ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಅಪಸವ್ಯಗಳ ನಡುವೆ ಜೀವಂತವಾಗಿರುವ ಆಸೆ!

By Super
|
Google Oneindia Kannada News

ಎಲ್ಲ ಅಪಸವ್ಯಗಳ ನಡುವೆ ಜೀವಂತವಾಗಿರುವ ಆಸೆ!ಹೊಸದಿಲ್ಲಿಯ ರೈಸಿನಾ ಹಿಲ್‌ ಮೇಲೆ ತಲೆಯೆತ್ತಿ ನಿಂತಂದಿನಿಂದ ರಾಷ್ಟ್ರಪತಿ ಭವನ ಅನೇಕ ವಾರಸುದಾರರನ್ನು ಕಂಡಿದೆ!
ಬ್ರಿಟಿಷ್‌ ವಾಸ್ತುಶಿಲ್ಪ ಎಡ್ವಿನ್‌ ಲ್ಯಾಂಡ್‌ಸೀರ್‌ ಲುಟಿನ್ಸ್‌ , ದಿಲ್ಲಿಯ ಗೃಹನಿರ್ಮಾತೃಗಳಾದ ಸುಜನ್‌ ಸಿಂಗ್‌ ಹಾಗೂ ಶೋಭಾ ಸಿಂಗ್‌ ನೆರವಿನೊಂದಿಗೆ ಹದಿನೇಳು ವರ್ಷಗೂಡಿ ರಾಷ್ಟ್ರಪತಿ ಭವನ ಕಟ್ಟಿಸಿದ ಬಳಿಕ ದೇಶದ ಮಹಾಮಹಾ ಮಹಿಮರು ಅಲ್ಲಿ ದರ್ಬಾರು ಮಾಡಿ ಹೋಗಿದ್ದಾರೆ. ಸುಮಾರು 80 ವರ್ಷಗಳ ಹಿಂದೆ ಕೇವಲ 1.4 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ದೇಶಕ್ಕೆ ದೇಶವೇ ಹೆಮ್ಮೆಪಡುವಂಥ ಈ'ವಾಸ್ತು ಅದ್ಭುತ’ದಲ್ಲಿ ಎಂಥೆಂಥವರೋ ಬಂದು ಹೋಗಿದ್ದಾರೆ. ಎಪ್ಪತ್ತು ಕೋಟಿ ಇಟ್ಟಿಗೆಗಳನ್ನು ಬಳಸಿ ಕಟ್ಟಲಾದ 340 ಕೋಣೆಗಳಿರುವ, ಎರಡು ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣವಾಗಿರುವ ಈ ಭವನದೊಳಗೆ ಯಾರ್ಯಾರೋ ಬಂದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಜಗತ್ತಿನ ಯಾವ ರಾಷ್ಟ್ರಾಧ್ಯಕ್ಷನ ನಿವಾಸಕ್ಕೆ ಕಡಿಮೆಯಿಲ್ಲದ, ಅದಕ್ಕಿಂತ ಹೆಚ್ಚಾಗಿ ಜಗತ್ತಿನ ಯಾವ ರಾಷ್ಟ್ರಾಧ್ಯಕ್ಷನ ನಿವಾಸಕ್ಕಿಂತ ಭವ್ಯವಾಗಿರುವ ಹಾಗೂ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ರಾಷ್ಟ್ರಪತಿಯ ಸೂರಾಗಿರುವ ಈ ಭವನದೊಳಗೆ ಅನೇಕರು ಇದ್ದು, ಎದ್ದು ಹೋಗಿದ್ದಾರೆ.

ಆದರೆ ರಾಷ್ಟ್ರಪತಿ ಭವನ ಮಾತ್ರ ಹಾಗೇ ನಿಂತಿದೆ!
ನಿಮಗೆ ಗೊತ್ತಿರಬಹುದು, 1911ರಲ್ಲಿ ಬ್ರಿಟಿಷ್‌ ವೈಸ್‌ರಾಯ್‌ಗಳು ಭಾರತದ ರಾಜಧಾನಿಯನ್ನು ಕೋಲ್ಕತಾದಿಂದ ದಿಲ್ಲಿಗೆ ವರ್ಗಾಯಿಸಲು ನಿರ್ಧರಿಸಿದರು. ವೈಸ್‌ರಾಯ್‌ಗೊಂದು ವಾಸ್ತವ್ಯಕ್ಕೆ ಭವ್ಯಭವನ ನಿರ್ಮಿಸಲು ತೀರ್ಮಾನಿಸಿದರು. ಆ ಬ್ರಿಟಿಷರಿಗೆ ಅದೆಂಥ ವಾಂಛೆಯಿತ್ತೆಂದರೆ ತಾವು ಭಾರತದಲ್ಲಿ ಶಾಶ್ವತವಾಗಿ ನೆಲೆಯೂರುತ್ತೇವೆಂದು ಭಾವಿಸಿದ್ದರು. ರಾಷ್ಟ್ರಪತಿಭವನದಂಥ ಬೃಹದ್ಭವ್ಯ ಮಹಲನ್ನು ತಮ್ಮ ವೈಸ್‌ರಾಯ್‌ ನಿವಾಸಕ್ಕೆಂದು (ರಬ್ಬರ್‌ ಸ್ಟಾಂಪ್‌?) ಒತ್ತುವ ಹಂಬಲ, ಹುನ್ನಾರವಾಗಿತ್ತು. ಇದನ್ನು ಈಡೇರಿಸಿಕೊಳ್ಳಲು ಹದಿನೇಳು ವರ್ಷಗೂಡಿ ರಾಷ್ಟ್ರಪತಿ ಭವನವನ್ನು ಕಟ್ಟಿದರು. ಇದಕ್ಕಾಗಿ ಅಪರೂಪದ ಕಟ್ಟಿಗೆ ತಂದರು. ಇಟ್ಟಿಗೆ ತಂದರು. ಕಲ್ಲುಹಾಸು ತಂದರು. ನಮ್ಮ ಮೂಡಬಿದಿರೆಯ ಜೈನ ದೇಗುಲಗಳಲ್ಲಿರುವ ಗೋಪುರಗಂಟೆಯಿಂದ ಪ್ರಭಾವಿತರಾಗಿ ಅಂಥ ಕೆತ್ತನೆಯನ್ನೂ ಅಳವಡಿಸಿದರು. ಒಂದೊಂದು ಅಂಗುಲವನ್ನೂ ಅತ್ಯಂತ ಪ್ರೀತಿ, ಶ್ರದ್ಧೆ, ಕಾಳಜಿಯಿಂದ ಕೆತ್ತಿದರು.

ಎಲ್ಲ ತಮ್ಮ ವೈಸ್‌ರಾಯ್‌ನ ಸುಖ, ಐಷಾರಾಮಕ್ಕೆಂದು! ಎಲ್ಲೂ ಕೂಡ ಪರಿಣತಿಗೆ ಲೋಪವಾಗದಂತೆ ನಾಜೂಕಾಗಿ, ಅಚ್ಚುಕಟ್ಟಾಗಿ ರಾಷ್ಟ್ರಪತಿ ಭವನವನ್ನು ನಿರ್ಮಿಸಿದರು. ಅಷ್ಟೇ ಅಲ್ಲ ವಿಶ್ವದಲ್ಲಿಯೇ ಅಪರೂಪವೆನಿಸುವ ಉದ್ಯಾನವನ (ಮೊಗಲ್‌ ಗಾರ್ಡನ್‌)ವನ್ನು ನಿರ್ಮಿಸಿದರು. ಹಾಲೆಂಡ್‌, ಸ್ಕಾಟ್‌ಲ್ಯಾಂಡ್‌, ಸ್ವಿಜರ್‌ಲ್ಯಾಂಡ್‌ಗಳಿಂದ ವಿಶಿಷ್ಟ, ಆಕರ್ಷಕ ಹೂಗಿಡಗಳನ್ನು ತರಿಸಿನೆಟ್ಟರು. ಅವುಗಳ ಸೌಂದರ್ಯದಿಂದ ತಮ್ಮ 'ಧಣಿ’ ವೈಸ್‌ರಾಯ್‌ ತಣಿಯಲಿ ಎಂದು ಬಯಸಿ ಅಮೋಘ ಹೂದೋಟ ನಿರ್ಮಿಸಿದರು. 'ಶಿಲ್ಪದಲ್ಲಿ ಸಾಮಾಜ್ಯ’ ಕಟ್ಟುವ ಕಾಂಕ್ಷೆಯಿಂದ ಈ ಸುಂದರ ಭವನ ಕಟ್ಟಿದರು.

ಇಷ್ಟಕ್ಕಾಗಿ ಅವರಿಗೊಂದು ಸಲಾಮು ಹೊಡೆಯಲೇಬೇಕು. ಆ ಕೆಲಸವನ್ನು ನಮಗೇ ಬಿಟ್ಟಿದ್ದರೆ ಅವೆಷ್ಟು ಕೋಟಿ ತಿಂದು, ತೇಗಿ, ಕಟ್ಟಿದ ಗೋಡೆಯಲ್ಲಿ ಬಿರುಕುಬಿಟ್ಟು ಎಂಥೆಂಥ ಆಧ್ವಾನಗಳಾಗುತ್ತಿದ್ದವೋ ಏನೋ? ಇರಲಿ, ಬ್ರಿಟಿಷರೇನೋ ಕಟ್ಟಿದರು. ಆದರೆ ಅದರೊಳಗೆ ಉಳಿಯುವ ಪುಣ್ಯ ಅವರಿಗೆ ಸಿಗಲಿಲ್ಲ. ಒಂದಿಬ್ಬರು ವೈಸ್‌ರಾಯ್‌ಗಳು ಉಳಿದರೂ ಅವರು ಹೆಚ್ಚು ದಿನ ಅಧಿಕಾರದಲ್ಲಿ ಇರದಿದ್ದರಿಂದ ಈ ಭವನ 'ಖಾಲಿ’ಯಾಗಿತ್ತು. (ಈಗ ಆಗಿದ್ದರೆ ವಾಸ್ತುದೋಷದ ಹಣೆಪಟ್ಟಿ ಹಚ್ಚಿಬಿಡುತ್ತಿದ್ದರು.) ಭಾರತದ ಗವರ್ನರ್‌ ಜನರಲ್‌ ಆಗಿ ಚಕ್ರವರ್ತಿ ರಾಜಗೋಪಾಲಾಚಾರಿ ಅಧಿಕಾರ ಸ್ವೀಕರಿಸಿದಾಗ ರಾಷ್ಟ್ರಪತಿಭವನದೊಳಗೆ ಮೊದಲ ಬಾರಿಗೆ ಹೆಜ್ಜೆಯಿಟ್ಟರು. 1950ರ ಜನವರಿ 26ರಂದು ದೇಶದ ಪ್ರಪ್ರಥಮ ರಾಷ್ಪ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್‌ ಈ ಕಟ್ಟಡದೊಳಗೆ ಪ್ರವೇಶಿಸಿದರು.

ಅಂದಿನಿಂದ ಇಂದಿನ ತನಕ ರಾಷ್ಟ್ರಪತಿ ಭವನ ಹನ್ನೊಂದು ಮಂದಿ ವಾರಸುದಾರರನ್ನು ಕಂಡಿದೆ. ಡಾ. ರಾಜೇಂದ್ರ ಪ್ರಸಾರದರನ್ನು ಬಿಟ್ಟರೆ ಯಾರೂ ಕೂಡ ಎರಡು ಅವಧಿಗೆ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿಲ್ಲದ್ದರಿಂದ ಅತಿ ಹೆಚ್ಚು ದಿನ ಇಲ್ಲಿ ಉಳಿದ ದಾಖಲೆ ಅವರ ಹೆಸರಿನಲ್ಲಿಯೇ ಇದೆ. ಜಕೀರ್‌ ಹುಸೇನ್‌ ಹಾಗೂ ಫಕ್ರುದ್ದೀನ್‌ ಅಲಿ ಮಹಮ್ಮದ್‌ ಅಧಿಕಾರದಲ್ಲಿರುವಾಗಲೇ ನಿಧನರಾಗಿದ್ದರಿಂದ ತಮ್ಮ ಅವಧಿ ಪೂರ್ಣಗೊಳಿಸಲು ಆಗಲಿಲ್ಲ. ಉಳಿದವರೆಲ್ಲ ಒಂದು ಅವಧಿಗೆ ಇದ್ದವರು. ಏನೆಲ್ಲ ಕಸರತ್ತು ನಾರಾಯಣನ್‌ ಪ್ರಯತ್ನಿಸಿದ್ದು, ಏನೆಲ್ಲ ಕಸರತ್ತು ಮಾಡಿ ಎರಡನೆ ಅವಧಿಗೆ ಮುಂದುವರಿಯಲೇಬೇಕೆಂದು ಕೆ.ಆರ್‌. ನಾರಾಯಣನ್‌ ಪ್ರಯತ್ನಿಸಿದ್ದು, ಅದಕ್ಕಾಗಿ ಲಾಬಿ ನಡೆಸಿದ್ದು, ಅದು ವಿಫಲವಾಗಿದ್ದಕ್ಕೆ ವಾಜಪೇಯಿಯವರನ್ನು ದೂಷಿಸಿದ್ದು ಗೊತ್ತಿರುವ ಸಂಗತಿ.

'ಇಂದಿರಾಗಾಂಧಿ ಹೇಳಿದರೆ ಕಸಬರಿಗೆ ಹಿಡಿದು ಸ್ವಚ್ಛಗೊಳಿಸಲು ಸಹ ಸಿದ್ಧ’ ಎಂದ ಗ್ಯಾನಿ ಜೈಲ್‌ಸಿಂಗ್‌, ತನ್ನ ಹೆಸರಿಟ್ಟು ತನಗೆಂದು ನಾಲ್ಕು ಸೈಟು ಕೊಟ್ಟು ತನ್ನಿಂದಲೇ ಆ ಬಡಾವಣೆ ಉದ್ಘಾಟಿಸುವುದಾದರೆ ಬರುತ್ತೇನೆಂದ ವರಾಹಗಿರಿ ವೆಂಕಟಗಿರಿ ಅರ್ಥಾತ್‌ ವಿ.ವಿ.ಗಿರಿ,'ಜೀವನದಲ್ಲಿ ನನಗಿರುವುದೊಂದೇ ಆಸೆ, ಕಾರಣ ನಾನು ಈಗ ಮುಖ್ಯಮಂತ್ರಿ ಆಗಲು ಆಗುವುದಿಲ್ಲ. ಕಾರಣ ಆಗಿದ್ದೇನೆ. ಕೇಂದ್ರ ಮಂತ್ರಿಯಾಗಲು ಸಾಧ್ಯವಿಲ್ಲ. ಕಾರಣ ಅದನ್ನೂ ಅನುಭವಿಸಿದ್ದೇನೆ. ಪ್ರಧಾನಿಯಾಗಲಾರೆ. ಆದರೆ ರಾಷ್ಟ್ರಪತಿಯಾಗಬೇಕೆಂಬುದೇ ನನ್ನ ದೊಡ್ಡ ಕನಸು’ಎಂದ ನೀಲಂ ಸಂಜೀವರೆಡ್ಡಿ, 'ಸಾಯುವುದಕ್ಕಿಂತ ಮುಂಚೆ ರಾಷ್ಟ್ರಪತಿಯಾಗಬೇಕು. ಈ ಆಸೆಯಾಂದನ್ನು ಈಡೇರಿಸಿದರೆ ಧನ್ಯ’ಎಂದು ಹಲ್ಲುಗಿಂಜಿ ಅಧಿಕಾರ ಪಡೆದ ಫಕ್ರುದ್ದೀನ್‌ ಅಲಿ ಅಹಮ್ಮದ್‌ ಮುಂತಾದ ರಾಷ್ಪ್ರಪತಿಗಳನ್ನು ನೋಡಿದ್ದೇವೆ. ಅಧಿಕಾರ ಮುಗಿಯುವುದಕ್ಕೆ ಎರಡು ತಿಂಗಳು ಇರುವಾಗ ಎರಡನೆ ಅವಧಿ ಸಿಗುವುದಿಲ್ಲವೆಂಬುದು ಖಾತ್ರಿಯಾದಾಗ ಗಂಟುಮೂಟೆ ಕಟ್ಟಲು ಆರಂಭಿಸಿ, ಹೀಗೆ ಗಂಟು ಮೂಟೆ ಕಟ್ಟುವಾಗ ರಾಷ್ಪ್ರಪತಿ ಭವನದ ಸಾಮಾನು, ಸರಂಜಾಮು, ಪೀಠೋಪಕರಣಗಳನ್ನೂ ಸೇರಿಸಿ ಕಟ್ಟಿಕೊಂಡು ಹೋದವರನ್ನೂ ನೋಡಿದ್ದೇವೆ. ಅಷ್ಟೂ ಸಾಲದೆಂಬಂತೆ ಅಶೋಕ ಲಾಂಛನವಿರುವ ರಾಷ್ಪ್ರಪತಿ ಭವನದ ಕಪ್ಪು ಸಾಸರ್‌, ಚಮಚ, ಕಾರ್ಪೆಟ್ಟು, ಕರ್ಟನ್‌ಗಳನ್ನು ತುಂಬಿಕೊಂಡು ಹೋದವರ ಬಗ್ಗೆ ನಮಗೆ ಗೊತ್ತು. ಅಧಿಕಾರ ಮುಗಿಸಿ ರಾಷ್ಟ್ರಪತಿ ಭವನ ಖಾಲಿ ಮಾಡುವ ಮುನ್ನ ಇಪ್ಪತ್ತು ಲಾರಿ ತುಂಬಾ ಸಾಮಾನುಗಳನ್ನು ಹೇರಿಕೊಂಡು ಹೋದರೆಂದರೆ ಅವರು ಹೇಗೆ ಬಾಚಿ ಬರಗಿಕೊಂಡರೆಂದು ಊಹಿಸಬಹುದು. ಇಂಥವರನ್ನೆಲ್ಲ ಆ ಲುಟಿನ್ಸ್‌ ಕಟ್ಟಿದ ಭವನ ನೋಡಿ ಸುಮ್ಮನಾಗಿದೆ.

ವಿ.ವಿ.ಗಿರಿ ಬೆಂಗಳೂರಿಗೆ ಬಂದರೆಂದರೆ ಅವರ ಅತಿಥ್ಯಕ್ಕೆಂದೇ ಸಾಲುಹಚ್ಚಿ ನಿಲ್ಲುವವರ ಉದ್ದ ಸಾಲು ಇತ್ತು. ಹೆಂಡತಿಗೆ ಸೀರೆ, ಚಪ್ಪಲಿ, ಮಕ್ಕಳಿಗೆ ಗೆಜ್ಜೆ, ಚೈನು, ಲೋಲಕ್ಕು, ಸುತ್ತಾಡಲು ಕಾರು, ಮನೆಮಂದಿಯೆಲ್ಲ ಥಿಯೇಟರ್‌ನಲ್ಲಿ ಕುಳಿತು ವೀಕ್ಷಿಸಲು ಸಿನಿಮಾ ಟಿಕೆಟ್‌ಗಳನ್ನು ಅವರಿಗೆಂದು ಪೂರೈಸಲು ಜನರೂ ಇದ್ದರು. ಅಂಥ ಜನರಿಗಾಗಿ ಗಿರಿ ಹುಡುಕಾಡುತ್ತಿದ್ದರು. ಯಾವಾಗ ರಾಷ್ಟ್ರಪತಿಯಾದವನು ಈ ಸ್ಥಿತಿಗೆ ಇಳಿದರೆ ಚಮಚಾ 'ಗಿರಿ’ಮಾಡಲು, ಮಸ್ಕಾ'ಗಿರಿ’ ಹೊಡೆಯಲು ಅದೆಷ್ಟು ಮಂದಿ ಸಿಗಲಿಕ್ಕಿಲ್ಲ ? ಒಮ್ಮೆ ಇದೇ ಗಿರಿಯವರು ಅಮೆರಿಕಕ್ಕೆ ಹೋಗಿದ್ದರು. ರೋಲ್ಸ್‌ರಾಯ್ಸ್‌ ಕಾರು ಕಾರ್ಖಾನೆಗೆ ಭೇಟಿ ಕೊಟ್ಟಿದ್ದರು. ಇನ್ನೇನು ಹೊರಡುವ ಮೊದಲು ಕಾರು ಕಂಪನಿ ಮಾಲೀಕ ರಾಷ್ಟ್ರಪತಿಗಳಿಗೆ ನೆನಪಿನ ಕಾಣಿಕೆಯಾಗಿ ಬಂಗಾರದ ಪುಟ್ಟ (ಮಿನಿಯೇಚರ್‌)ರೋಲ್ಸ್‌ ರಾಯ್ಸ್‌ ಕಾರನ್ನು ನೀಡಿದ. ಗಿರಿಯವರಿಗೆ ಅದೆಂಥ ಆಸೆ ಉಕ್ಕಿ ಬಂತೋ ಏನೋ, ಮಾನ ಮರ್ಯಾದೆ ಬಿಟ್ಟು' ಇಂಥ ಇನ್ನೊಂದು ಕಾರನ್ನು ಕೊಡ್ತೀರಾ? ನನಗೆ ತುಂಬಾ ಇಷ್ಟ ಆಯಿತು’ ಎಂದು ಕೇಳಿಯೇ ಬಿಟ್ಟರು. ಇಂಥವರ ಯೋಗ್ಯತೆಯನ್ನು ಹೇಗೆ ಅಳೆಯಬೇಕೆಂದು ರೋಲ್ಸ್‌ರಾಯ್ಸ್‌ ಕಾರಿನ ಮಾಲೀಕನಿಗೆ ಗೊತ್ತಾಗದಿದ್ದರೆ ಆತ ಕಾರನ್ನು ತಯಾರಿಸುವ ದಂಧೆ ಬಿಟ್ಟು ಗುಜರಿ ಕೆಲಸ ಮಾಡುತ್ತಿದ್ದ. ' ಸರಿ ಒಂದು ಕೆಲಸ ಮಾಡುತ್ತೇನೆ. ಇನ್ನೊಂದು ಕಾರನ್ನು ನಿಮಗೆ(ಹಿಂದಾಗಡೆಯಿಂದ) ಕಳಿಸಿಕೊಡುತ್ತೇನೆ. ಈಗ ಸ್ಟಾಕ್‌ಇಲ್ಲ’ ಎಂದ. ಗಿರಿ ಅವರಿಗೆ ಏನೂ ಅನಿಸಲಿಲ್ಲ. ಹುಳಿನಗೆ ನಕ್ಕು ಬಂದರು.

ಇದೇ ಗಿರಿ ಯಾವುದೇ ಊರಿಗೆ ಹೋದರೂ ಅಲ್ಲಿ ಸಿಗುವ ಉತ್ತಮ ಸಾಮಾನುಗಳನ್ನು ಒಯ್ಯುವುದನ್ನು ಚಟ ಮಾಡಿಕೊಂಡಿದ್ದರು. ಅವರನ್ನು ಸಂಪ್ರೀತಗೊಳಿಸಲು, ಚಮಚಾ'ಗಿರಿ’ಮಾಡಲು ಜನರೂ ಮುಗಿಬಿದ್ದು ರಾಷ್ಟ್ರಪತಿಗಳಿಗೆ 'ನಮ್ಮೂರಿನ ಈರುಳ್ಳಿ ಚೆನ್ನಾಗಿರುತ್ತದೆ ತಗೊಳ್ಳಿ, ಬಳ್ಳೊಳ್ಳಿ ಚೆನ್ನಾಗಿರುತ್ತದೆ ತಗೊಳ್ಳಿ’ ಎಂದು ಅವರಿಗೆ ಕೊಡುತ್ತಿದ್ದರೆ ಗಿರಿ ಅವರ ಸಡಗರ 'ಗರಿ’ ಗೆದರಿ ಹಾರುತ್ತಿತ್ತು. ಜನರ ಪ್ರೀತಿಯನ್ನು ತಿರಸ್ಕರಿಸದ ಮನೋಭಾವ ಅವರದಾಗಿತ್ತು.

ರಾಷ್ಟ್ರಪತಿಭವನದೊಳಗೆ ಮದ್ಯಸೇವನೆ ನಿಷಿದ್ಧ. ವಿದೇಶಿ ಗಣ್ಯರು ಆಗಮಿಸಿದಾಗ ನಮ್ಮ ರಾಷ್ಟ್ರಪತಿಗಳು ಏರ್ಪಡಿಸುವ ಔತಣಕೂಟಗಳಲ್ಲಿ ಸಹ ಮದ್ಯ 'ಸರಬರಾಜು’ಸುತಾರಾಂ ಇಲ್ಲ. ಇದು ಮೊದನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಹಗಲು, ರಾತ್ರಿ ಮದ್ಯಸೇವನೆಯಲ್ಲಿ ನಿರತರಾದವರನ್ನು ಸಹ ರಾಷ್ಟ್ರಪತಿಭವನ ಕಂಡಿದೆ. ಪ್ರತಿದಿನ ಸ್ನೇಹಿತರು, ನೆಂಟರು, ಪರಿವಾರದವರನ್ನೆಲ್ಲ ಕರೆದು ತಿಂದು ತೇಗಿ ಮೋಜು ಉಡಾಯಿಸಿದವರನ್ನು, ತಮ್ಮ ಖಾಸಗಿ ಅಡ್ಡೆಗಳಾಗಿ ಮಾಡಿಕೊಂಡವರನ್ನು, ವಿದೇಶ ಪ್ರವಾಸದಲ್ಲಿ ಹೆಂಡತಿ, ಮಕ್ಕಳು, ಬಂಧು ಬಳಗ ಕಟ್ಟಿಕೊಂಡು, ಅದೇ ವೇಳೆ ಹೆಂಡತಿಯ ಆರೋಗ್ಯ ತಪಾಸಣೆಯನ್ನು ವಿದೇಶಿ ವೈದ್ಯರಿಂದ ಮಾಡಿಸಿಕೊಂಡು ಸರಕಾರದ ಖರ್ಚಿನಲ್ಲಿ ಸ್ವಕಾರ್ಯ, ಸ್ವಪತ್ನಿ ಕಾರ್ಯ ಮಾಡಿಸಿಕೊಂಡವರನ್ನು ನಾವು ನೋಡಿದ್ದೇವೆ. ನೋಡುತ್ತಾ ಕಣ್ಣುಗಳನ್ನು ಮುಚ್ಚಿಕೊಂಡಿದ್ದೇವೆ. ಸಂದೇಹ ಬೇಡ, ಹಾಗೆಯೇ ಇರುತ್ತೇವೆ.

ಈ ಎಲ್ಲ ಅಪಸವ್ಯಗಳ ನಡುವೆ ಆಸೆ ಜೀವಂತವಾಗಿದೆ.

ಕಾರಣ ನಮ್ಮೊಂದಿಗೆ ಡಾ. ಅವುಲ್‌ ಫಕೀರ್‌ಜೈನುಲಬ್ದೀನ್‌ ಅಬ್ದುಲ್‌ ಕಲಾಂ ಇದ್ದಾರೆ. ಈ 75ರ ತಾರುಣ್ಯದಲ್ಲೂ ದಿನಕ್ಕೆ 18-20ತಾಸು ಕೆಲಸ ಮಾಡುವ, ಮಾಡುವ ಕೆಲಸವನ್ನೆಲ್ಲವನ್ನೂ ದೇಶಕ್ಕಾಗಿಯೇ ಮಾಡುವ, ಗುಬ್ಬಿನಿದ್ದೆ, ಗುಬ್ಬಿ ಆಹಾರದಿಂದ ಜೀವಿಸುವ ಅಪ್ಪಟ ನಿಸ್ವಾರ್ಥಿ, ಕರ್ಮಯೋಗಿ ಡಾ. ಕಲಾಂ ರಾಷ್ಟ್ರಪತಿ ಭವನದಲ್ಲಿದ್ದಾರೆ. ನಮ್ಮ ನಡುವೆ ಒಬ್ಬ ಆದರ್ಶ ವ್ಯಕ್ತಿಗಾಗಿ ಹುಡುಕಾಡುತ್ತಿದ್ದರೆ ಡಾ.ಕಲಾಂ ಮುಂದೆ ಹೋಗಿ ನಿಲ್ಲಬಹುದು.

ನಾಲ್ಕು ರಾಷ್ಟ್ರಗಳಲ್ಲಿ ಹದಿನಾಲ್ಕು ದಿನಗಳ ಕಾಲ ಅವರನ್ನು ಅತಿ ಸನಿಹದಿಂದ ನೋಡುವ ಸದವಕಾಶ ಸಿಕ್ಕಿತ್ತು. ಹಿಂದಿನ ಕೆಲವು ರಾಷ್ಟ್ರಪತಿಗಳ ಚಿತ್ರಣವೇ ಮನಸ್ಸಿನಲ್ಲಿ ಇನ್ನೂ ಗಾಢವಾಗಿ ಆಕ್ರಮಿಸಿರುವಾಗ ರಾಷ್ಟ್ರಪತಿ ಭವನವೆಂಬ ಅರಮನೆಯಾಳಗೆ ಕುಳಿತ ವ್ಯಕ್ತಿ ಇವರೇನಾ ಎಂದೆನಿಸಿತು.

ನಾನು ಕಂಡ ಡಾ. ಕಲಾಂ ಅವರನ್ನು ನಿಮಗೆ ತೋರಿಸಬೇಕು. ಅದಕ್ಕಾಗಿ ನೀವು ಸ್ವಲ್ಪ ಕಾಯಬೇಕು. (ಸ್ನೇಹಸೇತು : ವಿಜಯ ಕರ್ನಾಟಕ)

English summary
Rashtrapati Bhavan is the official residence of the President of India, located in New Delhi. Until 1950 it was known as Viceroys House. Thatskannada Columnist Visweshwara bhat analyses Dignity of Rashtrapati Bhavan and Presidents of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X