ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬ್ಬನೇ ಒಂದು ದೇಶ ಕಟ್ಟಿದ. ಆತ ಲೀ. ಅದು ಸಿಂಗಾಪುರ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ನಮ್ಮ ಹಿಂದಿನ ಮುಖ್ಯಮಂತ್ರಿ ಬೆಂಗಳೂರನ್ನು ಸಿಂಗಾಪುರ ಮಾಡ್ತೇನೆ ಅಂದರು. ಬೆಂಗಳೂರಿನ ರಸ್ತೆಗಳನ್ನು ಅಲ್ಲಿನ ರಸ್ತೆಗಳಂತೆ ಮಾಡ್ತೇನೆ ಅಂದರು. ಹೇಗೆ ಇಡೀ ಜಗತ್ತು ಇಂದು ಸಿಂಗಾಪುರದತ್ತ ಮುಖ ಮಾಡಿ ನಿಂತಿದೆಯೋ, ಹಾಗೆ ಬೆಂಗಳೂರಿನತ್ತ ಎಲ್ಲರೂ ಮುಖಮಾಡಿ ನಿಲ್ಲುವಂತೆ ಮಾಡುತ್ತೇನೆ ಅಂದರು. ಆದರೆ ಏನೂ ಆಗಲಿಲ್ಲ ಬಿಡಿ. ಅಭಿವೃದ್ಧಿ, ಆಧುನಿಕತೆ ಹಾಗೂ ಅಂದದಲ್ಲಿ ಅಮೆರಿಕಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಸಿಂಗಾಪುರವನ್ನು ಅನುಕರಿಸಲು, ಅನುಸರಿಸಲು ಎಲ್ಲ ರಾಜ್ಯಗಳು, ದೇಶಗಳು ಹವಣಿಸುತ್ತಿವೆ, ಕನವರಿಸುತ್ತಿವೆ. ಅಧಿಕಾರದಲ್ಲಿರುವವರಿಗೆ ತಮ್ಮ ರಾಜ್ಯ, ದೇಶವನ್ನು ಸಿಂಗಾಪುರದಂತೆ ಮಾಡಬೇಕೆಂಬ ಕನಸು. ಹಾಗೆ ಮಾಡಲು ಆಗುವುದಿಲ್ಲವೆಂಬುದು ಅವರಿಗೆ ಚೆನ್ನಾಗಿ ಗೊತ್ತು. ಯಾಕೆಂದರೆ ರಾತ್ರೋರಾತ್ರಿ, ವರ್ಷ ದಾಟಿ ವರ್ಷದಲ್ಲಿ ಯಾವ ಊರನ್ನೂ ಸಿಂಗಾಪುರ ಮಾಡಲು ಆಗುವುದಿಲ್ಲ. ಆದರೆ ನಮ್ಮೂರನ್ನು ಸಿಂಗಾಪುರ ಮಾಡ್ತೇವೆ ಎಂದು ಹೇಳುವುದನ್ನು ನಮ್ಮ ರಾಜಕಾರಣಿಗಳು ಬಿಡುವುದಿಲ್ಲ.

ಹಾಗಾದರೆ ಸಿಂಗಾಪುರದಲ್ಲಿ ಅಂಥದ್ದೇನಿದೆ?ಸಿಂಗಾಪುರ ಇಷ್ಟು ಎತ್ತರಕ್ಕೆ ಹೇಗೆ ಬೆಳೆಯಿತು? ಯಾರು ಬೆಳೆಸಿದರು? ಮೊದಲು ಅದು ಹೇಗಿತ್ತು? ಸಿಂಗಾಪುರವನ್ನು ಕಟ್ಟಿದ್ದು ಹೇಗೆ, ಯಾರೂ?

ಸಿಂಗಾಪುರವೆಂಬ ಪುಟ್ಟ ದೇಶದ ಕತೆ ಒಬ್ಬ ದೈತ್ಯ ವ್ಯಕ್ತಿಯ ಕತೆಯೂ ಹೌದು. ಒಬ್ಬ ವ್ಯಕ್ತಿ ಒಂದು ದೇಶವನ್ನು ವಿಶ್ವದ ಮುಂಚೂಣಿ ದೇಶಗಳ ಸಾಲಿನಲ್ಲಿ ತಂದು ನಿಲ್ಲಿಸಿದ ಸಾಹಸಮಯ ಯಶೋಗಾಥೆಯೂ ಹೌದು. ಕೆಲದಿನಗಳ ಹಿಂದೆ ಸಿಂಗಾಪುರದಿಂದ ಆಗಮಿಸಿದ ಸ್ನೇಹಿತ ವಿನೋದ ಸಹ್ಯಾದ್ರಿ ಹೋಗುವಾಗ ಒಂದು ಪುಸ್ತಕ ಕೊಟ್ಟು ಹೋದರು.

From Third World to First : The Singapore Story ಅಂತ ಪುಸ್ತಕದ ಹೆಸರು. ಬರೆದವನು ಲೀ ಕ್ವಾನ್‌ ಯ್ಯೂ.

ನಾನು ಹೇಳಬೇಕೆಂದಿರುವುದು ಈತನ ಕತೆಯನ್ನೇ. ಸಿಂಗಾಪುರದ ಕತೆಯೆಂದರೆ ಲೀ ಕತೆಯೇ. ಲೀ ಕತೆಯೆಂದರೆ ಆಧುನಿಕ ಸಿಂಗಾಪುರದ ಚರಿತ್ರೆಯೋ. ಅಂದು ಕೊಳಕು ಬಂದರಿನಿಂದ ದುರ್ನಾತ ಬೀರುತ್ತಿದ್ದ ದೇಶವನ್ನು ಕೇವಲ 15-20 ವರ್ಷಗಳಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ, ಆಧುನಿಕ ಮತ್ತು ಕಣ್ಣು ಕೋರೈಸುವಂಥ ದೇಶವನ್ನಾಗಿ ಪರಿವರ್ತಿಸಿದ ರೋಚಕ ಕತೆ. ಸಿಂಗಾಪುರ ಬ್ರಿಟಿಷ್‌ ಆಳ್ವಿಕೆಯಲ್ಲಿತ್ತು. ಬ್ರಿಟಿಷರು ಈ ದೇಶವನ್ನು ಹಡಗುಗಟ್ಟೆಯಾಗಿ ಮಾರ್ಪಡಿಸಿದ್ದರು. ದೂರದ ಹಡಗುಗಳು ಈ ಬಂದರು ದೇಶಕ್ಕೆ ಆಗಮಿಸಿ ತಮ್ಮ ಸರಕುಗಳನ್ನು ಖಾಲಿಮಾಡುವ ಹಾಗೂ ಭರ್ತಿ ಮಾಡುವ ಅಡ್ಡೆಯಾಗಿ ಮಾಡಿಕೊಂಡಿದ್ದವು. ಅದರ ಪರಿಣಾಮವಾಗಿ ದೇಶಕ್ಕೆ ದೇಶವೇ ಒಂದು ದೈತ್ಯ ಗೊದಾಮು ಆಗಿ ಪರಿವರ್ತಿತವಾಗಿತ್ತು. ಎಲ್ಲೆಂದರಲ್ಲಿ ಕಸದ ಗುಂಡಿಗಳು, ಹೊಲಸುಗಳು ಚೆಲ್ಲಿರುತ್ತಿದ್ದವು. ಸಿಂಗಾಪುರದಲ್ಲಿ ಒಂದು ಉದ್ಯಾನವಿರಲಿಲ್ಲ. ರಸ್ತೆಗಳಿಗೆ ಡಾಂಬರು ಬಳಿದು ಅವೆಷ್ಟೋ ವರ್ಷಗಳಾಗಿದ್ದವು. ಅನೇಕ ವರ್ಷಗಳಿಂದ ಹಡಗುಗಟ್ಟೆಯಾಗಿ ಉಳಿದ ದೇಶ. ಮನೆಯ ಹಿತ್ತಲಿನಂತೆ, ಪುರಸಭೆಯ ತೊಟ್ಟಿಯಂತಿತ್ತು. ಯಾವುದೇ ನೈಸರ್ಗಿಕ ಸಂಪತ್ತುಗಳಿಲ್ಲದ ಆ ದೇಶದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಅವಕಾಶವಿಲ್ಲ. ಬಂದರು ಬಿಟ್ಟರೆ ಹಣ ತರುವ ಯಾವುದೇ ದೊಡ್ಡ ಉದ್ದಿಮೆಯಿರಲಿಲ್ಲ.

ಲೀ ಕ್ವಾನ್‌ ಯ್ಯೂ ಆರಂಭಿಕ ಶಿಕ್ಷಣ ಮುಗಿಸಿ ಇಂಗ್ಲೆಂಡ್‌ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೊರಟು ನಿಂತಾಗ ತಲೆತುಂಬಾ ಹೊಸ ಹೊಸ ವಿಚಾರಗಳು. ತನ್ನ ದೇಶವನ್ನು ವಿಶ್ವದಲ್ಲಿಯೇ ಬಲಿಷ್ಠ ದೇಶವಾಗಿ ಮಾಡುವುದು ಹೇಗೆಂದು ಸ್ನೇಹಿತರ ಮುಂದೆ ಹೇಳಿದರೆ ಅವರೆಲ್ಲ ಅಪಹಾಸ್ಯ ಮಾಡಿದ್ದರು. ಮಾತು ಮಾತಿಗೆ ದೇಶದ ಪ್ರಗತಿ, ಅಭಿವೃದ್ಧಿ ಬಗ್ಗೆ ಭಾಷಣ ಬಿಗಿಯುತ್ತಿದ್ದರೆ ಸ್ನೇಹಿತರೆಲ್ಲ ಆತನಿಂದ ದೂರ ಸರಿಯುತ್ತಿದ್ದರು. ಈ ಸಂಗತಿ ಲೀಗೆ ಒಂದು obsessionನಂತೆ ಕಾಣುತ್ತಿತ್ತು. ಕೇಂಬ್ರಿಡ್ಜ್‌ನ ರ್ಯಾಫೆಲ್‌ ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ತಾಯ್ನಾಡಿನ ವಿದ್ಯಮಾನಗಳು ದಿಗಿಲು ಹುಟ್ಟಿಸುತ್ತಿದ್ದವು. ಜಪಾನಿಯರು ಸಿಂಗಾಪುರವನ್ನು ವಶಪಡಿಸಿಕೊಂಡಿದ್ದರು. ಪ್ರತಿರೋಧವೊಡ್ಡಿದವರನ್ನು ಸಾಯಿಸುತ್ತಿದ್ದರು. ಐವತ್ತು ಸಾವಿರಕ್ಕಿಂತ ಹೆಚ್ಚು ಚೀನಿ ಮೂಲದ ‘ಸಿಂಗಾಪುರಿ’ಗಳ ನರಮೇಧವಾಗಿತ್ತು. ಜಪಾನಿ ಯೋಧರ ಹಿಂಸೆಯಿಂದ ಮೂಲನಿವಾಸಿಗಳು ತತ್ತರಗೊಂಡಿದ್ದರು.

ಈ ಮಧ್ಯೆ ಕಾಲೇಜು ಶಿಕ್ಷಣ ಮುಗಿಸಿದ ಲೀ, ಲಂಡನ್‌ ಸ್ಕೂಲ್‌ ಆಫ್‌ಎಕನಾಮಿಕ್ಸ್‌ ಸೇರಿದ. ಅನಂತರ ಪುನಃ ಕೇಂಬ್ರಿಡ್ಜ್‌ಗೆ ಹೋಗಿ ಕಾನೂನನ್ನು ಅಭ್ಯಸಿಸಿದ. ವಿದೇಶದಲ್ಲಿ ಹನ್ನೆರಡು ವರ್ಷಗಳ ದೀರ್ಘ ವ್ಯಾಸಂಗದ ಬಳಿಕ ಸಿಂಗಾಪುರಕ್ಕೆ 1950ರಲ್ಲಿ ಮರಳಿ ಬಂದಾಗ ಪರಿಸ್ಥಿತಿ ಎಲ್ಲ ಆಯೋಮಯ. ಮೊದಲು ಲೀ ವಕೀಲನಾಗಿ ಕೆಲಸ ಆರಂಭಿಸಿದ. ಅನಂತರ ಬ್ಯಾರಿಸ್ಟರ್‌ ಆದ. ದೇಶದ ಕಾನೂನು ವ್ಯವಸ್ಥೆಯಲ್ಲಿನ ಲೋಪ-ದೋಷಗಳಿಂದ ಎಂಥ ಅವಾಂತರಗಳಾಗುತ್ತಿವೆಂಬುದು ಮನದಟ್ಟಾಯಿತು. ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಅಂದುಕೊಂಡಿದ್ದನ್ನು ಸಾಧಿಸಲಾಗುತ್ತಿಲ್ಲವೆಂಬುದು ಲೀಗೆ ತಿಳಿಯಿತು. 1955ರಲ್ಲಿ ಪೀಪಲ್ಸ್‌ ಆ್ಯಕ್ಷನ್‌ ಪಾರ್ಟಿಯನ್ನು ಸ್ಥಾಪಿಸಿದ. ಮುಂದಿನ ವರ್ಷ ನಡೆದ ಚುನಾವಣೆಯಲ್ಲಿ ಮೊದಲಬಾರಿಗೆ ಲೀ ಆಯ್ಕೆಯಾದ. ಸರಕಾರಿ ವ್ಯವಸ್ಥೆಯ ಸೆರಗು ಸರಿಸಿದರೆ ಅಡಗಿ ಕುಳಿತ ಭ್ರಷ್ಟಾಚಾರದ ಭೂತ. ಸರಕಾರಿಯಂತ್ರಕ್ಕೆ ಕೆಂಪುಪಟ್ಟಿಯ ಕಗ್ಗಂಟು. ಸಮಸ್ಯೆಯನ್ನು ಪರಿಹರಿಸುವ ಎಲ್ಲ ಮಾರ್ಗಗಳೂ ಬಂದ್‌ ಆಗಿದ್ದವು. ಅವೆಲ್ಲ ಹೊಸ ಸಮಸ್ಯೆಯ ಹುಟ್ಟಿಗೆ ಕಾದು ಕುಳಿದ್ದವು. ಲೀ ಮೂರು ವರ್ಷ ದೇಶದ ಉದ್ದಗಲಕ್ಕೆ ಪ್ರವಾಸ ಮಾಡಿ, ಎಲ್ಲ ಜನರನ್ನು ಭೇಟಿ ಮಾಡಿ ಹೊಸ ಸಿಂಗಾಪುರ ಕಟ್ಟಲು ತೀರ್ಮಾನಿಸಿದ. 1959ರಲ್ಲಿ ನಡೆದ ಚುನಾವಣೆಯಲ್ಲಿ ಲೀ ಪಕ್ಷ ಬಹುಮತಗಳಿಸಿತಲ್ಲದೇ ಸ್ವತಂತ್ರ ಸಿಂಗಾಪುರದ ಮೊದಲ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ.

ಮೊದಲಿಗೆ ಲೀ ಕ್ಯಾನ್‌ ಯ್ಯೂ ಮಾಡಿದ್ದೇನು ಗೊತ್ತಾ ? ತಾನು ಹಮ್ಮಿಕೊಂಡ ಯೋಜನೆಗಳಲ್ಲಿ ಜನರಿಗೆ ನಂಬಿಕೆ ಮೂಡಿಸಿದ್ದು. ತನ್ನನ್ನು ಇಡೀ ದೇಶದ ಜನತೆ ವಿಶ್ವಾಸದ ಕಕ್ಷೆಯಾಳಗೆ ಸೇರಿಸಿಕೊಳ್ಳುವಂತೆ ಮಾಡಿದ್ದು. ಸಿಂಗಾಪುರವನ್ನು ವಿಶ್ವದ ಆಧುನಿಕ ದೇಶವನ್ನಾಗಿ ಮಾಡುತ್ತೇನೆಂದು ಘೋಷಿಸಿದ. ಹಾಗೆ ಹೇಳಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತನ್ನ ಮಾತಿನ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ.

ಸಿಂಗಾಪುರ ವಿಶ್ವದ ನಂಬರ್‌1ದೇಶವಾಗಬೇಕಾಗದರೆ ರಸ್ತೆಗಳು ಸುಂದರವಾಗಿರಬೇಕು, ಗುಂಡಿಗಳು ಇರಬಾರದು. ಉಬ್ಬು-ತಗ್ಗುಗಳಿರಬಾರದು, ಮಾಲಿನ್ಯವಿರಕೂಡದು ಎಂದು ಜನರಿಗೆ ಹೇಳಿದ. ಕಂಡಕಂಡಲ್ಲಿ ಉಗುಳಿದರೆ, ಚ್ಯೂಯಿಂಗ್‌ಗಮ್‌ ಅಗಿದು ಬಿಸಾಕಿದರೆ, ಕಸಕಡ್ಡಿ ಚೆಲ್ಲಿದರೆ ಇವೆಲ್ಲ ಸಾಧ್ಯವಾಗೊಲ್ಲ ಎಂದ. ಲೀ ಬರೀ ಭಾಷಣ ಮಾಡಲಿಲ್ಲ. ಹೇಳಿದ್ದೆಲ್ಲವೂ ತಕ್ಷಣ ಜಾರಿಯಾಗುವಂತೆ ನೋಡಿಕೊಂಡ. ಜನರ ಜತೆ ಕುಳಿತು, ಅವರೊಂದಿಗೆ ಹರಟೆ ಹೊಡೆಯುತ್ತ ತನ್ನ ಯೋಜನೆಗಳನ್ನೆಲ್ಲ ‘ನಿಮ್ಮ ಯೋಜನೆಗಳು’ ಎಂದು ಬಿಂಬಿಸಿದ. ಟ್ಯಾಕ್ಸಿ ಚಾಲಕರೆಲ್ಲರ ಸಭೆ ಕರೆದು, ನಮ್ಮ ದೇಶದ ಅಭಿವೃದ್ಧಿಗೆ ನಿಮ್ಮ ಯೋಗದಾನ ಅಮೂಲ್ಯ.‘ ನಮ್ಮ ದೇಶಕ್ಕೆ ಬರುವ ಪ್ರವಾಸಿಗರನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಅವರೆಂದೂ ನಮ್ಮ ದೇಶದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುವುದಿಲ್ಲ’ ಎಂದು ಎಲ್ಲ ರಂಗಗಳ ಮುಖ್ಯಸ್ಥರೊಂದಿಗೆ ಇದೇ ರೀತಿಯ ಹೃದಯ ಸಂವಾದ ನಡೆಸಿದ.

ಸಿಂಗಾಪುರದ ವಾಸ್ತವ ಚಿತ್ರಣವನ್ನು ಅಲ್ಲಿನ ಜನರ ಆಶಯವೇನೋ ಎಂಬಂತೆ ಬದಲಿಸಿದ. ಇವೆಲ್ಲ ಆತನ ಆಶಯವಾಗಿದ್ದಿದ್ದರೆ ಸಾರ್ವಜನಿಕ ಸಹಕಾರ, ಸಹಭಾಗಿತ್ವ ಸಿಗುತ್ತಿರಲಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಅತ್ಯುತ್ತಮ ಮೂಲಸೌಕರ್ಯ ಒದಗಿಸಿದ. ಅಂತರಾಷ್ಟ್ರೀಯ ಮಟ್ಟದ ಸೇವಾ ಸೌಕರ್ಯ ಕಲ್ಪಿಸಿದ. ಒಂದು ಹಡಗಿನಲ್ಲಿರುವ ಸಾಮಾನು ಸರಂಜಾಮುಗಳನ್ನು ಖಾಲಿ ಮಾಡಲು ಮೊದಲು 20-25 ದಿನಗಳು ಬೇಕಾಗುತ್ತಿದ್ದವು. ಈಗ ಈ ಕೆಲಸಕ್ಕೆ ಹೆಚ್ಚೆಂದರೆ 8-10 ನಿಮಿಷಗಳು ಸಾಕು! ಸಿಂಗಾಪುರದ ಜೀವಾಳವಾಗಿರುವ ಬಂದರು ಮಾರುಕಟ್ಟೆ ಪುನಃಶ್ಚೇತನಗೊಂಡರೆ ಇಡೀ ದೇಶ ತನ್ನಿಂದತಾನೇ ಉದ್ಧಾರವಾಗುವುದೆಂಬುದು ಲೀ ನಂಬಿಕೆಯಾಗಿತ್ತು. ಅದು ವಾಸ್ತವ ಕೂಡ ಆಗಿತ್ತು. ಯಾವಾಗ ಬಂದರು ಸುಧಾರಿಸಿತೋ, ಸುಧಾರಣೆ ಮುಖಗಳು ಕಾಣಿಸಿಕೊಳ್ಳತೊಡಗಿದವು.

ಲೀ ವಿರಮಿಸಲಿಲ್ಲ. ಪ್ರತಿ ವ್ಯಕ್ತಿಗೆ ತನ್ನದೆಂಬ ಮನೆಯೆಂಬುದು ಇರದಿದ್ದರೆ ಆತ ಸ್ವಾಭಿಮಾನದಿಂದ ಬದುಕಲಾರನೆಂದು ಗೃಹ ಅಭಿವೃದ್ಧಿ ಮಂಡಲಿ ಸ್ಥಾಪಿಸಿದ. ಪುಟ್ಟ ದೇಶದಲ್ಲಿ ಎಲ್ಲರಿಗೂ ವಸತಿ ಒದಗಿಸುವುದು ಸವಾಲಾಗಿತ್ತು. ಹೀಗಾಗಿ ಈ ಮಂಡಲಿ ಸಹಾಯದಿಂದ ವ್ಯಾಪಕ ಪ್ರಮಾಣದಲ್ಲಿ ಜನರಿಗಾಗಿ ಗಗನಚುಂಬಿ ಕಟ್ಟಡಗಳನ್ನು ಕಟ್ಟಲಾಯಿತು. ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯಿಲ್ಲದೇ ಯಾವ ವ್ಯವಸ್ಥೆಯೂ ಬದುಕುವುದಿಲ್ಲವೆಂಬುದು ಆತನಿಗೆ ಗೊತ್ತಾಗಿತ್ತು. ಭ್ರಷ್ಟಾಚಾರವನ್ನು ಕಿತ್ತೆಸೆಯಲು ತನಿಖಾ ಬ್ಯೂರೋ ರಚಿಸಲು ಹೊಸ ಕಾನೂನು ಜಾರಿಗೆ ತಂದ. ವರಮಾನ ತೆರಿಗೆ ಕಟ್ಟದವರನ್ನು ಜೈಲಿಗೆ ಅಟ್ಟುತ್ತೇನೆಂದು ಬೆದರಿಸಿದ. ‘ ನನ್ನನ್ನು ನೋಡಿ ಜನ ಪ್ರೀತಿಸುವುದು ಬೇಡ. ನನ್ನನ್ನು ನೋಡಿ ಹೆದರಲಿ. ನಾನು ಖುಷಿಪಡುತ್ತೇನೆ’ ಎಂದ. ‘ ಸಿಂಗಾಪುರದಲ್ಲಿ ನೈಸರ್ಗಿಕ ಸಂಪನ್ಮೂಲವಿಲ್ಲವೆಂದು ಕೊರಗುವುದು ಬೇಡ. ಇಲ್ಲಿನ ಜನರೇ ನಮ್ಮ ಅಮೂಲ್ಯ ಸಂಪನ್ಮೂಲ’ ಎಂದು ಹುರಿದುಂಬಿಸಿದ.

ದಿನ ಕಳೆಯುತ್ತಿದ್ದಂತೆ ಸಿಂಗಾಪುರದ ಚಹರೆ ಬದಲಾಗುತ್ತಾ ಹೋಯಿತು. ಕೇವಲ ಆರೇಳು ವರ್ಷಗಳಲ್ಲಿ ಹಳೆಮುಖ ಕಳಚಿಬಿತ್ತು. ಹೊಸರೂಪ ಅವತರಿಸಿ ಬಂದಿತು. ಅಮೆರಿಕ, ಯುರೋಪ್‌ ಮುಂತಾದ ದೇಶಗಳಿಂದ ‘ತೃತೀಯ ಜಗತ್ತಿನ ಹಿಂದುಳಿದ ದೇಶ’ ಎಂದು ಕರೆಯಿಸಿಕೊಳ್ಳುತ್ತಿದ್ದ ಸಿಂಗಾಪುರ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕತೊಡಗಿತು. ಜಗತ್ತಿನ ಎಲ್ಲ ದೇಶಗಳ ಪ್ರಮುಖ ಉದ್ದಿಮೆದಾರರಿಗೆ ಸಿಂಗಾಪುರದಲ್ಲೊಂದು ಕಚೇರಿ ಬೇಕು. ವಿಶ್ವಮಾನ್ಯ ಕಂಪನಿಗಳೆಂದು ಕರೆಯಿಸಿಕೊಳ್ಳಬೇಕೆನಿಸಿದರೆ ಸಿಂಗಾಪುರದಲ್ಲೊಂದು ದುಕಾನು ಇರಲೇಬೇಕು. ಹಾಗೆ ಭಾವಿಸುವಷ್ಟು ಅದು ಅಂತಾರಾಷ್ಟ್ರೀಯ ವಾಣಿಜ್ಯದ ಪ್ರಮುಖ ಕೇಂದ್ರವಾಗಿದೆ.

ಲೀ ಅದೆಂಥ ಮೋಡಿ, ಪವಾಡ ಮಾಡಿರಬಹುದು ಯೋಚಿಸಿ, 1959ರಿಂದ ಮೂವತ್ತೊಂದು ವರ್ಷಗಳವರೆಗೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ. ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಮತಪೆಟ್ಟಿಗೆ ಮೇಲೆ ಕಣ್ಣಿಟ್ಟು ಓಲೈಕೆ ರಾಜಕಾರಣ ಮಾಡಲಿಲ್ಲ. ಜನರು ಗುರುಗುಟ್ಟಿದರೂ ತಲೆಕೆಡಿಸಿಕೊಳ್ಳಲಿಲ್ಲ. ಚ್ಯೂಯಿಂಗ್‌ ಗಮ್‌ ಅಗಿಯುವುದನ್ನು ನಿಲ್ಲಿಸದಿದ್ದರೆ ಹುಷಾರ್‌ ಎಂದ. ಆಗಲೂ ಕೇಳದಿದ್ದಾಗ ಜೈಲಿಗೆ ಹಾಕಲು ಹಿಂದೆ ಮುಂದೆ ನೋಡಲಿಲ್ಲ. ಇಂಥ ತೀರ್ಮಾನ ತೆಗೆದುಕೊಂಡಾಗ ವಿರೋಧಿಗಳು ಲೀ ಯನ್ನು ಸರ್ವಾಧಿಕಾರಿ ಎಂದು ಜರಿದರೂ ಜಗ್ಗಲಿಲ್ಲ. ಅವನು ಮನಸ್ಸು ಮಾಡಿದ್ದರೆ ಅಧಿಕಾರದಲ್ಲಿ ಮುಂದುವರಿಯಬಹುದಿತ್ತು. ಯಾರೂ ಅವನ ಕುರ್ಚಿಯನ್ನು ಅಲುಗಾಡಿಸಲಿಲ್ಲ. ಆದರೂ 1990ರಲ್ಲಿ ಅಧಿಕಾರ ತ್ಯಾಗ ಮಾಡಿದ. ಆದರೆ ಲೀ ವಿರಮಿಸಲಿಲ್ಲ. ಸಾಮಾಜಿಕ ಸೇವೆಯ ಮೂಲಕ ಕ್ರಿಯಾಶೀಲನಾಗಿದ್ದಾನೆ. ಲೀ ಇಲ್ಲದ ಸರಕಾರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ ಎಂದು ಅವರ ಉತ್ತರಾಧಿಕಾರಿಗೆ ಅನಿಸದ್ದರಿಂದ ಟೋಂಗ್‌ ‘ಜ್ಯೇಷ್ಠ ಸಚಿವ’ ಎಂದು ಪಕ್ಕಕ್ಕೆ ಇಟ್ಟುಕೊಂಡ. ‘ನಾನು ಅನಾರೋಗ್ಯದಿಂದ ಹಾಸಿಗೆ ಹಿಡಿದರೂ ಪರವಾಗಿಲ್ಲ, ಸಮಾಧಿಯಲ್ಲಿ ಚಿರನಿದ್ದೆಯಲ್ಲಿದ್ದರೂ ಎದ್ದು ಬರುತ್ತೇನೆ’ ಅಂತಾನೆ ಲೀ.

ಲೀ ನಿವೃತ್ತನಾಗಿ ಹದಿನೈದು ವರ್ಷಗಳು ಕಳೆದಿವೆ. ಇಂದಿಗೂ ಆ ರಾಷ್ಟ್ರದಲ್ಲಿ ಲೀ ಹೆಸರಿನಲ್ಲಿಯೇ ಸರಕಾರ ನಡೆಯುತ್ತಿದೆ. ಈಗ ಅವನ ಮಗನೇ ಪ್ರಧಾನಿ. ಲೀಗಾಗಿ ಹೊಸ ಜವಾಬ್ದಾರಿ- ಮಿನಿಸ್ಟರ್‌ ಮೆಂಟರ್‌- ತೆರೆಯಲಾಗಿದೆ. ಲೀ ಇಲ್ಲದೇ ಸರಕಾರ ನಡೆಯುವುದು ಕಷ್ಟ. ಅಧಿಕಾರದಲ್ಲಿ ಇಲ್ಲದಿದ್ದರೂ ಅಷ್ಟೇ ಪ್ರಭಾವಿ. ಇಂದಿಗೂ ಅವನ ಮಾತಿಗೆ ದೇಶ ಎದ್ದು ನಿಲ್ಲುತ್ತದೆ. ಸಮಸ್ತ ದೇಶವಾಸಿಗಳನ್ನು ತನ್ನೊಂದಿಗೆ ಕರೆದೊಯ್ಯುವ ಚುಂಬಕಶಕ್ತಿ ಅವನಿಗಿದೆ. ಇದೆಲ್ಲ ಸಾಧ್ಯವಾಗಿದ್ದು ಹಣ, ಅಧಿಕಾರ, ತೋಳ್ಬಲ, ಸಮಾವೇಶ, ಜಾತಿಯಿಂದಲ್ಲ. ಕೇವಲ ನಿಷ್ಠೆ, ನೈತಿಕತೆ, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ!

ನಮ್ಮಲ್ಲೂ ಇದ್ದಾರೆ ರಾಜಕಾರಣಿಗಳು ದಿಲ್ಲಿಯಿಂದ ನಮ್ಮೂರ ಗಲ್ಲಿ ಗಲ್ಲಿಯ ತನಕ. ಎಲ್ಲರೂ ಮಾತಾಡುವವರೇ. ಆದರೆ ಯಾರ ಮಾತನ್ನೂ ನಂಬುವಂತಿಲ್ಲ. ಯಾರೂ ನಿಜ ಹೇಳುತ್ತಾರೆಂದು ಅನಿಸುವುದಿಲ್ಲ. ಈತನನ್ನು ನಂಬಬಹುದೆಂಬ ಒಬ್ಬನೇ ಮನುಷ್ಯ ರಾಜಕಾರಣದಲ್ಲಾಗಲಿ, ಸರಕಾರದಲ್ಲಾಗಲಿ ಕಾಣುವುದಿಲ್ಲ. ಇವರನ್ನೆಲ್ಲ ಕಟ್ಟಿಕೊಂಡು ಸಿಂಗಾಪುರ ಕಟ್ತೀವಿ ಅನ್ನೋದೇ ದೊಡ್ಡ ಜೋಕು, ಬಕ್ವಾಸ್‌.

ರಾಜಕಾರಣದಲ್ಲಿ ಬಹುತೇಕ ಮಂದಿ ಜನರಿಂದ ತಿರಸ್ಕೃತರಾಗಿ ಮರೆಗೆ ಸರಿಯುತ್ತಾರೆ ಅಥವಾ ಮರೆಗೆ ಸರಿಯುವಾಗ ತಿರಸ್ಕೃತರಾಗಿರುತ್ತಾರೆ. ಹೇಳ ಹೆಸರಿಲ್ಲದಂತಾಗುತ್ತಾರೆ. ಆದರೆ ಲೀ ಕ್ವಾನ್‌ ಯ್ಯೂ ಯಾವತ್ತೂ ಪ್ರಸ್ತುತ. ಸಿಂಗಾಪುರ ಆತನಿಗೆ ಸದಾ ಋಣಿಯಾಗಿರಬೇಕು. ಈಗ ನಮಗೆ ಬೇರೆ ಯಾರೂ ಬೇಡ ಒಬ್ಬ ಲೀ ಬರಲಿ ಅಂತ ಅನಿಸುವುದಿಲ್ಲವಾ ಹೇಳಿ?

(ಸ್ನೇಹಸೇತು : ವಿಜಯ ಕರ್ನಾಟಕ)


ಸಿಂಗಾಪುರದ ಬಗ್ಗೆ ಮತ್ತಷ್ಟು... :
ಪ್ರವಾಸ ಕಥನ : ಸಿಂಗಾಪುರದಿಂದ ಒಂದು ಮೂಟೆ!
ಸಿಂಗಾಪುರದಲ್ಲೊಂದು ‘ಬಯಾನಾ’ ಹಗರಣ
‘ಸಿಂಗಾಪುರದಲ್ಲಿ ನನ್ನ ಮೊದಲ ದಿನಗಳು...’


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X