• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾರ್ಲಿಮೆಂಟು ದೇವಾಲಯವೆಂದು ಭಾವಿಸಿ ಅವರು ಬರಿಗಾಲಲ್ಲೇ ಹೋಗಿದ್ದರು !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಮೊನ್ನೆ ಬೀದರ್‌ನ ಲೋಕಸಭೆ ಸದಸ್ಯ ರಾಮಚಂದ್ರ ವೀರಪ್ಪ ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅದು ಸದಾ ತಣ್ಣಗಿರಲಿ.

ರಾಮಚಂದ್ರ ವೀರಪ್ಪ ಬಗ್ಗೆ ಸಾಕಷ್ಟು ಗೌರವ, ಪ್ರೀತಿಯಿಂದಲೇ ಬರೆಯಬೇಕಾಗಿದೆ. ಕೆಲವರು ಬದುಕಿದ್ದಾಗ ಮಾಡುವುದಕ್ಕಿಂತ ಸತ್ತಾಗ ಹೆಚ್ಚು ಸುದ್ದಿ ಮಾಡುತ್ತಾರೆ. ಕಾರಣ ಅವರು ಬದುಕಿದ್ದರೆಂಬುದು ಸತ್ತಾಗ ಗೊತ್ತಾಗುತ್ತದೆ. ದೇಶದ ಅತಿ ಹಿರಿಯ ಸಂಸದ ಎಂಬ ಕೀರ್ತಿಗೂ ಪಾತ್ರರಾಗಿದ್ದ ವೀರಪ್ಪ ನಿಧನರಾದಾಗ ಲೋಕಸಭೆ ಕಲಾಪ ಒಂದು ದಿನದ ಮಟ್ಟಿಗೆ ನಡೆಯಲಿಲ್ಲ . ಲೋಕಸಭೆ ಪ್ರತಿಪಕ ನಾಯಕ ಅಡ್ವಾಣಿ ದಿಲ್ಲಿಯಿಂದ ಹುಮನಾಬಾದ್‌ಗೆ ಬಂದು ವೀರಪ್ಪ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರು. ಅಷ್ಟರಮಟ್ಟಿಗೆ ವೀರಪ್ಪ ನಿಧನ ರಾಷ್ಟ್ರಮಟ್ಟದ ಸುದ್ದಿಯಾಯಿತು.

ಆದರೆ ಅದೇ ರಾಮಚಂದ್ರ ವೀರಪ್ಪ ಬದುಕಿದ್ದಾಗ ಒಂದೇ ಒಂದು ಸಲ ರಾಷ್ಟ್ರಮಟ್ಟದಲ್ಲಿ ಬಿಡಿ, ರಾಜ್ಯಮಟ್ಟಕ್ಕಾಗುವಂಥ ಒಂದೇ ಒಂದು ಸುದ್ದಿಯನ್ನು ಸಹ ಮಾಡಲಿಲ್ಲ .

ಹಾಗಂತ ಅವರನ್ನು ಏಳು ಸಲ ಆರಿಸಿ ಕಳುಹಿಸಿದ ಬೀದರ್‌ನ ಜನರಿಗೆ ಈ ಯಾವ ಸಂಗತಿಗಳೂ ಗೊತ್ತಿರಲಿಲ್ಲ ಅಂತ ಅಲ್ಲ . ಅವರಿಗೆ ಚೆನ್ನಾಗಿ ಗೊತ್ತಿತ್ತು . ಆದರೆ ಅವರು ಈ ವಿಷಯವನ್ನು ಹೊಟ್ಟೆಗೆ ಹಾಕಿಕೊಳ್ಳಲಿಲ್ಲ . ಅದಕ್ಕಾಗಿಯೇ ಅವರು ಪ್ರತಿಸಲ ಮತ ಕೇಳಲು ಮನೆಮುಂದೆ ನಿಂತಾಗ ಮತ ಹಾಕಿದರು. ಬದುಕಿದ್ದರೆ ಮುಂದಿನ ಚುನಾವಣೆಯಲ್ಲಿ ಮತದಾರನ ಅಂಗಳದಲ್ಲಿ ನಿಂತು ಮತ ಯಾಚಿಸಿದ್ದರೆ ಖಂಡಿತವಾಗಿಯೂ ಮತ್ತೊಂದು ಬಾರಿ ಆರಿಸಿ ಕಳುಹಿಸುತ್ತಿದ್ದರು.

ವೀರಪ್ಪಗೆ ಮತ ಕೊಟ್ಟರೆ ಏನೂ ಆಗುವುದಿಲ್ಲ ಅಂತ ಮತದಾರನಿಗೆ ಗೊತ್ತಿತ್ತು . ಆತನಿಗೂ ಏನೂ ಆಗುವುದಿಲ್ಲ ತನಗೂ ಏನೂ ಆಗುವುದಿಲ್ಲ ಎಂಬುದೂ ಮತದಾರನಿಗೆ ಗೊತ್ತಿತ್ತು . ಕ್ಷೇತ್ರಕ್ಕಾಗಲಿ, ಸಮಾಜಕ್ಕಾಗಲಿ ಏನೂ ಆಗುವುದಿಲ್ಲವೆಂಬುದೂ ಗೊತ್ತಿತ್ತು . ಆದರೂ ವೀರಪ್ಪಗೆ ಮತ ಹಾಕುತ್ತಿದ್ದರು. ‘ನಮ್ಮ ವೀರಪ್ಪ ಅವರನ್ನು ಏಳು ಸಲ ಪಾರ್ಲಿಮೆಂಟಿಗೆ ಕಳಿಸೇವ್ರಿ’ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ರಾಮಚಂದ್ರ ವೀರಪ್ಪ ರಸ್ತೆ , ಬೀದಿ ದೀಪ, ಕುಡಿಯುವ ನೀರು, ಆಸ್ಪತ್ರೆ, ಮನೆ, ಬಸ್ಸು , ಶಾಲೆ, ಉದ್ಯಾನ ಇತ್ಯಾದಿಗಳ ಬಗ್ಗೆ ಒಂದಪ ಯೋಚಿಸಲಿಲ್ಲ . ಅವೆಲ್ಲ ಪುರಸಭೆ, ನಗರಸಭೆ ಕೆಲಸ ಅಥವಾ ಕಾರ್ಪೊರೇಟರ್‌, ಶಾಸಕರ ಕೆಲಸ ಅಂತ ಸುಮ್ಮನಿರೋಣ. ಕೇಂದ್ರದ ಯಾವುದೇ ಯೋಜನೆಯನ್ನೂ ಬೀದರ್‌ಗೆ ತರಲಿಲ್ಲ . ಅದಕ್ಕಾಗಿ ಅವರಿಗಾಗಲಿ ಅವರಿಗೆ ಮತಕೊಟ್ಟ ಜನರಿಗಾಗಲಿ ವಿಷಾದವಿಲ್ಲ . ಯಾಕೆಂದರೆ ಅವರ್ಯಾರೂ ವೀರಪ್ಪ ಅವರಿಂದ ಇವ್ಯಾವುದನ್ನೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ವೀರಪ್ಪ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಉದಾಸೀನ ತೋರಿದಾಗ, ದಿವ್ಯ ನಿರ್ಲಕ್ಷ್ಯ ತಳೆದಾಗ ಮತದಾರರಿಗೆ ಭ್ರಮನಿರಸನವಾಗಲಿ, ಹತಾಶೆಯಾಗಲಿ ಆಗಲಿಲ್ಲ . ಒಂದು ಪಕ್ಷ ಹಾಗೇನಾದರೂ ಆಗಿದ್ದರೆ ಅವರು ಮೂರನೇ ಬಾರಿಗೆ ಆರಿಸಿ ತರುತ್ತಿರಲಿಲ್ಲ . ಈ ಕಾರಣದಿಂದ ವೀರಪ್ಪ ಒಂದಾದ ನಂತರ ಒಂದರಂತೆ ಏಳು ಬಾರಿ ಲೋಕಸಭೆಗೆ ಆರಿಸಿ ಹೋದರು. ಬೀದರದ ಜನತೆ ವೀರಪ್ಪ ಅವರ ಪ್ರತಿ ಗೆಲುವನ್ನು ಸಂಭ್ರಮದಿಂದ ಆಚರಿಸಿದರು. ವೀರಪ್ಪ ಹೀಗೆ ಸತತ ಐದು ಬಾರಿ, ಒಟ್ಟು ಏಳು ಬಾರಿ ಸಂಸದರಾದದ್ದಾದರೂ ಹೇಗೆ? ಬಿಜೆಪಿಯ ವರ್ಚಸ್ಸೋ? ಅಭ್ಯರ್ಥಿಗಿಂತ ಪಕ್ಷವೇ ಮುಖ್ಯ ಎಂಬ ಮತದಾರನ ತಿಳವಳಿಕೆಯೋ? ವೀರಪ್ಪ ಅವರ ವರ್ಚಸ್ಸೋ? ಮತದಾರನ ಹೃದಯ ವೈಶಾಲ್ಯವೋ? ವಿರೋಧಿಗಳ ವೈಫಲ್ಯವೋ? ವಿರೋಧಿಗಳ ಜತೆಗಿನ ಮಿಲಾಪವೋ? ವೀರಪ್ಪ ಅವರ ಸಾಧನೆಯೋ? ಈ ಪೈಕಿ ಯಾವುದೋ ಒಂದಂಶ ಕಾರವಲ್ಲ . ಈ ಎಲ್ಲ ಸಂಗತಿಗಳೂ ವೀರಪ್ಪ ಅವರ ಗೆಲುವನ್ನು ಸಲೀಸುಗೊಳಿಸಿದವು.

ಇವೆಲ್ಲಕ್ಕಿಂತ ಮುಖ್ಯವಾಗಿ ವೀರಪ್ಪನವರನ್ನು ಗೆಲ್ಲಿಸುತ್ತಿದ್ದುದು ಅವರ ಸರಳತೆ, ಮುಗ್ಧತೆ, ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಗುಣ. ಎಲ್ಲರಿಗೂ ಸಿಗುತ್ತಿದ್ದ ಅವರ ಸಾಮೀಪ್ಯ, ಅವೆಲ್ಲಕ್ಕಿಂತ ಮುಖ್ಯವಾಗಿ ಅವರ ಅನಕ್ಷರತೆ! ಈ ಗುಣಗಳು ಮತದಾರನ ಮೇಲೆ ಎಂಥ ಪರಿಣಾಮವನ್ನುಂಟು ಮಾಡಿದವೆಂದರೆ ‘ಈ ವೀರಪ್ಪ ನಮ್ಮ ಮನುಷ್ಯಾ ಕಣ್ರೀ’ ಎಂದು ಅವರನ್ನು ತಮ್ಮವನನ್ನಾಗಿ ಸ್ವೀಕರಿಸಿದರು. ಇದು ಮತದಾರನ ಮುಗ್ಧತೆಯಿರಬಹುದು ಎಂದು ಭಾವಿಸಬಹುದು. ಆದರೆ ಇವರ ವಿರೋಧಿಗಳಾದ ಕಾಂಗ್ರೆಸ್ಸಿಗರು ಕೂಡ ಅವರನ್ನು ಹಾಗೇ ಭಾವಿಸಿದರು. ವೀರಪ್ಪ ಒಂದಾದ ಮಗ್ಗುಲಿಗೆ ಮತ್ತೊಮ್ಮೆ ಆರಿಸಿ ಬರುತ್ತಿದ್ದರೆ ಕಾಂಗ್ರೆಸ್ಸಿಗರಿಗೆ ಬೇಸರವಿರಲಿಲ್ಲ . ಕೆಲವು ಬಾರಿ ಅವರೂ ಹಿಂಬರ್ಕಿಯಿಂದ ವೀರಪ್ಪ ಗೆಲುವಿಗೆ ಶ್ರಮಿಸಿದರು. ತಮ್ಮ ಪಕ್ಷದ ಯಾವನೋ ಬೆರಕಿ ಆಸಾಮಿ ಆರಿಸಿ ಬರುವುದಕ್ಕಿಂತ ವೀರಪ್ಪನವರಂಥ ಮುಗ್ಧನೇ ಆಯ್ಕೆಯಾಗುವುದು ಅವರಿಗೂ ಬೇಕಿತ್ತು . ವೀರಪ್ಪ ಕೂಡ ಕಾಂಗ್ರೆಸ್ಸಿಗರನ್ನು ತಮ್ಮ ವಿರೋಧಿಗಳಂತೆ ನಡೆಸಿಕೊಳ್ಳಲಿಲ್ಲ . ಹೀಗಾಗಿ ವೀರಪ್ಪ ಎಲ್ಲರಿಗೂ ಬೇಕಾಗಿದ್ದರು.

ವೀರಪ್ಪ ಅಜಾತಶತ್ರುವಾಗಿರದಿದ್ದರೂ ಅವರಿಗೆ ಅಂಥ ವೈರಿಗಳಾಗಲಿ, ಶತ್ರುಗಳಾಗಲಿ ಇರಲಿಲ್ಲ . ಮೇಲಿಂದ ಮೇಲೆ ಆರಿಸಿಬರುತ್ತಿರುವಾಗ ವೈರತ್ವ ಅಥವಾ ಶತ್ರುತ್ವ ಕಟ್ಟಿಕೊಳ್ಳುವಂಥ ಅವಶ್ಯಕತೆಯೂ ಅವರಿಗಿರಲಿಲ್ಲ . ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅವರು ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದರು. ಪಶು ವೈದ್ಯ ಆಸ್ಪತ್ರೆ ಉದ್ಘಾಟನೆಯಿರಬಹುದು, ಕೊವೆಬಾವಿ ಉದ್ಘಾಟನೆಯಿರಬಹುದು, ಒಳಚರಂಡಿ ಶಂಕುಸ್ಥಾಪನೆಯಿರಬಹುದು. ಈ ಕಾರ್ಯಕ್ರಮಗಳಲ್ಲೂ ಅವರು ದೇಶಪ್ರೇಮದ ಬಗ್ಗೆ ಭಾಷಣ ಬಿಗಿಯುತ್ತಿದ್ದರು. ದೇಶಪ್ರೇಮ ಅವರ ಪ್ರೀತಿಯ ವಿಷಯ ಎಂಬುದಕ್ಕಿಂತ ಅವರಿಗೆ ಬೇರೆ ವಿಷಯ ಗೊತ್ತಿರಲಿಲ್ಲ . ಗೊತ್ತಿದ್ದರೂ ಭಾಷಣ ಮಾಡುವುದಕ್ಕೆ ಬರುತ್ತಿರಲಿಲ್ಲ . ‘ನಮ್ಮ ಯುವಕರಲ್ಲಿ ದೇಭಿಮಾನ ಕುಟ್ಟಿ ಕುಟ್ಟಿ ಬರಬೇಕು’ ಎಂಬ ಪ್ಲೇಟನ್ನೇ ಹಾಕುತ್ತಿದ್ದರು. ಎಲ್ಲ ಭಾಷಣದ ಕೊನೆಯಲ್ಲಿ ‘ಇನ್ಹಿ ಬಿಗಡೆ ದಿಮಾಕೋಮೆ ಅಮೃತ್‌ ಕೆ ಗುಚ್ಛೆ ಹೈ. ಹಮೆ ಲೋಗ್‌ ಪಾಗಲ್‌ ಕೆಹತೆ ಹೈ, ಕ್ಯೋ ಹಮೆ ಪಾಗಲ್‌ ಹೀ ಅಚ್ಛೆ ಹೈ’ ಶಾಯಿರಿ ಹೇಳುತ್ತಿದ್ದರು. ಈ ಶಾಯಿರಿಯನ್ನು ವಾಜಪೇಯಿ ಸಮ್ಮುಖದಲ್ಲೊಮ್ಮೆ ಹೇಳಿದಾಗ ಅವರಿಗೆ ಭಾರಿ ಖುಷಿಯಾಗಿತ್ತಂತೆ. ಅಂದಿನಿಂದ ಈ ಶಾಯಿರಿ ಹೇಳಿಯೇ ಮಾತು ಮುಗಿಸುತ್ತಿದ್ದರು.

ಕೆಲ ವರ್ಷಗಳ ಹಿಂದೆ ರಾಮಚಂದ್ರ ವೀರಪ್ಪ ಅವರೊಂದಿಗೆ ಎರಡು ದಿನ ಕಳೆಯುವ ಅವಕಾಶ ಸಿಕ್ಕಿತ್ತು . ಆ ಸಂದರ್ಭದಲ್ಲಿ ಅವರು ಅನೇಕ ಪ್ರಸಂಗಗಳನ್ನು ಮೆಲುಕು ಹಾಕಿದ್ದರು. ಮೊದಲ ಬಾರಿಗೆ ಅವರು ಪಾರ್ಲಿಮೆಂಟ್‌ ಭವನಕ್ಕೆ ಚಪ್ಪಲಿಯಿಲ್ಲದೇ ಬರಿಗಾಲಲ್ಲಿ ಹೋಗಿದ್ದರು. ಸಂಸತ್ಸದಸ್ಯನೊಬ್ಬ ಬರಿಗಾಲಲ್ಲಿ ಬಂದಿದ್ದನ್ನು ಕಂಡು ಅಲ್ಲಿನ ಭದ್ರತಾ ಸಿಬ್ಬಂದಿಗೆ ಅಚ್ಚರಿ. ಪ್ರಜಾಪ್ರಭುತ್ವದ ಗರ್ಭಗುಡಿಯೆಂದರೆ ಪಾರ್ಲಿಮೆಂಟು ಎಂದು ಭಾವಿಸಿದ ವೀರಪ್ಪ , ದೇವಸ್ಥ್ಥಾನದೊಳಗೆ ಯಾರಾದರೂ ಚಪ್ಪಲಿ ಹಾಕಿಕೊಂಡು ಹೋಗ್ತಾರಾ ಎಂದು ಬರಿಗಾಲಲ್ಲಿಯೇ ಹೋಗಿದ್ದರು. ಆದರೆ ಅಲ್ಲಿ ಎಲ್ಲರೂ ಎಲ್ಲೆಡೆಯೂ ಚಪ್ಪಲಿ, ಬೂಟು ಧರಿಸಿಯೇ ಓಡಾಡುವುದನ್ನು ಕಂಡು ಮುಂದಿನ ಸಲದಿಂದ ಚಪ್ಪಲಿ ಹಾಕಿಕೊಂಡು ಹೋಗಲಾರಂಭಿಸಿದರು. ಅಂಥ ಮುಗ್ಧ !

ಬೀದರನ ಕುಫಲ್‌ತೋಡ್‌ ಮೊಹಲ್ಲಾದಲ್ಲಿನ ಮನೆಯಿರಬಹುದು. ದಿಲ್ಲಿಯ ರಾಷ್ಟ್ರಪತಿಭವನದ ಮಗ್ಗುಲಲ್ಲಿನ ಸೌತ್‌ ಅವೆನ್ಯೂದ ಮನೆಯಿರಬಹುದು. ವೀರಪ್ಪ ಒಂದೇ ರೀತಿಯಿದ್ದರು. ದಿಲ್ಲಿಯ ಮನೆಯಾಳಗೆ ಕಾಲಿಟ್ಟರೆ ವಿಶಾಲವಾದ ಕೋಣೆಯ ಮೂಲೆಯಲ್ಲಿ ಎರಡು ಕಲ್ಲುಗಳ ಮೇಲೆ ಪಾತ್ರೆಯಿಟ್ಟು ಅಲ್ಲಿಯೇ ಒಲೆ ಹೂಡಿದ್ದರು. ಅಂಥ ದೃಶ್ಯವನ್ನು ಬೀದರ್‌ನ ಮನೆಯಲ್ಲಿ ಸಹ ಕಂಡವರಿದ್ದಾರೆ. ವೀರಪ್ಪನವರು ಸ್ನಾನ ಮಾಡಲು ಅಣಿಯಾಗುತ್ತಲೇ ಫೋನ್‌ನಲ್ಲಿ ಮಾತನಾಡುವ ಚಿತ್ರವನ್ನು ಪತ್ರಿಕೆಗಳಲ್ಲಿ ಕಂಡವರು ಅವರ ಮನೆಯ ದೃಶ್ಯವನ್ನು ಕಲ್ಪಿಸಿಕೊಳ್ಳಬಹುದು. ಮನೆಯಲ್ಲಿನ ‘ಹೊರಸು’ ಅದರ ಮೇಲೊಂದು ಕರಿ ಘೋಂಗಡಿಯೇ ಆಸನ, ಅದೇ ಪೀಠೋಪಕರಣ.

ರಾಮಚಂದ್ರ ವೀರಪ್ಪ ತಮ್ಮ ಈ ಸಹಜ ಸರಳತೆಯನ್ನಾಗಲಿ, ಗ್ರಾಮೀಣ ಸೊಗಡಿನ ಬದುಕನ್ನಾಗಲಿ ಲಾಲೂಪ್ರಸಾದ್‌ ಯಾದವ್‌ ರೀತಿ ರಾಜಕೀಯ ದಾಳವನ್ನಾಗಿಸಿಕೊಳ್ಳಲಿಲ್ಲ . ಮತ ಕೀಳಲೆಂದು ಅಂಗಿ ಬಿಚ್ಚಿ ಬನೀನು ತೊಡಲಿಲ್ಲ. ಅವರ ಉಡುಪೇ ಅದಾಗಿತ್ತು . ಮೂವರು ಹೆಂಡತಿ, ಮನೆ ತುಂಬಾ ಮಕ್ಕಳನ್ನು ವೀರಪ್ಪ ಬಿಟ್ಟುಕೊಂಡಿದ್ದರು. ಅವರ ಅನಕ್ಷರತೆಯೇ ಅವರಿಗೊಂದು ದೊಡ್ಡ ‘ಅರ್ಹತೆ’ ಯಾಗಿತ್ತು . ಈ ಕಾರಣದಿಂದಲೇ ಈ ಅರ್ಹತೆಯನ್ನು ಅವರು ತಮ್ಮ ಮಕ್ಕಳಲ್ಲಿ ತುಂಬಿದ್ದರು. ಏಳು ಬಾರಿ ಸಂಸದರಾದರೂ ಅವರು ಷೋಕಿ ಜೀವನ ನಡೆಸಲಿಲ್ಲ . ದುಡ್ಡು ಕಾಸನ್ನು ಮಾಡಿಕೊಳ್ಳಲಿಲ್ಲ . ಕೆಲದಿನಗಳ ಹಿಂದೆ ದಿಲ್ಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಡಾಕ್ಟರ್‌ ಬರೆದುಕೊಟ್ಟ ಔಷಧ ತರಲು ಹಣವಿರಲಿಲ್ಲ .

ಇಂಥ ವೀರಪ್ಪ ಏಳು ಸಲ ಸಂಸದರಾದರೂ ಸಂಸತ್ತಿನಲ್ಲಿ ಮಾತನಾಡಿದ್ದನ್ನು ಯಾರೂ ಕೇಳಿದವರಿಲ್ಲ . ಹಾಗಂತ ಕರ್ನಾಟಕದ ಸಂಸದರ ಪೈಕಿ ಅವರದ್ದು ಗರಿಷ್ಠ ಹಾಜರಾತಿ.

ಈ ಎಲ್ಲ ಸಂಗತಿಗಳು ಅವರ ಪಕ್ಷದ ನಾಯಕರಿಗೆ ಗೊತ್ತಿರಲಿಲ್ಲ ಅಂತಲ್ಲ . ಅವರಿಂದ ಪಕ್ಷಕ್ಕಾಗಲಿ, ಕ್ಷೇತ್ರಕ್ಕಾಗಲಿ ಅಂಥ ಪ್ರಯೋಜನವಿಲ್ಲ ವೆಂಬುದು ನಾಯಕರಿಗೆ ಗೊತ್ತಿತ್ತು . ಆದರೂ ಅವರು ಬೇರೆಯವರನ್ನು ಬಿಟ್ಟು ರಾಮಚಂದ್ರ ವೀರಪ್ಪಗೆ ಟಿಕೆಟ್‌ ಕೊಡುತ್ತಿದ್ದರು. ಏಕೆಂದರೆ ಅವರು ಆರಿಸಿ ಬರುತ್ತಿದ್ದರು. ಅವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್‌ ಕೊಡಲು ಬೇರೆಯವರು ಪಕ್ಷದಲ್ಲಿ ಇರಲಿಲ್ಲ . ಪಕ್ಷದ ಪಾಲಿಗೆ ಅವರೊಬ್ಬ ‘ನಂಬರ್‌’ ಆಗಿದ್ದರು ಅಷ್ಟೆ . ಏನೂ ಮಾಡದ ವೀರಪ್ಪ ಇಡೀ ಕ್ಷೇತ್ರವನ್ನು ಆ ಪರಿ ಆವಾಹಿಸಿದ್ದರು !

ಏನೂ ಗೊತ್ತಿಲ್ಲದಿರುವುದು, ಏನೂ ಮಾಡದಿರುವುದನ್ನೇ ಅಗ್ಗಳಿಕೆಯನ್ನಾಗಿ ಮಾಡಿಕೊಂಡ ವೀರಪ್ಪ ಪದೇ ಪದೇ ಆರಿಸಿ ಬರುತ್ತಿದ್ದುದಕ್ಕೆ ಮತ್ತೊಂದು ಕಾರಣವೆಂದರೆ ‘ದುಷ್ಟ ಅಲ್ಲ’ ಎಂಬ ಕಾರಣಕ್ಕೆ. ರಾಜಕೀಯದಲ್ಲಿ ಎಲ್ಲೋ ಒಂದು ಕಡೆ ಸಭ್ಯತೆ, ಅನಕ್ಷರತೆ, ಮುಗ್ಧತೆಗೂ ಪರಿಗಣನೆಯಿದೆಯೆಂಬುದಕ್ಕೆ ನಿದರ್ಶನವಾಗಿದ್ದರು. ರಾಜಕೀಯ ಅವರಲ್ಲಿ ದುರಹಂಕಾರ ತುಂಬದಿದ್ದರೂ ಅಧಿಕಾರದ ಆಸೆಯನ್ನು ತುಂಬಿಸಿತ್ತು . ಮೂರು ವರ್ಷಗಳ ಹಿಂದೆ ವಾಜಪೇಯಿ ಬೆಂಗಳೂರಿಗೆ ಬಂದಿದ್ದಾಗ ವೀರಪ್ಪ ಅವರನ್ನು ಸಹಜವಾಗಿ ಮಾತನಾಡಿಸುತ್ತಾ ‘ರಾಮಚಂದ್ರ ವೀರಪ್ಪಾಜಿ ಕೈಸೆ ಹೈ’ ಎಂದು ಕೇಳಿದರು. ‘ಅಚ್ಛಾ ಹೂಂ ಸಾಬ್‌’ ಎಂದು ಹೇಳಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರೆ ವೀರಪ್ಪ ‘ಅಟಲ್‌ ಸಾಬ್‌ ಮುಝೆ ಔರ್‌ ಏಕ್‌ ಮೌಕಾ ದೀಜೀಯೆ, ಔರ್‌ ಏಕ್‌ ಬಾರ್‌ ಲಡೂಂಗಾ’ (ಮತ್ತೊಮ್ಮೆ ಟಿಕೆಟ್‌ ಕೊಡಿ. ಇನ್ನೊಂದು ಬಾರಿ ಚುನಾವಣೆಯಲ್ಲಿ ಸೆಣಸುತ್ತೇನೆ) ಎಂದು ಹೇಳಿ ವಿಚಿತ್ರ ಅಚ್ಚರಿ ಮೂಡಿಸಿದ್ದರು.

ರಾಮಚಂದ್ರ ವೀರ್ಪಪ್ಪ ಇಲ್ಲಿ ಒಬ್ಬ ವ್ಯಕ್ತಿಗಿಂತ ಹೆಚ್ಚಾಗಿ ಒಂದು ಸಂಕೇತವಾಗಿ ಕಾಣುತ್ತಾರೆ. ನಮ್ಮ ಬಹುತೇಕ ಸಂಸದರು ವೀರಪ್ಪಗಿಂತ ಭಿನ್ನವಾಗಿಲ್ಲ . ಪೋಷಾಕು, ಜೀವನ ವಿಧಾನದಲ್ಲಿ ಅಲ್ಲವಾದರೂ ಕಾರ್ಯಕ್ಷಮತೆಯಲ್ಲಿ .

ಮೊನ್ನೆ ರಾಮಚಂದ್ರ ವೀರಪ್ಪ ನಿಧನರಾದಾಗ ಲೋಕಸಭೆ ಸ್ಪೀಕರ್‌ ಸೋಮನಾಥ ಚಟರ್ಜಿ ‘ಈ ದೇಶ ಮಹಾ ಮುತ್ಸದ್ಧಿ ಹಾಗೂ ಅಸಾಮಾನ್ಯ ಸಂಸದೀಯಪಟುವನ್ನು ಕಳೆದುಕೊಂಡಿದೆ’ ಎಂದು ಶೋಕಿಸಿದರು.

ಪ್ರಜಾಪ್ರಭುತ್ವ ಮಗ್ಗುಲು ಬದಲಿಸಿ ಒಮ್ಮೆ ಆಕಳಿಸಿತು !

ಮೇರಾ ಭಾರತ್‌ ಮಹಾನ್‌ !!

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more