• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾತ್ರೆ ಮುಗಿದಿದೆ ನಿಜ, ಆದರೆ ಯಾನದ ಮೆಲುಕಿನ ಜಿನುಗು ನಿಂತಿಲ್ಲ

By Staff
|
Vishweshwar Bhat ವಿಶ್ವೇಶ್ವರ ಭಟ್‌

Indian President APJ Abdul Kalamಮೈಮನಗಳಲ್ಲೆಲ್ಲ ಜೆಟ್‌ಲ್ಯಾಗ್‌ ಎಂಬ ಜಿಗುಟು. ಅದರೊಳಗೆ ರಾಷ್ಟ್ರಪತಿ ಡಾ.ಅಬ್ದುಲ್‌ ಕಲಾಂ ಮಾತ್ರ ನಿತ್ಯ ‘ಲಾಗ’ಹಾಕುತ್ತಿದ್ದಾರೆ. ಒಮ್ಮೆ ಜೆಟ್‌ಲ್ಯಾಗ್‌ ಆವರಿಸಿದರೆ ಸಾಕು ಮೈತುಂಬಾ ನಿದ್ದೆ. ತಲೆಯಾಳಗೆ ಗುಂಯ್‌ಗುಡುವ ಸದ್ದು. ಇನ್ನೂ ಆಗಸದಲ್ಲಿ ತೇಲುತ್ತಿರುವ ಅನುಭವ. ತೀರದ ನಿದ್ದೆ, ಸೇರದ ಊಟ, ಮುಗಿಯದ ಯಾನದ ಮೆಲುಕಿನ ಜಿನುಗು.

ಏರ್‌ ಇಂಡಿಯಾ ವಿಮಾನದಲ್ಲಿ ಶನಿವಾರ ಡಾ.ಕಲಾಂ ಕೈಕಲುಕಿ ಅವರಿಂದ ಬೀಳ್ಕೊಂಡು ಬೆಂಗಳೂರಿನತ್ತ ಮುಖ ಮಾಡಿ ನಿಂತಿದ್ದರೆ ಹಾದು ಹೋಗುವ ದೃಶ್ಯಗಳಲ್ಲಿ, ಯೋಚನೆಗಳ ಅಲೆಗಳಲ್ಲಿ ನೆನಪಿನ ಪದರಗಳಲ್ಲಿ ಅವರೇ ಕುಳಿತಿದ್ದರು. ಹದಿನಾಲ್ಕು ದಿನಗಳ ಕಾಲ ಅವರೊಂದಿಗೆ ಮಾಸ್ಕೊ, ಸೇಂಟ್‌ ಪೀಟರ್ಸ್‌ಬರ್ಗ್‌, ಜಿನಿವಾ, ಜ್ಯುರಿಚ್‌, ಲಾಸನ್‌, ಬನ್‌, ಯುಂಗ್‌ಫ್ರಾ, ಐಸೆಲ್ಟ್‌ವಾಲ್ಡ್‌, ಇಂಟರ್‌ ಲ್ಯಾಂಕನ್‌, ರಿಕ್ಯಾವಿಕ್‌, ಕೀವ್‌, ಡೆಪ್ರೊ ಪೆಟ್ರೊವೆಸ್ಕ್‌ ಮುಂತಾದ ನಗರದಲ್ಲಿ ಸಂಚರಿಸಿದ ಕ್ಷಣಗಳ ನೆನಪಿನ ಅದುರುಗಳು ಸಹಜ ಉತ್ಬನನಗೊಂಡು ಮೇಲೆ ಬಂದಂತೆ ಮೈಗೆ ಸೋಕುತ್ತಿದ್ದವು. ಡಾ.ಕಲಾಂ ಅಂಥ ಮೋಡಿ ಮಾಡಿದ್ದರು. ಯಾವುದೇ ಟ್ರಿಕ್‌ ಇಲ್ಲದೇ ಮ್ಯಾಜಿಕ್‌ ಮಾಡುವ ಜಾದೂಗಾರನಂತೆ!

ರಾಷ್ಟ್ರಪತಿಗಳ ವಿದೇಶಯಾತ್ರೆಯೆಂದರೆ ಒಂದು ರೀತಿಯ ಮೋಜಿನ ಪ್ರವಾಸವೆಂದೇ ಪ್ರತೀತಿ. ಡಾ. ಕಲಾಂಗಿಂತ ಹಿಂದೆ ರಾಷ್ಟ್ರಪತಿ ಕುರ್ಚಿ ಮೇಲೆ ಕುಳಿತವರೆಲ್ಲರ ವಿದೇಶಯಾತ್ರೆ ಮೋಜಿಗೆ ಸೀಮಿತವಾಗಿತ್ತು. ಫಕ್ರುದ್ದೀನ್‌ ಅಲಿ ಅಹಮ್ಮದ್‌ ಅವರು ಮಲೇಷಿಯಾಕ್ಕೆ ಹನ್ನೆರಡು ದಿನಗಳ ಪ್ರವಾಸ ಹೋಗಿದ್ದರು. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಪಡೆದ ಫಕ್ರುದ್ದೀನ್‌ ಆಲಿ ಮಹಮ್ಮದ್‌ ಅವರು ಮುಂದಿನ ಹನ್ನೆರಡು ದಿನ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದರು. ಶರೀರ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿತ್ತು. ಅವರ ಗೌರವಾರ್ಥ ಆತಿಥೇಯ ದೇಶದ ಅಧ್ಯಕ್ಷ ಏರ್ಪಡಿಸಿದ ಔಚಣಕೂಟದಲ್ಲಿ ಪಾಲ್ಗೊಂಡಿದ್ದನ್ನು ಬಿಟ್ಟರೆ ‘ಪ್ರಥಮ ಪ್ರಜೆ’ ಹಾಯಾಗಿ ವಿರಮಿಸುತ್ತಿತ್ತು. ತಮ್ಮೊಂದಿಗೆ ಕರೆದುಕೊಂಡು ಹೋದ ಪತ್ರಕರ್ತರನ್ನುದ್ದೇಶಿಸಿ ಒಂದು ಮಾತನ್ನೂ ಹೇಳಲಿಲ್ಲ. ‘ನನ್ನ ಹಾಗೆ ನೀವೂ ವಿಹರಿಸಿ’ ಎಂದರು.

ಡಾ. ಶಂಕರ್‌ ದಯಾಳ್‌ ಶರ್ಮ ಬಲ್ಗೇರಿಯಾಕ್ಕೆ ಹೋಗಿದ್ದರು. ತಮ್ಮ ಏಡಸಿಗಳ ನೆರವಿನಿಂದಲೇ ನಡೆದಾಡುತ್ತಿದ್ದ ಡಾ. ಶರ್ಮ ಒಂದು ಹಂತದಲ್ಲಿ ಸರಕಾರಿ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗಲೇ ಪ್ಯಾಂಟಿನೊಳಗೆ ಒದ್ದೆ ಮಾಡಿಕೊಂಡಿದ್ದರು. ಬೇರೆಯವರಿಗೆ ಗೊತ್ತಾಗದಂತೆ ಅವರ ಆಪ್ತ ಸಿಬ್ಬಂದಿ ಡಾ. ಶರ್ಮ ಅವರನ್ನು ಸುತ್ತುವರಿದು ಹೋಟೆಲ್‌ ರೂಮಿಗೆ ಕರೆತಂದು, ಚಿಕ್ಕ ಮಕ್ಕಳಿಗೆ ಡಯಪರ್‌ ತೊಡಿಸುವಂತೆ ರಾಷ್ಟ್ರಪತಿಗಳಿಗೂ ಅದನ್ನೇ ತೊಡಿಸಿಕೊಂಡು ಅವರನ್ನು ಎಲ್ಲ ಸಮಾರಂಭಗಳಲ್ಲೂ ನಿಲ್ಲಿಸುತ್ತಿದ್ದರು. ಮೊಣಕಾಲು ನೋವಿನಿಂದ ಬಳಲುತ್ತಿದ್ದ ಡಾ.ಶರ್ಮ ಅವರ ಅಧಿಕೃತ ಕಾರ್ಯಕ್ರಮಗಳ ಪೈಕಿ ಅರ್ಧಕ್ಕರ್ಧ ಕೊನೆಕ್ಷಣದಲ್ಲಿ ರದ್ದಾಗಿ ಮುಜುಗರವಾಗುತ್ತಿತ್ತು. ಇಷ್ಟಾಗಿಯೂ ಅವರು ವಿದೇಶ ಪ್ರವಾಸ ಅಂದರೆ ಎದ್ದು ನಿಲ್ಲುತ್ತಿದ್ದರು. ಅವರ ಜತೆ ಇಡೀ ಕುಟುಂಬ ಹಿಂಬಾಲಿಸುತ್ತಿತ್ತು. ಒಂದು ಔತಣಕೂಟದಲ್ಲಂತೂ ಅವರಿಗೆ ಔಪಚಾರಿಕ ಭಾಷಣ ಪ್ರತಿಯನ್ನೂ ಓದಲಾಗಲಿಲ್ಲ. ಇಂಥ ಶಂಕರದಯಾಳ್‌ ಶರ್ಮ ಒಂದೇ ಒಂದು ಒಪ್ಪಂದಕ್ಕೆ ಸಹಿ ಹಾಕದೇ, ದ್ವಿಪಕ್ಷೀಯ ಮಾತುಕತೆಯಾಡದೇ, ರಾಜತಾಂತ್ರಿಕ ಸಂವಾದ ನಡೆಸದೇ ವಾಪಸ್‌ ಬಂದಿದ್ದುಂಟು.

ಡಾ.ಶರ್ಮ ಸರಕಾರಿ ಖುರ್ಚಿನಲ್ಲಿ ದೇಶದಲ್ಲಿರುವ ಒಂದು ದೇವಸ್ಥಾನ, ಗುಡಿ, ಗೋಪುರ, ತೀರ್ಥಕ್ಷೇತ್ರಗಳನ್ನು ಬಿಡಲಿಲ್ಲ. ತಿರುಪತಿಗಂತೂ ಎರಡು ತಿಂಗಳಿಗೊಮ್ಮೆ ಬಂದು ಹೋದರು. ಪ್ರತಿ ವಿದೇಶ ಪ್ರವಾಸದಲ್ಲೂ ತಮ್ಮ ದೇಹದ ಬಿಡಿಭಾಗಗಳ ವೈದ್ಯಕೀಯ ಚೆಕ್‌ಅಪ್‌ನ್ನು ಸಹ ಸರಕಾರಿ ಖರ್ಚಿನಲ್ಲಿಯೇ ಮಾಡಿಸಿಕೊಂಡರು. ತಮ್ಮ ಪತ್ನಿ, ಮಕ್ಕಳನ್ನು ಏಕೆ ಈ ‘ಸೇವೆ’ಯಿಂದ ವಂಚಿತಗೊಳಿಸಬೇಕೆಂದು ಅವರಿಗೂ ಕರುಣಿಸಿದರು. ತಮಗೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆ ನೆರವು ಅಗತ್ಯವಾಗಿದೆಯೆಂದು ಅನಿಸಿದಾಗಲೆಲ್ಲ ಡಾ. ಶರ್ಮ ವಿದೇಶಯಾತ್ರೆ ಹಮ್ಮಿಕೊಳ್ಳುತ್ತಿದ್ದರು. ಸೊಸೆಯ ಹಲ್ಲುನೋವಿಗೂ ಅವರು ವಿದೇಶ ಪ್ರವಾಸ ಸಂದರ್ಭದಲ್ಲಿ ವೈದ್ಯರನ್ನು ಕಂಡಿದ್ದುಂಟು.

ರಾಷ್ಟ್ರಪತಿಗಳ ವಿದೇಶಯಾತ್ರೆ ಅಂದ್ರೆ ಹೀಗೇ ಇರುತ್ತದೆಯೆಂಬ ಮಬ್ಬು ಭಾವನೆ ನಮ್ಮೆಲ್ಲರಿಗೂ ಇತ್ತು. ಆದರೆ ಯಾವಾಗ ವಿಮಾನ ಏರಿದ ಬಳಿಕ ತಮ್ಮ ಹದಿನಾಲ್ಕು ದಿನಗಳ ಕೈಫಿಯತ್ತನ್ನು ಡಾ.ಕಲಾಂ ವಿವರಿಸಿದರೋ, ಇದು ಹಿಂದಿನ ರಾಷ್ಟ್ರಪತಿಗಳ ಯಾತ್ರೆಯಂತಲ್ಲವೆಂಬುದು ಮನವರಿಕೆಯಾಗಿ ಹೋಯಿತು. ಮನಸ್ಸು ಮಾಡಿದ್ದರೆ, ಬ್ರಹ್ಮಚಾರಿ ಡಾ.ಕಲಾಂ ಕೂಡ ತಮ್ಮ ಸಹೋದರ, ಹಿರಿಯ ಸಹೋದರ, ಅವರ ಹೆಂಡತಿ, ಮಕ್ಕಳು, ತಾಯಿಯ ತಮ್ಮ ಮುಂತಾದವರನ್ನು ಕರೆತಂದಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಅವಿವಾಹಿತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ವಿದೇಶ ಪ್ರವಾಸ ಹೊರಟಾಗ ತಮ್ಮ ಸಾಕು ಮಗಳು, ಅಳಿಯ, ಅವರ ಮಗಳು, ಅಳಿಯನ ಸ್ನೇಹಿತರೆಂದು 10-12ಮಂದಿಯನ್ನು ಕರೆದುಕೊಂಡು ಹೋಗಿದ್ದುಂಟು. ಆದರೆ ಡಾ. ಕಲಾಂ ಯಾರನ್ನೂ ಕರೆಯಲಿಲ್ಲ. ತಮ್ಮ ಅತಿಥಿಗಳೆಂದು ಮೂವರನ್ನು ಕರೆದಿದ್ದರು. ಅವರೆಲ್ಲರೂ ವಿಜ್ಞಾನಿಗಳಾಗಿದ್ದರು. ಅಷ್ಟೇ ಅಲ್ಲ ಆ ಮೂವರೂ ಅಧಿಕೃತ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಡಾ. ಕಲಾಂ ಈ ಮೂವರ ಸಲಹೆಗಳನ್ನು ಕಾಲಕಾಲಕ್ಕೆ ಪಡೆಯುತ್ತಿದ್ದರು. ಕೆಲಸಕ್ಕೆ ಬಾರದವರೆಂಬ ಒಬ್ಬನೇ ಒಬ್ಬನೂ ಇರಲಿಲ್ಲ. ಹಿಂದಿನ ರಾಷ್ಟ್ರಪತಿಗಳು ವಿದೇಶ ಪ್ರವಾಸದಲ್ಲಿ ದಿನಕ್ಕೆ ಅಬ್ಬಬ್ಬಾ ಅಂದರೆ ಎರಡು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರೆ, ಡಾ.ಕಲಾಂ ಹತ್ತಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು. ದಿನದಲ್ಲಿ ಮಲಗುತ್ತಿದ್ದುದು ಕೇವಲ 3ಗಂಟೆ!

ತಮ್ಮೊಂದಿಗೆ ಆಗಮಿಸಿದ ಪ್ರತಿಯಾಬ್ಬರನ್ನೂ ಒಂದಿಲ್ಲೊಂದು ಕೆಲಸಕ್ಕೆ ಹಚ್ಚಿದ ರಾಷ್ಟ್ರಪತಿಗಳು ಪ್ರತಿದಿನ ತಮ್ಮ ಸಿಬ್ಬಂದಿ ಮೂಲಕ ವರದಿ ತರಿಸಿಕೊಳ್ಳುತ್ತಿದ್ದರು. ತಮ್ಮೊಂದಿಗಿದ್ದ ಕೇಂದ್ರ ಸಚಿವ ಜಗದೀಶ್‌ ಟೈಟ್ಲರ್‌, ಸಂಸದ ಮಿಲಿಂದ್‌ ದೇವೋರಾ ಹಾಗೂ ಎನ್‌.ಪಿ.ದುರ್ಗಾ ಅವರನ್ನು ಕರೆದು,‘ಪ್ರತಿದಿನ ನೀವೇನು ಮಾಡಿದಿರಿ?ಯಾವ ಹೊಸ ಸಂಗತಿಗಳನ್ನು ಕಲಿತಿರಿ? ನಿಮ್ಮ ಉಪಸ್ಥಿತಿ ಎಷ್ಟು ಪ್ರಯೋಜನಕಾರಿ?ಪ್ರವಾಸ ಯಶಸ್ಸಿಗೆ ನಿಮ್ಮ ಸಲಹೆಯೇನು?’ಎಂಬ ಬಗ್ಗೆ ಬರೆದುಕೊಡುವಂತೆ ಸೂಚಿಸಿದ್ದು ವಿಶೇಷವಾಗಿತ್ತು. ಡಾ. ಕಲಾಂ ಈ ಸಂಪ್ರದಾಯವನ್ನು ಪತ್ರಕರ್ತರಿಗೂ ವಿಸ್ತರಿಸಬೇಕೆಂದಿದ್ದರು. ಆದರೆ ತಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿರುವುದನ್ನು ಗಮನಿಸಿ ಈ‘ಪರೀಕ್ಷೆ’ಗೆ ಪತ್ರಕರ್ತರನ್ನು ಒಡ್ಡಲಿಲ್ಲ. ಆದರೆ ರಾಷ್ಟ್ರಪತಿಗಳ ಖಾಸಗಿವರ್ಗ‘ಪ್ರಾಯಶಃ ಡಾ.ಕಲಾಂ ನಿಮಗೂ ಈ ಪರೀಕ್ಷೆ ನೀಡಬಹುದು’ಎಂದು ಪಿಸುಗುಟ್ಟಿತ್ತು. ಇದರಿಂದ ಪ್ರೇರಿತರಾದ ಪತ್ರಕರ್ತರೊಬ್ಬರು ಕೇಳಿಯೇಬಿಟ್ಟರು -ನಾವು ವರದಿ ಬರೆದು ಕೊಡಬೇಕಾ? ಅದಕ್ಕೆ ಡಾ.ಕಲಾಂ ಹೇಳಿದರು- ‘ಅದರಿಂದ ನನಗೆ ಪ್ರಯೋಜನವಾಗುತ್ತದೆಂದು ನಿಮಗೆ ಅನಿಸಿದರೆ ದಯವಿಟ್ಟು ಬರೆದುಕೊಡಿ’.

ರಾಷ್ಟ್ರಪತಿಗಳಿಗೆ ಎಷ್ಟು ಪ್ರಯೋಜನವಾಗುವುದೋ ಗೊತ್ತಿಲ್ಲ. ನಾನು ನನ್ನ ಅನಿಸಿಕೆಗಳನ್ನು ಡಾ.ಕಲಾಂ ಅವರಿಗೆ ಕಳಿಸಿದ್ದೇನೆ. ಅದನ್ನು ಪತ್ರಿಕೆಯ ಓದುಗರ ಮುಂದಿಡುವುದು ನನ್ನ ಕರ್ತವ್ಯವೆಂದು ಭಾವಿಸಿದ್ದರಿಂದ ರಾಷ್ಟ್ರಪತಿಗಳಿಗೆ ಕಳಿಸಿದ ವರದಿಯ ಮುಖ್ಯಾಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ.

ಸನ್ಮಾನ್ಯ ಆತ್ಮೀಯ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರಿಗೆ, ವಂದನೆಗಳು.

ಹದಿನಾಲ್ಕು ದಿನಗಳ ರಷ್ಯಾ, ಸ್ವಿಜರ್‌ಲ್ಯಾಂಡ್‌, ಐಸ್‌ಲ್ಯಾಂಡ್‌ ಹಾಗೂ ಯುಕ್ರೇನ್‌ ಪ್ರವಾಸದ ಅಧಿಕೃತ ನಿಯೋಗದಲ್ಲಿ ಮಾಧ್ಯಮದ ವತಿಯಿಂದ ವಿಜಯ ಕರ್ನಾಟಕವನ್ನು ಸೇರಿಸಿ ಆ ಮೂಲಕ ಅದರ ಪ್ರತಿನಿಧಿಯಾಗಿ ನನಗೆ ಭಾಗವಹಿಸಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆಗಳು. ನಿಮ್ಮೊಂದಿಗೆ ಕಳೆದ 14 ದಿನಗಳು ಅವಿಸ್ಮರಣೀಯ. ನಿಮ್ಮ ಬಗ್ಗೆ ಸಾಕಷ್ಟು ತಿಳಿದಿದ್ದ, ಓದಿದ್ದ ನನಗೆ ನಿಮ್ಮನ್ನು ತೀರಾ ಹತ್ತಿರದಿಂದ ನೋಡಲು, ನಿಮ್ಮನ್ನು ಸ್ವಲ್ಪ ಅರಿಯಲು ಸಹಾಯಕವಾಯಿತು. ಇಡೀ ಪ್ರವಾಸದುದ್ದಕ್ಕೂ ನೀವು ನಡೆದುಕೊಂಡ ರೀತಿ ಅನನ್ಯ. ನೀವು ಪ್ರವಾಸ ಮಾಡಿದ ದೇಶಗಳಿಗೆ ಹೋಲಿಸಿದರೆ ಅಸಂಖ್ಯ ಸಮಸ್ಯೆಗಳಿಂದ ಭಾರತ ಬಳಲುತ್ತಿದ್ದರೂ, ನಮ್ಮ ದೇಶದ ಉತ್ತಮ ಸಂಗತಿಗಳನ್ನು ಎತ್ತಿ ತೋರಿಸಿ ಅವರಲ್ಲಿ ಭಾರತದ ಬಗ್ಗೆ ಒಳ್ಳೆಯ ಭಾವನೆ ಮೂಡುವಂತೆ ಮಾಡಿದ್ದು ನಿಮ್ಮ ಬಹುದೊಡ್ಡ ಸಾಧನೆಯೆಂದು ಅನಿಸುತ್ತದೆ.

ಭಾರತದ ನಾಯಕರು ವಿದೇಶ ಪ್ರವಾಸ ಅಪೇಕ್ಷಿಸಿ ಪತ್ರ ಬರೆದಾಗ ಅಲ್ಲಿನ ನಾಯಕರು ತಕ್ಷಣ ಉತ್ತರಿಸುತ್ತಿರಲಿಲ್ಲ. ಕಾರಣ ಭಾರತದ ನಾಯಕರು ಭಿಕ್ಷಾಪಾತ್ರೆ ಹಿಡಿದೇ ಬರುತ್ತಾರೆಂಬ ಅಭಿಪ್ರಾಯ ವಿದೇಶಿ ನಾಯಕರಲ್ಲಿ ನೆಲೆಸಿದೆ. ಆದರೆ ನೀವು ಭೇಟಿ ನೀಡಿದ ಎಲ್ಲ ದೇಶಗಳ ನಾಯಕರಿಗೆ ಭಾರತ ಕೂಡ ಬಂಡವಾಳ ಹೂಡುವ ದೇಶವೆಂದು ಸಾಬೀತುಪಡಿಸಿದ್ದು ನಿಮ್ಮ ಪ್ರವಾಸದ ಯಶಸ್ಸು. ರಷ್ಯಾ ಅಧ್ಯಕ್ಷ ಪುಟಿನ್‌ ಅವರ ಮುಂದೆ ಮಾಸ್ಕೋದಲ್ಲಿ ನಾವು ಐಟಿ ಪಾರ್ಕ್‌ ಸ್ಥಾಪಿಸುತ್ತೇವೆ ಎಂದು ಹೇಳಿದ್ದು ಇದಕ್ಕೊಂದು ನಿದರ್ಶನ. ಅಂತರಾಷ್ಟ್ರೀಯ ಸ್ತರದಲ್ಲಿ ಇದು ಭಾರತದ ವರ್ಚಸ್ಸು ವೃದ್ಧಿಗೆ ಸಹಾಯಕ. ಇನ್ನಾದರೂ ಅವರು ನಮ್ಮ ಬಗ್ಗೆ ಬೇರೆ ರೀತಿಯಲ್ಲಿ ಯೋಚಿಸಬಹುದು.

ಭೇಟಿ ನೀಡಿದ ಎಲ್ಲ ದೇಶಗಳ ವಿಜ್ಞಾನಿಗಳೊಂದಿಗೆ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗೆ, ವಿಷಯ ಪರಿಣತರೊಂದಿಗೆ, ಸಂಸದರೊಂದಿಗೆ ನೀವು ನಡೆಸಿದ ಸಂವಾದ ಮನೋಜ್ಞವಾಗಿತ್ತು. ಅನಿವಾಸಿ ಭಾರತೀಯರಿಗೆ ಔತಣಕೂಟ ಏರ್ಪಡಿಸಿ ಅವರ ಮನಸ್ಸಿನಲ್ಲಿ ಭಾರತದ ಬಗ್ಗೆ ಕಾಡುವ ಅನೇಕ ಸಂದೇಹಗಳಿಗೆ ಪರಿಣಾಮಕಾರಿಯಾಗಿ ಉತ್ತರ ನೀಡಿದ್ದು ಶ್ಲಾಘನೀಯ. ಅನಿವಾಸಿ ಭಾರತೀಯ ಉದ್ಯಮಿಗಳನ್ನು ಆಮಂತ್ರಿಸಿ ಭಾರತದಲ್ಲಿ ಬಂಡವಾಳ ಹೂಡಿಕೆ ಹಾಗೂ ವ್ಯವಹಾರ ಮೈತ್ರಿ ಬಗ್ಗೆ ಅವರೊಂದಿಗೆ ಹಲವು ಅವಕಾಶ, ಸಾಧ್ಯತೆಗಳನ್ನು ತೆರೆದಿಟ್ಟಿದ್ದು ನೀವು ಮಾಡಿಕೊಂಡ ಹೋಮ್‌ವರ್ಕ್‌ಗೆ ನಿದರ್ಶನ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ನೀಡಬೇಕೆಂಬ ಭಾರತದ ವಾದವನ್ನು ಸಮರ್ಥವಾಗಿ ಮಂಡಿಸಿದ್ದು ಸಹ ಸಣ್ಣ ಕೆಲಸವೇನಲ್ಲ. ಐಟಿ, ಬಿಟಿ, ನ್ಯಾನೋ ಟೆಕ್ನಾಲಜಿ, ಉಪಗ್ರಹ ವಿಜ್ಞಾನದ ಬಗ್ಗೆ ನಾವೂ ಸಾಕಷ್ಟು ಕೇಳಿದ್ದೆವು. ಆದರೆ ಒಬ್ಬ ಮೇಷ್ಟ್ರು ಹಾಗೆ ನೀವು ವಿವರಿಸಿದ ರೀತಿಯಿಂದ ಈ ವಿಷಯವನ್ನು ನಾವಂತೂ ಮರೆಯಲಾರೆವು. ಈ ಸಂಗತಿಗಳ ಬಗ್ಗೆ ತಾವು ಈಗ ಒಂದು ಗಂಟೆ ಉಪನ್ಯಾಸ ಮಾಡುವಷ್ಟು ಪಳಗಿದ್ದೇವೆ.

ಊರುಗಳನ್ನು ನೋಡಲು, ಶಾಪಿಂಗ್‌ ಮಾಡಲು ಸಹ ಬಿಡದೇ ಇಡೀ ದಿನದ ನಿಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಾವು ಸುಸ್ತುಹೊಡೆದು ಹೋದೆವು. ಆದರೆ ನಿಮ್ಮ ಲವಲವಿಕೆ, ಚೇತನ, ಹುರುಪು ಕಂಡು ಪುನಃ ನಿಮ್ಮ ಜತೆ ಹೆಜ್ಜೆ ಹಾಕುತ್ತಿದ್ದೆವು. ಮರುದಿನ ಬೆಳಗ್ಗೆ ಏಳಕ್ಕೆ ಪುನಃ ನಿಮ್ಮೊಂದಿಗೆ ‘ಓಡಲು’ನಾವು ಸಿದ್ಧರಾಗಿ ನಿಲ್ಲಬೇಕಲ್ಲ ಎಂದು ಅಂದುಕೊಳ್ಳುತ್ತಿರುವಾಗಲೇ, 75ವರ್ಷ ವಯಸ್ಸಿನ ರಾಷ್ಟ್ರಪತಿಗಳೇ ಠಾಕುಠೀಕಾಗಿ ನಿಂತು ಅಂದಿನ ಕಾರ್ಯಕ್ರಮಗಳಿಗೆ ಹೊರಟು ನಿಲ್ಲುವಾಗ ನಮ್ಮದೇನು ಮಹಾ ಎಂದು ಅಂದುಕೊಂಡು ಬೆಳಗ್ಗೆ ಐದಕ್ಕೇ ನಾವೂ ಸಹ ಹಾಸಿಗೆ ಬಿಟ್ಟು ಮೇಲೆದ್ದಿರುತ್ತಿದ್ದೆವು.

ಇವೆಲ್ಲ ಸರಿ, ಆದರೆ ನೀವು ಹೋಗಿ ಹೋಗಿ ನಿಮ್ಮ ಜತೆ ಯಾಕೆ ಆ ಜಗದೀಶ್‌ ಟೈಟ್ಲರ್‌ ಎಂಬ ಮುಶಂಡಿ ಮಂತ್ರಿಯನ್ನು ಕಟ್ಟಿಕೊಂಡು ಬಂದಿರಿ? ಅಂಟಾರ್ಟಿಕಾ ವಿಜ್ಞಾನಿಗಳು ತಮ್ಮ ಸಾಹಸಗಾಥೆಯನ್ನು ವಿವರಿಸುತ್ತಿದ್ದರೆ ಎಂಥವನೂ ರೋಮಾಂಚಿತನಾಗುತ್ತಾನೆ. ನೀವಂತೂ ಮೈಯೆಲ್ಲ ಕಣ್ಣಾಗಿ ಕೇಳುತ್ತಿದ್ದಿರಿ. ನಿಮ್ಮ ಬಾಜೂ ಕುಳಿತ ಈ ಮಂತ್ರಿಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ. ಅಲ್ಲಿನ ವಿಜ್ಞಾನಿಗಳು ಈ ದೃಶ್ಯ ಕಂಡು ಆ ಚಳಿಯಲ್ಲೂ ಬೆವತಿರಬೇಕು! ಏನಿಲ್ಲವೆಂದರೂ 14ದಿನಗಳ ಕಾಲ ನೀವು ನೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದಿರಿ. ಈ ಮಂತ್ರಿ ತನಗೆ ಬಾಯಿಯಿದೆ ಹಾಗೂ ಅದರಿಂದ ಮಾತನ್ನೂ ಆಡಬಹುದು ಎಂಬ ಸಾಮಾನ್ಯ ಸಂಗತಿಯನ್ನೂ ಮರೆತು ಕುಳಿತಿದ್ದರು. ನಿದ್ದೆ ಮಾಡಲಿಲ್ಲ ಎಂಬುದನ್ನು ಬಿಟ್ಟರೆ ರಾಜ್ಯಸಭಾ ಸದಸ್ಯೆ ಎನ್‌.ಪಿ. ದುರ್ಗಾ ಎಂಬ ಹೆಣ್ಣುಮಗಳು ನಿಮ್ಮ ಜತೆ ಬರಲು ಹೇಗೆ ಅವಕಾಶ ಗಿಟ್ಟಿಸಿದಳೋ? ಪತ್ರಕರ್ತರ ಬಾಯಿಚಪಲಕ್ಕೆ ಇಂಥವರೂ ಇಲ್ಲದಿದ್ದರೆ ಪ್ರವಾಸ ಬೋರಾದೀತೆಂದು ನೀವು ಭಾವಿಸಿದ್ದರೆ ನೋ ಕಾಮೆಂಟ್ಸ್‌. ಅಂತೂ ಇಡೀ ಪ್ರವಾಸ ನನ್ನಲ್ಲಿ ಸದಾ ಹಸುರಾಗಿರುತ್ತದೆ. ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶಗಳಲ್ಲೂ ‘ಕಾಮನ್‌ ಮ್ಯಾನ್ಸ್‌ ಪ್ರಸಿಡೆಂಟ್‌ ಎಂದು ಬಿಂಬಿಸಿಕೊಳ್ಳಲು ನೀವು ಯಶಸ್ವಿಯಾದಿರಿ. ಹಾಗೇ ಭಾರತವನ್ನು ಅನ್‌ಕಾಮನ್‌(ಅಸಹಜ)ಹಾಗೂ ಅನ್‌ಪ್ರಸಿಡೆಂಟೆಡ್‌ (ಅಭೂತ ಪೂರ್ವ)ಎಂದು ಬಿಂಬಿಸಲು ಸಹ.

ಹ್ಯಾಟ್ಸಾಫ್‌!

ಇತಿ ನಿಮ್ಮವ

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more