• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂದು ಚುನಾವಣೆಗೆ ನಿಂತಿದ್ದರೆ ಅಟಲ್‌, ಬರಲಿಲ್ಲ ಜವಾಹರಲಾಲ್‌ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಇತ್ತೀಚೆಗೆ ಪತ್ರಿಕೆಯಲ್ಲಿ ಸುದ್ದಿಯಾಂದು ಪ್ರಕಟವಾಗಿತ್ತು. ಮಹಾರಾಷ್ಟ್ರ ರಾಜ್ಯಪಾಲ ಎಸ್‌. ಎಂ.ಕೃಷ್ಣ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದುಪಡಿಸಿದರು. ಕಾರಣ ಸಂಘಟಕರು ಕೃಷ್ಣ ಅವರನ್ನು ಕೇಳದೇ ಮುಖ್ಯ ಅತಿಥಿಯಾಗಿ ಜಾರ್ಜ್‌ಫರ್ನಾಂಡಿಸ್‌ರನ್ನು ಆಮಂತ್ರಿಸಿದ್ದರು. ಪ್ರತಿನಿತ್ಯ ಸೋನಿಯಾ ಗಾಂಧಿಯವರನ್ನು ಹಿಗ್ಗಾಮುಗ್ಗಾ ನಿಂದಿಸುವ ಜಾರ್ಜ್‌ ಜತೆ ವೇದಿಕೆ ಹಂಚಿಕೊಂಡರೆ ಎಲ್ಲಿ ಮೇಡಮ್‌ಗೆ ಗೊತ್ತಾಗಿ ತಪ್ಪು ತಿಳಿದುಕೊಂಡು ತಮ್ಮ ಅಧಿಕಾರಕ್ಕೆ ಸಂಚಕಾರ ಬಂದು ಬಿಡುವುದೋ ಎಂದು ಒಳಗೊಳಗೇ ಅಳುಕಿದ ಕೃಷ್ಣ ಈ ಉಸಾಬರಿಯೇ ಬೇಡವೆಂದು ಬೆಂಗಳೂರಿನಲ್ಲಿದ್ದರೂ ಮೈಸೂರಿನತ್ತ ಮುಖ ಹಾಕಲೇ ಇಲ್ಲ.

ನಾನು ರಾಜಕೀಯ ಅಸ್ಪೃಶ್ಯತೆ(Political untouchability) ಬಗ್ಗೆ ಮಾತನಾಡುತ್ತಿದ್ದೇನೆ. ನಮಗೆ ಜಾತಿ, ಅಸ್ಪೃಶ್ಯತೆ ಬಗ್ಗೆ ಗೊತ್ತು. ಅದಕ್ಕಿಂತ ಹೀನ ಹಾಗೂ ಅಸಹ್ಯ ಹುಟ್ಟಿಸುವುದು ರಾಜಕೀಯ ಅಸ್ಪೃಶ್ಯತೆ. ಜಾತಿ ಅಸ್ಪೃಶ್ಯತೆಗೆ ಮೂಢನಂಬಿಕೆ, ಅಜ್ಞಾನ , ಅನರಕ್ಷತೆ ಕಾರಣವಾದರೆ ರಾಜಕೀಯ ಅಸ್ಪೃಶ್ಯತೆಗೆ ಶಿಕ್ಷಣ, ಜ್ಞಾನ ಕಾರಣ. ಒಂದು ರೀತಿಯಲ್ಲಿ ಮೊದಲಿನದಕ್ಕಿಂತ ಎರಡನೆಯದು ಹೆಚ್ಚು ಅಪಾಯಕಾರಿ. ಈ ರಾಜಕೀಯ ಅಸ್ಪೃಶ್ಯತೆ ಇತ್ತೀಚಿನ ದಿನಗಳಲ್ಲಿ ಯಾವ ಪರಿ ವ್ಯಾಪಿಸುತ್ತಿದೆಯೆಂದರೆ ಒಬ್ಬ ರಾಜಕೀಯ ಪಕ್ಷದವರನ್ನು ಮತ್ತೊಬ್ಬರು ವೈರಿಗಳಂತೆ, ದ್ವೇಷ ಸಾಧನೆಯನ್ನೇ ಶತಪಥಗೈದವರಂತೆ, ಬದ್ಧಶತುೃಗಳಂತೆ ಕಾಣುತ್ತಿದ್ದಾರೆ. ಬಿಹಾರದಲ್ಲಾಗುತ್ತಿರುವ ರಾಜಕೀಯ ಕೊಲೆಗಳಿಗೆ, ಅಪಹರಣಗಳಿಗೆ ಈ ರಾಜಕೀಯ ಅಸ್ಪೃಶ್ಯತೆಯೇ ಕಾರಣ.

Atal Behari Vajpayeeಹಾಗಾದರೆ ಈ ರಾಜಕೀಯ ಅಸ್ಪೃಶ್ಯತೆ ಮೊದಲು ಇರಲಿಲ್ಲವಾ? ಇದೇನು ಇತ್ತೀಚಿನ ವರ್ಷಗಳಲ್ಲಿ ಹುಟ್ಟಿದ್ದಾ? ಹಾಗೇನಿಲ್ಲ. ರಾಜಕೀಯ ಅಸ್ಪೃಶ್ಯತೆ ಮೊದಲೂ ಇತ್ತು. ಆದರೆ ಅದು ಸಿದ್ಧಾಂತಕ್ಕೆ ಸೀಮಿತವಾಗಿತ್ತು. ಸಿದ್ಧಾಂತ ಭೇದವಿದ್ದರೂ ಎರಡೂ ರಾಜಕೀಯ ಪಕ್ಷಗಳ ನಾಯಕರ ಭೇಟಿಗೆ, ಕುಶಲೋಪರಿಗೆ ಭಂಗವಾಗುತ್ತಿರಲಿಲ್ಲ. ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಮುಖಾಮುಖಿಯಾದಾಗ ಒಂದಷ್ಟು ಮುಗುಳ್ನಗು, ಬೆಚ್ಚಗಿನ ಹಸ್ತಲಾಘವ, ಅಕ್ಕರೆಯ ವಿನಿಮಯಕ್ಕೆ ಕೊರತೆಯಾಗುತ್ತಿರಲಿಲ್ಲ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ಪಟ್ಟಾಂಗ ಹೊಡೆಯುವಂಥ ಹೃದಯ ವೈಶಾಲ್ಯವಿತ್ತು. ಪಕ್ಷ, ನೀತಿ, ನಿಲುವು ಮೀರಿ ಮಾನವೀಯ ಸಂಬಂಧವನ್ನು ಮೆರೆಯುವ ಭಾವನಾ ಶ್ರೀಮಂತಿಕೆಯಿತ್ತು. ಈಗ ಅವೆಲ್ಲ ಕರಗಿ ಹೋಗುತ್ತಿವೆ.

ಅಟಲ್‌ ಬಿಹಾರಿ ವಾಜಪೇಯಿ ಬಲರಾಮಪುರದಿಂದ ಲೋಕಸಭೆಗೆ ಸ್ಪರ್ಧಿಸಿದಾಗ ಅಂದಿನ ಪ್ರಧಾನಿ ಜವಾಹರಲ್‌ಲಾಲ್‌ ನೆಹರು ಎಲ್ಲೆಡೆ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಬಲರಾಮಪುರ ಸೇರಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್‌ ಅಭ್ಯರ್ಥಿ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಭಾಷಣ ಮಾಡಲೇಬೇಕೆಂದು ಹೇಳಿದಾಗ ನೆಹರು ಹೇಳಿದರು- ‘ ಬುದ್ಧ್ಯಾಪೂರ್ವಕವಾಗಿ ನಾನು ಬಲರಾಮಪುರಕ್ಕೆ ಬರುವುದಿಲ್ಲ. ನೀವೆಷ್ಟೇ ಒತ್ತಾಯಿಸಿದರೂ ಪ್ರಯೋಜನವಿಲ್ಲ. ನಿಮ್ಮ ವಿರುದ್ಧ ಸ್ಪರ್ಧಿಸಿರುವ ಜನಸಂಘ ಅಭ್ಯರ್ಥಿ ವಾಜಪೇಯಿ ಇದ್ದಾರಲ್ಲ ಅವರು ಉತ್ತಮ ವಾಗ್ಮಿ. ಅದರಲ್ಲೂ ವಿದೇಶಾಂಗ ವ್ಯವಹಾರಗಳ ಬಗ್ಗೆ ಅವರಿಗೆ ತೀವ್ರ ಆಸಕ್ತಿಯಿದೆ. ಲೋಕಸಭೆ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅಂಥವರು ಸದನದಲ್ಲಿ ಇದ್ದರೆ ಭೂಷಣ. ಅವರು ಆರಿಸಿ ಬರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದು. ಹೀಗಾಗಿ ನಾನು ಅವರ ವಿರುದ್ಧ ಪ್ರಚಾರ ಮಾಡುವುದಿಲ್ಲ’. ನೆಹರು ಕೊನೆಗೂ ವಾಜಪೇಯಿ ವಿರುದ್ಧ ಪ್ರಚಾರಕ್ಕೆ ಹೋಗಲಿಲ್ಲ !

ಇನ್ನೊಂದು ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರೆಲ್ಲ ಪ್ರಧಾನಿ ನೆಹರು ಅವರ ಚೀನಾ ನೀತಿಯನ್ನು ಖಂಡಿಸಿ ಲೋಕಸಭೆಯಲ್ಲಿ ಮಾತನಾಡಿದಾಗ, ವಾಜಪೇಯಿ ಎದ್ದು ನಿಂತು,‘ ಪ್ರತಿಪಕ್ಷದ ಸದಸ್ಯರೆಂದರೆ ಸರಕಾರವನ್ನು ಯಾವತ್ತೂ ಟೀಕಿಸಲೇಬೇಕೆಂಬ ನಿಯಮವಿದೆಯಾ? ದೇಶದ ಭದ್ರತೆ, ಗಡಿ ವಿಷಯದಲ್ಲಿ ಸರಕಾರವನ್ನು ಬೆಂಬಲಿಸಲೇಬೇಕು. ಸರಕಾರವನ್ನು ಟೀಕಿಸಲು ಬೇರೆ ವಿಷಯಗಳಿವೆ. ಆದರೆ ಚೀನಾ ವಿಷಯದಲ್ಲಿ ನೆಹರು ಬೆಂಬಲಕ್ಕೆ ನಿಲ್ಲುವುದು ಆದ್ಯ ಕರ್ತವ್ಯ’ ಎಂದು ಹೇಳಿದಾಗ ಇಡೀ ಸದನ ನಿಬ್ಬೆರಗು. ಸ್ವತಃ ಕಾಂಗ್ರೆಸ್‌ ಸದಸ್ಯರು ಹಿಂದಿನ ಸಾಲಿನಲ್ಲಿ ಕುಳಿತಿದ್ದ ವಾಜಪೇಯಿ ಬಳಿ ಬಂದು ಅಭಿನಂದನೆ ಸೂಚಿಸಿದ್ದರು ! ಇಂದಿನ ರಾಜಕೀಯ ಸನ್ನಿವೇಶದ ಹಿನ್ನಲೆಯಲ್ಲಿ ಈ ಎರಡು ಪ್ರಸಂಗಗಳನ್ನು ಕಲ್ಪಿಸಿಕೊಳ್ಳಿ. ಇದೊಂದು ಸುಂದರ, ಆದರ್ಶ ಅವಾಸ್ತವ ಎಂದು ಅನಿಸಬಹುದು ಅಷ್ಟೆ. ಈಗ ಇವುಗಳನ್ನು ಕೇಳಲು ಮಾತ್ರ ಚೆನ್ನಾಗಿರುತ್ತವೆ ಹೊರತು ಆಚರಣೆಯಲ್ಲಿ ಅಲ್ಲ.

ಇತ್ತೀಚೆಗೆ ಬಿಹಾರದ ಮಾಜಿ ರಾಜ್ಯಪಾಲ ಹಾಗೂ ಶ್ರೇಷ್ಠ ನ್ಯಾಯವಾದಿ ರಾಮಾಜೋಯಿಸ್‌ ಎರಡು ಪ್ರಸಂಗಗಳನ್ನು ಪ್ರಸ್ತಾಪಿಸಿದರು. ಜನಸಂಘ ಧುರೀಣ ಡಾ.ಶ್ಯಾಮ ಪ್ರಸಾದ ಮುಖರ್ಜಿ ನಿಧನರಾದಾಗ ಶಿವಮೊಗ್ಗದ ಜನಸಂಘ ಧುರೀಣರೆಲ್ಲ ಸಭೆ ಸೇರಿ ಪ್ರಮುಖ ರಸ್ತೆಯಾಂದಕ್ಕೆ ಅಗಲಿದ ನಾಯಕನ ಹೆಸರಿಡಬೇಕೆಂದು ನಿರ್ಧರಿಸಿದರು. ಅದಕ್ಕೆ ನಗರಸಭೆ ಅನುಮತಿ ನೀಡಬೇಕು. ಜನಸಂಘ ನಾಯಕರು ಅಂದಿನ ನಗರಸಭೆ ಅಧ್ಯಕ್ಷ, ಕಾಂಗ್ರೆಸ್‌ಧುರೀಣ ಸಿ. ರಾಮಸ್ವಾಮಿ ಶೆಟ್ಟಿಯವರ ಮುಂದೆ ಈ ಕುರಿತು ಮನವಿ ಸಲ್ಲಿಸಿದರು. ಅಂದಿನ ನಗರಸಭೆಯಲ್ಲಿ ಇದ್ದವರೆಲ್ಲ ಕಾಂಗ್ರೆಸ್‌ ಸದಸ್ಯರೇ.‘ ಡಾ. ಶ್ಯಾಮ ಪ್ರಸಾದ ಮುಖರ್ಜಿ ಬಹಳ ದೊಡ್ಡ ನಾಯಕರು. ಅವರು ನಮ್ಮ ಪಕ್ಷದವರಲ್ಲದಿದ್ದರೆ ಏನಂತೆ? ಅಂಥ ಮಹಾಮುತ್ಸದ್ಧಿಯ ಹೆಸರನ್ನು ನಮ್ಮೂರಿನ ರಸ್ತೆ ಗಿಡುವುದು ನಮ್ಮನ್ನೇ ಗೌರವಿಸಿಕೊಂಡಂತೆ. ಖಂಡಿತವಾಗಿಯೂ ಇಡೋಣ’ ಎಂದರು. ಇಂದಿಗೂ ಶಿವಮೊಗ್ಗದಲ್ಲಿ ಡಾ. ಮುಖರ್ಜಿ ಹೆಸರಿಗೊಂದು ರಸ್ತೆಯಿದೆ. ಶಿವಮೊಗ್ಗಕ್ಕೆ ಯಾವುದೇ ರಾಜಕೀಯ ನಾಯಕರು ಬಂದರೂ ‘ನಾಗರಿಕ ಸನ್ಮಾನ’ ಮಾಡುವ ಸಂಪ್ರದಾಯವಿತ್ತು. ಜಯ ಪ್ರಕಾಶ್‌ ನಾರಾಯಣ, ಡಾ. ರಾಂ ಮನೋಹರ ಲೋಹಿಯಾ ಮುಂತಾದವರು ಬಂದಾಗ ಎಲ್ಲ ಪಕ್ಷಗಳ ನಾಯಕರು, ಕಾರ್ಯಕರ್ತರೆಲ್ಲ ಸೇರಿ ಸಮಸ್ತ ನಾಗರಿಕರ ಪರವಾಗಿ ಸನ್ಮಾನ ಇಟ್ಟುಕೊಳ್ಳುತ್ತಿದ್ದರು. ಆದರೆ ಶಿವಮೊಗ್ಗದ ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಈ ಎರಡು ಘಟನೆಗಳನ್ನು ಕಲ್ಪಿಸಿಕೊಳ್ಳಲು ಆಗದಂಥ ಸ್ಥಿತಿ ನೆಲೆಸಿದೆ.

ಜನಸಂಘದ ನಾಯಕ ಡಾ. ದೀನದಯಾಳ ಉಪಾಧ್ಯಾಯ ತಾವು ಬರೆದ ‘ರಾಜಕೀಯ ದಿನಚರಿ’ಪುಸ್ತಕಕ್ಕೆ ಮುನ್ನುಡಿ ಬರೆಯುವಂತೆ ಕಾಶಿ ವಿದ್ಯಾಪೀಠದ ಕುಲಪತಿ ಹಾಗೂ ಕಾಂಗ್ರೆಸ್‌ ಧುರೀಣ ಡಾ. ಸಂಪೂರ್ಣಾನಂದರನ್ನು ನಾನಾಜಿ ದೇಶಮುಖ್‌ ವಿನಂತಿಸಿಕೊಂಡರು. ಈ ವಿಷಯ ಹೇಗೋ ಕೆಲವು ಕಾಂಗ್ರೆಸ್‌ ನಾಯಕರಿಗೆ ಗೊತ್ತಾಯಿತು. ಎಲ್ಲಾದರೂ ಉಂಟಾ? ಡಾ. ದೀನದಯಾಳ ಉಪಾಧ್ಯಾಯ ಕಾಂಗ್ರೆಸ್‌ ವಿರೋಧಿ. ಸದಾ ನಮ್ಮನ್ನು ಟೀಕಿಸುತ್ತಾರೆ. ಅಂಥವರ ಪುಸ್ತಕಕ್ಕೆ ಮುನ್ನುಡಿ ಬರೆಯುವುದು ಎಷ್ಟು ಸರಿ? ಬರೆಯ ಬೆಡಿ’ ಎಂದು ಡಾ. ಸಂಪೂರ್ಣಾನಂದರನ್ನು ಆಗ್ರಹಿಸಿದರು. ಆದರೆ ಅವರೆಲ್ಲರ ಕೋರಿಕೆ ಧಿಕ್ಕರಿಸಿ ಡಾ. ಸಂಪೂರ್ಣಾನಂದ ಮುನ್ನುಡಿ ಬರೆದರು. ಡಾ. ಉಪಾಧ್ಯಾಯ ಈ ದೇಶ ಕಂಡ ಮಹಾನಾಯಕ ಎಂದು ಬಣ್ಣಿಸಿದರು. ಈ ಸನ್ನಿವೇಶವನ್ನು ಇಂದಿನ ರಾಜಕೀಯ ಸಂದರ್ಭದಲ್ಲಿಟ್ಟು ನೋಡಿ. ಮೊದಲನೆಯದಾಗಿ ಡಾ. ಉಪಾಧ್ಯಾಯ ಮುನ್ನುಡಿ ಬರೆಯುವಂತೆ ಕಾಂಗ್ರೆಸ್‌ ನಾಯಕರನ್ನು ಕೋರುತ್ತಿರಲಿಲ್ಲ. ಒಮ್ಮೆ ಕೋರಿದರೆನ್ನಿ. ಡಾ. ಸಂಪೂರ್ಣಾನಂದರು ಬರೆದು ಕೊಡುತ್ತಿರಲಿಲ್ಲ. ಒಮ್ಮೆ ಬರೆದುಕೊಟ್ಟರೆನ್ನಿ. ಕಾಂಗ್ರೆಸ್‌ ಹೈಕಮಾಂಡ್‌ ಅವರ ವಿರುದ್ಧ ಕ್ರಮ ಜರುಗಿಸದೇ ಇರುತ್ತಿರಲಿಲ್ಲ!

ಇದೆಂಥ ರಾಜಕೀಯ ಅಸ್ಪಶ್ಯತೆ?

ರಾಜ್ಯ ಅಥವಾ ಕೇಂದ್ರ ಬಜೆಟ್‌ ಮಂಡನೆಯಾದಾಗ ಬಜೆಟ್‌ ಎಷ್ಟೇ ಚೆನ್ನಾಗಿರಲಿ ಯಾಕೆ ನಮ್ಮ ಪ್ರತಿಪಕ್ಷದ ನಾಯಕರು ಒಂದು ಒಳ್ಳೆಯ ಮಾತುಗಳನ್ನು ಹೇಳುವುದಿಲ್ಲ ?ವಿರೋಧಿಸಲೇಬೇಕಾದ ಅನಿವಾರ್ಯತೆಯೇನು? ಒಂದು ವೇಳೆ ಒಳ್ಳೆಯ ಮಾತುಗಳನ್ನು ಹೇಳಿದರೆ ಆತ ಯಾವಜ್ಜೀವ ಅಧಿಕಾರದಲ್ಲಿಯೇ ಮುಂದುವರಿಯಬಹುದೆಂಬ ಭಯಾನಾ? ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೋ ವಿಮಾನ ನಿಲ್ದಾಣಕ್ಕೋ, ಸೈಕಲ್‌ ನಿಲ್ದಾಣಕ್ಕೋ ಇಂದಿರಾ ಗಾಂಧಿ, ರಾಜೀವ ಗಾಂಧಿ ಹೆಸರನ್ನು ಇಟ್ಟರೆ ಏನಾಗುತ್ತಿತ್ತು? ಹಾಗೆ ಕಾಂಗ್ರೆಸ್‌ ಕೂಡ ಹೆಡಗೇಗಾರ್‌, ಗೊಳವಲ್ಕರ್‌ ಹೆಸರಿಟ್ಟರೆ ಏನಾಗುತ್ತದೆ? ಈ ವಿರೋಧವಾದರೂ ಏಕೆ? ನ್ಯೂಯಾರ್ಕ್‌ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳು ಭಯೋತ್ಪಾದಕರ ವಿಮಾನ ದಾಳಿಗೆ ಧ್ವಂಸವಾದಾಗ ಅಮೆರಿಕದಲ್ಲೂ ಸರಕಾರದ ಟೀಕಾಕಾರರಿದ್ದರು. ಪ್ರತಿಪಕ್ಷವಿತ್ತು. ಅಧ್ಯಕ್ಷ ಬುಷ್‌ ವಿರೋಧಿಗಳಿದ್ದರು. ಆದರೆ ಒಬ್ಬನೇ ಒಬ್ಬನಾಗಲಿ ಬುಷ್‌ ರಾಜೀನಾಮೆಗೆ ಒತ್ತಾಯಿಸಲಿಲ್ಲ. ಧರಣಿ ಕೂಡಲಿಲ್ಲ. ‘ದೇಶಕ್ಕೆ ದೇಶವೇ ಬುಷ್‌, ನಿಮ್ಮ ಜತೆ ನಾವಿದ್ದೇವೆ’ ಎಂದಿತು. ಪ್ರತಿಪಕ್ಷ ನಾಯಕರು ಬುಷ್‌ ಜತೆಗೇ ನಿಂತರು. ಇಂಥ ಬುದ್ಧಿಗೇಡಿತನ ಎಂಬ ವಿವೇಚನೆ ಅವರಿಗಿತ್ತು. ಭಾರತದಲ್ಲಿ ಹೀಗಾಗಿದ್ದರೆ? ಪ್ರಧಾನಿಗೆ ನೆಮ್ಮದಿಯಿಂದ ಇರಲು ಬಿಡುತ್ತಿದ್ದರಾ ಪ್ರತಿಪಕ್ಷದವರು? ಸರಕಾರ ಅವೆಷ್ಟು ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತಿತ್ತು? ರಾಜಕೀಯ ಪಕ್ಷಗಳು ಅವೆಷ್ಟು ಬೇಳೆ ಬೇಯಿಸಿಕೊಳ್ಳುತ್ತಿದ್ದವು? ಪತ್ರಿಕೆಗಳು ಸುಮ್ಮನೆ ಇರುತ್ತಿದ್ದವಾ? ಸರಕಾರದ ಮಾನ ಹರಾಜು ಹಾಕುತ್ತಿದ್ದವು. ಆದರೆ ಅಮೆರಿಕದಲ್ಲಿ ಅಂಥ ಒಂದೂ ಪ್ರಸಂಗ ಆಗಲಿಲ್ಲ. ಅದೇ ಕಂದಹಾರ್‌ ವಿಮಾನ ಅಪಹರಣವಾದಾಗ ಏನಾಯಿತೆಂಬುದು ಗೊತ್ತೇ ಇದೆ. ಪ್ರತಿಪಕ್ಷವಾಗಲಿ ಅಥವಾ ರಾಜಕೀಯ ನಾಯಕರಾಗಲಿ ಸರಕಾರದ ಬೆಂಬಲಕ್ಕೆ ನಿಲ್ಲಲಿಲ್ಲ. ಬೆಂಬಲ ಸೂಚಿಸುವುದು ಬೇಡ ವಿರೋಧಿಸದಿದ್ದರೂ ಸಾಕಿತ್ತು. ಅದನ್ನೂ ಮಾಡಲಿಲ್ಲ. ಸರಕಾರದ ನಿಲುವೇ ಅಪರಹರಕ್ಕೆ ಕಾರಣವೆಂಬಂತೆ ಪ್ರತಿಪಕ್ಷಗಳು ಬೊಬ್ಬೆ ಹೊಡೆದವು. ಅನಂತರ ಸರಕಾರದ ಮೇಲೆ ಎಂಥ ಒತ್ತಡ ಬಿತ್ತೆಂದರೆ ದೇಶ ವಿರೋಧಿ ಭಯೋತ್ಪಾದಕರನ್ನು ಬಿಡುಗಡೆಗೊಳಿಸದಿದ್ದರೆ ಬಿಕ್ಕಟ್ಟು ಪರಿಹಾರ ಈ ಒತ್ತಡಕ್ಕೆ ಮಣಿಯಿತು. ದೇಶದ್ರೋಹಿಗಳನ್ನು ಬಿಡುಗಡೆ ಮಾಡಿತು. ಇದರಿಂದ ಯಾವ ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ಲಾಭವಾಯಿತೋ ಗೊತ್ತಿಲ್ಲ. ಆದರೆ ದೇಶ ಮಾತ್ರ ಆಗಾಧ ಬೆಲೆ ತೆತ್ತಿತ್ತು. ಅಂತರಾಷ್ಟ್ರೀಯ ಸಮುದಾಯದ ಮುಂದೆ ತಲೆತಗ್ಗಿಸುವಂತಾಯಿತು.

ನೆಲ, ಜಲ, ಗಡಿ, ಭದ್ರತೆ,ಏಕತೆಯಂಥ ಪ್ರಮುಖ ವಿಷಯಗಳು ಎದುರಾದಾಗ ಎಲ್ಲ ರಾಜಕೀಯ ಪಕ್ಷಗಳು ಯೋಚಿಸುವುದೇ ಬೇರೆ. ಯಾವ ನಿಲುವು ತೆಗೆದುಕೊಂಡರೆ ತಮಗೆ ಲಾಭವಾಗುತ್ತದೆಂಬುದನ್ನು ಲೆಕ್ಕ ಹಾಕಿ ಅಡಿಯಿಡುತ್ತವೆಯೇ ಹೊರತು ದೇಶದ ಒಳಿತನ್ನಲ್ಲ. ಇಲ್ಲಿ ರಾಜಕೀಯ ನಾಯಕರ ತೆವಲು, ಅಹಂ, ಕ್ಷಿಪ್ರ ಲಾಭ ಮುಖ್ಯವಾಗುತ್ತವೆಯೇ ಹೊರತು ಸಮಾಜ ಸುಖವಲ್ಲ. ನಮ್ಮ ನಮ್ಮ ವೈರುಧ್ಯ, ಅಭಿಪ್ರಾಯ ಭೇದಗಳನ್ನು ಮೀರಿ ಪರಸ್ಪರರ ವಿಚಾರಗಳನ್ನು ಗೌರವಿಸುವ ಸಹೃದಯತೆ ಬೆಳೆಸಿಕೊಳ್ಳದಿದ್ದರೆ ರಾಜಕೀಯ ಅಸ್ಪೃಶ್ಯತೆಯೇ ನಮಗೆ ತೊಡಕಾಗಬಹುದು. ಇಂದು ಬಿಹಾರದಲ್ಲಿ ನಡೆಯುತ್ತಿರುವುದಾದರೂ ಏನು? ವಿಧಾನಸಭೆ ಚುನಾವಣೆ ಪಕ್ಷಗಳಲ್ಲಿ ಬೆಳೆದಿರುವ ಅಸ್ಪೃಶ್ಯತೆ ಯಾರನ್ನೂ ಒಟ್ಟಿಗೆ ಸೇರಿಕೊಳ್ಳಲು ಬಿಡುತ್ತಿಲ್ಲ.

ಅಮೆರಿಕ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಚುನಾವಣೆಯಲ್ಲಿ ಗೆದ್ದಾಗ ನಾನು ನನ್ನ ವಿರೋಧಪಕ್ಷವನ್ನು ಗೌರವದಿಂದ, ಗಾಢವಾಗಿ ಪ್ರೀತಿಸುತ್ತೇನೆ. ಏಕೆಂದರೆ , ನನ್ನ ವಿರೋಧಪಕ್ಷವನ್ನು ಬೆಂಬಲಿಸುವ ದೊಡ್ಡ ಜನಸಮೂಹವೇ ಅದರೊಂದಿಗಿದೆ. ಅದಕ್ಕಾಗಿಯಾದರೂ ನಾನು ಪ್ರತಿಪಕ್ಷವನ್ನು ಗೌರವಿಸುತ್ತೇನೆ. ನಿಕ್ಸನ್‌ ಮಾತು ಅವರ ಪಕ್ಷದಲ್ಲಿ ಅಲೆಯೆಬ್ಬಿಸಿದಾಗ ಅವರು ಎಲ್ಲರನ್ನೂ ಸಮಾಧಾನ ಪಡಿಸಿದ್ದರು. ನಿಕ್ಸನ್‌ ಮಾತು ಎಷ್ಟು ಪ್ರಸ್ತುತ ನೋಡಿ.

ಆದರೆ ಇಂಥ ಮಾತುಗಳನ್ನು ಇಂದು ಹೇಳಿದರೆ ಶುದ್ಧ ಮೆಂಟಲ್ಲು ಅಂತ ಹೇಳಿಸಿಕೊಳ್ಳಬೇಕಾದೀತು. ಆ ಹಂತ ತಲುಪಿದ್ದೇವೆ.

ಮುಗಿಸುವ ಮುನ್ನ ಒಂದು ಮಾತು: ಅದೊಂದು ಕಾರ್ಯಕ್ರಮ. ಕಾಂಗ್ರೆಸ್‌ ನಾಯಕ ಪಿ.ವಿ. ನರಸಿಂಹರಾವ್‌ರನ್ನು ಆಲಂಗಿಸಿ ವಾಜಪೇಯಿ ಹೇಳಿದ್ದರು- ‘ ಇವರೇ ನನ್ನ ರಾಜಕೀಯ ಗುರು’.

ಜಾನೆ ಕಹಾಂ ಗಯೇ ವೋ ದಿನ್‌?

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more