• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಂತಿ, ಸಮಾಧಾನ ನೀಡದ ಶ್ರೀಮಂತಿಕೆ ಇದ್ದರೆಷ್ಟು, ಬಿಟ್ಟರೆಷ್ಟು ?

By Staff
|
Vishweshwar Bhat ವಿಶ್ವೇಶ್ವರ ಭಟ್‌
ಇತ್ತೀಚೆಗೆ ಪತ್ರಿಕೆಯಲ್ಲೊಂದು ಸ್ವಾರಸ್ಯಕರ ಸುದ್ದಿ ಪ್ರಕಟವಾಗಿತ್ತು. ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕಾರಣ ಅದರ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ. ಪತ್ರಿಕೆಗಳು ಸಂಪಾದಕೀಯವನ್ನೂ ಬರೆಯಲಿಲ್ಲ. ಹೋಗಲಿ ಈ ಸುದ್ದಿ ಬಗ್ಗೆ ಯಾರಾದರೂ ಪ್ರತಿಕ್ರಿಯಿಸಿದರಾ? ಅದೂ ಇಲ್ಲ. ಈ ಸುದ್ದಿ ಸುದ್ದಿಯಾಗದೇ ತೇಲಿಹೋಯಿತು.

ಆ ಸುದ್ದಿ ಯಾವುದಪ್ಪಾ ಅಂದ್ರೆ- ಈ ಜಗತ್ತಿನಲ್ಲಿ ಅತ್ಯಂತ ಸಂತಸ ಹಾಗೂ ಸಮಾಧಾನ ಹೊಂದಿದ ದೇಶ ಅಂದ್ರೆ ಬಾಂಗ್ಲಾದೇಶ! Bangladesh is happiest in the world. ಅತಿ ಖುಷಿವಂತರೆಂದರೆ ಅಲ್ಲಿನ ಜನ! ಇದಕ್ಕಿಂತ ದೊಡ್ಡ ಸುದ್ದಿ ಏನಪ್ಪಾ ಅಂದ್ರೆ, ಈ ಪಟ್ಟಿಯಲ್ಲಿ ಅಮೆರಿಕಕ್ಕೆ ನಲವತ್ತಾರನೆ ಸ್ಥಾನ. ಬ್ರಿಟನ್‌ಗೆ ಮೂವತ್ತೆರಡನೆಯದು. ಎಂಥ ತಮಾಷೆ ನೋಡಿ, ಇಡೀ ಪ್ರಪಂಚದ ದೃಷ್ಟಿಯಲ್ಲಿ ಅತ್ಯಂತ ಕಡು ಬಡ ದೇಶ ಎಂದೇ ಬಿಂಬಿತನಾಗಿರುವ, ಅತಿ ಹೆಚ್ಚು ದಾರಿದ್ರ್ಯ, ಹಸಿವು, ರೋಗರುಜಿನ, ಗಲೀಜು ಇರುವ ರಾಷ್ಟ್ರವೆಂದೇ ನಾವೆಲ್ಲಾ ತಿಳಿದಿರುವ ಬಾಂಗ್ಲಾ ಅತ್ಯಂತ ಹೆಚ್ಚು ಸಂತೋಷಿಗಳನ್ನು, ಸಮಾಧಾನಿಗಳನ್ನು ಹೊಂದಿದೆ ಹಾಗೂ ಖುಷಿವಂತರ ದೇಶ. ಸಮಸ್ತ ವಿಶ್ವದ ಕಣ್ಣಿಗೆ ಅತ್ಯಂತ ಶ್ರೀಮಂತ, ಸಂಪದ್ಭರಿತ, ಅತ್ಯಾಧುನಿಕ ಹಾಗೂ ಮುಂದುವರಿದ ದೇಶವಾಗಿರುವ ಅಮೆರಿಕ ಸಂತೋಷದ ವಿಷಯದಲ್ಲಿ ಬಾಂಗ್ಲಾಗಿಂತ ದೂರದೂರ ಅಥವಾ ಹಿಂದೆ ಹಿಂದೆ. ತಂತ್ರಜ್ಞಾನದಲ್ಲಿ ಮುಂದುವರಿದ ದೇಶವೆಂದೇ ಪರಿಗಣಿತವಾಗಿರುವ ಜಪಾನ್‌, ಜರ್ಮನಿ, ಫ್ರಾನ್ಸ್‌ ಮತ್ತಷ್ಟು ದೂರದೂರ. ಆಸ್ಟ್ರೇಲಿಯಾ, ಕೆನಡಾ, ಸ್ವಿಜರ್‌ಲ್ಯಾಂಡ್‌ಗೆ ಐವತ್ತರೊಳಗೆ ಸೇರುವ ಭಾಗ್ಯವೂ ಇಲ್ಲ. ಶ್ರೀಮಂತ ದೇಶಗಳೆಲ್ಲ ಬಾಂಗ್ಲಾದೇಶದ ಮುಂದೆ ತಲೆತಗ್ಗಿಸಿ ನಿಲ್ಲಬೇಕು. ಆ ಪ್ರಯಾಣದ ಖುಷಿ ಜೀವಿಗಳು ಅಲ್ಲಿದ್ದಾರೆ. ಬಾಂಗ್ಲಾದೇಶಿಯರಲ್ಲಿ ಹಣವಿಲ್ಲದಿರಬಹುದು. ಆದರೆ ಅವರು ಅತ್ಯಂತ ಶ್ರೀಮಂತರಿಗಿಂತ ಹೆಚ್ಚು ಸಂತೋಷಿಗಳು. ಅವರಲ್ಲಿರುವಷ್ಟು ಸಮಾಧಾನ, ಸಂತೃಪ್ತಿ, ನೆಮ್ಮದಿ, ಮಾನಸಿಕ ಶಾಂತಿ ಅಮೆರಿಕನ್ನರಲ್ಲೂ ಇಲ್ಲ. ಹೀಗಾಗಿ ಅವರು ನಲವತ್ತಾರನೆಯವರು. ಎಂಥ ವಿಪರ್ಯಾಸ?!

ಯಾರೋ ಪಡಪೋಶಿಗಳು ಕೊಟ್ಟ ತೀರ್ಪು ಇದಲ್ಲ. ಯಾರೋ ಪಂತಪುಂಡರ ಪೊಗದಸ್ತು ಕಲ್ಪನೆಯೂ ಇದಲ್ಲ. ಪ್ರತಿಷ್ಠಿತ ಲಂಡನ್‌ ಸ್ಕೂಲ್‌ಆಫ್‌ ಇಕನಾಮಿಕ್ಸ್‌ನ ಪರಿಣಿತ ಅರ್ಥಶಾಸ್ತ್ರಜ್ಞರು ಎರಡು ವರ್ಷವಿಡೀ ಜಗತ್ತಿನ 64ದೇಶಗಳಲ್ಲಿ ಕೈಗೊಂಡ ಸಮೀಕ್ಷೆಯಿಂದ ಹೊರಹೊಮ್ಮಿದ ಅಂಶಗಳಿವು. ಇದನ್ನು World Happiness Survey ಅಂತ ಕರೆಯುತ್ತಾರೆ. ಅಮೆರಿಕದ ಕಣ್ಣಿಗೆ ಇನ್ನೂ ತೃತೀಯ ವಿಶ್ವದ ದೇಶವಾಗಿರುವ, ಬಡದೇಶ ಎಂದೇ ಕರೆಯಿಸಿಕೊಳ್ಳುವ ಭಾರತಕ್ಕೆ ಐದನೇ ಸ್ಥಾನ. ಅಮೆರಿಕದ ದೃಷ್ಟಿಯಲ್ಲಿ ನಾಗರಿಕತೆಯೇ ಇಲ್ಲದಿರುವ ದೇಶಗಳಾಗಿರುವ ಘಾನಾ, ಲಾಟ್ವಿಯಾ, ಕ್ರೊಮೇಶಿಯಾ, ಎಸ್ತೋನಿಯಾಗಳೇ ವಾಸಿ. ಅತ್ಯಂತ ನೆಮ್ಮದಿ, ಸಮಾಧಾನಿಗಳಿರುವ ಹತ್ತು ದೇಶಗಳೊಳಗೆ ಇವು ಸ್ಥಾನ ಪಡೆಯುತ್ತವೆ. ರಷ್ಯಾದ ಕತೆ ವಿಚಿತ್ರ. ಅದು ಅತ್ಲಾಗಿ ಶ್ರೀಮಂತ ದೇಶವೂ ಅಲ್ಲ, ಇತ್ಲಾಗಿ ಶ್ರೀಮಂತ ದೇಶವೂ ಅಲ್ಲ. ಬ್ರಿಟಿಷರ ಪಾಡು ನೋಡಿ. ಅವರು ಬಾಂಗ್ಲಾದೇಶಿಗಳಿಗಿಂತ ಅರವತ್ತು ಪಟ್ಟು ಶ್ರೀಮಂತರು. ಆದರೆ ಸಂತೋಷದ ವಿಚಾರದಲ್ಲಿ ಪುಟಗೋಸಿ ಬಾಂಗ್ಲಾದೇಶಿಗಳಿಗಿಂತ ಎಂಬತ್ತು ಪಟ್ಟು ಕಡಿಮೆ ಸುಖಿಗಳು.

ಶ್ರೀಮಂತ ರಾಷ್ಟ್ರಗಳಲ್ಲಿ ಶ್ರೀಮಂತಿಕೆಯಿದೆ, ಸಂಪತ್ತಿದೆ. ಸಕಲ ಸೌಕರ್ಯಗಳಿವೆ. ಯಾವುದಕ್ಕೂ ಕೊರತೆಯೆಂಬುದು ಇಲ್ಲ. ಆದರೆ ಸಮಾಧಾನ, ನೆಮ್ಮದಿ, ಸಂತೋಷ ಎಂಬುದು ಇಲ್ಲ. ಬಡದೇಶಗಳಲ್ಲಿ ಬಡತನವಿದೆ. ಹೊಲಸು, ಹಸಿವು ಇದೆ. ಪ್ರಾಥಮಿಕ ಸೌಕರ್ಯಗಳಿಲ್ಲ. ಆಧುನಿಕ ಸವಲತ್ತುಗಳಿಲ್ಲ. ಆದರೆ ಅಲ್ಲಿ ಸಂತೋಷ, ನೆಮ್ಮದಿ, ಶಾಂತಿ, ಸಮಾಧಾನವಿದೆ. ದುಡ್ಡಿರುವಲ್ಲಿ ಸುಖವಿದೆ. ಸಮಾಧಾನವಿಲ್ಲ. ದುಡ್ಡಿರದಿರುವಲ್ಲಿ ಸುಖವಿಲ್ಲದಿರಬಹುದು ಆದರೆ ಸಮಾಧಾನವಿದೆ, ಮಾನಸಿಕ ಶಾಂತಿಯಿದೆ. ಅಷ್ಟಕ್ಕೂ ನಮ್ಮ ಜೀವಿತದ ಮೂಲ ಉದ್ದೇಶ ಮಾನಸಿಕ ಶಾಂತಿ ಗಳಿಸುವುದೇ ಅಲ್ಲವೇ?

ಕಳೆದ ಹತ್ತು ವರ್ಷಗಳಲ್ಲಿ ಅಮೆರಿಕನ್ನರ ಕೊಳ್ಳುವ ಸಾಮರ್ಥ್ಯ ನಾಲ್ಕುಪಟ್ಟು ಹೆಚ್ಚಿದೆ. ಅಂದರೆ ಅವರ ದುಡಿಮೆ ಸಾಮರ್ಥ್ಯ ಹೆಚ್ಚಿದೆ ಅಂದಂತಾಯಿತು. ಆದರೆ ಅವರು ಹತ್ತು ವರ್ಷ ಹಿಂದೆ ಇದ್ದದ್ದಕ್ಕಿಂತ ಈಗ ಎಂಟು ಪಟ್ಟು ಹೆಚ್ಚು ಅಸುಖಿಗಳಾಗಿದ್ದಾರೆ. ಜೀವನದಲ್ಲಿ ಎಲ್ಲ ಇದ್ದೂ ಏನೂ ಇಲ್ಲದವರ ಮಾನಸಿಕ ಸ್ಥಿತಿ ಹೊಂದಿದ್ದಾರೆ. ಹೀಗಿರುವಾಗ ‘ಎಲ್ಲ ಇವೆ’ಎನ್ನುವುದಕ್ಕೆ ಏನರ್ಥ? ಬಾಂಗ್ಲಾ, ಭಾರತ, ಘಾನಾ, ಲಾಟ್ವಿಯಾ ಮುಂತಾದ ದೇಶಗಳ ಪರಿಸ್ಥಿತಿ ಉಲ್ಟಾ. ಹತ್ತು ವರ್ಷಗಳ ಹಿಂದೆ ಭಾರೀ ಬಡತನವಿತ್ತು ಅಂದುಕೊಂಡರೆ ಈಗ ಬಡತನ ಮಾತ್ರ ಇದೆ. ಆಗ ನೆಮ್ಮದಿಯ ಪ್ರಮಾಣ ಹತ್ತು ಇತ್ತು ಎಂದು ಕೊಂಡರೆ ಈಗ ಬಡತನ ಮಾತ್ರ ಇದೆ. ಆಗ ನೆಮ್ಮದಿಯ ಪ್ರಮಾಣ ಹತ್ತು ಇತ್ತು ಅಂದು ಕೊಂಡರೆ ಈಗ ಅದು ಎಂಟು ಇದೆ. ಬಡತನ ದೂರವಾದಂತೆ ನೆಮ್ಮದಿ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಶ್ರೀಮಂತ ದೇಶಗಳಲ್ಲಿ ಕೌಟುಂಬಿಕ ವ್ಯವಸ್ಥೆ ಛಿದ್ರವಾಗಿದ್ದರೆ,ಬಡದೇಶಗಳಲ್ಲಿ ಅದಿನ್ನೂ ಗಟ್ಟಿಯಾಗಿದೆ.

Money cannot buy happiness ಎಂಬ ಮಾತು ಸುಳ್ಳಲ್ಲ. ದುಡ್ಡಿನಿಂದ ಮೆತ್ತನೆಯ ಹಾಸಿಗೆ ಖರೀದಿಸಬಹುದೇ ಹೊರತು ಸವಿನಿದ್ದೆಯನ್ನಲ್ಲ. ದುಡ್ಡಿನಿಂದ ಭವ್ಯ ಬಂಗಲೆ ಖರೀದಿಸಬಹುದೇ ಹೊರತು ಶಾಂತಿ, ಸಮಾಧಾನವನ್ನಲ್ಲ.

ಅಮೆರಿಕ ಶ್ರೀಮಂತ ದೇಶವಾದರೂ ಅಲ್ಲಿನ ಜನ ಅಸುಖಿಗಳು ಹೇಗೆ? ಅಲ್ಲಿನವರು ಮನೆ, ಕಾರು, ಫ್ರಿಜ್ಜು, ವಾಷಿಂಗ್‌ ಮಶಿನ್ನು, ಟಿವಿ, ಹೋಮ್‌ ಥಿಯೇಟರ್‌ ಎಲ್ಲವನ್ನೂ ಹೊಂದಿರುತ್ತಾರೆ. ಬೇಕಾದ ಎಲ್ಲ ಸೌಲಭ್ಯಗಳಿವೆಯೆಂದು ನಾವು ಭಾವಿಸಿದ್ದೇವೆ. ಆದರೆ ಓಡಾಡುವ ಕಾರು ಅವರದ್ದಲ್ಲ. ಮನೆಯಲ್ಲಿನ ಪೀಠೋಪಕರಣಗಳು ಅವರದ್ದಲ್ಲ. ಹಾಗಾದರೆ ಯಾರದ್ದು? ಇವೆಲ್ಲ ಬ್ಯಾಂಕ್‌ಗಳದ್ದು. ಯಾವುದು ಶ್ರೀಮಂತಿಕೆಯ ಸಂಕೇತಗಳೋ ಅವೇ ಅವರದ್ದಲ್ಲ. ಅವೆಲ್ಲ ಬ್ಯಾಂಕ್‌ಗಳದ್ದು. ‘ಈ ಮನೆ ನನ್ನದು, ನನ್ನ ಸ್ವಂತದ್ದು’ ಎಂದು ಹೇಳುವ ಕೆಲವೇ ಕೆಲವು ಮಂದಿ ಸಿಕ್ಕಾರು. ವಾಸಿಸುವ ಮನೆ, ಓಡಾಡುವ ಕಾರು ಬ್ಯಾಂಕಿನದ್ದಾದರೆ ತೊಟ್ಟ ಬಟ್ಟೆ, ಮೆಟ್ಟಿದ ಚಪ್ಪಲಿಯೂ ಬ್ಯಾಂಕಿನದ್ದೇ. ಬ್ಯಾಂಕ್‌ಗಳು ನೀಡುವ ಕ್ರೆಡಿಟ್‌ ಕಾರ್ಡಿನಲ್ಲಿ ಅವನ್ನೆಲ್ಲ ಖರೀದಿಸಿದ್ದು. ಹಾಗೆ ನೋಡಿದರೆ, ಈ ಆಸ್ತಿಪಾಸ್ತಿಗಳಿವೆಯಲ್ಲ ಅವು ಬ್ಯಾಂಕ್‌ಗಳದ್ದೂ ಅಲ್ಲ. ಅವುಗಳೆಲ್ಲ ಇನ್ನೂ ದೊಡ್ಡ ಬ್ಯಾಂಕ್‌ಗಳದ್ದು. ಆದರೆ ಎಲ್ಲರೂ ತಾವು ಶ್ರೀಮಂತರು ಎಂದು ಭಾವಿಸಿದ್ದಾರೆ. ಏಕೆಂದರೆ ಅವರ ಬಳಿ ಮನೆಯಿದೆ, ಕಾರಿದೆ, ಇತ್ಯಾದಿ ಇತ್ಯಾದಿಗಳಿವೆ. ಆದರೆ ಅವ್ಯಾವವೂ ಅವರದ್ದಲ್ಲವೇ ಅಲ್ಲ. ಮುಂದೊಂದು ದಿನ ಇವೆಲ್ಲ ಅವರದ್ದಾಗಬಹುದು. ಆ ಮಾತು ಬೇರೆ. ಆದರೆ ಅವರು ಇಂದು ಎಲ್ಲ ಇದ್ದೂ ಸುಖಿಗಳಲ್ಲ. ಕಾರಣ ಅವರಲ್ಲಿ ಮಾನಸಿಕ ನೆಮ್ಮದಿ ಇಲ್ಲ.

ಕಾರನ್ನು ಖರೀದಿಸುವುದಕ್ಕಿಂತ ಮೊದಲು ಇದ್ದ ತಹತಹ, ನಿರೀಕ್ಷೆ ಕಾರು ಖರೀದಿಸಿದ ನಂತರ ಇಲ್ಲ. ಮನೆ ಖರೀದಿಸಿದ ಬಳಿಕ ಸಾಲ ತೀರಿಸಬೇಕೆಂಬ ಚಿಂತೆ ಅನುಕ್ಷಣವೂ ಕಿತ್ತುತಿನ್ನುತ್ತದೆ. ಚಿಂತೆಯಿರುವ ತಾಣದಲ್ಲಿ ನೆಮ್ಮದಿಗೆ ಕೆಲಸವಿಲ್ಲ. ಏರ್‌ಕಂಡೀಷನ್‌ ವ್ಯವಸ್ಥೆಗೆ ಒಮ್ಮೆ ಹೊಂದಿಕೊಂಡರೆ ಅನಂತರ ಅದು ಐಷಾರಾಮ ಅಂದೆನಿಸುವುದಿಲ್ಲ. ಹೊಸ ಕಾರು ಕೊಡುವ ಖುಷಿ ಹೆಚ್ಚೆಂದರೆ ನಾಲ್ಕು ಕಂತು ಕಟ್ಟುವ ತನಕ ಇರಬಹುದು. ಆಧುನಿಕ ಔಷಧ, ವೈದ್ಯಕೀಯ ಸೌಲಭ್ಯಗಳಿಂದ ಆಯುಷ್ಯ ದೀರ್ಘವಾದರೆ, ಹೆಚ್ಚು ಕಾಲ ಬದುಕುವುದು ಕೂಡ ನೋವಿನ ಸಂಗತಿಯಾಗಬಹುದು.

ನಾವು ಯಾವುದನ್ನು ಸುಖ ಎಂದುಕೊಂಡಿದ್ದೇವೋ ಅದು ಸುಖ ಅಲ್ಲ ಎಂದಂತಾಯಿತು. ಯಾವುದರಿಂದ ನೆಮ್ಮದಿ ಸಿಗುತ್ತದೆ ಎಂದು ಕೊಂಡಿದ್ದೇವೋ ಅದರಿಂದ ನೆಮ್ಮದಿ ಸಿಗುವುದಿಲ್ಲ ಎಂದಂತಾಯಿತು.

P.R.S.Oberoiಇಲ್ಲಿ ನಿಮಗೆ ರಾವ್‌ ಬಹಾದೂರ್‌ ಮೋಹನ್‌ಸಿಂಗ್‌ ಒಬೆರಾಯ್‌ನ ಜೀವನಕತೆಯನ್ನು ಹೇಳಬೇಕು. ಒಬೆರಾಯ್‌ ಹೋಟೆಲಿನ ಮಾಲೀಕನೀತ. ಹುಟ್ಟಿದಾಗ ಬಡತನದ ಹೊರತಾಗಿ ಮತ್ತೇನೂ ಇರಲಿಲ್ಲ. ಎರಡು ಹೊತ್ತು ಊಟಕ್ಕೆ ತತ್ವಾರ. ಕೂಲಿ ಕೆಲಸ ಮಾಡಿಕೊಂಡಿದ್ದ. ಊರಿಗೆ ಪ್ಲೇಗ್‌ ಬಂತು. ಎಲ್ಲ ಮನೆಮಠ ಬಿಟ್ಟು ಓಡಿದರು. ಹೆಂಡತಿಯಾಂದಿಗೆ ಶಿಮ್ಲಾಕ್ಕೆ ಬಂದ. ಹೋಟೆಲ್‌ನಲ್ಲಿ ಸಫ್ಲೈಯರ್‌ ಕೆಲಸ ಸಿಕ್ಕಿತು. ತಿಂಗಳಿಗೆ ಎಂಟು ರೂಪಾಯಿ ಸಂಬಳ. ಹೆಂಡತಿಯನ್ನು ಸಾಕಲು ಆಗಲಿಕ್ಕಿಲ್ಲವೆಂದು ತವರಿಗೆ ಕಳಿಸಿದ. ನಾಲ್ಕು ವರ್ಷ ದುಡಿದು ಇನ್ನೇನು ಕೆಲಸ ಬಿಡಬೇಕೆಂದು ನಿರ್ಧರಿಸಿದಾಗ ಹೋಟೆಲ್‌ ಮಾಲೀಕ ಕರೆದು,‘ನಿನ್ನ ನಿಯತ್ತು, ಶ್ರದ್ಧೆಗೆ ಮೆಚ್ಚಿದ್ದೇನೆ. ಈ ಹೋಟೆಲನ್ನು ನಿನಗೆ ಕೊಡುತ್ತೇನೆ. ನಿನಗೆ ಸಾಧ್ಯವಾಗುವಷ್ಟು ಹಣಕೊಡು. ಆದರೆ ಹೋಟೆಲನ್ನು ಚೆನ್ನಾಗಿ ನಡೆಸಿಕೊಂಡು ಹೋಗು’ ಎಂದ. ಹೆಂಡತಿಯ ಮಾಂಗಲ್ಯ, ಒಡವೆ ಮಾರಿ, ಸ್ನೇಹಿತರಿಂದ ಸಾಲ ಪಡೆದು(ಅಂದು)ಒಂಬತ್ತು ಸಾವಿರ ರೂ. ಹೊಂದಿಸಿ ಕೊಟ್ಟ. ಹೋಟೆಲ್‌ ಅವನದಾಯಿತು. ಈ ದಂಧೆಯೂ ಕೈಗೆ ಹತ್ತಿತು. ಒಬೆರಾಯ್‌ ನಿರ್ಧರಿಸಿದ - ಈ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ನನ್ನ ಹೆಸರಿನಲ್ಲಿ ಹೋಟೆಲ್‌ ತೆರೆಯಬೇಕು. ಅಷ್ಟೇ ಅಲ್ಲ ವಿದೇಶದಲ್ಲೂ ನನ್ನ ಹೆಸರು ರಾರಾಜಿಸಬೇಕು. ಹೋಟೆಲ್‌ ಉದ್ಯಮದಲ್ಲಿ ನನ್ನ ಹೆಸರು ಶಾಶ್ವತವಾಗಿ ಉಳಿಯಬೇಕು.

ಆತ ಅದೆಂಥ ಸಂಕಲ್ಪ ತೊಟ್ಟಿದ್ದನೋ ಏನೋ? ಹಾಗೇ ಆಯಿತು. ಯಾವುದೇ ಊರಿಗೆ ಹೋದರೂ ಒಬೆರಾಯ್‌ ಹೋಟೆಲು. ನ್ಯೂಯಾರ್ಕ್‌, ಲಂಡನ್‌, ಫ್ರಾನ್ಸ್‌,ಶ್ರೀಲಂಕಾ, ಆಸ್ಟ್ರೇಲಿಯಾ, ಮಲೇಷ್ಯಾದಲ್ಲೂ ಅವನ ಹೆಸರಿನಲ್ಲಿ ಹೋಟೆಲು. ಇವೆಲ್ಲ ಸಾಮಾನ್ಯ ಹೋಟೆಲ್‌ಗಳೇನು? ಪಂಚತಾರಾ, ಸಪ್ತತಾರಾ ಹೋಟೆಲ್‌ಗಳು. ಒಂದೊಂದು ಹೋಟೆಲೂ ನೂರಾರು ಕೋಟಿ ಬೆಲೆ ಬಾಳುವಂಥ ಆಸ್ತಿ. ಐವತ್ತು ವರ್ಷಗಳಲ್ಲಿ ಒಬೆರಾಯ್‌ ಸುಮಾರು ನಲವತ್ತೆಂಟು ಅರಮನೆಯಂಥ ಹೋಟೆಲುಗಳ ಒಡೆಯನಾಗಿದ್ದ. ಶ್ರೀಮಂತಿಕೆಯ ಮಾತು ಬಂದಾಗ ‘ಅವನೇನು ಬಿಡು, ಒಬೆರಾಯ್‌ನಿಗೆ ಕಡಿಮೆಯಿಲ್ಲದವನು’ಎಂದು ಜನರು ಮಾತಾಡಿಕೊಳ್ಳುತ್ತಾರಲ್ಲ ಆ ರೀತಿ ಬೆಳೆದ.

ಆದರೆ ಒಬೆರಾಯ್‌ ಒಳಗೊಳಗೇ ಅಸಮಾಧಾನದಿಂದ ಬೇಯುತ್ತಿದ್ದ. ತನ್ನ ಶ್ರೀಮಂತಿಕೆಗೆಲ್ಲ ಈಕೆಯೇ ಕಾರಣವೆಂದು ಭಾವಿಸಿದ್ದ ಹೆಂಡತಿಬೇಗನೆ ಸತ್ತು ಹೋದಳು. ಇಬ್ಬರು ಗಂಡು ಮಕ್ಕಳ ಪೈಕಿ ಒಬ್ಬ ಅಪಘಾತದಲ್ಲಿ ತೀರಿಹೋದ. ಒಬ್ಬಳು ಮಗಳಿಗೆ ವಾಸಿಯಾಗದ ರೋಗ. ಇರುವ ಮಗನೊಬ್ಬನನ್ನು ನೋಡುವುದು ಆರು ತಿಂಗಳಿಗೋ ವರ್ಷಕ್ಕೋ ಒಮ್ಮೆ. ಆತ ಅಷ್ಟೊಂದು ಬ್ಯೂಜಿ. ‘ಒಬೆರಾಯ್‌ ಸಾಮ್ರಾಜ್ಯ’ ನಡೆಸಬೇಕಲ್ಲ ? ಕಸೌಲಿಯಲ್ಲಿ ಫಾರ್ಮ್‌ಹೌಸ್‌ನಲ್ಲಿ ಒಂಟಿಯಾಗಿ ಕಾಲ ಕಳೆಯುವ ಭಾಗ್ಯ. ಬೆಂಗಳೂರಿನ ಒಬೆರಾಯ್‌ ಹೋಟೆಲ್‌ ಉದ್ಘಾಟನೆಗೆಂದು ಬಂದಾಗ ಅವರನ್ನು ಸಂದರ್ಶಿಸುವ ಅವಕಾಶ ಸಿಕ್ಕಿತ್ತು. ಅಂದು ಒಬೆರಾಯ್‌ ಭಾವುಕರಾಗಿದ್ದರು. ಏಕಾಂಗಿತನ ಕಿತ್ತು ಕಾಣುತ್ತಿತ್ತು. ಎಲ್ಲ ಇದ್ದೂ ಏನೂ ಇಲ್ಲದವರ ಪಾಡು ಅವರದ್ದಾಗಿತ್ತು. ಅವರೊಂದು ಮಾತು ಹೇಳಿದರು-‘ನೀವು ಭಾವಿಸಿದಂತೆ ನಾನು ಶ್ರೀಮಂತನಿರಬಹುದು. ಆದರೆ ಆದರೆ ಅತಿ ದುಃ ಖಿ. ನನಗೆ ಶಾಂತಿ, ಸಮಾಧಾನದ ಹೊರತಾಗಿ ಎಲ್ಲವೂ ಇವೆ. ಅವೇ ಇಲ್ಲದ ಮೇಲೆ ಉಳಿದವಿದ್ದು ಪ್ರಯೋಜನವೇನು? ಶಿಮ್ಲಾದಲ್ಲಿ ಹೆಂಡತಿ ಪುಟ್ಟ ಮಕ್ಕಳೊಂದಿಗೆ ಪುಟ್ಟ ಮನೆಯಲ್ಲಿ ಇದ್ದೆವಲ್ಲ ಅವೇ ನನ್ನ ಜೀವನದ ಸಂತಸದ ಕ್ಷಣಗಳು’.

ಹಾಗಾದರೆ ನಾವೆಲ್ಲ ದುಡ್ಡು, ಶ್ರೀಮಂತಿಕೆಯೆಂಬ ಹುಚ್ಚು ಕುದುರೆಯ ಹಿಂದೆ ಓಡುತ್ತಿದ್ದೇವಾ? ಸರ್ಕಸ್ಸಿನ ಜೋಕರ್‌ ಕತೆ ಗೊತ್ತಲ್ಲ. ಒಮ್ಮೆ ಮಾನಸಿಕ ವೈದ್ಯನ ಬಳಿ ರೋಗಿಯಾಬ್ಬ‘ಸಾರ್‌ ನಾನು ಜೀವನದಲ್ಲಿ ನೊಂದಿದ್ದೇನೆ. ನನ್ನಂಥ ಪರಮ ಅಸುಖಿ ಬೇರೆ ಯಾರೂ ಇರಲಿಕ್ಕಿಲ್ಲ. ಸಮಾಧಾನ ಎಂಬುದೇ ಇಲ್ಲ. ಕಾಪಾಡಿ’ಎಂದ. ವೈದ್ಯ ಹೇಳಿದ -‘ನೋಡು ನಮ್ಮೂರಿಗೆ ಸರ್ಕಸ್‌ ಕಂಪನಿ ಬಂದಿದೆಯಲ್ಲ. ಅಲ್ಲಿಗೆ ಹೋಗು. ಅಲ್ಲೊಬ್ಬಜೋಕರ್‌ ಇದ್ದಾನೆ. ಆತ ಹೊಟ್ಟೆ ತುಂಬಾ ನಗಿಸುತ್ತಾನೆ. ನೀನು ಜೀವನದಲ್ಲಿ ಎಂದೂ ನಕ್ಕಿರಬಾರದು ಆ ರೀತಿ ನಗಿಸುತ್ತಾನೆ. ನಿನ್ನ ಮಾನಸಿಕ ವ್ಯಾಕುಲ, ಖಿನ್ನತೆ ಹೊರಟುಹೋಗುತ್ತದೆ. ಹೋಗು, ನೀನು ಅನಂತರ ಬಂದು ನನಗೆ ತಿಳಿಸುವಿಯಂತೆ’. ರೋಗಿ ವೈದ್ಯನನ್ನು ಕ್ಯಾಕರಿಸಿ ನೋಡುತ್ತಾ ‘ಆ ಜೋಕರ್‌ ಮತ್ತ್ಯಾರೂ ಅಲ್ಲ, ನಾನೇ’.

ನಮ್ಮೆಲ್ಲರ ಸ್ಥಿತಿಯೂ ಹಾಗೇ ಆಗಿದೆ.

ಝೆನ್‌ ಧರ್ಮಗುರು ಹೇಳಿದಂತೆ ಸಂತಸದಿಂದ ಇರುವುದಕ್ಕೆ ಹಣ ಬೇಕಿಲ್ಲ. ಹಾಗೆಂದು ಬೆಂಗಳೂರಿನಲ್ಲೊಂದು ಸೈಟು ಖರೀದಿಸದಿರಬೇಡಿ. ಮನೆ ಕಟ್ಟದೇ ಇರಬೇಡಿ. ಟ್ರಾಫಿಕ್‌ಜಾಮ್‌ಗೆಂದು ಕಾರು ಇರಲಿ. ಹೆಂಡತಿಗೆ ಒಡವೆ, ಬ್ಯಾಂಕ್‌ ಬ್ಯಾಲೆನ್ಸ್‌ ಎಲ್ಲ ಇರಲಿ. ‘ಎಲ್ಲ ಸಮಸ್ಯೆಗಳಿಗೂ ಹಣವೇ ಮೂಲಬೇರು’ ಅಂದ್ರೆ‘ಮೂಲಬೇರನ್ನೇ ಕೊಡಿ’ಎನ್ನಿ.

ಆಗ ನೆಮ್ಮದಿ ಮಾತ್ರ ಇರುವುದಿಲ್ಲ. ಅಷ್ಟೆ.

ಈ ನೆಮ್ಮದಿಯೆಂಬುದು ಇರುವುದಾದರೂ ಎಲ್ಲಿ ?ಹುಡುಕಿ ನಿಮ್ಮೊಳಗೆ. ಸಿಕ್ಕೀತು.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more