ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಸೋಲಿನ ನೆಪದಲ್ಲಿ ಹತ್ತು ಗೆಲುವು ಮರೆವ ನಾವು!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ನಮ್ಮ ಮನಃ ಸ್ಥಿತಿಯೇ ಅಂಥದ್ದು!

148 ರನ್‌ ಹೊಡೆದ ಕೂಡಲೇ ಮಹೇಂದ್ರಸಿಂಗ್‌ ಧೋನಿಯನ್ನು ಆಡಂ ಗಿಲ್‌ಕ್ರಿಸ್ಟ್‌ಗೆ ಹೋಲಿಸುವ ನಾವು, ನಾಲ್ಕು ಪಂದ್ಯಗಳಲ್ಲಿ ಫ್ಲಾಪ್‌ ಆದನೆಂಬ ಏಕೈಕ ಕಾರಣಕ್ಕೆ ಸೌರವ್‌ ಗಂಗೂಲಿಯನ್ನು ತಂಡದಿಂದಲೇ ಕೈ ಬಿಡಬೇಕೆನ್ನುತ್ತೇವೆ. ಏಕೆಂದರೆ ನಾವು ಗೆದ್ದೆತ್ತಿನ ಬಾಲ ಹಿಡಿಯುವವರು! ಹಳೆಯದನ್ನು ಮರೆಯುವುದರಲ್ಲಿ, ವಿನಾಕಾರಣ ಟೀಕಿಸುವುದರ ಲ್ಲಿ, ಹಿಂದೆಮುಂದೆ ನೋಡದೆ ಚರಮಗೀತೆ ಬರೆಯುವುದರಲ್ಲಿ ನಮ್ಮ ಪತ್ರಿಕೆಗಳೂ ಸದಾ ಮುಂದು.

‘ತಂಡದಿಂದ ಕೈ ಬಿಡುವಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ತಲೆನೋವೆ ಬಿಸಿಬಿಸಿಐಗಿಲ್ಲ. ಏಕೆಂದರೆ ಆ ಕೆಲಸವನ್ನು ಐಸಿಸಿ ಮಾಡಿದೆ’ ಎಂದು ಖ್ಯಾತ ಆಂಗ್ಲ ಪತ್ರಿಕೆಯಾಂದು ಮುಖಪುಟದಲ್ಲೇ ಬರೆದಿದೆ. ಸೌರವ್‌ನ ಕಳಪೆ ಫಾರ್ಮ್‌ ಬಗ್ಗೆ ಕುಹಕವಾಡಿರುವ ಪರಿ ಇದು. ಹಿಂದೊಮ್ಮೆ, Steve Waugh is a colossal, Ganguli is a pigmy ಎಂದು ಬಿಶನ್‌ ಸಿಂಗ್‌ ಬೇಡಿ ಆಣಿಮುತ್ತು ಉದುರಿಸಿದ್ದರು. ಖಂಡಿತಾ ಶತ್ರುಗಳನ್ನು ಹುಡುಕಲು ಬೇರೆ ರಾಷ್ಟ್ರಕ್ಕೆ ಹೋಗಬೇಕಾಗಿಲ್ಲ.

ಸೌರವ್‌ ಗಂಗೂಲಿಗೂ ಇದೇನು ಹೊಸದಲ್ಲ !

Souvav Ganguly1998, ಮಾರ್ಚ್‌ 27. ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಎಲ್‌ಬಿಡಬ್ಲ್ಯೂನೀಡಿದ ಅಂಪೈರ್‌ ಡೆವಿಡ್‌ ಶೆಫರ್ಡ್‌ ನಿರ್ಧಾರಕ್ಕೆ ಅಗೌರವ ತೋರಿದ ಆರೋಪದ ಮೇಲೆ ಒಂದು ಪಂದ್ಯದ ಮೇಲೆ ನಿಷೇಧ ಹೇರಲಾಯಿತು. ಪರಿಣಾಮವಾಗಿ ಕೊಚ್ಚಿಯಲ್ಲಿ ನಡೆದ ಏಕದಿನ ಪಂದ್ಯದಿಂದ ಹೊರಗುಳಿಯಬೇಕಾಯಿತು. 2000, ಡಿಸೆಂಬರ್‌, 11. ಕಾನ್ಪುರದಲ್ಲಿ ನಡೆಯುತ್ತಿದ್ದ ನಾಲ್ಕನೇ ಏಕದಿನ ಪಂದ್ಯದಲ್ಲಿ ಅಗೌರವ ತೋರಿದ ಹಾಗೂ ಅಂಪೈರ್‌ಗಳಿಗೆ ಭೀತಿ ಹುಟ್ಟಿಸುವಂತೆ ವರ್ತಿಸಿದ ಆರೋಪದ ಮೇಲೆ ಒಂದು ಪಂದ್ಯಕ್ಕೆ ನಿಷೇಧ ಮತ್ತು ಎರಡು ಪಂದ್ಯಗಳಿಗೆ ಅಮಾನತು ಮಾಡಲಾಯಿತು. ರಾಜ್‌ಕೋಟ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಡಲಾಗಲಿಲ್ಲ.

2001, ಜುಲೈ 26. ಕೊಲಂಬೊದಲ್ಲಿ ನಡೆಯುತ್ತಿದ್ದ ಕೋಕಾ ಕೋಲಾ ಕಪ್‌ನ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಎಲ್‌ಬಿಡಬ್ಲ್ಯೂ ನೀಡಿದ ಅಂಪೈರ್‌ ನಿರ್ಧಾರಕ್ಕೆ ಅಗೌರವ ತೋರಿದ ಆರೋಪದ ಮೇಲೆ ಮತ್ತೊಂದು ಪಂದ್ಯದ ಮೇಲೆ ನಿಷೇಧ ಹೇರಲಾಯಿತು. 2001, ಅಗಸ್ಟ್‌ 1. ಔಟಾಗಿ ಹೋಗುತ್ತಿದ್ದ ಶ್ರೀಲಂಕಾದ ಬ್ಯಾಟ್ಸ್‌ಮನ್‌ ರಸಲ್‌ ಅರ್ನಾಲ್ಡ್‌ ಅವರನ್ನು ನಿಂದಿಸಿದ್ದಕ್ಕೆ ಮ್ಯಾಚ್‌ ರೆಫರಿ ಕ್ಯಾಮಿ ಸ್ಮಿತ್‌ ಅವರಿಂದ ವಾಗ್ದಂಡನೆ. 2001 ನವೆಂಬರ್‌ 20ರಂದು ದಕ್ಷಿಣ ಆಫ್ರಿಕಾದ ಪೋರ್ಟ್‌ ಎಲಿಜಬೆತ್‌ನಲ್ಲಿ ಸೌರವ್‌ ಸೇರಿದಂತೆ 6 ಭಾರತೀಯರಿಗೆ ದಂಡ ಮತ್ತು ಸಚಿನ್‌ ತೆಂಡೂಲ್ಕರ್‌ಗೆ ಒಂದು ಪಂದ್ಯ ನಿಷೇಧ ಹೇರುವ ಮೂಲಕ ರೆಫರಿ ಮೈಕ್‌ ಡೆನಿಸ್‌ ದಾಖಲೆಯನ್ನೇ ನಿರ್ಮಿಸಿದ್ದರು.

2002, ಡಿಸೆಂಬರ್‌ 22. ವೆಲಿಂಗ್ಟನ್‌ನಲ್ಲಿ ನಡೆಯುತ್ತಿದ್ದ ಮೊದಲ ಟೆಸ್ಟ್‌ ವೇಳೆ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ ಶೇ. 35ರಷ್ಟು ಪಂದ್ಯಶುಲ್ಕಕ್ಕೆ ಕತ್ತರಿ ಬಿತ್ತು. 2003, ಡಿಸೆಂಬರ್‌ 8ರಂದು ನಿಧಾನ ಗತಿಯ ಬೌಲಿಂಗ್‌ ಆರೋಪದ ಮೇಲೆ ಪಂದ್ಯ ಶುಲ್ಕದ ಶೇ. 10 ದಂಡ. 2004, ಜನವರಿ 22ರಂದು ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಶೇ.80ರಷ್ಟು ಪಂದ್ಯ ಶುಲ್ಕ ಕೋತಾ. 2004, ನವೆಂಬರ್‌ 16ರಂದು ಪಾಕ್‌ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಆರೋಪದ ಮೇಲೆ ರೆಫರಿ ಕ್ಲೈವ್‌ ಲಾಯ್‌ 2 ಟೆಸ್ಟ್‌ ಪಂದ್ಯಗಳ ನಿಷೇಧ ಹೇರಿದರು.

ಈಗ ಮತ್ತದೇ ಸಮಸ್ಯೆ...

ನಿಧಾನಗತಿಯ ಬೌಲಿಂಗ್‌ ಆರೋಪದ ಮೇಲೆ ನಾಯಕ ಗಂಗೂಲಿಗೆ 6 ಪಂದ್ಯಗಳ ನಿಷೇಧ ಹೇರಲಾಗಿದೆ. ನಾವೂ ಫಾರ್ಮ್‌ ಕಳೆದುಕೊಂಡಿರುವ ಗಂಗೂಲಿಯ ತಲೆದಂಡ ಬಯಸುತ್ತಿದ್ದೇವೆ.

ಏಳು ವರ್ಷಗಳ ಹಿಂದಿನ ಮಾತು. ಕ್ರಿಕೆಟ್‌ ಮೈದಾನದ ತುಂಬ ಮ್ಯಾಚ್‌ ಫಿಕ್ಸಿಂಗ್‌ ವಾಸನೆ. ನಾಯಕ ಅಜರುದ್ದೀನ್‌ ಮತ್ತವನ ಗೆಳೆಯರ ಯಡವಟ್ಟಿನಿಂದಾಗಿ ಭಾರತೀಯ ಕ್ರಿಕೆಟ್‌ ಎಂದರೆ ಮೋಸದಾಟದ ಅಡ್ಡೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿತ್ತು. ಜನ ‘ಕ್ರಿಕೆಟ್ಟಾಟ’ದ ಬಗ್ಗೆ ಮುನಿಸಿಕೊಂಡಿದ್ದರು. ಎರಡನೇ ಬಾರಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಸಚಿನ್‌ ಜಿಗುಪ್ಸೆ ಹುಟ್ಟಿಸುವಷ್ಟು ವಿಫಲನಾಗಿದ್ದ. ನಾಯಕತ್ವದ ಭಾರದಿಂದಾಗಿ ಆತನ ಬ್ಯಾಟಿಂಗ್‌ ಕೂಡ ಸೊರಗಿತ್ತು. ಇಂಥ ಸಂದರ್ಭದಲ್ಲಿ ಮುಂದಾಳತ್ವ ವಹಿಸಿಕೊಂಡವನೇ ಗಂಗೂಲಿ. ಆತನ ಮೇಲೆ ಎರಡು ಗುರುತರ ಜವಾಬ್ದಾರಿಗಳಿದ್ದವು. ಮೊದಲನೆಯದಾಗಿ, ಒತ್ತಡದ ಸಂದರ್ಭದಲ್ಲಿ ಕಿಂಚಿತ್ತೂ ಹೋರಾಡದೇ ಎದುರಾಳಿಗೆ ಶರಣಾಗುತ್ತಿದ್ದ, ಸತತ ಸೋಲುಗಳಿಂದ ಕಂಗೆಟ್ಟಿದ್ದ ನಮ್ಮ ಕ್ರಿಕೆಟ್‌ ತಂಡದಲ್ಲಿ ಆತ್ಮ ವಿಶ್ವಾಸ ತುಂಬಬೇಕಿತ್ತು. ಎರಡನೆಯದಾಗಿ, ಪ್ರತಿಯಾಬ್ಬ ಆಟಗಾರನನ್ನೂ ಅನುಮಾನದ ಕಣ್ಣಿನಿಂದಲೇ ನೋಡುತ್ತಿದ್ದ ಕ್ರಿಕೆಟ್‌ ಪ್ರೇಮಿಗಳ ಮನದಲ್ಲಿದ್ದ ಅಪನಂಬಿಕೆಯನ್ನು ಹೋಗಲಾಡಿಸಬೇಕಿತ್ತು. ಮೊದಲಿಗಿಂತ ಹೆಚ್ಚು ಉತ್ಸಾಹದಿಂದ, ಆಸಕ್ತಿಯಿಂದ ಕ್ರಿಕೆಟ್‌ ಪಂದ್ಯವನ್ನು ನೋಡುವಂತೆ ಮಾಡಬೇಕಿತ್ತು.

ಗಂಗೂಲಿ ಎದೆಗುಂದಲಿಲ್ಲ. ಪುಕ್ಕಲರ ಪಡೆಯಾಗಿದ್ದ ಭಾರತೀಯ ಬ್ಯಾಟ್ಸ್‌ಮನ್‌ಗಳ ತಂಡವನ್ನು ಮೆಗ್ರಾತ್‌, ಗಿಲೆಸ್ಪಿ, ಲೀ, ಅಖ್ತರ್‌, ವಕಾರ್‌ನಂಥ ಘಟಾನುಘಟಿಗಳ ಮುಂದೆ ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದ. ಹೊಸದಾಗಿ ತಂಡ ಸೇರಿದ್ದ ಮೊಹಮ್ಮದ್‌ ಕೈಫ್‌, ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌, ಪಾರ್ಥಿವ್‌ ಪಟೇಲ್‌ರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದ. ಪರಿಣಾಮ ಇಂಗ್ಲೆಂಡ್‌ನಲ್ಲಿ ನಡೆದ ನ್ಯಾಟ್‌ವೆಟ್ಟ್‌ ಟ್ರೋಫಿಯಲ್ಲಿ ಅವಿಸ್ಮರಣೀಯ ಗೆಲುವು. ಎಷ್ಟೇ ಕಲಾತ್ಮಕ ಆಟಗಾರನಾಗಿ ದ್ದರೂ, ಚುರುಕಾಗಿ ರನ್‌ ಗಳಿಸುವುದಿಲ್ಲ ಎಂಬ ಕಾರಣಕ್ಕೆ ಏಕದಿನ ತಂಡದಿಂದ ಹೊರಬೀಳುವ ಭೀತಿ ಎದುರಿಸುತ್ತಿದ್ದ ರಾಹುಲ್‌ ದ್ರಾವಿಡ್‌ಗೆ ಕೀಪಿಂಗ್‌ ಗ್ಲಾಸ್‌ ತೊಡಿಸಿದ. ಆನಂತರವೇ ದ್ರಾವಿಡ್‌ ಅವರ ಆತ್ಮವಿಶ್ವಾಸ ಹೆಚ್ಚಾಗಿದ್ದು, ಆಟದ ಶೈಲಿ ಬದಲಾಗಿದ್ದು.

ಎಲ್ಲೋ ಮಧ್ಯಮ ಕ್ರಮಾಂಕದಲ್ಲಿ ಕಳೆದುಹೋಗಬಹುದಾಗಿದ್ದ ವೀರೇಂದ್ರ ಸೆಹವಾಗ್‌ನನ್ನು ಆರಂಭಿಕ ಬ್ಯಾಟ್ಸ್‌ಮನ್ಸ್‌ ಆಗಿ ಮೈದಾನಕ್ಕಿಳಿಸಿದ. ಕೆಲಕಾಲ ಬೇಕಾಬಿಟ್ಟಿ ಬ್ಯಾಟು ಬೀಸಿ ವೈಫಲ್ಯದ ಸುಳಿಗೆ ಸಿಲುಕಿದ್ದ ಆತನನ್ನು ತಂಡದಿಂದಲೇ ಕೈ ಬಿಡಬೇಕೆಂಬ ಕೂಗೆದ್ದಿತು. ಆಗ ಸೆಹವಾಗ್‌ನಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿದ್ದೂ ಗಂಗೂಲಿಯೇ. ಪರಿಣಾಮವಾಗಿ ಇಂದು ಸೆಹವಾಗ್‌ ಎಂದರೆ ಜಗತ್ತಿನ ಎಲ್ಲ ಬೌಲರ್‌ಗಳ ಹಣೆ ಮೇಲೂ ಬೆವರೂರಲಾರಂಭಿಸುತ್ತದೆ. ಅಷ್ಟೇಕೆ, ಪದೇ ಪದೆ ವಿಫಲನಾಗುತ್ತಿದ್ದ ಸಚಿನ್‌ನ ಬೆಂಬಲಕ್ಕೆ ನಿಂತಿದ್ದು, ಪರವಹಿಸಿ ಮಾತನಾಡಿದ್ದು ಗಂಗೂಲಿಯೇ.

ಟೆಸ್ಟ್‌ ಇರಲಿ, ಒನ್‌ ಡೇ ಇರಲಿ. ತೆಂಡೂಲ್ಕರ್‌ ಔಟಾದ ತಕ್ಷಣ ಟೀವಿ ಆಫ್‌ ಮಾಡುವ, ಮೈದಾನದಿಂದ ಜಾಗ ಖಾಲಿ ಮಾಡುವ ಪರಿಸ್ಥಿತಿ ಇತ್ತು. ಆದರೆ ಸೆಹವಾಗ್‌, ದ್ರಾವಿಡ್‌, ಧೋನಿ, ಲಕ್ಷ್ಮಣ್‌,ಯುವರಾಜ್‌, ಕೈಫ್‌ಗಳ ಬ್ಯಾಟಿಂಗ್‌ಗೆ ಶಕ್ತಿ ತುಂಬಿ ಅಂತಹ ಪರಿಸ್ಥಿತಿಯನ್ನು ಬದಲಾಯಿಸಿದ್ದು ಗಂಗೂಲಿಯ ಆಕ್ರಮಣಕಾರಿ ನೀತಿಯೇ.

ಆಸ್ಟ್ರೇಲಿಯಾದವರ ‘Mind Games’ಗೆ ಪ್ರತಿತಂತ್ರ ರೂಪಿಸಿದ್ದೂ ಆತನೇ. ನಾಯಕನ ಆಕ್ರಮಣಕಾರಿ ವರ್ತನೆ ಇಂದು ತಂಡದ ಸದಸ್ಯರ ನಿರ್ವಹಣೆಯಲ್ಲೂ ಕಂಡುಬರುತ್ತಿದೆ. ಹೀಗಾಗಿ ಭಾರತ ಸೋಲಿನ ದವಡೆಯಿಂದ ಗೆಲುವನ್ನು ಕಸಿಯುತ್ತಿದೆ. ವಿಶ್ವಕಪ್‌ ಫೈನಲ್‌ ತಲುಪಲು ಸಾಧ್ಯವಾಗುತ್ತಿದೆ. ಪಾಕಿಸ್ತಾನವನ್ನು ಅದರ ನೆಲದಲ್ಲೇ ಮೆಟ್ಟಿ ನಿಲ್ಲಲು ನಮ್ಮಿಂದಾಗಿದೆ.

‘ನಾನೂ ಕೂಡ ಸೆಹವಾಗ್‌ನಂತೆಯೇ ಆಡಬಲ್ಲೆ. ಅವನಂತೆ ಆಡುವ ಬಯಕೆ, ಸಾಮರ್ಥ್ಯ ನನಗಿದೆ. ಆದರೆ ನಾನು ಸೆಹವಾಗ್‌ನಂತಾಗಲು ಇವಿಷ್ಟೇ ಸಾಲದು. ನಾಯಕನ ಪ್ರೋತ್ಸಾಹವೂ ಬೇಕು. ಸೆಹವಾಗ್‌ಗೆ ಗಂಗೂಲಿ ಬೆನ್ನು ತಟ್ಟಿದಂತೆ ನನಗೂ ಒಂದಿಷ್ಟು ಅವಕಾಶ ನೀಡಿದರೆ ಆರಂಭಿಕ ಆಟಗಾರನಾಗಿ ಮಿಂಚಬಲ್ಲೆ’ ಎಂಬ ಶಹೀದ್‌ ಅಫ್ರೀದಿಯ ಮಾತುಗಳೇ ಗಂಗೂಲಿಯ ಮಹತ್ವವೇನೆಂಬುದನ್ನು ವರ್ಣಿಸುತ್ತವೆ.

ಕ್ರಿಕೆಟ್‌ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಗಳಿಗೆ ಎಂದರೆ 1983ರ ವಿಶ್ವಕಪ್‌ ಗೆಲುವು. ನಮಗೆ ನೆನಪಿರುವಂತೆ ಅಂಥ ಯಶಸ್ಸಿನ ಸಮೀಪ ನಾವು ಮತ್ತೊಮ್ಮೆ ಸುಳಿದದ್ದು 2003ರ ವಿಶ್ವಕಪ್‌ನಲ್ಲಿ. ಅಂದು ತಂಡವನ್ನು ಫೈನಲ್‌ತನಕ ಮುನ್ನಡೆಸಿದವನು ಗಂಗೂಲಿ. ಇಲ್ಲಿಯೂ ಅಷ್ಟೆ, ಗಂಗೂಲಿ ನೇತೃತ್ವದಲ್ಲಿ ತಂಡ ಫೈನಲ್‌ ತಲುಪಿದ್ದನ್ನು ನಾವು ಮರೆಯುತ್ತೇವೆ. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದಕ್ಕಾಗಿ ಆತನನ್ನು ಮನಸೋ ಇಚ್ಚೆ ಬೈಯುತ್ತೇವೆ. ನ್ಯಾಟ್‌ ವೆಸ್ಟ್‌ ಸರಣಿಯ ಫೈನಲ್‌ನಲ್ಲಿ ಗಳಿಸಿದ ಅಮೋಘ ಗೆಲುವಿಗಿಂತ ಸೌರವ್‌ ಶರ್ಟ್‌ ಬಿಚ್ಚಿ ಮೈದಾನಕ್ಕೆ ಓಡಿ ಬಂದಿದ್ದೇ ನಮ್ಮ ಮಾಧ್ಯಮಗಳ ಕಣ್ಣಿಗೆ ಕಾಣುತ್ತದೆ. ಟೀಕೆಯನ್ನೂ ಮಾಡುತ್ತವೆ. ಕೃತಘ್ನತೆ ಎಂದರೆ ಇದೇ ಅಲ್ಲವೆ?

ಯಾರು ಏನೇ ಅಂದರೂ ಇವತ್ತು ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿರುವುದು ಭಾರತವೇ. ಭಾರತ ಸೇರಿದಂತೆ ಉಳಿದೆಲ್ಲ ತಂಡಗಳಿಗಿಂತ ಆಸ್ಟ್ರೇಲಿಯಾ ಸಾಕಷ್ಟು ಮೇಲ್ಮಟ್ಟದಲ್ಲಿರುವುದು ನಿಜ. ಆಸ್ಟ್ರೇಲಿಯಾ ವಿರುದ್ಧ ಎಲ್ಲ ತಂಡಗಳೂ ಸೋತು ಸುಣ್ಣವಾಗುತ್ತಲೇ ಇವೆ. ಅಂಥ ಆಸ್ಟ್ರೇಲಿಯಾದ ಅಶ್ವಮೇಧವನ್ನು ಎರಡು ಸಲ ತಡೆದದ್ದು ಗಂಗೂಲಿ ಪಡೆಯೇ. ಮೊದಲು ಭಾರತಕ್ಕೆ ಬಂದ ಕಾಂಗರೂಗಳನ್ನು ಸದೆಬಡೆದು ಕಳಿಸಿದ ಭಾರತ, ನಂತರ ಆಸ್ಟ್ರೇಲಿಯಾದ ವಿರುದ್ಧ ಅದರ ನೆಲದಲ್ಲೇ ಸಮಬಲ ಸಾಧಿಸಿದ್ದು ಇತ್ತೀಚಿನ ವರ್ಷಗಳಲ್ಲೇ ಅತ್ಯುತ್ತಮ ಸಾಧನೆ. ಆ ಟೆಸ್ಟ್‌ ಸರಣಿಯಲ್ಲಿ ಭಾರತದ ಯಶಸ್ಸಿಗೆ ಮುನ್ನುಡಿ ಬರೆದಿದ್ದು ನಾಯಕ ಗಂಗೂಲಿಯೇ. ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 144ರನ್‌ ಬಾರಿಸಿ ತಂಡವನ್ನು ಕುಸಿತದಿಂದ ಮೇಲೆತ್ತಿದವನೇ ಗಂಗೂಲಿ. ಗಂಗೂಲಿ ತೋರಿದ ಕೆಚ್ಚು ತಂಡದ ಇತರ ಬ್ಯಾಟ್ಸ್‌ಮನ್‌ಗಳ ಮನದಲ್ಲೂ ಹೋರಾಟದ ಕಿಡಿ ಹೊತ್ತಿಸಿತ್ತು. ಆ ಇನಿಂಗ್ಸ್‌ ಸರಣಿಯ ದಿಕ್ಕನ್ನೇ ಬದಲಿಸಿತು. ಆದರೆ ಆ ಶತಕ ಇಂದು ಯಾರಿಗೂ ನೆನಪಿರಲಿಕ್ಕಿಲ್ಲ. ಏಕೆಂದರೆ ನಮಗೀಗ ತುರ್ತಾಗಿ ಗಂಗೂಲಿಯನ್ನು ತಂಡದಿಂದ ಕೈಬಿಡಬೇಕಾಗಿದೆ. ಆತನನ್ನು ಮನೆಗೆ ಕಳುಹಿಸಿ ಸದ್ಯದ ‘ರನ್‌ ಮೆಷಿನ್‌’ ದ್ರಾವಿಡ್‌ನನ್ನು ನಾಯಕ ಪಟ್ಟದಲ್ಲಿ ಕೂರಿಸಲು ನಾವು ತುದಿಗಾಲಲ್ಲಿ ನಿಂತಿದ್ದೇವೆ. ಒಂದು ವೇಳೆ ನಾಯಕತ್ವದ ಒತ್ತಡ ತಾಳಲಾರದೆ ದ್ರಾವಿಡ್‌ನ ಬ್ಯಾಟಿಂಗ್‌ ‘ಗೋಡೆ’ಯೂ ಕುಸಿದರೆ ಮುಂದೇನು ಮಾಡಬೇಕು ಎಂಬ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ.

ಇಲ್ಲಿ ನಾವು ಗಮನಿಸಬೇಕಾದ ಇನ್ನೊಂದು ಮುಖ್ಯ ವಿಷಯವಿದೆ. ತೆಂಡ್ಕೂಲರ್‌, ದ್ರಾವಿಡ್‌, ಸೆಹವಾಗ್‌ನಂತಹ ಘಟಾನುಘಟಿಗಳೇ ತುಂಬಿರುವ ತಂಡವನ್ನು ಮುನ್ನಡೆಸುವುದು ನಾವು ಎಣಿಸಿದಷ್ಟು ಸುಲಭವಲ್ಲ. ಏಕೆಂದರೆ, ಈ ಖ್ಯಾತನಾಮರ ಮುಂದೆ ಉಳಿದ ಆಟಗಾರರ ಸಾಧನೆ ಮಸುಕಾಗುವುದು ಸಹಜವೇ. ಅಂಥ ಸಂದರ್ಭದಲ್ಲಿ ಉಳಿದ ಆಟಗಾರರಲ್ಲಿ, ಅದರಲ್ಲೂ ವಿಶೇಷವಾಗಿ ನಾಯಕನಲ್ಲಿ ಉಳಿದ ಆಟಗಾರರಲ್ಲಿ, ಅದರಲ್ಲೂ ವಿಶೇಷವಾಗಿ ನಾಯಕನಲ್ಲಿ ಕೀಳರಿಮೆ ಮೂಡುವ ಸಾಧ್ಯತೆ ಇದೆ. ಬಹುಶಃ ಗಂಗೂಲಿ ಕೂಡ ಉಳಿದವರಿಗಿಂತ ಉತ್ತಮ ಪ್ರದರ್ಶನ ನೀಡಲೇಬೇಕೆಂಬ ಒತ್ತಡದಿಂದ ಬಳಲುತ್ತಿರಬಹುದು. ಸ್ವೀವ್‌ ವಾ ಅಥವಾ ಹ್ಯಾನ್ಸಿ ಕ್ರೋನಿಯೆಗೆ ಅಂಥ ಸಮಸ್ಯೆ ಇರಲಿಲ್ಲ. ಇಂಜಮಾಮ್‌ಗೂ ಅಂತಹ ಒತ್ತಡವಿಲ್ಲ. ಏಕೆಂದರೆ ಅವರ ತಂಡದಲ್ಲಿ ನಾಯಕನನ್ನು ಮೀರಿಸುವ ಆಟಗಾರರು ಇರಲಿಲ್ಲ !

ಹಾಗಂತ ತ್ರಾಣ ಕಳೆದುಕೊಳ್ಳುವವರೆಗೂ ಗಂಗೂಲಿಗೆ ಆಡಲು ಅವಕಾಶ ಕೊಡಬೇಕೆಂಬ ಹೇಳುತ್ತಿಲ್ಲ. ಆದರೆ ಫಾರ್ಮ್‌ ಕಳೆದು ಕೊಂಡಿರುವುದನ್ನೇ ನೆಪವಾಗಿಟ್ಟುಕೊಂಡು ಅವಮಾನ ಮಾಡುವುದು ಬೇಡ. ಒನ್‌ ಡೇ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ದಾಟಿರುವ ಮೊದಲ ಆಟಗಾರ ಸಚಿನ್‌ ಎಂದಾದರೆ, 10 ಸಾವಿರದ ಹತ್ತಿರವಿರುವ ಏಕೈಕ ಭಾರತೀಯ ಆಟಗಾರ ಸೌರವ್‌! ವಿಭ್ರಾಂತಿಗೊಳಗಾದಂತೆ ವರ್ತಿಸುತ್ತಿರುವ ಐಸಿಸಿ ತಾಳಕ್ಕೆ ಕುಣಿಯುವ ಬದಲು, ಸೌರವ್‌ನನ್ನು ಸಮರ್ಥಿಸೋಣ. ಕತ್ತು ಹಿಡಿದು ತಳ್ಳುವ ಕೃತಘ್ನತೆ ಬೇಡ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X