ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆತ್ತ ಕರುಳನ್ನು ಚೆಲ್ಲಿ ಹೋದ ಆ ತಾಯಿಯ ಸಂಕಟ ಏನಿತ್ತೋ?

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

‘ಇಪ್ಪತ್ನಾಲ್ಕು ವರ್ಷ ಕಳೆದರೂ ಆಕೆಗೆ ತನ್ನ ತಾಯಿ ಯಾರೆಂಬುದು ಗೊತ್ತಿಲ್ಲ. ಹುಡುಕುತ್ತಲೇ ಇದ್ದಾಳೆ ಇನ್ನೂ ಸಿಕ್ಕಿಲ್ಲ!’

ಮೊನ್ನೆ ದಿಲ್ಲಿಯಿಂದ ಬರುವಾಗ ‘ದಿ ಟ್ರಿಬ್ಯೂನ್‌’ಪತ್ರಿಕೆಯಲ್ಲಿ ಇಂಥದೊಂದು ಶೀರ್ಷಿಕೆ ಕಣ್ಣಿಗೆ ಬಿತ್ತು. ತನ್ನ ತಾಯಿಗಾಗಿ ಹಪಹಪಿಸುವ, ಅವಳ ನೆನಪಿನಲ್ಲಿ ಕಾತರಿಸುವ, ಹುಟ್ಟಿದಂದಿನಿಂದ ಅವಳ ಮುಖವನ್ನೇ ನೋಡದ ಬೇಗುದಿಯಲ್ಲಿ ಬಸವಳಿದ ಆಕೆಯ ಚಿತ್ರವೂ ಪ್ರಕಟವಾಗಿತ್ತು. ಮುದ್ದಾದ ಚೆಲುವೆ. ಕಣ್ಣುಗಳಲ್ಲಿ ಕಾಂತಿಯ ಗುಳಿಂಪು. ಸ್ನಿಗ್ಧ ಮುಖದ ಮೂಲೆಯಾಂದರಲ್ಲಿ ಪುಟ್ಟ ವಿಷಾದದ ಇಣುಕು. ತಾಯಿಯನ್ನು ಹುಡುಕುತ್ತಾ ಸ್ವೀಡನ್‌ನ ಸ್ಟಾಕ್‌ ಹೋಮ್‌ನಿಂದ ಚಂಡೀಗಢಕ್ಕೆ ಬಂದಿದ್ದಾಳೆ. ತಾಯಿಗಾಗಿ ಗಲ್ಲಿಗಲ್ಲಿ ಸುತ್ತುತ್ತಾಳೆ. ತಾನು ಬಂದಿರುವುದು ತಾಯಿಗೆ ಗೊತ್ತಾಗಲೆಂದು ಪತ್ರಿಕೆಗಳಲ್ಲಿ ಜಾಹೀರಾತು ಕೊಡುತ್ತಾಳೆ. ಉತ್ತರಕ್ಕಾಗಿ ಕಾದು ಕುಳಿತಿರುತ್ತಾಳೆ. ದಿನಗಳು ಉರುಳುತ್ತವೆ. ಫೋನು ಸದ್ದು ಮಾಡುವುದಿಲ್ಲ. ವಾಪಸು ಹೋಗುವ ದಿನಗಳು ಹತ್ತಿರ ಬರುತ್ತವೆ. ಭಾರವಾದ ಹೃದಯದೊಂದಿಗೆ ಸ್ವೀಡನ್‌ಗೆ ಮರಳುತ್ತಾಳೆ.

ಕಳೆದ ಎಂಟು ವರ್ಷಗಳಿಂದ ಆಕೆ ಹೀಗೇ ಮಾಡುತ್ತಿದ್ದಾಳೆ. ಪಾಪ, ಆಕೆಗೆ ತಾಯಿ ಮಾತ್ರ ಸಿಕ್ಕಿಲ್ಲ. ಇಪ್ಪತ್ತೆೈದರ ಹರೆಯದ ಆರತಿ ಆಲಿಯಾಸ್‌ ಜೋಹಾನಾ ಲಿಂಡ್‌ಬರ್ಗ್‌ ಇಷ್ಟಾದರೂ ಕೈಚೆಲ್ಲಿ ಕುಳಿತಿಲ್ಲ. ‘ಮುಂದಿನ ವರ್ಷ ಬರುತ್ತೇನೆ. ಪುನಃ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟು ನಾನು ಬಂದಿರುವ ವಿಷಯವನ್ನು ನನ್ನ ತಾಯಿಗೆ ಹೇಳುತ್ತೇನೆ. ಇಂದಲ್ಲ-ನಾಳೆ ಆಕೆ ನನ್ನನ್ನು ನೋಡಲು ಬಂದೇ ಬರುತ್ತಾಳೆ. ಆ ಸಮಯಕ್ಕಾಗಿ ಕಾಯಲು ನಾನು ಸಿದ್ಧ, ಅದೆಷ್ಟೇ ವರ್ಷಗಳಾಗಲಿ ಪರವಾಗಿಲ್ಲ’ ಎಂದು ವಿಮಾನವನ್ನೇರುವ ಮೊದಲು ಹೇಳುತ್ತಾ ಕಣ್ಣೊರೆಸಿಕೊಳ್ಳುತ್ತಾಳೆ.

1981ರ ಚಳಿಗಾಲದ ದಿನಗಳಿರಬಹುದು. ಜೋಹಾನಾಳ ತಾಯಿ ದೇಗುಲವೊಂದರ ಬಾಗಿಲ ಬಳಿ ಈಕೆಯನ್ನು ಮಲಗಿಸಿ ಕಣ್ಮರೆಯಾಗಿ ಬಿಟ್ಟಳು. ಕೆಲ ಸಮಯದ ಬಳಿಕ ಒಂದೇ ಸಮನೆ ಅಳುತ್ತಿದ್ದ ಮಗುವನ್ನು ದತ್ತು ಪಡೆಯಲೆಂದು ಸ್ವೀಡನ್‌ನ ದಂಪತಿಗಳು ಅನಾಥಾಶ್ರಮಕ್ಕೆ ಬಂದರು. ಅವರಿಗೆ ಇಷ್ಟವಾದ ಗಂಡುಮಗು ಸಿಗಲಿಲ್ಲ. ಆದರೆ ತಿಂಗಳ ಹಸುಗೂಸು ಆರತಿಯನ್ನು ಕಂಡ ಅವರು ತಮ್ಮ ನಿರ್ಧಾರ ಬದಲಿಸಿದರು. ಕಾನೂನಿನಂತೆ ಎಲ್ಲ ಶಿಷ್ಟಾಚಾರಗಳನ್ನು ಪೂರೈಸಿ ಆರತಿಯನ್ನು ದತ್ತು ಸ್ವೀಕರಿಸಿ ಸ್ವೀಡನ್‌ಗೆ ಕರೆದುಕೊಂಡು ಹೋದರು.

ಆರತಿ -ಜೋಹಾನಾ ಆದಳು. ಜೋಹಾನಾ ಲಿಂಡ್‌ಬರ್ಗ್‌ ಆದಳು. ಹದಿನೈದು ತುಂಬುವವರೆಗೂ ತನ್ನ ಸಾಕು ತಂದೆ-ತಾಯಿ ಬಗ್ಗೆ ಆಕೆಗೆ ಸ್ವಲ್ಪವೂ ಅನುಮಾನ ಸುಳಿಯಲಿಲ್ಲ. ಅಪ್ಪಟ ಸ್ವೀಡನ್‌ನವಳಂತೆ ಹಾಯಾಗಿದ್ದಳು. ಆದರೆ ಸ್ಟಾಕ್‌ ಹೋಮ್‌ನಲ್ಲಿ ಒಂದು ದಿನ ಈಕೆಯ ಬಣ್ಣ, ರೂಪ, ಚಹರೆ ಗಮನಿಸಿದ ಭಾರತೀಯ ಮಹಿಳೆಯಾಬ್ಬಳು ಅವಳ ಮೂಲದ ಬಗ್ಗೆ ಕುತೂಹಲ ತಾಳಲಾರದೇ ಆಕೆಯ ತಂದೆ-ತಾಯಿ ಬಳಿ ಹೋಗಿ ಕೇಳಿಯೇಬಿಟ್ಟಳು. ಅಲ್ಲಿಯತನಕ ಜೋಹಾನ್‌ಗೆ ಸಣ್ಣಪುಟ್ಟ ಅನುಮಾನಗಳಿದ್ದರೂ, ಕೆಲಬಾರಿ ತನ್ನ ನಿಜ ತಂದೆ-ತಾಯಿ ಇವರೇನಾ ಎಂಬ ಪ್ರಶ್ನೆ ಸುಳಿದು ಹೋಗಿದ್ದರೂ ಗಂಟಲಲ್ಲಿಯೇ ಮಾತುಗಳನ್ನು ನುಂಗಿಕೊಂಡಿದ್ದಳು. ಈ ಮಧ್ಯೆ, ಹದಿನೈದರ ಹೆಣ್ಣುಮಗಳಿಗೆ ಸೂಕ್ಷ್ಮಗಳು ಅರ್ಥವಾಗತೊಡಗಿದ್ದವು. ತನ್ನ ತಂದೆ-ತಾಯಿ ಭಾರತೀಯ ಮಹಿಳೆಯನ್ನು ನಯವಾಗಿ ಸಾಗಹಾಕಿದ ಪ್ರಸಂಗ ಆಕೆಯ ಮನಸ್ಸಿನಲ್ಲಿ ಮೊದಲೇ ಮೊಳೆಯಲಾರಂಭಿಸಿದ್ದ ಪ್ರಶ್ನೆಗಳನ್ನು ಗಟ್ಟಿಗೊಳಿಸಲಾರಂಭಿಸಿದ್ದವು.

ಒಂದು ದಿನ ಇದೇ ಪ್ರಶ್ನೆಗಳನ್ನು ತನ್ನ ತಂದೆ-ತಾಯಿಗಳ ಮುಂದಿಟ್ಟು ಕುಳಿತಾಗ, ಜೋಹಾನಾಳಿಗೆ ನಿಜ ಅಂಶ ತಿಳಿಯಿತು. ಲಿಂಡ್‌ಬರ್ಗ್‌ ದಂಪತಿ ಜೋಹಾನಾಳಿಂದ ಏನನ್ನೂ ಮುಚ್ಚಿಡಲಿಲ್ಲ. ಎಂಥ ಪರಿಸ್ಥಿತಿಯಲ್ಲಿ ಇಲ್ಲಿಗೆ ಕರೆದುಕೊಂಡು ಬರಲಾಯಿತು, ಪೂರ್ವಾಪರಗಳೇನೆಂಬುದನ್ನೆಲ್ಲ ಜೋಹಾನಾಳಿಗೆ ಹೇಳಿದ ಬಳಿಕ ಪ್ರವಾಹದ ಅಬ್ಬರಗಳೆಲ್ಲ ಇಳಿದು ಶಾಂತವಾದ ಸ್ಥಿತಿ!Johanna Lindberg

ಜೋಹಾನಾಳ ಮನಸ್ಸು ಭಾರತದ ಕಡೆ ಮುಖ ಮಾಡಿ ಕುಳಿತಿತ್ತು. ತಾಯಿಯನ್ನು ನೋಡುವ ಹಂಬಲ ಗಾಢವಾಗಿ ಕಾಡಲಾರಂಭಿಸಿತು. ಏನೋ ಕಳೆದುಕೊಂಡ ಭಾವ. ತನ್ನ ನಿಜ ತಾಯಿಯನ್ನು ಅರಸಿಕೊಂಡು ಸಾಕು ತಂದೆ-ತಾಯಿಯ ಜತೆ ಚಂಡೀಗಢಕ್ಕೆ ಬಂದಳು. ತಾಯಿ ತನ್ನನ್ನು ಬಿಟ್ಟು ಹೋದ ದೇಗುಲ, ಅಲ್ಲಿನ ಗಲ್ಲಿ ಗಲ್ಲಿ, ವಠಾರ-ವಠಾರ, ಬೀದಿ ಬೀದಿಗಳನ್ನು ಸುತ್ತಿದಳು. ಅನಾಥಾಶ್ರಮದಲ್ಲಿ ವಿಚಾರಿಸಿದಳು. ಪೊಲೀಸ್‌ ಠಾಣೆಯಲ್ಲಿ ಪ್ರವರ ಹೇಳಿಕೊಂಡಳು. ಸಾಕುತಂದೆಯ ಸ್ನೇಹಿತರ ಮುಂದೆ ಮನದ ಮಾತುಗಳನ್ನು ತೋಡಿಕೊಂಡಳು. ಏನೂ ಪ್ರಯೋಜನವಾಗಲಿಲ್ಲ. ಕೆಲವರು ಸಲಹೆ ಮಾಡಿದರು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ನೋಡಿ ಎಂದು. ಅದನ್ನೂ ಮಾಡಿದ್ದಾಯಿತು. ಪತ್ರಿಕೆಯಲ್ಲಿ ಜೋಹಾನಾಳ ಸಂದರ್ಶನ ಲೇಖನವನ್ನೂ ಪ್ರಕಟಿಸಿದ್ದಾಯಿತು. ಮಹಾತಾಯಿ ಸಿಗಲಿಲ್ಲ. ಕಳೆದ ಎಂಟುವರ್ಷಗಳಿಂದ ಜೋಹಾನಾ ತಂದೆ-ತಾಯಿ ಜತೆ ಸ್ವೀಡನ್‌ನಿಂದ ಚಂಡೀಗಢಕ್ಕೆ ಬಂದು ಹತ್ತು-ಹದಿನೈದು ದಿನಗಳ ಕಾಲ ಕುಳಿತುಕೊಳ್ಳುತ್ತಿದ್ದಾಳೆ. ತಾಯಿಗಾಗಿ ದಾರಿಕಾಯುತ್ತಾ ಕತ್ತು ಉದ್ದ ಮಾಡಿಕೊಂಡು ದಿನವಿಡೀ ಕುಳಿತುಕೊಳ್ಳುತ್ತಿದ್ದಾಳೆ.

ಇಲ್ಲ, ಸುಳಿವಿಲ್ಲ!

ಆದರೆ ಜೋಹಾನಾ ಆಸೆ ಬಿಟ್ಟಿಲ್ಲ. ‘ನನ್ನ ತಾಯಿ ಸಿಗದಿದ್ದರೂ ಪರವಾಗಿಲ್ಲ. ಆಕೆಯ ಚಿತ್ರವನ್ನಾದರೂ ನಾನು ನೋಡಬೇಕು. ನನ್ನ ತಾಯಿ ಮೇಲೆ ನನಗೆ ಬೇಸರವಿಲ್ಲ. ಪಾಪ ಆಕೆ ಅದೆಂಥ ಯಾತನೆ, ಅವಮಾನ, ದುಗುಡವನ್ನು ಅನುಭವಿಸಿದಳೋ ಏನೋ? ಇಲ್ಲದಿದ್ದರೆ ಹೆತ್ತ ಮಗುವನ್ನು ಚೆಲ್ಲಿ ಹೋಗುತ್ತಿದ್ದಳಾ?ಆಕೆ ಅಸಹನೀಯವಾದ ಭಯಂಕರ ಒತ್ತಡಕ್ಕೆ ಸಿಲುಕಿರಬೇಕು. ಒಂದೋ ಆಕೆ ಈ ಮೊದಲು ಹೆಣ್ಣು ಮಕ್ಕಳನ್ನು ಹೆತ್ತಿರಬೇಕು. ಮತ್ತೊಂದು ಕೂಡ ಹೆಣ್ಣೇ ಆಯಿತಲ್ಲಾ ಎಂಬ ಗಂಡನ ಮನೆಯವರ ಮೂದಲಿಕೆಗೆ ಅಂಜಿ ನನ್ನನ್ನು ಬಿಟ್ಟು ಹೋಗಿರಬೇಕು. ಇಲ್ಲವೇ ಮದುವೆಗಿಂತ ಮೊದಲೇ ನನ್ನನ್ನು ಹೆತ್ತಿದ್ದಕ್ಕೆ ಸಮಾಜದ ‘ನಂಜಿನ ಬಾಣ’ಗಳನ್ನು ಎದುರಿಸಲಾಗದೇ ನನ್ನನ್ನು ಬಿಸಾಡಿ ಹೋಗಿರಬೇಕು.ಇವನ್ನು ಬಿಟ್ಟರೆ ನನಗೆ ಬೇರಾವ ಕಾರಣಗಳೂ ತೋಚುತ್ತಿಲ್ಲ’ ಅಂತಾಳೆ ಜೋಹಾನಾ.

ಜೋಹಾನಾ ತನ್ನ ಸಾಕು ತಂದೆ-ತಾಯಿ ಜತೆ ಸುಖದಿಂದ ಇದ್ದಾಳೆ. ಆದರೆ ಅವಳ ದುಗುಡ ತನ್ನ ನಿಜ ತಾಯಿ ಹೇಗಿದ್ದಾಳೋ ಏನೋ ಎಂಬುದು. ಆಕೆಗಾಗಿ ತಲಾಷ್‌ ಮಾಡುವುದರಿಂದ ತಾಯಿಗೆ ಮುಜುಗರವಾಗಬಹುದಾ ಎಂಬ ಸಣ್ಣ ಆತಂಕವೂ ಜೋಹಾನಾಗಿದೆ.

ಇಲ್ಲದಿದ್ದರೆ ಒಂದು ವೇಳೆ ಆಕೆ ಬದುಕಿದ್ದರೆ, ಖಂಡಿತವಾಗಿಯೂ ತನ್ನನ್ನು ನೋಡಲು ಬರುತ್ತಿದ್ದಳು ಅಥವಾ ಆಕೆ ಪತ್ರಿಕೆಯನ್ನೂ ಓದದ ಅನಕ್ಷರಸ್ಥೆಯಾ? ಆಕೆ ಚಂಡೀಗಢವನ್ನು ಬಿಟ್ಟು ಬೇರೆ ಊರಿಗೆ ಹೋಗಿ ನೆಲೆಸಿರಬಹುದಾ?ತನ್ನನ್ನು ಹೆತ್ತು ದೇವರ ಪಾದಕ್ಕೆ ಅರ್ಪಿಸಿ ಕಳಂಕಕ್ಕೆ ಕಳವಳಗೊಂಡು ಆತ್ಮಹತ್ಯೆ ಮಾಡಿಕೊಂಡಳಾ?

ಅಥವಾ ನನ್ನಂತೆ ಆಕೆಯೂ ನನಗಾಗಿ ಹುಡುಕುತ್ತಿರಬಹುದಾ?ತನ್ನನ್ನು ನೋಡಿಯೂ ಭಾವನೆಗಳನ್ನು ಅದುಮಿಟ್ಟುಕೊಂಡು ಸುಮ್ಮನೆ ಕುಳಿತಿರಬೇಕಾದ ಅನಿವಾರ್ಯತೆ, ಸಂಕಟಗಳಿಂದ ತೊಳಲಾಡುತ್ತಿರಬಹುದಾ? ದೈಹಿಕ ಸುಖ, ಹಣಕ್ಕಾಗಿ ಮೈ ಕೊಟ್ಟು ಬಸುರಿಯಾದ ತಪ್ಪಿಗೆ ಹೆತ್ತ ಮಗುವನ್ನು ಬಿಸುಟಿ ಹೋಗುವಷ್ಟು ನನ್ನ ತಾಯಿ ಹೃದಯಹೀನಳಾ, ಕಟುಕಿಯಾ? ಪ್ರಶ್ನೆಗಳು ಆಕೆಯನ್ನು ಕಿತ್ತು ತಿನ್ನುತ್ತಿವೆ. ಅದೇನೇ ಇರಲಿ, ತಾಯಿಯ ಹಂಬಲ ಒಳ್ಳೆಯದಿದ್ದಿರಬೇಕು. ಹೇಗಾದರೂ ನಾನು ಬದುಕಲೆಂದು ದೇವರ ಪಾದಕ್ಕೆ ಅರ್ಪಿಸಿ ಹೋದಳು. ಒಂದಂತೂ ನಿಜ. ಕೆಟ್ಟ ತಾಯಿ ಮಾತ್ರ ಈ ಭೂಮಿ ಮೇಲೆ ಇಲ್ಲ ಅಂತಾರಲ್ಲ ಹೀಗಾಗಿ ನಾನು ನನ್ನ ತಾಯಿಯ intention ಅನ್ನು ಅನುಮಾನಿಸುವುದಿಲ್ಲ. ಒಂದು ವೇಳೆ ಆಕೆಗೆ ನನ್ನನ್ನು ಎದುರಿಸುವ ಧೈರ್ಯವಿಲ್ಲದಿದ್ದರೆ, ನಾನು ಜಾಹೀರಾತಿನಲ್ಲಿ ನೀಡುವ ನಂಬರಿಗೆ ಒಂದು ಫೋನ್‌ ಮಾಡಲಿ, ನನ್ನ ಜೀವನ ಧನ್ಯ.

ಹಾಗಂತಾಳೆ ಜೋಹಾನಾ.

ಹೆಣ್ಣು ಮಗಳು ತಾಯಿಗಾಗಿ ಅದೆಷ್ಟು ಚಿಂತಿಸುತ್ತಿರಬಹುದು, ಕಾತರಿಸುತ್ತಿರಬಹುದು, ಯೋಚಿಸುತ್ತಿರಬಹುದು? ಯಾವುದೇ ಅನಾಥಾಶ್ರಮದಲ್ಲಿರುವ ಮುಖಗಳನ್ನು ನೋಡಿ, ಆ ಮುಖಗಳ ಮೇಲೊಂದು ಪ್ರಶ್ನಾರ್ಥಕ ಚಿಹ್ನೆಯಾಗಿ ಮೂಡಿರುತ್ತದೆ- ನನ್ನ ತಂದೆ, ತಾಯಿ ಯಾರು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಹೋರಾಟ ಜೀವನದುದ್ದಕ್ಕೂ ನಡೆದಿರುತ್ತದೆ. ಅವರಲ್ಲಿ ಕೆಲವರು ಮಾತ್ರ ಭಾಗ್ಯಶಾಲಿಗಳು. ಉಳಿದವರ ಪಾಡು ಬೇಡ ಬಿಡಿ. ಜೋಹಾನಾಳಿಗೆ ಆಕೆ ಹುಡುಕುತ್ತಿರುವ ಹೆಂಗಸು ಸಿಗಲಿ ಹಾಗೂ ಆಕೆ ಜೋಹಾನಾಳ ತಾಯಿಯೇ ಆಗಿರಲಿ ಎಂಬ ಹಾರೈಕೆಯಾಂದಿಗೆ ಮನಸ್ಸನ್ನು ಕೊಡವಿಕೊಳ್ಳುತ್ತಿರುವಾಗ ಮೈಸೂರಿನಿಂದ ಸ್ನೇಹಿತ ಮಹೇಶ ಕೊಳ್ಳೇಗಾಲ ಕಳಿಸಿದ ಒಂದು ಇ-ಮೇಲ್‌ ಪುಟ್ಟ ಅಚ್ಚರಿ ಮೂಡಿಸಿತು.

ಲಂಡನ್‌ನ ಹದಿನೈದು ವರ್ಷದ ಬಾಲಕನಿಗೆ ಅವನು ಹುಡುಕುತ್ತಿದ್ದ ಅವನ ಅಪ್ಪ (15ವರ್ಷಗಳ ಬಳಿಕ) ಸಿಕ್ಕಿದನಂತೆ! ಈ ಬಾಲಕನಿಗೆ ತನ್ನ ತಂದೆ ಯಾರೆಂಬುದು ಗೊತ್ತಿರಲಿಲ್ಲ. ಪದೇ ಪದೆ ತಾಯಿಯನ್ನು ಪೀಡಿಸುತ್ತಿದ್ದ. ಕೊನೆಗೊಂದು ದಿನ ಆಕೆ ಸತ್ಯವನ್ನು ಬಹಿರಂಗಪಡಿಸಿದಳು-ದಾನಿಯಾಬ್ಬನ ವೀರ್ಯಾಣ (Sperm)ಗಳಿಂದ ತಾನು ಗರ್ಭಧರಿಸಿದ್ದಾಗಿ ತಿಳಿಸಿದಳು. ಈ ದಾನಿ ಯಾರೆಂಬುದನ್ನು ಪತ್ತೆಹಚ್ಚುವುದು ಹೇಗೆ? ಬಾಲಕ ಬಿಡಲಿಲ್ಲ. Family Tree DNA.com ಸಂಪರ್ಕಿಸಿದ. ಡಿಎನ್‌ಎ ಪರೀಕ್ಷೆಗೊಳಗಾದ, ಇಂಟರ್‌ನೆಟ್‌ ಸರ್ಚ್‌ನಿಂದ ವೀರ್ಯಾಣು ದಾನಿಗಳ ಪಟ್ಟಿಯನ್ನು ಸಂಗ್ರಹಿಸಲಾಯಿತು.

ತನ್ನ ವಾಯ್‌(Y)ವರ್ಣತಂತು (chromosome)ವಿನಿಂದ ಅವನ ತಂದೆಯ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿತು. ಕಟ್ಟಕಡೆಗೆ ಮೂವರನ್ನು short list ಮಾಡಲಾಯಿತು. ಅಚ್ಚರಿಯೆಂದರೆ ಅವನ ಹೆಸರಿನ ಸ್ಟೆಲ್ಲಿಂಗ್‌ ಬೇರೆಯಾಗಿದ್ದರೂ ಹೆಸರು ಒಂದೇ ಆಗಿತ್ತು. ಈ ದಾನಿಯ ಹೆಸರನ್ನು ಗೌಪ್ಯವಾಗಿಡಲಾಗಿದ್ದರೂ, ತಾಯಿಗೆ ಅವನ ಜನ್ಮದಿನಾಂಕ, ಹುಟ್ಟಿದ ಊರು, ಕಾಲೇಜು ಡಿಗ್ರಿ, ಮೈಕಟ್ಟು, ವ್ಯಕ್ತಿತ್ವದ ಬಗ್ಗೆ ಮಾಹಿತಿ ನೀಡಲಾಗಿತ್ತು. Omnitrace.com ಸೇವೆ ಬಳಸಿಕೊಂಡು ಅದೇ ದಿನ, ಅದೇ ಊರಿನಲ್ಲಿ ಹುಟ್ಟಿದವರ ವಿವರಗಳನ್ನು ಪಡೆಯಲಾಯಿತು. Short listಮಾಡಿದ ಮೂವರ ಪೈಕಿ ಒಬ್ಬನ ಸರ್‌ನೇಮ್‌, ಇತರ ಮಾಹಿತಿಎಲ್ಲ ರೀತಿಯಿಂದಲೂ ತಾಳೆಯಾಯಿತು. ಸರಿ, ಹತ್ತು ದಿನಗಳಲ್ಲಿ ನಿಜವಾದ ತಂದೆಯನ್ನು ಪತ್ತೆ ಹಚ್ಚಲಾಯಿತು. ಬಾಲಕನಿಗೆ ತಂದೆ ಸಿಕ್ಕಿದ್ದ! ಬಾಲಕನ ತಾಯಿಗೆ ಬಾಡಿಗೆ ಗಂಡ ಸಿಕ್ಕಿದ್ದ !!

ಯಾರ್ಯಾರು ಯಾವಾಗ ಎಲ್ಲೆಲ್ಲಿ ಅಡಗಿರುತ್ತಾರೋ ‘ಕಾಣೆ’.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X