• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತಿವೃಷ್ಟಿಯೂ ನಮ್ಮ ರಾಜಕಾರಣಿಗಳಿಗೆ ಸುಗ್ಗಿಯ ಕಾಲ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಅದರಲ್ಲೇನೂ ಅತಿಯೋಕ್ತಿ ಇಲ್ಲ.

ಮುಂಬೈಯಲ್ಲಿ ಸುರಿದ ಮಳೆಯೇನಾದರೂ ಬೆಂಗಳೂರಿನಲ್ಲಿ ಸುರಿದಿದ್ದರೆ ಬೆಂಗಳೂರು ಸಹ ಮತ್ತೊಂದು ಮುಂಬೈ ಆಗುತ್ತಿತ್ತು. ಈಗಲೂ ಅಲ್ಲಿ ಸುರಿದ ಮಳೆ ಇಲ್ಲೂ ಸುರಿದರೆ ಬೆಂಗಳೂರು ಕೂಡ ಯಾವುದೇ ಕ್ಷಣದಲ್ಲಿ ಮುಂಬೈ ಆಗಬಹುದು. ಅಷ್ಟರಮಟ್ಟಿಗೆ ನಾವು ಸುರಕ್ಷಿತ ಎಂಬುದನ್ನು ಬಿಟ್ಟರೆ, ನಮ್ಮೂರು ಸಹ ಮುಂಬೈಯಂತೆ ಮುಳುಗಲು ಕುಕ್ಕರಗಾಲಿನಲ್ಲಿ ಕುಳಿತಿದೆ. ಹಾಗೆ ನೋಡಿದರೆ ಬೆಂಗಳೂರೊಂದೇ ಅಲ್ಲ, ನಮ್ಮ ಎಲ್ಲ ನಗರಗಳೂ ಒಂದು ದೃಷ್ಟಿಯಲ್ಲಿ ಮುಂಬೈಯೇ. ಮೋಡ ಬಿರಿದರೆ ಮಳೆ ಸುರಿದರೆ ಮುಳುಗಲು ಸಿದ್ಧವಾಗಿದೆ. ಆದರೆ ಆ ಪರಿ ಮಳೆ ಬಿದ್ದಿಲ್ಲ ಎಂಬುದೊಂದೇ ಸಮಾಧಾನ. ಬಿದ್ದರೆ ಪ್ರಳಯ!

ಆ ರೀತಿ ನಮ್ಮ ನಗರಗಳೆಲ್ಲ ಕಿಲುಸಾರೆದ್ದು ಹೋಗಿವೆ. ಗತಿಗೆಟ್ಟು ಗಾಳುಮೇಳಾಗಿವೆ. ಒಂದು ಸಣ್ಣ ಮಳೆ ಹೊಡೆದರೆ ರಸ್ತೆಗಳೇ ಗಟಾರಗಳಾಗಿ ಹೋಗುತ್ತವೆ. ಊರಿಗೆ ಊರೇ ತೂಬು ಕಟ್ಟಿದ ಚರಂಡಿಯಾಗುತ್ತವೆ. ಮಳೆಯೇನಾದರೂ ಪುರಸೊತ್ತು ಮಾಡಿಕೊಂಡು ಇಡೀ ದಿನ ಹುಯ್ದಬಿಟ್ಟರೆ ಇಡೀ ಊರೇ ಕೋಟಿತೀರ್ಥ. ಜನರು ಕಕ್ಕಾಬಿಕ್ಕಿಯಿಂದ ಎಚ್ಚೆತ್ತುಕೊಳ್ಳುವ ಮುನ್ನ ಊರೆಲ್ಲಾ ಲಿಂಗನಮಕ್ಕಿ. ಒಂದು ಸಣ್ಣ ಮಳೆಯ ‘ಜಳಕ’ವನ್ನು ಸಹಿಸಿಕೊಳ್ಳುವ ಶಕ್ತಿ ನಮ್ಮ ನಗರಗಳಿಗಿಲ್ಲ.

ಮೊನ್ನೆ ಮುಂಬೈನಲ್ಲಿ ಏನಾಯಿತೆಂಬುದನ್ನು ನೋಡಿರಬಹುದು. ಹದಿನೆಂಟು ತಾಸು ಒಂದೇ ಸಮನೆ ಮಳೆ ಹೊಡೆಯುತ್ತಿದ್ದಂತೆ ಈ ದೇಶದ ‘ಹಣಕಾಸಿನ ರಾಜಧಾನಿ’ದೊಡ್ಡ ಕೆರೆಯಂತಾಗಿಬಿಟ್ಟಿತು. ಮುಂಬೈ ಇಡೀ ಜಗತ್ತಿನ ಸಂಪರ್ಕವನ್ನು ಕೆಲಕಾಲ ಕಡಿದುಕೊಂಡಿತು. ಅಲ್ಲಿಗೆ ಯಾರೂ ಹೋಗುವಂತಿರಲಿಲ್ಲ. ಅಲ್ಲಿಂದ ಯಾರೂ ಬರುವಂತಿರಲಿಲ್ಲ. ರಸ್ತೆಯಲ್ಲಿ ನೀರು ಆರಡಿ ಎತ್ತರಕ್ಕೆ ನಿಂತಿತ್ತು. ತಗ್ಗು ಪ್ರದೇಶಗಳೆಲ್ಲ ಬಂದ್‌ ಆಗಿದ್ದರಿಂದ ಇಡೀ ನಗರ ದೊಡ್ಡ ಬಾವಿಯಂತಾಗಿತ್ತು. ಏನಿಲ್ಲವೆಂದರೂ ಸುಮಾರು ಒಂದು ಸಾವಿರ ಮಂದಿ ಜಲಸಮಾಧಿಯಾದರು. ಆರು ಸಾವಿರ ಕೋಟಿ ರೂಪಾಯಿ ನಷ್ಟವಾಯಿತು. ಮುಂಬೈ ನಗರವಾಸಿಗಳು ಕಲ್ಲವಿಲಗೊಂಡರು. ಮುಂಬೈ ಮಳೆ ಇಡೀ ದೇಶದಲ್ಲೇ ಬೆಚ್ಚಿಬೀಳಿಸಿತು.

‘ಪ್ರಕೃತಿ ಮುನಿಸಿಕೊಂಡರೆ ಸಂತೈಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್‌ ದೇಶಮುಖ್‌ ಟಿವಿ ಕೆಮರಾ ಮುಂದೆ ನಿಂತು ಕಣ್ಣೀರು ಸುರಿಸಿದರು.‘ಇದರಲ್ಲಿ ತನ್ನದೇನೂ ಪಾತ್ರವಿಲ್ಲ, ಈ ಅನಾಹುತಕ್ಕೆಲ್ಲ ಅತಿಯಾಗಿ ಸುರಿದ ಮಳೆಯೇ ಕಾರಣ’ ಎಂದು ಧಾಟಿಯಲ್ಲಿ ಮಾತನಾಡುತ್ತಾ, ಎಲ್ಲ ಜವಾಬ್ದಾರಿಗಳಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂಬುದು ಎಂಥವನಿಗಾದರೂ ಗೊತ್ತಾಗುತ್ತಿತ್ತು. ಡಾನ್ಸ್‌ಬಾರ್‌ಗೆ ಅನುಮತಿ ಕೊಡಬೇಕೇ ಬೇಡವೇ ಎಂಬ ವಿಷಯವಾಗಿ ಮೂರು ತಿಂಗಳು ಚರ್ಚಿಸಿ ಅನಂತರ ಲಕ್ಷಾಂತರ ನಿಷ್ಪಾಪಿ ಹುಡುಗಿಯರ ಬದುಕಿಗೆ ಎರವಾದ ವಿಲಾಸ್‌ರಾವ್‌ ಎಂಬ ಬೇಜಬ್ದಾರಿ ಮುಖ್ಯಮಂತ್ರಿ ಮಾತ್ರ ಈ ರೀತಿ ಮಾತನಾಡಬಲ್ಲ. ನಮ್ಮ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಂತೆ ಮುಂಬೈಯನ್ನು ನೆಟ್ಟಗೆ ಮುಂಬೈಯಂತೆ ಇರಗೊಡದೇ ಶಾಂಘೈ ನಗರವಾಗಿ ಮಾಡಲು ಹೊರಟ ಈ ನಾಯಕನಿಗೆ ಎಂಟು ತಾಸು‘ಉಧೋ’ ಎಂದು ಮಳೆ ಸುರಿದರೆ ಮುಂಬೈ ಎಂಬ ಮಹಾನಗರಿ ಶಾಪಕೂಪವಾಗಬಹುದು ಎಂಬ ಅಪೂಟು ಸಾಮಾನ್ಯ ಸಂಗತಿಯೂ ಗೊತ್ತಿರಲಿಲ್ಲ. ಇದೂ ಗೊತ್ತಿಲ್ಲದ ಅವಿವೇಕಿಗಳು ಮಾತ್ರ‘ಪ್ರಕೃತಿ ಮುನಿಸಿಕೊಂಡರೆ ಮನುಷ್ಯನೇನು ಮಾಡಲು ಸಾಧ್ಯ?’ಎಂದು ಹೇಳಿಕೆಕೊಟ್ಟು ನುಣುಚಿಕೊಳ್ಳುತ್ತಾರೆ. ಪಾಪ ಅಲ್ಲಿನ ಮಹಾಜನತೆ ಈ ಮಾತುಗಳನ್ನು ಕೇಳಿ ಸುಮ್ಮನಾದರು. ಕಣ್ಣ ಮುಂದೆಯೇ ಮನೆ, ಮಠ ತೇಲಿಹೋದರೆ, ನೋಡನೋಡುತ್ತಿರುವಂತೆ ಒಡಹುಟ್ಟಿದವರು ಕೊಚ್ಚಿಕೊಂಡು ಹೋದರೆ, ನಿಂತ ನೆಲವೇ ಸರೋವರವಾದರೆ ಅವರಾದರೂ ಏನು ಮಾಡಬಲ್ಲರು?

ಮುಂಬೈ ಮೇಲೆ ಇಂಥ ಅನಾಹುತ ಸುರಿಯಬಹುದೆಂದು ಸರಕಾರಕ್ಕೆ ಗೊತ್ತಿತ್ತು. ಮಳೆ ಹನಿ ಬೀಳುವುದಕ್ಕಿಂತ ಮೊದಲು ಈ ಬೇಸಿಗೆಯಲ್ಲಿ ಮುಂಬೈಯಲ್ಲೊಂದು ಎರಡು ದಿನಗಳ ಕಾರ್ಯಾಗಾರದಲ್ಲಿ ಮಳೆಯಿಂದಾಗುವ ದುರಂತದ ಬಗ್ಗೆ ಎಚ್ಚರಿಸಲಾಗಿತ್ತು. ಈ ಕಾರ್ಯಾಗಾರವನ್ನು ಮುಖ್ಯಮಂತ್ರಿಗಳೇ ಉದ್ಘಾಟಿಸಿದರು. ಭೂಗಳ್ಳರು, ಕಟ್ಟಡ ನಿರ್ಮಾತೃಗಳು, ರಾಜಕಾರಣಿಗಳೆಲ್ಲ ಸೇರಿ ನೆಲದ ಕಾನೂನನ್ನು ಉಲ್ಲಂಘಿಸಿ ಬೇಕಾಬಿಟ್ಟಿ ದೊಡ್ಡ ದೊಡ್ಡ ಇಮಾರತುಗಳನ್ನು ಕಟ್ಟುತ್ತಿರುವುದರಿಂದ ಮಹಾನಗರದ ಒಡಲು ಕಟ್ಟಿಹೋಗಿ ಸಣ್ಣ ತುಂತುರು ಮಳೆಯನ್ನೂ ಜೀರ್ಣಿಸಿಕೊಳ್ಳಲಾಗದ ಪರಿಸ್ಥಿತಿ ಉದ್ಭವವಾಗಿರುವುದರ ಬಗ್ಗೆ ಎಚ್ಚರಿಸಲಾಗಿತ್ತು. ಮುಂಬೈ ಬೆಳೆಯುತ್ತಿರುವ ವೈಖರಿ ನೋಡಿದ ನಗರ ಪರಿಣತರೆಲ್ಲರೂ ಮಳೆಯಿಂದಾಗುವ ಅನಾಹುತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಅಧ್ಯಯನ, ಸಂಶೋಧನೆ ಮಾಡುವಥದ್ದೇನೂ ಇರಲಿಲ್ಲ. ಸಾಮಾನ್ಯಜ್ಞಾನವಿರುವ ಯಾವನಿಗಾದರೂ ಮುಂಬೈ ಮೇಲೆ ಒಂದು ಹೊಡೆತ ಮಳೆ ಹಾಸಿದರೆ ತಿಪ್ಪೆಗುಂಡಿಯಾಗುತ್ತದೆಂಬುದು ಗೊತ್ತಾಗುತ್ತದೆ. ಇವೆಲ್ಲ ಗೊತ್ತಿದ್ದೂ ಸರ್ಕಾರ ದಮಡಿ ಪ್ರಯೋಜನದ ಕ್ರಮ ಕೈಗೊಳ್ಳಲಿಲ್ಲ. ಇಡೀ ಮುಂಬೈಗೆ 6ಸಂಸದರಿದ್ದಾರೆ. 34ಶಾಸಕರಿದ್ದಾರೆ. 225 ಕಾರ್ಪೋರೇಟರ್‌ಗಳಿದ್ದಾರೆ. ರಾಜ್ಯಪಾಲ, ಮುಖ್ಯಮಂತ್ರಿ, ಮಂತ್ರಿಗಳು ಅಲ್ಲಿಯೇ ಕುಳಿತಿರುತ್ತಾರೆ. ಆಡಳಿತ ಯಂತ್ರವಿರುತ್ತದೆ. ಜನರು ಕೊಟ್ಟ ತೆರಿಗೆಗಳಿಂದ ಭರ್ತಿಯಾದ ಬೊಕ್ಕಸವಿರುತ್ತದೆ. ಇವೆಲ್ಲ ಇದ್ದೂ ಜನರು ತಮ್ಮದಲ್ಲದ ತಪ್ಪಿಗೆ ಪ್ರಾಣ, ಆಸ್ತಿ ಪಾಸ್ತಿ ಕಳೆದುಕೊಳ್ಳುವುದಿದೆಯಲ್ಲ, ಇದು ನಿಜಕ್ಕೂ ಹೇಯ.

ಮುಂಬೈ ಮಳೆಯ ಮೋಡಗಳು ನಮ್ಮ ಬೆಂಗಳೂರು ಅಥವಾ ನಿಮ್ಮ ಹತ್ತಿರದ ನಗರ, ಪಟ್ಟಣಗಳ ಮೇಲೆ ಕವಿದ ಚಿತ್ರಣವನ್ನು ಕಲ್ಪಿಸಿಕೊಳ್ಳಿ. ಸಂಶಯ ಬೇಡ ಪರಿಣಾಮ ಅದೇ. ಪ್ರಮಾಣ ಸ್ವಲ್ಪ ಕಡಿಮೆ ಇರಬಹುದು ಅಷ್ಟೆ. ಆಗಲೂ ನಮ್ಮ ಮುಖ್ಯಮಂತ್ರಿಗಳೂ ಟಿವಿ ಕೆಮರಾ ಮುಂದೆ ನಿಂತು ಅವಿವೇಕಿಯಂತೆ ಅದೇ ಹೇಳಿಕೆ ಕೊಡುತ್ತಾರೆ. ಮುಂದೆ ನಡೆಯುವುದೆಲ್ಲ ಮುಂಬೈನಲ್ಲಿ ನಡೆದಿದ್ದರ ರಿಪೀಟ್‌ ಶೋ. ಸಮಾಧಾನವೆಂದರೆ ಮಳೆರಾಯ ಇಲ್ಲಿ ಆ ಪರಿ ಸುರಿಯಲಿಲ್ಲ. ಬೆಂಗಳೂರು ಕೂಡ ಜೋರು ಮಳೆಯನ್ನು ತಡೆದು ಕೊಳ್ಳುವಷ್ಟು ಶಕ್ತವಾಗಿಲ್ಲ. ನಾಲ್ಕು ಹನಿ ಬಿದ್ದರೆ ರಸ್ತೆಯೇ ಚರಂಡಿ, ಗಟಾರವೇ ರಸ್ತೆ! ಸುಂದರವಾಗಿರುವ ನಮ್ಮ ಸುತ್ತಮುತ್ತಲನ್ನು ಹೇಗೆ ಕಸದತೊಟ್ಟಿಯಂತೆ ಮಾಡಿಬಿಡುತ್ತಿದ್ದೇವೆ ನೋಡಿ. ಬೆಂಗಳೂರು, ಮುಂಬೈಯಂತೆ ನ್ಯೂಯಾರ್ಕ್‌, ಲಂಡನ್‌ಗಳಲ್ಲೂ ಮಳೆ ಸುರಿಯುತ್ತವೆ. ಅಲ್ಲಿ ಪ್ರವಾಹ ಬರುವುದಿಲ್ಲ. ಚರಂಡಿ ಉಕ್ಕೇರಿ ಹರಿಯುವುದಿಲ್ಲ. ಅಲ್ಲಿ ಬಿದ್ದ ನೀರು ಕಾಲುವೆಯಲ್ಲಿ ಹರಿದು ಚರಂಡಿ ಸೇರುತ್ತದೆ. ನಮ್ಮಲ್ಲಿ ಮಾತ್ರ ರಸ್ತೆಯಲ್ಲಿಯೇ ಜಮಾ ಆಗಿ ಇಡೀ ಊರನ್ನು ಆವರಿಸಿಬಿಡುತ್ತದೆ. ಅಷ್ಟೇ ಫರಕ್ಕು.

ಇನ್ನು ಮಳೆಗಾಲದಲ್ಲಿ ಸಂಚರಿಸುವ ಯಮಯಾತನೆಯಂತೂ ಎಂಥ ದುಷ್ಟಾಪಿಗೂ ಬೇಡ. ಟಾರು ತಿಂದು ಮಲಗಿದ ರಸ್ತೆಗಳು ಎರಡು ಮಳೆ ಹನಿಗಳಿಗೆ ಅದು ಹೇಗೆ ಹೊಪ್ಪಳಿಕೆ ಕಿತ್ತುಕೊಂಡು ಬೆತ್ತಲಾಗಿಬಿಡುತ್ತವೋ ಏನೋ?ರಾಷ್ಟ್ರೀಯ ಹೆದ್ದಾರಿಯ ಮಾತು ಬಿಡಿ, ಉಳಿದ ರಸ್ತೆಗಳ ಮೇಲೆ ಪಯಣಿಸುವಾಗ ಇಷ್ಟದೇವತೆಗಳನ್ನು ಜಪಿಸುತ್ತಲೇ ಇರಬೇಕು. ಇಡೀ ರಾಜ್ಯವನ್ನು ಒಂದು ಸುತ್ತು ಹಾಕಿ ಬನ್ನಿ. ಒಂದು ತಗ್ಗು, ಉಬ್ಬು, ಹೊಂಡ ಇಲ್ಲದ ಸಪಾಟಾದ ಮೂರು ಕಿ.ಮಿ.ರಸ್ತೆ ಸಿಗುವುದಿಲ್ಲ. ಬೆಂಗಳೂರಿನ ಯಾವುದೇ ಭಾಗದಲ್ಲಿ ಸಂಚರಿಸಿ ಹೊಂಡಗಳಿಲ್ಲದ ಒಂದು ಕಿ.ಮಿ.ದೂರದ ರಸ್ತೆ ಗೋಚರಿಸುವುದಿಲ್ಲ. ರಸ್ತೆ, ಗಟಾರ, ಚರಂಡಿಗಳನ್ನು ಸಹ ನಮ್ಮ ರಾಜಕಾರಣಿಗಳು, ಕಂಟ್ರ್ಟಾಕರರು ಬಿಟ್ಟಿಲ್ಲ. ಪ್ರತಿವರ್ಷ ರಸ್ತೆ ಗುಂಡಿ ಮುಚ್ಚಲು, ಟಾರು ಬಳಿಯಲೆಂದು ಸರ್ಕಾರ, ಪಾಲಿಕೆ, ನಗರ ಸಭೆಗಳು ಕೋಟಿ ಕೋಟಿ ರೂಗಳನ್ನು ಖರ್ಚು ಮಾಡುತ್ತವೆ. ಪುನಃ ಮುಂದಿನ ಮಳೆಗಾಲಕ್ಕೆ ರಸ್ತೆಗಳೆಲ್ಲ ಸಿಡುಬು ಮೋರೆ ಹಾಕಿ ಕುಳಿತಿರುತ್ತವೆ. ಮತ್ತೆ ಕೋಟಿ ಕೋಟಿ ರೂ ಜಲ್ಲಿಕಲ್ಲು, ಟಾರು ಸುರಿಯುತ್ತಾರೆ. ಸುರಿಯುವುದು ಜಲ್ಲಿ ಟಾರು ಆಗಿದ್ದರೆ ಪರವಾಗಿರಲಿಲ್ಲ. ಮಣ್ಣು ಹಾಕಿ ಮೇಲೆ ಡಾಂಬರು ಸವರಿದರೆ ಇನ್ನೇನಾಗುತ್ತದೆ.

ಪ್ರತಿವರ್ಷ ರಸ್ತೆ ದುರಸ್ತಿ ಮಾಡುವಂತಾಗುವುದು, ನಿತ್ಯ ಅದರ ಮೇಲೆ ಜೆಸಿಬಿ ಯಂತ್ರ,ಬೊಫೋರ್ಸ್‌ ಫಿರಂಗಿ ಗಾಡಿ, ಬುಲ್ಡೋಜರ್‌ಗಳು ಓಡಾಡುವುದಿಲ್ಲ. ಲಾರಿಗಳು ಹೆಚ್ಚಾಗಿ ಓಡಾಡದ ಬಡಾವಣೆಗಳಲ್ಲೂ ರಸ್ತೆಗಳು ಒಂದು ವರ್ಷ ಕೂಡ ಬಾಳಿಕೆ ಬರುವುದಿಲ್ಲ. ಅಂದರೆ ರಸ್ತೆ ವ್ಯಾಪಾರ ಎಷ್ಟೊಂದು ಲಾಭದಾಯಕ, ಲೆಕ್ಕಾಚಾರ ಹಾಕಿ ಬಾಗಲಕೋಟೆಯಿಂದ ಗದ್ದನಕೇರಿ ಕ್ರಾಸ್‌ ತನಕ 10-12ಕಿ.ಮಿ ದೂರದ ರಸ್ತೆಯಲ್ಲಿ ಸಾಗಬೇಕು. 30ವರ್ಷಗಳ ಹಿಂದೆ ಮಾಡಿದ ಡಾಂಬರು ರಸ್ತೆ. ಅಂದಿನಿಂದ ಈ ತನಕ ಒಂದೇ ಒಂದು ಸಲ ಈ ರಸ್ತೆ ಡಾಂಬರು ಕಂಡಿಲ್ಲ. ಆದರೂ ಇದು ಹೊಂಡವಿಲ್ಲದೇ ಗಟ್ಟಿಮುಟ್ಟಾಗಿದೆ. ವಿಮಾನದ ರನ್‌ವೇಯಷ್ಟು ನುಣುಪಾಗಿದೆ. ಈ ರಸ್ತೆಯನ್ನು ಕಂಠಿ ರಸ್ತೆಯೆಂದೇ ಜನ ಅಭಿಮಾನದಿಂದ ಕರೆಯುತ್ತಾರೆ. ಎಸ್‌.ಆರ್‌. ಕಂಠಿಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಾಡಿಸಿದ ರಸ್ತೆಯಿದು. ಅಲ್ಲಿಂದ ಇಲ್ಲಿಯವರೆಗೆ ಈ ರಸ್ತೆ ಮೇಲೆ ಅವೆಷ್ಟು ವಾಹನಗಳು ಹರಿದಿವೆಯೋ, ಅವೆಷ್ಟು ಮಳೆ ಹುಯ್ದಿವೆಯೋ?ಆದರೂ ಈ ರಸ್ತೆ ಇಂದಿಗೂ ಬಲಿಷ್ಠವಾಗಿದೆ. ಆದರೆ ವಿಧಾನಸೌಧ ಮುಂದಿನ ರಸ್ತೆಗೆ ಈ ವರ್ಷ ಹೊದಿಸಿದ ಡಾಂಬರು ಮುಂದಿನ ವರ್ಷದ ಹೊತ್ತಿಗೆ ಬಾಯ್ದೆರೆದಿರುತ್ತದೆ. ಹಾಗೆಂದು ಅಲ್ಲಿ ಭಾರೀ ವಾಹನಗಳೇನೂ ಚಲಿಸುವುದಿಲ್ಲ.

ಮಳೆ ಬರುವುದು, ರಸ್ತೆಗೆ ಹೊಂಡ ಬೀಳುವುದು, ಸೇತುವೆ ಕುಸಿದು ಬೀಳುವುದು, ಪ್ರವಾಹ ಬರುವುದು, ಜನರು ತೊಂದರೆಗೀಡಾಗಿ ಸಂತ್ರಸ್ತರಾಗುವುದು ಜನಸಾಮಾನ್ಯರಿಗೆ ದುರಂತಗಳಂತೆ, ಅನಪೇಕ್ಷಿತ ಘಟನೆಗಳಂತೆ ಕಾಣಬಹುದು. ಆದರೆ ನಮ್ಮನ್ನು ಆಳುವ ಸರಕಾರಕ್ಕೆ, ಮಂತ್ರಿಗಳಿಗೆ, ಸಂಸದರಿಗೆ , ಶಾಸಕರಿಗೆ,ಅಧಿಕಾರಿಗಳಿಗೆ, ಕಾರ್ಪೊರೇಟರ್‌ಗಳಿಗೆ ಇದೊಂದು ಹುಲುಸಾದ ಸುಗ್ಗಿಯ ಕಾಲ. ಅನಾವೃಷ್ಟಿ (ಬರಗಾಲ)ಯಂತೆ ಅತಿವೃಷ್ಟಿಯೂ ಮೆಲ್ಲುವ ಸಮಯ. Every body loves good draught ಅಂತಾರಲ್ಲಾ ಈ ಮಾತು ಅತಿವೃಷ್ಟಿಗೂ ಅನ್ವಯ.

ಅತಿ ಮಳೆಯಾದರೆ ಪ್ರವಾಹ ಬರುತ್ತದೆ.ಪ್ರವಾಹ ಬಂದಾಗ ಜನ ಸಾಯುತ್ತಾರೆ. ಅವರ ಆಸ್ತಿಪಾಸ್ತಿಗೆ ಹಾನಿಯಾಗುತ್ತದೆ. ಸ್ಥಳೀಯ ಪುಢಾರಿ ಸತ್ತವರ ಮನೆಗೆ ಹೋಗಿ ಫೋಟೋ ತೆಗೆಸಿಕೊಳ್ಳುತ್ತಾನೆ. ಆತ ಪ್ರತಿ ಪಕ್ಷದ ಫುಢಾರಿ ಯಾಗಿದ್ದರೆ ಸರಕಾರ ಪರಿಹಾರ ಕೊಟ್ಟಿಲ್ಲವೆಂದು ಬೊಬ್ಬೆ ಹಾಕುತ್ತಾನೆ. ಆಡಳಿತ ಪಕ್ಷದವನಾಗಿದ್ದರೆ ಪರಿಹಾರ ಕೊಡಿಸುತ್ತೇನೆಂದು ಆಶ್ವಾಸನೆ ಕೊಡುತ್ತಾನೆ. ಪರಿಹಾರದ ಹಣ ಬಿಡುಗಡೆಯಾದಾಗ ಅದನ್ನು ವಿತರಿಸಿ ಪತ್ರಿಕೆಯಲ್ಲಿ ಫೋಟೆೋ ಹಾಕಿಸಿಕೊಳ್ಳುತ್ತಾನೆ. ಇನ್ನು ಮುಖ್ಯಮಂತ್ರಿಯದು ಬೇರೆ ಕತೆ. ಆತ ಜನರ ಮೂಡು ನೋಡಿಕೊಂಡು ಪ್ರತಿಕ್ರಿಯಿಸುತ್ತಾನೆ. ವಿಪರೀತ ಪ್ರವಾಹವುಂಟಾದ ಒಂದೆರಡು ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ನಡೆಸಿ ಒಂದಷ್ಟು ಕೋಟಿ ರೂ. ಘೋಷಿಸುತ್ತಾನೆ. ಈ ಮಧ್ಯೆ ಕೇಂದ್ರದಲ್ಲಿ ಬೇರೆ ಪಕ್ಷದ ಸರಕಾರವಿದ್ದರೆ ನಾವು ಕೇಳಿದಷ್ಟು ಹಣ ಕೊಟ್ಟಿಲ್ಲ ಎಂದು ಗೂಬೆ ಕೂರಿಸುತ್ತಾನೆ. ಬಿಡುಗಡೆಯಾದ ಪರಿಹಾರದ ಹಣದಲ್ಲಿ ಅಲ್ಯುಮಿನಿಯಂ ತಾಟುಗಳು, ಕಂಬಳಿಗಳು, ರಗ್ಗುಗಳನ್ನು ಖರೀದಿಸಿದ್ದು ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆದಿದ್ದು ಮಾತ್ರ ಕಣ್ಣಿಗೆ ಕಾಣುತ್ತವೆ. ಅನಂತರ ಪ್ರವಾಹ, ಪರಿಹಾರ ಎಲ್ಲವೂ ಮಾಯ! ಪ್ರವಾಹಕ್ಕೆ ಸಿಕ್ಕ ಹಣಕ್ಕೆ ಲೆಕ್ಕವಿಡುವುದಾದರೂ ಹೇಗೆ? ಬಿಹಾರದಲ್ಲಿ ಗೌತಮ್‌ ಗೋಸ್ವಾಮಿಯೆಂಬ ಐಎಎಸ್‌ ಅಧಿಕಾರಿ ನೆರೆ ಪರಿಹಾರದ ಹಣ ತಿಂದು ಸಿಕ್ಕಿಬಿದ್ದಿದ್ದನ್ನು ನೆನಪಿಸಿಕೊಳ್ಳಿ. ಇಲ್ಲಿ ಮಂತ್ರಿ, ಜನಪ್ರತಿನಿಧಿ, ಅಧಿಕಾರಿ ಎಲ್ಲ ಷಾಮೀಲು. ಆನಂತರ ಹೊಸ ರಸ್ತೆ, ಕುಸಿದ ಸೇತುವೆಯ ಪುನರ್‌ ನಿರ್ಮಾಣ, ಪುನಃ ಡಾಂಬರು ಅಂತ ಹೊಸ ಖಾತೆ ಕಿರ್ದಿ ತೆರೆದುಕೊಳ್ಳುತ್ತದೆ.

ಪ್ರತಿ ಅತಿವೃಷ್ಟಿಯೂ ಸರಕಾರದ ಮಟ್ಟಿಗಂತೂ ಒಂದಲ್ಲ ಒಂದು ರೀತಿಯಿಂದ ಲಾಭದಾಯಕವೇ. ಅದಕ್ಕಾಗಿ Everybody loves good Floods!

ಹೇಗಿದೆ ಮಳೆ ರಾಜಕೀಯ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more