• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಕರ್ತ ಎಂಬ ಬಿರುದು ಚೆಂದವೇ ಹೊರತು ಬೃಹಸ್ಪತಿ ಎಂಬ ಪಟ್ಟವಲ್ಲ !

By Staff
|
Vishweshwar Bhat ವಿಶ್ವೇಶ್ವರ ಭಟ್‌

ಪತ್ರಕರ್ತ ವೈಯೆನ್ಕೆ ಹೇಳುತ್ತಿದ್ದರು- ‘ಚಂದ್ರನ ಮೇಲೆ ಮೊದಲ ಬಾರಿಗೆ ಮನುಷ್ಯ ಕಾಲಿಟ್ಟಾಗ ಅಮೆರಿಕದ ಪತ್ರಿಕೆಗಳು ಅದರಲ್ಲೂ ಮುಖ್ಯವಾಗಿ ‘ನ್ಯೂಯಾರ್ಕ್‌ ಟೈಮ್ಸ್‌ ’ ಐವತ್ತು ದಿನಗಳ ಕಾಲ ಸುದ್ದಿಯನ್ನು ಮುಖಪುಟದಲ್ಲಿ ಪ್ರತಿದಿನ ಪ್ರಕಟಿಸುತ್ತಿತ್ತು. ಅನೇಕ ತಿಂಗಳುಗಳ ಕಾಲ ಈ ಸುದ್ದಿ ಆ ಪತ್ರಿಕೆಯಲ್ಲಿ ವರದಿಯಾದವು. ಚಂದ್ರನ ಮೇಲೆ ಪದಾರ್ಪಣ ಮಾಡಿದ ಘಟನೆಗೆ ಆ ಪತ್ರಿಕೆ ನೀಡಿದ ಮಹತ್ವ ಅಂಥದ್ದು. ’

ವೈಯೆನ್ಕೆ ಮತ್ತೊಂದು ಘಟನೆಯನ್ನು ಆಗಾಗ ಮೆಲುಕು ಹಾಕುತ್ತಿದ್ದರು. 1975ರಲ್ಲಿ ಮೊದಲ ಬಾರಿಗೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡ ಟೆಸ್ಟ್‌ ಪಂದ್ಯ ಆಡಲು ಬೆಂಗಳೂರಿಗೆ ಬಂದಿದ್ದನ್ನು ಕೆಲವು ಪತ್ರಿಕೆಗಳು ವರದಿ ಮಾಡಿದ್ದವು.

ಈಗಿನ ಪತ್ರಿಕೆಗಳಲ್ಲಿ ಸುದ್ದಿಯ ಜೀವಿತ ಅವಧಿ ಎಷ್ಟು ಮತ್ತು ಓದುಗರು ಸುದ್ದಿಯಲ್ಲಿ ಎಷ್ಟು ದಿನಗಳವರೆಗೆ ಆಸಕ್ತಿ ಕಾಪಾಡಿಕೊಳ್ಳುತ್ತಾರೆ ಹಾಗೂ ಮಾಧ್ಯಮಗಳು ಅಥವಾ ಪತ್ರಿಕೆಗಳು ಸುದ್ದಿಯನ್ನು ಹೇಗೆ treat ಮಾಡುತ್ತವೆ ಎಂಬ ಪ್ರಶ್ನೆ ಆಗಾಗ ಮೂಡುವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಬೇಕಾಯಿತು.

Soliloquy of a Journalist

ಈಗಿನ ಪತ್ರಿಕೆಯನ್ನು ಬೇಕಾದಾರೂ ತೆರೆದು ನೋಡಿ. ಸುನಾಮಿಗೆ ಸಂಬಂಧಿಸಿದ ವರದಿ ಕಾಣಿಸುವುದಿಲ್ಲ. ಹಾಗೆಂದು ಸುನಾಮಿ ಸಂತ್ರಸ್ತರೆಲ್ಲ ಸುಖವಾಗಿದ್ದಾರೆ ಎಂದಲ್ಲ. ಅವರ ಸಂಕಷ್ಟ ದಿನಕ್ಕೊಂದು ಆಯಾಮ ತಾಳುತ್ತಿದೆ. ಆದರೆ ಅವ್ಯಾವವೂ ವರದಿಯಾಗುತ್ತಿಲ್ಲ. ಕಾರಣ ಸುನಾಮಿಯ ವಿವಿಧ ಮುಖಗಳ ಬಗ್ಗೆ ತಿಳಿಯಲು ಯಾರಿಗೂ ಆಸಕ್ತಿಯಿದ್ದಂತಿಲ್ಲ. ಒಂದು ವೇಳೆ ಪತ್ರಿಕೆಗಳು ವರದಿ ಮಾಡಿದರೂ ಓದುಗರಿಗೆ ಆಸಕ್ತಿಯಿಲ್ಲ. ಓದುಗರಿಗೆ ಆಸಕ್ತಿಯಿರಲಿಕ್ಕಿಲ್ಲವೆಂದು ಪತ್ರಿಕೆಗಳೂ ವರದಿ ಮಾಡುತ್ತಿಲ್ಲ. ಪರಿಣಾಮ ಆ ಸುದ್ದಿ ಇಲ್ಲ. ಮೊದಲ ಬಾರಿಗೆ ‘ಸುನಾಮಿ’ ಪದ ಕೇಳಿದಾಗ ಅದನ್ನು ಹೆಡ್‌ಲೈನ್‌ನಲ್ಲಿ ಬಳಸಿದರೆ ಯಾರಿಗೂ ಅರ್ಥವಾಗಲಿಕ್ಕಿಲ್ಲವೆಂದು ‘ರಕ್ಕಸ ಅಲೆಗಳು’ ಎಂದು ಪತ್ರಿಕೆಗಳು ಬರೆದವು. ಇಂದು ಸುನಾಮಿ ಬಗ್ಗೆ ಗೊತ್ತಿರದವರು ಇರಲಿಕ್ಕಿಲ್ಲ. ಒಂದೇ ಹೊಡೆತಕ್ಕೆ ಸುನಾಮಿ ಮೂರುಲಕ್ಷ ಜನರನ್ನು ಬಲಿತೆಗೆದುಕೊಂಡಿತು. ಮೊದಲ ನಾಲ್ಕು ದಿನ ವರದಿ ಮಾಡುವಾಗ ಇದ್ದ ಉತ್ಸಾಹ ಎಂಟನೇ ದಿನಕ್ಕೆ ಇರಲಿಲ್ಲ. ಹತ್ತನೆ ದಿನದ ಹೊತ್ತಿಗೆ ಬರೆಯುವವರಿಗೆ ಹೇಗೆ ಉತ್ಸಾಹ ಹೊರಟುಹೋಗಿತ್ತೋ ಹಾಗೇ ಓದುವವರಿಗೆ. ಈ ವೇಳೆಗೆ ಸಾವಿನ ಸಂಖ್ಯೆ ಪ್ರತಿದಿನ ಹೆಚ್ಚುತ್ತಾ ಹೋಗಿ ಸತ್ತವರೆಲ್ಲ ಮನುಷ್ಯರಾಗದೇ ಕೇವಲ ಅಂಕಿ-ಸಂಖ್ಯೆಗಳಾಗಿದ್ದರು. ಒಂದೆರಡು ಹೆಣ ಸಿಕ್ಕರೆ, ಸಿಗದಿದ್ದರೆ ಅದು ಅಪೂಟು ಸುದ್ದಿಯಾಗುತ್ತಿರಲಿಲ್ಲ. ಸುನಾಮಿಯ ಬಗ್ಗೆ ಎಲ್ಲ ಪತ್ರಿಕೆಗಳು ತೋರಿದ ಕಾಳಜಿ ವಿಶೇಷವಾಗಿತ್ತು. ಆದರೆ ಈ ಕಾಳಜಿ ಇಪ್ಪತ್ತು ದಿನ ಕಳೆಯುವ ಹೊತ್ತಿಗೆ ಕರಗಿತ್ತು. ಈಗ ಸುನಾಮಿ ಸುದ್ದಿಯೇ ಇಲ್ಲ. ಹಾಗೆಂದು ಸುನಾಮಿ ಅಬ್ಬರ ಕಡಿಮೆಯಾಗಿಲ್ಲ. ಅಂಡಮಾನ್‌-ನಿಕೋಬಾರ್‌ ದ್ವೀಪ ಸಮೂಹಗಳಲ್ಲಿ ಸುನಾಮಿಯ ನಂತರ ಸುಮಾರು ಇನ್ನೂರು ಬಾರಿ ಭೂಕಂಪವಾಗಿದೆ. ಯಾರೂ ಮನೆಯ ಒಳಗೆ ಕಾಲಿಡುತ್ತಿಲ್ಲ. ರಾತ್ರಿಯೆಲ್ಲ ಎಚ್ಚರವಾಗಿರುತ್ತಾರೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಆತಂಕ. ನೆತ್ತಿಯ ಮೇಲೆ ಸದಾ ತೂಗುಗತ್ತಿ! ಒಂದು ಕ್ಷಣ ಕಳೆಯುವುದೂ ಯಾತನಾಮಯ. ನಿಂತ ನೆಲ ಅಷ್ಟೊಂದು ಸಲ ಗಡಗಡ ನಡುಗಿದರೆ ಗುಂಡಿಯಾಳಗೆ ಏನಾಗಿರಬೇಡ? ಇವೆಲ್ಲ ಪತ್ರಿಕೆಯ ಒಳಪುಟಗಳಲ್ಲಿ ಪುಟ್ಟ ಸುದ್ದಿ.

ನಾಗಪಟ್ಟಣಮ್‌ದಿಂದ ಬಂದ ಪತ್ರಕರ್ತ ಸ್ನೇಹಿತ ಹೇಳುವ ಕತೆ ಕೇಳಿದರೆ ಎಂಥ ಹೃದಯವಾದರೂ ಝಲ್ಲೆನ್ನುತ್ತದೆ. ನೂರಾರು ಮಂದಿ ಹುಚ್ಚರಾಗಿದ್ದಾರೆ. ಹೆಂಗಸರು ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದಾರೆ. ಸಾವಿರಾರು ಮಂದಿ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ವಿಲಕ್ಷಣ ರೋಗಗಳು ಕಾಣಿಸಿಕೊಂಡಿವೆ. ಜನರಲ್ಲಿ ವರ್ಗಸಂಘರ್ಷ ಹುಟ್ಟಿಕೊಂಡಿದೆ. ಪುಟ್ಟ ಕಂದಮ್ಮಗಳನ್ನು ಕಳಕೊಂಡ ತಾಯಂದಿರ ಕಣ್ಮೀರು ಇನ್ನೂ ಬತ್ತಿಲ್ಲ. ಅಲ್ಲಿನ ಪರಿಹಾರ ಕೇಂದ್ರಗಳಲ್ಲಿ, ನಿರಾಶ್ರಿತರ ಶಿಬಿರಗಳಲ್ಲಿ ಅರ್ಧಗಂಟೆ ಕಳೆಯಲು ಸಾಧ್ಯವಿಲ್ಲ. ಈ ಎಲ್ಲ ಸಂಗತಿಗಳನ್ನು ನೋಟ್ಸ್‌ ಮಾಡಿಕೊಂಡು ‘ತಿಂಗಳ ನಂತರ ಸುನಾಮಿ ಬದುಕು’ ಎಂಬ ಲೇಖನ ಮಾಲಿಕೆ ಆರಂಭಿಸಬಹುದೆಂದು ಸಂಪಾದಕರಲ್ಲಿ ಚರ್ಚಿಸಿದರೆ ‘ಈಗ ಸುನಾಮಿ ಬಗ್ಗೆ ಯಾರಿಗಿದೆ ಆಸಕ್ತಿ?’ ಎಂದು ಕೇಳಿದರಂತೆ. ಆ ಪತ್ರಕರ್ತ ಹೇಳಿದ -‘ಸಂಪಾದಕರ ತಪ್ಪೇನಿಲ್ಲ ಬಿಡಿ. ಅವರು ಓದುಗರಿಗೆ ಏನು ಇಷ್ಟವೋ ಅದನ್ನೇ ಕೊಡುತ್ತಾರೆ. ’

ಇಂದು ನಾವು ಎಂಥ ಸಂದರ್ಭದಲ್ಲಿದ್ದೇವೆಂದರೆ ಮಾಧ್ಯಮಗಳೇ ನಮ್ಮ ಬೇಕು- ಬೇಡಗಳನ್ನು ನಿರ್ಧರಿಸುತ್ತಿವೆ. ನಮ್ಮ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ನಾವು ಮಾಧ್ಯಮಗಳಿಗೆ ಕೊಟ್ಟುಬಿಟ್ಟಿದ್ದೇವೆ. ನಮ್ಮ ಖಂಡನೆ, ಪ್ರತಿಭಟನೆ, ಟೀಕೆ, ಆಗ್ರಹಗಳೆಲ್ಲ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಸೀಮಿತವಾಗಿದೆ. ಚಿಂತಕ ನೋಮ್‌ ಚಾಮ್‌ ಸ್ಕಿ ಹೇಳಿದಂತೆ ಮಾಧ್ಯಮಗಳಿಗೆ ನಮ್ಮ ಪರವಾಗಿ ಚಿಂತಿಸುವ ಪರವಾಗಿಯನ್ನೂ ನೀಡಿದ್ದೇವೆ. ಹೀಗಿರುವಾಗ ಮಾಧ್ಯಮಗಳಿಂದ Fair deal ನಿರೀಕ್ಷಿಸುವುದು ಸಮಂಜಸವೇ.

ಕಂಚಿಶ್ರೀ ಪ್ರಕರಣವನ್ನೇ ತೆಗೆದುಕೊಳ್ಳಿ. ಪತ್ರಿಕೆಗಳು ಕಂಚಿಶ್ರೀಗಳಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಮುಖಪುಟದಲ್ಲಿ ಬರೆದವು. ಅವರ ವಿರುದ್ಧದ ಆರೋಪಗಳನ್ನು ಸತ್ಯಾಂಶವೆಂಬಂತೆ ಚಿತ್ರಿಸಿದವು. ಅವರ ಪರವಾದ ಹೇಳಿಕೆ, ಘಟನೆಗಳಿಗಿಂತ ಅವರ ವಿರುದ್ಧದವುಗಳೇ ಪ್ರಾಮುಖ್ಯಪಡೆದವು. ಇಷ್ಟೊತ್ತಿಗೆ ಪ್ರತಿದಿನ ಈ ಸುದ್ದಿ ಓದಿಓದಿ ಓದುಗರು ಆಸಕ್ತಿ ಕಳಕೊಂಡಿದ್ದರು. ಪ್ರಕರಣ ಕೋರ್ಟ್‌ ಮೆಟ್ಟಿಲನ್ನು ಏರಿದ್ದರಿಂದ ಹಾಗೂ ಅದು ಇತ್ಯರ್ಥವಾಗಲು ಇನ್ನೂ ಅನೇಕ ವರ್ಷಗಳು ಹಿಡಿಯುವುದರಿಂದ ಈಗ ಈ ವಿಷಯದ ಕುರಿತು ಅಷ್ಟೇನೂ ಕುತೂಹಲವಿಲ್ಲ. ಕೋರ್ಟ್‌ ವಿಚಾರಣೆಯ ವಿವರಗಳು ಪತ್ರಿಕೆಗಳಲ್ಲಿ ಸಮಗ್ರವಾಗಿ ವರದಿಯಾಗುವುದೂ ಇಲ್ಲ. ಕೋರ್ಟ್‌ ತೀರ್ಪು ಬರುವ ಹೊತ್ತಿಗೆ ಈ ಪ್ರಕರಣದಲ್ಲಿ ಯಾವುದೇ newsworthiness ಇರಲಿಕ್ಕಿಲ್ಲ. ಒಂದು ವಿಷಯದ ಬಗ್ಗೆ ಇದ್ದ ಆರಂಭಿಕ ಲವಲವಿಕೆ, ಕಾತರ ಕ್ರಮೇಣ ಇರುವುದಿಲ್ಲ.

ಇಂಥ ಸಂದರ್ಭಗಳಲ್ಲಿ ಒಬ್ಬ ಪತ್ರಕರ್ತ ನೂರಾರು ಆಟಿಕೆ ಸಾಮಾನುಗಳ ಮಧ್ಯೆ ಕುಳಿತ ಪುಟ್ಟ ಮಗುವಿನಂತೆ ವರ್ತಿಸುತ್ತಾನೆ. ಮಗು ಒಂದು ಆಟಿಕೆಯನ್ನು ಎತ್ತಿಕೊಳ್ಳಲು ಮುಂದಾದಾಗ ಮತ್ತೊಂದು ಕಾಣಿಸುತ್ತದೆ. ಅದನ್ನು ಎತ್ತಿಕೊಳ್ಳಲು ಮೊದಲನೆಯದನ್ನು ಬಿಸಾಕುತ್ತದೆ. ಮೂರನೆಯದನ್ನು ಎತ್ತಿಕೊಳ್ಳುವ ಮೊದಲೇ ನಿರುತ್ಸಾಹ. ಹೀಗಾಗಿ ಮಗು ನಾಲ್ಕನೆಯದಕ್ಕೆ ಕೈ ಹಾಕುತ್ತದೆ. ಅದನ್ನು ಆಟಿಕೆಗಳ ಮಧ್ಯದಲ್ಲಿ ಕುಳಿತು ಎಲ್ಲವನ್ನೂ ಬಿಸಾಡಿ ಯಾವುದನ್ನೂ ಆಡದೇ ಮೇಲೇಳುತ್ತದೆ. ಪತ್ರಿಕೆಗಳೂ ಕೆಲವು ಸಂದರ್ಭಗಳಲ್ಲಿ ಹೀಗೇ ಸುದ್ದಿಯನ್ನು treat ಮಾಡುತ್ತವೆ. ಒಂದು ಪ್ರಮುಖ ಸುದ್ದಿಯನ್ನು ವರದಿ ಮಾಡುತ್ತಿರುವಾಗ ಮತ್ತೊಂದು ಸುದ್ದಿ ಬಂದರೆ ಮೊದಲನೆಯದು ಹಿಂದಕ್ಕೆ ಬೀಳುತ್ತದೆ. ಫಾಲೋ ಆಪ್‌ ವರದಿ ನಮ್ಮಲ್ಲಿನ್ನೂ ಪರಿಪಾಠವಾಗಿ ಬೆಳೆದುಬಂದಿಲ್ಲ. ಹೀಗಾಗಿ ಎಷ್ಟೋ ಸಂಗತಿಗಳ ಬಗ್ಗೆ ಮುಂದೇನಾದವು ಎಂಬುದು ಗೊತ್ತೇ ಆಗುವುದಿಲ್ಲ. ಉದಾಹರಣೆಗೆ ಭಿಕ್ಷುಕನ ಮಗಳೊಬ್ಬಳಿಗೆ ಮುಖ್ಯಮಂತ್ರಿಯಾಬ್ಬರು ಲಕ್ಷ ರೂ. ಇನಾಮು ಕೊಟ್ಟರೆ, ವರ್ಷದ ಬಳಿಕ, ಈ ಹಣ ಹೇಗೆ ಬಳಕೆಯಾಯಿತು, ಆಕೆ ಈಗೇನು ಮಾಡುತ್ತಿದ್ದಾಳೆ, ಆಕೆಯ ವಿದ್ಯಾಭ್ಯಾಸದ ಹೊರತಾಗಿ ಹಣ ಬೇರೆ ಉದ್ದೇಶಕ್ಕೆ ಬಳಕೆಯಾಯಿತೇ ಎಂಬುದನ್ನು ತಿಳಿಯಲು ಓದುಗರು ಆಸಕ್ತರಾಗಿರುತ್ತಾರೆ. ಈ ಕೆಲಸವನ್ನು ಎಲ್ಲ ಪತ್ರಿಕೆಗಳು ಮಾಡುವುದಿಲ್ಲ. ಯಾವುದೇ ಸುದ್ದಿ ಇಂದು ಸುದ್ದಿಯಾಗಿ ಸತ್ತು ಹೋಗುವುದಿಲ್ಲ. ಹತ್ತು ವರ್ಷಗಳ ನಂತರವೂ ಸುದ್ದಿಯಾಗಬಲ್ಲುದು. ಆದರೆ ಪತ್ರಕರ್ತನ ಜಾಗೃತ ಮನಸ್ಸು ಅದನ್ನು ಸುದ್ದಿ ಮಾಡಬೇಕಷ್ಟೆ.

ಪೋಲ್ಯಾಂಡ್‌ನ ಪ್ರಸಿದ್ಧ ಪತ್ರಕರ್ತ ರಿಯಾಸರ್ಡ್‌ ಕಪುಸಿನ್‌ಸ್ಕಿಗೆ ಯಾರಾದರೂ ಫೋನ್‌ ಮಾಡಿ ಸುದ್ದಿ ಕೊಟ್ಟರೆ ಆತ ಅದನ್ನು ನಿರಾಕರಿಸುತ್ತಿದ್ದ. ಬೇರೆಯವರು ತಿಳಿಸಿದ್ದು, ಫೋನಿನಲ್ಲಿ ಹೇಳಿದ್ದು, ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಅವನ ದೃಷ್ಟಿಯಲ್ಲಿ ಸುದ್ದಿಗಳೇ ಅಲ್ಲ. ಆತ ಎಂಥ ಸುದ್ದಿಯನ್ನು ಎತ್ತಿಕೊಂಡು ಬರುತ್ತಿದ್ದನೆಂದರೆ ಅದನ್ನು ಪ್ರಕಟಿಸಲು ಸಂಪಾದಕನಿಗೆ ಎಂಟೆದೆ ಬೇಕಾಗುತ್ತಿತ್ತು. ಕಪುಸಿನ್‌ಸ್ಕಿ ಸುದ್ದಿ ಕೋಲಾಹಲ ಎಬ್ಬಿಸದೇ ಹೋಗುತ್ತಿರಲಿಲ್ಲ. ಹೇಳಿಕೆಗಳನ್ನು ಪ್ರಕಟಿಸುವ ಸಂಪಾದಕರ ಮುಂದೆ ಆತ ಜಗಳಕ್ಕೆ ನಿಲ್ಲುತ್ತಿದ್ದ. ಓದುಗರಿಗೆ ಮೋಸ ಮಾಡುತ್ತಿದ್ದೀರೆಂದು ಜರಿಯುತ್ತಿದ್ದ. ಇಂದಿನ ಪತ್ರಿಕೆಗಳನ್ನು ನೋಡಿದ್ದರೆ ಆತ ಎದೆ ಬಡಿದುಕೊಳ್ಳುತ್ತಿದ್ದ. ಕಾರಣ ಇಂದಿನ ಪತ್ರಿಕೆಗಳಲ್ಲಿ ಬಹುಪಾಲು ಗೋಚರಿಸುವುದು ಹೇಳಿಕೆಗಳೇ. ಸಮಯಪಾಲನೆ ಮಾಡಲು ಸ್ವಾಮೀಜಿ ಕರೆ, ಪ್ರಾಮಾಣಿಕತೆ ಬೆಳೆಸಿಕೊಳ್ಳಲು ಸಚಿವರ ಕರೆ, ಧರ್ಮ ಅವನತಿಗೆ ಮಠಾಧೀಶರ ಕಳವಳ, ಹೆಚ್ಚುತ್ತಿರುವ ಹಿಂಸಾ ಪ್ರವೃತ್ತಿ : ವಿಷಾದ ಇಂಥವು ಇನ್ನೂ ಸುದ್ದಿಯಾಗಿ ಪತ್ರಿಕೆಗಳಲ್ಲಿ ಕಂಗೊಳಿಸುತ್ತಿವೆ. ಹೀಗಾಗಿ ಪತ್ರಕರ್ತರ ಸಮಯವೆಲ್ಲ ಹೇಳಿಕೆಗಳನ್ನು ವರದಿ ಮಾಡುವುದರಲ್ಲಿಯೇ ಕಳೆದುಹೋಗುತ್ತದೆ. ಅಂದರೆ ಬೇರೆಯವರ ಹೇಳಿಕೆ ಪಡೆಯುವುದು ಹಾಗೂ ಬರೆಯುವುದೇ ವರದಿಗಾರರ ಕೆಲಸವಾಗಿದೆ. what is news ಅಂತ ಕೇಳಿದರೆ whatever told is news ಎಂಬಂತಾಗಿದೆ. ರಾಜಕಾರಣಿಗಳು, ಮಠಾಧೀಶರು, ಮಂತ್ರಿಗಳು ಒಂದು ದಿನ ಬಾಯಿ ಮುಚ್ಚಿಕೊಂಡರೆ ಪತ್ರಿಕೆಗಳಿಗೆ ಸುದ್ದಿ ಕೊರತೆಯಾಗಬಹುದು. ಆ ಪರಿ ಹೇಳಿಕೆಗಳಿಗೆ ಪ್ರಾಮುಖ್ಯ ಕೊಡುತ್ತಿದ್ದೇವೆ. ಯಾವ ದೇಶದ ಪತ್ರಿಕೆಗಳಲ್ಲೂ ಹೇಳಿಕೆ ಸುದ್ದಿಯಾಗಿ ಈ ಪರಿ ಮೆರೆಯುವುದಿಲ್ಲ. ಇದರಿಂದ ತನಿಖಾ ವರದಿಗಳನ್ನು ಟ್ಯಾಬ್ಲಾಯಿಡ್‌ ಪತ್ರಿಕೆಗಳಿಗೆ ಒಪ್ಪಿಸಿಬಿಟ್ಟಿದ್ದೇವೆ, ನಮಗೆ ಆ ಬಗ್ಗೆ ಏನೂ ಸಂಬಂಧವೇ ಇಲ್ಲ ಎಂಬಂತೆ. ಸ್ವಲ್ಪ ತರಬೇತಿ ನೀಡಿದರೆ ಕಿವಿ ಚೆನ್ನಾಗಿರುವ ಕಾರಕೂನ ಹೇಳಿಕೆಗಳನ್ನು ಸುಂದರವಾಗಿ ಬರೆದುಕೊಡಬಲ್ಲ. ಅದಕ್ಕೆಒಬ್ಬ ಪತ್ರಕರ್ತ ಬೇಕಿಲ್ಲ. ಅಂದರೆ ನಮ್ಮ ವರದಿಗಾರಿಕೆಯನ್ನು ನಾವು ಕಾರಕೂನಿಕೆ ಮಟ್ಟಕ್ಕೆ ತಂದುಬಿಟ್ಟಿದ್ದೇವಾ? ನಾವು ಯೋಚಿಸಬೇಕಿದೆ.

ಓದುಗರಿಗೂ ಹೇಳಿಕೆಗಳೇ ಸುದ್ದಿಗಳು ಎಂಬುದನ್ನು ನಂಬಿಸಿಬಿಟ್ಟಿದ್ದೇವೆ. ಈ ಕಾರಣದಿಂದ ಅವರ ಊರಿನ ಮುಖಂಡನ ಹೇಳಿಕೆ ಪತ್ರಿಕೆಗಳಲ್ಲಿ ಪ್ರಕಟವಾಗದಿದ್ದರೆ, ದೊಡ್ಡ ಸುದ್ದಿಯಾಂದರಿಂದ ವಂಚಿತರಾದವರಂತೆ ಓದುಗರು ಭಾವಿಸುತ್ತಾರೆ. ದೇವೇಗೌಡರು ಮಳೆಕೊಯ್ಲಿನ ಬಗ್ಗೆ ಮಾತಾಡಿದರೆ, ಅಜರುದ್ದೀನ್‌ ಸಾವಯವ ಕೃಷಿ ಬಗ್ಗೆ ಹೇಳಿದರೆ, ನಮ್ಮೂರಿನ ಗ್ರಾಮ ಪಂಚಾಯಿತಿ ಮುಖಂಡ ಸೋನಿಯಾಗಾಂಧಿ ಅಥವಾ ಜಾರ್ಜ್‌ ಬುಷ್‌ ರಾಜೀನಾಮೆಗೆ ಆಗ್ರಹಿಸಿದರೂ ಸುದ್ದಿ ಮಾಡುತ್ತೇವೆ! ತಲೆತುಂಬಾ ಗೊಂದಲ, ಕಾರ್ಯಸಾಧುವಲ್ಲದ ವಿಚಾರಗಳನ್ನು ತುಂಬಿಕೊಂಡಿರುವವರು ಮಾತಾಡಿದರೆ ಅವರಿಗೆಲ್ಲ ವಿಚಾರವಾದಿ, ಬುದ್ಧಿಜೀವಿ, ಚಿಂತಕ ಎಂದು ಕರೆಯುತ್ತೇವೆ. ಒಂದೆರಡು (ಕೆಟ್ಟ ) ಪುಸ್ತಕಗಳನ್ನು ಬರೆದವರನ್ನೂ ‘ಖ್ಯಾತ ಸಾಹಿತಿ ’ ಎಂದು ಬರೆಯುತ್ತೇವೆ. ಬೇಕಾದವರನ್ನು ಅಟ್ಟಕ್ಕೇರಿಸುತ್ತೇವೆ. ಬೇಡದವರನ್ನು ಕಟ್ಟೆಗಿಳಿಸುತ್ತೇವೆ. ಆಗದವರನ್ನು ಚಟ್ಟಕೇರಿಸುತ್ತೇವೆ. ಹಾಗೆ ಮಾಡಿದ್ದೇವೆಂದು ಅಂದುಕೊಳ್ಳುತ್ತೇವೆ. ನಾಗರಿಕತೆಯಾಂದು ಅವನತಿ ಹೊಂದಿದರೆ, ರಾಷ್ಟ್ರಪತಿ ಕಗ್ಗೊಲೆಯಾದರೆ ಎಂಟು ಕಾಲಂ ಸುದ್ದಿ ಮಾಡುವ ನಾವು, ಪೊಲೀಸ್‌ ಪೇದೆ ಅಪಹರಣವಾದಾಗಲೂ ಅಷ್ಟೇ ದೊಡ್ಡ ಸುದ್ದಿ ಮಾಡುತ್ತೇವೆ.

ನಮ್ಮ ತಪ್ಪುಗಳು ನಮಗೆ ಕಾಣುವಂತಾಗಬೇಕು. ಅದಕ್ಕಿಂತ ಮುಖ್ಯವಾಗಿ ಅವುಗಳನ್ನು ನಮ್ಮ ತಪ್ಪುಗಳೆಂದು ಒಪ್ಪಿಕೊಳ್ಳಬೇಕು. ನಮಗೆ ಪತ್ರಕರ್ತ ಎಂಬ ಬಿರುದು ಚೆಂದವೇ ಹೊರತು ಬೃಹಸ್ಪತಿ ಎಂಬುದಲ್ಲ.

(ಸ್ನೇಹಸೇತು : ವಿಜಯ ಕರ್ನಾಟಕ )

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more