• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂಟಿ ಕೂತರೆ ಏಕಾಂತ, ಕತೆ ಜತೆಗಿದ್ದರೆ ಲೋಕಾಂತ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಕತೆಯೆಂದರೆ ಸಾಕು ಮನಸ್ಸು ಅಲ್ಲಿಯೇ ಕುಳಿತು ಬಿಡುತ್ತದೆ. ಮತ್ತೊಂದು ಕತೆಗೆ ಅಲ್ಲಿಯೇ ಬಿಡುಬೀಸಾಗಿ ಹಾಯಾಗಿ ಆತುಕೊಂಡು ಕುಳಿತುಕೊಳ್ಳುತ್ತದೆ. ಯಾವತ್ತೂ ಮನಸ್ಸು ಒಂದು ಕತೆಗೆ ಎದ್ದೇಳುವುದಿಲ್ಲ. ಒಂದಾದ ನಂತರ ಮತ್ತೊಂದು ಕತೆ ಬೇಕು. ಕತೆ ಕತೆಯಾಗಿ ಸಾಗಬೇಕು. ಅಂವ ಹೇಳ್ತಿದ್ದ ಕತೆಗಳನ್ನು ಕೇಳ್ತಾ ಇದ್ರೆ ಬೆಳಗಾಗಿದ್ದೇ ಗೊತ್ತಾಗಲಿಲ್ಲ. ಕತೆ ಕೇಳ್ತಾ ಕೇಳ್ತಾ ದಿಲ್ಲಿ ಬಂದಿದ್ದೇ ಗೊತ್ತಾಗಲಿಲ್ಲ ಎನ್ನುತ್ತೇವಲ್ಲ ಇದೇ ಕಾರಣಕ್ಕೆ.

ಕತೆ ಅಂದ್ರೆ ಸಾಕು ಎಂಥ ಮನಸ್ಸಾದರೂ ಬಿರಿದುಕೊಳ್ಳುತ್ತದೆ. ಕತೆ ಶುರುವಾದರೆ ಸಾಕು ಮನಸ್ಸು ಕತೆಯ ಪಾತ್ರಗಳನ್ನು ಅರಸುತ್ತಾ ಪಾತ್ರದೊಳಗೆ ಇಳಿದುಕೊಳ್ಳುತ್ತದೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಕತೆ ಯಾವಜ್ಜೀವ ನೆನಪಾಗಿ ಕಾಡುತ್ತದೆ. ಪದೇ ಪದೇ ಮನದೊಳಗೆ ಬಂದು ಹೋಗುತ್ತಿರುತ್ತದೆ. ಹೀಗಾಗಿ ನಾನು ಪ್ರತಿ ಕತೆಗಳ ಮುಂದೆ ಮೈಚೆಲ್ಲಿಕೊಂಡು ಕೂತುಬಿಡುತ್ತೇನೆ ಅಂತ ಗ್ವಾಟೆಮಾಲಾದ ಖ್ಯಾತ ಕವಿ ಮನಸಾಂಡೋ ಅತಿಗುವೆವಾ ತಾನು ಮೆಚ್ಚಿದ ಸಣ್ಣಕತೆಗಳ ಸಂಗ್ರಹಕ್ಕೆ ಮುನ್ನುಡಿ ಬರೆಯುತ್ತಾ ಹೇಳುತ್ತಾನೆ.

Its Story Time !ಕತೆ ಯಾವುದಾದರೇನು, ಯಾರದಾದರೇನು ಅದು ಇದ್ದಷ್ಟು ಹೊತ್ತು , ಅದರ ಮುಂದೆ ಕುಳಿತಷ್ಟು ಹೊತ್ತು ಅದು ನಮ್ಮದೇ ಆಗಿರುತ್ತದೆ. ಅದರ ಯಾವುದೋ ಒಂದು ಪಾತ್ರ ಸಂಪೂರ್ಣ ನಮ್ಮದೇ ಆಗಿರದಿದ್ದರೂ ಕೆಲ ಭಾವನೆಗಳು ನಮ್ಮದೇ ಆಗಿರುತ್ತದೆ ಅಥವಾ ಅವುಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳುತ್ತೇವೆ.

ಕತೆಗಳೆಂದರೆ ಪಾತರಗಿತ್ತಿಗಳಂತೆ. ಕೆಲವು ಕೈಗೆ ಸಿಗುತ್ತವೆ. ಉಳಿದವು ಹಾರಿ ಹೋಗುತ್ತವೆ. ಹಾಗೆ ಕೈಗೆ ಸಿಕ್ಕ ಕೆಲವು ಕತೆಗಳಿವೆ. ನಿಮಗೆಷ್ಟು ದಕ್ಕುತ್ತವೋ ಗೊತ್ತಿಲ್ಲ. ಆದರೆ ಯಾರೂ ಇಲ್ಲದ ಸಮಯದಲ್ಲಿ , ನೀವು ಏಕಾಂಗಿಯೆಂದು ಪರಿತಪಿಸುವ ಹೊತ್ತಿನಲ್ಲಿ ಈ ಕತೆಗಳೆಂಬ ಜತೆಗಾರ ನಿಮ್ಮೊಂದಿಗೆ ಇರುತ್ತಾನೆ. ಈ ಕಾರಣಕ್ಕಾಗಿ ಕೆಲವು ಕತೆಗಳನ್ನಾದರೂ ಪಕ್ಕಕ್ಕಿಟ್ಟುಕೊಳ್ಳಬೇಕು.

**

ಒಂದೂರಿನಲ್ಲಿ ಇಬ್ಬರು ಪ್ರಾಣ ಸ್ನೇಹಿತರಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಅವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವುಂಟಾಯಿತು. ಮಾತು ಬಿಟ್ಟುಕೊಂಡರು. ಅನಂತರ ಇಬ್ಬರೂ ಪರಮ ಶತ್ರುಗಳಂತೆ ಪರಸ್ಪರರನ್ನು ದೂರುತ್ತಾ ದೂರವುಳಿದರು. ಸುಮಾರು ಮೂವತ್ತು ವರ್ಷ ಸಂಪರ್ಕವೇ ಇಲ್ಲ.

ಅವರ ಪೈಕಿ ಒಬ್ಬ ಕಾಯಿಲೆ ಬಿದ್ದು ಆಸ್ಪತ್ರೆ ಸೇರಿದ. ಈ ಸಂಗತಿ ಆತನ ಸ್ನೇಹಿತನಿಗೆ ಗೊತ್ತಾಯಿತು. ಆಸ್ಪತ್ರೆಗೆ ಹೋದ. ಮೂವತ್ತು ವರ್ಷಗಳ ನಂತರದ ಮಿಲನ. ಇಬ್ಬರೂ ಗಂಟೆಗಟ್ಟಲೆ ಮಾತಾಡಿದರು. ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡರು. ಸ್ನೇಹಿತ ಹೊರಡಲು ಮೇಲೆದ್ದಾಗ ಇಬ್ಬರ ಕೆನ್ನೆಗಳೂ ಒದ್ದೆ. ಸ್ನೇಹಿತ ಇನ್ನೇನು ಹೊರಡಲಿದ್ದಾಗ ಕಾಯಿಲೆ ಪೀಡಿತ ಸ್ನೇಹಿತ ಹೇಳಿದ- ಒಮ್ಮೆ ನಾನು ಸತ್ತರೆ, ನೀನು ಬಂದಿದ್ದು ಒಳ್ಳೆಯದಾಯಿತೆಂದು ತಿಳಿಯುತ್ತೇನೆ. ಸಾಯದಿದ್ದರೆ ನಿನ್ನೊಂದಿಗೆ ವೈರತ್ವ ಮುಂದುವರೆಯುತ್ತದೆ.

**

ಹಡಗನ್ನು ಇಬ್ಬರು ನಾವಿಕರು ಚಲಿಸುತ್ತಿದ್ದರು. ರಾತ್ರಿ ಮಲಗುವ ಮೊದಲು ಅವರು ಪಾಳಿಪುಸ್ತಕದಲ್ಲಿ ತಮ್ಮ ಅಭಿಪ್ರಾಯವನ್ನು ಬರೆದಿಡಬೇಕಾಗಿತ್ತು. ಅದು ನಿಯಮ. ಎಂದೂ ಮದ್ಯ ಸೇವಿಸದ ಮೊದಲ ನಾವಿಕ ಅಂದು ಸ್ವಲ್ಪ ಏರಿಸಿದ. ಅದನ್ನು ಕಂಡು ಎರಡನೆಯವ ಪಾಳಿಪುಸ್ತಕದಲ್ಲಿ ಬರೆದ- ಇಂದು ಆತ ಸ್ವಲ್ಪ ಮದ್ಯ ಸೇವಿಸಿದ.

ಇದನ್ನು ಓದಿದ ಮೊದಲನೆಯವನಿಗೆ ಕೋಪ ಬಂತು. ಹಾಗಂತ ಅವನು ಕುಡಿದಿದ್ದು ನಿಜ. ಕ್ಯಾಪ್ಟನ್‌ಗೆ ಗೊತ್ತಾದರೆ ಕೆಲಸಕ್ಕೆ ಕುತ್ತು ಬಂದೀತೆಂದು ಭಯಪಟ್ಟ.

ಮರುದಿನ ಎರಡನೆಯವನಿಗೆ ಪಾಳಿ ಕೊಡುವ ಮೊದಲು ಪಾಳಿ ಪುಸ್ತಕದಲ್ಲಿ ಮೊದಲನೆಯವ ಬರೆದ- ಇಂದು ಆತ ಮದ್ಯ ಸೇವಿಸಿಲ್ಲ .

**

ಒಬ್ಬ ವ್ಯಕ್ತಿತ್ವ ವಿಕಸನದ ಗುರು ಪಾಠ ಮಾಡುತ್ತಿದ್ದ- ಚಾರ್ಲ್ಸ್‌ ಸ್ವಾಬ್‌ ಎಂಬಾತನಿದ್ದ. ಜಗತ್ತಿನ ಅತಿ ದೊಡ್ಡ ಸ್ಟೀಲ್‌ ಕಂಪನಿ ಮಾಲೀಕ. ಕೊನೆಯಲ್ಲಿ ದಿವಾಳಿಯಾಗಿ ಹುಚ್ಚನಾದ. ವಿಶ್ವದ ಅತಿದೊಡ್ಡ ಗ್ಯಾಸ್‌ ಕಂಪನಿ ಮುಖ್ಯಸ್ಥ ಹೋವಾರ್ಡ್‌ ಹಬ್ಸನ್‌ ಕೂಡ ಹುಚ್ಚನಾಗಿ ಸತ್ತ. ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಅಧ್ಯಕ್ಷ ಸಾಯುವಾಗ ಭಿಕಾರಿಯಾದ ಇಟಲಿಯ ಶ್ರೀಮಂತ ವಜ್ರ ವ್ಯಾಪಾರಿ ಸಾಯುವಾಗ ಅರೆಹುಚ್ಚನಾಗಿದ್ದ.

ಅರ್ಧಗಂಟೆ ಪಾಠ ಮುಗಿಸಿದ ಗುರು, ಈ ಎಲ್ಲ ಕತೆಗಳನ್ನು ಕೇಳಿದರೆ ಏನನಿಸುತ್ತದೆ? ಎಂದು ಕೇಳಿದ. ವಿದ್ಯಾರ್ಥಿಗಳು ಹೇಳಿದರು- ಶ್ರೀಮಂತರಾದರೆ ಹುಚ್ಚರಾಗುತ್ತಾರೆ. ಅದಕ್ಕೆ ಗುರು ಹೇಳಿದ- ಶ್ರೀಮಂತಿಕೆ ಹಾಗೂ ಶ್ರೀಮಂತನಾಗಬೇಕೆಂಬ ಹುಚ್ಚು ಬಿಡಿ.

**

ಎಲ್ಲರೂ ನನ್ನನ್ನೇ ನೋಡುತ್ತಿರಬೇಕು. ಆಗಲೇ ನನಗೆ ಖುಷಿ. ಒಂದು ಮೋಡ ಇನ್ನೊಂದಕ್ಕೆ ಹೇಳಿತು. ನಿನ್ನನ್ನು ಎಲ್ಲರೂ ನೋಡ್ತಾರೆ. ಆದರೆ ನೀನು ನಾಲ್ಕು ಹನಿ ಚೆಲ್ಲಬಾರದಾ? ಎಂದು ಇನ್ನೊಂದು ಮೋಡ ಬುದ್ಧಿ ಹೇಳಿತು. ಅದಕ್ಕೆ ಮೊದಲ ಮೋಡ ಹೇಳಿತು- ಚೆಲ್ಲಿದರೆ ಯಾರೂ ನೋಡಲ್ಲ. ಅದಕ್ಕಾಗಿ ಮರುಭೂಮಿಯ ಮೇಲೆ ನಾನು ಇನ್ನೂ ತನಕ ಹನಿಗಳನ್ನು ಚೆಲ್ಲಿಲ್ಲ.

**

ಒಂದು ದಿನ ಸೌಂದರ್ಯ ಹಾಗೂ ಮುಪ್ಪು ಆಕಸ್ಮಿಕವಾಗಿ ಭೇಟಿಯಾದರು. ಸೌಂದರ್ಯ ಹೇಳಿತು- ನಾವಿಬ್ಬರೂ ಈಗ ಭೇಟಿಯಾಗಿಯೇ ಇಲ್ಲ.

**

ನಾವಿಬ್ಬರೂ ಇನ್ನು ಎಷ್ಟು ದಿನಾಂತ ಹೀಗೇ ಕೇಳ್ತಾ ಇರಬೇಕು? ಒಂದು ಕಿವಿ, ಮತ್ತೊಂದು ಕಿವಿಗೆ ಹೇಳಿತು. ಅದಕ್ಕೆ ಮತ್ತೊಂದು ಕಿವಿ ಹೇಳಿತು- ಹಾಗಾದ್ರೆ ಕಿವುಡರಾಗಿಬಿಡೋಣ. ಅದಕ್ಕೆ ಮೊದಲ ಕಿವಿ ಹೇಳಿತು- ಅದು ಇನ್ನೂ ಕಷ್ಟ. ಎಲ್ಲರೂ ಹತ್ತಿರ ಬಂದು ಜೋರಾಗಿ ಕಿರುಚುತ್ತಾರೆ. ಎಂಜಲನ್ನು ಸಿಡಿಸುತ್ತಾರೆ.

**

ದಾರಿಯಲ್ಲಿ ಒಬ್ಬ ನಡೆದು ಹೋಗುತ್ತಿದ್ದ. ಅವನ ಕಿಸೆಯಿಂದ 5 ರೂ. ನಾಣ್ಯ ಕೆಳಗೆ ಬಿತ್ತು. ಕಟ್ಟೆಯ ಮೇಲೆ ಹಸಿವಿನಿಂದ ಕುಳಿತ ವ್ಯಕ್ತಿ ಅದನ್ನು ಗಮನಿಸಿದ. ಆ ನಾಣ್ಯವನ್ನು ಎತ್ತಿಕೊಳ್ಳಬೇಕೋ, ಬೇಡವೋ ಎಂದು ಯೋಚಿಸಲಾರಂಭಿಸಿದ. ಇಂದಿನ ಅದೃಷ್ಟ ಏನಿದೆಯೋ ಏನೋ. ಯಾಕೆ 5 ರೂಪಾಯಿಯಲ್ಲಿ ಅದೃಷ್ಟ ಕಳೆದುಕೊಳ್ಳಬೇಕೆಂದು ನಾಣ್ಯವನ್ನು ಎತ್ತಿಕೊಳ್ಳಲಿಲ್ಲ. ಮತ್ತೊಬ್ಬ ದಾರಿಹೋಕನಿಗೆ ಆ ನಾಣ್ಯ ಸಿಕ್ಕಿತು. ಆತ ಪಕ್ಕದ ಅಂಗಡಿಯಲ್ಲಿ ಒಂದು ಮುಷ್ಠಿ ಶೇಂಗಾ, ಎರಡು ಬಾಳೆಹಣ್ಣು ಖರೀದಿಸಿ, ಅಲ್ಲಿಯೇ ಸೇವಿಸಿ, ಒಂದು ಲೋಟ ನೀರು ಕುಡಿದು ಡರ್‌ ಎಂದು ತೇಗಿ ಮುನ್ನಡೆದ. ಕಟ್ಟೆಯ ಮೇಲೆ ಕುಳಿತವನ ಹಸಿವು ಇನ್ನಷ್ಟು ಜಾಸ್ತಿಯಾಗಿತ್ತು.

**

ಮುಂಬೈ ಷೇರು ಮಾರುಕಟ್ಟೆಯ ಎತ್ತರದ ಕಟ್ಟಡದ ಸಮೀಪ ಇಬ್ಬರು ಭಿಕ್ಷುಕರು ಕುಳಿತಿದ್ದರು. ಇಬ್ಬರಿಗೂ ಕೈ ತುಂಬಾ ಹಣ ಮಾಡುವ ಆಸೆ. ಒಬ್ಬ ಭಿಕ್ಷುಕ ಹೇಳಿದ- ಷೇರಿನಲ್ಲಿ ಹಣ ವಿನಿಯೋಗಿಸಿ ಒಂದು ಕೋಟಿ ರೂ. ಗಳಿಸಲು ನಾನೇನು ಮಾಡಬೇಕು? ಅದಕ್ಕೆ ಮತ್ತೊಬ್ಬ ಭಿಕ್ಷುಕ ಹೇಳಿದ- ಎರಡು ಕೋಟಿ ರೂ. ಇನ್ವೆಸ್ಟ್‌ ಮಾಡಬೇಕು.

**

ತರುಣಿಯಾಬ್ಬಳು ವಿಪರೀತ ತೆಳುವಾಗಿದ್ದಾಳೆಂಬುದನ್ನು ವರ್ಣಿಸಿ ಎಂದು ಕನ್ನಡ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಹೇಳಿದರು. ವಿದ್ಯಾರ್ಥಿಗಳ ವರ್ಣನೆ ಶುರುವಾಯಿತು. ಆಕೆ ಕಡ್ಡಿಯಷ್ಟು ತೆಳುವಾಗಿದ್ದಾಳೆ, ಕಾಷ್ಠದಂತಿದ್ದಾಳೆ, ಹೊಟ್ಟೆ ಬೆನ್ನಿಗೆ ಅಂಟಿಕೊಂಡಿದೆ, ಕಿರುಬೆರಳಿನಂತಿದ್ದಾಳೆ, ಮಿಡತೆಯಂತಿದ್ದಾಳೆ... ಹೀಗೇ ಮುಂದುವರಿದಿತ್ತು.

ಇದನ್ನೆಲ್ಲ ಕೇಳುತ್ತಿದ್ದ ಕಲಾವಿದನೊಬ್ಬ ಬೋರ್ಡ್‌ ಮೇಲೆ ಒಂದು ಸರಳರೇಖೆಯ ಗೀಟು ಎಳೆದು ಹೊರ ನಡೆಯುತ್ತಿದ್ದಾಗ ವಿದ್ಯಾರ್ಥಿಗಳೆಲ್ಲ ಅದೇನೆಂದು ಕೇಳಿದರು. ಅದಕ್ಕೆ ಕಲಾವಿದ ಹೇಳಿದ- ನಿಮಗೆ ಆ ತೆಳುವಾದ ಹುಡುಗಿ ಕಾಣುವುದಿಲ್ಲ. ಆಕೆ ಆ ಗೀಟಿನ ಹಿಂಬದಿ ಅವಿತುಕೊಂಡಿದ್ದಾಳೆ.

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಮುಖ ಮುಖ ನೋಡಿಕೊಂಡರು.

**

ಒಂದು ದಿನ ಜೈಲಿಗೆ ರಾಜ ಹೋದ. ಕೈದಿಗಳನ್ನು ಮಾತಾಡಿಸಿದ. ಕೊಲೆ ಆರೋಪ ಎದುರಿಸುತ್ತಿರುವ ಕೈದಿ- ಬುದ್ಧಿ ತಪ್ಪು ಮಾಡಿಲ್ಲ. ಹೆಂಡತಿಯನ್ನು ಹೆದರಿಸಲು ಖಡ್ಗ ತೆಗೆದೆ. ಆಕೆ ಓಡಿಬಂದು ತಬ್ಬಿ ಕೊಂಡಳು. ಖಡ್ಗ ಚುಚ್ಚಿ ಸತ್ತಳು. ನನ್ನ ತಪ್ಪಿಲ್ಲ ಎಂದ. ಹಣ ತಿಂದ ಆರೋಪಿ ಕೈದಿ-, ರಾಜ, ನನ್ನದೇನೂ ತಪ್ಪಿಲ್ಲ. ಬೇರೆಯವರ ಹಣ ಇಟ್ಟುಕೊಳ್ಳುವಾಗ ನನ್ನನ್ನು ಬಂಧಿಸಿದರು. ನನ್ನ ತಪ್ಪಿಲ್ಲ ಎಂದು ಬೇಡಿಕೊಂಡ. ರಾಜ ಎಲ್ಲರ ಅಹವಾಲನ್ನು ಕೇಳಿದ. ಯಾರೂ ತಪ್ಪು ಮಾಡಿಲ್ಲವೆಂದು ಹೇಳಿದರು. ಕೊನೆಗೆ ಯುವಕನೊಬ್ಬ- ರಾಜ, ನಾನು ತಪ್ಪು ಮಾಡಿದ್ದೇನೆ. ನನ್ನ ತಮ್ಮನ ಜತೆ ಆಡುವಾಗ ಅವನನ್ನು ಗಾಯಗೊಳಿಸಿದೆ. ನನಗೆ ಶಿಕ್ಷೆಯಾಗಲಿ ಎಂದ. ರಾಜ ಕೊನೆಯಲ್ಲಿ ಹೇಳಿದ- ತಕ್ಷಣವೇ ಈ ಯುವ ಕೈದಿಯನ್ನು ಬಿಟ್ಟುಬಿಡಿ. ಇಲ್ಲದಿದ್ದರೆ ಈತ ಉಳಿದ ನಿರಪರಾಧಿ ಕೈದಿಗಳನ್ನು ಹಾಳು ಮಾಡುತ್ತಾನೆ.

**

ಇಬ್ಬರು ಕವಿಗಳು ನಡೆಯುತ್ತಾ ನಡೆಯುತ್ತಾ ರಾತ್ರಿ ಒಂದು ಸರೋವರದ ಬಳಿ ಬಂದರು. ಇಡೀ ಪರಿಸರ ಎಷ್ಟೊಂದು ಶಾಂತವಾಗಿದೆ ಅಲ್ಲವಾ? ಎಂದು ಒಬ್ಬ ಹೇಳಿದ. ಮತ್ತೊಬ್ಬ ಕವಿ ಹೇಳಿದ- ಎಷ್ಟೊಂದು ಶಾಂತವಾಗಿದೆಯೆಂದು ಹೇಳಬೇಡ. ಈ ಪರಿಸರದಿಂದ ಏನೇನೂ ಕೇಳುವುದೇ ಇಲ್ಲವಲ್ಲ ಎಂದು ಹೇಳು.

**

ಒಂದೂರಿನಲ್ಲಿ ಒಬ್ಬ ಬ್ರೆಡ್‌ ತಿನ್ನುತ್ತಿದ್ದ. ಬೆಣ್ಣೆಯನ್ನು ಸವರಿದ ಬ್ರೆಡ್‌ ತಿನ್ನುವಾಗ ನೆಲಕ್ಕೆ ಬಿದ್ದಿತ್ತು. ಆಶ್ಚರ್ಯ! ಬೆಣ್ಣೆ ಸವರಿದ ಭಾಗ ಮೇಲ್ಮುಖವಾಗಿ ಬಿದ್ದಿತ್ತು. ಈ ಸಂಗತಿಯನ್ನು ತನ್ನ ಸ್ನೇಹಿತರಿಗೆಲ್ಲ ಹೇಳಿದ. ಇದರಲ್ಲೇನೋ ಪವಾಡವಿರಬೇಕೆಂದು ಅವರಿಗನ್ನಿಸಿತು. ಯಾರೇ ಬ್ರೆಡ್‌ನ್ನು ಕೆಳಕ್ಕೆ ಬೀಳಿಸಿದರೂ ಬೆಣ್ಣೆ ಸವರಿದ ಭಾಗ ಮೇಲ್ಮುಖವಾಗಿ ಬೀಳುತ್ತಿತ್ತು. ಈ ಪವಾಡ ಊರಿನಲ್ಲೆಲ್ಲಾ ಹಬ್ಬಿತು. ಯಾರಿಗೂ ಕಾರಣ ಗೊತ್ತಾಗಲಿಲ್ಲ. ಅವರೆಲ್ಲ ಗುರುವಿನ ಬಳಿ ಹೋಗಿ ಈ ವಿಸ್ಮಯಕ್ಕೆ ಕಾರಣ ಕೇಳಿದಾಗ ನಾಳೆ ಬನ್ನಿ ಹೇಳ್ತೇನೆ ಅಂದ. ಎಲ್ಲರೂ ನಾಳೆಗೆ ಹೋದಾಗ ಗುರು ಹೇಳಿದ- ಬ್ರೆಡ್‌ ಹೇಗೆ ಬೀಳಬೇಕೋ ಹಾಗೇ ಬೀಳುತ್ತದೆ. ಆದರೆ ಬೆಣ್ಣೆಯನ್ನು ಮಾತ್ರ ವಿರುದ್ಧ ಭಾಗಕ್ಕೆ ಸವರುತ್ತಿದ್ದೀರಿ.

**

ಹುಚ್ಚಾಸ್ಪತ್ರೆಯಲ್ಲೊಬ್ಬ ತತ್ವಶಾಸ್ತ್ರ ಪುಸ್ತಕ ಓದುತ್ತಿದ್ದ. ಅದನ್ನು ಕಂಡು ಅಲ್ಲಿಗೆ ಆಗಮಿಸಿದವನಿಗೆ ಅಚ್ಚರಿ. ಅದಕ್ಕೆ ಕಾರಣ ಕೇಳಿದ. ಆತ ಹೇಳಿದ- ನನ್ನ ತಂದೆ ವಕೀಲ. ಯಾವತ್ತೂ ವಕೀಲನಾಗು ಅಂತ ಪೀಡಿಸ್ತಾನೆ. ತಾಯಿ ವೈದ್ಯೆ. ವೈದ್ಯನಾಗು ಅಂತ ಪೀಡಿಸ್ತಾಳೆ. ನನ್ನ ಭಾವ ಮೇಷ್ಟ್ರು. ನಾನೂ ಮೇಷ್ಟ್ರೇ ಆಗಬೇಕಂತೆ. ನನ್ನ ಸಂಗೀತ ಗುರು ಸದಾ ಪಿಯಾನೋ ಕಲಿ ಅಂತ ಒತ್ತಾಯಿಸುತ್ತಾರೆ. ಎಲ್ಲರೂ ತಮ್ಮ ಉದ್ಯೋಗ, ಹವ್ಯಾಸವನ್ನೇ ಹೇರುತ್ತಾರೆ. ಬೇರೆ ದಾರಿ ಕಾಣದೇ ಇಲ್ಲಿಗೆ ಬಂದೆ. ಇಲ್ಲಿ ನನಗನಿಸಿದಂತೆ ಇದ್ದೇನೆ.

**

ಒಂದೊಂದು ಕತೆಯದೂ ಒಂದೊಂದು ರೀತಿಯ ಕತೆ. ಕತೆ ಮಾತ್ರ ಸಾಗುತ್ತಿರುತ್ತದೆ ಕತ್ತಲೆಯಂತೆ, ಕನಸಿನಂತೆ, ಕನವರಿಕೆಯಂತೆ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more