• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತರಂಗದ ಮಾತು, ಸೆಕ್ಯುಲರ್‌ ಎಂಬ ವರಸೆ !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ರಾಜಕಾರಣಿಗಳ ಮಾತೇ ಹಾಗೆ. ಅವರು ಯಾವುದನ್ನೂ ನೇರವಾಗಿ ಹೇಳೊಲ್ಲ. ನೇರನುಡಿಯ ರಾಜಕಾರಣಿ ಕೂಡ ಮಾತಾಡುವುದು ಹಾಗೇ. ಮಳೆ ಬರದಿದ್ದರೆ ಮಳೆರಾಯನನ್ನು ದೂರುವುದಿಲ್ಲ. ಬರಗಾಲ ಬಂತೆಂದು ಗಲಾಟೆಯೆಬ್ಬಿಸುತ್ತಾರೆ. ಹಗರಣದಲ್ಲಿ ಸಿಕ್ಕಿಬಿದ್ದರೆ ದೇಶದ ಏಕತೆ, ಸಮಗ್ರತೆಗೆ ಧಕ್ಕೆ ಬಂದಿದೆಯೆಂದು ಹುಯಿಲೆಬ್ಬಿಸುತ್ತಾರೆ. ಪಕ್ಷ ಚುನಾವಣೆಯಲ್ಲಿ ಸೋತರೆ ದೇಶ ಗಂಡಾಂತರಕ್ಕೆ ಸಿಲುಕಿದೆಯೆಂದು ಬಡಬಡಿಸುತ್ತಾರೆ. ಏನೇ ಮಾಡಿದರೂ ಮಾತಿನ ಕೊನೆಯಲ್ಲಿ ಅವರ ಹಿತಾಸಕ್ತಿಯೇ ನಿಂತಿರುತ್ತದೆ.

ನಿಮಗೆ ನೆನಪಿರಬಹುದು, ದೇವೇಗೌಡರನ್ನು ಬೈಯಬೇಕೆನ್ನಿಸಿದಾಗಲೆಲ್ಲ ರಾಮಕೃಷ್ಣ ಹೆಗಡೆ ಅವರು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಈ ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿದೆ ಎಂದು ಮಾತು ಆರಂಭಿಸಿದರೆ ಹೆಗಡೆ ಅವರು ಯಾರನ್ನು ಉದೆ ್ದೕಶಿಸಿ ಮಾತನಾಡುತ್ತಿದ್ದರು ಎಂಬುದನ್ನು ಗ್ರಹಿಸಬಹುದಿತ್ತು. ಹಾಗೆ ದೇವೇಗೌಡರು ಗಲ್ಲವನ್ನು ಉಜ್ಜುತ್ತಾ, ‘ನಮ್ಮ ಸಾಮಾಜಿಕ ಜೀವನದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ಅಧಃಪತನಕ್ಕೆ ಮೌಲ್ಯಗಳ ಬಗ್ಗೆ ನಮಗಿರುವ ಅನಾದರವೇ ಕಾರಣ’ ಎಂದು ಶುರು ಹಚ್ಚಿ ಕೊಂಡರೆ ಅವರು ರಾಮಕೃಷ್ಣ ಹೆಗಡೆ ಅವರ ಬಗ್ಗೆ ಮಾತನಾಡುತ್ತಿದ್ದಾರೆಂದು ಭಾವಿಸಬಹುದಿತ್ತು. ಒಬ್ಬರು ಮತ್ತೊಬ್ಬರ ಹೆಸರನ್ನು ಪ್ರಸ್ತಾಪಿಸುತ್ತಿರಲಿಲ್ಲ.

ಸಾರ್ವಜನಿಕ ಜೀವನದಲ್ಲಿರುವವರ ಮಾತುಗಳಿಗೆ ಕಿವಿ ಹಚ್ಚಿ ಕುಳಿತುಕೊಂಡರೆ ಬೇರೆ ಬೇರೆ ಅರ್ಥಗಳ ಕಂಪನಗಳು ಕೇಳುತ್ತವೆ. ಒಂದು ಪದಕ್ಕೆ ಶಬ್ದಕೋಶದಲಿ ್ಲ ಒಂದೆರಡು ಅರ್ಥಗಳಿದ್ದರೆ ಇವರ ಮಾತುಗಳಿಗೆ ಹತ್ತಾರು ಅರ್ಥಗಳಿರುತ್ತವೆ. ಪದಗಳನ್ನು ಹೇಳುವಾಗಿನ ಧ್ವನಿಯ ಏರಿಳಿತ, ಹಾವಭಾವಗಳು ಮತ್ತಷ್ಟು ಅರ್ಥಗಳನ್ನು ಸೃಜಿಸುತ್ತವೆ.

ನುಣುಪು ಮುಖದ ದೇವೇಗೌಡರು ಗಲ್ಲವನ್ನು ತೀವಿಕೊಳ್ಳುತ್ತಾ ಮೌಲ್ಯಗಳ ಅಧಃಪತನದ ಕುರಿತು ಪ್ರಸ್ತಾಪಿಸಿದರೆ ವಾಕ್ಯಾರ್ಥಕ್ಕಿಂತ ಹಾವಭಾವಗಳು ಹೇಳುವ ಅರ್ಥವೇ ಹೆಚ್ಚು.

Secularism and Power Politics in Indiaರಿಚರ್ಡ್‌ ನಿಕ್ಸನ್‌ ಅಮೆರಿಕದ ಅಧ್ಯಕ್ಷನಾಗಿದ್ದಾಗ ಜೇಂಸ್‌ ಸ್ಟನ್‌ಫೋರ್ಡ್‌ ಎಂಬ ನಿಕ್ಸನ್‌ ಟೀಕಾಕಾರನಿದ್ದ. ನಿಕ್ಸನ್‌ ಏನೇ ಮಾಡಲಿ, ಏನೇ ಹೇಳಲಿ ಅದನ್ನು ಟೀಕಿಸುತ್ತಿದ್ದ. ನಿಕ್ಸನ್‌ ಯಾವುದೇ ಸಂದರ್ಭವಿರಲಿ, ಮಾತನಾಡುವಾಗ ಪ್ರೆಸಿಡೆಂಟ್ಸ್‌ ಹಾರ್ಡೆಸ್ಟ್‌ ಟಾಸ್ಕ್‌ ಈಸ್‌... ಎಂದೇ ಮಾತನಾಡುತ್ತಿದ್ದ. ಇದು ಹತ್ತಾರು ಸಲ ಪತ್ರಿಕೆಗಳಲ್ಲಿ ವರದಿಯಾಯಿತು. ಸ್ಟನ್‌ಫೋರ್ಡ್‌ಗೆ ಇಷ್ಟೇ ಸಾಕಾಯಿತು. ನಿಕ್ಸನ್‌ನನ್ನು ಟೀಕಿಸುವಾಗ ಪ್ರೆಸಿಡೆಂಟ್ಸ್‌ ಹಾರ್ಡೆಸ್ಟ್‌ ಟಾಸ್ಕ್‌ ಈಸ್‌ ಟು ಡು ವಾಟ್‌ ಈಸ್‌ ರೈಟ್‌ ಎಂದು ಚುಚ್ಚುತ್ತಿದ್ದ.

ಸಾರ್ವಜನಿಕ ಜೀವನದಲ್ಲಿರುವವರು ವಿಚಿತ್ರವಾದ ಭಾಷೆಯ ಮೂಲಕ(ಅಂದರೆ ಸುರಕ್ಷಿತ ಭಾಷೆಯ ಮೂಲಕ ಎಂದು ಓದಿಕೊಳ್ಳಬೇಕು) ಸದಾ ವ್ಯವಹರಿಸಲು ಬಯಸುತ್ತಾರೆ. ಎಂಥ ಗಡುಚಾದ, ಇರುಸುಮುರುಸಿನ ಸಂದರ್ಭದಲ್ಲಿ ಸಹ ಈ ಭಾಷೆ ಅವರನ್ನು ರಕ್ಷಿಸುತ್ತದೆ. ಈ ಭಾಷೆಯನ್ನು ಪ್ರಯೋಗಿಸಿದರೆ ತಟ್ಟನೆ ಯಾರೂ ಮೈಮೇಲೆ ಬರಲಾರರು ಹಾಗೂ ಯಾರೂ ಅಪಾರ್ಥ ಮಾಡಿಕೊಳ್ಳಲಾರರು ಎಂದು ಅವರು ಭಾವಿಸುತ್ತಾರೆ. ಹೀಗಾಗಿ ಕಾಲಕಾಲಕ್ಕೆ ಹೊಸ ರಾಜಕೀಯ ಪರಿಭಾಷೆ ಹುಟ್ಟುತ್ತಿರುತ್ತದೆ.

ಮೊನ್ನೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇನ್ನೇನು ಪ್ರಧಾನಿ ಪಟ್ಟವನ್ನು ಅಲಂಕರಿಸುವರೆಂದು ಇಡೀ ವಿಶ್ವವೇ ಕಾಯುತ್ತಾ ಕುಳಿತಿದ್ದಾಗ ಹಠಾತ್ತನೆ ಒಲ್ಲೆ ಎಂದುಬಿಟ್ಟರು. ಸೋನಿಯಾ ಅವರ ಈ ನಿರ್ಧಾರವನ್ನು ಯಾರೂ ಕನಸು ಮನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಸೋನಿಯಾ ಪ್ರಧಾನಿ ಪದವಿಯನ್ನು ನಿರಾಕರಿಸಬಾರದೆಂದು ಕಾಂಗ್ರೆಸ್‌ ಸಂಸದೀಯ ಪಕ್ಷ ನಿರ್ಣಯ ಅಂಗೀಕರಿಸಿತು. ದೇಶಾದ್ಯಂತ ಚಳವಳಿಗಳಾದವು.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಸೋನಿಯಾ, ಮಿತ್ರ ಪಕ್ಷಗಳ ಬೆಂಬಲ ಪತ್ರವನ್ನು ರಾಷ್ಟ್ರಪತಿಗೆ ಒಪ್ಪಿಸಲು ಒಪ್ಪವಾಗಿ ಜೋಡಿಸಿಟ್ಟುಕೊಂಡಿದ್ದ ಸೋನಿಯಾ, ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಏರ್ಪಾಟು ಮಡಿಕೊಂಡಿದ್ದ ಸೋನಿಯಾ, ಇಟಲಿ ಪತ್ರಿಕೆಗಳಿಗೆ ಸಂದರ್ಶನ ನೀಡಿ ಪ್ರಧಾನಿಯಾಗಿ ತಮ್ಮ ಆದ್ಯತೆಗಳನ್ನು ತಿಳಿಸಿದ ಸೋನಿಯಾ ಅಂತಿಮ ಕ್ಷಣದಲ್ಲಿ ಹಿಂದೇಟು ಹಾಕಿದ್ದೇಕೆ ಎಂಬುದನ್ನು ಹೇಳಲೇ ಇಲ್ಲ. ಸಮಸ್ತ ವಿಶ್ವವೇ ಅವರ ಉತ್ತರಕ್ಕೆ ಕಾದು ಕುಳಿತಿತ್ತು. ಈಗಲೂ ಕುಳಿತಿದೆ. ಆದರೆ ಸೋನಿಯಾ ತಮ್ಮ ಅಂತರಂಗದ ಮಾತು ಕೇಳಿ ಪ್ರಧಾನಿ ಹುದ್ದೆಯನ್ನು ತಿರಸ್ಕರಿಸುತ್ತಿದ್ದೇನೆ ಎಂದು ಹೇಳಿ ಸುಮ್ಮನಾಗಿಬಿಟ್ಟರು! ಈ ಅಂತರಂಗದ ಮಾತು ಯಾವುದು ? ಯಾರಿಗೂ ತಿಳಿಸಬಾರದಂಥ ಮಾತೇ ಅದು? ಯಾರೂ ಕೇಳಿಸಿಕೊಳ್ಳದಂಥ ಬಿರುನುಡಿಗಳೇ ಅವು ? ಅಥವಾ ಬಹಿರಂಗಪಡಿಸಲು ಸಾಧ್ಯವಾಗದಂಥಹ ರಹಸ್ಯವೇನು ? ಮುಂತಾದ ಪ್ರಶ್ನೆಗಳು ಉದ್ಭವಿಸಿದರೂ ಸೋನಿಯಾ ಮಾತ್ರ ಅಂತರಂಗಕ್ಕೆ ಜಾರಿಕೊಂಡರು. ಪ್ರಧಾನಿ ಹುದ್ದೆ ನಿರಾಕರಿಸಿದ್ದೇಕೆ ಎಂಬುದನ್ನು ಇಡೀ ರಾಷ್ಟ್ರಕ್ಕೆ ತಿಳಿಸಬೇಕಾದ ಸೋನಿಯಾ ಸುರಕ್ಷಿತ ಹಾಗೂ ಹೊಸ ರಾಜಕೀಯ ಪರಿಭಾಷೆಗೆ ಮೊರೆಹೋದರು. ಅಂತರಂಗದ ಮಾತುಗಳೇನು ಎಂಬುದನ್ನು ಯಾರೂ ಕೇಳಲಿಲ್ಲ ಅಥವಾ ಅಂತರಂಗದ ಮಾತುಗಳನ್ನು ಯಾರೂ ಕೇಳಲೇಬಾರದೇ ಎಂದು ಯಾರೂ ಪ್ರಶ್ನಿಸಲಿಲ್ಲ.

ಇನ್ನು ಮುಂದೆ ಕಠಿಣ ನಿರ್ಧಾರ ತೆಗೆದುಕೊಂಡಾಗ ಅಂತರಂಗದ ಮಾತಿನ ಪ್ರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆಯೆಂದು ಹೇಳಿದರೆ ಮುಗೀತು, ಸುರಕ್ಷಿತ. ಹೀಗೆ ಹೇಳಿದರೆ ಬೇರೆ ಯಾವ ಕಾರಣ ಕೊಡಬೇಕಿಲ್ಲ. ಸ್ಪಷ್ಟನೆ ನೀಡಬೇಕಿಲ್ಲ. ಕಾರಣ ಇದೇ ಪ್ರಬಲ ಸಮರ್ಥನೆ! ಅಂತರಂಗದ ಮಾತನ್ನು ಕೇಳಿ ಇನ್ನು ಮುಂದೆ ಯಾವ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಬಹುದು.

ಇತ್ತೀಚಿನ ವರ್ಷಗಳಲ್ಲಿ ರೂಪು ತಾಳಿ, ಬಹಳ ಬೇಗ ಚಲಾವಣೆಗೆ ಬಂದು ಮಾನ್ಯತೆ ಪಡೆದ ಮತ್ತೊಂದು ಪದವೆಂದರೆ ಸೆಕ್ಯುಲರ್‌. ಇದೆಂಥ ಸುರಕ್ಷಿತ ಪದವೆಂದರೆ ಈ ಪದ ಬಳಸಿ ಯಾವ ಹೀನಾತಿಹೀನ ಕೆಲಸ ಮಾಡಿ ಈ ಪದ ಬಳಸಬಹುದು. ನೀವು ಸುರಕ್ಷಿತ. ಅದಕ್ಕಿಂತ ಮುಖ್ಯವಾಗಿ ಈ ಪದ ಬಳಸಿದರೆ ಅರ್ಥವಂತಿಕೆ ಬರುತ್ತದೆ. ಸೈದ್ಧಾಂತಿಕ ನೆಲೆಗಟ್ಟು ಸಿಗುತ್ತದೆ. ಬುದ್ಧಿಜೀವಿಗಳು ಅಥವಾ ವಿಚಾರವಾದಿಗಳೆಂದು ಕರೆಯಿಸಿಕೊಳ್ಳಬಹುದು.

ನೋಡಿ, ಎಂಥ ವಿಚಿತ್ರ, ಕರಾಳ ತುರ್ತುಸ್ಥಿತಿ ಹೇರಿದ್ದನ್ನು ಕಮ್ಯುನಿಸ್ಟರು ಸಮರ್ಥಿಸಿಕೊಂಡರು. ಇವೆರಡೂ ಕೂಡ ದೇಶ ವಿರೋಧಿ ಕೃತ್ಯಗಳೆಂದು ಂುೂರು ಬೇಕಾದರೂ ಹೇಳಬಹುದು. ಆದರೆ ನಮ್ಮ ನೆಲದ ಬುದ್ಧಿಜೀವಿಗಳು ರಾಷ್ಟ್ರಪ್ರೇಮವನ್ನು ಕಮ್ಯುನಿಸ್ಟರಿಂದ ಕಲಿಯಬೇಕು. ಕಾರಣ ಅವರು ಸೆಕ್ಯುಲರ್‌ ವಾದಿಗಳು ಎಂದು ಅಪ್ಪಣೆ ಕೊಡಿಸುತ್ತಾರೆ.

ಈ ಸಲದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು ಕಾಂಗ್ರೆಸ್‌ ವಿರುದ್ಧ ಸ್ಪರ್ಧಿಸಿ ಭಾರೀ ಸಂಖ್ಯೆಯಲ್ಲಿ ವಿಜೇತರಾದರು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್‌ನ್ನು ಹೀನಾಯವಾಗಿ ಟೀಕಿಸಿದರು. ಇದರಿಂದಾಗಿ ಕಮ್ಯುನಿಸ್ಟರಿಗೆ ಎಂದೂ ಸಿಗದಷ್ಟು ಸೀಟುಗಳು ಸಿಕ್ಕಿದವು. ಹಾಗೆಯೇ ಕೇರಳದಲ್ಲೂ. ಆದರೆ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಅಧಿಕ ಸ್ಥಾನಗಳನ್ನು ಗಳಿಸಿದ್ದೇ ತಡ, ಕಮ್ಯುನಿಸ್ಟರು ಕಾಂಗ್ರೆಸ್‌ ಗುಣಗಾನ ಮಾಡತೊಡಗಿದರು. ಎನ್‌ಡಿಎಯನ್ನು ಅಧಿಕಾರದಿಂದ ಹೊರಗಿಡಲು ಸೆಕ್ಯುಲರ್‌ ಶಕ್ತಿಗಳೆಲ್ಲ ಒಂದುಗೂಡುವ ಅಗತ್ಯವಿದೆಯೆಂದು ಕಮ್ಯುನಿಸ್ಟರು ಹೇಳತೊಡಗಿದರು! ಅಷ್ಟೇ ಅಲ್ಲ , ಸರಕಾರ ರಚನೆಯಲ್ಲಿ ಕಾಂಗ್ರೆಸ್‌ ಜತೆಗೆ ಕೈ ಜೋಡಿಸಿದರು.

ಸೆಕ್ಯುಲರ್‌ ಹೆಸರು ಹೇಳಿದರೆ ಎಂಥ ಅಸೈದ್ಧಾಂತಿಕ ಕಾರ್ಯಗಳನ್ನು ಮಾಡಲು ಪರ್ಮಿಟ್ಟು ಸಿಕ್ಕ ಹಾಗೆ ಎಂಬುದು ಅವರಿಗೆ ಗೊತ್ತಿತ್ತು. ಇನ್ನು ಮುಲಾಯಂಸಿಂಗ್‌ ಯಾದವ್‌, ಮಾಯಾವತಿ ಕೂಡ ಮಾಡಿದ್ದು ಇದನ್ನೇ. ಚುನಾವಣೆಯಲ್ಲಿ ಸೋನಿಯಾ ಅವರನ್ನು ವಿರೋಧಿಸಿದ ಇವರು ಫಲಿತಾಂಶ ಬಂದ ಬಳಿಕ ಸೆಕ್ಯುಲರ್‌ ಶಕ್ತಿಗಳ ಒಗ್ಗೂಡುವಿಕೆಯ ಅಗತ್ಯವಿದೆಯೆಂದು ಪ್ರತಿಪಾದಿಸತೊಡಗಿದರು.

ಕೆಲ ವರ್ಷಗಳ ಹಿಂದೆ ಕಾಂಗ್ರೆಸ್‌ನಂಥ ಭ್ರಷ್ಟಪಕ್ಷ ಇನ್ನೊಂದಿಲ್ಲ ಎಂದು ಘೋಷಿಸಿದ್ದ ಮಿಸ್ಟರ್‌ ಕ್ಲೀನ್‌ ವಿ.ಪಿ. ಸಿಂಗ್‌ ಆ ಪಕ್ಷದಿಂದ ಹೊರಬಂದರು. ಈಗ ಸೆಕ್ಯುಲರ್‌ ಮಂತ್ರ ಹೇಳುತ್ತಾ ಸೋನಿಯಾ ಪಕ್ಕದಲ್ಲಿ ನಿಲ್ಲುತ್ತಾರೆ. ರಾಜೀವ್‌ ಗಾಂಧಿ ಮನೆ ಮುಂದೆ ಇಬ್ಬರು ಪೊಲೀಸು ಪೇದೆಗಳನ್ನು ಇಟ್ಟಿದ್ದಾರೆಂಬ ಪಿಳ್ಳೆ ನೆವಕ್ಕೆ ಕಾಂಗ್ರೆಸ್‌ ಚಂದ್ರಶೇಖರ್‌ ನೇತೃತ್ವದ ಸರಕಾರವನ್ನು ಉರುಳಿಸಿತು. ಅದೇ ಚಂದ್ರಶೇಖರ್‌ ಈಗ ನಾಚಿಕೆ ಬಿಟ್ಟು ದೇಶದಲ್ಲಿರುವ ಏಕಮಾತ್ರ ಸೆಕ್ಯುಲರ್‌ ಪಕ್ಷವೆಂದರೆ ಕಾಂಗ್ರೆಸ್‌ ಎಂದು ಹೇಳುತ್ತಾ ಕಾಂಗ್ರೆಸ್‌ನತ್ತ ವಾಲುತ್ತಾರೆ. ಯಾವ ಕಾರಣಕ್ಕಾಗಿ ದೇವೇಗೌಡರ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್‌ ವಾಪಸ್‌ ಪಡೆದು ಅವರನ್ನು ಪ್ರಧಾನಿ ಪಟ್ಟದಿಂದ ಕೆಡವಿತೋ ಯಾರಿಗೂ ಗೊತ್ತಿಲ್ಲ. ಆದರೆ ಅದೇ ದೇವೇಗೌಡರು ಈಗ ಎಲ್ಲ ಬಿಟ್ಟು ಸೋನಿಯಾ ಮನೆಮುಂದೆ ನಿಂತಿದ್ದಾರೆ. ಗೌಡರನ್ನು ಎಡತಾಕಿ, ಅವರು ಹೇಳುತ್ತಾರೆ- ಸೆಕ್ಯುಲರ್‌ ಶಕ್ತಿಗಳೆಲ್ಲ ಒಂದಾಗದಿದ್ದರೆ ದೇಶಕ್ಕೇ ಗಂಡಾಂತರ. ಹೀಗಾಗಿ ಸೋನಿಯಾ ಜತೆ ಕೈಜೋಡಿಸುವುದರಲ್ಲಿ ತಪ್ಪಿಲ್ಲ.

ಈ ಸಲದ ಚುನಾವಣೆಯಲ್ಲಿ ಸಹ ರಾಜ್ಯದಲ್ಲಿ ದೇವೇಗೌಡರು ಸೋನಿಯಾ ಹಾಗೂ ಅವರ ಪಕ್ಷವನ್ನು ಖಡಾಖಡಿಯಾಗಿ ಟೀಕಿಸಿದರು. ಕಾಂಗ್ರೆಸ್ಸನ್ನು ಸೋಲಿಸುವ ತನಕ ವಿರಮಿಸುವುದಿಲ್ಲ ಎಂದು ಶಪಥ ತೊಟ್ಟರು. ಭ್ರಷ್ಟ, ಅದಕ್ಷ, ಮಾನಗೇಡಿ ಸರಕಾರ ಎಂದು ಜರೆದರು. ಚುನಾವಣಾ ಫಲಿತಾಂಶ ಬಂತು. ತಮಗೆ ಕಾಂಗ್ರೆಸ್‌ ಬೆಂಬಲವಿಲ್ಲದೇ ಸರಕಾರ ರಚನೆ ಸಾಧ್ಯವಿಲ್ಲವೆಂದು ಖಚಿತವಾದಾಗ ನಿಧಾನವಾಗಿ ಸೆಕ್ಯುಲರ್‌ ಮಂತ್ರ ದೇವೇಗೌಡರಿಂದ ಕೇಳಿ ಬರತೊಡಗಿತು. ಮೂರನೇ ಪಕ್ಷವಾಗಿ ಹೊರಹೊಮ್ಮಿದ ತಮ್ಮ ಪಕ್ಷದ ನೇತೃತ್ವದಲ್ಲಿ ಕಾಂಗ್ರೆಸ್‌ ಬೆಂಬಲ ಪಡೆದು ಸರಕಾರ ರಚಿಸುವುದಾಗಿ ಗೌಡರು ಘೋಷಿಸಿದರು. ಕಾಂಗ್ರೆಸ್‌ ಸರಕಾರದ ದುರಾಡಳಿತ, ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ಅಧಿಕಾರಕ್ಕೆ ಬಂದ ತಿಂಗಳೊಳಗೆ ತನಿಖೆ ಮಾಡಿ ಶಿಕ್ಷಿಸುವುದಾಗಿ ಎದೆತಟ್ಟಿ ಮಾತನಾಡಿದ್ದ ಗೌಡರು, ಯಾರ ಮುಂದೆ ನಿಲ್ಲಬಾರದಿತ್ತೋ ಈಗ ಅವರ ಮುಂದೆ ಕುಕ್ಕರು ಬಡಿದಿದ್ದಾರೆ. ಅಂದರೆ ಸೆಕ್ಯುಲರ್‌ ಶಕ್ತಿಗಳೆಲ್ಲ ಒಂದಾಗಲು ಏನು ಬೇಕಾದರೂ ಮಾಡಬಹುದು ಎಂದಂತಾಯಿತು. ಸೆಕ್ಯುಲರ್‌ ಲೇಪ ಕೊಟ್ಟರೆ ಎಲ್ಲ ಅನೈತಿಕ ಕೆಲಸಗಳೂ ಮಾಪು!

ಇಂಥ ಸೆಕ್ಯುಲರ್‌ ವಾದವನ್ನು ಕಂಡಾಗ ಬೆಂಬಲಿಸಬೇಕು. ಅದಿಲ್ಲದಿದ್ದರೆ ಸುಮ್ಮನಿರಬೇಕು. ಇವೆರಡೂ ಸಾಧ್ಯವಾಗದೇ ವಿರೋಧಿಸಿದರೆ ಅಥವಾ ದನಿಯೆತ್ತಿದರೆ ಹುಷಾರ್‌, ಕೋಮುವಾದಿಗಳಾಗಬೇಕಾಗುತ್ತದೆ!

ಇಂಥ ಆರೋಪಗಳು ಬಂದಾಗ, ಈ ಆರೋಪಗಳನ್ನು ನಿಜವೆಂದು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದರೆ ಅವುಗಳಿಂದಲೂ ಸುಲಭವಾಗಿ ಪಾರಾಗಬಹುದು. ಆದರೆ ರಾಜಕೀಯದ ಪರಿಭಾಷೆ ಅರ್ಥವಾಗದಿದ್ದರೆ ಡಯಾಬಿಟಿಸ್‌ ರೋಗಿ ಸಕ್ಕರೆ ತ್ಯಜಿಸಿದರೂ ಅದೊಂದು ಮಹಾನ್‌ ತ್ಯಾಗವಾಗುತ್ತದೆ!

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more