• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದು ಭೈರವಿ ರಾಗ ಮೊಳಗಿದರೆ ನ್ಯೂಯಾರ್ಕ್‌ ನಗರ ಸ್ತಬ್ಧವಾಗುತ್ತದೆ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ನಾವ್ಯಾಕೆ ಹೀಗೆ?

ಲಂಚ ತಗೊಳ್ಳೋದು ತಪ್ಪು ಅಂತ ಗೊತ್ತಿದ್ರೂ ಏಕೆ ತಗೊಳ್ತೇವೆ? ಅದನ್ನು ಕೊಡೋದು ಸಹ ತಪ್ಪು ಅಂತ ಗೊತ್ತಿದ್ರೂ ಏಕೆ ಕೊಡ್ತೇವೆ? ಈ ಅಧಿಕಾರಿ, ಈ ರಾಜಕಾರಣಿ, ಈ ವ್ಯಾಪಾರಿ, ಈ ಪತ್ರಕರ್ತ ಭ್ರಷ್ಟಾತಿಭ್ರಷ್ಟ ಅಂತ ಗೊತ್ತಿದ್ರೂ ಏಕೆ ಸುಮ್ಮನಿರುತ್ತೇವೆ? ಅದಕ್ಕಿಂತ ಹೆಚ್ಚಾಗಿ ಇವರನ್ನೆಲ್ಲ ಏಕೆ ಸಹಿಸಿಕೊಳ್ಳುತ್ತೇವೆ, ಒಪ್ಪಿಕೊಳ್ಳುತ್ತೇವೆ, ಅಪ್ಪಿಕೊಳ್ಳುತ್ತೇವೆ? ನಮ್ಮೂರಿನ ಒಬ್ಬ ಕಾರ್ಪೊರೇಟರ್‌, ಶಾಸಕ, ಸಂಸದರ ಅವ್ಯವಹಾರಗಳೆಲ್ಲವನ್ನೂ ತಿಳಿದು ಪುನಃ ಅವರಿಗೇ ಮುಂದಿನ ಚುನಾವಣೆಯಲ್ಲಿ ಏಕೆ ವೋಟು ನೀಡುತ್ತೇವೆ?

ಇಸ್ಟ್ರಿ ಮಾಡದಿದ್ದರೆ, ಸಾಂಬಾರಿಗೆ ಸ್ವಲ್ಪ ಉಪ್ಪು ಹೆಚ್ಚಾದರೆ ಹೆಂಡತಿ ಮೇಲೆ ಸಿಡಿಮಿಡಿಗೊಳ್ಳುವ, ದಿನವಿಡೀ ಮೂಡು ಕೆಡಿಸಿಕೊಳ್ಳುವ ನಾವು, ರಾತ್ರಿ ಬೊಗಳಲಿಲ್ಲವೆಂಬ ಕಾರಣಕ್ಕೆ ಸಾಕು ನಾಯಿಯನ್ನು ದಿನವಿಡೀ ಉಪವಾಸ ಕೆಡವುವ ನಾವು, ರಸ್ತೆಯಲ್ಲಿ ಸ್ವಲ್ಪ ಆಚೀಚೆ ಆದರೆ ಪಕ್ಕದ ಸವಾರನ ಮೇಲೆ ತೋಳೇರಿಸುವ ನಾವು, ತಡವಾಗಿ ಮನೆಗೆ ಬಂದರೆ ಪ್ರಶ್ನಿಸುವ ಹೆಂಡತಿಯನ್ನು ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡ ಬರುತ್ತಾಳೆಂದು ಭಾವಿಸುವ ನಾವು, ಕಚೇರಿಯಲ್ಲಿ ಕಿರಿಯ ಸಹೋದ್ಯೋಗಿ ಎದ್ದು ನಿಂತು ‘ನಮಸ್ಕಾರಾ ಸಾರ್‌’ಎಂದು ಪುಟ್ಟ ಸಲಾಮು ಹಾಕದ್ದಕ್ಕೆ ಆತನ ಮೇಲೆ ಕಿಡೀ ಕಾಡುವ ನಾವು, ಹಾಳಾದ ರಸ್ತೆ, ಹರಿದು ಬಿದ್ದ ವಿದ್ಯುತ್‌ ತಂತಿ, ದುಡ್ಡು ತಿನ್ನುವ ಅಧಿಕಾರಿ, ಭ್ರಷ್ಟಾಚಾರವೆಸಗುವ ರಾಜಕಾರಣಿ, ರಸ್ತೆಯನ್ನೇ ನುಂಗುವ ಕಂಟ್ರಾಕ್ಟರ್‌, ಬುದ್ಧಿ ಪೂರ್ವಕ ಸುಳ್ಳು ಬರೆಯುವ ಪತ್ರಕರ್ತ, ಪಾಠ ಮಾಡದ ಕಾಲೇಜು ಉಪನ್ಯಾಸಕ, ಹತ್ತಿಪ್ಪತ್ತು ವರ್ಷಗಳಾದರೂ ತೀರ್ಪೇ ಕೊಡದ ಕೋರ್ಟು, ಒಂದಕ್ಕೆ ಹತ್ತು ಪಟ್ಟು ಸುಲಿಯುವ ವ್ಯಾಪಾರಿ... ಇವರನ್ನೆಲ್ಲ ಹೇಗೆ ಹಾಗೂ ಯಾಕೆ ಸಹಿಸಿಕೊಂಡಿದ್ದೇವೆ? ಇವರನ್ನೆಲ್ಲ ಒಂದು ದಿನವಾದರೂ ಪ್ರಶ್ನಿಸಿದ್ದೇವಾ? ಕಾಲರ್‌ ಪಟ್ಟಿ ಹಿಡಿಯುವುದು ಬೇಡ. ಸಭ್ಯವಾಗಿ ನಮ್ಮ ಸಾತ್ವಿಕ ಸಿಟ್ಟು, ಪ್ರತಿಭಟನೆ, ಒಂದು ಪುಟ್ಟ , ಆಕ್ರೋಶವನ್ನು ವ್ಯಕ್ತಪಡಿಸಿದ್ದೇವಾ?

Bhairavi Desaiಇಲ್ಲವೇ ಇಲ್ಲ. ಬೇಕಾದರೆ ನೆನಪಿಸಿಕೊಳ್ಳಿ. ಇವೆಲ್ಲ ಕಂಡು ನಾವು ಸುಮ್ಮನೆ ಕುಳಿತಿಲ್ಲ ನಿಜ. ಸಾಕಷ್ಟು ಸಲ ಪ್ರತಿಭಟಿಸಬೇಕೆಂದು ನಮ್ಮೊಳಗೇ ಅಂದುಕೊಂಡಿದ್ದೇವೆ. ಗೊಣಗಿಕೊಂಡಿದ್ದೇವೆ. ಸ್ನೇಹಿತರ ಮುಂದೆಲ್ಲ ನಮ್ಮ ಒಣ ಪೌರುಷವನ್ನು ಪ್ರದರ್ಶಿಸಿದ್ದೇವೆ. ದುರ್ದೈವವೆಂದರೆ ಅಷ್ಟೇ ಮಾಡಿ ಕೈಚೆಲ್ಲಿ ಕುಳಿತು ಸುಮ್ಮನಾಗಿದ್ದೇವೆ.

‘ವ್ಯವಸ್ಥೆ ಅಂದ್ರೆ ಹೀಗೇನೇ, ಇದನ್ನು ಯಾರು ಬಂದ್ರೂ ಸರಿ ಮಾಡಲಿಕ್ಕೆ ಆಗೊಲ್ಲ. ಲಂಚ ಎಲ್ಲಿ ಇಲ್ಲ ಹೇಳಿ? ಈಗಿನ ಕಾಲದಲ್ಲಿ ಯಾರು ತಗೊಳ್ಳಲ್ರಿ? ಸ್ವಲ್ಪ ಲಂಚ ಕೊಟ್ರೆ, ತಗೊಂಡ್ರೆ ತಪ್ಪಲ್ಲ ಬಿಡಿ. ವ್ಯವಸ್ಥೆ ಅಂದ್ರೆ ಕೊಂಚ ಓರೆಕೋರೆ ಇದ್ದೇ ಇರುತ್ತದೆ. ಸುಧಾರಿಸಿಕೊಂಡು ಹೋಗಬೇಕು’ ಎಂದು ನಮಗೇ ನಾವು ಹಾಗೂ ಎಲ್ಲರಿಗೂ ನಾವು ಸಮಾಧಾನ ಹೇಳುತ್ತೇವೆ. ಈ ‘ಸುಧಾರಿಸಿಕೊಂಡು ಹೋಗ್ಬೇಕು’ ಎಂಬ ಕೊನೆ ಮಾತು ಎಂಥ ಆಕ್ರೋಶದಿಂದ ಎದ್ದು ನಿಂತಾಗಲೂ ದಢಕ್ಕನೆ ಕುಳ್ಳಿರಿಸಿಬಿಡುತ್ತದೆ. ಈ ಕಾರಣದಿಂದ ನಾವು ಕಣ್ಣೆದುರೇ ನಡೆಯುವ ಅನ್ಯಾಯ, ಅನಾಚಾರ, ಅವ್ಯವಹಾರವನ್ನು ನೋಡಿ ಸುಮ್ಮನಾಗುತ್ತೇವೆ. ಯಾಕೆ ಹೇಳಿ? ಇವನ್ನೆಲ್ಲ ಕಂಡು ಸುಧಾರಿಸಿಕೊಂಡು ಹೋಗಬೇಕಲ್ಲ? ಹೀಗಾಗಿ ನಮ್ಮ ಸುತ್ತ ಮುತ್ತಲ ಕೊಳಕು, ಕುಳುಂಪೆಯನ್ನು ಸುಧಾರಿಸಿದೇ, ಅವುಗಳಿಗೆ ಕಾರಣವಾದವರ ವಿರುದ್ಧ ಪ್ರತಿಭಟನೆ ಕೂಗದೇ ನಮ್ಮನ್ನೇ ‘ಸುಧಾರಿಸಿ ಕೊಂಡು’. ಸಾರ್ವಜನಿಕ ಹಿತಾಸಕ್ತಿಗಾಗಿ ನಾವೆಂದೂ ಹಿಡಿ ಕೂಗನ್ನು ಹಾಕಿದವರಲ್ಲ. ನಾವಿದ್ದಂತೆ ನಮ್ಮ ಸಮಾಜವಿದೆ. ನಮ್ಮ ಸಮಾಜವಿದ್ದಂತೆ ನಾವಿದ್ದೇವೆ. ಎರಡೂ ಏಕ. ಪ್ರತಿಭಟನೆಗೆ ಮುಂದಾದವರನ್ನು ಹಿಡಿದೆಳೆದು ತೆಪ್ಪಗಾಗಿಸುವುದು ಹೇಗೆಂಬುದು ನಮಗೆ ಚೆನ್ನಾಗಿ ಗೊತ್ತು.

ಇನ್ನೊಂದು ವಿಚಿತ್ರ ಗಮನಿಸಿ. ನಮ್ಮೆಲ್ಲ ಸಮಸ್ಯೆಗಳನ್ನೂ ಸರಕಾರ ಅಥವಾ ರಾಜಕೀಯ ಪಕ್ಷಗಳು ಪರಿಹರಿಸಬೇಕೆಂದು ನಾವು ಭಾವಿಸಿರುವುದು. ಯಾವುದೇ ಸಮಸ್ಯೆ ಪರಿಹಾರವಾಗುವುದು ಅವುಗಳಿಗೆ ಬೇಕಿಲ್ಲವೆಂಬ ಸಣ್ಣ ಸತ್ಯ ಸಹ ನಮಗೆ ಗೊತ್ತಾಗುವುದಿಲ್ಲ. ಸಮಸ್ಯೆ ಪರಿಹಾರಕ್ಕೆಂದು ಒತ್ತಾಯಿಸುವ ರಾಜಕೀಯ ಪಕ್ಷಗಳು ಸಮಸ್ಯೆ ಬಗೆಹರಿಸಲು ಬಿಡುವುದಿಲ್ಲ. ಬಗೆಹರಿದರೆ ಆಡಳಿತ ಪಕ್ಷಕ್ಕೆ ಲಾಭವಾಗುವುದೆಂದು ಅವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತವೆ. ಈ ವಿಷವರ್ತುಲದಲ್ಲಿ ತೊಳಲಾಡುತ್ತಾ ಅದರೊಳಗೆ ಜೀವಿಸುವುದನ್ನು ರೂಢಿಸಿಕೊಂಡಿದ್ದೇವೆಯೇ ಹೊರತು ಅದರಾಚೆ ಬರಲು ಸಾಧ್ಯವಾಗದಷ್ಟು ಅಸಹಾಯಕರಾಗಿದ್ದೇವೆ.

ಭೈರವಿ ದೇಸಾಯಿ ನೆನಪಾಗುತ್ತಾಳೆ.

ತನ್ನ ಮುಂದೆ ನಡೆಯುವ ಅನ್ಯಾಯ, ಅನಾಚಾರಗಳನ್ನು ನೋಡುತ್ತಾ ಸುಮ್ಮನಿದ್ದಿದ್ದರೆ ಭೈರವಿ ದೇಸಾಯಿಯ ಹೆಸರು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಮೂವತ್ನಾಲ್ಕು ವರ್ಷ ವಯಸ್ಸಿನ ಈ ಹೆಣ್ಣು ಮಗಳು ಆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಆಕೆಯ ಹೆಸರು ಅಮೆರಿಕದ ಮಂದಿಗೆ ಗೊತ್ತಾಗುತ್ತಿರಲಿಲ್ಲ. ಫೋರ್ಡ್‌ ಪ್ರತಿಷ್ಠಾನ ‘ವಿಶ್ವವನ್ನು ಬದಲಿಸುವ ನಾಯಕತ್ವ’ (Leadership for a changing world) ಕಾರ್ಯಕ್ರಮದಡಿ ಭಾರತೀಯ ಮೂಲದ ಭೈರವಿಯನ್ನು 27 ಮಂದಿ ಪೈಕಿ ಒಬ್ಬಳಾಗಿ ಆಯ್ಕೆ ಮಾಡಿದೆ.

ಭೈರವಿ ಲಕ್ಷಾಂತರ ಭಾರತೀಯ ಸಂಜಾತರಂತೆ ಸಾಫ್ಟವೇರ್‌ ಎಂಜಿನಿಯರ್‌ ಅಲ್ಲ. ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಯೂ ಅಲ್ಲ. ಮೂಲತಃ ಗುಜ್ಜು ಅರ್ಥಾತ್‌ ಗುಜರಾತಿ. ಭೈರವಿ ಆರು ವರ್ಷದವಳಿದ್ದಾಗ ತಂದೆ-ತಾಯಿ ಗುಜರಾತಿನ ವಲ್ಸದ್‌ನಲ್ಲಿರುವ ಮನೆಬಿಟ್ಟು ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಲು ನಿರ್ಧರಿಸಿದರು. ತಂದೆ ವಕೀಲ. ಅಮೆರಿಕಕ್ಕೆ ಬಂದವನು ಕಿರಾಣಿ ಅಂಗಡಿಯನ್ನು ತೆರೆದ. ತಾಯಿಗೆ ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿತು. ತಂದೆ-ತಾಯಿಯರಿಬ್ಬರೂ ಕಷ್ಟಪಟ್ಟು ದುಡಿಯುವ ಮನೆಯಲ್ಲಿ ಬೆಳೆದವಳು ಭೈರವಿ. ಮಹಿಳಾ ಅಧ್ಯಯನ ಹಾಗೂ ಇತಿಹಾಸ ವಿಷಯಗಳಲ್ಲಿ ರಟ್ಗರ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಆಕೆ, ‘ಮಾನವಿ’ ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ಸೇರಿಕೊಂಡಳು.

ಭಾರತದಲ್ಲಿ ವರದಕ್ಷಿಣೆಯ ಆಸೆಗೆ ಮದುವೆ ಮಾಡಿಕೊಂಡು ಅಮೆರಿಕಕ್ಕೆ ಕರೆ ತಂದ ಬಳಿಕ ಮಾನಸಿಕ, ದೈಹಿಕ ಹಿಂಸೆ, ಕಿರುಕುಳ ಅನುಭವಿಸುವ ಹೆಣ್ಣುಮಕ್ಕಳ ನೆರವಿಗೆ ಮುಂದಾಗುವ ‘ಮಾನವಿ’ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಭೈರವಿ ಅನ್ಯಾಯದ ವಿರುದ್ಧ ಹೋರಾಡುವ, ಅವ್ಯವಸ್ಥೆ ವಿರುದ್ಧ ಸೊಲ್ಲೆತ್ತುವುದನ್ನು ರೂಢಿಸಿಕೊಂಡಳು. ಹಣಕ್ಕಾಗಿ ಗಂಡನಿಂದ ತಿರಸ್ಕೃತಗೊಂಡ ನೂರಾರು ಅಮಾಯಕ ಹೆಣ್ಣುಮಕ್ಕಳ ನೆರವಿಗೆ ನಿಂತ ಭೈರವಿ, ಇಂಥ ಗಂಡಸರ ವಿರುದ್ಧ ಅಮೆರಿಕದ ನೆಲದ ಕಾನೂನು ಸಮರಕ್ಕೆ ಮುಂದಾದಳು. 1996ರಲ್ಲಿ ಈ ಉದ್ದೇಶಕ್ಕಾಗಿ‘ಕಮಿಟಿ ಅಗೆನ್‌ಸ್ಟ್‌ ಏಷಿಯನ್‌ ಅಮೆರಿಕನ್‌ ವಾಯಲೆನ್ಸ್‌’ ಎಂಬ ಸಂಸ್ಥೆ ಹುಟ್ಟು ಹಾಕಿದಳು.

ಆದರೆ ಭೈರವಿಯ ಹೆಸರು ಸಾರ್ವಜನಿಕವಾಗಿ ಮೊಟ್ಟ ಮೊದಲು ಕೇಳಿ ಬಂದಿದ್ದು 1998ರಲ್ಲಿ. ಆಗ ಆಕೆಗೆ 27ವರ್ಷ. ಭೈರವಿ ಸಮಾನ ಮನಸ್ಕ ಸ್ನೇಹಿತೆಯರನ್ನು ಕೂಡಿಕೊಂಡು ‘ನ್ಯೂಯಾರ್ಕ್‌ ನಗರದಲ್ಲಿ ಟ್ಯಾಕ್ಸಿವರ್ಕ್‌ರ್ಸ್‌ ಅಲಾಯನ್ಸ್‌’ ಎಂಬ ಸಂಘ ಕಟ್ಟಿದಳು. ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದಿಂದ ವಲಸೆ ಹೋದವರು ಟ್ಯಾಕ್ಸಿ ವರ್ಕ್‌ರ್ಸ್‌ ಅಲಾಯನ್ಸ್‌’ ಎಂಬ ಸಂಘ ಕಟ್ಟಿದಳು.

ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದಿಂದ ವಲಸೆ ಹೋದವರು ಟ್ಯಾಕ್ಸಿ ಚಾಲಕರಾಗಿ ನ್ಯೂಯಾರ್ಕ್‌ ನಗರದಲ್ಲಿ ಅನುಭವಿಸುತ್ತಿರುವ ದಯನೀಯ ಪಾಡನ್ನು ಕಂಡು ಅವರ ಪರವಾಗಿ ಭೈರವಿ ಮೊದಲ ಬಾರಿಗೆ ಪ್ರತಿಭಟನೆಯ ಸೊಲ್ಲೆತ್ತಿದಳು. ಮೂರು ಸಾವಿರ ಚಾಲಕರನ್ನು ಸಂಘಟಿಸಿದಳು. ವಿದೇಶಿ ನೆಲದಲ್ಲಿ ಪೊಲೀಸರಿಂದ ನಿತ್ಯ ಹಿಂಸೆ ಅನುಭವಿಸುವ, ದೇಶಿಯರಿಂದ ತುಳಿತಕ್ಕೊಳಗಾಗುವ ಚಾಲಕರ ಪಾಡನ್ನು ಹತ್ತಿರದಿಂದ ಭೈರವಿ ಗಮನಿಸಿದಳು. ಇವರ ಹಿತರಕ್ಷಣೆಗಾಗಿ ಸಂಘಟನೆಯನ್ನು ಕಟ್ಟಿದಳು. ಸೆಪ್ಟೆಂಬರ್‌ 11ರ ಘಟನೆಯ ನಂತರ ನ್ಯೂಯಾರ್ಕ್‌ ಜನಜೀವನ ಸ್ಥಿತ್ಯಂತರವಾದಾಗ ಟ್ಯಾಕ್ಸಿ ಉದ್ಯಮದ ಮೇಲೂ ಅದರ ಕರಿನೆರಳು ಚಾಚಿತು. ಚಾಲಕರಿಗೆ ಮೊದಲಿನಷ್ಟು ಕಮಾಯಿ ಸಿಗುತ್ತಿರಲಿಲ್ಲ. ಮುಸ್ಲಿಂ ಚಾಲಕರನ್ನು ಸಂದೇಹದಿಂದ ಕಾಣುವ ಪ್ರವೃತ್ತಿ ಬೆಳೆಯಲಾರಂಭಿಸಿತು. ಅವರಿಗೆ ಪೊಲೀಸ್‌ ಕಿರುಕುಳವೂ ಹೆಚ್ಚತೊಡಗಿತು. ಮುಸ್ಲಿಂ ಚಾಲಕರ ಟ್ಯಾಕ್ಸಿಯಲ್ಲಿ ಜನ ಕುಳಿತುಕೊಳ್ಳುತ್ತಿರಲಿಲ್ಲ.

ಭೈರವಿ ಇವೆಲ್ಲವುಗಳ ವಿರುದ್ಧ ಎದ್ದು ನಿಂತು. ಟ್ಯಾಕ್ಸಿ ಚಾಲಕರ ಗೋಳಿನ ಕತೆಯನ್ನು ಸಾರ್ವಜನಿಕರ ಮುಂದಿಟ್ಟಳು. ವಾರಕ್ಕೆ 80ತಾಸು ದುಡಿದೂ ವರ್ಷಕ್ಕೆ 18ಸಾವಿರ ಡಾಲರ್‌ನಷ್ಟು ಹಣ ಸಂಪಾದಿಸಲು ಒದ್ದಾಡುವ ಚಾಲಕರ ಪಾಡನ್ನು ಬಿಚ್ಚಿಟ್ಟಳು.‘ನ್ಯೂಯಾರ್ಕ್‌ನಲ್ಲಿ ಟ್ಯಾಕ್ಸಿ ಚಾಲಕನಾಗುವುದೆಂದರೆ ಅತ್ಯಂತ ಅಪಾಯಕರ ವೃತ್ತಿ ಆಯ್ದುಕೊಂಡಂತೆ’ಎಂಬುದನ್ನು ಭೈರವಿ ಮನವರಿಕೆ ಮಾಡಿಕೊಟ್ಟಳು. ಈ ಟ್ಯಾಕ್ಸಿ ಚಾಲಕರಲ್ಲಿ ಹೆಚ್ಚು ಮಂದಿ ಅಮೆರಿಕನ್ನರಲ್ಲ. ಈ ವೃತ್ತಿಯಲ್ಲಿ 90ದೇಶಗಳಿಂದ ಬಂದವರಿದ್ದಾರೆ. ಇವರೆಲ್ಲ ಅಮೆರಿಕದ ನೆಲದಲ್ಲಿ ಅಭದ್ರತೆ, ಅನಿಶ್ಚಿತತೆಯಿಂದ ಬಾಳುತ್ತಿದ್ದಾರೆಂಬುದನ್ನು ಆಕೆ ಮನದಟ್ಟು ಮಾಡಿಕೊಟ್ಟಳು.

ನ್ಯೂಯಾರ್ಕ್‌ನಲ್ಲಿ ದಯನೀಯ ಜೀವನ ಸಾಗಿಸುತ್ತಿರುವ ಸುಮಾರು 40ಸಾವಿರ ಟ್ಯಾಕ್ಸಿ ಚಾಲಕರನ್ನು ಸೇರಿಸಿ ಭೈರವಿ 24ತಾಸುಗಳ ಬಂದ್‌ಗೆ ಕರೆಕೊಟ್ಟಾಗ, ವಿಶ್ವದ ಹಣಕಾಸು ನಗರಿ ಪತರಗುಟ್ಟಿ ಹೋಯಿತು! ಅದೊಂದು ಅಂತಾರಾಷ್ಟ್ರೀಯ ಸುದ್ದಿಯಾಯಿತು. ಸದಾ ಚಲನಶೀಲವಾಗಿರುವ ಭೂಮಿ ಒಂದು ಸಲ ನಿಂತ ಅನುಭವ! ಟ್ಯಾಕ್ಸಿ ಚಾಲಕರ ಬಹುತೇಕ ಬೇಡಿಕೆಗಳಿಗೆ ಸ್ಥಳೀಯ ಸರಕಾರ ಮಿಡಿಯಿತು. ಅಷ್ಟು ದಿನ ಅಸಂಘಟಿತರಾಗಿದ್ದ, ಮೂಕಪ್ರಾಣಿಗಳಂತೆ ವೇದನೆ ಅನುಭವಿಸುತ್ತಿದ್ದ ಚಾಲಕರು ತಮ್ಮ ಹಕ್ಕನ್ನು ಪ್ರತಿಪಾದಿಸುವಂತಾಗಿದ್ದು ಭೈರವಿ ದೇಸಾಯಿಯ ಬಹುದೊಡ್ಡ ಸಾಧನೆ. ಹಾಗೆ ನೋಡಿದರೆ ಭೈರವಿಗೂ ಈ ಟ್ಯಾಕ್ಸಿ ಚಾಲಕರಿಗೂ ಏನೇನೂ ಸಂಬಂಧವಿರಲಿಲ್ಲ. ಅವರ ಸಂಬಂಧಿಕರಾರೂ ಚಾಲಕರಾಗಿರಲಿಲ್ಲ. ಆದರೆ ಭೈರವಿ ಈ ಚಾಲಕರ ಟ್ಯಾಕ್ಸಿಯಲ್ಲಿ ನಿತ್ಯ ಸಂಚರಿಸುತ್ತಿದ್ದಳು. ಅವರ ಸಂಕಷ್ಟಗಳೇನೆಂಬುದನ್ನು ನಿತ್ಯ ನೋಡುತ್ತಿದ್ದಳು. ಅವರ ಬಾಯಿಂದಲೇ ಅವರ ನೋವಿನ ಕತೆಗಳನ್ನು ಕೇಳುತ್ತಿದ್ದರು.

ನಾವು ಸಹ ಇದನ್ನೇನು ಮಾಡುತ್ತೇವೆ. ಕೇಳಿ ಸುಮ್ಮನಾಗುತ್ತೇವೆ. ಆದರೆ ಭೈರವಿ ಸುಮ್ಮನಾಗಲಿಲ್ಲ. ಅವರ ಸಮಸ್ಯೆಯನ್ನೇ ಮುಖ್ಯವಾಗಿಟ್ಟುಕೊಂಡು ಹೋರಾಡಲು ನಿರ್ಧರಿಸಿದಳು. ದನಿಯಿಲ್ಲದವರಿಗೆ ಬಾಯಿ ಆಗಲು ತೀರ್ಮಾನಿಸಿದಳು. ಆಕೆಯ ಹೋರಾಟದ ಫಲವಾಗಿ ಟ್ಯಾಕ್ಸಿ ಚಾಲಕರೆಲ್ಲ ಒಂದಾಗಿದ್ದಾರೆ. ಒಬ್ಬ ಹೆಣ್ಣುಮಗಳು ದೃಢಸಂಕಲ್ಪ , ಛಲ, ಹಠದಿಂದ ಇಷ್ಟೆಲ್ಲ ಸಾಧ್ಯವಾಗಿವೆ.‘ಒಂದು ವೇಳೆ ಆಕೆಯೂ ಸುಧಾರಿಸಿಕೊಂಡು ಹೋಗಬೇಕು’ ಎಂಬ ಮನೋಭಾವ ತಾಳಿದ್ದರೆ ಏನಾಗುತ್ತಿತ್ತು ಊಹಿಸಿ.

ಭೈರವಿ ದೇಸಾಯಿ ಹೇಳುತ್ತಾಳೆ -‘ನಿಮ್ಮ ಸುತ್ತಮುತ್ತ ಸಮಸ್ಯೆಗಳಿದ್ದರೆ, ಅವ್ಯವಸ್ಥೆಗಳಿದ್ದರೆ ಅದಕ್ಕೆ ಬೇರೆ ಯಾರೂ ಕಾರಣರಲ್ಲ. ಅದಕ್ಕೆ ಕಾರಣ ನೀವೇ. ಬೇರೆಯವರನ್ನು ದೂಷಿಸುವ ಮೊದಲು ದೂಷಿಸಬೇಕಾದ್ದು ನಿಮ್ಮನ್ನೇ. ನಿಮ್ಮ ಮುಂದೆ ಸಮಸ್ಯೆ, ಅವ್ಯವಸ್ಥೆಯಿದೆಯೆಂದರೆ ಅವು ಹಾಗಿರಲು ನಿಮ್ಮ ಅನುಮತಿ, ಅನುಮೋದನೆಯಿದೆಯೆಂದೇ ಅರ್ಥ’

ಆ ಭೈರವಿ ಮಾತು ಅದೆಷ್ಟು ಸತ್ಯ ನೋಡಿ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more