ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣ ಹೋಗುವುದೆಂದು ತಿಳಿದ ನಂತರವೂ ಆತ ಪ್ರಾಮಾಣಿಕತೆ ಬಿಡಲಿಲ್ಲ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ನಮ್ಮ ದೇಶದಲ್ಲಿ ಮಾತ್ರ ಹೀಗೆಲ್ಲ ಆಗೋದು ಸಾಧ್ಯ. ಅನ್ಯಾಯದ ವಿರುದ್ಧ ಹೋರಾಡಿದ್ದಕ್ಕೆ, ದಕ್ಷತೆ ಮೆರೆದಿದ್ದಕ್ಕೆ, ಪ್ರಾಮಾಣಿಕವಾಗಿ ನಡೆದುಕೊಂಡಿದ್ದಕ್ಕೆ ಒಂದು ಜೀವ ಪ್ರಾಣ ತೆತ್ತಿದೆ! ಕರ್ನಾಟಕವೇನು ಇಡಿ ದೇಶವೇ ಹೆಮ್ಮೆ ಪಡಬಹುದಾದ ಒಬ್ಬ ದಕ್ಷ ಅಧಿಕಾರಿ, ರಾಜಕಾರಣಿಗಳ ಕೃಪಾಪೋಷಿತ ಕ್ರಿಮಿನಲ್‌ಗಳಿಗೆ ಬರ್ಬರವಾಗಿ ಬಲಿಯಾಗಿದ್ದಾನೆ.

ಇಪ್ಪತ್ತೇಳರ ಹರೆಯದ ಮಂಜುನಾಥನ್‌ ಷಣ್ಮುಗನ್‌ಗೆ ನಿಷ್ಠೆಯಿಂದ ಕೆಲಸ ಮಾಡಿದ್ದೇ, ತಾನು ನಂಬಿದ ಮೌಲ್ಯಗಳಿಗೆ ಅಂಟಿಕೊಂಡಿದ್ದೇ ಮುಳುವಾಯಿತು. ಆತನೇನಾದರೂ ಭ್ರಷ್ಟರೊಂದಿಗೆ ಷಾಮೀಲಾಗಿದ್ದರೆ ಕೈತುಂಬಾ ಹಣ ಸಂಪಾದಿಸಬಹುದಿತ್ತು. ಕ್ರಿಮಿನಲ್‌ಗಳೊಂದಿಗೆ ಕೈ ಜೋಡಿಸಿದ್ದರೆ, ಅವರ ದಂಧೆಗೆ ಅಡ್ಡ ಬರದಿದ್ದರೆ, ತಿಂಗಳಿಗೆ ಇಂತಿಷ್ಟು ಅಂತ ಹಣ ಬಂದು ಬೀಳುತ್ತಿತ್ತು. ಆಗ ಆತ ಸಾಲದಲ್ಲಿ ಕಾರು ಖರೀದಿಸಿದ್ದಕ್ಕೆ ತಿಂಗಳಿಗೆ ಕಂತು ಕಟ್ಟುವ ತಲೆನೋವು ಇರುತ್ತಿರಲಿಲ್ಲ. ಈ ಎಲ್ಲ ಆಮಿಷಗಳಿಗೆ ಆತ ‘ಒಲ್ಲೆ’ ಅಂದಿದ್ದೇ ಯಡವಟ್ಟಾಯಿತು. ಅದಕ್ಕಿಂತ ಹೆಚ್ಚಾಗಿ ಆತ ಕ್ರಿಮಿನಲ್‌ಗಳ ವಿರುದ್ಧವೇ ಹೋರಾಟಕ್ಕೆ ನಿಂತ. ಅದೇ ತಪ್ಪಾಯಿತು.

ದಕ್ಷತೆ, ಪ್ರಾಮಾಣಿಕತೆ ಸತ್ತು ಬಿತ್ತು !

S.Manjunathಕೋಲಾರದ ಬೆಮೆಲ್‌ನಲ್ಲಿ ಡಿಸೈನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿರುವ ಎಂ.ಷಣ್ಮುಗನ್‌ ಅವರ ಮೂವರು ಮಕ್ಕಳ ಪೈಕಿ ಹಿರಿಯವನಾದ ಮಂಜುನಾಥನ್‌ ಬುದ್ಧಿವಂತ. ಅದಕ್ಕಿಂತ ಮುಖ್ಯವಾಗಿ ಸತ್ಯ, ನಿಷ್ಠೆ, ಮೌಲ್ಯಗಳನ್ನು ಗೌರವಿಸುವವ. ಅದಕ್ಕಾಗಿ ಏನು ಬೇಕಾದರೂ ಮಾಡುವ ಕರ್ಮಠಸ್ಥ. ಮೈಸೂರಿನ ಜೆಎಸ್‌ಎಸ್‌ನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ಪದವಿ ಮುಗಿಸಿ ಲಖನೌ ಐಐಎಂನಲ್ಲಿ ಎಂಬಿಎ ಪಡೆದ. ತಂದೆಗೆ ಹೊರೆಯಾಗದೇ ಬ್ಯಾಂಕ್‌ ಸಾಲ ಪಡೆದು ಪೂರ್ತಿ ವಿದ್ಯಾಭ್ಯಾಸ ಮುಗಿಸಿದ. ಇನ್ನೇನು ಎಂಬಿಎ ಮುಗಿಯುತ್ತಿದ್ದಂತೆ ‘ಕ್ಯಾಂಪಸ್‌ ಇಂಟರ್‌ವ್ಯೂ’ದಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌(ಐಓಸಿಎಲ್‌)ನಲ್ಲಿ ಸೇಲ್ಸ್‌ ಮ್ಯಾನೇಜರನ ಕೆಲಸ ಸಿಕ್ಕಿತು.

ಲಖನೌದಿಂದ 170ಕಿ.ಮೀ ದೂರದಲ್ಲಿರುವ ಲಖೀಮ್‌ಪುರ- ಖೇರಿ ಪ್ರದೇಶಕ್ಕೆ ಅವನನ್ನು ಕಳಿಸಲಾಯಿತು. ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲಿ ಮಂಜುನಾಥನ್‌ಗೆ, ತಾನೆಂಥ ವಿಷವರ್ತುಲದಲ್ಲಿದ್ದೇನೆಂಬ ಅಂಶ ಗೊತ್ತಾಯಿತು. ಈ ಪ್ರದೇಶದಲ್ಲಿನ ಬಹುತೇಕ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಕಲಬೆರಕೆ ರಾಜಾರೋಷ ನಡೆಯುತ್ತಿರುವುದು ಮಂಜುನಾಥ್‌ ಗಮನಕ್ಕೆ ಬಂತು. ಆತ ಈ ಕಾಳದಂಧೆಯ ಸಮಗ್ರ ಜಾಲವನ್ನು ತಿಳಿದುಕೊಂಡ. ಐಓಸಿಎಲ್‌ನ ಅಧಿಕಾರಿಗಳೂ ಪೆಟ್ರೋಲ್‌ ಬಂಕ್‌ ಮಾಲೀಕರೊಂದಿಗೆ ಕೈ ಜೋಡಿಸಿದ್ದರಿಂದ ಈ ಕಲಬೆರಕೆ ವ್ಯಾಪಾರ ಸಲೀಸಾಗಿ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಡೀಸೆಲ್‌ಗೆ ಬಹಿರಂಗವಾಗಿ ಸೀಮೆಎಣ್ಣೆಯನ್ನು ಬೆರೆಸಿ ಕಡಿಮೆ ಹಣಕ್ಕೆ ಮಾರುತ್ತಿದ್ದರು. ವಾಹನ ಚಾಲಕರು ತಮ್ಮ ಮಾಲೀಕರಿಗೆ ಮೋಹ ಮಾಡಲು ಇಂಥ ಬಂಕ್‌ಗಳಲ್ಲೇ ಡೀಸೆಲ್‌ ತುಂಬಿಕೊಳ್ಳುತ್ತಿದ್ದರು.

ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಂಜುನಾಥನ್‌ ಇಡೀ ಸಮಸ್ಯೆಯನ್ನು ಅಭ್ಯಸಿಸಿದ. ಒಂದು ಲೀಟರ್‌ ಡೀಸೆಲ್‌ಗೆ 32ರೂ. ಅದೇ ಸೀಮೆಎಣ್ಣೆಗೆ 10ರೂ. ಉದಾಹರಣೆಗೆ 600 ಲೀಟರ್‌ ಡೀಸೆಲ್‌ಗೆ 400ಲೀಟರ್‌ ಸೀಮೆಎಣ್ಣೆ ಬೆರೆಸಿದರೆ ಡೀಲರ್‌ಗೆ 9,500ರೂ ಸಿಗುತ್ತದೆ. ಅದೇ ಆತ ಶುದ್ಧ ಡೀಸೆಲ್‌ ಮಾರಿದರೆ ಸಿಗುವುದು ಕೇವಲ ಐನೂರು ರೂ.! ಒಂದು ಬಂಕ್‌ನಲ್ಲಿ ಪ್ರತಿದಿನ ಐನೂರು ಲೀಟರ್‌ ಕಲಬೆರಕೆ ಡೀಸೆಲ್‌ ಮಾರಿದರೆ ವರ್ಷಕ್ಕೆ ಏನಿಲ್ಲವೆಂದರೂ 16ಲಕ್ಷ ರೂ. ಗಿಟ್ಟಿಸಬಹುದು. ಆದರೆ ಯಾವುದೇ ಬಂಕ್‌ನಲ್ಲಿ ಪ್ರತಿನಿತ್ಯ ಎರಡು ಸಾವಿರ ಲೀಟರ್‌ಗಿಂತ ಕಡಿಮೆ ಮಾರಾಟವಾಗುವುದಿಲ್ಲ. ಅಂದರೆ ಕಲಬೆರಕೆ ಇಂಧನ ಮಾರುವ ಬಂಕ್‌ ಮಾಲೀಕನಿಗೆ 64ಲಕ್ಷ ರೂ. ನಂತೆ ಪ್ರತಿ ವರ್ಷ ನಿವ್ವಳ ಕಿಸೆಗೆ. ಇದರಲ್ಲಿ ಆತ ಇಂತಿಷ್ಟು ಅಂತ ಐಓಸಿಎಲ್‌ ಅಧಿಕಾರಿಗೆ ತೆಗೆದಿಡುತ್ತಾನೆ. ಇದು ಕೇವಲ ಒಂದು ಬಂಕ್‌ನ ಕತೆ.

ಒಬ್ಬ ಅಧಿಕಾರಿಯ ಕಕ್ಷೆಯಾಳಗೆ ಏನಿಲ್ಲವೆಂದರೂ ಕನಿಷ್ಠ ಒಂದು ಸಾವಿರ ಬಂಕ್‌ಗಳು ಬರುತ್ತದೆ. ಅಂದರೆ ಯಾವ ಪ್ರಯಾಣದಲ್ಲಿ ಈ ಕರಾಳ ದಂಧೆ ನಡೆಯುತ್ತಿರಬಹುದು ಊಹಿಸಿ. ಮೇಲ್ನೋಟಕ್ಕೆ ಇದು ಡೀಸೆಲ್‌ಲನಲ್ಲಿ ಸೀಮೆಎಣ್ಣೆ ಬೆರೆಸುವ ದಂಧೆ, ಅದೇನು ಮಹಾ ಎಂದು ಅನಿಸಿದರೂ, ಒಳಹೊಕ್ಕು ನೋಡಿದರೆ ಇದೊಂದು ಸಾವಿರಾರು ಕೋಟಿ ರೂ.ಗಳ ಕರ್ಮಕಾಂಡ. ಮಂತ್ರಿ, ರಾಜಕಾರಣಿ, ಅಧಿಕಾರಿಗಳು, ಕ್ರಿಮಿನಲ್‌ಗಳು, ಗೂಂಡಾಗಳು, ಬಂಕ್‌ ಮಾಲೀಕರ ಭ್ರಷ್ಟಾತಿಭ್ರಷ್ಟ ವಿಷವರ್ತುಲ. ಇದರಲ್ಲಿ ಇವರೆಲ್ಲರ ‘ಸಹಭೋಜನ’! ಹೀಗಾಗಿ ಈ ವ್ಯವಹಾರ ಇಷ್ಟೊಂದು ವ್ಯವಸ್ಥಿತವಾಗಿ, ನಿರಾತಂಕವಾಗಿ ನಡೆಯುತ್ತಿದೆ. ಯಾರಾದರೂ ಕಮಕ್‌-ಕಿಮಕ್‌ ಅಂದ್ರೆ ಖಚಕ್‌. ಅಷ್ಟೊಂದು ‘ನಿಯತ್ತು’ ಈ ದಂಧೆಯಲ್ಲಿ.

ಮಂಜುನಾಥನ್‌ ಈ ವಿಷ ವರ್ತುಲದೊಳಗೆ ಕೈ ಹಾಕಿದ್ದ. ಯಾವಾಗ ಈ ಅವ್ಯವಹಾರದ ಸಮಗ್ರ ದರ್ಶನವಾಯಿತೋ, ಆತ ಕಾರ್ಯಾಚರಣೆಗೇ ಇಳಿದ. ಎರಡು ಬಂಕ್‌ಗಳಿಗೆ ನೋಟಿಸ್‌ ನೀಡಿದ. ಕೆಲವು ಬಂಕ್‌ಗಳನ್ನು ಬಂದ್‌ ಮಾಡಿದ. ಲೈಸೆನ್ಸ್‌ ರದ್ದು ಮಾಡುವುದಾಗಿ ಬೆದರಿಕೆ ಹಾಕಿದ. ಈ ಮಧ್ಯೆ ಒಂದು ಬಂಕ್‌ ಪುನಾರಂಭವಾದಾಗ ಆತ ಹಠಾತ್‌ ಪರೀಕ್ಷೆ ಮಾಡಲು ಅಲ್ಲಿಗೆ ಹೋದಾಗ, ಬಂಕ್‌ನ ಮಾಲೀಕನ ಮಗ ತನ್ನ ಸ್ನೇಹಿತರ ಹಾಗೂ ಬಾಡಿಗೆ ಗೂಂಡಾಗಳ ನೆರವಿನಿಂದ ಮಂಜುನಾಥನ್‌ಗೆ ಹಿಗ್ಗಾಮುಗ್ಗಾ ಥಳಿಸಿ ಅನಂತರ ಗುಂಡು ಹೊಡೆದು ಸಾಯಿಸಿದ.

ಮಂಜುನಾಥನ್‌ಗೆ ತನ್ನ ಹಿಂದೆ ಸಾವು ಹಿಂಬಾಲಿಸುವುದರ ಸ್ಪಷ್ಟ ಅರಿವಿತ್ತು. ತನ್ನ ಸ್ನೇಹಿತರು, ತಂದೆ, ತಮ್ಮನ ಮುಂದೆ ತಾನೆಂಥ ಅಪಾಯದಲ್ಲಿದ್ದೇನೆಂಬುದನ್ನು ಹೇಳಿಕೊಂಡಿದ್ದ. ಈ ಕ್ರಿಮಿನಲ್‌ಗಳನ್ನು ಬಗ್ಗುಬಡಿದು ಬುದ್ದಿ ಕಲಿಸುವುದಾಗಿ ಹೇಳುತ್ತಿದ್ದ. ತನ್ನ ಹಿರಿಯ ಅಧಿಕಾರಿಗಳ ಮುಂದೆ ಸಹ ಈ ಸಂಗತಿಯನ್ನು ಹೇಳಿದ್ದ. ಇವರೆಲ್ಲ ಮಂಜುನಾಥನ್‌ಗೆ ‘ ಸುಮ್ಮನೆ ಯಾಕೆ ಅಪಾಯವನ್ನು ಆಹ್ವಾನಿಸುತ್ತೀಯಾ? ನಿನ್ನ ಪಾಡಿಗೆ ನೀನು ಇರಬಾರದಾ?’ಎಂದು ಕಿವಿಮಾತು ಹೇಳಿದ್ದರು. ಆದರೆ ಮಂಜುನಾಥನ್‌ ಕೇಳಲಿಲ್ಲ. ಏನೇ ಆದರೂ ಸತ್ಯ, ನ್ಯಾಯಕ್ಕೆ ಅಪಚಾರ ಮಾಡುವುದಿಲ್ಲವೆಂದು ಹಠ ಹಿಡಿದಿದ್ದ. ಜೀವಕ್ಕೆ ಅಪಾಯವಿರುವುದು ಗೊತ್ತಿದ್ದೂ ರಾಜಿಯಾಗಲಿಲ್ಲ, ಹಿಂದೆ ಸರಿಯಲಿಲ್ಲ.

ಈ ದೇಶದಲ್ಲಿ ಅನ್ಯಾಯದ ವಿರುದ್ಧ ಹೋರಾಡುವುದೇ ತಪ್ಪಾ ? ಮೌಲ್ಯಗಳನ್ನು ಪ್ರತಿಪಾದಿಸುವುದೇ ತಪ್ಪಾ ? ಪ್ರಾಮಾಣಿಕ, ನಿಷ್ಠಾವಂತರಿಗೆ ಕಾಲವೇ ಇಲ್ಲವಾ ? ಭ್ರಷ್ಟರು, ಕ್ರಿಮಿನಲ್‌ಗಳ ವಿರುದ್ಧ ದನಿಯೆತ್ತುವುದೇ ಅಪರಾಧವೆಂದಾದರೆ ಸಮಾಜದ ಅನಿಷ್ಟ, ಅಕ್ರಮ, ಅವ್ಯವಹಾರಗಳನ್ನು ನಿಯಂತ್ರಿಸುವವರಾರು ? ಮಂಜುನಾಥನ್‌ ಹತ್ಯೆ ಪ್ರಕರಣದಿಂದ ನಮ್ಮ ಮಕ್ಕಳಿಗೆ ಯಾವ ಸಂದೇಶ ಹೋದೀತು? ಸ್ವಲ್ಪ ಯೋಚಿಸಬೇಕು.

Satyendra Dubeyಆ ನೆನಪು ಇನ್ನೂ ಮಾಸಿಲ್ಲ. ಒಂದೂವರೆ ವರ್ಷದ ಹಿದೆ ನಡೆದ ಸತ್ಯೇಂದ್ರ ದುಬೆ ಕೊಲೆ. ಮಂಜುನಾಥನ್‌ನಂತೆ ದುಬೆ ಸಹ ಆದರ್ಶ, ಮೌಲ್ಯ, ತತ್ವಗಳನ್ನಿಟ್ಟುಕೊಂಡ ಅಪರೂಪದ ಯುವ ಅಧಿಕಾರಿ. ಐಐಟಿ ಕಾನ್‌ಪುರದಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದ. 55 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿ ನಿರ್ವಹಣೆಯನ್ನು ದುಬೆಗೆವಹಿಸಲಾಗಿತ್ತು. ಅಂದಿನ ಪ್ರಧಾನಿ ವಾಜಪೇಯಿಯವರ ಮಹತ್ವಾಕಾಂಕ್ಷೆಯ ಯೋಜನೆಯಿದು. ಗುತ್ತಿಗೆದಾರರ ಜತೆ ಕಣ್ಣನ್ನು ಅರ್ಧ ಮಿಟುಕಿದ್ದರೆ ಕೋಟಿ ಕೋಟಿ ಮೊಗೆದುಬಿಡಬಹುದಿತ್ತು.

ದುಬೆಯನ್ನು ಸೆಳೆಯಲು ಗುತ್ತಿಗೆದಾರರು ಇನ್ನಿಲ್ಲದ ಆಮಿಷಗಳನ್ನೊಡ್ಡಿದರು. ದುಬೆ ಜಗ್ಗಲಿಲ್ಲ. ಪ್ರಾಧಿಕಾರದ ಅಧಿಕಾರಿಗಳು ಗುತ್ತಿಗೆದಾರರ ಜತೆ ಷಾಮೀಲಾಗಿರುವುದನ್ನು ಪ್ರತಿಭಟಿಸಿದ. ಇಷ್ಟಾದರೂ ಅವ್ಯವಹಾರ ನಿಲ್ಲಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಭ್ರಷ್ಟಾಚಾರದ ಎಳೆ ಎಳೆಯನ್ನು ಬಿಡಿಸಿಟ್ಟು ಪ್ರಧಾನಿಯವರಿಗೇ ಪತ್ರ ಬರೆದ. ಅವರೇನಾದರೂ ತಕ್ಷಣ ಕ್ರಮ ಜರುಗಿಸಬಹುದೆಂದು ಕಾಯುತ್ತಾ ಕುಳಿತ. ಪ್ರಧಾನಿ ಕಚೇರಿಯಲ್ಲಿ ಕುಳಿತ ಅದ್ಯಾವನೋ ಭ್ರಷ್ಟ ಅಧಿಕಾರಿ, ವಾಜಪೇಯಿಗೆ ದುಬೆ ಬರೆದ ಪತ್ರ ಹಾಗೂ ಅದರ ಪರಿಣಾಮದ ಬಗ್ಗೆ ಗಯಾದಲ್ಲಿನ ಗುತ್ತಿಗೆದಾರರಿಗೆ ಹಾಗೂ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ.

ಕಂಗಾಲಾದ ಈ ಕ್ರಿಮಿನಲ್‌ ಕೂಟ, ದುಬೆ ಹತ್ಯೆಗೆ ಸಂಚು ರೂಪಿಸಿತು. ಅದೇ ಕೊನೆ. ದುಬೆ ಗುಂಡಿಗೆ ಬಲಿಯಾದ. ದುಬೆ ಹತ್ಯೆಗೆ ದೇಶವ್ಯಾಪಿ ಪ್ರತಿಭಟನೆಗಳು ಕೇಳಿಬಂದವು. ಕೇಂದ್ರ ಸರಕಾರ ಒತ್ತಡಕ್ಕೆ ಮಣಿದು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು. ಇತ್ತೀಚೆಗೆ ಸಿಬಿಐ ಒಂದು ವರ್ಷದ ತನಿಖೆಯ ಬಳಿಕ ವರದಿ ಸಲ್ಲಿಸಿತು. ಅದರ ಸಾರಾಂಶ- ದುಬೆ ಹತ್ಯೆಯಲ್ಲಿ ಗುತ್ತಿಗೆದಾರರಾಗಲಿ, ಪ್ರಾಧಿಕಾರದ ಅಧಿಕಾರಿಗಳಾಗಲಿ ಭಾಗಿಯಾಗಿಲ್ಲ. ಹೆದ್ದಾರಿ ದರೋಡೆಕೋರರ ಗುಂಡಿಗೆ ದುಬೆ ಬಲಿಯಾಗಿದ್ದಾನೆ. ಎಂಥ ವಿಚಿತ್ರ ನೋಡಿ. ಕಳ್ಳನನ್ನು ಹಿಡಿಯಲು ಕಳಿಸಿದ ಪೊಲೀಸನೇ ಕಳ್ಳನಾದ ಕತೆಯಂತಿದೆ ದುಬೆ ಹತ್ಯೆ ಪ್ರಕರಣ ತನಿಖೆ. ಈ ಬಗ್ಗೆ ಪುನಃ ತನಿಖೆಯಾಗಬೇಕೆಂದು ಕೂಗು ಕೇಳಿಬರುತ್ತಿದ್ದರೂ ಲಜ್ಜೆಗೇಡಿ ಸರಕಾರ ಸುಮ್ಮನೆ ಕುಳಿತಿದೆ.

ಈ ಇಬ್ಬರು ಹತ್ಯೆಗಳಲ್ಲಿ ಸಾಮ್ಯವಿದೆ. ಇವರಿಬ್ಬರೂ ಪ್ರಾಮಾಣಿಕತೆಗಾಗಿ ಕರ್ತವ್ಯನಿರತರಾಗಿದ್ದಾಗಲೇ ಪ್ರಾಣತೆತ್ತಿದ್ದಾರೆ. ತಮ್ಮ ಪ್ರಾಣಕ್ಕೆ ಅಪಾಯವಿರುವುದನ್ನು ಚೆನ್ನಾಗಿ ಅರಿತೂ ಭ್ರಷ್ಟರ ವಿರುದ್ಧ ನಡೆಸಿದ ಹೋರಾಟಕ್ಕೆ ಜೀವ ತೆತ್ತಿದ್ದಾರೆ. ವ್ಯವಸ್ಥೆಯಾಂದಿಗೆ ರಾಜಿ ಮಾಡಿಕೊಳ್ಳದ ತಮ್ಮ ಹಠಕ್ಕೆ ಕಟ್ಟುಬಿದ್ದು ಹತರಾಗಿದ್ದಾರೆ. ದುರ್ದೈವವೆಂದರೆ ಇದೇ ಅವರಿಬ್ಬರೂ ಎಸಗಿದ ಅಪರಾಧ! ಪ್ರಾಮಾಣಿಕ, ಸರಕಾರಿ ಅಧಿಕಾರಿಗಳಾಗಿರುವುದು ಎಷ್ಟು ಅಪಾಯಕಾರಿ ನೋಡಿ.

ಇಡಿ ವ್ಯವಸ್ಥೆ ಹೊಲಸಿನಿಂದ ನಾರುತ್ತಿರುವಾಗ, ಭ್ರಷ್ಟತೆಯಿಂದ ತುಂಬಿ ತುಳುಕುತ್ತಿರುವಾಗ ದುಬೆಯಂಥ, ಮಂಜುನಾಥನ್‌ನಂಥ ನಿಸ್ಪೃಹ, ಛಲವಂತ ಅಧಿಕಾರಿಗಳು ಆದರ್ಶಗಳ ಬಫೂನ್‌ಗಳಂತೆ, ಮೌಲ್ಯ ಪ್ರತಿಪಾದನೆಯ ಮೂರ್ಖರಂತೆ ಕಾಣುವುದು ಸಹಜ. ಭ್ರಷ್ಟರೊಂದಿಗೆ ಕೈ ಜೋಡಿಸಿದ್ದರೆ ಅಥವಾ ತಮ್ಮ ಮುಂದೆ ನಡೆಯುವುದನ್ನೆಲ್ಲ ನೋಡುತ್ತಾ ಕಣ್ಮುಚ್ಚಿ ತೆಪ್ಪಗೆ ಕುಳಿತಿದ್ದರೆ, ಇವರು ಸುಖವಾಗಿರಬಹುದಿತ್ತು. ಜೀವನವಿಡೀ ಹಾಯಾಗಿರಬಹುದಿತ್ತು. ಲೈಫನ್ನು ಸಕತ್ತಾಗಿ ಎಂಜಾಯ್‌ ಮಾಡಬಹುದಿತ್ತು. ಮೇಲಧಿಕಾರಿಗಳ ಪ್ರೀತಿಗೆ ಪಾತ್ರವಾಗಿ ಪ್ರಮೋಶನ್‌ ಪಡೆಯಬಹುದಿತ್ತು. ಬೇಕಾದ ಊರಿಗೆ ವರ್ಗ ಮಾಡಿಸಿಕೊಂಡು ಅಲ್ಲೆಲ್ಲ ಬೇಕಷ್ಟು ಆಸ್ತಿ ಮಾಡಿಕೊಂಡು ಐಷಾರಾಮಿ ಜೀವನ ಸಾಗಿಸಬಹುದಿತ್ತು. ಮೂರ್ಖರು, ಬುದ್ಧಿಗೇಡಿಗಳು ! ಯಾರು ಎಂದೋ ಹೇಳಿದ ಕೆಲಸಕ್ಕೆ ಬಾರದ ತತ್ವ, ನಂಬಿಕೆ, ಆದರ್ಶ, ಸಿದ್ಧಾಂತ ಪಾಲಿಸಲು ಹೋಗಿ ಪ್ರಾಣ ಕಳೆದುಕೊಳ್ಳುವುದುಂಟಾ? ಇಷ್ಟಾಗಿಯೂ ಅವರು ಈಗ ಸಾಧಿಸಿದ್ದೇನು? ಇವರು ಪ್ರಾಣ ತೆತ್ತಾಕ್ಷಣ ವ್ಯವಸ್ಥೆಯೇನು ಸರಿ ಹೋಗುತ್ತಾ?

ಹಾಗಂತ ಕೇಳುವವರಿದ್ದಾರೆ. ಮೇಲಿಂದ ಮೇಲೆ ಇಂಥ ನಿಯತ್ತಿನ ಅಧಿಕಾರಿಗಳು ಕೊಲೆಯಾಗುವಂತಾದರೆ, ಕಿರುಕುಳ, ಹಿಂಸೆ ಅನುಭವಿಸುವಂತಾದರೆ, ಎಲ್ಲೋ ಮನದ ಹಿತ್ತಲಮನೆಯಲ್ಲಿ ಈ ಪ್ರಶ್ನೆಗಳ ಪಾಪಾಸುಕಳ್ಳಿ ಬೆಳೆಯದಿರದು. ಸರಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿರುವುದೇ ತಪ್ಪು ಎಂಬ ಭಾವನೆ ಮೊಳೆಯದಿರದು. ಇದು ಡೇಂಜರಸ್‌.

ವ್ಯವಸ್ಥೆ ಅದೆಷ್ಟೇ ಹದಗೆಡಲಿ, ಅದೆಷ್ಟೇ ಭ್ರಷ್ಟರಿರಲಿ, ದುಬೆ, ಮಂಜುನಾಥನ್‌ ಅವರಂಥ ದಿಟ್ಟರು, ದೇಶಪ್ರೇಮಿಗಳು ಹೋರಾಡುತ್ತಲೇ ಇರುತ್ತಾರೆ. ಎಲ್ಲಾ ಮುಗಿಯಿತು ಎನ್ನುವಾಗ ಯಾರೋ ಬಂದು ಎದ್ದು ನಿಲ್ಲುತ್ತಾರೆ. ಪ್ರಾಣ ಹೋದರೂ ಪರವಾಗಿಲ್ಲ ಹೋರಾಡಿಯೇ ಸಿದ್ಧ ಅಂತಾರೆ. ಕೋಟ್ಯಂತರ ದೇಶವಾಸಿಗಳಲ್ಲಿ ಭರವಸೆಯ ಬೀಜ ಬಿತ್ತುತ್ತಾರೆ.

ಮಂಜುನಾಥನ್‌ ನೀನು ನಮ್ಮಲ್ಲಿ ಸದಾ ಜೀವಂತ ! ನಿನ್ನ ಸಾವು ವ್ಯರ್ಥವಾಗಲಿಲ್ಲ.

ಅದೊಂದು ಶಾಶ್ವತ ಆದರ್ಶ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X