ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಈವಾ’ ಳ್ಯಾರು ಬಲ್ಲಿರೇನು, ಅವಳ ಕಥೆ ಹೇಳಲೇನು?

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಈವಾ ಯಾನ್ನಾ ಲಿಂಡಾ ಮಡೇ-ಡಿ-ಮರೋನ್‌!

ಹೀಂಗಂದ್ರೆ ನಿಮಗೆ ಏನಾದರೂ ಅರ್ಥವಾಯಿತಾ ಹೇಳಿ? ಖಂಡಿತವಾಗಿಯೂ ಇಲ್ಲ ತಾನೆ? ಇದು ವ್ಯಕ್ತಿಯ ಹೆಸರಾ? ಊರಿನ ಹೆಸರಾ? ಅತ್ತರಿನ ಹೆಸರಾ? ಬೈಗುಳವಾ? ವಾಕ್ಯವಾ? ಅಥವಾ ಇದೂ ಒಂದು ಹೆಸರಾ? ಹೀಂಗಂದ್ರೆ ಏನು? ಏನೂ ಅರ್ಥವಾಗಲಿಲ್ಲ ಎಂದು ನಿಕ್ಕಂಟಿಯಾಗಿ ಹೇಳಬಹುದು ಅಲ್ಲವೇ?

ಸಾವಿತ್ರಿ ಖಾನೋಲ್ಕರ್‌!

ಹೀಂಗಂದ್ರೆ ಏನು ಹೇಳಿ? ಒಬ್ಬ ಹೆಂಗಸಿನ ಹೆಸರು ಅಂತ ಯಾರಾದರೂ ಹೇಳುತ್ತಾರೆ. ಅದಕ್ಕಿಂತ ಹೆಚ್ಚಿಗೆ ಏನೂ ಗೊತ್ತಿಲ್ಲ. ಈ ಹೆಸರನ್ನು ಎಲ್ಲೋ ಕೇಳಿದಂತಿದೆಯಲ್ಲ ಎಂದು ಸಹ ಅನಿಸುವುದಿಲ್ಲ.

Param Vir Chakra, The medal was designed by Mrs Savitri Khanolankarಆದರೆ ಇದೇ ಈವಾ ಯಾನ್ನಾ ಲಿಂಡಾ ಮಡೇ-ಡಿ-ಮರೋಸ್‌ ಅಂದ್ರೆ ಸಾವಿತ್ರಿ ಖಾನೋಲ್ಕರ್‌ ಅಂತ ಹೇಳಿದರೂ ಯಾರೂ ನಂಬುವುದಿಲ್ಲ. ನೆನಪಿನ ಕಾಲುದಾರಿಯ ಮೇಲೆ ಮರೆವಿನ ಹುಲ್ಲು ಬೆಳೆದಿದೆ. ಹುಲುಸಾಗಿ ಬೆಳೆದ ಹುಲ್ಲು ಹಸುರಿನಿಂದ ನಳನಳಿಸುತ್ತಿದೆ. ಹೀಗಾಗಿ ಈವಾ ಯಾನ್ನಾ ಅಂದರೆ, ಸಾವಿತ್ರಿ ಖಾನೋಲ್ಕರ್‌ ಅಂದರೆ, ನಮ್ಮ ನೆನಪಿನ ಗೂಡು ಬಿಚ್ಚಿಕೊಳ್ಳುವುದಿಲ್ಲ. ಈ ಕಾರಣದಿಂದ ಸಾವಿತ್ರಿ ಇಂದಿಗೂ ಅಜ್ಞಾತವಾಗಿಯೇ ಉಳಿಯುತ್ತಾಳೆ. ಶಾಶ್ವತ ಅಪರಿಚಿತಳಾಗಿಯೇ ಮರೆವಿನ ಹಿತ್ತಲ ಮನೆಯಲ್ಲಿ ಮುಳುಗಿಬಿಡುತ್ತಾಳೆ.

ಈ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯೆಂದರೆ ಭಾರತ ರತ್ನ. ಭಾರತ ಸರಕಾರ ನೀಡುವ ಎರಡನೆಯ ಅತ್ಯುನ್ನತ ಪ್ರಶಸ್ತಿ ಪರಮವೀರ ಚಕ್ರ ಎಂಬ ರೋಮಾಂಚನ ಹುಟ್ಟಿಸುವ ಪದಕವನ್ನು ವಿನ್ಯಾಸಗೊಳಿಸಿ, ರೂಪಿಸಿದ ಮಹಿಳೆಯೇ ಈವಾ ಯಾನ್ನಾ ಲಿಂಡಾ... ಅರ್ಥಾತ್‌ ಸಾವಿತ್ರಿ ಖಾನೋಲ್ಕರ್‌!

ಸೈನಿಕ ಶಿಬಿರದಲ್ಲಿ ಈಕೆಯ ಹೆಸರು ಕೇಳಿದರೆ ಯೋಧನ ಮನಸ್ಸು ಒಂದು ಕ್ಷಣ ಗಲ್ಲವನ್ನು ಎದೆಗೆ ತಾಕಿಸುತ್ತದೆ. ಸಾವಿತ್ರಿ ಖಾನೋಲ್ಕರ್‌ ಎಂಬ ವಿದೇಶಿ ಹೆಂಗಸು ದೇಶಪ್ರೇಮ, ಸಮರಸಾಹಸದ ಪ್ರತೀಕವಾಗಿ ಪ್ರಜ್ವಲಿಸುತ್ತಾಳೆ. ಪರಮವೀರಚಕ್ರ ಎಂಬ ದೇಶಭಕ್ತಿಯ ಹುಡುಹುಡಿ ಹೃದಯದ ಕವಾಟಗಳನ್ನು ಆವರಿಸಿಕೊಳ್ಳುತ್ತದೆ.

ಆದರೆ ಸಾವಿತ್ರಿಯೆಂಬ ಹೆಂಗಸು ಅಪರಿಚಿತಳಾಗಿಯೇ ಉಳಿದು ಬಿಡುತ್ತಾಳೆ!

ಈವಾ ಯಾನ್ನಾ ಎಂದು ಆರಂಭವಾಗಿ ಮರೋಸ್‌ನಲ್ಲಿ ಮುಕ್ತಾಯವಾಗುವ ಮೈಲುದ್ದದ ಹೆಸರನ್ನಿಟ್ಟುಕೊಂಡ ಹಂಗರಿ ದೇಶದ ಬಿಳಿ ಚರ್ಮದ ಹೆಂಗಸು ಹಣೆಗೆ ಕುಂಕುಮ, ಕೈತುಂಬಾ ಬಳೆ, ವಂಕಿ, ಬಾಜುಬಂದಿ, ಕಾಲುಂಗುರ ತೊಟ್ಟು, ಮೈತುಂಬಾ ಸೀರೆ ಹೊದ್ದು ಪಕ್ಕದ ಮನೆ ಚಿಕ್ಕಮ್ಮನಂಥ ಸಾವಿತ್ರಿ ಎಂಬ ಹೆಸರಿನೊಂದಿಗೆ ಖಾನೋಲ್ಕರ್‌ ಕುಟುಂಬ ಸೇರಿ ಪದಕ ಅಂದರೆ ಪರಮವೀರಚಕ್ರದಂಥ ಪದಕವನ್ನು ಕೆತ್ತಿದ್ದು ನಿಜಕ್ಕೂ ರೋಚಕ ಕತೆ.

ಸಾವಿತ್ರಿಯ ಕತೆ ಆರಂಭವಾಗುವುದು ಹಂಗರಿಯಲ್ಲಿ. ಕಾರಣ ಆಕೆ ಹುಟ್ಟಿದ್ದು ಅಲ್ಲಿ. ತಂದೆಯೂ ಅಲ್ಲಿಯವನೇ. ತಾಯಿ ರಷ್ಯಾದವಳು. ತಂದೆಗೆ ಮೂವರು ಹೆಂಡಂದಿರು. ಆತ ಯಾರನ್ನೇ ಮದುವೆಯಾದರೂ ಹೆಂಡತಿಯಾದವಳು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಅವನೊಂದಿಗೆ ನೆಲೆ ನಿಲ್ಲುತ್ತಿರಲಿಲ್ಲ. ಕಾರಣ ತಂದೆ ಪುಸ್ತಕದ ಹುಳು. ಪುಸ್ತಕ ಓದುತ್ತ ಕುಳಿತರೆ ಅದು ಮುಗಿಯುವ ತನಕ ಮೇಲೇಳುತ್ತಿರಲಿಲ್ಲ. ಈ ಪುಸ್ತಕ ಓದಿ ಪಕ್ಕಕ್ಕಿಟ್ಟ ಬಳಿಕ ಆ ಪುಸ್ತಕವನ್ನು ಕೈಗೆತ್ತಿಕೊಳ್ಳುತ್ತಿದ್ದ. ಆತನಿಗೆ ಪುಸ್ತಕದ ಹೊರತಾಗಿ ಮತ್ತೇನೂ ಗೊತ್ತಿರಲಿಲ್ಲ. ಅವೇ ಅವನ ಪ್ರಪಂಚ. ಹೀಗಾಗಿ ಯಾರೂ ಅವನ ಜತೆ ಹೆಚ್ಚು ದಿನ ಸಂಸಾರ ನಡೆಸುತ್ತಿರಲಿಲ್ಲ. ನಾಲ್ಕನೆಯ ಹೆಂಡತಿಯೇ ಸ್ವಲ್ಪ ಬಾಳಿಕೆಗೆ ಬಂದವಳು. ಅವಳಿಗೆ ಹುಟ್ಟಿದವಳೇ ಈವಾ.

ಆದರೆ ಈವಾ ಹುಟ್ಟಿದ ಒಂದು ವಾರಕ್ಕೆ ತಾಯಿ ಸತ್ತು ಹೋದಳು. ತಂದೆ ಮತ್ತೊಂದು ಮದುವೆಗೆ ಮುಂದಾಗಲಿಲ್ಲ. ಈವಾಳನ್ನೇ ಚೆನ್ನಾಗಿ ಸಾಕಲು ನಿರ್ಧರಿಸಿದ. ಆದರೆ ಆತನಿಗೆ ಗೊತ್ತಿದ್ದದ್ದು ಒಂದೇ ಒಂದು ಕಸುಬು-ರಾತ್ರಿ ಹಗಲು ಓದುವುದು. ಪುಸ್ತಕದ ಪುಟಗಳಲ್ಲಿ ತಂದೆ ತೂರಿಕೊಳ್ಳುತ್ತಿದ್ದರೆ, ಈವಾ ಕೂಡ ಅವುಗಳನ್ನು ಮಡಿಲನ್ನಾಗಿ ಹಾಸಿಕೊಂಡಳು. ತಂದೆ ಮಗಳು ಪುಸ್ತಕ ಹಿಡಿದು ಕುಳಿತರೆ ರಾತ್ರಿ ಹಗಲುಗಳು ಓವರ್‌ಟೇಕ್‌ ಮಾಡಿದರೂ ಗೊತ್ತಾಗುತ್ತಿರಲಿಲ್ಲ. ಇಬ್ಬರೂ ಗ್ರಂಥಾಲಯದೊಳಕ್ಕೆ ಹೊಕ್ಕರೆ ವಾರವಾದರೂ ಹೊರಬರುತ್ತಿರಲಿಲ್ಲ. ಈ ಸಂದರ್ಭದಲ್ಲಿ ಈವಾ ಭಾರತದ ಪುರಾಣ, ಸಂಸ್ಕೃತಿ, ಕಲೆ, ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಓದಿದಳು. ವೇದಾಂತ, ತತ್ವಶಾಸ್ತ್ರಗಳು ಆಕೆಯಲ್ಲಿ ಭಾರತದ ಬಗ್ಗೆ ಬೆರಗು ಮೂಡಿಸಿದವು. ಭಾರತ ಹಾಗೂ ಭಾರತೀಯರ ಕುರಿತು ಅವಳಿಗೇ ಅರಿವಿಲ್ಲದಂತೆ ಒಂಥರಾ ವ್ಯಾಮೋಹ, ಆಸಕ್ತಿ ಬೆಳೆಯತೊಡಗಿತು. ಒಂದೇ ಸಮನೆ ಕಾಡುತ್ತಿದ್ದ ತಾಯಿಯ ಅಗಲಿಕೆಯ ನೋವನ್ನು ಪುಸ್ತಕ ಓದುವುದರ ಮೂಲಕ ಮರೆಯತ್ತಿದ್ದ ಈವಾ, ತನಗರಿವಿಲ್ಲದಂತೆ ಭಾರತವನ್ನು ಪ್ರೀತಿಸತೊಡಗಿದಳು. ಭಾರತದ ಬಗ್ಗೆ ಸಿಕ್ಕ ಸಿಕ್ಕ ಪುಸ್ತಕಗಳನ್ನು ಓದಲಾರಂಭಿಸಿದಳು.

ಅದೊಂದು ಬೇಸಿಗೆಯ ಕಾಲ. ತಂದೆಯಾಂದಿಗೆ ಲಂಡನ್‌ನ ಸ್ಯಾಂಡರ್ಸ್ಟ್‌ ಸಮುದ್ರ ತೀರದಲ್ಲಿ ವಿಹಾರಕ್ಕೆಂದು ಈವಾ ಬಂದಿದ್ದಳು. ಆಗ ಆಕೆಗೆ ಹದಿನೈದು ವರ್ಷವಿದ್ದೀತು. ಸಮುದ್ರ ಸ್ನಾನಕ್ಕೆಂದು ಕೆಲವು ಭಾರತೀಯರು ಸಹ ಅಲ್ಲಿನ ಬೀಚ್‌ಗೆ ಆಗಮಿಸಿದ್ದರು. ಅವರಲ್ಲೊಬ್ಬ ತರುಣ ಯೋಧ ಖಾನೋಲ್ಕರ್‌. ಸಮುದ್ರ ತೀರದಲ್ಲಿ ಅವರಿಬ್ಬರ ಪರಿಚಯವಾಯಿತು. ಖಾನೋಲ್ಕರ್‌ ಲಂಡನ್‌ನಲ್ಲಿ ಸೈನಿಕ ತರಬೇತಿಗಾಗಿ ಆಗಮಿಸಿದ್ದರು. ತರಬೇತಿಯನ್ನು ಮುಗಿಸಿ ಮುಂದಿನ ವಾರ ಔರಂಗಾಬಾದ್‌ನ 5/11ನೇ ಸಿಖ್‌ ರೆಜಿಮೆಂಟ್‌ನ್ನು ಸೇರುವವರಿದ್ದರು. ಆ ಭಾನುವಾರ ಸ್ಯಾಂಡರ್ಸ್ಟ್‌ ಸಮುದ್ರ ತೀರದಲ್ಲಿ ಸ್ನಾನ ಮಾಡುವಾಗ ಈವಾಳ ಪರಿಚಯ ಬದುಕಿನ ತೀರದವರೆಗೆ ಕೊಂಡೊಯ್ಯಬಹುದೆಂದು ಅವರು ಊಹಿಸಿರಲಿಲ್ಲ. ಅಂದು ಈವಾ ಭಾರತದ ಬಗ್ಗೆ ಖಾನೋಲ್ಕರ್‌ಗೆ ಗೊತ್ತಿರದ ಅನೇಕ ಸಂಗತಿಗಳನ್ನು ತಿಳಿಸಿದ್ದಳು. ತನಗಿಂತ ತನ್ನ ದೇಶದ ಬಗ್ಗೆ ಹೆಚ್ಚು ತಿಳಿದುಕೊಂಡ ಈ ಹುಡುಗಿಯನ್ನು ಕಂಡು ಅವರು ಎಲಾ ಇವಳಾ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರು. ಅಂದು ಈವಾ ಹೊರಡುವ ಮೊದಲು ಖಾನೋಲ್ಕರ್‌ರ ವಿಳಾಸ ಪಡೆಯಲು ಮರೆತಿರಲಿಲ್ಲ.

ಖಾನೋಲ್ಕರ್‌ ಭಾರತಕ್ಕೆ ಬಂದು ಸೇನಾ ಶಿಬಿರ ಸೇರಿ ಮೇಜರ್‌ ಜನರಲ್‌ ಆಗಿ ಬಿಡುವಿಲ್ಲದ ಕೆಲಸದಲ್ಲಿ ನಿರತರಾಗಿಬಿಟ್ಟರು. ಅಂದು ಸಮುದ್ರ ತೀರದಲ್ಲಿ ಭೇಟಿಯಾದ ಹುಡುಗಿ ಪ್ರೀತಿಯ ಪಲ್ಲವಿಯಾಂದಿಗೆ, ಪ್ರೇಮದ ಎಸಳಿನೊಂದಿಗೆ ಪತ್ರ ಬರೆಯಲು ಆರಂಭಿಸಿದರೆ, ಚಿಗುರು ಮೀಸೆಯ ಮೈನರ್‌ ಜನರಲ್‌ ‘ಮೇಜರ್‌’ ಆಗಿದ್ದ. ಅವರಿಬ್ಬರ ಮಧ್ಯೆ ಆರಂಭವಾದ ಪರಿಚಯ ಪತ್ರ ಮೈತ್ರಿಯಲ್ಲಿ ಇನ್ನಷ್ಟು ಗಾಢವಾಗುತ್ತಾ ಹೋಯಿತು. ಸ್ಯಾಂಡರ್ಸ್ಟ್‌ನಲ್ಲಿ ತರಬೇತಿ ಮುಗಿಸಿ ಖಾನೋಲ್ಕರ್‌ ಔರಂಗಾಬಾದ್‌ನ ಸಿಖ್‌ ರೆಜಿಮೆಂಟ್‌ ಸೇರಿಕೊಂಡರು. ಹಾಲುಗಲ್ಲದ ಹುಡುಗಿ ಪತ್ರ ಬರೆಯುವುದನ್ನು ನಿಲ್ಲಿಸಲಿಲ್ಲ. ಈ ಹೊತ್ತಿಗೆ ಅವರಿಬ್ಬರಲ್ಲಿ ಪ್ರೀತಿಯಾಂದು ಅರಳಿ ನಿಂತಿತ್ತು. ಈ ಬಾರಿ ಆಕೆ ಪತ್ರ ಬರೆಯಲಿಲ್ಲ. ಖಾನೋಲ್ಕರ್‌ ಅವರನ್ನು ಭೇಟಿಯಾಗಲು ಮುಂಬೈಗೆ ಹೋಗುತ್ತಿರುವುದಾಗಿ ತಂದೆಗೆ ತಿಳಿಸಿ ತಾನೇ ಬಂದುಬಿಟ್ಟಳು. ಆಗ ಆಕೆಗೆ ಕೇವಲ ಹದಿನಾರು ವರ್ಷ ಅಷ್ಟೆ. ಖಾನೋಲ್ಕರ್‌ಗೆ ಇಪ್ಪತ್ತೇಳು. ಎರಡು ವಾರ ಖಾನೋಲ್ಕರ್‌ ತಂದೆ-ತಾಯಿ ಜತೆಗಿದ್ದ ಆಕೆ ವಾಪಸ್‌ ತನ್ನ ದೇಶಕ್ಕೆ ಹೋಗುವುದಿಲ್ಲವೆಂದೂ, ಖಾನೋಲ್ಕರ್‌ನನ್ನೇ ಮದುವೆಯಾಗುವುದಾಗಿಯೂ ಅವರ ತಂದೆ-ತಾಯಿಗೆ ತಿಳಿಸಿದಳು. ಸೈನಿಕ ಶಿಬಿರದಲ್ಲಿರುವ (ಭಾರತೀಯ) ಬ್ರಿಟೀಷ್‌ ಅಧಿಕಾರಿ ವಿದೇಶಿಯಳನ್ನು ಮದುವೆಯಾಗಕೂಡದು ಹಾಗೂ ಮೂವತ್ತು ವರ್ಷಕ್ಕಿಂತ ಮೊದಲೇ ವಿವಾಹವಾಗಬಾರದೆಂಬ ನಿಯಮವನ್ನು ಉಲ್ಲಂಘಿಸಿ ಖಾನೋಲ್ಕರ್‌ ಈವಾಳನ್ನು ಬಾಳಸಂಗಾತಿಯಾಗಿ ಕೈ ಹಿಡಿದ. ಮಹಾರಾಷ್ಟ್ರದ ಸಂಪ್ರದಾಯದಂತೆ ಔರಂಗಾಬಾದ್‌ನಲ್ಲಿ ಮದುವೆ ಜರುಗಿತು. ಸತ್ಯವಾನ ಸಾವಿತ್ರಿಯ ಕತೆಯಿಂದ ಪ್ರೇರಿತಳಾದ ಈವಾ, ಮದುವೆಗೆ ಮುನ್ನ ಸಾವಿತ್ರಿ ಎಂದು ತನ್ನ ಹೆಸರನ್ನು ಬದಲಿಸಿಕೊಂಡಳು.

ಯುವ ಸೇನಾ ಅಧಿಕಾರಿ ಖಾನೋಲ್ಕರ್‌ಗೆ ಕೈತುಂಬಾ ಕೆಲಸ. ಊರೂರು ತಿರುಗಾಟ. ಸಾವಿತ್ರಿಗೆ ಮನೆಯಲ್ಲಿ ಒಬ್ಬಳೇ ಇರಬೇಕಾದ ಪರಿಸ್ಥಿತಿ. ಈ ಸಂದರ್ಭದಲ್ಲಿ ಆಕೆ ಭಾರತೀಯ ಸಂಪ್ರದಾಯ, ಕಲೆ, ಅಡುಗೆ, ಹಬ್ಬ, ಆಚರಣೆ, ಹಾಡು, ಸಂಸ್ಕೃತಿ, ಉಡುಗೆ ತೊಡುಗೆ ಮುಂತಾದ ವಿಷಯಗಳ ಬಗ್ಗೆ ಅಭ್ಯಸಿಸಲು ಆರಂಭಿಸಿದಳು. ಖಾನೋಲ್ಕರ್‌ಗೆ ಪಾಟ್ನಾಕ್ಕೆ ವರ್ಗವಾದಾಗ ಆಕೆ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ತರಗತಿಗೆ ಸೇರಿದಳು. ನಾಲ್ಕು ವರ್ಷಗಳಲ್ಲಿ ಸಂಸ್ಕೃತದಲ್ಲಿ ಪದವಿ ಮುಗಿಸಿದಳು. ಹಿಂದಿಯಲ್ಲಿ ವಿದ್ವತ್ತು ಪಡೆದಳು. ಪ್ರಾಕೃತವನ್ನು ಕೆಲಕಾಲ ಅಭ್ಯಸಿಸಿದಳು. ಈಕೆಯ ಆಸಕ್ತಿ ಕಂಡು ತತ್ವಶಾಸ್ತ್ರ ವಿಭಾಗವನ್ನು ಹೊಸತಾಗಿ ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಯಿತು. ಭಾರತೀಯ ಜೀವನ ವಿಧಾನ ಆಕೆಯಲ್ಲಿ ಅದೆಂಥ ಪ್ರಭಾವ ಬೀರಿತೆಂದರೆ ಸಾವಿತ್ರಿ ಆಭರಣ ತೊಡುವುದನ್ನು ನಿಲ್ಲಿಸಿದಳು. ಅರಳೆ ಸೀರೆ ಮಾತ್ರ ಧರಿಸುತ್ತಿದ್ದಳು. ಚಪ್ಪಲಿ ಧರಿಸುವುದನ್ನು ಬಿಟ್ಟಳು. ಹಾಸಿಗೆ ಮೇಲೆ ಮಲಗುತ್ತಿರಲಿಲ್ಲ. ಹಣ್ಣು, ಹಂಪಲು, ಹಾಲು ಆಹಾರವಾಯಿತು. ಸಾವಿತ್ರಿ ಸನ್ಯಾಸಿಯಂತೆ ಜೀವಿಸತೊಡಗಿದಳು. ಖಾನೋಲ್ಕರ್‌ರ ಸೈನಿಕ ಶಿಬಿರಕ್ಕೆ ಬಂದು ಆಧ್ಯಾತ್ಮ, ವೇದಾಂತ, ದೇಶಭಕ್ತಿಯ ಬಗ್ಗೆ ಉಪನ್ಯಾಸ ನೀಡುತ್ತಿದ್ದಳು. ಆಸ್ಪತ್ರೆಗೆ ಹೋಗಿ ಗಾಯಗೊಂಡ ಸೈನಿಕರ ಆರೈಕೆ, ಸೇವೆ ಮಾಡುತ್ತಿದ್ದಳು. ಗಂಡಂದಿರನ್ನು ಕಳೆದುಕೊಂಡ (ಸೈನಿಕರ) ಹೆಂಡತಿಯರಿಗೆ ಸಾಂತ್ವನ ಹೇಳಿ ಬರುತ್ತಿದ್ದಳು. ಅವರಿಗಾಗಿಯೇ ಒಂದು ಸಂಘವನ್ನು ಸಹ ಆರಂಭಿಸಿದ್ದಳು.

ಸೈನಿಕರ ಕಲ್ಯಾಣ, ಭಾರತೀಯ ಸಂಸ್ಕೃತಿ, ದೇಶಪ್ರೇಮದ ಬಗ್ಗೆ ಸಾವಿತ್ರಿಯ ಶ್ರದ್ಧೆ, ಕಳಕಳಿಯನ್ನು ಕಂಡು ಸೈನಿಕನೊಬ್ಬನಿಗೆ ನೀಡುವ ಪರಮೋಚ್ಛ ಗೌರವ ಪದಕ-ಪರಮವೀರ ಚಕ್ರವನ್ನು ವಿನ್ಯಾಸಗೊಳಿಸುವಂತೆ ಭಾರತ ಸರ್ಕಾರ ಸಾವಿತ್ರಿಯವರನ್ನು ಕೇಳಿಕೊಂಡಿತು. ಈ ಮಣ್ಣಿನ ಪುರಾಣ, ಇತಿಹಾಸದ ಬಗ್ಗೆ ಆಕೆಯ ಕಲ್ಪನೆ ಹೇಗಿತ್ತು ನೋಡಿ. ವೃತ್ತಾಕಾರದ ಪದಕದ ಮೇಲೆ ಸಂಕಷ್ಟದಲ್ಲಿ ದೇವರಿಗೆ ತನ್ನ ತೊಡೆಯ ಮೂಳೆಯನ್ನೇ ದಾನವಾಗಿ ಕೊಟ್ಟ ದಧೀಚಿ ಋಷಿಯ ಚಿತ್ರ ಹಾಗೂ ಎರಡೂ ಕಡೆಗಳಲ್ಲಿ ಶಿವಾಜಿಯ ಖಡ್ಗವಿರುವ ಅರ್ಥಪೂರ್ಣವಾದ, ಆಕರ್ಷಕವಾದ ಪದಕವನ್ನು ವಿನ್ಯಾಸಗೊಳಿಸಿದಳು! ಸ್ವಲ್ಪವೂ ಮಾರ್ಪಾಟು ಇಲ್ಲದೆ ಆಕೆಯ ವಿನ್ಯಾಸವನ್ನು ಸರಕಾರ ಅಂಗೀಕರಿಸಿತು. ಇಂದಿಗೂ ಪರಮವೀರಚಕ್ರವೆಂದರೆ ಸಾಕು ಭಾರತೀಯನ ಎದೆಯಲ್ಲಿ ಹಿಡಿ ದೇಶಭಕ್ತಿ ಸ್ಫುರಿಸುತ್ತದೆ.

ಅನಂತರದ ದಿನಗಳಲ್ಲಿ ಸಾವಿತ್ರಿ ವೇದಾಂತ, ಧ್ಯಾನ, ಅಧ್ಯಾತ್ಮ ಚಿಂತನೆಗಳಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡಳು. ಯುದ್ಧದಲ್ಲಿ ಗಾಯಗೊಂಡ ಪತಿ, ಮೂರ್ನಾಲ್ಕು ವರ್ಷ ತೀವ್ರ ಅಸ್ವಸ್ಥರಾಗಿ ನಿಧನರಾದ ಬಳಿಕ ಸಾವಿತ್ರಿ ರಾಮಕೃಷ್ಣ ಮಿಶನ್‌ ಸೇರಿ ಸನ್ಯಾಸಿನಿಯಾದಳು. ದೇಶದೆಲ್ಲೆಡೆ ಸಂಚರಿಸಿ ರಾಮಕೃಷ್ಣರ ಸಂದೇಶವನ್ನು ಪ್ರಚುರ ಪಡಿಸುವುದರಲ್ಲಿಯೇ ತನ್ನ ಬದುಕನ್ನು ಕಳೆದ ಸಾವಿತ್ರಿ ಹದಿನಾಲ್ಕು ವರ್ಷಗಳ ಹಿಂದೆ (1990) ನಿಧನಳಾದಳು. ಎಂಥ ವಿಚಿತ್ರ ನೋಡಿ, ಸಾವಿತ್ರಿ ವಿನ್ಯಾಸಗೊಳಿಸಿದ ಪರಮವೀರಚಕ್ರ ಪದಕದ ಪುರಸ್ಕಾರಕ್ಕೆ ಮೊದಲ ಬಾರಿಗೆ ಪಾತ್ರನಾದವನು ಆಕೆಯ ಅಳಿಯ ಮೇಜರ್‌ ಸೋಮನಾಥ್‌ ಶರ್ಮ. ಕಾಶ್ಮೀರದಲ್ಲಿ ಶತ್ರು ಪಾಳೆಯವನ್ನು ಏಕಾಂಗಿಯಾಗಿ ಎದುರಿಸಿದ ಸಾಹಸಿ.

ಅಕ್ಷರಶಃ ಅಪ್ಪಟ ಭಾರತೀಯಳೇ ಆಗಿದ್ದ ಸಾವಿತ್ರಿ ಖಾನೋಲ್ಕರ್‌ ಆದರ್ಶ ಮಹಿಳೆಯಾಬ್ಬಳ ಪಡಿಯಚ್ಚಿನಂತಿರುವುದನ್ನು ಗಮನಿಸಿದರೆ ಆಕೆ ಈವಾ ಳೇನಾ ಎನಿಸುತ್ತದೆ.

ಇವೆಲ್ಲವುಗಳ ಮಧ್ಯೆ ಆಕೆ ಇಂದಿಗೂ ದೇಶಭಕ್ತಿಯ ಸಂಕೇತವಾಗಿ ಕಂಗೊಳಿಸುತ್ತಾಳೆ, ಅಪರಿಚಿತಳಾಗಿ, ಅಜ್ಞಾತವಾಗಿ!

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X