• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆ ಬಡವನ ಹೃದಯವಂತಿಕೆಗೆ ದೇಶದ ಬಡಾ ಮನುಷ್ಯನೇ ಬೆರಗಾಗಿ ನಿಂತ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಆಕೆ ತನ್ನ ಕಣ್ಣುಗಳನ್ನೇ ನಂಬಲಿಲ್ಲ. ಜೀವಮಾನದಲ್ಲಿ ಒಂದೇ ಬಾರಿಗೆ ಅಷ್ಟೊಂದು ಹಣ ಗಳಿಸುವುದಿರಲಿ, ಸಾಕ್ಷಾತ್‌ ಕಣ್ಣುಗಳಿಂದ ಅಷ್ಟೊಂದು ನೋಡುತ್ತೇನೆಂದು ಆಕೆ ನಿರೀಕ್ಷಿಸಿರಲಿಲ್ಲ. ಹಣದ ಜತೆಗೆ ಅದನ್ನು ಕಳಿಸಿದವರ ಹೆಸರು ತಿಳಿದಾಗ ಆಕೆಗೆ ಮತ್ತಷ್ಟು ಗಾಬರಿಯಾಯಿತು. ತಾನು ಕನಸು ಕಾಣುತ್ತಿಲ್ಲವಷ್ಟೇ ಎಂದು ಹತ್ತಾರು ಬಾರಿ ಕೇಳಿಕೊಂಡಳು. ಆದರೆ ಮನಸ್ಸಿನಲ್ಲೊಂದು ಸಂಶಯದ ಗುಂಗಿಹುಳು ಕೊರೆಯುತ್ತಲೇ ಇತ್ತು. ಎದೆಯಲ್ಲಿ ಢವಢವದ ಡಮರುಗ.

ಅದಿರಲಿ. ಈ ಕತೆ ಆರಂಭವಾಗುವುದು ಎಂಟು ತಿಂಗಳ ಹಿಂದೆ. ದಿಲ್ಲಿಯಿಂದ ಸುಮಾರು ಒಂಬೈನೂರು ಕಿ.ಮೀ.ದೂರದಲ್ಲಿರುವ ಘಾಜಿಪುರ ಜಿಲ್ಲೆಯ ಓಸವಾನ ಎಂಬ ಕುಗ್ರಾಮದ ಒಂದು ಕೊಳೆಗೇರಿಯಲ್ಲಿ. ಶಿವನಾಥಸಿಂಗ್‌ ಹಾಗೂ ಫುಲ್‌ಹೇರಾದೇವಿ ಎಂಬ ಅನಕ್ಷರಸ್ಥ ದಂಪತಿಗಳ ಮನೆಯಲ್ಲಿ. ಇವರಿಗೆ ಒಬ್ಬಳು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು. ಶಿವನಾಥ ಗಾರೆ ಕಲಸ ಮಾಡುತ್ತಿದ್ದ. ಹೆಂಡತಿ ಮೂರ್ನಾಲ್ಕು ಮನೆಗಳಲ್ಲಿ ಮುಸುರೆ ತಿಕ್ಕುತ್ತಿದ್ದಳು. ಇಬ್ಬರ ದುಡಿಮೆಯಿಂದ ತಿಂಗಳಿಗೆ ಮೂರು ಸಾವಿರ ಸಿಕ್ಕರೆ ಮನೆಯೇ ನಂದಗೋಕುಲ. ಆ ಕೊಳೆಗೇರಿಯಲ್ಲಿ ತಮ್ಮದೆಂಬ ಪುಟ್ಟಮನೆ ಕಟ್ಟಿಕೊಂಡಿದ್ದರು. ಮನೆಯಲ್ಲಿ ಆಧುನಿಕತೆಯ ಸಂಕೇತವಾಗಿ ಒಂದು ಕಪ್ಪು-ಬಿಳುಪು ಟಿವಿ ಇತ್ತು. ಶಿವನಾಥ ಓಡಾಟಕ್ಕೆಂದು ಹಳೆಯ ಸ್ಕೂಟರ್‌ ಇಟ್ಟುಕೊಂಡಿದ್ದ. ಶಿವನಾಥನಿಗೆ ಯಾವುದೇ ದುಶ್ಚಟಗಳಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು, ತನ್ನ ಮನೆಯಾಯಿತು, ಬಸ್‌. ಅದೊಂದು ಸುಖೀ ಕುಟುಂಬ.

ಆ ದಿನ ಅದೇನಾಯಿತೋ ಏನೋ, ಶಿವನಾಥ ಬೆಳಗ್ಗೆ ಕೆಲಸಕ್ಕೆಂದು ಸ್ಕೂಟರ್‌ ಏರಿ ಹೊರಟಿದ್ದಾನೆ. ಹಿಂದಿನಿಂದ ಬಸ್ಸೊಂದು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಶಿವನಾಥ ಪಕ್ಕಕ್ಕೆ ಹಾರಿಬಿದ್ದಿದ್ದಾನೆ. ಬಲವಾಗಿ ಪೆಟ್ಟು ಬಿದ್ದಿದೆ. ರಕ್ತಸ್ರಾವವಾಗಿದೆ. ಹತ್ತಾರುಜನ ಸೇರಿದ್ದಾರೆ. ಅವರ ಮುಂದೆ ಶಿವನಾಥ ಸಣ್ಣದಾಗಿ ಏನೇನೋ ಬಡಬಡಿಸಿದ್ದಾನೆ. ಆತನಿಗೆ ತಾನು ಬದುಕುವುದಿಲ್ಲ ಎಂದು ಖಾತ್ರಿಯಾಗಿದೆ. ತಕ್ಷಣ ಆತನನ್ನು ಆ್ಯಂಬ್ಯುಲೆನ್ಸ್‌ನಲ್ಲಿ ದಿಲ್ಲಿಯ ಅಖಿಲಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರ ಮುಂದೆ ತನ್ನ ಕೊನೆಯ ಕೋರಿಕೆಯನ್ನು ನಿವೇದಿಸಿ ಪ್ರಾಣ ಬಿಟ್ಟಿದ್ದಾನೆ.

ಇಲ್ಲಿಗೆ ಕತೆಯ ಮೊದಲ ಭಾಗ ಮುಗಿಯಿತು.

ದಿಲ್ಲಿಯ ಅಸಂಖ್ಯ ಕೊಳೆಗೇರಿಗಳ ಪೈಕಿ ಒಂದರ ನಿವಾಸಿ ರಮೇಶಚಂದ್ರ ಎಂಬ 23ರ ಯುವಕ ಹತ್ತಾರು ಕಡೆ ಸಹಾಯಕ್ಕೆ ಸುತ್ತಾಡಿ, ಪ್ರಯೋಜನವಾಗದೇ ಕೊನೆ ಆಸೆಯೆಂಬಂತೆ ಉಪರಾಷ್ಟ್ರಪತಿ ಭೈರೋನ್‌ಸಿಂಗ್‌ ಶೇಖಾವತ್‌ ಮನೆ ಮುಂದೆ ನಿಂತಿದ್ದಾನೆ. ಅವನ ಜತೆ ನೂರಾರು ಮಂದಿ ನಿಂತಿದ್ದಾರೆ. ಪ್ರತಿಯಾಬ್ಬರದೂ ಒಂದೊಂದು ಬೇಡಿಕೆ. ಒಂದೊಂದು ನೋವು, ಸಂಕಟ. ಎಲ್ಲರನ್ನೂ ವಿಚಾರಿಸುತ್ತಾ ಬಂದ ಉಪರಾಷ್ಟ್ರಪತಿಗಳ ಮುಂದೆ ಆತ ತನ್ನನ್ನು ಎರಡು ವರ್ಷಗಳಿಂದ ಕಿತ್ತು ಕಾಡುತ್ತಿರುವ ಹೃದ್ರೋಗದ ಬಗ್ಗೆ ನಿವೇದಿಸಿಕೊಂಡಿದ್ದಾನೆ. ಶೇಖಾವತ್‌ ಆತನ ಸಂಕೋಲೆಗಳನ್ನು ಕೇಳಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯ ಮುಖ್ಯಸ್ಥರಿಗೆ ಒಂದು ಪತ್ರ ಕೊಟ್ಟು, ಖ್ಯಾತ ಹೃದ್ರೋಗ ತಜ್ಞ ಡಾ.ವೇಣುಗೋಪಾಲ್‌ಗೆ ಫೋನ್‌ ಮಾಡಿ ತಾವು ಕಳಿಸಲಿರುವ ರಮೇಶಚಂದ್ರ ಎಂಬ ಯುವಕನಿಗೆ ಸಾಧ್ಯವಿರುವ ಎಲ್ಲ ಸಹಾಯ ಮಾಡುವಂತೆ ಕೋರುತ್ತಾರೆ.

ಇಲ್ಲಿಗೆ ಕತೆಯ ಎರಡನೆಯ ಭಾಗವೂ ಮುಗಿಯುತ್ತದೆ.

ಎರಡು ವಾರಗಳ ಬಳಿಕ...

ಡಾ.ವೇಣುಗೋಪಾಲ್‌ ಶೇಖಾವತ್‌ಗೆ ಫೋನ್‌ ಮಾಡಿ, ನೀವು ಕಳಿಸಿದ ರೋಗಿಗೆ ಹೃದಯ ಕಸಿ ಮಾಡಿದ್ದೇನೆ. ನಮ್ಮ ಆಸ್ಪತ್ರೆಗೆ ದಾಖಲಾದವನೊಬ್ಬ ತಾನು ಸಾಯುವುದಕ್ಕಿಂತ ಮೊದಲು ತನ್ನ ಹೃದಯ ದಾನ ಮಾಡಿದ್ದ. ಅದನ್ನು ತೆಗೆದು ರಮೇಶಚಂದ್ರನಿಗೆ ಅಳವಡಿಸಿದ್ದೇನೆ. ಈಗ ಸುರಕ್ಷಿತವಾಗಿದ್ದಾನೆ. ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದರು.

ಶೇಖಾವತ್‌ಗೆ ಅತೀವ ಆನಂದವಾಯಿತು. ತಮ್ಮ ಒಂದು ಪತ್ರ ಹಾಗೂ ಒಂದು ಫೋನ್‌ ಕರೆ ಒಬ್ಬನ ಪ್ರಾಣವನ್ನು ಉಳಿಸಿತಲ್ಲಾ ಎಂದು ಸಂತಸವಾಯಿತು. ಕೊಳೆಗೇರಿ ನಿವಾಸಿ ರಮೇಶಚಂದ್ರ ಉಪರಾಷ್ಟ್ರಪತಿಗಳಿಗೆ ಪರಿಚಿತನೇನೂ ಅಲ್ಲ. ಪ್ರತಿದಿನ ಬೆಳಗ್ಗೆ ತಮ್ಮನ್ನು ನೋಡಲು ಬರುವ ನೂರಾರು ಜನರಲ್ಲಿ ಆತನೂ ಒಬ್ಬ ಅಷ್ಟೇ. ಅದನ್ನು ಬಿಟ್ಟರೆ ಶೇಖಾವತ್‌ಗೆ ಆತನ ಬಗ್ಗೆ ಏನೂ ತಿಳಿಯದು. ರಮೇಶಚಂದ್ರನೂ ತನ್ನ ಜೀವನದಲ್ಲೇ ಮಂತ್ರಿಗಳ ಮುಂದೆ ಎಡತಾಕಿದ್ದೇ ಇಲ್ಲ. ಆತನ ಕಷ್ಟಗಳನ್ನು ಕಂಡು ಕೊಳೆಗೇರಿ ನಿವಾಸಿಯಾಬ್ಬ ಸಲಹೆ ಕೊಟ್ಟಿದ್ದ- ಒಂದು ಪ್ರಯತ್ನಮಾಡು. ಉಪರಾಷ್ಟ್ರಪತಿಗಳನ್ನು ಕಂಡು ನಿನ್ನ ತೊಂದರೆಗಳನ್ನು ಹೇಳಿಕೋ. ಏನಾದರೂ ಸಹಾಯವಾಗಬಹುದು.

ಡಾ.ವೇಣುಗೋಪಾಲ್‌ ಮಾತು ಕೇಳಿ ಶೇಖಾವತ್‌ಗೆ ಹೃದಯ ತುಂಬಿ ಬಂತು. ಆಸ್ಪತ್ರೆಗೆ ಹೋಗಿ ಗುಣಮುಖನಾಗುತ್ತಿರುವ ರಮೇಶಚಂದ್ರನನ್ನು ನೋಡಿಕೊಂಡು ಬರಲು ನಿರ್ಧರಿಸಿದರು. ಸ್ವತಃ ಭಾರತದ ಉಪರಾಷ್ಟ್ರಪತಿ ತನ್ನನ್ನು ನೋಡಲು ಬರುತ್ತಿರುವ ಸಂಗತಿ ತಿಳಿದು ರಮೇಶಚಂದ್ರನಿಗೆ ಒಳಗೊಳಗೇ ಖುಷಿ. ಜೀವನ ಧನ್ಯವಾಯಿತು ಅಂದುಕೊಂಡ.

ಅಂದು ಬೆಳಗ್ಗೆ ಶೇಖಾವತ್‌ ರಮೇಶಚಂದ್ರನ ತಲೆ ನೇವರಿಸುತ್ತಾ ಕುಳಿತಿದ್ದರು. ಆತನಿಗಾಗಿ ಹಣ್ಣು, ಹೂವು ಕೊಟ್ಟರು. ಆತನ ಕೈಹಿಡಿದುಕೊಂಡು ಬಹಳಹೊತ್ತು ಮಾತನಾಡುತ್ತಾ ಕುಳಿತರು. ಒಂದು ಜೀವವನ್ನು ಉಳಿಸಿದ ಧನ್ಯತೆಯ ಪುಳಕ ಶೇಖಾವತ್‌ ಅವರನ್ನು ಆವರಿಸಿದ್ದರೆ, ಪುನರ್ಜನ್ಮ ಪಡೆದ ರೋಮಾಂಚನ ಹಾಗೂ ಉಪರಾಷ್ಟ್ರಪತಿಗಳ ಸಾನ್ನಿಧ್ಯ, ಸಾಮೀಪ್ಯ ರಮೇಶಚಂದ್ರನನ್ನು ಭಾವಪರವಶನನ್ನಾಗಿ ಮಾಡಿದ್ದವು.

ಇಲ್ಲಿಗೆ ಕತೆಯ ಮೂರನೆಯ ಭಾಗವೂ ಮುಗಿಯುತ್ತದೆ.

ಇನ್ನೇನು ಶೇಖಾವತ್‌ ಆಸ್ಪತ್ರೆಯಿಂದ ಹೊರಡುವವರಿದ್ದರು. ಅದಕ್ಕೂ ಮುಂಚೆ ಅವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಹಾದು ಹೋಯಿತು. ಡಾ.ವೇಣುಗೋಪಾಲ್‌ ಅವರನ್ನು ಕೇಳಿದರು- ರಮೇಶಚಂದ್ರನಿಗೆ ಹೃದಯ ಕಸಿ ಮಾಡಿದ ಸಂಗತಿಗಳನ್ನೆಲ್ಲ ವಿವರಿಸಿದಿರಿ. ಆದರೆ ಹೃದಯ ದಾನ ಮಾಡಿದವರಾರು?

ಡಾ.ವೇಣುಗೋಪಾಲ್‌ ಮಾತುಗಳನ್ನು ಕೇಳಿ ಶೇಖಾವತ್‌ ಅಲ್ಲಿಯೇ ಕುಳಿತುಬಿಟ್ಟರು!

ಡಾಕ್ಟರ್‌ ಹೇಳಿದರು-ಘಾಜಿಪುರದವನಂತೆ ಶಿವನಾಥಸಿಂಗ್‌ ಅಂತ ಹೆಸರು. ನಲವತ್ತೆೈದರ ವಯಸ್ಸಿನವನು. ಸ್ಕೂಟರ್‌ ಅಪಘಾತದಲ್ಲಿ ತೀವ್ರ ರಕ್ತಸ್ರಾವವಾಗಿ ತೀರಿಕೊಂಡ. ಆತನನ್ನು ಆಸ್ಪತ್ರೆಗೆ ತರುವಾಗ ಜೀವವಿತ್ತು. ಆತನ ಪ್ರಾಣ ಉಳಿಸಲು ಬಹಳ ಪ್ರಯತ್ನಿಸಿದೆವು. ಫಲಕಾರಿಯಾಗಲಿಲ್ಲ. ಆತ ಸಾಯುವುದಕ್ಕಿಂತ ಮೊದಲು ತನ್ನ ಎರಡು ಕಣ್ಣು, ಎರಡು ಕಿಡ್ನಿ, ಲಿವರ್‌, ಹೃದಯಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದ್ದ. ಇನ್ನೇನು ತಾನು ಸಾಯಲಿದ್ದೇನೆಂಬ ದುಗುಡಕ್ಕಿಂತ ತನ್ನ ಅಂಗಾಂಗಗಳ ಸದುಪಯೋಗವಾಗಲಿ ಎಂಬ ಕಾಳಜಿ ಶಿವನಾಥನನ್ನು ಕಾಡಿತ್ತಂತೆ. ಹೀಗಾಗಿ ಅಪಘಾತದ ಸ್ಥಳದಲ್ಲಿ ಹಾಗೂ ದಾರಿಯಲ್ಲಿ ಬರುವಾಗ ತನ್ನೆಲ್ಲ ಅಂಗಾಂಗಗಳನ್ನು ಬಳಸಿಕೊಳ್ಳುವಂತೆ ಆತ ಕನವರಿಸುತ್ತಿದ್ದ. ಶಿವನಾಥನ ಕೃಪೆಯಿಂದ ಆರು ಜನರಿಗೆ ಪುನರ್ಜನ್ಮ ಸಿಕ್ಕಿತು. ಆತನ ಕೋರಿಕೆಯಂತೆ ಕಣ್ಣು, ಕಿಡ್ನಿ,ಲಿವರ್‌, ಹೃದಯಗಳನ್ನು ಬೇರೆಯವರಿಗೆ ಅಳವಡಿಸಿದೆವು. ಶಿವನಾಥ ಸತ್ತಿರಬಹುದು. ಆದರೆ ಆತ ನೀಡಿದ ಅಮೂಲ್ಯ ಅಂಗಾಂಗಗಳು ಈ ಆರು ಮಂದಿಯ ಶರೀರಗಳಲ್ಲಿ ಜೀವಂತವಾಗಿವೆ. ಅದಕ್ಕಿಂತ ಮುಖ್ಯವಾಗಿ ಆತನ ಅಂಗಗಳನ್ನು ಪಡೆದವರು ಈಗ ಸುಖವಾಗಿದ್ದಾರೆ. ಶಿವನಾಥ ಮೆರೆದ ಮಾನವೀಯತೆಗೆ ನಾವಂತೂ ಮೂಕರಾಗಿದ್ದೇವೆ’.

ಶೇಖಾವತ್‌ ಆರ್ದ್ರರಾಗಿದ್ದರು. ಒಂದು ಕ್ಷಣ ಅವರಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಶಿವನಾಥ ಅವರ ಅಂತಃಕರಣ ಕಲಕಿದ್ದ. ತಾನು ಸಾವಿನ ಮನೆಯಲ್ಲಿ ಕುಳಿತು ಬೇರೆಯವರನ್ನು ಬದುಕಿಸುವುದಕ್ಕಾಗಿ ಶಿವನಾಥ ಚಡಪಡಿಸುತ್ತಿದ್ದ ಎಂಬ ಅಂಶ ತಿಳಿದ ಮೇಲಂತೂ ಶೇಖಾವತ್‌ ಮತ್ತಷ್ಟು ಮ್ಲಾನವದನರಾದರು. ರಮೇಶಚಂದ್ರನ ಹೃತ್ಕರ್ಣ, ಹೃತ್ಕುಕ್ಷಿ ಜೀವಂತವಾಗಿದ್ದರೆ ಅದಕ್ಕೆ ಶಿವನಾಥನೇ ಕಾರಣ. ಶೇಖಾವತ್‌ ಮುದ್ದೆಯಾಗಿದ್ದರು.

ಅಂದು ನೇರವಾಗಿ ಮನೆಗೆ ಬಂದ ಶೇಖಾವತ್‌ಗೆ ಏನೋ ಒಂಥರ ಚಡಪಡಿಕೆ. ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿರುವ ಶಿವನಾಥನ ಮನೆಯನ್ನು ಹುಡುಕುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಉಪರಾಷ್ಟ್ರಪತಿ ಆದೇಶ ಬರುತ್ತಿರುವಂತೆ ಅಧಿಕಾರಿಗಳೂ ಜಾಗೃತರಾದರು. ಕೊಳೆಗೇರಿಯ ಕೊಂಪೆಯಲ್ಲಿದ್ದ ಶಿವನಾಥನ ಮನೆಯನ್ನು ಹೇಗೋ ಕಷ್ಟಪಟ್ಟು ಹುಡುಕಿದರು.

ಶೇಖಾವತ್‌ ಮುಂದೆ ಶಿವನಾಥ ಹಾಗೂ ಆತನ ಕುಟುಂಬದ ವಿವರಗಳನ್ನು ಅಧಿಕಾರಿಗಳು ಗುಡ್ಡೆ ಹಾಕಿದರು. ತಮ್ಮ ಸ್ವಂತ ಖಾತೆಯಿಂದ ಒಂದು ಲಕ್ಷ ರೂ.ಚೆಕ್‌ ಬರೆದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತಮ್ಮ ಸ್ನೇಹಿತರಾದ ಜಗದಂಬಿಕಾ ಪಾಲ್‌ ಅವರನ್ನು ಕರೆದು ಶಿವನಾಥ್‌ನ ಪತ್ನಿಗೆ ನೀಡುವಂತೆ ಸೂಚಿಸಿದರು. ಜತೆಯಲ್ಲಿ ಐದು ಸೀರೆಗಳು! ಸ್ವತಃ ಜಗದಂಬಿಕಾ ಪಾಲ್‌ ಕೊಳೆಗೇರಿಗೆ ಹೋಗಿ ಚೆಕ್‌ ವಿತರಿಸಿ ಬಂದರು. ಮಗಳ ಮದುವೆಗೆ ಬರಲು ಸ್ವತಃ ಶೇಖಾವತ್‌ ಬಯಸಿದ್ದಾರೆಂಬುದನ್ನೂ ತಿಳಿಸಿದರು.

ಫುಲ್‌ಹೇರಾದೇವಿ ತನ್ನ ಕಣ್ಣುಗಳನ್ನು ನಂಬಲಿಲ್ಲ !ತಾನು ನೋಡುತ್ತಿರುವುದು, ಕೇಳುತ್ತಿರುವುದೆಲ್ಲ ನಿಜವಾ ಎಂಬ ಸಂದೇಹ. ಢವಢವ ಡಮರುಗದ ಪ್ರತಿಧ್ವನಿಯ ಅಲೆಅಲೆ!

ಆತ ಕೊಳೆಗೇರಿಯಲ್ಲಿರಬಹುದು, ಸಮಾಜದ ಕೆಳಸ್ತರದ ಕುಳುಂಪೆಯಲ್ಲಿರಬಹುದು, ಅನಕ್ಷರಸ್ಥನಾಗಿರಬಹುದು. ಆದರೆ ಶಿವನಾಥ ಮೆರೆದ ಆದರ್ಶವಿದೆಯಲ್ಲ ಅದು ಅಸಾಮಾನ್ಯ. ಆತನ ತಂದೆ ಕೂಡ ಹಾಗೇ. ಸಾಯುವ ಮೊದಲು ಅಂಗಾಂಗಗಳಲ್ಲ, ಇಡೀ ದೇಹವನ್ನೇ ವೈದ್ಯಕೀಯ ಬಳಕೆಗೆ ದಾನ ಮಾಡಿ ಸತ್ತಿದ್ದ. ಆತನೂ ಓದು, ಬರಹ ಬಲ್ಲವನಲ್ಲ. ಜೀವನವಿಡೀ ಹಸಿವು, ಬಡತನದೊಂದಿಗೇ ಬದುಕಿದ. ಆದರೆ ಆದರ್ಶವನ್ನು ಮಾತ್ರ ಬಿಟ್ಟು ಕೊಡಲಿಲ್ಲ.

ಇಂಥ ಶಿವನಾಥರು, ಆತನ ಅಪ್ಪನಂಥವರು ನಮ್ಮ ಹಿಂದೆ, ಮುಂದೆ, ಅಕ್ಕಪಕ್ಕದಲ್ಲಿದ್ದಾರೆ. ಅಂಥವರು ಇರುವುದರಿಂದಲೇ ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ, ಸುಳ್ಳು, ಮೋಸ, ಭ್ರಷ್ಟಾಚಾರ, ಹಗರಣ, ಪಕ್ಷಾಂತರ, ರಾಜಕೀಯಗಳ ನಡುವೆ ಸಾಮಾಜಿಕ ಸ್ವಾಸ್ಥ್ಯ ನೆಲೆಸಿದೆ. ಇಂಥ ಆದರ್ಶಗಳ ಮುಂದೆ ಈ ಎಲ್ಲ ಅನಾಚಾರಗಳು ಸೊಗ್ಗಿ ಸೋಲುವುದರಿಂದ ಸಹಿಸಿಕೊಳ್ಳುವ, ದೊಡ್ಡ ದುರಂತಗಳ ಜತೆಯಲ್ಲೇ ಜೀವಿಸುವ, ಇವೆಲ್ಲವುಗಳೊಂದಿಗೆ ಏಗುತ್ತಾ, ಬಾಗುತ್ತಾ ನೆಮ್ಮದಿಗಾಗಿ ಅರಸುತ್ತಾ ನಮ್ಮದೇ ಆದ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತೇವೆ. ಹೀಗೆ ತಮ್ಮದೆಲ್ಲವನ್ನೂ ಬೇರೆಯವರಿಗೆ, ಸಮಾಜಕ್ಕೆ ಅರ್ಪಿಸುವ ತ್ಯಾಗಜೀವಿಗಳೇ ನಮ್ಮ ಜೀವನವನ್ನು ಹಸನಾಗಿಸುತ್ತಾರೆ.

ಈ ದೇಶಕ್ಕಾಗಿ ಬಲಿದಾನಗೈದ ಪ್ರತಿಯಾಬ್ಬ ಸ್ವಾತಂತ್ರ್ಯ ಯೋಧನ ಬಾಳಪುಟಗಳನ್ನು ತಿರುವಿ ಹಾಕಿ, ಅಲ್ಲೊಂದು ನಿಸ್ವಾರ್ಥ, ನಿಪ್ಪೃಹ, ಸಮಾಜಮುಖಿ ಮನಸ್ಸಿನ ಅನಾವರಣವಾಗುತ್ತದೆ. ತನ್ನದೆಲ್ಲವನ್ನೂ ಒಂದು ಸಾಮಾಜಿಕ ಗುರಿ ಸಾಧನೆಗೆ ಸಮರ್ಪಿಸಿದ ಪರಿಶುದ್ಧ ತ್ಯಾಗದ ನಿಚ್ಚಳ ಬಿಂಬ ಕಾಣುತ್ತದೆ. ಈ ದೇಶಕ್ಕಾಗಿ ಪ್ರಾಣತೆತ್ತರಲ್ಲ ಅವರ ಗುರಿ ಏನಾಗಿತ್ತು ಹೇಳಿ? ಸ್ವಾತಂತ್ರ್ಯ ಗಳಿಸಿ, ಸ್ವಾಭಿಮಾನಿ ದೇಶವನ್ನು ಕಟ್ಟುವುದು. ಅದು ಬಿಟ್ಟರೆ ಮತ್ತ್ಯಾವ ಉದ್ದೇಶವೂ ಇರಲಿಲ್ಲ. ಅವರು ಚೆಲ್ಲಿದ ರಕ್ತ ನಮ್ಮಲ್ಲಿ ಆದರ್ಶದ ಸಂಸ್ಕಾರವಾಗಿ ರಕ್ತಗತವಾಗಿದೆ.

ಒಂದು ಆದರ್ಶಕ್ಕಾಗಿ ಚೆಲ್ಲುವ ಪ್ರಾಣ ಎಂದಿಗೂ ವ್ಯರ್ಥ ಅಲ್ಲ. ಅದು ದೇಶಕಾಲವನ್ನು ಮೀರಿ ನಿಲ್ಲುತ್ತದೆ. ಶಿವನಾಥನದೂ ಅಷ್ಟೆ.

ಈ ದೇಶಕ್ಕಾಗಿ ಪ್ರಾಣತೆತ್ತ ಅಸಂಖ್ಯ ಸ್ವಾತಂತ್ರ್ಯ ಯೋಧರಿಗೆ ಸ್ವಾತಂತ್ರ್ಯದಿನದ ಹೊಸ್ತಿಲಲ್ಲಿ ನಿಂತು ಅಂತಃಕರಣಪೂರ್ತಿಯಾಗಿ ನೆನೆದು ಮನಸ್ಸಿನೊಳಗೆ ಒಂದು ಶಹಬ್ಬಾಷ್‌ ಎನ್ನೋಣ. ಈಗ ನಾವು ಮಾಡಬಹುದಾಗಿದ್ದು, ಮಾಡಬೇಕಾಗಿದ್ದು ಅದೊಂದೇ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more