• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಷಾರು, ಹಾಳು ಮೂಳು ತಿಂಡಿಯ ರಾಕ್ಷಸ ಕಣ್ಣೆದುರೇ ಇದ್ದಾನೆ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಅಂತೂ ಬಂತು ಬೆಂಗಳೂರಿಗೆ ಮೆಕ್‌ಡೊನಾಲ್ಡ್‌, ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಕಳ್ಳ ಹೆಜ್ಜೆ ಹಾಕುತ್ತಾ ಬಂದಿದೆ. ಅದು ಇಲ್ಲಿ ಬಂದು ಕುಳಿತುಕೊಳ್ಳುವ ತನಕ ಯಾರಿಗೂ ಗೊತ್ತಾಗಲಿಲ್ಲ.

ನಿನ್ನೆ ಅಮೆರಿಕದಕಲ್ಲಿದ್ದುದು ನಾಳೆ ನಮ್ಮ ದೇಶಕ್ಕೆ, ನಾಡಿದ್ದು ನಮ್ಮೂರಿಗೆ ಬರುತ್ತದೆಂಬ ಮಾತಿನಂತೆ ಇಂದು ಮೆಕ್‌ಡೊನಾಲ್ಡ್‌ ಎಂಬ ಫಾಸ್ಟ್‌ಫುಡ್‌ ಅಥವಾ ಜಂಕ್‌ಫುಡ್‌ ಅಥವಾ ಹಾಳುಮೂಳು ತಿಂಡಿ ಮಳಿಗೆ ನಮ್ಮೂರಿಗೆ ಬಂದಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಕೆಂಟುಕಿ ಫ್ರೆೃಡ್‌ ಚಿಕನ್‌(ಕೆಎಫ್‌ಸಿ) ಮಳಿಗೆ ಬಂದಾಗ, ಪಿಜ್ಜಾ ಹಟ್‌ ಬಂದಾಗ, ಒಳ್ಳೆ ತಳಿಯ ಬೀಜ ಮಾರ್ತೀವಿ ಅಂತ ಕಾರ್ಗಿಲ್‌ ಕಂಪನಿ ಬಂದು ಅಂಗಡಿ ತೆರೆದುಕೊಂಡಾಗ ರೈತ ಮುಖಂಡ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೂರಾರು ರೈತರನ್ನು ಒಟ್ಟಾಕಿಕೊಂಡು ಪ್ರತಿಭಟನೆ ಮಾಡಿದರು. ಅಂಗಡಿಗಳಿಗೆ ಕಲ್ಲೆಸೆದರು. ಬಹುರಾಷ್ಟೀಯ ಕಂಪನಿಗಳ ವಿರುದ್ಧ ಭಾರಿ ಕೋಲಾಹಲವೆಬ್ಬಿಸಿದರು. ಕೆಎಫ್‌ಸಿ ಮಳಿಗೆಯನ್ನಂತೂ ತುಕ್ಡಾ ತುಕ್ಡಾ ಮಾಡಿದರು. ಒಂದು ವರ್ಷದ ಬಳಿಕ ಪಿಜ್ಜಾ ಹಟ್‌ ಫಾಸ್ಟ್‌ಫುಡ್‌ ಮಳಿಗೆ ಬೆಂಗಳೂರಿಗೆ ಕಾಲಿಟ್ಟಾಗ ಅದೇ ಪ್ರೊ.ನಂಜುಂಡಸ್ವಾಮಿ ಮತ್ತೆ ಎದ್ದು ನಿಂತರು. ‘ಪಿಜ್ಜಾ ಹಟ್‌ ಪೀಛೆ ಹಠ್‌ ’ ಎಂದು ಘೋಷಣೆ ಕೂಗಿದರು. ಏನೂ ಪ್ರಯೋಜನವಾಗಲಿಲ್ಲ. ಕೆಎಫ್‌ಸಿ, ಪಿಜ್ಜಾ ಹಟ್‌, ಕಾರ್ಗಿಲ್‌ ಎಲ್ಲ ಪ್ರತಿರೋಧಗಳ ನಡುವೆಯೂ ಅವು ತಮ್ಮ ದುಕಾನುಗಳನ್ನು ತೆರೆದು ಕುಳಿತವು. ಕೆಎಫ್‌ಸಿ ವಿರುದ್ಧ ಮೊದಲ ಬಾರಿಗೆ ಪ್ರತಿಭಟಿಸಿದ್ದ ಕಾವಿನ ಅರ್ಧ ಚಿಟಿಕೆ, ಪಿಜ್ಜಾ ಹಟ್‌ ವಿರುದ್ಧ ಮಾಡುವಾಗ ಇರಲಿಲ್ಲ.

Beware, McDonalds opens Bangalore outlet!ಈಗ ಮೆಕ್‌ಡೊನಾಲ್ಡ್‌ ಎಂಬ ‘ಹಾಳುಮೂಳು ತಿಂಡಿ’ಯ ರಕ್ಕಸ ಬಂದಿದ್ದಾನೆ. ಇಂದು ನಮ್ಮ ಮಧ್ಯೆ ಪ್ರೊ. ನಂಜುಂಡಸ್ವಾಮಿ ಇಲ್ಲ. ಹೀಗಾಗಿ ಪ್ರತಿಭಟನೆಯ ಸಣ್ಣ ಕೂಗು ಸಹ ಇಲ್ಲ. ಬೆಂಗಳೂರಿನ ಕೋರಮಂಗಲದಲ್ಲಿರುವ ಮೆಕ್‌ಡೊನಾಲ್ಡ್ಸ್‌ ಮಳಿಗೆಯನ್ನೊಮ್ಮೆ ನೋಡಬೇಕು. ಪ್ರತಿನಿತ್ಯ ಅಲ್ಲಿ ಅಕ್ಕಿಆಲೂರು ಸಂತೆಯಲ್ಲಿರುವಷ್ಟು ಜನ ಸೇರಿರುತ್ತಾರೆ. ರಾಜಾದಿನಗಳಲ್ಲಂತೂ ಸಾಲು ಹಚ್ಚಿ ಹ್ಯಾಮ್‌ ಬರ್ಗರ್‌ ತಿನ್ನಲು ನಿಂತಿರುವುದನ್ನು ನೋಡಿದರೆ ಇಥಿಯೋಪಿಯಾದಲ್ಲಿ ಗಂಜಿಕೇಂದ್ರದ ಮುಂದೆ ತಾಟು ಹಿಡಿದ ಹೊಟ್ಟೆಗಿಲ್ಲದ ನೂರಾರು ನರಪೇತಲ ಮಕ್ಕಳ ಚಿತ್ರ ಕಣ್ಣ ಮುಂದೆ ಬರುತ್ತದೆ. ಇಲ್ಲಿ ಹಣವುಳ್ಳವರು ತಿನ್ನುವುದಕ್ಕಾಗಿ ಸಾಲಿನಲ್ಲಿ ನಿಂತರೆ ಅಲ್ಲಿ ಹಣವಿಲ್ಲದವರು, ಹೊಟ್ಟೆಗಿಲ್ಲದವರು ನಿಲ್ಲುತ್ತಾರೆ. ವ್ಯತ್ಯಾಸ ಅಷ್ಟೇ.

ವಿಷಯ ಇದಲ್ಲ. ಮೆಕ್‌ಡೊನಾಲ್ಡ್‌ ಎಂಬ ಹಾಳುಮೂಳು ತಿಂಡಿಯ ಮಳಿಗೆ ಇಂದು ಜಗತ್ತಿನಾದ್ಯಂತ ಯಾವ ಪ್ರಮಾಣದಲ್ಲಿ ವಿಸ್ತರಿಸುತ್ತಿದೆ ? ಸ್ಥಳೀಯ ಆಹಾರ ಹೇಗೆ ಮೂಲೆಗುಂಪಾಗುತ್ತಿದೆ? ಅಮೆರಿಕ ಸಂಸ್ಕೃತಿಯ ಪ್ರತೀಕದಂತಿರುವ ಈ ತಿಂಡಿ ನಮ್ಮ ಮಕ್ಕಳ ಆರೋಗ್ಯ, ಮನುಷ್ಯ ಹಾಳುಗೆಡವುತ್ತಿದೆ? ಈ ತಿಂಡಿ ಹೇಗೆ ನಮ್ಮ ಮಕ್ಕಳ ಆರೋಗ್ಯ, ಮನಸ್ಸನ್ನು ಹಾಳುಗೆಡುವುತ್ತಿದೆ? ಒಂದು ತಿಂಡಿ ಹೇಗೆ ಆಹಾರ ರಾಜಕೀಯ (Food Politics) ವನ್ನು ಹುಟ್ಟು ಹಾಕುತ್ತದೆ? ಪಾಶ್ಚಾತ್ಯ ಆಹಾರ ಹೇಗೆ ನಮ್ಮ ಆಹಾರ ಸಂಸ್ಕೃತಿ, ಜೀವನ ಕ್ರಮವನ್ನು ವ್ಯವಸ್ಥಿತವಾಗಿ ಕೊಲ್ಲುತ್ತಿದೆ? ನಾವು ಬರಗೆಟ್ಟವರಂತೆ ಹೇಗೆ ಬರ್ಗರ್‌ ದಾಸರಾಗುತ್ತಿದ್ದೇವೆ? ನಾವು ತಿನ್ನುವ ತಾಟಿಗೆ ಬೇರೆಯವರು ಕೈ ಹಾಕಿದಾಗಲೂ ನಮಗ್ಯಾಕೆ ಏನೂ ಅನಿಸುವುದಿಲ್ಲ ? ಜಗತ್ತಿನಾದ್ಯಂತ ಮೆಕ್‌ಡೊನಾಲ್ಡ್‌ ಸಾಧಿಸಿರುವ ಪ್ರಭುತ್ವ ಎಂಥದು? ನಾವು ತಲೆಕೆಡಿಸಿಕೊಳ್ಳಬೇಕಾದ, ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು.

ಮೆಕ್‌ಡೊನಾಲ್ಡ್‌ ಇಂದು ಕೇವಲ ಬರ್ಗರ್‌ ಅಥವಾ ಹ್ಯಾಮ್‌ ಬರ್ಗರ್‌ ತಯಾರಿಸಿ ಮಾರುವ ಅಂಗಡಿಯಲ್ಲ. ನಮ್ಮ ಆಹಾರ ವಿಧಾನ, ಜೀವನಪದ್ಧತಿ ಮೇಲೆ ನಡೆಸುತ್ತಿರುವ ಆಕ್ರಮಣ ಹಾಗೂ ನಮ್ಮ ನಾಲಗೆಯ ರುಚಿಗ್ರಂಥಿಗಳಿಗೆ addiction ಮೂಡಿಸಿ ನಮ್ಮ ನಾಲಗೆಯ ರುಚಿಗೆಡಿಸುವ ಹುನ್ನಾರ. ಬರ್ಗರ್‌ ತಿನ್ನುವವರ ಮುಂದೆ ಹೀಗೆ ಹೇಳಿ ನೋಡಿ. ನಮಗೇನು ಬೇಕೋ ಅದನ್ನು ಅದನ್ನು ತಿಂದರೆ ಅದು ನಮ್ಮ ಸಂಸ್ಕೃತಿ ಮೇಲೆ ಆಕ್ರಮಣ ಹೇಗಾಗುತ್ತದೆ ಎಂದು ಕೇಳುತ್ತಾರೆ. ಅವರ ಪಾಲಿಗೆ ಇದೊಂದು ಸಮಸ್ಯೆಯೇ ಅಲ್ಲ. ಅವರ ದೃಷ್ಟಿಯಲ್ಲಿ ಮೆಕ್‌ಡೊನಾಲ್ಡ್‌ ನಮಗೆ ಉಪಕಾರ ಮಾಡಲೆಂದು ಅವತರಿಸಿದೆ.

ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಹಾಗೂ ಮೊದಲು ಮೆಕ್‌ಡೊನಾಲ್ಡ್‌ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬಹುದು. ಇಂದು ಈ ಕಂಪನಿಯ ಮಳಿಗೆಯಿರದ ದೇಶವೇ ಇಲ್ಲ. ವಿಶ್ವದ ಯಾವುದೇ ದೇಶಕ್ಕೆ ಹೋದರೂ ಮೆಕ್‌ಡೊನಾಲ್ಡ್‌ನ ಗೋಲ್ಡನ್‌ ಆರ್ಚ್‌ ಕಾಣುತ್ತದೆ. ಕ್ರಿಶ್ಚಿಯನ್‌ರ ‘ಹೋಲಿಕ್ರಾಸ್‌’ ಗಿಂತ ಈ ಗೋಲ್ಡನ್‌ ಆರ್ಚ್‌ ಹೆಚ್ಚು ಪ್ರಸಿದ್ಧ. 1968ರಲ್ಲಿ ಅಮೆರಿಕದಲ್ಲಿ ಮೆಕ್‌ಡೊನಾಲ್ಡ್‌ನ ಸಾವಿರ ರೆಸ್ಟೋರೆಂಟ್‌ಗಳಿದ್ದವು. ಇಂದು ಈ ಸಂಖ್ಯೆ 55 ಸಾವಿರಕ್ಕೇರಿದೆ. ಪ್ರತಿವರ್ಷ ವಿಶ್ವದೆಲ್ಲೆಡೆ ಎರಡು ಸಾವಿರ ರೆಸ್ಟೋರೆಂಟ್‌ಗಳು ಹುಟ್ಟುತ್ತವೆ. ಅಮೆರಿಕದಲ್ಲಿ ಪ್ರತಿ ಎಂಟು ಜನರಲ್ಲಿ ಒಬ್ಬನಾದರೂ ಈ ಸಂಸ್ಥೆಯಲ್ಲಿ ಕೆಲಸ ಮಾಡಿರುತ್ತಾನೆ. ಈಗಂತೂ ನೂರಕ್ಕೆ ನೂರರಷ್ಟು ಮಂದಿ ಬರ್ಗರ್‌ ರುಚಿ ಸವಿದಿದ್ದಾರೆ. ಪ್ರತಿವರ್ಷ ಈ ಕಂಪನಿ ಹತ್ತು ಲಕ್ಷ ಮಂದಿಗೆ ಕೆಲಸ ನೀಡುತ್ತದೆ. ಅಮೆರಿಕದ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಸಂಸ್ಥೆಯಾಗಲಿ ಈ ಪ್ರಮಾಣದಲ್ಲಿ ನೌಕರಿ ಕೊಡುವುದಿಲ್ಲ. ಅಮೆರಿಕದಲ್ಲಿ ಹಂದಿ, ಗೋವು, ಕೋಳಿ ಮಾಂಸಗಳ ಅತಿ ದೊಡ್ಡ ಖರೀದಿದಾರರು ಮೆಕ್‌ ಡೊನಾಲ್ಡ್‌. ಉಳಿದೆಲ್ಲ ಬ್ರ್ಯಾಂಡ್‌ಗಳಿಗಿಂತ ಇದು ಅತಿ ಹೆಚ್ಚು ಹಣವನ್ನು ಜಾಹೀರಾತಿಗೆ ಖರ್ಚು ಮಾಡುತ್ತದೆ. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ ಕೋಕಾಕೋಲಾವನ್ನೂ ಮೀರಿಸುತ್ತದೆ. ಬರ್ಗರ್‌ ಮಾರಿ ಲಾಭ ಮಾಡುವುದಕ್ಕಿಂತ ಈ ಕಂಪನಿ ತನ್ನ ಹೆಸರನ್ನು ಮಾರಾಟ ಮಾಡಿ (ಫ್ರೆಂಚಾಯಿಸ್‌) ಹಣ ಮಾಡುತ್ತದೆ. ಮಕ್ಕಳ ಹಾಗೂ ಯುವಕರನ್ನು ಸೆಳೆಯುವುದಕ್ಕಾಗಿ ಅಮೆರಿಕದಲ್ಲಿ ಅತಿ ಹೆಚ್ಚು ಆಟದ ಮೈದಾನಗಳನ್ನು ಈ ಸಂಸ್ಥೆ ರೂಪಿಸಿದೆ. ಯಾವ ರಾಜ್ಯ ಸರಕಾರದ ಒಡೆತನದಲ್ಲಿರುವುದಕ್ಕಿಂತ ಹೆಚ್ಚಿನ ಆಟದ ಮೈದಾನ ಹಾಗೂ ಸ್ಪೋರ್ಟ್ಸ್‌ಕ್ಲಬ್‌ಗಳು ಮೆಕ್‌ಡೊನಾಲ್ಡ್‌ ಕಬ್ಜದಲ್ಲಿವೆ. ಆಟಿಕೆ ಸಾಮಾನುಗಳ ಅತಿದೊಡ್ಡ ವಿತರಕ ಎಂಬ ಖ್ಯಾತಿಯೂ ಈ ಕಂಪನಿಯದೇ. ಅಮೆರಿಕದಲ್ಲಿ ಸಾಂತಾಕ್ಲಾಸ್‌ನಷ್ಟೇ ಅಥವಾ ಸಾಂತಾಕ್ಲಾಸ್‌ಗಿಂತ ಹೆಚ್ಚು ಜನಪ್ರಿಯತೆ ಮೆಕ್‌ಡೊನಾಲ್ಡ್‌ಗೆ. 1970ರಲ್ಲಿಯೇ ಅಮೆರಿಕ ಮೆಕ್‌ಡೊನಾಲ್ಡೀಕರಣವಾಗುತ್ತಿದೆಯೆಂದು ಕೂಗೆದ್ದಿತ್ತು. ಆದರೆ ಅದು ಈಗ ಅಕ್ಷರಶಃ ನಿಜ ಆಗಿದೆ. ಈಗ ಈ ಕಂಪನಿಯ ಸ್ಲೋಗನ್‌- Global Realization ಕೂಡ ಇದನ್ನೇ ಪ್ರತಿಪಾದಿಸುತ್ತದೆ. ಜಗತ್ತಿನಲ್ಲಿ ಎಲ್ಲೆಡೆ ತಕ್ಷಣಕ್ಕೆ ಗುರುತಿಸಿಕೊಳ್ಳುವ ಮೊದಲ ಐದು ಬ್ರ್ಯಾಂಡ್‌ಗಳಲ್ಲಿ ಇದೂ ಒಂದು. ತನ್ನ ತಿಂಡಿಯ ರುಚಿ, ಮೌಲ್ಯ, ಸಂಸ್ಕೃತಿ, ಅಮೆರಿಕವನ್ನು ವಿಶ್ವದ ಮೂಲೆಮೂಲೆಗೆ ಒಯ್ಯುವುದೇ ಗುರಿ ಎಂದು ಮೆಕ್‌ಡೊನಾಲ್ಡ್‌ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಜಗತ್ತಿನೆಲ್ಲೆಡೆ ಮ್ಯಾಕ್‌ ತಿಂಡಿಗಳು ಪಸರಿಸುವಂತೆ ಮಾಡುವುದರ ಮೂಲಕ ಅಂತಾರಾಷ್ಟ್ರೀಯ ಏಕರೂಪ ಆಹಾರ ಸಂಸ್ಕೃತಿಯನ್ನು ರೂಪಿಸುವುದು ಉದ್ದೇಶವೆಂದು ಮೆಕ್‌ಡೊನಾಲ್ಡ್‌ ಪ್ರಚಾರ ಮಾಡುತ್ತದೆ. ಇಡೀ ಜಗತ್ತನ್ನು ‘McDonald’ ಮಾಡಲು ಹೊರಟಿದೆ.

ಇದರಲ್ಲಿ ಸಂಶಯವೇ ಇಲ್ಲ. ಮೆಕ್‌ಡೊನಾಲ್ಡ್‌ ಹರಡುತ್ತಿರುವ ವೇಗವನ್ನು ಗಮನಿಸಿದರೆ ಇನ್ನು ಐದಾರು ವರ್ಷಗಳಲ್ಲಿ McDonald ಕಲ್ಪನೆ ಸಾಕಾರಗೊಳ್ಳುವ ಸಾಧ್ಯತೆಯಿದೆ. ಹದಿನೈದು ವರ್ಷಗಳ ಹಿಂದೆ ಟರ್ಕಿಯಲ್ಲಿ ಮೆಕ್‌ಡೊನಾಲ್ಡ್‌ ರೆಸ್ಟೋರೆಂಟ್‌ ಆರಂಭಿಸಲು ಮುಂದೆ ಬಂದಾಗ ಸಾರ್ವಜನಿಕ ಪ್ರತಿರೋಧದಿಂದ ಅಲ್ಲಿನ ಸರಕಾರ ಅನುಮತಿ ರದ್ದುಪಡಿಸಿತು. 2 ವರ್ಷದ ಬಳಿಕ ಎಲ್ಲವೂ ಅದಲು ಬದಲು. ಏಕಕಾಲಕ್ಕೆ 40ಮಳಿಗೆಗಳನ್ನು ಆರಂಭಿಸಲು ಅನುಮತಿ ಪಡೆಯಿತು. ಇಂದು ದೇಶದಲ್ಲಿ ಮೆಕ್‌ಡೊನಾಲ್ಡ್‌ ಹೊರತಾಗಿ ಬೇರೆ ಯಾವ ಫಾಸ್ಟ್‌ಫುಡ್‌ ರೆಸ್ಟೋರೆಂಟ್‌ಗಳೂ ಇಲ್ಲ. ಉಳಿದವೆಲ್ಲ ಪೈಪೋಟಿ ಎದುರಿಸಲಾಗದೇ ಜಾಗ ಖಾಲಿ ಮಾಡಿದವು.

ಅಮೆರಿಕ ಸಂಸ್ಕೃತಿಯ ಕುರುಹಿನಂತೆ ಕಾಣುವ ಮೆಕ್‌ಡೊನಾಲ್ಡ್‌ ರೆಸ್ಟೋರೆಂಟ್‌ಗಳನ್ನು ವಿಶ್ವದ ಎಲ್ಲ ದೇಶಗಳಲ್ಲಿ ತೆರೆಯಲು ಸರ್ಕಾರದ ಪ್ರೇರಣೆಯೂ ಕಾರಣ. ಯಾವ ಯಾವ ದೇಶಗಳಲ್ಲಿ ಮೆಕ್‌ಡೊನಾಲ್ಡ್‌ ‘ವಸಾಹತು’ ಗಳನ್ನು ಆರಂಭಿಸಬಹುದೆಂದು ಅಮೆರಿಕದ ವಿದೇಶಾಂಗ ಇಲಾಖೆಯೇ ಮಾಹಿತಿ ನೀಡುತ್ತದೆ. ಎಲ್ಲ ದೇಶಗಳಲ್ಲಿರುವ ರಾಯಭಾರ ಕಚೇರಿಗಳ ಮೂಲಕ ಪಾಲುದಾರರನ್ನು ಹಾಗೂ ಫ್ರಾಂಚಾಯಿಸ್‌ಗಳನ್ನು ಹುಡುಕಲು ನೆರವಾಗುತ್ತದೆ. ನಿಮ್ಮೂರಿನಲ್ಲಿ ಮೆಕ್‌ಡೊನಾಲ್ಡ್‌ ರೆಸ್ಟೋರೆಂಟ್‌ಗಳನ್ನು ಆರಂಭಿಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ವಿದೇಶಾಂಗ ಖಾತೆಯಿಂದ ಕ್ಷಣಾರ್ಧದಲ್ಲಿ ಉತ್ತರ ಪಡೆಯಬಹುದು.

ಒಂದು ದೇಶ ಮುಂದುವರಿದಿದೆಯೋ ಇಲ್ಲವೋ ಎಂಬುದನ್ನು ಆ ದೇಶದಲ್ಲಿ ಮೆಕ್‌ಡೊನಾಲ್ಡ್‌ ರೆಸ್ಟೋರೆಂಟ್‌ಗಳು ಇವೆಯೋ ಇಲ್ಲವೋ ಎಂಬುದರಿಂದ ನಿರ್ಧರಿಸಬಹುದೆಂದು ಮೆಕ್‌ಡೊನಾಲ್ಡ್‌ ಜಂಭಕೊಚ್ಚಿಕೊಳ್ಳತ್ತಿದೆ. ಅಂದರೆ ಈ ಕಂಪನಿ ದೃಷ್ಟಿಯಲ್ಲಿ ಇದೊಂದು ಅಭಿವೃದ್ಧಿ ಮಾಪಕ! ತಿಹತಿ ಎಂಬ ದ್ವೀಪರಾಷ್ಟ್ರದಲ್ಲಿ 3ವರ್ಷಗಳ ಹಿಂದಿನವರೆಗೂ ಮೆಕ್‌ಡೊನಾಲ್ಡ್‌ ಕಾಲಿಟ್ಟಿರಲಿಲ್ಲ. ಆ ರಾಷ್ಟ್ರದ ಪ್ರವಾಸೋದ್ಯಮ ಇಲಾಖೆ ಮಹಾಪರಾಧವೆಸಗಿದಂತೆ ಅಲ್ಲಿನ ಬೀಚ್‌ನಲ್ಲಿ Sorry, no McDonalds ಎಂಬ ಫಲಕವನ್ನು ಹಾಕಿತ್ತು. ಮುಂದಿನ ವರ್ಷವೇ ಅಲ್ಲಿಗೆ ಮೆಕ್‌ಡೊನಾಲ್ಡ್‌ ಬಂತು!

ಕುವೇಟ್‌ನಲ್ಲಿ ಮೊದಲ ಬಾರಿಗೆ ಮೆಕ್‌ಡೊನಾಲ್ಡ್‌ ಅಂಗಡಿ ತೆರೆದಾಗ ಬರ್ಗರ್‌ ತಿನ್ನಲು 7 ಮೈಲಿ ಉದ್ದದ ಸಾಲಿನಲ್ಲಿ ಕಾರಿನಲ್ಲಿ ಜನ ಕಾದು ಕುಳಿತಿದ್ದರು. ರಂಜಾನ್‌ ಮುಗಿದ ವಾರ ಸೌದಿ ಅರೇಬಿಯಾದಲ್ಲಿ ಒಂದು ವಾರದಲ್ಲಿ 2ಲಕ್ಷ ಡಾಲರ್‌ ವ್ಯಾಪಾರವಾಗಿತ್ತು. ಬ್ರೆಜಿಲ್‌ನಲ್ಲಿ ಮೆಕ್‌ಡೊನಾಲ್ಡ್‌ಗಿಂತ ದೊಡ್ಡದಾದ ಖಾಸಗಿ ಸಂಸ್ಥೆಯಿಲ್ಲ . ಮೆಕ್‌ ಮಹಾತ್ಮೆ ಹೀಗೆಯೇ ಮುಂದುವರೆಯುತ್ತದೆ.

ಭಾರತಕ್ಕೆ ಈ ಕಂಪನಿ ಸ್ವಲ್ಪ ತಡವಾಗಿಯೇ ಆಗಮಿಸಿದರೂ, ಬಹಳ ಬೇಗ ತನ್ನ ನೆಲೆಯನ್ನು ವಿಸ್ತರಿಸಿತು. ದೇಶಾದ್ಯಂತ ಇಂದು ಹಂದಿನೆಂಟು ರೆಸ್ಟೋರೆಂಟ್‌ಗಳಿವೆ. ಮುಂದಿನ ವರ್ಷದ ಹೊತ್ತಿಗೆ ಮತ್ತೆ ಹತ್ತು ಆರಂಭವಾಗಲಿದೆ. ಇಲ್ಲಿ ವರ್ಷಕ್ಕೆ ನೂರಾರು ಕೋಟಿ ರೂ. ವಹಿವಾಟು ನಡೆಸುವ ಈ ಸಂಸ್ಥೆಯ ಬೆಳವಣಿಗೆ ಇಮ್ಮಡಿಯಾಗಲಿದೆ. ಭಾರತದ ಎಲ್ಲ ಪ್ರಮುಖ ಊರುಗಳಲ್ಲಿ ಟಂಬು ಹಾಕಲು ಈ ಸಂಸ್ಥೆ ನಿರ್ಧರಿಸಿಬಿಟ್ಟಿದೆ. ಅಂದರೆ ಅಂಥ ಪ್ರತಿ ಊರುಗಳಲ್ಲೂ ಅಮೆರಿಕದ ವಸಾಹತುಗಳು!

ಮೆಕ್‌ಡೊನಾಲ್ಡ್‌ ಕಾಲಿಟ್ಟ ಊರುಗಳಲ್ಲಿ ಸ್ಥಳೀಯ ತಿಂಡಿತಿನಿಸುಗಳ ಅಂಗಡಿಗಳು, ಫಾಸ್ಟ್‌ಫುಡ್‌ ಹೋಟೆಲ್‌ಗಳು ಮುಚ್ಚಿಕೊಂಡು ಹೋಗಿವೆ. ಇನ್ನು ಮುಂದೆ ಊರಿನಲ್ಲಿ ಮೆಕ್‌ಡೊನಾಲ್ಡ್‌, ಕೆಂಟುಕಿ ಫ್ರೆೃಜ್‌ ಚಿಕನ್‌, ಪಿಜ್ಜಾ ಹಟ್‌, ಬರ್ಗರ್‌ ಕಿಂಗ್‌, ಟ್ಯಾಕೋ ಬೆಲ್ಟ್‌ ಗ್ಯಾಪ್ಸ್‌, ಬನಾನಾ ರಿಪಬ್ಲಿಕ್ಸ್‌, ಸ್ನಿಪ್‌ ಆ್ಯಂಡ್‌ ಕ್ಲಿಪ್ಸ್‌ ಜಿಫಿಲೂಬ್ಸ್‌, ಸನ್‌ಗ್ಲಾಸ್‌ ಹಟ್ಸ್‌ ಅಂಗಡಿ ತೆರೆದು ಕುಳಿತುಕೊಂಡರೆ ಏನಾಗಬೇಡ? ಹಾಗಂತ ಈ ಅಂಗಡಿಗಳಲ್ಲಿ ಸಿಗುವ ತಿಂಡಿ ತಿನಿಸುಗಳು ಆರೋಗ್ಯಕರವಾ? ಅದೂ ಇಲ್ಲ. ಮೆಕ್‌ಡೊನಾಲ್ಡ್‌ ಬರ್ಗರ್‌ರನ್ನು ಮೂರು ತಿಂಗಳು ಸೇವಿಸಿದರೆ ಬೊಜ್ಜು ಗ್ಯಾರಂಟಿ. ಮಕ್ಕಳಲ್ಲಿ ಹೆಚ್ಚುತ್ತಿರುವ ಕೊಬ್ಬು, ಬೊಜ್ಜಿಗೆ ಇದೇ ಮುಖ್ಯ ಕಾರಣ. ಇಡೀ ಒಂದು ಜನಾಂಗವೇ ಬೊಜ್ಜಿಗೆ ಬಲಿಯಾಗುವ ಅಪಾಯವಿದೆ. ‘ಅಣುಬಾಂಬ್‌ ಗಿಂತ ಈ ಬರ್ಗರ್‌ ಅಪಾಯಕಾರಿ ’ ಎಂದು ಮೆಕ್‌ಡೊನಾಲ್ಡ್‌ ಜನ್ಮಜಾಲಾಡಿರುವ ‘ಫಾಸ್ಟ್‌ಫುಡ್‌ ನೇಶನ್‌’ ಪುಸ್ತಕ ಬರೆದ ಎರಿಕ್‌ ಶ್ಲೋಸ್ಸರ್‌ ಹೇಳುತ್ತಾನೆ. ಬರ್ಗರ್‌ ಬೇಡ ಎಂದು ಹೇಳುತ್ತಿಲ್ಲ. ಬರ್ಗರ್‌ಗೆ ಬಾಯಿ ಹಾಕುವ ಮುನ್ನ ಈ ಸಂಗತಿಗಳು ಗೊತ್ತಿದ್ದರೆ ಸಾಕು. ಯಾಕೆಂದರೆ ನಾಳೆ ಇದೇ ಬರ್ಗರ್‌ ನಿಮ್ಮ ಊರಿಗೂ ಬಂದೀತು. ನಿಮ್ಮೂರಿನ ತಿಂಡಿಗಳನ್ನು ತಿಂದು ಹಾಕೀತು!

ಇಷ್ಟೆಲ್ಲ ಯೋಚಿಸುವಾಗ ಪ್ರೊ. ನಂಜುಂಡಸ್ವಾಮಿ ನೆನಪಾಗುವುದಿಲ್ಲವಾ ಹೇಳಿ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more