲುಗೆ ಅರಿವಾಗತೊಡಗಿತು. ಅಲ್ಪಸಂಖ್ಯಾತರ ಓಲೈಕೆಯ ಮಹತ್ವ ಲಾಲುಗೆ ಅರಿವಾಗತೊಡಗಿತು. ಮುಸ್ಲಿಮರು ಹಾಗೂ ಯಾದವರು ಬಿಹಾರದ ಜನಸಂಖ್ಯೆಯ ಶೇ. 28ರಷ್ಟಿರುವುದನ್ನು ಮನಗಂಡ ಆತ, ಈ ಎರಡನ್ನು ಸೇರಿಸಿ ಭದ್ರ ವೋಟ್‌ಬ್ಯಾಂಕ್‌ ಸ್ಥಾಪಿಸಿಕೊಂಡ. ಬಿಹಾರದಲ್ಲಿ ಏನೇ ಆಗಲಿ, ಮುಸ್ಲಿಮರು- ಯಾದವರು ಒಂದುಗೂಡಿದರೆ ಯಾರು ತಿಪ್ಪರಲಾಗ ಹಾಕಿದರೂ ಏನೂ ಮಾಡಲಾರರೆಂಬ ಸಂಗತಿ ಮನವರಿಕೆಯಾದ ಬಳಿಕ ಲಾಲು ಅದಕ್ಕೆ ಪೂರಕವಾಗಿ ಧೋರಣೆ ಬದಲಿಸಿಕೊಂಡ. ಮುಸ್ಲಿಮರನ್ನು ಓಲೈಸಲು ಏನೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡ.

ಇದರಿಂದ ಮುಸ್ಲಿಮರಿಗಾಗಲಿ, ಯಾದವರಿಗಾಗಲಿ ಪ್ರಯೋಜನ ವಾಯಿತಾ? ಖಂಡಿತಾ ಇಲ್ಲ. ಬಿಹಾರದ ಮುಸ್ಲಿಮರಿಗಿಂತ ಮಧ್ಯ ಪ್ರದೇಶ, ಛತ್ತೀಸ್‌ ಗಢ, ಜಾರ್ಖಡ್‌,ರಾಜಸ್ಥಾನ, ಉತ್ತರಪ್ರದೇಶ, ಆಂಧ್ರದ ಮುಸ್ಲಿಮರು ಎಷ್ಟೋ ವಾಸಿ. ಬಿಹಾರದ ಯಾದವರಿಗಿಂತ ಉತ್ತರ ಪ್ರದೇಶದ ಯಾದವರು ಬೇಷು. ಅಂದರೆ ಲಾಲು ಮುಸ್ಲಿಂ-ಯಾದವರಿಗಾಗಿ ಹಮ್ಮಿಕೊಂಡ ಯೋಜನೆಗಳೆಲ್ಲ ಬರೀಬಾಯಿಮಾತಿಗಷ್ಟೇ. ಕಾರ್ಯರೂಪಕ್ಕೆ ಬರಲೇ ಇಲ್ಲ. ಎರಡು ವರ್ಷಗಳ ಹಿಂದೆ ಮುಸ್ಲಿಮ್‌ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪ್ರವಾಸ ಭತ್ಯೆ, ಉನ್ನತ ಶಿಕ್ಷಣದಲ್ಲಿ ಶುಲ್ಕ ಮುಫತ್‌ ಯೋಜನೆ ಆರು ತಿಂಗಳು ಜಾರಿಯಾಗಿ, ಈಗ ಹಣವಿಲ್ಲದೇ ನಿಂತು ಹೋಗಿವೆ. ಈ ಯೋಜನೆಗಳ ಮಾತಿರಲಿ, ಸರಕಾರಿ ಸಿಬ್ಬಂದಿಗೆ ತಿಂಗಳ ತಿಂಗಳ ಪಗಾರ ಕೊಡಲು ಹಣವಿಲ್ಲದಂತಾಗಿದೆ.

ಇಷ್ಟಾಗಿಯೂ ಲಾಲು ಜನಪ್ರಿಯತೆ ಕಡಿಮೆಯಾಗಿಲ್ಲ. ಕಾರಣ ಆತನ ಮಂಗಾಟ, ತಿಕ್ಕಲುತನಗಳು ಕಡಿಮೆಯಾಗಲಿಲ್ಲ. ‘ನನ್ನ ಒಂದು ಹೇಳಿಕೆ ಪತ್ರಿಕೆ ಮುಖಪುಟ ಬದಲಿಸಬಹುದು’ ಎಂಬ ಮಾತು ಅಕ್ಷರಶಃ ನಿಜ. ‘ಮುಂದಿನ ಪ್ರಧಾನಿ ನಾನೇ’ ಎಂದು ಲಾಲು ಹೇಳಿಕೆ ಕೊಟ್ಟರೆ ಮರುದಿನದ ಪತ್ರಿಕೆಗಳಲ್ಲೆಲ್ಲ ಅದೇ ದೊಡ್ಡ ಸುದ್ದಿ. ಮುಖ್ಯಮಂತ್ರಿಯಾಗಿ ಲಾಲು ಏನು ಮಾಡಿದನೋ, ರೈಲು ಮಂತ್ರಿಯಾಗಿ ಕೂಡ ಅದೇ ಮಾಡುತ್ತಿದ್ದಾನೆ. ಹೀಗಾಗಿ ಆ ಬಗ್ಗೆ ಹೇಳಬೇಕಿಲ್ಲ.

ಲಾಲು ಮತ್ತೊಮ್ಮೆ ಚುನಾವಣೆಯ ಬಾಗಿಲ ಮುಂದೆ ನಿಂತಿದ್ದಾರೆ ಗೆದ್ದರೆ ಆತನಿಗೆ ಲಾಭ. ಸೋತರೆ ಬಿಹಾರಕ್ಕೆ ಲಾಭ. ಏನೇ ಆದರೂ ಲಾಭ ಗ್ಯಾರಂಟಿ. ಅದು ಯಾರಿಗೆ ಎಂಬುದು ಮುಖ್ಯ.

ನಿಜಕ್ಕೂ ಲಾಲು ನೆನಪಿನಲ್ಲಿ ಉಳಿಯುವ ರಾಜಕಾರಣಿ, ಕೆಲವು ಕೆಟ್ಟ ಕಾರಣಗಳಿಂದಾಗಿ !

ಬಿಹಾರದಲ್ಲಿ ಬುದ್ಧ ನಗುತ್ತಿಲ್ಲ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more