• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವು ಬದುಕಿರುವಾಗಲೇ ನಮ್ಮೊಳಗಿನ ಅಂತಃಸತ್ವ ಸತ್ತಿರುತ್ತಲ್ಲ- ಅದೇ ದುರಂತ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಇತ್ತೀಚೆಗೆ ರಾಬಿನ್‌ ಎಸ್‌.ಶರ್ಮಾ ಎಂಬ ಆಧುನಿಕ ವ್ಯಕ್ತಿತ್ವ ವಿಕಸನ(Personalisty Development) ಗುರುವನ್ನು ಭೇಟಿ ಮಾಡಿದ್ದೆ. ಭಲೇ ಲವಲವವಿಕೆಯ ಮನುಷ್ಯ. ಆಪ್ತವಾಗಿ ಮಾತನಾಡುತ್ತಾನೆ. ವಿಕಸನಕ್ಕೆ ಸಂಬಂಧಿಸಿದ ಚರ್ವಿತಚರ್ವಣಗಳನ್ನು ಬಡಬಡಿಸುವುದಿಲ್ಲ. ಹಳೇ ಜೋಕುಗಳನ್ನು ಹೇಳಿ ಹಿಂಸಿಸುವುದಿಲ್ಲ. ವ್ಯಕ್ತಿತ್ವ ವಿಕಸನ ಪಾಠ, ಕಾರ್ಯಾಗಾರಗಳನ್ನೇ ಕಸುಬಾಗಿ ಮಾಡಿಕೊಂಡ ಶಿವಖೇರ, ದೇಬಶಿಸ್‌ ಚಟರ್ಜಿ, ಪಟ್ಟಾಭಿರಾಮನ್‌, ವೀರೇಂದ್ರ ಕಪೂರ್‌, ಆ್ಯಂಥೋನಿ ವಿಲಿಯಮ್ಸ್‌, ಡಾ.ಭರತಚಂದ್ರ, ಯಂಡಮೂರಿ ವೀರೇಂದ್ರನಾಥ (ಹೊಸ ಸೇರ್ಪಡೆ) ಮುಂತಾದವರೊಂದಿಗೆ ಮಾತನಾಡುವಾಗ ಸಿದ್ಧ ಪಾಶ್ಚಿಮಾತ್ಯ ಮಾದರಿಯನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರಾ ಎಂಬ ಗುಮಾನಿಯಾಗುತ್ತದೆ.

ಇದ್ದುದರಲ್ಲಿ ನಮ್ಮ ಯಂಡಮೂರಿ, ಡಾ.ಭರತ್‌ಚಂದ್ರ ಪರವಾಗಿಲ್ಲ. ಪಾಶ್ಚಾತ್ಯ ನಿದರ್ಶನಗಳಿಗೆ ಹೋಲುವ ಭಾರತದ ಉದಾಹರಣೆಗಳನ್ನು ಸಾಕಷ್ಟು ಸಂಗ್ರಹಿಸಿದ್ದಾರೆ. ಫುಲ್‌ಟೈಮ್‌ ಕಥೆ, ಕಾದಂಬರಿ ಬರೆಯುವುದನ್ನು ಬಿಟ್ಟು ಯಂಡಮೂರಿ ಈಗ ಫುಲ್‌ ಟೈಮ್‌ ವ್ಯಕ್ತಿತ್ವ ವಿಕಸನ ಗುರುವಾಗಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಅವರು ಈ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನೇ ಬರೆದಿದ್ದಾರೆ. ಪರ್ಸನಾಲಿಟಿ ಡೆವಲಪ್‌ಮೆಂಟ್‌ ಕುರಿತ ಅವರ ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಈ ಪುಸ್ತಕಗಳನ್ನು ಓದುವವರಿಗೆ ‘ಕತೆಗಾರ ಯಂಡಮೂರಿ ಕಳೆದುಹೋದರಾ?’ ಎಂಬ ಬೇಸರ ಮುತ್ತಿಕೊಳ್ಳುತ್ತದೆ. ಯಂಡಮೂರಿ ‘ವ್ಯಕ್ತಿತ್ವ ವಿಕಸನ’ ಕುರಿತು ಹತ್ತಾರು ಒಳ್ಳೆಯ ಕೃತಿಗಳನ್ನು ಬರೆದಿದ್ದಾರೆ.

Robin Sharmaವ್ಯಕ್ತಿತ್ವ ವಿಕಸನ ಗುರುಗಳ ದೊಡ್ಡ ಸಮಸ್ಯೆಯೆಂದರೆ ತಮ್ಮ ವ್ಯಕ್ತಿತ್ವವನ್ನೇ ವಿಕಸನಗೊಳಿಸಿಕೊಳ್ಳದಿರುವುದು.ಇವರ್ಯಾರ ಮಾತುಗಳನ್ನೂ ಎರಡನೇ ಸಲ ಕೇಳುವುದೆಂದರೆ ಕಿವಿಗೆ ಕಾದ ಸೀಸ ಹುಯ್ದಂತೆ. ಒಂದೆಡೆ ಹೇಳಿದ್ದನ್ನೇ ಎಲ್ಲ ಕಡೆ ಉಸುರುತ್ತಾರೆ. ಹದಿನೈದು ವರ್ಷಗಳ ಹಿಂದೆ ಆ್ಯಂಥೋನಿ ವಿಲಿಯಮ್ಸ್‌ ಎಂಬುವವರ ಕಾರ್ಯಾಗಾರ ಪ್ರವೇಶ ಕೇಳಿದಾಗ ಅದನ್ನೇ ಬಡಬಡಿಸುತ್ತಿದ್ದರು. ಸ್ವಲ್ಪ ವೂ ವ್ಯತ್ಯಾಸವಿಲ್ಲ. ಎರಡನೇ ಸಲಕ್ಕೆ ಕಿವಿಗೊಟ್ಟರೆ ಇವರೆಂಥ ಖಾಲಿ ಖಾಲಿ ಎನಿಸುತ್ತದೆ. (ನಿಮ್ಮ ಧರ್ಮಸಿಂಗ್‌, ಯಡಿಯೂರಪ್ಪ ಅವರೇ ವಾಸಿ ಅನಿಸುತ್ತಾರೆ.)

ನಾನು ರಾಬಿನ್‌ ಶರ್ಮನನ್ನು ಭೇಟಿ ಮಾಡಿದ್ದು ಮೊದಲ ಬಾರಿಯಾಗಿದ್ದರಿಂದ ಆತ ಇಷ್ಟವಾದ, ಇದು ಎರಡನೇ ಸಲ ಭೇಟಿಯಾಗುವ ಹೊತ್ತಿಗೆ ಏನಾಗಿರುತ್ತದೋ ಗೊತ್ತಿಲ್ಲ. ವ್ಯಕ್ತಿತ್ವ ವಿಕಸನ ಎಂಬ ಕೋರ್ಸು, ಡಿಸ್ಕೋರ್ಸುಗಳಿಲ್ಲ ಹೇರಳ ಹಣವಿದೆ. ಏನೇ ಪುಸ್ತಕ ಬರೆದರೂ ಖರ್ಚಾಗುತ್ತದೆ. ರೇಸ್‌ ಪುಸ್ತಕಕ್ಕಿಂತ ಬೇಗ ಮಾರಾಟವಾಗುವ ಪುಸ್ತಕಗಳೆಂದರೆ ಇವೇ! ಹೀಗಾಗಿ ವಿಚಿತ್ರ ಪುಸ್ತಕಗಳು ಬಂದಿವೆ. ಹಾಸಿಗೆ ಮೇಲೆ ಗಂಡನನ್ನು ರಮಿಸುವುದು ಹೀಗೆ? ಒಳ್ಳೆಯ ಗಂಡನಾಗುವುದು ಹೇಗೆ? ಉತ್ತಮ ತಂದೆಯಾಗುವುದು ಹೇಗೆ? ಇಲ್ಲ ಅಂತ ಹೇಳುವಾಗಲೆಲ್ಲ ಹೌದು ಅಂತ ಏಕೆನ್ನುತ್ತೀರಿ? ನಿಮ್ಮೊಳಗಿನ ನೀವು ಏಕೆ ಅಲ್ಲಿಯೇ ಇದ್ದಾನೆ? ಉತ್ತಮ ತಂದೆಯಾಗುವುದು ಹೇಗೆ?ಇಲ್ಲ ಅಂತ ಹೇಳುವಾಗಲೆಲ್ಲ ಹೌದು ಅಂತ ಏಕೆನ್ನುತ್ತೀರಿ? ನಿಮ್ಮೊಳಗಿನ ನೀವು ಏಕೆ ಅಲ್ಲಿಯೇ ಇದ್ದಾನೆ? ಉತ್ತಮ ಅತ್ತೆ-ಸೊಸೆಯಾಗುವುದು ಹೇಗೆ?... ಹೀಗೆ ವಿಶಿಷ್ಟ (!) ಹಾಗೂ ಅಸಂಬದ್ಧ ಪುಸ್ತಕಗಳೆಲ್ಲ ದಂಡಿಯಾಗಿ ಮಾರಾಟವಾಗುತ್ತವೆ. (ಸಾಲಿಗೆ ನನ್ನದೂ ಎರಡು ಕೊಡುಗೆಗಳಿವೆ) ಹಾಗಂತ ನಾನು ಈ ಕೋರ್ಸ್‌ಗಳನ್ನಾಗಲಿ, ಪುಸ್ತಕಗಳನ್ನಾಗಲಿ ಸಾರಾಸಗಟು ತಿರಸ್ಕರಿಸುತ್ತಿಲ್ಲ.

ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಕೆಲವು ಹೊಳಹುಗಳನ್ನು ಈ ಕೃತಿಗಳು ಚಿಮ್ಮಿಸಬಲ್ಲವು. ನಮ್ಮಲ್ಲೊಂದು ಸ್ಫೂರ್ತಿಯ ಚಿಲುಮೆಯನ್ನು ಹೊತ್ತಿಸಬಲ್ಲವು. ಅಲ್ಲಿಗೆ ಅವುಗಳ ಕೆಲಸ ಮುಗಿಯಿತು. ಆ ಪ್ರೇರಣೆಯನ್ನುದಕ್ಕಿಸಿಕೊಂಡು ಮುಂದೆ ಬೆಳೆಯುವುದಿದ್ದರೆ, ಅದೇನಿದ್ದರೂ ನಮ್ಮ ಪ್ರಯತ್ನದಿಂದಲೇ ಆಗಬೇಕು. ಇದು ವ್ಯಕ್ತಿತ್ವ ವಿಕಸನ ಪುಸ್ತಕ, ಕಾರ್ಯಾಗಾರಗಳ ಹೆಚ್ಚುಗಾರಿಕೆ ಹಾಗೂ ಮಿತಿಯೂ ಹೌದು.

ಈ ಹಿನ್ನೆಲೆಯಲ್ಲಿಯೇ ರಾಬಿನ್‌ ಶರ್ಮಾ ಭೇಟಿ ಮಾಡಿದ್ದು. ಹೀಗಾಗಿ ಮೊದಲ ಭೇಟಿಯಲ್ಲಿ ಬೆರಗಾಗುವುದಕ್ಕಿಂತ ಬರಿದಾಗಿಸುವ ತುಡಿತವೇ ಹೆಚ್ಚಾಗಿತ್ತು. ನಿಮಗೆ ಗೊತ್ತಿರಬಹುದು ರಾಬಿನ್‌ಶರ್ಮಾ The monk who sold his Ferrari ಪುಸ್ತಕ ಬರೆದಾಗ ಬಹಳ ಬೇಗ ಜನಪ್ರಿಯರಾದರು. ಅದಾದ ಬಳಿಕ Family Wisdom, Mega Living, Leadership Wisdom ಬರೆದರು. ಅಷ್ಟೊತ್ತಿಗೆ ಶರ್ಮ ಹೆಚ್ಚೂ ಕಮ್ಮಿ ಖಾಲಿಯಾದರೇನೋ ಎಂದೆನಿಸಿತ್ತು. ಶರ್ಮಾ ಎಲ್‌ಎಲ್‌ಬಿ, ಎಲ್‌ಎಲ್‌ಎಂ ಮಾಡಿ ಕೆಲಕಾಲ ವಕೀಲರಾಗಿದ್ದರು. ಈಗ ಫುಲ್‌ಟೈಮ್‌ ವ್ಯಕ್ತಿತ್ವ ವಿಕಸನ ಗುರು.

ಮೊನ್ನೆ ಅವರನ್ನು ಭೇಟಿ ಮಾಡಿದಾಗ ಶರ್ಮ Who will cry when you die? (ನೀವು ಸತ್ತಾಗ ಅಳುವವರು ಯಾರು?) ಎಂಬ ತಮ್ಮ ಕೃತಿಯನ್ನು ಕೊಟ್ಟರು. ಎರಡು ವರ್ಷಗಳಲ್ಲಿ 24ಆವೃತ್ತಿಗಳನ್ನು ಕಂಡ ಪುಸ್ತಕವಿದು! ನಾಲ್ಕೈದು ತಾಸುಗಳಲ್ಲಿ ಓದಿಡಬಹುದಾದ 225 ಪುಟಗಳ ಕೃತಿ. ನೂರೊಂದು ಜೀವನಪಾಠಗಳನ್ನು ಶರ್ಮಾ ಪಟ್ಟಿ ಮಾಡಿದ್ದಾರೆ. ನಾವು ನಿತ್ಯವೂ ನಿರ್ಲಕ್ಷಿಸುವ, ಅಷ್ಟೊಂದು ಪ್ರಾಮುಖ್ಯ ಕೊಡದ ಸಂಗತಿಗಳ ಬಗ್ಗೆ ಚರ್ಚಿಸಲಾಗಿದೆ. ಕೆಲವು ಇಷ್ಟವಾದ ಪುಟ್ಟ ಹನಿಗಳನ್ನು ಇಲ್ಲಿ ಹಿಡಿದಿಟ್ಟಿದೇನೆ.

 • ನಮ್ಮ ಜೀವನದಲ್ಲಿ ಸಂಭವಿಸಬಹುದಾದ ದೊಡ್ಡ ದುರಂತವೆಂದರೆ ಖಂಡಿತವಾಗಿಯೂ ಸಾವು ಅಲ್ಲ. ನಾವು ಬದುಕಿರುವಾಗ ನಮ್ಮೊಳಗಿನ ಅಂತಃಸತ್ವವನ್ನು ಸಾಯಗೊಟ್ಟಿರುತ್ತೇವಲ್ಲ, ಅದು ನಿಜವಾಗಿಯೂ ಬಹಳ ದೊಡ್ಡ ದುರಂತ.
 • ಪರ್ಶಿಯನ್‌ ಗಾದೆ ಮಾತೊಂದನ್ನು ಕೇಳಿದ ಬಳಿಕ ನನ್ನ ಜೀವನದಲ್ಲಿ ಕೊರಗು ಎಂಬುದು ಇಲ್ಲವೇ ಇಲ್ಲ. ಅದೇನಪ್ಪಾ ಅಂದ್ರೆ ನನಗೆ ಬೂಟುಗಳೇ ಇಲ್ಲವಲ್ಲಾ ಎಂದು ಅಳುತ್ತಿದ್ದೆ. ಅಪ್ಪನನ್ನು ಕೇಳಿದೆ. ಆತ ತೆಗೆಸಿಕೊಡಲಿಲ್ಲ. ಒಂದು ಜತೆ ಬೂಟು ಖರೀದಿಸಲಾಗದ ದರಿದ್ರ ಜೀವನ ಎಂದು ಬೇಸರಿಸಿಕೊಂಡೆ. ಇದೂ ಜೀವನವಾ ಅಂತೆನಿಸಿತು. ಹಾಗೆ ಯೋಚಿಸುತ್ತಿರುವಾಗ ಎರಡೂ ಕಾಲುಗಳೇ ಇಲ್ಲದ, ಆದರೆ ಸಂತಸದಿಂದ ಇರುವ ವ್ಯಕ್ತಿಯಾಬ್ಬನನ್ನು ನೋಡಿದೆ. ಬೂಟುಗಳಿಲ್ಲದ ನನ್ನ ಕಾಲುಗಳನ್ನು ನೋಡಿಕೊಂಡೆ. ನಾನು ಪರಮಸುಖಿಯೆನಿಸಿತು.
 • ಅಪರಿಚಿತರಾದವರಿಗೆ ಪುಟ್ಟ ಸಹಾಯ ಮಾಡಿ. ಅವರು ತಟ್ಟನೆ ನಿಮ್ಮ ಸ್ನೇಹಿತರಾಗುತ್ತಾರೆ. ಟೋಲ್‌ಗೇಟಿನಲ್ಲಿ ನಿಮ್ಮ ಹಿಂದಿನ ಕಾರಿನವನ ಹಣವನ್ನೂ ನೀವೇ ಪಾವತಿಸಿ ನೋಡಿ. ನೀವ್ಯಾರೆಂದು ಆತ ಪರಿಚಯಿಸಿಕೊಳ್ಳದೇ ಹೋಗಲಿಕ್ಕಿಲ್ಲ. ಪುಟ್ಟ ಕಾರಣಕ್ಕೆ ನಿಮಗೊಂದು ಸ್ನೇಹ ದೊರಕಬಹುದು.
 • ಹೇಳುವುದು ಸುಲಭ. ಆದರೆ ಆಚರಣೆಗೆ ತರುವುದು ಕಷ್ಟ. ಅದೇನೆಂದರೆ ಚಿಂತೆ ಬಿಡಿ ಎಂಬ ಉಪದೇಶ. ಆದರೂ ಈ ನಿಯಮ ಪಾಲಿಸಿ. ಯಾವುದಕ್ಕೆ ನಾವು ಚಿಂತಿಸುತ್ತೇವೋ ಬಹುತೇಕ ಸಂದರ್ಭಗಳಲ್ಲಿ ಅವು ಘಟಿಸುವುದೇ ಇಲ್ಲ. ಚಿಂತಿಸಿದ್ದೊಂದೇ ‘ಲಾಭ’!
 • ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ದೊಡ್ಡ ಕೊಡುಗೆಯೆಂದರೆ ಆಟಿಕೆಯಲ್ಲ, ಚಾಕೋಲೇಟ್‌ ಅಲ್ಲ. ಆದರೆ ನಿಮ್ಮ ಸಮಯ. ನಾವು ಅದೊಂದನ್ನು ಬಿಟ್ಟು ಮಿಕ್ಕಿದ್ದೆಲ್ಲವನ್ನೂ ಕೊಡುತ್ತೇವೆ. ಅಲ್ಲಿಗೆ ನಮ್ಮ ಕರ್ತವ್ಯ ಮುಗಿಯಿತೆಂದು ತಿಳಿಯುತ್ತೇವೆ. ನಿಮ್ಮ ಸಮಯಕ್ಕಿಂತ ದೊಡ್ಡ ಕೊಡುಗೆ ಮತ್ತೊಂದಿಲ್ಲ.
 • ಜೀವನದಲ್ಲಿ ದೊಡ್ಡ ಕೆಲಸ, ಕಾರ್ಯವೆಂಬುದು ಇಲ್ಲವೇ ಇಲ್ಲ. ದೊಡ್ಡ ಪ್ರೀತಿಯಿಂದ ಮಾಡಿದ ಎಷ್ಟೇ ಸಣ್ಣ ಕೆಲಸವಾದರೂ ಅದು ದೊಡ್ಡ ಕೆಲಸ, ಕಾರ್ಯವೇ.
 • ಜೀವನದಲ್ಲಿ ಸಣ್ಣ ಸಂಗತಿಗಳೇ ದೊಡ್ಡವು. ಮನೆಗೆಲಸದಾಕೆಗೆ ಸಂಬಳ ಕೊಡದವ ಕಚೇರಿಯಲ್ಲಿ ಸಿಬ್ಬಂದಿಯನ್ನೂ ಸತಾಯಿಸುತ್ತಾನೆ. ನಿಮ್ಮ ಸ್ನೇಹಿತರಿಗೆ ನೀವು ಸೈಟು, ಮನೆ ಕೊಡದಿರಬಹುದು. ಆದರೆ ಒಂದು ಪುಟ್ಟ ಕೈಗಡಿಯಾರ, ಪುಸ್ತಕ, ಪೆನ್ನು ಕೊಡದಿರುವಷ್ಟು ಯಾರೂ ಬಡವರಲ್ಲ, ಆಗಾಗ ಇಂಥ ಗಿಫ್ಟ್‌ಗಳನ್ನು ಕೊಡುತ್ತಿರಿ.
 • ನಿಮ್ಮ ಜತೆಗೆ ಸದಾ ಒಂದು ಪುಸ್ತಕವನ್ನಿಟ್ಟುಕೊಳ್ಳಿ. ಎಂದಿಗೂ ನೀವು ಏಕಾಂಗಿ ಎಂದೆನಿಸುವುದಿಲ್ಲ. ಬೋರು ನಿಮ್ಮ ಸನಿಹ ಸುಳಿಯುದಿಲ್ಲ.
 • ನೀವು ಎಷ್ಟು ದಿನ ಬದುಕಿರುತ್ತೀರೋ, ಏನಾದರೂ ಹೊಸತನ್ನು ಕಲಿಯುತ್ತಿರಿ. ನೂರು ವರ್ಷ ಬಾಳಿದರೂ ಅದೆಷ್ಟು ಕಡಿಮೆ ವರ್ಷ ಬದುಕಿದೆನೆಂದು ನಿಮಗನಿಸುತ್ತದೆ.
 • ಸಾಧ್ಯವಾದರೆ, ನಿಮ್ಮ ಚಪ್ಪಲಿ, ಬೂಟು ತೆಗೆದಿಟ್ಟು ಹಸಿರು ಹುಲ್ಲಿನ ಮೇಲೆ ನಡೆಯಿರಿ. ಸ್ವಲ್ಪ ದೂರ ನಡೆಯುತ್ತಿರುವಂತೆ ನಿಮಗೆ ಹಿತವೆನಿಸುತ್ತದೆ. ಈ ಪುಟ್ಟ ಹುಲ್ಲಿನ ಗಿಡಗಳನ್ನೂ ನಾನು ಸಾಯಿಸುತ್ತಿದ್ದೇನಲ್ಲ ಎಂದು ನಿಮಗೆ ಬೇಸರವಾಗುತ್ತದೆ. ಈ ಬೇಸರವೇ ನಿಜವಾದ ಕಾಳಜಿ.
 • ಹೂಗಳು ಗಿಡದಲ್ಲಿದ್ದರೇ ಚೆಂದ. ಅವನ್ನು ಕೊಯ್ದ ಬಳಿಕ ಗಿಡದ ಸೌಂದರ್ಯ ಕುಗ್ಗುತ್ತದೆ. ಹೂವುಗಳು ಬಾಡುತ್ತವೆ. ಪ್ರಕೃತಿಯ ಸಣ್ಣ ಸಣ್ಣ ವಿಚಿತ್ರಗಳು ನಮ್ಮಲ್ಲಿ ಬೆರಗನ್ನುಂಟು ಮಾಡಬಲ್ಲವು.
 • ಕುರಿಮಂದೆಯಂತಿರುವ ಜನಜಂಗುಳಿಯನ್ನು ಎಂದಿಗೂ ಅನುಸರಿಸಿ ನಡೆಯಬೇಡಿ. ಸಿನಿಮಾದಲ್ಲಿನ ಜನಜಂಗುಳಿಯನ್ನು ಅನುಸರಿಸಿದರೆ Exit (ನಿರ್ಗಮನ ಬಾಗಿಲು) ತಲುಪಿರುತ್ತೀರಿ. ಎಲ್ಲರೂ ಕೈ ಎತ್ತುವಾಗ ನಾವೂ ಕೈ ಎತ್ತುವುದು ಬಹಳ ಸುಲಭ. ಎತ್ತದಿರುವುದೇ ಕಷ್ಟ.
 • ಸದಾ ಒಳ್ಳೆಯ ಕೆಲಸವನ್ನೇ ಏಕೆ ಮಾಡಬೇಕು? ಹೂವುಗಳನ್ನು ಕೊಡುವ ಕೈ ಸದಾ ಪರಿಮಳವನ್ನು ಸೂಸುತ್ತಿರುತ್ತದೆ. ಕೈಗೆ ಜೇನುತುಪ್ಪ ಅಂಟಿಕೊಂಡಿದ್ದರೆ ಯಾರೂ ಕೈ ನೆಕ್ಕದೇ ತೊಳೆದುಕೊಳ್ಳುವುದಿಲ್ಲ.
 • ನಿಮ್ಮೊಂದಿಗೆ ಸದಾ ಇಬ್ಬರು ವೈದ್ಯರಿದ್ದಾರೆ ನಿಮಗೆ ಗೊತ್ತಿಲ್ಲದಂತೆ. ಒಬ್ಬರು ಬಲಗಾಲು, ಮತ್ತೊಬ್ಬರು ಎಡಗಾಲು. ಇವರಿಬ್ಬರ ಜತೆ ನೀವು ದಿನಕ್ಕೆ ಎರಡು ಮೈಲಿ ಹೆಜ್ಜೆ ಹಾಕಿ. ರೋಗ ನಿಮ್ಮ ಹತ್ತಿರ ಸುಳಿದರೆ ನೋಡಿ.
 • ನೀವೆಷ್ಟೇ ಪ್ರಸಿದ್ಧರಾಗಿ. ಅದು ಶಾಶ್ವತವಲ್ಲ. ಒಲಿಂಪಿಕ್ಸ್‌ ಕ್ರೀಡಾಕೂಟ ಮುಗಿದ ಸ್ವಲ್ಪ ದಿನಗಳ ನಂತರ ಬಂಗಾರ ಗೆದ್ದ ಕ್ರೀಡಾಪಟುಗಳನ್ನೂ ಜನ ಮರೆಯುತ್ತಾರೆ. ಚಂದ್ರನ ಮೇಲೆ ಮೊದಲಿಗೆ ಕಾಲಿಟ್ಟವರೂ ಕೆಲ ದಿನಗಳ ಬಳಿಕ ನೇಪಥ್ಯಕ್ಕೆ ಸರಿಯುತ್ತಾರೆ. ಜನಮಾನಸದಿಂದ ದೂರವಾದ ಮಾತ್ರಕ್ಕೆ ಜೀವನ ಮುಗಿಯಿತು ಎಂದಲ್ಲ. ಅದಕ್ಕಾಗಿ ಹೊಸ ಹೊಸ ಸಾಹಸಕ್ಕೆ ನಮ್ಮನ್ನು ಅಣಿಗೊಳಿಸಿಕೊಳ್ಳಬೇಕು.
 • ಸದಾ ಮನೆ, ಮಂದಿಯ, ನಿಮ್ಮ ಮಕ್ಕಳ ಹಾಗೂ ನಿಮ್ಮ ಫೋಟೊ ತೆಗೆಯುತ್ತಿರಿ. ವರ್ಷಕ್ಕೆ ಕನಿಷ್ಠ ಐದಾರು ಆಲ್ಬಮ್‌ಗಳನ್ನು ಸಂಗ್ರಹಿಸಿಡಿ. 20-30ವರ್ಷಗಳ ಬಳಿಕ ಇದೊಂದು ಅಮೂಲ್ಯ ನೆನಪುಗಳ ಆಗರವಾಗಿರುತ್ತದೆ. ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ಉತ್ತಮ ಕೊಡುಗೆಗಳಲ್ಲಿ ಸಿಹಿನೆನಪು ಸಹ ಒಂದು.
 • ಸರಿಯಾದ ಸಮಯ, ಸಂದರ್ಭ, ವ್ಯಕ್ತಿಗಳ ಮುಂದೆ ಸಿಟ್ಟು ಮಾಡಿಕೊಳ್ಳುವುದನ್ನು ಕಲಿತರೆ ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡಿದ್ದೀರೆಂದೇ ಅರ್ಥ. ಸಿಟ್ಟು ಸಹ ಸುಂದರ ಸಾರ್ಥಕವೆನಿಸುವುದು ಆಗಲೇ.
 • ವರ್ಷದಲ್ಲಿ ಒಂದು ವಾರ, ಗಿಡ, ನದಿ, ಗುಡ್ಡ, ಬೆಟ್ಟದಲ್ಲಿ ಕಳೆಯಿರಿ. ಮನುಷ್ಯರಿಗಿಂತ ಇವು ಇಷ್ಟೊಂದು ಸುಂದರವಾಗಿವೆಯೆಂಬುದು ಗೊತ್ತಾಗುತ್ತದೆ.
 • ನಿದ್ದೆ ಮಾಡಬೇಕೆನಿಸಿದಾಗ ಮತ್ತೇನನ್ನೂ ಮಾಡಬೇಡಿ ಚೆನ್ನಾಗಿ ನಿದ್ದೆ ಮಾಡಿ. ನಿದ್ದೆಗಿತ ಸುಖ ಇನ್ನೊಂದಿಲ್ಲ. ಆದರೆ ಅದನ್ನು ಎಷ್ಟು ಮಾಡಬೇಕೆಂಬುದು ಗೊತ್ತಿರಲಿ.
 • ಮಳೆಗಾಗಿ ಪ್ರಾರ್ಥನೆ, ಜಪ, ಯಾಗ ಮಾಡುವುದು ತಪ್ಪಲ್ಲ. ಆದರೆ ಹೀಗೆ ಮಾಡುವಾಗ ಕೈಯಲ್ಲೊಂದು ಕೊಡೆಯಿರಲಿ. ನಾವು ಮಾಡುವ ಕೆಲಸದ ಪರಿಣಾಮವೇನೆಂಬುದು ನಮಗೆ ತಿಳಿದಿರಬೇಕು.
 • ಸಾಧ್ಯವಾದರೆ ಕೊಟೇಶನ್‌, ಸುಪ್ರಭಾತಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಇವುಗಳಲ್ಲಿರುವಷ್ಟು ಜೀವನಾಮೃತ ಬೇರೆಲ್ಲೂ ಸಿಗಲಿಕ್ಕಿಲ್ಲ. ಒಂದು ಕಾದಂಬರಿ, ಪುಸ್ತಕದ ಸತ್ವ ಸುಭಾಷಿತವೊಂದರಲ್ಲಿ ಅಡಗಿರುತ್ತದೆ.
 • ನಿಮಗೆಷ್ಟೇ ಸ್ನೇಹಿತರಿರಬಹುದು, ಸಲಹೆಗಾರರಿರಬಹುದು, ಆದರೆ ನಿಮ್ಮ ಆಪ್ತ ಸ್ನೇಹಿತ, ಆಪ್ತ ಸಲಹೆಗಾರ ನೀವೇ ಎಂಬುದನ್ನು ಮರೆಯಬೇಡಿ. ಕೆಲವೊಮ್ಮೆ ನಿಮ್ಮ ವೈರಿಯೂ ನೀವೇ.
(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more