• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐನ್‌ಸ್ಟೀನ್‌ ಥರದವರು ನಮ್ಮ ಸುತ್ತಲೂ ಇರುತ್ತಾರೆ, ನಾವು ನೋಡಿರುವುದಿಲ್ಲ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಬಹುತೇಕ ಎಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಎಲ್ಲವೂ ಇರುತ್ತವೆ. ಆದರೆ ಏನೂ ಇಲ್ಲದವರಂತೆ ಇರುತ್ತಾರೆ. ವಿದ್ಯೆ, ಪದಕ, ಪ್ರಶಸ್ತಿ, ಸಾಮರ್ಥ್ಯ, ಬುದ್ದಿವಂತಿಕೆ, ಅಂತಸ್ತು, ಪ್ರಭಾವ ಎಲ್ಲವೂ ಇದ್ದರೂ ಅವೆಲ್ಲ ಕೆಲಸಕ್ಕೆ ಬಾರದಂತೆ ನಿಷ್ಟ್ರಯೋಜಕವಾಗಿಬಿಡುತ್ತವೆ.

ಜೀವನದುದ್ದಕ್ಕೂ ರ್ಯಾಂಕ್‌ ಗಳಿಸಿದ ವಿದ್ಯಾರ್ಥಿಯಾಬ್ಬ ಕೆಲಸಕ್ಕೆ ಅಲೆದೂ ಅಲೆದೂ ಕೊನೆಗೆ ಅದು ಸಿಗದಿದ್ದಾಗ ಎಂಥ ಅಸಹಾಯಕ ಸ್ಥಿತಿ ತಲುಪುತ್ತಾನೆಂದರೆ ಆತನಿಗೆ ತಾನು ಓದಿದ್ದೆಲ್ಲ ಪುಟಗೋಸಿ ಎಂದು ಅನಿಸಲು ಆರಂಭಿಸುತ್ತದೆ. ಆತನಿಗೆ ತನ್ನ ಸಾಮರ್ಥ್ಯಗಳೇ ಬಲಹೀನತೆಯೆಂಬ ಅನುಮಾನ ಕಾಡಲಾರಂಭಿಸುತ್ತದೆ. ವಿದ್ಯೆ, ಡಿಗ್ರಿ, ಪದಕ, ಪ್ರಶಸ್ತಿಯೆಲ್ಲ ಬರೀ ಪುರಲೆ ಎಂಬ ನಿರ್ಧಾರಕ್ಕೆ ಬಂದು ನಿಲ್ಲುತ್ತಾನೆ. ಈ ಸ್ಥಿತಿ ತಲುಪಿದವರು ಮಾಡುವ ಮೊದಲ ಕಲಸವೆಂದರೆ ಡಿಗ್ರಿ ಸರ್ಟಿಫಿಕೇಟುಗಳನ್ನು ಹರಿದು ಹಾಕುವುದು. ಬಂಗಾರದ ಪದಕವನ್ನು ಹುಟ್ಟಿದಷ್ಟು ಬೆಲೆಗೆ ಮಾರುವುದು. ಪ್ರಶಸ್ತಿ ಪತ್ರಗಳನ್ನು ಕಸದ ಬುಟ್ಟಿಗೆ ಚೆಲ್ಲುವುದು. ಓದಿದ್ದೆಲ್ಲ ವ್ಯರ್ಥವೆಂಬ ತೀರ್ಮಾನಕ್ಕೆ ಬರುವುದು. ಕೆಲವರಲ್ಲಿ ಆತ್ಮಹತ್ಯೆಯ ಹಗ್ಗ, ವಿಷ ಕಾಣುತ್ತವೆ. ಇನ್ನು ಕೆಲವರು ಕುಡಿತಕ್ಕೆ ಬೀಳುತ್ತಾರೆ. ಡಿಪ್ರೆಶನ್‌ಗೆ ಒಳಗಾಗುತ್ತಾರೆ. ತಮ್ಮ ದಯನೀಯ ಪಾಡನ್ನು ನೆನೆದು ಕೊರಗುತ್ತಾರೆ.

ಇದು ಪರಿಸ್ಥಿತಿಯ ಎಂಥ ಕ್ರೂರ ಅಣಕವೆಂದರೆ ನಮ್ಮ ಯಾವ ಹೆಚ್ಚುಗಾರಿಕೆ, ಸಾಮರ್ಥ್ಯ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಎಲ್ಲ ದ್ವಾರಗಳು ಬಂದ್‌ ಆದ ಅಭಿಮನ್ಯು ಸಿಂಡ್ರೋಮ್‌ ನಮ್ಮನ್ನು ಕವಿದಿರುತ್ತದೆ.

Ravi Belagereಇಂಥ ಸ್ಥಿತಿಯೆಂಬ ವಿಚಿತ್ರ ಮಾನಸಿಕತೆಯನ್ನು ನೆನಪಿಸಿಕೊಂಡರೆ ತಟ್ಟನೆ ನೆನಪಾಗುವವನು ಸ್ನೇಹಿತ ರವಿ ಬೆಳಗೆರೆ. ಹದಿನೈದು ವರ್ಷಗಳ ಹಿಂದಿನ ಆತನನ್ನು ನೋಡಬೇಕಿತ್ತು. ಆತ ಎಲ್ಲಾ ಇದ್ದೂ ಏನೂ ಇಲ್ಲದಂಥ ದೈನೇಸಿಯಾಗಿದ್ದ. ಆತನಲ್ಲಿ ಅದ್ಭುತವಾದ ಬರವಣಿಗೆಯಿತ್ತು. ಪತ್ರಕರ್ತನಿಗೆ, ಬರಹಗಾರನಿಗೆ ಬೇಕಾದ ಎಲ್ಲವೂ ಇದ್ದವು ಹಾಗೂ ಅವೆಲ್ಲವೂ ಜಾಸ್ತಿಯಾಗಿಯಿದ್ದವು. ಒಂದು ತೂಕಕ್ಕೆ ಹತ್ತು ಮಂದಿ ಹಾಕಿ ಮತ್ತೊಂದೆಡೆಗೆ ಈತನನ್ನು ಕೂಡಿಸಿದರೆ ಸಾಮರ್ಥ್ಯದಲ್ಲಿ ಈತನೇ ನೆಲಕ್ಕೆ ತಾಕುತ್ತಿದ್ದ. ಆದರೇನು ಮಾಡುವುದು, ನಸೀಬು ವಕ್ರ ವಕ್ರ. ಈತನ ವಾರಿಗೆಯವರೆಲ್ಲ ದೊಡ್ಡದೊಡ್ಡ ಪತ್ರಿಕೆ, ಸರ್ಕಾರಿ ಕೆಲಸ, ಬೇರೆ ಬೇರೆ ನೌಕರಿ ಹಿಡಿದರೆ ರವಿ ಮಾತ್ರ ಯಾಕೋ ದೈಡು ಹತ್ತದೇ ಅನಿಶ್ಚಿತ ಬದುಕನ್ನು ಸಾಗಿಸುತ್ತಿದ್ದ. ಇಷ್ಟೇ ಅಲ್ಲ ಯಾರ್ಯಾರು ಈತನ ಕೈಕೆಳಗೆ ಕೆಲಸ ಮಾಡಿದ್ದರೋ ಅವರೆಲ್ಲ ಬೇರೆ ಪತ್ರಿಕೆಗಳನ್ನು ಸೇರಿಕೊಂಡಿದ್ದು, ಈ ಪತ್ರಿಕೆಗಳಲ್ಲಿ ಕೆಲಸ ಅರಸಿಕೊಂಡು ಈತ ಹೋದಾಗ ಅವರ ಕೈಕೆಳಗೆ ಕೆಲಸ ಮಾಡುವಂಥ ಸ್ಥಿತಿ ಎದುರಾಗಿದ್ದು, ಬೇರೆ ಮಾರ್ಗವಿಲ್ಲದೇ ಆತ ಸ್ವೀಕರಿಸಿದ್ದು ಆತನ ಅಸಹಾಯಕತೆ ಎಷ್ಟಿತ್ತೆಂಬುದು ತೋರಿಸುತ್ತದೆ.

ಒಂದು ಸಲವಂತೂ ತನ್ನ ಮುಂದೆ ಕುಳಿತುಕೊಳ್ಳಲೂ ನಡುಗುತ್ತಿದ್ದವರ ಜತೆಯಲ್ಲಿಯೇ ಕೆಲಸಕ್ಕಾಗಿ ಪರೀಕ್ಷೆ ಬರೆಯಲು ಕುಳಿತಿದ್ದು, ಅವರೆಲ್ಲ ಪಾಸಾಗಿ ಕೆಲಸ ಗಿಟ್ಟಿಸಿಕೊಂಡರೆ, ಈತ ಮಾತ್ರ ಕೆಲಸ ಸಿಗದೇ ಅವಮಾನದಿಂದ ಕುಸಿದು ಕುಳಿತಿದ್ದು, ಅವನ್ನೆಲ್ಲ ನಗುನಗುತ್ತಲೇ ಸ್ವೀಕಸಿದ್ದು...ಆತನ ವೃತ್ತಿಜೀವನ ಅತ್ಯಂತ ದಯನೀಯ ಕ್ಷಣಗಳು. ಎಲ್ಲಾ ಇದ್ದೂ ಇಲ್ಲದ ಸ್ಥಿತಿಯದು. ಈ ಸ್ಥಿತಿಯಿಂದ ಈಗಿನ ಸ್ಥಿತಿಗೆ ರವಿ ಬಂದ ರೀತಿಯಿದೆಯಲ್ಲ ಅದೊಂದು ಅದ್ಭುತ. ನಿಮ್ಮ ಕಣ್ಣ ಮುಂದೇ ನಡೆದ ಆ ಅದ್ಭುತವನ್ನು ನೀವೆಲ್ಲ ನೋಡಿದ್ದೀರಿ. ಆದರೆ ಆ ಐದಾರು ವರ್ಷಗಳ ಕಾಲ ರವಿ ಅನುಭವಿಸಿದ ಮಾನಸಿಕ ಹಿಂಸೆಯಿದೆಯಲ್ಲ, ಎಲ್ಲಾ ಇದ್ದೂ ಏನೂ ಇಲ್ಲದವನ ಪಾಡಿದೆಯಲ್ಲ ಹಾಗೂ ಅಲ್ಲಿಂದ ಮೇಲೆದ್ದು ಬಂದ ರೀತಿಯಿದೆಯಲ್ಲ ಇವೆಲ್ಲ ಆತನ ಅಂದಿನ ಅಸಹಾಯಕತೆಯ ವಿವಿಧ ಮಜಲುಗಳಂತೆ, ಅವುಗಳನ್ನು ದಾಟಿ ಬಂದ ಗೆಲುವಿನ ಹುದಲಿನಂತೆ ಕಾಣುತ್ತವೆ.

Albert Einsteinಅಂದು ಸ್ವಿಜರ್‌ಲ್ಯಾಂಡಿನ ರಾಜಧಾನಿ ಬರ್ನ್‌ ಎಂಬ ಸುಂದರ ನಗರದ ಜನದಟ್ಟಣೆಯ ಮಾರುಕಟ್ಟೆ ಪ್ರದೇಶದಲ್ಲಿ ನಿಂತಿದ್ದಾಗ ಯಾಕೋ ಏನೋ ರವಿಯ ಜೀವನ ದೃಶ್ಯಗಳ ಕೆಲವು ತುಕಡಿಗಳು ನ್ಯೂಸ್‌ ರೀಲ್‌ನಂತೆ, ಸಿನಿಮಾದ ಟ್ರೇಲರ್‌ನಂತೆ ನನ್ನ ಜ್ಞಾಪಕ ಚಿತ್ರಶಾಲೆಯಲ್ಲಿ ಒಂದೇ ಸಮನೆ ಹಾದು ಹೋಗುತ್ತಿದ್ದವು. ಬರ್ನ್‌ ನಗರಕ್ಕೆ ಐನ್‌ಸ್ಟೀನ್‌ ಬಂದಾಗ ಆತನಿಗೆ ನೊಬೆಲ್‌ ಬಂದಿರಲಿಲ್ಲ. ಆತನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಸಾಮಾನ್ಯ ಅಲೆಮಾರಿಯಂತೆ ಬಂದ ಮೊದಲ ದಿನ ಆತನಿಗೆ ಮಲಗಲೊಂದು ಕೋಣೆಯೂ ಇರಲಿಲ್ಲ. ಕಾರಣ ಆತನ ಜೇಬಿನಲ್ಲಿ ಹಣವಿರಲಿಲ್ಲ. ಆ ಸಂಗತಿಗಳು ಇಲ್ಲ ಎಂಬುದನ್ನು ಬಿಟ್ಟರೆ ಐನ್‌ಸ್ಟೀನ್‌ ಬಳಿ ಎಲ್ಲವೂ ಇತ್ತು. ಆತ ಭೌತ ಶಾಸ್ತ್ರ ಮತ್ತು ಗಣಿತದಲ್ಲಿ ಪದವೀಧರನಾಗಿದ್ದ. ಈ ಎರಡೂ ವಿಷಯಗಳಲ್ಲಿ ರ್ಯಾಂಕ್‌ ಗಳಿಸಿದ್ದ. ಗಣಿತದ ಯಾವುದೇ ಸಮಸ್ಯೆ, ಸೂತ್ರಗಳನ್ನು ಸರಳವಾಗಿ ಬಿಡಿಸುತ್ತಿದ್ದ. ಹೀಗಾಗಿ ಆತನ ಉತ್ತರ ಕೆಲವೊಮ್ಮೆ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿತ್ತು. ಭೌತಶಾಸ್ತ್ರವಂತೂ ಆತನಿಗೆ ಅಚ್ಚುಮೆಚ್ಚು. ತನಗೆ ಗೊತ್ತಿರುವ ಈ ಎರಡೂ ವಿಷಯಗಳಲ್ಲಿ ಪಾಠ ಮಾಡಿಕೊಂಡಿದ್ದರೆ ಹೇಗೋ ಹೊಟ್ಟೆ ಹೊರೆದುಕೊಳ್ಳಬಹುದೆಂದು ಭಾವಿಸಿದ ಐನ್‌ಸ್ಟೀನ್‌, ಬರ್ನ್‌ಗೆ ಬಂದರೆ ಯಾರೂ ಕಣ್ಣೆತ್ತಿ ನೋಡಲಿಲ್ಲ. ಅಲ್ಲಿನ ಕಾಲೇಜುಗಳಿಗೆ ಹೋಗಿ ಉಪನ್ಯಾಸಕ ಕೆಲಸ ಕೊಡುವಂತೆ ಅಂಗಲಾಚಿದ. ಕೆಲಸ ಕೊಡುವುದಿರಲಿ ಯಾರೂ ಹನಿ ಅನುಕಂಪವನ್ನೂ ತೋರಲಿಲ್ಲ. ಮನೆಬಿಟ್ಟು ಬರುವಾಗ ತಂದ ಹಣ ಕರಗಲಾರಂಭಿಸಿತು. ದಿನಕಳೆದರೆ ಊಟ, ತಿಂಡಿಗೂ ತತ್ವಾರವಾಗಬಹುದೆಂದು ಹೋಟೆಲ್‌ನಲ್ಲಿ ಸಪ್ಲೈಯರ್‌ ಆಗಿ ಸೇರಿಕೊಂಡ. ಬೆಳಗಿನ ಹೊತ್ತಿನಲ್ಲಿ ಉದ್ಯೋಗಕ್ಕಾಗಿ ಅಲೆದಾಟ. ಮಧ್ಯಾಹ್ನ ಹೋಟೆಲ್‌ನಲ್ಲಿ ಕೆಲಸ. ಯಾರೂ ಕೆಲಸ ಕೊಡಲಿಲ್ಲ.

ಹೋಟೆಲ್‌ಗೆ ಬರುವ ಗಿರಾಕಿಗಳ ಮುಂದೆ ಐನ್‌ಸ್ಟೀನ್‌ ದೈನ್ಯತೆಯಿಂದ ಬೇಡಿಕೊಳ್ಳುತ್ತಿದ್ದ -‘ನಾನು ಭೌತಶಾಸ್ತ್ರ ಹಾಗೂ ಗಣಿತ ಪದವೀಧರ. ಚೆನ್ನಾಗಿ ಪಾಠ ಮಾಡುತ್ತೇನೆ. ಕೆಲಸ ಸಿಕ್ಕಿಲ್ಲವೆಂದು ಹೋಟೆಲ್‌ನಲ್ಲಿದ್ದೇನೆ. ನಿಮ್ಮ ಮಕ್ಕಳಿಗೆ ಈ ವಿಷಯಗಳಲ್ಲಿ ಪಾಠ ಹೇಳಿಕೊಡಬಲ್ಲೆ. ದಯವಿಟ್ಟು ನಿಮ್ಮ ಮಕ್ಕಳನ್ನು ನನ್ನ ಬಳಿ ಟ್ಯೂಶನ್‌ಗೆ ಕಳಿಸಿ. ನಿಮ್ಮ ಸ್ನೇಹಿತರ ಮಕ್ಕಳಿಗೂ ಹೇಳಿ’.

ಇದ್ಯಾವುದೋ ಮೆಂಟಲ್‌ ಕೇಸು ಇರಬೇಕೆಂದು ಜನ ಗೇಲಿ ಮಾಡಿಕೊಳ್ಳುತ್ತಿದ್ದರು. ಒಮ್ಮೆ ಈ ಸಂಗತಿ ಹೋಟೆಲ್‌ ಮಾಲೀಕನಿಗೆ ಗೊತ್ತಾಗಿ ಆತ ಐನ್‌ಸ್ಟೀನ್‌ನನ್ನು ಹೊರಹಾಕಿದ್ದ. ಮತ್ತೊಂದು ಹೋಟೆಲ್‌ ಸೇರಿದರೂ ಐನ್‌ಸ್ಟೀನ್‌ ತನ್ನ ಮೊದಲ ಚಾಳಿ ಬಿಡಲಿಲ್ಲ. ಯಾರೇ ಬರಲಿ, ಸಾರ್‌ ನಾನು ಭೌತಶಾಸ್ತ್ರ, ಗಣಿತ ಟ್ಯೂಶನ್‌ ಹೇಳಿಕೊಡಬಲ್ಲೆ ನಿಮ್ಮ ಮಕ್ಕಳಿಗೆ ಎಂದೇ ಶುರುವಿಡುತ್ತಿದ್ದ. ಆದರೆ ಒಬ್ಬನೇ ಒಬ್ಬನೂ ಮುಂದೆ ಬರಲಿಲ್ಲ. ಹೋಟೆಲ್‌ ಮಾಣಿ ಭೌತಶಾಸ್ತ್ರ, ಗಣಿತ ಹೇಳಿಕೊಡುವುದುಂಟಾ ಎಂದು ಎಲ್ಲರೂ ಅಪಹಾಸ್ಯ ಮಾಡುತ್ತಿದ್ದರು.

ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಪ್ಲೆಕಾರ್ಡ್‌ ಹಿಡಿದು ಹೋಗುವಂತೆ ಬರ್ನ್‌ನ ಬೀದಿಬೀದಿಗಳಲ್ಲಿ ಬೋರ್ಡ್‌ ಮೇಲೆ ಟ್ಯೂಶನ್‌ ಹೇಳಿಕೊಡಲಾಗುವುದು ಎಂದು ಬರೆಯಿಸಿ ಕೊಂಡು ಅಲೆದಾಡಿದ. ಯಾರೂ ಮುಂದೆ ಬರಲಿಲ್ಲ. ಒಂದು ತಿಂಗಳು ಉಚಿತ ಟ್ಯೂಶನ್‌ ಹೇಳಿಕೊಡುತ್ತೇನೆಂದರೂ ಯಾರೂ ಆತನನ್ನು ಮೂಸಿ ನೋಡಲಿಲ್ಲ. ತಾನು ಕಲಿತ ವಿದ್ಯೆ ಎರಡು ಹೊತ್ತಿನ ಊಟಕ್ಕೂ ಆಗಿದಿದ್ದರೆ ಅದನ್ನು ಕಟ್ಟಿಕೊಂಡು ಆಗಬೇಕಾದ್ದೇನು ಎಂದು ಅಕ್ಷರಶಃ ಅನಿಸಿದರೂ ಎಲ್ಲ ನೋವು, ಸಂಕಟಗಳನ್ನು ಅವುಡುಗಚ್ಚಿ ಸಹಿಸಿಕೊಂಡ. ಆದರೆ ಈ ಹೊತ್ತಿಗೆ ಐನ್‌ಸ್ಟೀನ್‌ ಜರ್ಜರಿತನಾಗಿದ್ದ. ಕೆಲಸವಿಲ್ಲದೇ ಒಂದು ದಿನವನ್ನೂ ಕಳೆಯುವುದು ಸಾಧ್ಯವಿರಲಿಲ್ಲ. ಪಾಪ ಅಂದು ಆತ ಎಂಥ ಅಸಹಾಯಕ ಸ್ಥಿತಿಯಲ್ಲಿದ್ದ ಅಂದ್ರೆ ಟ್ರಂಕಿನಲ್ಲಿದ್ದ ಸರ್ಟಿಫಿಕೇಟು, ಪ್ರಶಸ್ತಿ ಪತ್ರ, ನೋಟ್‌ಬುಕ್‌ಗಳನ್ನೆಲ್ಲ ಮನೆಮುಂದಿನ ತೊಟ್ಟಿಯಲ್ಲಿ ಹಾಕಿ ಬಂದು ಬಿಟ್ಟ !

ಮರುದಿನ ಯಾರೋ ಬಾಗಿಲು ಬಡಿದಾಗಲೇ ಐನ್‌ಸ್ಟೀನ್‌ಗೆ ಎಚ್ಚರವಾಗಿದ್ದು. ಯಾರೋ ನಿಮ್ಮ ಅಮೂಲ್ಯ ಕಾಗದ, ಪತ್ರ, ದಾಖಲೆಗಳನ್ನು ಎಸೆದಿದ್ದಾರೆ. ನಿಮಗೆ ಬೇಕಾದ ಕಾಗದಪತ್ರಗಳೆಂದು ಅನಿಸಿದ್ದರಿಂದ ಕೊಟ್ಟು ಹೋಗಲು ಬಂದೆ ಎಂದು ಅಪರಿಚಿತ ವ್ಯಕ್ತಿಯಾಬ್ಬ ಬಂದು ಕೊಟ್ಟು ಹೋಗದಿದ್ದರೆ ಐನ್‌ಸ್ಟೀನ್‌ ಬದುಕಿನಲ್ಲಿ ಅದೆಂಥ ತಿರುವುಗಳಾಗುತ್ತಿದ್ದವೋ ಏನೋ? ಅಷ್ಟೊತ್ತಿಗೆ ಆತನ ಕೋಪ ಇಳಿದಿತ್ತು. ಸುಮಾರು ಐದು ತಿಂಗಳು ನೌಕರಿಗಾಗಿ ಅಲೆದು ಅಲೆದು ಇನ್ನೇನು ಬರ್ನ್‌ ನಗರ ಬಿಟ್ಟು ಇಟಲಿಗೆ ಹೋಗಬೇಕೆಂದು ನಿರ್ಧರಿಸಿದ್ದ. ಆದರೆ ಐನ್‌ಸ್ಟೀನ್‌ನನ್ನು ಹೋಟೆಲ್‌ನಲ್ಲಿ ಸಂಧಿಸಿದ ವ್ಯಕ್ತಿಯಾಬ್ಬ ಆಚಾನಕ್‌ ಆಗಿ ಭೇಟಿ ಮಾಡಿ, ಭೌತಶಾಸ್ತ್ರ ವಿಷಯ ಪಾಠ ಮಾಡುವುದಾದರೆ ಸ್ಥಳೀಯ ಕಾಲೇಜಿನಲ್ಲಿ ಉಪನ್ಯಾಸಕನ ಕೆಲಸ ಕೊಡಿಸುತ್ತೇನೆಂದು ಹೇಳಿದ.

ಈ ಒಂದು ಮಾತಿಗೆ ಅಷ್ಟು ದಿನಗಳ ತನಕ ಕಾತರದಿಂದ ಕಾಯುತ್ತಿರುವವನಂತೆ ಐನ್‌ಸ್ಟೀನ್‌ ‘ಯಾವುದಾದರೂ ಕೆಲಸ ಕೊಡಿ, ಮಾಡಲು ಸಿದ್ಧ. ಅದರಲ್ಲೂ ಉಪನ್ಯಾಸಕನ ಕೆಲಸವೆಂದರೆ ನನಗೆ ಇನ್ನೇನು ಬೇಕು? ಆಯಿತು ಸೇರಿಕೊಳ್ಳುತ್ತೇನೆ’ ಎಂದ. ಕಾಲೇಜಿನಲ್ಲಿಯೂ ಐನ್‌ಸ್ಟೀನ್‌ ಅಷ್ಟಾಗಿ ಯಾರ ಗಮನಕ್ಕೂ ಬೀಳದಿದ್ದರೂ, ಯಾರ ತಂಟೆಗೆ ಮಾತ್ರ ಹೋಗುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು. ಅದಕ್ಕಿಂತ ಹೆಚ್ಚಿನ ಚಟುವಟಿಕೆಗೆ ಆತನಲ್ಲಿ ಹಣವಿರಲಿಲ್ಲ. ಹೇಗೋ ಕಷ್ಟಪಟ್ಟು ಬಾಡಿಗೆ ಮನೆ ಮಾಡುವ ಹೊತ್ತಿಗೆ ಏಳು ಹನ್ನೊಂದಾಗಿತ್ತು. ಸದಾ ಲೈಬ್ರರಿಯಲ್ಲಿ ಕುಳಿತು ಅಧ್ಯಯನದಲ್ಲಿ ಮುಳುಗಿರುತ್ತಿದ್ದ ಆತ ಒಂದು ರೀತಿಯಲ್ಲಿ ಕಾಲೇಜಿನಲ್ಲಿ ಇದ್ದೂ ಇಲ್ಲದವನಂತಿದ್ದ. ಈ ಮಧ್ಯೆ ಐನ್‌ಸ್ಟೀನ್‌ ಮದುವೆ ಕೊಳ್ಳುತ್ತಿರುವಾಗಲೇ ಮಗುವೂ ಆಯಿತು. ಒಮ್ಮೆಯಂತೂ ಮಗು ಶೀತಜ್ವರದಿಂದ ಬಳಲುತ್ತಿದ್ದರೆ ಡಾಕ್ಟರ್‌ಗೆ ಕೊಡಲು ಹಣವಿಲ್ಲದೇ ಮಗುವಿಗೆ ಚಿಕಿತ್ಸೆ ಕೊಡಿಸದಿದ್ದಾಗ ಅದು ಸತ್ತು ಹೋಗುವಂತಾಗಿತ್ತು. ಸ್ನೇಹಿತರಿಂದ ಸಾಲ ಪಡೆದು ಮಗುವನ್ನು ಡಾಕ್ಟರ್‌ಗೆ ತೋರಿಸಿದ. ಮಗು ಹೇಗೋ ಬದುಕುಳಿಯಿತು.

ಮನೆಯ ಖರ್ಚು ಹೆಚ್ಚಿದಂತೆ ಮನಸ್ಸಿನ ಬೇಗುದಿಯೂ ಹೆಚ್ಚತೊಡಗಿತ್ತು. ಸಂಸಾರದ ತಾಪತ್ರಯವೆಂಬ ಸುಳಿಯಲ್ಲಿ ಗಿರಕಿ ಹೊಡೆಯುತ್ತಿದ್ದ. ಬದುಕಿನ ಯಾವುದೇ ತುದಿಗೆ ಹೋಗಿ ನಿಂತರೂ ಆಶಾಕಿರಣವೆಂಬುದು ಮೂಡಲಿಕ್ಕಿಲ್ಲವೆಂಬುದು ಆತನಿಗೆ ಸ್ಪಷ್ಟವಾಗಿತ್ತು. ಏನನ್ನೇ ಮಾಡಿದರೂ ಕೈಗೆ ಹತ್ತುತ್ತಿರಲಿಲ್ಲ.

ಐದನೇ ವರ್ಷಕ್ಕೆ ಐನ್‌ಸ್ಟೀನ್‌ ರಿಲೆಟಿವಿಟಿ ನಿಯಮಕ್ಕೆ ಸಂಬಂಧಿಸಿದಂತೆ ಒಂದು ಪ್ರಬಂಧ ಮಂಡಿಸಿದ. ಅದು ಅಂತಾರಾಷ್ಟ್ರೀಯ ಮ್ಯಾಗಜಿನ್‌ನಲ್ಲಿ ಪ್ರಕಟವಾಯಿತು. ಐನ್‌ಸ್ಟೀನ್‌ ಮಂಡಿಸಿದ ಪ್ರಬಂಧ ಭೌತವಿಜ್ಞಾನಿಗಳಲ್ಲಿ ಸಂಚಲನ ಮೂಡಿಸಿತು. ಇದಾಗಿ ಒಂದೆರಡು ವರ್ಷಗಳಲ್ಲಿ ಆತನ ಸುಮಾರು 20ಪ್ರಬಂಧಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು. ಆತ ರೂಪಿಸಿದ E=mc2 ಸೂತ್ರ ಭೌತಶಾಸ್ತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿತು. ಐನ್‌ಸ್ಟೀನ್‌ ಈ ಹೊತ್ತಿಗೆ ಬರ್ನ್‌ ನಗರ ಬಿಟ್ಟಿದ್ದ. ಆತನ ಈ ಸಾಧನೆಗೆ ನೊಬೆಲ್‌ ಪ್ರಶಸ್ತಿ ಬಂದಾಗಲೇ ಸ್ವಿಜರ್‌ಲ್ಯಾಂಡಿನ ಜನರಿಗೆ ಗೊತ್ತಾಗಿದ್ದು-ಐನ್‌ಸ್ಟೀನ್‌ ಒಂಬತ್ತು ವರ್ಷ ತಮ್ಮ ದೇಶದಲ್ಲಿಯೇ ಇದ್ದ, ತೀರಾ ದರಿದ್ರ ಬದುಕನ್ನು ಸಾಗಿಸಿದ್ದ ಹಾಗೂ ಬರ್ನ್‌ನಲ್ಲಿದ್ದಾಗಲೇ ರಿಲೆಟಿವಿಟಿ ನಿಯಮಗಳನ್ನು ಪ್ರತಿಪಾಸಿದ್ದ ಎಂದು. ಅಲ್ಲಿನ ತನಕ ಆತನನ್ನು ಯಾರೂ ಕತ್ತೆತ್ತಿ ನೋಡಿರಲಿಲ್ಲ.

ಎಲ್ಲಾ ಇದ್ದೂ ಏನೂ ಇಲ್ಲದವನಂತೆ ದಟ್ಟ ದೈನೇಸಿ ಬದುಕನ್ನು ಸಾಗಿಸಿಕೊಂಡಿದ್ದ. ಅಂದು ಆತನ ಮನೆಯಾಳಗೆ ಕಾಲಿಟ್ಟರೆ ಆತ ಅನುಭಸಿದ ಘೋರ ಬಡತನ ಮುಖಕ್ಕೆ ರಾಚುತ್ತಿತ್ತು. ಆತನಿಗೆ ನೊಬೆಲ್‌ ಪ್ರಶಸ್ತಿ ಬರುತ್ತಿರುವಂತೆ ಅಲ್ಲಿನ ಸರ್ಕಾರ ಆತನ ಮನೆಯಲ್ಲಿ ಆತನ ಮನೆಯಲ್ಲಿ ಬಾಡಿಗೆಗಿದ್ದ ಯಾರನ್ನೋ ತೆರವುಗೊಳಿಸಿ ಅದನ್ನು ಸ್ಮಾರಕವಾಗಿ ಘೋಷಿಸಿತು! ಆತ ಅಲ್ಲಿದ್ದಾಗ ಯಾರೂ ಆತನನ್ನು ದರಕರಿಸಿದವರೂ ಆತ ತಮಗೆ ಗೊತ್ತು, ನಮ್ಮ ನೆರೆಹೊರೆಯವ, ನನ್ನ ಆಪ್ತ, ನನ್ನ ಸಹೋದ್ಯೋಗಿ, ಒಟ್ಟಿಗೆ ಆಡುತ್ತಿದ್ದೆವು ಎಂದೆಲ್ಲ ಹಲುಬಲು ಶುರುಮಾಡಿದರು.

ಹೀಗೇ ನಮ್ಮ ಸುತ್ತ ಅನೇಕರು ಆಗಾಗ ಮೈಸವರಿಕೊಂಡು ಹೋಗುತ್ತಿರುತ್ತಾರೆ. ಆದರೆ ನಾವು ಗಮನಿಸಿರುವುದಿಲ್ಲ. ತಪ್ಪು ಅವರದ್ದಲ್ಲ ಬಿಡಿ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more