• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ದರಿದ್ರ ವ್ಯವಸ್ಥೇನ ಬದಲಿಸಲು ಆಗೊಲ್ಲ ಎನ್ನುವವರು ಕೈ ಎತ್ತಿ ಪ್ಲೀಸ್‌!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಸಾಕ್ಷಾತ್‌ ಆ ಭಗವಂತನೇ ಬಂದರೂ ಈ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಅದು ಆ ಪರಿ ಹದಗೆಟ್ಟಿದೆ.

ಹಾಗಂತ ನಾವು ನಿತ್ಯವೂ ಗೊಣಗುಡುತ್ತೇವೆ. ಕೇವಲ ನಮ್ಮ ಅನಿಸಿಕೆಯಲ್ಲ. ಇದು ನಮ್ಮ ನಿರ್ಧಾರವೆನ್ನುವ ಹಂತಕ್ಕೆ ಬಂದುಬಿಟ್ಟಿದ್ದೇವೆ. ನಮ್ಮ ರಾಜಕೀಯ, ಆಡಳಿತ, ಚುನಾವಣೆ ಪದ್ಧತಿ ಬಗ್ಗೆ ಯಾರನ್ನೇ ಕೇಳಿ, ಅವರೂ ಸಹ ಹೇಳುವುದೂ ಹೀಗೇನೇ. ನಮ್ಮ ವ್ಯವಸ್ಥೆ ಸುಧಾರಿಸಬೇಕೆಂಬ ನಮ್ಮೆಲ್ಲ ಸಂಕಲ್ಪಗಳೆಲ್ಲವನ್ನೂ ಪಂಕ್ಚರ್‌ ಮಾಡಲು ಇದೊಂದು ಮಾತು ಸಾಕು. ಸಾಕ್ಷಾತ್‌ ದೇವರೇ ಬಂದರೂ ಆಗೊಲ್ಲ ಕಣ್ರೀ ಎಂದು ಆಗಾಗ ಹಲುಬುತ್ತೇವೆ.

ಅದು ಸ್ವಲ್ಪ ಮಟ್ಟಿಗೆ ನಿಜಾ ಕೂಡ. ಏಕೆಂದರೆ ಈ ವ್ಯವಸ್ಥೆ ರಿಪೇರಿಯಾಗದಷ್ಟು ಹದಗೆಟ್ಟಿದೆ. ವ್ಯವಸ್ಥೆ ಸುಧಾರಿಸೀತೆಂಬ ಪುಟ್ಟ ಆಸೆಯೂ ನಮ್ಮಲ್ಲಿ ಉಳಿದಿಲ್ಲ. ಇಂಥ ನೀರಸ ವಾತಾರವಣದಲ್ಲಿ ಯಾವನಾದರೂ ತಾನು ಈ ವ್ಯವಸ್ಥೆಯನ್ನು ಸರಿ ಮಾಡುತ್ತೇನೆಂದು ಮೈಕೊಡವಿ ಎದ್ದುನಿಂತರೆ ಆತನೆಡೆಗೆ ಒಂದು ‘ಗುಡ್‌ಲಕ್‌’ಹೇಳಬಹುದೇ ಶಿವಾಯ್‌, ಮತ್ತೇನು ಮಾಡಲೂ ಸಾಧ್ಯವಿಲ್ಲ. ನಮಗೂ ಗೊತ್ತು ಅವನಿಂದೇನೂ ಆಗುವುದಿಲ್ಲ ಎಂದು. ಆದರೂ ಉತ್ಸಾಹಕ್ಕೆ ತಣ್ಣೀರೆರಚಬಾರದೆಂದು ವ್ಯಂಗ್ಯಮಿಶ್ರಿತ ಗುಡ್‌ಲಕ್‌ ಹೇಳಿ ಸುಮ್ಮನಾಗುತ್ತೇವೆ.

ಕೆಲ ದಿನಗಳ ಬಳಿಕ, ವ್ಯವಸ್ಥೆ ಸುಧಾರಿಸುತ್ತೇನೆಂದು ಹೋದವನು ಕೈಚೆಲ್ಲಿ ಬಂದಾಗ ‘ ನಾನು ಹೇಳಲಿಲ್ವಾ, ಇವೆಲ್ಲ ಆಗೊಲ್ಲ ಅಂತ. ನನ್ನ ಮಾತನ್ನು ಕೇಳಿದ್ಯಾ ನೀನು?’ಎಂದು ಹಂಗಿಸುತ್ತೇವೆ. ಹೀಗಾಗಿ ಹದಗೆಡುವ ವ್ಯವಸ್ಥೆಯನ್ನು ನಾವು ನಿಯಂತ್ರಿಸುವುದೂ ಇಲ್ಲ, ಹದಗೆಟ್ಟಿದ್ದನ್ನು ಸುಧಾರಿಸಲೂ ಆಗುವುದಿಲ್ಲ. ಸಮಾಜ, ವ್ಯವಸ್ಥೆ ಸುಧಾರಣೆ ಕೆಲಸ ಅಂದ್ರೆ ನಗೆಪಾಟಲಿಗೆ ಈಡಾಗುವಂತಾಗಿದೆ. ಹೀಗಾಗಿ ಈ ವಿಷಯ ಬಂದಾಗಲೆಲ್ಲ ‘ಆ ಭಗವಂತನೇ ಬಂದ್ರೂ...’ ಎಂದು ಹೇಳಿ ಸುಮ್ಮನಾಗುತ್ತೇವೆ, ಸುರಕ್ಷಿತವಾಗಿ.

ಅವರೂ ಸಹ ಹಾಗೇ ಹೇಳಬಹುದಿತ್ತು. ಕಾರಣ ತಾನು ವ್ಯವಸ್ಥೆ ಸುಧಾರಿಸುತ್ತೇನೆಂದು ಹೇಳಿದಾಗ ಅವರ ಮಾತನ್ನು ಕೇಳಿ ಎಲ್ಲರೂ ಗೇಲಿ ಮಾಡಿದ್ದರು. ಜನರೇನು ಬೇಕಾದರೂ ಹೇಳಲಿ ಆದರೆ ತಾನು ಮಾತ್ರ ಈಗಿನ ಭ್ರಷ್ಟ. ಅನೈತಿಕ ವ್ಯವಸ್ಥೆಯನ್ನು ಸಂಪೂರ್ಣ ಬದಲಿಸುವುದು ನಿಶ್ಚಿತ ಎಂದು ದೃಢಸಂಕಲ್ಪ ಗೈದರು. ಬೇರೆ ಯಾರಿಂದಲೂ ಸಾಧ್ಯವಾಗದ, ಸಾಧ್ಯವಾಗಬಹುದೆಂದು ಊಹಿಸಲೂ ಆಗದ ಕೆಲಸವನ್ನು ಯಶಸ್ವಿಯಾಗಿ ಮಾಡಿತೋರಿಸಿದರು. ಅಕ್ಷರಶಃ ಆ ಭಗವಂತನೇ ಬಂದರೂ ಸರಿಪಡಿಸಲಾಗದ್ದನ್ನು ತಮ್ಮ ಮಾಂತ್ರಿಕ ಸ್ಪರ್ಶದಿಂದ ಸರಿಪಡಿಸಿ ತೋರಿಸಿದರು.

ಕೆ.ಜೆ.ರಾವ್‌!

ಮೊನ್ನೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯನ್ನು ಶಾಂತಿಯುತವಾಗಿ, ನ್ಯಾಯಸಮ್ಮತವಾಗಿ, ನಿರ್ಭೀತಿಯಿಂದ ನಡೆಸಿದ ಛಲಗಾರ. ಹಾಗೆ ನೋಡಿದರೆ ಈ ಚುನಾವಣೆಯಲ್ಲಿ ಗೆದ್ದಿದ್ದು ನಿತೀಶ್‌ಕುಮಾರ್‌ ಅಲ್ಲವೇ ಅಲ್ಲ. ನಿಜವಾಗಿ ಗೆದ್ದಿದ್ದು ರಾವ್‌. ನಿಜವಾದ ಹೀರೊ ನಂಬರ್‌ ಒನ್‌ -ಕೆ.ಜೆ.ರಾವ್‌. ಲಾಲೂ ಪ್ರಸಾದ್‌ಯಾದವ್‌ನಂಥ ಭ್ರಷ್ಟರಾಜಕಾರಣಿಗಳನ್ನು, ಶಹಾಬುದ್ದೀನ್‌, ಸಾಧುಯಾದವ್‌ನಂಥ ಪರಮಪಾತಕಿಗಳನ್ನು ಸೋಲಿಸಿದವರು ಇದೇ ರಾವ್‌!

ಹದಿನೈದು ವರ್ಷಗಳ ಲಾಲೂ-ರಾಬ್ದಿ ದುರಾಡಳಿತದಿಂದ ಬಿಹಾರ ಜರ್ಝರಿತವಾಗಿತ್ತು. ನಾಗರಿಕ ಸಮಾಜದ ಯಾವ ರೀತಿ-ರಿವಾಜುಗಳಿಗೆ, ಕಾನೂನುಗಳಿಗೆ ಅಲ್ಲಿ ಬೆಲೆ ಇರಲಿಲ್ಲ. ಅಕ್ಷರಶಃ ಜಂಗಲ್‌ ರಾಜ್‌. ಕೊಲೆ, ಹಿಂಸೆ, ದರೋಡೆ, ಅತ್ಯಾಚಾರ, ಅನಾಚಾರಗಳಿಗೆ ಕೊನೆಯೆಂಬುದೇ ಇರಲಿಲ್ಲ. ದುರ್ದೈವವೆಂದರೆ ಈ ಹೀನಾತಿಹೀನ ಕೃತ್ಯಗಳಲ್ಲಿ ತೊಡಗಿದವರೇ ಅಧಿಕಾರ ಹಿಡಿದು ಕುಳಿತಿದ್ದರು. ಪರಿಸ್ಥಿತಿ ಹೇಗಾಗಿರಬೇಡ ಒಂದು ಕ್ಷಣ ಯೋಚಿಸಿ. ಅಲ್ಲಿ ಆಸೆ, ನಿರೀಕ್ಷೆ, ಭರವಸೆಗಳೇ ಇರಲಿಲ್ಲ. ಎಲ್ಲ ಕೈಚೆಲ್ಲಿ ಕುಳಿತಿದ್ದರು. ಯಾರೇ ಬಂದರೂ ಏನೂ ಮಾಡಲಾರರೆಂಬ ಭಾವನೆ.

ಎಲ್ಲ ಭ್ರಷ್ಟ ವ್ಯವಹಾರಗಳಿಗೂ ಮೂಲವಾದ ಚುನಾವಣೆ ನಡೆಯುತ್ತಿರಲಿಲ್ಲ. ಚುನಾವಣೆ ರಾಜಕೀಯ ಬಿಹಾರದಲ್ಲಿ ಅಸಹ್ಯರೂಪ ಪಡೆಯುವಷ್ಟು ಬೇರೆಲ್ಲೂ ಪಡೆಯುತ್ತಿರಲಿಲ್ಲ. ಅದರಲ್ಲೂ ಈ ಸಲ ಅಧಿಕಾರ ಕಳೆದುಕೊಂಡ ಬಳಿಕ ಲಾಲೂ ಅಕ್ಷರಶಃ ಹುಚ್ಚನಂತಾಗಿದ್ದ. ಬಿಹಾರದಲ್ಲಿ ಗೆಲ್ಲದೇ, ದಿಲ್ಲಿಯಲ್ಲಿ ತನ್ನ ಆಟ ನಡೆಯದೆಂಬುದು ಆತನಿಗೆ ಮನವರಿಕೆಯಾಗಿತ್ತು. ಅಲ್ಲದೇ ಆತನಿಗೆ ಪಾಸ್ವಾನ್‌, ನಿತೀಶ್‌ ಪ್ರಬಲ ಸ್ಪರ್ಧೆಯಾಡ್ಡಿದ್ದರು. ಇವರ್ಯಾರೂ ಸುಬಗರೇನಲ್ಲ. ಅಧಿಕಾರ ಸಿಕ್ಕಿಲ್ಲ ಎಂಬುದನ್ನು ಬಿಟ್ಟರೆ ಹೆಚ್ಚು ಕೆಟ್ಟವರಲ್ಲ ಅಷ್ಟೆ. ಆದರೆ ಇವರೆಲ್ಲ ಸೇರಿ ಚುನಾವಣೆಯನ್ನು ಸಂಪೂರ್ಣ ರಕ್ತ ಸಿಕ್ತಗೊಳಿಸಿದ್ದರು. ಈ ಬಾರಿ ಎಲ್ಲರೂ ಅಧಿಕಾರಕ್ಕೆ ಹಸಿದು ಕಾದು ಕುಳಿತವರೇ. ಹೀಗಾಗಿ ಈ ಸಲದ ಚುನಾವಣೆ ಎಲ್ಲರಿಗೂ ನಿರ್ಣಾಯಕವಾಗಿತ್ತು.

ಚುನಾವಣೆ ನಡೆಸುವುದು ಸುಲಭದ ಮಾತಾಗಿರಲಿಲ್ಲ. 1990ರ ಅಸೆಂಬ್ಲಿ ಚುನಾವಣೆಯಲ್ಲಿ 96ಮಂದಿ ಸತ್ತಿದ್ದರು. 1995ರಲ್ಲಿ 54ಮಂದಿ. ನಾಲ್ಕು ವರ್ಷಗಳ ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ 74ಮಂದಿ ಸತ್ತಿದ್ದರು. ಮರು ವರ್ಷದ ಅಸೆಂಬ್ಲಿ ಚುನಾವಣೆಯಲ್ಲಿ 61 ಮಂದಿ ಹತರಾಗಿದ್ದರು. ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ (2001) ಯಲ್ಲಂತೂ 225ಕ್ಕೂ ಹೆಚ್ಚು ಮಂದಿ ಸತ್ತಿದ್ದರು. ಇವರೆಲ್ಲ ಚುನಾವಣೆ ಸಂಬಂಧಿ ಹಿಂಸಾಚಾರದಲ್ಲಿ ಸತ್ತವರೇ.

ಟಿ.ಎನ್‌. ಶೇಷನ್‌ ಮುಖ್ಯ ಚುನಾವಣೆ ಆಯುಕ್ತರಾಗಿ ಎಲ್ಲೆಡೆ ಯಶಸ್ವಿ ಚುನಾವಣೆ ನಡೆಸಿದರೂ ಅವರಿಗೆ ಬಿಹಾರದಲ್ಲಿ ಏಳು ಹನ್ನೊಂದು ಆಗಿತ್ತು. ಲಾಲೂ, ಶೇಷನ್‌ ವಿರುದ್ಧ ಬಹಿರಂಗ ಕಾದಾಟಕ್ಕೆ ನಿಂತಿದ್ದ. ಇಂಥ ಬಿಹಾರದಲ್ಲಿ ಯಾರೂ ಚುನಾವಣೆಗೆ ಧೈರ್ಯ ಮಾಡುತ್ತಿರಲಿಲ್ಲ. ಚುನಾವಣಾ ಆಯೋಗಕ್ಕೆ ಈ ಸಲದ ಚುನಾವಣೆ ದೊಡ್ಡ ಸವಾಲಾಗಿತ್ತು. ಯಾರನ್ನು ಈ ಕೆಲಸಕ್ಕೆ ಹಚ್ಚಬೇಕೆಂದು ಚಿಂತಿಸುತ್ತಿರುವಾಗಲೇ ನೆನಪಾದವರು ಕೆ.ಜೆ.ರಾವ್‌.

ಮೂಲತಃ ರಾವ್‌ ಆಂಧ್ರದವರು. 38 ವರ್ಷಗಳಿಂದ ಚುನಾವಣಾ ಆಯೋಗದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಪ್ರಾಮಾಣಿಕ, ದಿಟ್ಟ, ನೇರ, ಸರಳ ಅಧಿಕಾರಿಗಳೆಂದು ಹೆಸರು ಮಾಡಿದವರು. ನಿವೃತ್ತರಾಗಿ ಐದು ವರ್ಷಗಳಾದರೂ ಚುನಾವಣಾ ಆಯೋಗಕ್ಕೆ ಅವರ ಸೇವೆ ಇಂದಿಗೂ ಬೇಕು. ಅವರು ಆಯೋಗದ ವಿಶೇಷ ಸಲಹೆಗಾರರು. 2002ರಲ್ಲಿ ಜಮ್ಮು-ಕಾಶ್ಮೀರ ಅಸೆಂಬ್ಲಿ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಅಗ್ಗಳಿಕೆಗೆ ಪಾತ್ರರಾದರು. ಭಯೋತ್ಪಾದನೆಯನ್ನು ಮಗ್ಗುಲಲ್ಲಿ ಇರಿಸಿಕೊಂಡು ರಕ್ತರಹಿತ ಚುನಾವಣೆ ನಡೆಸಿದವರು. ಬಿಹಾರ ಚುನಾವಣೆಯನ್ನು ಯಾರಿಗೆ ವಹಿಸಬೇಕೆಂಬ ಪ್ರಶ್ನೆ ಬಂದಾಗ ಚರ್ಚಿತವಾಗಿದ್ದು ಒಂದೇ ಹೆಸರು- ರಾವ್‌.

ಇಂಥ ರಾವ್‌ ಪಾಟ್ನಾಕ್ಕೆ ಬಂದಿಳಿದಾಗ ಅವರು ಅದ್ಭುತ ಪರಿವರ್ತನೆಗೆ ಕಾರಣರಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಬಂದವರೇ ರಾವ್‌ ಸದ್ದುಗದ್ದಲವಿಲ್ಲದೆ ಎಲ್ಲ ಜಿಲ್ಲೆಗಳಲ್ಲಿ ಸುತ್ತಾಡಿದರು. 243 ವಿಧಾನ ಸಭೆ ಕ್ಷೇತ್ರಗಳ ಪೈಕಿ ಕೇವಲ ಎರಡು ತಿಂಗಳ ಅವಧಿಯಲ್ಲಿ 200 ಕ್ಷೇತ್ರಗಳಲ್ಲಿ ಸಂಚರಿಸಿದರು. ಮತದಾರರನ್ನು ಭೇಟಿ ಮಾಡಿದರು. ಅಧಿಕಾರಿಗಳ ಜತೆ ಚರ್ಚಿಸಿದರು. ರಾಜಕೀಯ ನಾಯಕರನ್ನು ಭೇಟಿ ಮಾಡಿ ತಮ್ಮ ಮನಸ್ಸಿನ ಇಂಗಿತವನ್ನು ಸ್ಪಷ್ಟಪಡಿಸಿದರು. ಇಡೀ ಪರಿಸ್ಥಿತಿ ಅರಿತುಕೊಳ್ಳುವುದು ಅವರ ಉದ್ದೇಶವಾಗಿತ್ತು.

ಅನಂತರ ರಾವ್‌ ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲಾರಂಭಿಸಿದರು. ಗಂಗಾ ನದಿಯನ್ನು ಕಾಶಿಯಲ್ಲಿ ಶುದ್ಧೀಕರಿಸುವ ಬದಲು ಗಂಗೋತ್ರಿಯಲ್ಲಿಯೇ ಸ್ವಚ್ಛಗೊಳಿಸಲು ಅವರು ನಿರ್ಧರಿಸಿದರು. ಮೊಟ್ಟ ಮೊದಲು ಮತದಾರರ ಪಟ್ಟಿ ಪರಿಷ್ಕರಣೆಗೆ ಕುಳಿತರು. ಅದೇ ದೊಡ್ಡ ಕರ್ಮಕಾಂತ. ಸುಮಾರು 22ಲಕ್ಷ ನಕಲಿ ಮತದಾರರು ಗೋಚರಿಸಿದರು. ಅವರೆಲ್ಲರನ್ನೂ ಪಟ್ಟಿಯಿಂದ ಕಿತ್ತುಹಾಕುವಂತೆ ಆದೇಶಿಸಿದರು.

ಮುಂದಿನ ಕ್ರಮ - ರಾಜ್ಯದ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ರೌಡಿಗಳ ಪಟ್ಟಿ ತರಿಸಿಕೊಂಡರು. ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಮಂದಿಯ ಯಾದಿ ಸಿಕ್ಕಿತು. ತಕ್ಷಣ ಅವರೆಲ್ಲರನ್ನು ಬಂಧಿಸುವಂತೆ ಸೂಚಿಸಿದರು. ಯಾರ್ಯಾರ ವಿರುದ್ಧ ಜಾಮೀನುರಹಿತ ವಾರಂಟ್‌ ಜಾರಿಯಾಗಿದೆಯೋ ಅವರೆಲ್ಲರ ವಿವರಗಳನ್ನು ಪಡೆದರು. ಸಾವಿರಾರು ರಾಜಕಾರಣಿಗಳ, ಗೂಂಡಾಗಳು ಸಿಕ್ಕಿಬಿದ್ದರು. ಇವರೆಲ್ಲರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದರು. ಆಗ ಎಲ್ಲ ಪಕ್ಷಗಳ ನಾಯಕರು ರಾವ್‌ ಮೇಲೆ ಮುರುಕೊಂಡು ಬಿದ್ದರು. ರಾವ್‌ ಸ್ವಲ್ಪವೂ ತಲೆಕೆಡಿಸಿಕೊಳ್ಳಲಿಲ್ಲ.

ಮಾವೋ ನಕ್ಸಲೀಯರ ಭೀತಿಯಿಂದ ತತ್ತರಿಸಿರುವ ಪಶ್ಚಿಮ ಚಂಪಾರಣ್‌ ಜಿಲ್ಲೆಯಲ್ಲಿ ಸಂಚರಿಸಿ ಮತದಾರರಲ್ಲಿ ಧೈರ್ಯ ತುಂಬಿದ ರಾವ್‌, ಗೂಂಡಾಗಳು, ಸಣ್ಣ ಪುಟ್ಟಪುಢಾರಿಗಳನ್ನು ಮಟ್ಟ ಹಾಕಿದರು. ಸುಮಾರು 90 ಸಾವಿರ ಸಂಖ್ಯೆ, ಅರೆಸೇನೆ ಯೋಧರನ್ನು ಕರೆಯಿಸಿ ಕೊಂಡರು. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಬ್ಬ ಹಿರಿಯ ಐಎಎಸ್‌ ಅಧಿಕಾರಿಗಳನ್ನು ವೀಕ್ಷಕರಾಗಿ ಕಳಿಸಿದರು. ಸ್ಥಳೀಯ ಅಧಿಕಾರಿಗಳನ್ನು ಹೊರಗಿಟ್ಟರು. ಮೂರಕ್ಕಿಂತ ಹೆಚ್ಚು ವಾಹನ ಬಳಸಕೂಡದೆಂದು ಅಭ್ಯರ್ಥಿಗಳಿಗೆ ತಾಕೀತು ಮಾಡಿದರು. ಗೋಡೆ ಬರಹ ನಿಷೇಧಿಸಿದರು.

ಬಿಹಾರದಲ್ಲಿ ಚುನಾವಣೆಗಿಂತ ಮೊದಲೇ ಮತ ಚಲಾವಣೆ ಮುಗಿದು ಹೋಗುತ್ತಿತ್ತು. ಹಿಂದಿನ ರಾತ್ರಿಯೇ ಈ ಕೆಲಸ ಮುಗಿಯುತ್ತಿತ್ತು. ಇದು ರಾವ್‌ಗೆ ಗೊತ್ತಿತ್ತು. ಹೀಗಾಗಿ ಮೊದಲೇ ಮತಯಂತ್ರಗಳನ್ನು ಕಳಿಸಲಿಲ್ಲ. ಅರೆಸೇನಾ ಯೋಧರು ಮತಗಟ್ಟೆ ಗಳಲ್ಲೂ ಪ್ರತಿಯಾಬ್ಬ ಮತದಾರ ಮತ ಚಲಾಯಿಸಿದ್ದನ್ನು ವಿಡಿಯೋ ಮೂಲಕ ದಾಖಲಿಸಿಕೊಳ್ಳಲಾಯಿತು. ಮರು ಮತದಾನ ಇದರಿಂದ ಸುಗಮವಾಯಿತು. ಈ ಕಾರಣದಿಂದ ಹಲವೆಡೆ ಮರುಮತದಾನ ಉದ್ಭವಿಸಲೇ ಇಲ್ಲ. ಮತದಾನದ ದಿನ ಬಂದೋಬಸ್ತ್‌ಗಾಗಿ ಹೆಲಿಕಾಪ್ಟರ್‌ಗಳನ್ನು ಬಳಸಲಾಯಿತು. ಸ್ವತಃ ರಾವ್‌ ಹೆಲಿಕಾಪ್ಟರ್‌ನಲ್ಲಿ ಸಂಚರಿಸಿದರು, ಬೈಕನ್ನೇರಿದರು, ದೋಣಿ ಹತ್ತಿ ಉಸ್ತುವಾರಿ ನೋಡಿಕೊಂಡರು. ಇದರಿಂದ ಮತಗಟ್ಟೆ ವಶ, ಮತಪೆಟ್ಟಿಗೆ ಅಪಹರಣಕ್ಕೆ ಕಡಿವಾಣ ಬಿತ್ತು.

ಚುನಾವಣೆ ಘೋಷಣೆಯಾದಂದಿನಿಂದ ಶಸ್ತ್ರಾಸ್ತ್ರಗಳನ್ನು ಸನಿಹದ ಪೊಲೀಸ್‌ ಠಾಣೆಗೆ ಒಪ್ಪಿಸುವಂತೆ ರಾವ್‌ ಸೂಚಿಸಿದರು. ಅಕ್ರಮ ಬಂದೂಕು, ಅಸ್ತ್ರಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿದರು. ಸಣ್ಣಪುಟ್ಟ ಅಕ್ರಮಗಳಿಗೂ ಗುಂಡು ಹಾರಿಸುವ ಅಧಿಕಾರ ನೀಡಿದರು. ತಾವು ಕೈಗೊಂಡ ಕ್ರಮಗಳನ್ನು ಪತ್ರಿಕೆ, ಟಿವಿಯಲ್ಲಿ ವರದಿಯಾಗುವಂತೆ ನೋಡಿಕೊಂಡರು. ತಮ್ಮ ಮೊಬೈಲ್‌ಗೆ ಯಾರೇ ಫೋನ್‌ ಮಾಡಬಹುದು, ಎಷ್ಟು ಹೊತ್ತಿಗಾದರೂ ಮಾಡಬಹುದೆಂದು ರಾವ್‌ ಅಧಿಕಾರಿಗಳಿಗೆ ಹೇಳಿದರು. ಸಾಮಾನ್ಯ ಜನರೂ ಅವರನ್ನು ಸಂಪರ್ಕಿಸಿ ದೂರು ನೀಡಬಹುದಿತ್ತು.

ಅವನ್ಯಾವ ಅಧಿಕಾರಿಯೇ ಆಗಿರಲಿ, ಯಾವುದೇ ರಾಜಕೀಯ ಪಕ್ಷಗಳ ನಾಯಕರ ಜತೆ ಷಾಮೀಲಾಗಿದ್ದು ಗೊತ್ತಾದರೆ ಅಲ್ಲಿಯೇ ವರ್ಗ ಮಾಡಿಬಿಡುತ್ತಿದ್ದರು. ಜಿಲ್ಲಾಧಿಕಾರಿ ಗೌತಮ್‌ ಗೋಸ್ವಾಮಿಯ ನೀರಿಳಿಸಿದರು. ಆತ ತನ್ನ ಐಎಎಸ್‌ ನೌಕರಿಗೇ ರಾಜೀನಾಮೆ ಕೊಟ್ಟು ಹೋದದ್ದು ಬೇರೆ ಕಥೆ. ಒಂದು ಸಂದರ್ಭದಲ್ಲಿ ರಾವ್‌ ಪಟನಾ ಹೈಕೋರ್ಟ್‌ನ ಮೆಟ್ಟಿಲು ಹತ್ತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದರು! ಯಾರೂ ಕೂಡ ಚುನಾವಣೆ ನೀತಿ- ಸಂಹಿತೆ ಉಲ್ಲಂಘಿಸದಂತೆ ನಿಗಾವಹಿಸಿದರು. ಅದೆಂಥ ಹದ್ದಿನ ಕಣ್ಗಾವಲಿತ್ತೆಂದರೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಪೋಸ್ಟರ್‌ ಅಂಟಿಸಿದರೆ ಅವನ್ನು ಕಿತ್ತು ಹಾಕಿಸದೇ ಬಿಡಲಿಲ್ಲ.

ಅಗ್ದೀ ಶಾಂತಿಯುತವಾಗಿ ಚುನಾವಣೆ ನಡೆದು ಹೋಯಿತು. ಚುನಾವಣೆಯೆಂದರೆ ನೂರಾರು ಮಂದಿ ಸಾಯುತ್ತಿದ್ದ ಬಿಹಾರದಲ್ಲಿ ಈ ಸಲ ಸತ್ತವರು ಕೇವಲ ಇಬ್ಬರು! ಇಡೀ ಪ್ರಕ್ರಿಯೆ ಸುಸೂತ್ರವಾಗಿ ನಡೆದುಹೋಯಿತು. ನಿವೃತ್ತ ಅಧಿಕಾರಿಯಾಬ್ಬ(ಐಎಎಸ್‌ ಕೂಡ ಅಲ್ಲ) ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಕಂಡು ಕೇಳರಿಯದ ಅದ್ಬುತ ಬದಲಾವಣೆ-ಸುಧಾರಣೆ ತಂದಿದ್ದ. ಬಿಹಾರದಲ್ಲಿ ಪ್ರಜಾತಂತ್ರ ಪುನರ್‌ ಜನ್ಮ ಪಡೆಯಿತು, ಒಬ್ಬ ನಿಷ್ಠಾವಂತ ಅಧಿಕಾರಿಯ ಕರ್ತೃತ್ವದ ಫಲವಾಗಿ. ಇದನ್ನು ಉಳಿಸಿಕೊಳ್ಳುವುದು, ಬಿಡುವುದು ಇನ್ನು ಜನರಿಗೆ ಬಿಟ್ಟಿದ್ದು.

ಈಗ ಹೇಳಿ. ವ್ಯವಸ್ಥೆಯನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಹೇಳುವವರಾರಾದರೂ ಇದ್ದರೆ ದಯವಿಟ್ಟು ಕೈ ಎತ್ತಿ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more