• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಬ್ಬಾವಾಲಾಗಳಿಂದ ನಾವು- ನೀವು ಕಲಿಯುವ ಪಾಠ ಎಷ್ಟಿದೆ ಅಂದ್ರೆ...

By Staff
|
Vishweshwar Bhat ವಿಶ್ವೇಶ್ವರ ಭಟ್‌
ಮುಂಬೈನ ಡಬ್ಬಾವಾಲಾಗಳ ಬಗ್ಗೆ ಬರೆಯಬೇಕೆಂದು ಬಹಳ ದಿನಗಳಿಂದ ಅಂದುಕೊಂಡಿದ್ದೆ. ಆದರೆ ಅಮೆರಿಕದ ಕಾರ್ನೆಗಿ ಮೆಲ್ಲಾನ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ರಿಚರ್ಡ್‌ಗುಡ್‌ಮ್ಯಾನ್‌ ನಿರ್ದೇಶಿಸಿದ ‘ದಿ ಡಬ್ಬಾವಾಲಾಸ್‌’ ಸಾಕ್ಷ್ಯಚಿತ್ರ ನೋಡಿದ ಬಳಿಕ ಬರೆಯದಿರಲು ಸಾಧ್ಯವೇ ಇರಲಿಲ್ಲ . ನಿಮಗೆ ನೆನಪಿರಬಹುದು, ಹಿಂದಿನ ವರ್ಷ ಬ್ರಿಟನ್‌ನ ರಾಜಕುಮಾರ ಚಾರ್ಲ್ಸ್‌ ಭಾರತಕ್ಕೆ ಹೊರಟು ನಿಂತಾಗ , ‘ಈ ಸಲ ಏನೇ ಆಗಲಿ ನಾನು ಮುಂಬೈನ ಡಬ್ಬಾವಾಲಾಗಳ ಜತೆ ಕೆಲ ಸಮಯ ಕಲೆಯಲೇಬೇಕು’ ಎಂದು ಹೇಳಿದ್ದರು. ಅದರಂತೆ ಅವರೊಂದಿಗೆ ಎರಡು ಗಂಟೆ ಕಳೆದರು. ಕುಳಿತು ಮಾತನಾಡಿದರು. ಊಟ ಮಾಡಿದರು. ಅವರ ಕಷ್ಟ -ಸುಖಗಳನ್ನು ಕೇಳಿದರು. ಅವರ ಕಾರ್ಯವೈಖರಿ ಕಂಡು ಭಲೇ ಎಂದರು.

ಮುಂಬೈಗೆ ಪ್ರತಿನಿತ್ಯವಿದೇಶಿ ಗಣ್ಯರು ಬರುತ್ತಲೇ ಇರುತ್ತಾರೆ. ಒಬ್ಬೇ ಒಬ್ಬ ಸಹ ಡಬ್ಬಾವಾಲಾಗಳ ಜತೆ ಅತಿ ಸಲುಗೆಯಿಂದ ದೇಹ ಚೆಲ್ಲಿಕೊಂಡು ಮಾತುಕತೆಗೆ ಕುಳಿತಿರಲಿಲ್ಲ . ಆಗ ಮೊಟ್ಟ ಮೊದಲ ಬಾರಿಗೆ ಇಡೀವಿಶ್ವದ ಕಣ್ಣು ಡಬ್ಬಾವಾಲಾಗಳ ಜತೆ ಮೇಲೆ ಬಿದ್ದಿತು. ಮುಂಬೈಯೆಂಬ ಊರಿನಲ್ಲಿ ಡಬ್ಬಾವಾಲಾಗಳೆಂಬ ಜನರಿದ್ದಾರೆಂದು ಚಾರ್ಲ್ಸ್‌ಗೆ ಕನಸು ಬಿದ್ದಿರಲಿಲ್ಲ . ಪ್ರತಿಷ್ಠಿತ ‘ಫೋರ್ಬ್ಸ್‌’ಪತ್ರಿಕೆ ಡಬ್ಬಾವಾಲಾಗಳ ಬಗ್ಗೆ ಎರಡು ವರ್ಷಗಳ ಹಿಂದೆ ಮುಖಪುಟ ಲೇಖನ ಬರೆದಾಗ ಚಾರ್ಲ್ಸ್‌ ಇಡಿಯಾಗಿ ಓದಿದ್ದರು. ಹಾರ್ವರ್ಡ್‌, ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯಗಳ ಮ್ಯಾನೇಜ್‌ಮೆಂಟ್‌ ಗುರುಗಳು ಮುಂಬೈಗೆ ಬಂದು ತಿಂಗಳುಗಟ್ಟಲೆ ಡಬ್ಬಾವಾಲಾಗಳ ಕುರಿತು ಸಂಶೋಧನೆ ಮಾಡಿದ ಸಂಗತಿ ಚಾರ್ಲ್ಸ್‌ಗೆ ಗೊತ್ತಿತ್ತು. ಯಾವ ದೇಶದಲ್ಲೂ ಕಾಣದ, ಯಾವ ಬಹುರಾಷ್ಟ್ರೀಯ ಕಂಪನಿಯಿಂದಲೂ ಸಾಧ್ಯವಾಗದ, ವಿಶ್ವದ ಯಾವ ಸರಕಾರದಿಂದಲೂ ಆಗದಂಥ ಒಂದು ಅದ್ಭುತ ವ್ಯವಸ್ಥೆ , ವಿತರಣಾ ಜಾಲ ಹಾಗೂ ಸಂಘಟಿತ ಶಕ್ತಿಯ ಚಮತ್ಕಾರದ ಬಗ್ಗೆ ಅನೇಕರಿಂದ ಚಾರ್ಲ್ಸ್‌ ಕೇಳಿ ಆಶ್ಚರ್ಯ ಚಕಿತರಾಗಿದ್ದರಿಂದ ಡಬ್ಬಾವಾಲಾಗಳ ಜತೆ ಕೆಲಸಮಯ ಕಳೆಯಲು ಅವರು ನಿರ್ಧರಿಸಿದ್ದರು. ತಮ್ಮ ಬಗ್ಗೆ ತೋರಿದ ಆಸ್ಥೆ, ಪ್ರೀತಿಗೆ ಮಾರುಹೋದ ಡಬ್ಬಾಲಾಗಳೆಲ್ಲ ಸೇರಿ, ಮುಂದಿನ ತಿಂಗಳು ಚಾರ್ಲ್ಸ್‌ ಮದುವೆಗೆ ಉಡುಗೊರೆಯೆಂದು ವಜ್ರ ಖಚಿತ ಪೇಟಾ ಕಳಿಸಲು ನಿರ್ಧರಿಸಿರುವುದನ್ನು ಪತ್ರಿಕೆಗಳಲ್ಲಿ ಓದಿರಬಹುದು.

Life and Times of Dabbawallas in Mumbaiಇದೆಲ್ಲ ಸರಿ, ಯಾರು ಈ ಡಬ್ಬಾವಾಲಾಗಳು? ಏನಿವರ ಕೆಲಸ? ಇವರ ಕೆಲಸದಲ್ಲಿ ಅದೆಂಥ ಅದ್ಭುತವೆನಿಸುವ ಸಂಗತಿಗಳಿವೆ? ಇವರಿಂದ ನಾವು ಕಲಿಯುವಂಥದ್ದೇನಿದೆ? ಇವರೇಕೆ ಇಂದು ಹೆಚ್ಚು ಪ್ರಸ್ತುತರಾಗುತ್ತಾರೆ? ಇವರ ಕಾರ್ಯವಿಧಾನ ಅರಿಯಲು ವಿದೇಶಿ ವಿಶ್ವವಿದ್ಯಾಲಯಗಳ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳು ಏಕೆ ಬರುತ್ತಾರೆ?

ನಿಜಕ್ಕೂ ನೀವು ಡಬ್ಬಾವಾಲಾಗಳ ವಿಸ್ಮಯಕಾರಿ ಪ್ರಪಂಚದೊಳಗೆ ಕಾಲಿರಿಸಬೇಕು. ಮುಂಬೈಯೆಂಬ ಕ್ಷುದ್ರನಗರಿಯಲ್ಲಿ ಹೆಂಡತಿ ಅಥವಾ ತಾಯಿ ಅಡುಗೆ ಮಾಡಿ ಡಬ್ಬಾದಲ್ಲಿ ಕಟ್ಟಿಟ್ಟರೆ ಅದನ್ನು 40-50 ಕಿ.ಮೀ. ದೂರದಲ್ಲಿ ಕೆಲಸ ಮಾಡುವ ಗಂಡ ಅಥವಾ ಮಗನಿಗೆ ಮಧ್ಯಾಹ್ನದ ಊಟದ ಸಮಯಕ್ಕೆ ವಿತರಿಸಿ ಅನಂತರ ಸಾಯಂಕಾಲ ನಾಲ್ಕು ಗಂಟೆಯಾಳಗೆ ವಾಪಸು ಅವರವರ ಮನೆಗಳಿಗೆ ಡಬ್ಬಾಗಳನ್ನು ಹಿಂತಿರುಗಿಸುವವರೇ ಡಬ್ಬಾವಾಲಾಗಳು. ಇಷ್ಟೇ ಅವರ ಕೆಲಸ. ಮೇಲ್ನೋಟಕ್ಕೆ ತೀರಾ ಸರಳ ಕೆಲಸ ಎನಿಸಬಹುದು. ಮುಂಬೈ ಮಹಾನಗರ ಪಾಲಿಕೆಯಲ್ಲೊಬ್ಬ ಟೈಪಿಸ್ಟ್‌ಗೆ ಆತನ ಊಟದ ಡಬ್ಬಾ ಹೇಗೆ ಬರುತ್ತದೆ ಎಂಬುದನ್ನು ನೋಡೋಣ. ಹತ್ತು ಗಂಟೆಗೆ ಆರಂಭವಾಗುವ ಕಚೇರಿ ತಲುಪಲು ಟೈಪಿಸ್ಟ್‌ ಬೆಳಿಗ್ಗೆ ಏಳು ಗಂಟೆಗೆ ಮನೆ ಬಿಡಬೇಕು. ಆಗಲೇ ಊಟದ ಡಬ್ಬಾ ಒಯ್ಯಲು ಸಾಧ್ಯವಿಲ್ಲ . ಹೆಂಡತಿ ಡಬ್ಬಾ ಕಟ್ಟಿ ಕೊಡಬಹುದು. ಆದರೆ ಟ್ರೇನಿನಲ್ಲಿನ ಜನಜಂಗುಳಿಯಿಂದ ಡಬ್ಬಾ ಸುರಕ್ಷಿತವಾಗಿ ಕಚೇರಿ ತಲುಪುವುದೆಂದು ಹೇಳಲು ಆಗುವುದಿಲ್ಲ . ಒಮ್ಮೆ ತಲುಪಿದರೂ ಊಟ ತಣಿದು ಹೋಗುವುದಿರಿಂದ ತಿನ್ನಲು ಆಗುವುದಿಲ್ಲ. ಡಬ್ಬಾವಾಲಾಗಳು ಹುಟ್ಟಿಕೊಂಡಿದ್ದೇ ಇದಕ್ಕಾಗಿ. ಬೆಳಗ್ಗೆ 10ಗಂಟೆಗೆ ಡಬ್ಬಾವಾಲಾ ಬಂದು ನಿಮ್ಮ ಮನೆ ಬಾಗಿಲು ಬಡಿಯುತ್ತಾನೆ. ಮನೆ ಒಂದನೆ ಮಹಡಿಯಲ್ಲಿರಲಿ, ಹದಿನೆಂಟನೆ ಮಹಡಿಯಲ್ಲಿರಲಿ. ಆತ ಬಾಗಿಲು ಬಡಿದರೆ ಆಗ ಹತ್ತು ಗಂಟೆಯೇ ಆಗಿರುತ್ತದೆ. ಕಪ್ಪು ಬಣ್ಣದ ಸ್ವಸ್ತಿಕ್‌ ಚಿಹ್ನೆ, ಒಂದು ರೂಪಾಯಿ ಗಾತ್ರದ ಕೆಂಪುಬಣ್ಣದ ಗುರುತು ಅದಕ್ಕೊಂದು ಹಳದಿ ಗೀಟು ಹಾಕಿದ ಡಬ್ಬಾವನ್ನು ಆತ ಎತ್ತಿಕೊಂಡು ಹತ್ತಾರು ಕಿ.ಮೀ. ಸುತ್ತಿ , ಹೀಗೆ ನೂರಾರು ಮಹಡಿ ಹತ್ತಿ ಇಳಿದು ಡಬ್ಬಾಗಳನ್ನು ಸಂಗ್ರಹಿಸಿ ಅವೆಲ್ಲವುಗಳನ್ನು ಸೈಕಲ್‌ನಲ್ಲಿ ಹೇರಿಕೊಂಡು ಮತ್ತೆ ಏಳೆಂಟು ಕಿ.ಮೀ. ಸೈಕಲ್‌ ತುಳಿದು ಹತ್ತಿರದ ರೈಲು ನಿಲ್ದಾಣಕ್ಕೆ ತಲುಪಿಸುತ್ತಾನೆ. ಅಲ್ಲಿ ಆತನಿಗಾಗಿ ಎರಡನೆ ಡಬ್ಬಾವಾಲಿ ಕಾದಿರುತ್ತಾನೆ. ಅಷ್ಟೊತ್ತಿಗೆ ರೈಲು ನಿಲ್ದಾಣಕ್ಕೆ ಬೇರೆ ಬೇರೆಯವರು ಸಂಗ್ರಹಿಸಿದ ಸಾವಿರಾರು ಡಬ್ಬಾಗಳು ಬಂದಿರುತ್ತವೆ. ಅವೆಲ್ಲವುಗಳನ್ನು ಸೇರಿಸಿಕೊಂಡು ಆತ ರೈಲು ಬರುತ್ತಿದ್ದಂತೆ ಅದರೊಳಗೆ ತುಂಬುತ್ತಾನೆ. ಸಾವಿರಾರು ಡಬ್ಬಾಗಳನ್ನು ಲೋಡ್‌ ಮಾಡಲು ಅವನಿಗಿರುವುದು ಕೇವಲ ಎರಡೇ ನಿಮಿಷ! ರೈಲು (ವಿಕ್ಟೋರಿಯಾ ಟರ್ಮಿನಸ್‌)ಗೆ ಬರುತ್ತದೆ. ಅದು ಎಲ್ಲ ಡಬ್ಬಾಗಳು ಬಂದು ಸೇರುವ ಸಂಗಮ. ಅಲ್ಲಿ ಮೂರನೆಯವ ನಿಂತಿರುತ್ತಾನೆ. ಅಷ್ಟೊತ್ತಿಗೆ ಬೇರೆ ಬೇರೆ ಕಡೆಗಳಿಂದ ಲಕ್ಷಾಂತರ ಊಟದ ಡಬ್ಬಾಗಳು ಬಂದು ಅಲ್ಲಿ ಸೇರಿರುತ್ತವೆ. ಡಬ್ಬಾದ ಮೇಲಿರುವ ಬಣ್ಣ , ಗೀಟು, ಚಿಹ್ನೆಗಳಿಂದ ಒಂದೊಂದೇ ಡಬ್ಬಾ ವಿಂಗಡಣೆಗಾಗಿ ಮಹಾನಗರಪಾಲಿಕೆಯ ನಾಲ್ಕನೆ ಮಹಡಿಯಲ್ಲಿರುವ ಟೈಪಿಸ್ಟ್‌ನ ಟೇಬಲ್‌ ಮೇಲೆ ಮಧ್ಯಾಹ್ನ ಒಂದು ಗಂಟೆಯಾಳಗೆ ಡಬ್ಬಾ ಕುಳಿತಿರುತ್ತದೆ. ಕೆಲವೊಮ್ಮೆ ಒಂದೊಂದು ಡಬ್ಬಾ ನಾಲ್ಕು-ಐದು ರೈಲುಗಳನ್ನು ಹತ್ತಿ ಇಳಿಯುವುದುಂಟು. ಆರೇಳು ಮಂದಿಯ ಕೈಗಳನ್ನು ದಾಟಿ ಹೋಗುವುದುಂಟು. ಅದೆಷ್ಟೇ ದೂರವಿರಲಿ, ಅದೆಷ್ಟೇ ಮಂದಿಯ ಕೈಗಳನ್ನು ದಾಟಲಿ, ಡಬ್ಬಾ ಸೇರಬೇಕಾದ ವ್ಯಕ್ತಿ ಎಂಥ ಕಿರಿದಾದ ಓಣಿಯಲ್ಲಿ ಕುಳಿತಿರಲಿ, ಐವತ್ತನೆ ಮಹಡಿಯಲ್ಲಿ ಕುಳಿತಿರಲಿ, ಆತ ಟ್ಯಾಕ್ಸಿ ಚಾಲಕನಾಗಿರಲಿ, ರಣರಣ ಬಿಸಿಲಿಗೆ ಊರಿಗೆ ಊರೇ ಬೆಂದೇಳಲಿ, ‘ಸಾರಿ ಸರ್‌, ಇಂದು ಐದು ನಿಮಿಷ ಲೇಟಾಯ್ತು’ ಎಂದು ಮುಖ ಕೆಳಗೆ ಹಾಕುವುದಿಲ್ಲ. ಡಬ್ಬಾ ಅದಲು-ಬದಲಾಯಿತೆಂದು ಮುಖ ಕೆಳಗೆ ಹಾಕುವುದಿಲ್ಲ . ಆತನಿಗೆ ನೆಪ ಹೇಳಿಗೊತ್ತಿಲ್ಲ . ಇದು ಇಂದು- ನಿನ್ನೆಯ ಕತೆಯಲ್ಲ . ಸುಮಾರು ನೂರು ವರ್ಷಗಳಿಂದ ಡಬ್ಬಾವಾಲಾಗಳು ಈ ರೀತಿಯ ಅಚ್ಚು ಕಟ್ಟು ಸೇವೆಯಲ್ಲಿ ನಿರತರಾಗಿದ್ದಾರೆ. ಸುಮಾರು ಆರು ಸಾವಿರ ಡಬ್ಬಾವಾಲಾಗಳು ಪ್ರತಿನಿತ್ಯ ಮೂರು ಲಕ್ಷ ಮಂದಿಗೆ ‘ಡಬ್ಬಾಸೇವೆ’ ಮಾಡುತ್ತಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ ಈ ಆರು ಸಾವಿರ ಮಂದಿಯಲ್ಲಿ ಯಾರೂ ಹೆಚ್ಚು ಕಲಿತವರಲ್ಲ . ಬಹುತೇಕ ಮಂದಿ ಅನಕ್ಷರಸ್ಥರು. ಯಾವ ಡಬ್ಬಾದ ಮೇಲೂ ವಿಳಾಸವಿರುವುದಿಲ್ಲ . ಕೇವಲ ಸಂಕೇತಗಳೇ ವಿಳಾಸ. ಯಾರಿಗೂ ಒಂದು ಫೋನ್‌ ಕೂಡ ಇಲ್ಲ . ಮೊಬೈಲು ಇಲ್ಲವೇ ಇಲ್ಲ . ಆಧುನಿಕ ತಂತ್ರಜ್ಞಾನದ ಬಳಕೆಯಿಲ್ಲ. ಬಾರ್‌ಕೋಡ್‌ ಪದ್ಧತಿ ಗೊತ್ತಿಲ್ಲ. ಕಂಪ್ಯೂಟರ್‌ ಬಳಸುವುದಂತೂ ದೂರವೇ ಉಳಿಯಿತು. ತಲೆಗೊಂದು ಗಾಂಧಿ ಟೋಪಿ ಬಿಟ್ಟರೆ ಅವರಿಗೊಂದು ಸಮವಸ್ತ್ರವೂ ಇಲ್ಲ. ಆದರೆ ಸೇವೆ ಮಾತ್ರ ಅನುಪಮ! ನಾನ್‌ವೆಜ್‌ ಡಬ್ಬಾವನ್ನು ವೆಜ್‌ ಸೇವಿಸುವವರ ಮುಂದೆ ಇಟ್ಟ ನಿದರ್ಶನ ಇಲ್ಲವೇ ಇಲ್ಲ . ಡಬ್ಬಾ ಬರಲೇ ಇಲ್ಲ ಎಂಬ ದೂರುಗಳಿಲ್ಲ . ಕಳೆದು ಹೋಯಿತೆಂಬ ಪುಕಾರುಗಳಿಲ್ಲ . ತಡವಾಯಿತೆಂಬ ಸಣ್ಣ ಅಪಸ್ವರವೂ ಇಲ್ಲ .

ಎಲ್ಲವೂ ಚೊಕ್ಕು, ಕರಾರುವಾಕ್ಕು. ಹಾರ್ವರ್ಡ್‌ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್‌ ಪ್ರಾಧ್ಯಾಪಕರು ಬಂದು ಡಬ್ಬಾವಾಲಾಗಳ ಕಾರ್ಯಕ್ಷಮತೆ ಬಗ್ಗೆ ಸಮೀಕ್ಷೆ ನಡೆಸಿದಾಗ ಗೊತ್ತಾಗಿದ್ದೇನೆಂದರೆ ಪ್ರತಿ 80ಲಕ್ಷ ಡಬ್ಬಾಗಳಿಗೆ ಒಂದು ಡಬ್ಬಾ ಅದಲು ಬದಲಾಗುತ್ತದೆ. ಆದರೆ ಒಂದೇ ಒಂದು ಡಬ್ಬಾ ಕಳೆದು ಹೋಗುವುದಿಲ್ಲ ! ಪ್ರತಿ 60ಲಕ್ಷ ಡಬ್ಬಾಗಳಿಗೆ ಒಂದು ಡಬ್ಬಾ ಮಾತ್ರ ತಡವಾಗಿ ವಿತರಣೆಯಾಗುತ್ತದೆ. ಅದೂ ಹತ್ತು ನಿಮಿಷಕ್ಕಿಂತ ವಿಳಂಬವಾಗುವುದಿಲ್ಲ . ಊಟದ ಡಬ್ಬಾದಲ್ಲಿ ದುಡ್ಡು ಸಾಕು, ಬಂಗಾರಗಳನ್ನಿಟ್ಟರೂ ಸ್ವಲ್ಪವೂ ಹೈಗೈ ಆಗದೇ ತಲುಪಬೇಕಾದವನಿಗೇ ಸೇರುತ್ತದೆ.

ಅಮೆರಿಕದ ಪ್ರಸಿದ್ಧ ಕೊರಿಯರ್‌ ಸಂಸ್ಥೆ ‘ಫೆಡರಲ್‌ ಎಕ್ಸ್‌ಪ್ರೆಸ್‌’ ಸಂಸ್ಥೆಯ ಮಾಲೀಕ ಸ್ವತಃ ಮುಂಬೈ ಡಬ್ಬಾವಾಲಾ ಗಳನ್ನು ಸೇರಿಸಿಕೊಂಡು ‘ನಿಮ್ಮ ಅನುಭವ ಹೇಳಿ, ಹೇಗೆ ಈ ಜಾದು ಸಾಧ್ಯ ?’ ಅಂದ. ಆತ ಡಬ್ಬಾವಾಲಾಗಳ ಕತೆ ಕೇಳಿದನೇ ಹೊರತು, ಜಾರಿಗೊಳಿಸಲು ಸಾಧ್ಯವಾಗಲಿಲ್ಲ . ಜಗತ್ತಿನಲ್ಲಿಯೇ ಅತ್ಯುತ್ತಮ ಅಂಚೆ ಸೇವೆಯೆಂದು ಹೆಸರಾದ ಕೆನಡ ಪೋಸ್ಟ್‌ ಮುಖ್ಯಸ್ಥನೂ ಹಾಗೇ ಮಾಡಿದ. ಆತನಿಗೂ ಕೂಡಾ ಡಬ್ಬಾವಾಲಗಳಂಥ ಸೇವೆ ನೀಡಲು ಇಂದಿಗೂ ಸಾಧ್ಯವಾಗಿಲ್ಲ. ಹಾಗಂತ ಅವನೇ ಒಪ್ಪಿಕೊಂಡಿದ್ದಾನೆ. ಮುಂಬೈ ಡಬ್ಬಾವಾಲಾಗಳಿಂದ ಪ್ರಭಾವಿತರಾಗಿ ಲಂಡನ್‌ನಲ್ಲಿ ‘ಟಿಫಿನ್‌ ಬೈಟ್ಸ್‌’ ಎಂಬ ಇದೇ ರೀತಿಯ ಸೇವೆ ಆರಂಭಿಸಲಾಗಿದೆ. ಪ್ರತಿವರ್ಷ 1.4ಶತಕೋಟಿ ಪೌಂಡ್‌(ಒಂದು ಪೌಂಡ್‌ಗೆ 84ರೂ.) ವ್ಯವಹಾರ ಕುದುರುತ್ತದೆ.

ಡಬ್ಬಾವಾಲಾಗಳು ತಾವು ಮಾಡುವ ಸೇವೆಗೆ ಒಬ್ಬ ವ್ಯಕ್ತಿಯಿಂದ ತಿಂಗಳಿಗೆ ಪಡೆಯುವುದಾದರೂ ಎಷ್ಟು? ಕೇವಲ 150ರೂಪಾಯಿ. ದೂರ ಹೆಚ್ಚಿದ್ದರೆ 175ರೂ. ಅಂದರೆ ದಿನಕ್ಕೆ ಕೇವಲ 5ರೂಪಾಯಿ. ಪ್ರಾಯಶಃ ಇಷ್ಟೊಂದು ಸೋವಿ ಸೇವೆ ಜಗತ್ತಿನಲ್ಲಿಯೇ ಇರಲಿಕ್ಕಿಲ್ಲ . ತಲುಪಿಸುವುದಿಷ್ಟೇ ಅಲ್ಲ , ಖಾಲಿ ಡಬ್ಬಿಯನ್ನು ವಾಪಸ್‌ ಮನೆಗೆ ತಲುಪಿಸುವ ಹೊಣೆಯೂ ಅವರದೇ. ಡಬ್ಬಾವಾಲಾಗಳು ಒಂದೇ ಒಂದು ದಿನ ಮುಷ್ಕರ ಹೂಡಿಲ್ಲ. ಜಾಸ್ತಿ ಹಣಪೀಕಬೇಕೆಂದು ಬೇಡಿಕೆ ಸಲ್ಲಿಸುವುದಿಲ್ಲ . ಡಬ್ಬಾವಾಲಾಗಳ ಸಂಘ ನಿರ್ಧರಿಸಿದಷ್ಟೆ ಹಣವನ್ನು ಕೊಟ್ಟರಾಯಿತು. ಹೆಂಡತಿ ಗಂಡನಿಗೆ ಹೇಳಬೇಕಾದ್ದನ್ನು ಒಂದು ಚೀಟಿ ಬರೆದು ಡಬ್ಬಾದಲ್ಲಿಟ್ಟರೆ ಊಟದ ಜತೆಗೆ ‘ ಮೆಲ್ಲ’ ಬಹುದು. ಪ್ರಿಯತಮೆ ಬಿಡುತ್ತಾಳಾ ಇಂಥ ಸೇವೆಯನ್ನ ? ಗ್ರಾಹಕರ ವಸ್ತುಗಳ ಕಂಪನಿಗಳು ಎರಡು ತಾಸಿನೊಳಗೆ ತಮ್ಮ ಸ್ಯಾಂಪಲ್‌ಗಳನ್ನು ಮೂರು ಲಕ್ಷ ಗ್ರಾಹಕರಿಗೆ ತಲುಪಿಸಬೇಕಾದರೆ ನೋಡುವುದು ಡಬ್ಬಾವಾಲಾಗಳನ್ನೇ. ಅಪ್ಪಿ ತಪ್ಪಿ ಡಬ್ಬಾವಾಲಾನ ಸೈಕಲ್‌ ಅಥವಾ ತಳ್ಳುಗಾಡಿ ಲೈನ್‌ಜಂಪ್‌ ಮಾಡಿದರೆ ಪೊಲೀಸ್‌ ಹಿಡಿದು ಹಿಂಸಿಸುವುದಿಲ್ಲ . ಟಿಕೆಟ್‌ ತರಲಿಲ್ಲವೆಂದು ರೈಲಿನಲ್ಲಿ ಟಿಸಿ ಪೀಡಿಸುವುದಿಲ್ಲ. ಹಾಗಂತ ಡಬ್ಬಾವಾಲಾ ಲೈನನ್ನೂ ಜಂಪ್‌ ಮಾಡೊಲ್ಲ. ಟೆಕೆಟ್‌ ಇಲ್ಲದೇ ಪ್ರಯಾಣ ಮಾಡೋಲ್ಲ. ಮುಂಬೈ ಜನಜಂಗುಳಿಯಲ್ಲಿ ಹಾಗೂ ಜನಜೀವನದಲ್ಲಿ ಡಬ್ಬಾವಾಲಾಗಳಿಗೆ ಒಂದು ವಿಶೇಷ ಸ್ಥಾನಮಾನ. ಅವರೆಂದೂ ತಮ್ಮ ಕೆಲಸವನ್ನು ಡಬ್ಬಾ ವಿತರಣೆಯೆಂದು ಭಾವಿಸಿಲ್ಲ. ಅವರ ಪಾಲಿಗೆ ಇದು ಉದರ ಸೇವೆ. ಡಬ್ಬಾವಾಲಾಗಳು ದಿನಕ್ಕೆ ಮೂರು ಪಾಳಿಗಳಲ್ಲಿ 24 ಗಂಟೆಯೂ ಸೇವೆಗೆ ಲಭ್ಯ.

ಯಾವುದೇ ಡಬ್ಬಾವಾಲಿ ಕೇಳಿ. ಆತ ತನ್ನ ಕೆಲಸದ ಬಗ್ಗೆ ಗೊಣಗುವುದಿಲ್ಲ . ಕೈ ತುಂಬಾ ಹಣ ಸಿಗದಿದ್ದರೂ ಪರವಾಗಿ ಲ್ಲ, ತನ್ನ ಕೆಲಸದ ಬಗ್ಗೆ ಕೀಳರಿಮೆ ಇಲ್ಲ . ಆತನ ಮಗನನ್ನು ಕೇಳಿ. ತಾನು ಡಬ್ಬಾವಾಲಿಯ ಮಗನೆಂದು ಆತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅಪ್ಪ ಆರಾಮಿಲ್ಲದೇ ಮಲಗಿದರೆ ಮಗ ಡಬ್ಬಾ ಹೊರಲು ಸಿದ್ಧನಾಗಿರುತ್ತಾನೆ. ‘ನಾವು ಡಬ್ಬಾವಾಲಿಗಳು’ ಎಂದು ಅವರು ಗರ್ವದಿಂದ ಹೇಳಿಕೊಳ್ಳುತ್ತಾರೆ.

ಬಹುರಾಷ್ಟ್ರೀಯ ಕಂಪನಿಗಳ ಹೊಡೆತ, ಫಾಸ್ಟ್‌ ಫುಡ್‌ಗಳ ಪೈಪೋಟಿ, ತಂತ್ರಜ್ಞಾನದ ಮೊರೆತಗಳ ನಡುವೆಯೂ ಡಬ್ಬಾವಾಲಾಗಳನ್ನು ಕದಲಿಸಲು ಆಗುತ್ತಿಲ್ಲ. ಒಬ್ಬ ಡಬ್ಬಾವಾಲಿ ಸಂಕಷ್ಟಕ್ಕೆ ಸಿಲುಕಿದರೆ ಇಡೀ ಸಮೂಹವೇ ತಕ್ಷಣ ನೆರವಿನ ಹಸ್ತ ಚಾಚುತ್ತದೆ.

ಸರಳ ಸಂಘಟನೆ, ಅದ್ಭುತ ಆಡಳಿತ ನಿರ್ವಹಣೆಯ ಅಪೂರ್ವ ಮಾದರಿಯಾಗಿ ಡಬ್ಬಾವಾಲಾಗಳು ರೂಪುಗೊಂಡಿದ್ದಾರೆ. ಇವರಿಂದ ನಾವು ಕಲಿಯುವುದು ಎಷ್ಟೆಲ್ಲಾ ಇವೆ ಅಲ್ವಾ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more