ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮುಂದೆಯೇ ಕುಸಿದುಹೋದ ಮಹಾಂತ ಎಂಬುವವನ ಮಹಾತ್ಮೆಯು!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಆ ಸುದ್ದಿ ಓದುತ್ತಿದ್ದಂತೆ ಅಂದು ನಾನು ನೋಡಿದ ಮನುಷ್ಯ ಇವನೇನಾ ಅನಿಸಿತು.

ಹೊಳೆವ ಗುಳಿಂಪಿನಂಥ ಕಣ್ಣು, ಕುರುಚಲು ಗಡ್ಡ, ಮೊಳಕಾಲಿನ ತನಕ ಇಳಿಬಿಟ್ಟ ಜುಬ್ಬಾ, ಹೆಗಲಿಗೆ ಆವರಿಸಿದ ಶಾಲು, ಸಟಪಟ ನಡೆದಾಡುವ ಮೂವತ್ತರ ಆಜುಬಾಜಿನ ವ್ಯಕ್ತಿ ಕ್ರಾಂತಿಕಾರಿಯಂತೆ ಪಟಪಟ ಮಾತನಾಡುತ್ತಿದ್ದರೆ ನಾವೆಲ್ಲ ಗಲ್ಲಕ್ಕೆ ಕೈಹಚ್ಚಿ ಕೇಳುತ್ತಿದ್ದೆವು. ಕ್ಷಣಮಾತ್ರದಲ್ಲಿ ಆತ ಹಾವಭಾವ, ವಿಚಾರ, ಮಾತುಗಳಿಂದ ನಿಧಾನವಾಗಿ ನಮ್ಮೊಳಗಿಳಿದು ಆವರಿಸಿಕೊಳ್ಳುತ್ತಿದ್ದ. ಮೈಮನಗಳಲ್ಲಿ ಬದಸ್ತೂರು ಸಂಚಲನವಾಗುತ್ತಿದ್ದರೆ ಆತನ ಮಾತು ಸುರಂಗದಲ್ಲಿ ಚಲಿಸುವ ರೈಲಿನಂತೆ ಒಂದೇ ಸಮನೆ ನೇಕನಿಯತ್ತಿನಿಂದ ಸಾಗುತ್ತಿತ್ತು. ಇಡೀ ಸಭೆಯನ್ನು ಸಮ್ಮೋಹನಗೊಳಿಸುವ ಮೋಡಿಗಾರನ ಮಾಂತ್ರಿಕ ಶಕ್ತಿ ಆತನ ಮಾತಿಗಿತ್ತು. ಆತನೆಡೆ ನೆಟ್ಟ ದೃಷ್ಟಿಯನ್ನು ಕದಲಿಸಲು ಆಗುತ್ತಿರಲಿಲ್ಲ. ಮುಖದಲ್ಲಿ ಅಂಥ ತೇಜಸ್ಸು, ಆಕರ್ಷಣೆ.

ಆತನ ಹೆಸರು ಪ್ರಫುಲ್ಲ ಕುಮಾರ್‌ ಮಹಾಂತ!

Prafulla Kumar Mahnta1985ರ ಅಕ್ಟೋಬರ್‌. ಅಸ್ಸಾಂ ಉಳಿಸಿ ಆಂದೋಲನ ಪರಾಕಾಷ್ಠೆಗೆ ತಲುಪಿದ ದಿನಗಳವು. ನಾವು ಅಂದು ಗುವಾಹಟಿಯ ವಿಧಾನಸೌಧದ ಮುಂದೆ ನಡೆದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಹಿತೇಶ್ವರ ಸೈಕಿಯಾ ನೇತೃತ್ವದ ಕಾಂಗ್ರೆಸ್‌ ಸರಕಾರ ಪ್ರತಿಭಟನಾಕಾರರ ಮೇಲೆ ಗೋಲಿಬಾರ್‌ಗೆ ಆದೇಶಿಸಿತು. ಪೊಲೀಸ್‌ ಗುಂಡಿಗೆ ಇಬ್ಬರು ವಿದ್ಯಾರ್ಥಿಗಳು ಹತರಾದರು. ಅಸಂಖ್ಯ ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಮಹಾಂತ ಭೂಗತರಾಗಿದ್ದರು. ಸರಕಾರ ಅವರ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ನಮ್ಮನ್ನೆಲ್ಲ ಮಾಳಿಗೆಯಂಥ ಅಡಗುತಾಣದಲ್ಲಿ ಇಟ್ಟಿದ್ದರು. ಅಲ್ಲಿಗೆ ಮಹಾಂತ ಆಗಮಿಸುವರೆಂದೂ, ಅಲ್ಲಿ ನಮ್ಮೆಲ್ಲರನ್ನೂ ಉದ್ದೇಶಿಸಿ ಮಾತನಾಡುವರೆಂದೂ ತಿಳಿಸಲಾಗಿತ್ತು. ನಾವೆಲ್ಲ ಮಹಾಂತಗಾಗಿ ನಾಲ್ಕೈದು ತಾಸಿನಿಂದ ಕಾಯುತ್ತಿದ್ದೆವು. ಮಧ್ಯರಾತ್ರಿ ಸನಿಹಿಸುತ್ತಿರುವಂತೆ ಮಹಾಂತ ವೇಷಮರೆಸಿಕೊಂಡು ಬಂದರೆ, ಅಲ್ಲಿ ಸೇರಿದ್ದ ನಮಗೆಲ್ಲರಿಗೂ ಪುಳಕ. ಸ್ಲೋಮೋಷನ್‌ನಲ್ಲಿ ಬರುವ ಸಿನಿಮಾ ನಾಯಕನ ಡೌಲುದರ್ತಿಯಲ್ಲಿ ಬರುತ್ತಿದ್ದರೆ ಮನಸ್ಸಿನ ತುಂಬೆಲ್ಲ ಮಹಾಂತ ಮಹಾಂತ!

ಮಹಾಂತ ಅಂದು ನಮ್ಮನ್ನುದ್ದೇಶಿಸಿ ಸುಮಾರು ಮುಕ್ಕಾಲು ಗಂಟೆ ಮಾತಾಡಿದ. ಆಸ್ಸಾಂ ಹೋರಾಟದ ಹಿನ್ನೆಲೆಯನ್ನು ವಿವರಿಸಿದ. ಕಾಂಗ್ರೆಸ್‌ ಸರಕಾರಗಳ ಭ್ರಷ್ಟಾಚಾರ, ದುರಾಡಳಿತಗಳನ್ನು ಬಣ್ಣಿಸಿದ. ಕಾಂಗ್ರೆಸ್‌ ಸರಕಾರಗಳ ಭ್ರಷ್ಟಾಚಾರ, ದುರಾಡಳಿತಗಳನ್ನು ಬಣ್ಣಿಸಿದ. ಆಸ್ಸಾಮ್‌ನಲ್ಲಿ ವಿದೇಶಿಯರು ನುಸುಳಿ ಬಂದು ನಡೆಸುತ್ತಿರುವ ದುಪಳಿ, ಅವಾಂತರಗಳ ಕುರಿತು ಎಚ್ಚರಿಸಿದ. ನಾವು ಸುಮ್ಮನೆ ಕುಳಿತರೆ ಅಸ್ಸಾಂ ನಮ್ಮ ಕೈತಪ್ಪಿ ಹೋಗಬಹುದು, ಸಂಘಟಿತ ಹೋರಾಟ ಮಾಡದಿದ್ದರೆ ಉಳಿಗಾಲವಿಲ್ಲ ಎಂದು ಕರೆ ನೀಡಿದ. ಬಾಂಗ್ಲಾ ನಿರಾಶ್ರಿತರು ಬ್ರಹ್ಮಪುತ್ರಾ ನದಿಗುಂಟ ಬಂದು ನೆಲೆಸಿ ಇಲ್ಲಿಯೇ ತಳವೂರಿ ನಮ್ಮ ಮನೆಯ ಜಗುಲಿಯನ್ನು ಕಬಳಿಸುವುದರ ವಿರುದ್ಧ ದನಿಯೆತ್ತಿದ. ಈ ಎಲ್ಲ ಸಮಸ್ಯೆಗಳಿಗೆ ಮೂಲ ಬೇರಾದ ಕಾಂಗ್ರೆಸ್‌ ಆಡಳಿತವನ್ನು ಕಿತ್ತೆಸೆಯಿರಿ ಎಂದು ಕರೆ ಕೊಟ್ಟ.

ಮಹಾಂತನ ಅಂದಿನ ಭಾಷಣವೇ ಹಾಗಿತ್ತು. ಎಂಥವನ ಎದೆಯಲ್ಲೂ ಒಂದು ಹಿಡಿ ಪ್ರತಿಭಟನೆಯ ಕಿಡಿಯನ್ನು ಝಗ್ಗನೆ ಹೊತ್ತಿಸುವ ಶಿಖೆಯಿತ್ತು. ಅವನ ಮಾತನ್ನು, ವಾದವನ್ನು ಯಾರೂ ಸಹ ಅಪೂಟ ನಿರಾಕರಿಸುವಂತಿರಲಿಲ್ಲ. ಮಹಾಂತ ಅಂದು ಕ್ರಾಂತಿಕಾರಿಯ ಜೋಷ್‌ನಲ್ಲಿ ಮಾತಾಡುತ್ತಿದ್ದರೆ ಆತ ನಮ್ಮ ನಡೆಸುವ ನಾಯಕನಂತೆ ಗೋಚರಿಸುತ್ತಿದ್ದ. ಆಸ್ಸಾಂ ಏನು ಇಡೀ ದೇಶದ ವಿದ್ಯಾರ್ಥಿಗಳು ಮಹಾಂತನ ಜತೆಗಿದ್ದರು. ಅಂದು ಗುವಾಹಟಿಯ ಜಡ್ಜಿಸ್‌ಫೀಲ್ಡ್‌ನಲ್ಲಿ ಮಹಾಂತ ಜತೆಗಿದ್ದರು. ಅಂದು ಗುಲಾಹಟಿಯ ಜಡ್ಜಿಸ್‌ ಫೀಲ್ಡ್‌ನಲ್ಲಿ ಮಹಾಂತ ಸುಮಾರು ಎರಡು ಲಕ್ಷ ಜನಸಮೂಹ ಬೆಂಕಿ ಹಚ್ಚಿ ಆರ್ಭಟಿಸುತ್ತಿದ್ದರೆ ಬ್ರಹ್ಮಪುತ್ರಾದ ಶಾಂತ ಕಣಿವೆ ಕೂಡ ಬೆಚ್ಚಿಬಿದ್ದಿತ್ತು. ಅಸ್ಸಾಮಿನ ಹಳ್ಳಿಹಳ್ಳಿಗಳಿಂದ ಯುವ ಜನತೆ ಮೈಕೂಡವಿ ಮಹಾಂತನಿಗೆ ಕೈಜೋಡಿಸಿದ್ದರು. ಕಾಲೇಜು ಹಾಸ್ಟೆಲ್‌ನಲ್ಲಿ ಹುಟ್ಟಿಕೊಂಡ ವಿದ್ಯಾರ್ಥಿ ಚಳವಳಿ ಯಾರೋ ಪಡ್ಡೆ ಹೈಕಳ ಹುರಾಹುರಿಯಾಗದೇ, ಅಪಾಪೋಲಿಗಳ ಘೋಷಣೆಯ ಚಳವಳಿಯಾಗದೇ ಇಡೀ ಜನಮಾನಸವನ್ನು ಬಡಿದೆಬ್ಬಿಸುವ ಜನಾಂದೋಲನವಾಗಿ ರೂಪುಗೊಂಡಿತ್ತು. ಅಂದು ಮಹಾಂತ ಜತೆಗೆ ಭೃಗು ಫೂಕನ್‌, ದಿನೇಶ್‌ ಗೋಸ್ವಾಮಿ, ಅತುಲ್‌ ಬೋರಾ, ಪುಲಕೇಶ ಬೋರಾ ಮುಂತಾದ ವಿದ್ಯಾರ್ಥಿ ನಾಯಕರಿದ್ದರು. ಇವರೆಲ್ಲ ಸೇರಿ 1978ರಲ್ಲಿ ಕಟ್ಟಿದ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ ಯಾವ ಎತ್ತರಕ್ಕೆ ಬೆಳೆಯಿತೆಂದರೆ ಅದನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಬೇಕಾಯಿತು. ಪರಿಣಾಮವಾಗಿ 1985ರಲ್ಲಿ ಅಸ್ಸಾಂ ಗಣಪರಿಷತ್‌(ಎಜಿಪಿ)ಉದಯಿಸಿತು. ಮಹಾಂತ ಅದರ ಸ್ಥಾಪಕ ಅಧ್ಯಕ್ಷನಾದ.

ಮಹಾಂತ ಯಾವುದೇ ಊರಿಗೆ ಹೋಗಲಿ ಜನ ಮುಗಿಬಿದ್ದು ಸೇರುತ್ತಿದ್ದರು. ಆತನ ಒಂದು ಕರೆ ವೇದವಾಕ್ಯ. ಜನ ಆತನ ಫೋಟೊವನ್ನು ಹೆಗಲ ಮೇಲಿಟ್ಟುಕೊಂಡು ಮೆರವಣಿಗೆ ಹೋಗುತ್ತಿದ್ದವು. ಮಹಾಂತನಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧವಾಗಿ ನಿಂತ ಬಹುದೊಡ್ಡ ಪಡೆಯಿತ್ತು. ಆ ದಿನಗಳಲ್ಲಿ ಆತ ದೇಶದ ಯಾವುದೇ ಊರಿಗೆ ಹೋದರೂ ಆತನನ್ನು ನೋಡಲು ಸಾವಿರಾರು ಸೇರುತ್ತಿದ್ದರು.

ಮಹಾಂತ ಜನಪ್ರಿಯತೆ, ಜನಾದರ, ಜನಾನುರಾಗದ ಗೌರಿಶಂಕರದಲ್ಲಿದ್ದ. ಆತನ ಆಸ್ಸಾಂ ಗಣಪರಿಷತ್‌ 1986ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಮತಪೆಟ್ಟಿಗೆಗಳನ್ನು ಒಡೆಯುವುದಕ್ಕಿಂತ ಮೊದಲೇ ಫಲಿತಾಂಶ ಗೋಡೆ ಮೇಲಿನ ಬರಹದಷ್ಟು ಸ್ಪಷ್ಟವಾಗಿತ್ತು. ಎಜಿಪಿ ಅಭೂತಪೂರ್ವ ಜಯ ಸಾಧಿಸಿತು. ಕಾಂಗ್ರೆಸ್‌ ಧೂಳೀಪಟವಾಯಿತು. ಸೈಕಿಯಾ ಸೇರಿ ಆತನ ಸಂಪುಟ ಸದಸ್ಯೆರೆಲ್ಲರ ಠೇವಣಿ ಜಪ್ತಿಯಾಯಿತು. ಹಾಗೇ ನೋಡಿದರೆ ಅದು ವಿದ್ಯಾರ್ಥಿಶಕ್ತಿಗೆ, ಮಹಾಂತನ ಜನಪ್ರಿಯತೆಗೆ ಸಿಕ್ಕ ಜಯವಾಗಿತ್ತು. ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ಅಭಿದಾನಕ್ಕೆ ಪಾತ್ರನಾಗಿ ಮಹಾಂತ ಅಧಿಕಾರಕ್ಕೇರಿದ.

ಈ ಇಪ್ಪತ್ತು ವರ್ಷಗಳಲ್ಲಿ ಬ್ರಹ್ಮಪುತ್ರೆಯಲ್ಲಿ ಅದೆಷ್ಟು ನೀರು ಹರಿದು ಹೋಯಿತೋ ಏನೋ? ಲೆಕ್ಕವಿಟ್ಟವರಾರು? ಆದರೆ ಈ ಅವಧಿಯಲ್ಲಿ ಮಹಾಂತ ಏನು ಮಾಡಿದ ಎಂಬುದನ್ನು ಲೆಕ್ಕ ಹಾಕಬಹುದು. ಮೊನ್ನೆ ಮೊನ್ನೆ ಪತ್ರಿಕೆಯಲ್ಲೊಂದು ಸುದ್ದಿ ಬಂತು ಎಜಿಪಿಯಿಂದ ಮಹಾಂತ ಉಚ್ಚಾಟನೆ! ತೀವ ಬೆವರು, ನೆತ್ತರ ಹರಿಸಿ ಕಟ್ಟಿದ, ಶ್ರಮ, ತ್ಯಾಗ, ಬಲಿದಾನ ಚೆಲ್ಲಿ ಕಟ್ಟಿದ ಎಜಿಪಿಯೆಂಬ ಮನೆಯ ಗರ್ಭಗೃಹದಿಂದ ಹೊರದಬ್ಬಲ್ಪಟ್ಟಿದ್ದ. ಯಾವ ವ್ಯಕ್ತಿ ಎಜಿಪಿಯನ್ನು ಕಟ್ಟಿದ್ದನೋ ಆತನನ್ನು ನಿರ್ದಯವಾಗಿ, ನಿಷ್ಕರುಣೆಯಿಂದ ಆ ಪಕ್ಷದಿಂದ ಮುಲಾಜಿಲ್ಲದೇ ಹೊರಹಾಕಲಾಯಿತು.

ಅಂದು ಕಂಡ ಮಹಾಂತ ಎಲ್ಲಿ ? ಈಗಿನ ಮಹಾಂತ ಎಲ್ಲಿ? ಯಾರಿಗಾದರೂ ಮಹಾಂತನ ಮಹಾತ್ಮೆ ಕೇಳಿದರೆ ಛೇ ಅಂದಾರು. ಅದೇಕೆ ಈ ಎರಡು ದಶಕಗಳಲ್ಲಿ ನಾಯಕನಾದವನು ಖಳನಾಯಕನಾದ?ದಂಡನಾಯಕನಾದವನು ‘ದಂಡ’ ನಾಯಕನಾದ?

ಮನಸ್ಸು ಮಾಡಿದ್ದರೆ ಮಹಾಂತ ಈ ದೇಶ ಕಂಡ ಅದ್ಭುತ ನಾಯಕನಾಗಿ ಬೆಳೆಯಬಹುದಿತ್ತು. ಆತನಿಗೆ ಸೊಗಸಾದ ಮಾತುಗಾರಿಕೆ ಒಲಿದಿತ್ತು. ವಯಸ್ಸು ಅವನ ಕಡೆಗಿತ್ತು. ಆತನಿಗೆ ಅಸಾಧಾರಣ ನೆನಪಿನಶಕ್ತಿಯಿತ್ತು. ವಯಸ್ಸು ಅವನ ಕಡೆಗಿತ್ತು. ಆತನಿಗೆ ಅಸಾಧಾರಣ ನೆನಪಿನಶಕ್ತಿಯಿತ್ತು. ವಿಷಯಗ್ರಹಿಕೆ, ಮಂಡನೆ ಸಾಮರ್ಥ್ಯವಿತ್ತು. ಯುವ ಜನತೆಯ ಕಣ್ಮಣಿಯಾಗಿದ್ದ. ಒಬ್ಬ ಪ್ರಬುದ್ಧ, ಜನಪ್ರಿಯ ರಾಜಕಾರಣಿಗೆ ಬೇಕಾದ ಎಲ್ಲ ‘ಬೇಕುಗಳು’ ಆತನಲಿದ್ದವು. ಆದರೆ ಯಾವಾಗ ಮುಖ್ಯಮಂತ್ರಿಯಾದನೋ ‘ಬೇಡವಾದ’ ಸಂಗತಿಗಳನ್ನು ಮೈಗೂಡಿಸಿಕೊಳ್ಳತೊಡಗಿದ. ಮಹಾಂತ ಎಡವಿದ್ದೇ ಇಲ್ಲಿ. ಅಧಿಕಾರ ರಾಜಕಾರಣದ ಹೊಲಸುಗಳು ಆತನನ್ನು ಮೆತ್ತಿಕೊಳ್ಳತೊಡಗಿದವು. ಸುಲಭ ಆಮಿಷಗಳಿಗೆ ಬಲಿಯಾಗತೊಡಗಿದ.

ಯಾರೂ ಸಹ ಆತನಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಮಹಾಂತ ಮಹಾ ಭ್ರಷ್ಟನಾದ. ಮಾಮೂಲು ರಾಜಕಾರಣಿಯಂತೆ ವಿಧಾನ ಸೌಧದಲ್ಲಿ ‘ಅಂಗಡಿ’ ತೆರೆದು ಕುಳಿತುಬಿಟ್ಟ. ಎರಡು-ಮೂರು ಕರ್ಮಕಾಂಡಗಳು ಬಯಲಿಗೆ ಬಂದವು. ಇವೆಲ್ಲ ಆಗ ತಾನೆ ಅಧಿಕಾರಕ್ಕೆ ಬಂದವನ ವಿರುದ್ಧ ಪ್ರತಿಪಕ್ಷಗಳು ಕೂರಿಸುತ್ತಿರುವ ಗೂಬೆ ಎಂದು ಜನ ಸುಮ್ಮನಾದರು. ಅಲ್ಲಿಗೆ ಮಹಾಂತ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಅಧಿಕಾರದ ರುಚಿ ಆತನ ಹಾದಿ ತಪ್ಪಿಸಿತು. ಆತನ ಸಹಪಾಠಿಗಳಾದ ಭೃಗು ಫೂಕನ್‌, ದಿನೇಶ್‌ ಗೋಸ್ವಾಮಿ, ಬೋರಾ ಕರೆದು ಹಿತವಚನ ಹೇಳಿದರು. ಮಹಾಂತನ ಭ್ರಷ್ಟ ನಡೆವಳಿಕೆಯನ್ನಂತೂ ಫೂಕನ್‌ ಸಹಿಸಿಕೊಳ್ಳದಾದ. ಇಬ್ಬರಿಗೂ ಮೊದಲಿನಿಂದಲೂ ಸಣ್ಣ ego problemಇತ್ತು. ಯಾವಾಗ ಆತ ಮಹಾಂತನ ಅಡ್ಡದಾರಿಯನ್ನು ಪ್ರಶ್ನಿಸಿದನೋ ಅದು ಸ್ಫೋಟಗೊಂಡಿತು. ಅದನ್ನು ಮಹಾಂತ ಸಹಿಸದಾದ. ಗೃಹಸಚಿವನಾಗಿದ್ದ ಫೂಕನ್‌ನನ್ನು ಪಕ್ಷದಿಂದ ಹೊರ ಹಾಕಿದ. ವಿದ್ಯಾರ್ಥಿ ಚಳವಳಿ ಕಲ್ಪನೆ ಯಾರ ಕೋಣೆಯಲ್ಲಿ ಮೊಳಕೆಯಾಡೆದಿತ್ತೋ ಆತನನ್ನೇ ಮಹಾಂತ ಆಚೆಗಿಟ್ಟ. ಸರ್ವಾಧಿಕಾರಿಯಂತೆ ತನ್ನನ್ನು ಪ್ರಶ್ನಿಸುವವರನ್ನೆಲ್ಲ ಮಟ್ಟ ಹಾಕಿದ. ಉಗ್ರಗಾಮಿಗಳನ್ನು ಸದೆಬಡಿಯುವ ನೆಪದಲ್ಲಿ ಅಮಾಯಕರನ್ನು ಹಿಂಸಿಸಿದ. ವಿದೇಶಿ ನುಸುಳುಗಾರರ ಸಮಸ್ಯೆ ಹಾಗೇ ಉಳಿಯಿತು. ಅವರೆಲ್ಲ ಭಾವಿ ಮತದಾರರೆಂಬ ರಾಜಕೀಯ ಲೆಕ್ಕಾಚಾರ ಆತನನ್ನು ತೆಪ್ಪಗಿರುವಂತೆ ಮಾಡಿತು. ಪಕ್ಷ ಹಾಗೂ ಸರಕಾರವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ.

ಜನ ರೋಸಿ ಹೋದರು. ಅವರ ಕನಸು, ನಿರೀಕ್ಷೆಗಳೆಲ್ಲ ಫಡ್ಚವಾದವು. ಮಹಾಂತನ ಮುಂದೆ ಸೈಕಿಯಾನೇ ಸೈ ಎನಿಸಲಾರಂಭಿಸಿದ. ಕೇವಲ ಐದು ವರ್ಷಗಳಲ್ಲಿ ಮಹಾಂತ ನಪರೆದ್ದು ಹೋದ. ಮುಂದಿನ ಚುನಾವಣೆಯಲ್ಲಿ ಮಹಾಂತ ದಯನೀಯವಾಗಿ ಸೋತು ಹೋದ. ಪರಿಣಾಮ ಪುನಃ ಕಾಂಗ್ರೆಸ್‌ ಆಳ್ವಿಕೆ. ಜನ ಯಾವ ಪ್ರಯಾಣದಲ್ಲಿ ಮಹಾಂತನ ಆಡಳಿತವನ್ನು ದ್ವೇಷಿಸಿರಬಹುದೆಂಬುದನ್ನು ಊಹಿಸಬಹುದು. ಆ ಒಂದು ಸೋಲಿನಿಂದ ಮಹಾಂತನಿಗೆ ಜ್ಞಾನೋದಯವಾಗಬೇಕಿತ್ತು. ಆದರೆ ತನ್ನ ಮೊದಲಿನ ಚಾಳಿಯನ್ನೇ ಮುಂದುವರಿಸಿದ.

ಇಷ್ಟಾದರೂ ಆಸ್ಸಾಮಿನ ಜನತೆ ತಾವು ಮೊದಲು ಆರಾಧಿಸಿದ್ದ ದೈವವನ್ನು ಕೈಬಿಡಲಿಲ್ಲ. 1996ರ ಚುನಾವಣೆಯಲ್ಲಿ ಪುನಃ ಮಹಾಂತನಿಗೆ ರಾಜ್ಯವನ್ನು ಒಪ್ಪಿಸಿದರು. ಆಗಲಾದರೂ ಆತ ತಿದ್ದಿಕೊಳ್ಳಬೇಕಿತ್ತು. ಮಹಾಂತನ ದುರಾಡಳಿತದ ಪ್ರಕರಣಗಳು ಮಿತಿಮೀರತೊಡಗಿದವು. ಈ ಮಧ್ಯೆ ಖಾಸಗಿ ಜೀವನದಲ್ಲೂ ಬಿರುಕು ಕಾಣಿಸಿಕೊಂಡಿತು. ಸಂಘಮಿತ್ರ ಬರೇಲಿ ಎಂಬ ಹೆಣ್ಣು ಮಗಳೊಬ್ಬಳ ಜತೆ ಅನೈತಿಕ ಸಂಬಂಧದ ಆರೋಪ ಬಂತು. ಮಹಾಂತನನ್ನು ಮೆಚ್ಚುವ ಎಲ್ಲ ಸಂಗತಿಗಳೂ ಬರಿದಾಗಿದ್ದವು. ತನ್ನ ಹುಟ್ಟೂರಾದ ನಾಗಾಂವ್‌ನಲ್ಲಿ ತಲೆ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ ಜನರೇ ಮಹಾಂತನಿಗೆ ಚಪ್ಪಲಿ ಎಸೆದರು!

ಮಹಾಂತ ಲಜ್ಜೆಗೇಡಿ, ಅಪ್ಪಟ ಭ್ರಷ್ಟ ರಾಜಕಾರಣಿಯ ಅಪರವತಾರವಾದ. ಆತನನ್ನು ಸಹಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಹಿಂದಿನ ವರ್ಷ ಅಧ್ಯಕ್ಷಗಿರಿ ಕೈತಪ್ಪಿ ಹೋದಾಗಲೇ ಸುಧಾರಿಸಿಕೊಂಡಿದ್ದರೆ ಈಗಿನ ಸ್ಥಿತಿ ಬರುತ್ತಿರಲಿಲ್ಲ. ಆದರೆ ಆತ ಅಂಥ ಯಾವ ಲಕ್ಷಣವನ್ನೂ ತೋರಲಿಲ್ಲ. ಅಂಥ ಯಾವ ಲಕ್ಷಣವನ್ನೂ ತೋರಲಿಲ್ಲ. ಅಂಥ ವ್ಯಕ್ತಿಯನ್ನು ಪಕ್ಷದೊಳಗೆ ಇಟ್ಟುಕೊಳ್ಳುವುದೇ ಅಪಾಯಕಾರಿಯೆಂದು ಆಚೆಗಟ್ಟಲಾಗಿದೆ. ಇದೆಂಥ ಕುಸಿತ!? ಇಂಥ ಸ್ಥಿತಿ ಯಾರಿಗೂ ಬರಬಾರದು.

ಭಾರತ ರಾಜಕಾರಣದಲ್ಲಿ ಮಹಾಂತನಂಥವರು ಬಹಳ ಜನ ಬಂದು ಹೋಗಿದ್ದಾರೆ. ಹಾಗೆ ನೋಡಿದರೆ ರಾಜಕಾರಣಿಗಳು ‘ಮಹಾಂತ’ನ ಸೋಗಿನಲ್ಲಿಯೇ ಬರುತ್ತಾರೆ.ನಾವೂ ಅಂಥವರನ್ನು ತೊಡೆಯ ಮೇಲೆ ಮಡಗಿಕೊಂಡು ಜೋಗುಳ ಹಾಡಿ ತಲೆಯ ಮೇಲೆ ಮೇಲೆ ಕೂಡ್ರಿಸಿಕೊಳ್ಳುತ್ತೇವೆ. ಅವರ ಕೈಗೆ ಅಧಿಕಾರ ಕೊಟ್ಟು ನಮ್ಮ ಹಿತ ಕಾಯುವ ಕೆಲಸಕ್ಕೆ ಹಚ್ಚುತ್ತೇವೆ.

ಆದರೆ ಅಂಥವರು ಹೊಲಸಿನ ಹೊಪ್ಪಳಿಕೆಯಿಂದ ಎದ್ದು ಬರುತ್ತಾರೆ. ನಮ್ಮ ಮುಂದೆ ಸುಬಗ ಸುಬ್ಬರಾಯನಂತಿದ್ದವರು, ನಮ್ಮೆಲ್ಲ ನಂಬಿಕೆಗಳನ್ನು ಕಾಯಬಹುದೆಂದು ನಮ್ಮೆಲ್ಲ ನಂಬಿಕೆಗಳನ್ನು ಕಾಯಬಹುದೆಂದು ನಮ್ಮೆಲ್ಲ ಪ್ರೀತಿ, ವಿಶ್ವಾಸಗಳನ್ನು ಅವರಲ್ಲಿ ಠೇವಣಿಯಿಟ್ಟರೆ ಅದನ್ನೇ ತಿಂದು ನೀರು ಕುಡಿದು ಎದ್ದುಹೋಗುತ್ತಿರುತ್ತಾರೆ. ನಮ್ಮೂರಿನ ತಾಲೂಕು ಪಂಚಾಯಿತಿ ಸದಸ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ನಮ್ಮ ಕ್ಷೇತ್ರದ ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿಗಳನ್ನೆಲ್ಲ ನೋಡಿ,ಅವರೆಲ್ಲ ಒಂದೊಂದು ಆ್ಯಂಗಲ್‌ನಲ್ಲಿ ಮಹಾಂತನಂತೆ ಕಾಣುತ್ತಾರೆ.

ಬೇಸರವಾಗುತ್ತದೆ, ಆದರೂ ಪರವಾಗಿಲ್ಲ ಈಗ ಮಹಾಂತನಿಗೆ ತೋರಿಸಿದ ಜಾಗವನ್ನೇ ಅವರಿಗೂ ತೋರಿಸಬೇಕಾಗುತ್ತದೆ. ಮಹಾಂತನ ಸೋಗಿನಲ್ಲಿ ಬರುವವರ ಮೇಲೊಂದು ಸದಾ ಎಚ್ಚರವಿರಲಿ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X