• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಳು ಶಬರಿಯಂತೆ ಕಾಯುತ್ತಲೇ ಇದ್ದಾಳೆ, ಅವಳ ರಾಮನಿಗಾಗಿ !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಈಕೆಯ ಮುಂದೆ ಶಬರಿ ಏನೇನೂ ಅಲ್ಲ. ಕಾಯುವುದರಲ್ಲಿ ಈಕೆ ಶಬರಿಯನ್ನೂ ಮೀರಿಸಿದ್ದಾಳೆ. ಶಬರಿ ಕಾದಿದ್ದಕ್ಕೆ ಕಟ್ಟಕಡೆಗೆ ಫಲವಾದರೂ ಸಿಕ್ಕಿತು. ಆದರೆ ಈಕೆಗೆ ಇಷ್ಟು ವರ್ಷ ಕಾದಿದ್ದಕ್ಕೆ ಯಾವ ಫಲವೂ ಸಿಗಲಿಲ್ಲ.

ಆದರೂ ಪರವಾಗಿಲ್ಲ. ಈಕೆ ಕಾಯುತ್ತಲೇ ಇದ್ದಾಳೆ. ಜೀವ ಕೊನೆಯ ಉಸಿರು ಬಿಟ್ಟು ಹೋಗುವ ತನಕ ಕಾಯಲು ಸಿದ್ಧಳಾಗಿದ್ದಾಳೆ. ಯಾರಿಗಾಗಿ ಕಾಯುತ್ತಿದ್ದೆನೋ ಆತ ಇಂದು ಬರಬಹುದು, ನಾಳೆ ಬರಬಹುದು, ನಾಡಿದ್ದು ಬರಬಹುದು, ಹಬ್ಬದೊಂದಿಗೆ ಬಂದಾನಾ, ಹೊಸವರ್ಷದೊಂದಿಗೆ ಹೆಜ್ಜೆಯಿಡಬಹುದು, ಮನೆಯಿಂದ ಹೋದವನು ಎಷ್ಟು ದಿನಾಂತ ಹೊರಗಿದ್ದಾನು, ಇಂದಲ್ಲ ನಾಳೆ ಮನೆಗೆ ಮರಳಿ ಬರಲೇಬೇಕು ತಾನೆ ಎಂಬ ನಿರೀಕ್ಷೆ, ಆಶಾಭಾವನೆಯಿಂದ ಆಕೆ ಕಾಯುತ್ತಾ ಕಾಯುತ್ತಾ ಕುದಿದಿದ್ದಾಳೆ. ಕಾದಾಡಿದ್ದಾಳೆ. ಆಕೆಗೆ ನಿತ್ಯ ಕಾಯುವುದೇ ಕಾಯಕವಾಗಿದೆ.

Shabari-2004ಪರವಾಗಿಲ್ಲ ಬಿಡಿ. ಆತನಿಗಾಗಿ ಈ ಜನ್ಮವಿಡೀ ಕಾಯುತ್ತೇನೆ ಅಂತಾಳೆ. ಮನೆಯ ಬಾಗಿಲ ಬಳಿ ನೆರಳ ಕಂಡರೆ, ಬಾಗಿಲು ಬಡಿದ ಸದ್ದಾದರೆ, ಕರೆಗಂಟೆ ಸದ್ದು ಮಾಡಿದರೆ, ಮನೆಯ ಗೇಟು ಕಿರುಚಿಕೊಂಡರೆ, ಅಪರಿಚಿತನನ್ನು ಕಂಡು ನಾಯಿ ಬೊಗಳಿದರೆ ಕತ್ತು ಉದ್ದವಾಗುತ್ತದೆ. ಯಾವನಿಗಾಗಿ ದೇಹ, ಮನಸ್ಸು ಕಾಯುತ್ತಿವೆಯೋ ಅವೆಲ್ಲವೂ ಅತ್ತ ಕಡೆ ಹೊರಳುತ್ತವೆ. ಬಂದವನು ಅವನಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ನಿರಾಸೆ ಆವರಿಸಿಕೊಳ್ಳತೊಡಗುತ್ತದೆ. ಮನಸ್ಸು ಮತ್ತೆ ನಿರೀಕ್ಷೆಯಲ್ಲಿ ಮಿಂದು ಕಾಯಲು ಕುಳಿತುಕೊಳ್ಳುತ್ತದೆ.

ಆಕೆ ಕಳೆದ ಮೂವತ್ಮೂರು ವರ್ಷಗಳಿಂದ ಗಂಡನಿಗಾಗಿ ಕಾಯುತ್ತಿದ್ದಾಳೆ!

ಆಕೆಯ ಹೆಸರು ದಮಯಂತಿ ವಿಜಯ ತಂಬೆ!

Pilot Vijay Tambeಮೂವತ್ಮೂರು ವರ್ಷಗಳ ಹಿಂದೆ ಮನೆಯಿಂದ ನೇರವಾಗಿ ಯುದ್ಧಭೂಮಿಗೆ ಹೋದ ಗಂಡ ವಿಜಯ ವಸಂತ ತಂಬೆ ಇನ್ನೂ ತನಕ ಮನೆಗೆ ಬಂದಿಲ್ಲ. ಪಾಕಿಸ್ತಾನದ ನರಕಸದೃಶ ಜೈಲಿನಲ್ಲಿ ಯುದ್ಧ ಕೈದಿಯಾಗಿ ಜೀವಂತವಾಗಿರುವ ಪತಿರಾಯನ ನಿರೀಕ್ಷೆಯಲ್ಲಿ ಆಕೆ ಸಾಕ್ಷಾತ್‌ ಶಬರಿಗೇ ನಾಚಿಕೆಯಾಗುವಂತೆ ಕಾಯುತ್ತಿದ್ದಾಳೆ. ಆಕೆಗೆ ಅದೆಂಥ ಸಹನೆಯೋ ಗೊತ್ತಿಲ್ಲ. ಒಂದಲ್ಲ ಒಂದು ದಿನ ತಂಬೆ ತನ್ನ ಮನ ತುಂಬಬಹುದು ಎಂಬ ಒಂದೇ ಒಂದು ಆಸೆ ಅವಳನ್ನು ಈ ತನಕ ಜೀವಂತವಾಗಿಟ್ಟಿದೆ.

ದಮಯಂತಿಯದೊಂದು ಹೃದಯ ಕಲ್ಲ ವಿಲಗೊಳಿಸುವ, ಭಾವಬಿಂದುಗಳನ್ನು ಬರಿದು ಮಾಡಿಬಿಡುವ ಮನಕಲಕುವ ಕತೆ.

ಮನಸ್ಸು ಹಿಂಬರ್ಕಿಯಲ್ಲಿ ಮೂವತ್ಮೂರು ವರ್ಷ ಹಿಂದಕ್ಕೆ ಹೋಗಿ ನಿಂತಾಗ, ತಾನು ಇಷ್ಟೊಂದು ವರ್ಷ ಗಂಡನಿಗಾಗಿ ಕಾಯಬೇಕಾಗಬಹುದು, ಇಷ್ಟೊಂದು ವರ್ಷ ಕಾದಿದ್ದಾದರೂ ಹೇಗೆ, ಹಾಗೆ ಕಾದಿದ್ದು ತಾನೇನಾ ಎಂದು ಆಕೆಗೆ ಅನ್ನಿಸುತ್ತದೆ.

ರಾಷ್ಟ್ರೀಯ ಬ್ಯಾಡ್ಮಿಂಟನ್‌ ಸಿಂಗಲ್‌ ಪ್ರಶಸ್ತಿಯನ್ನು ಮೂರು ಬಾರಿ(1968, 69, 70ರಲ್ಲಿ) ಪಡೆದ ದಮಯಂತಿ ಸುಬೇದಾರ್‌ಳನ್ನು ಭಾರತೀಯ ವಾಯುಸೇನೆಯ ಯುವ ಪೈಲಟ್‌ ವಿಯಯ ತಂಬೆ ಅಂಬಾಲಾದ ದೇವಸ್ಥಾನದಲ್ಲಿ ನೋಡಿದಾಗ ಅವರಲ್ಲಿನ ಪ್ರೀತಿ ಮೊದಲ ನೋಟಕ್ಕಾಗಿ ಕಾತರಿಸುತ್ತಿತ್ತು. ಆ ಸಮಯದಲ್ಲಿ ದಮಯಂತಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಳು. ಅರ್ಜುನ್‌ ಪ್ರಶಸ್ತಿಯ ಗರಿ ಬೇರೆ. ಮಹಾರಾಷ್ಟ್ರ ಮೂಲದ ದಮಯಂತಿಯ ತಂದೆ ವಕೀಲ. ತಾಯಿ ಅಂಬಾಲಾ ಕಾಲೇಜಿನಲ್ಲಿ ಪ್ರಾಚಾರ್ಯೆ. ಎರಡೂ ಕುಟುಂಬಗಳು ಹತ್ತಿರ ಬಂದು ಮದುವೆಗೆ ಒಪ್ಪಿಗೆ ನೀಡಿದವು. 1970ರಲ್ಲಿ ಮದುವೆಯಾಯಿತು. ಆಗ ದಮಯಂತಿಗೆ 22 ವರ್ಷ. ಕಾಶ್ಮೀರದಲ್ಲಿ ಇಪ್ಪತ್ತು ದಿನ ಮಧುಚಂದ್ರ ಮುಗಿಸಿ ಬಂದ ವಿಜಯ ತಂಬೆಗೆ ಯುದ್ಧದ ವಾಸನೆ ಹೊಡೆಯತೊಡಗಿತ್ತು. ಪಾಕ್‌ ಗಡಿಯತ್ತ ತ್ವೇಷಮಯ ವಾತಾವರಣ ಹರಡಿತ್ತು. ಫೈಟರ್‌ ಪೈಲಟ್‌ಗಳಿಗೆ ವಾಯುನೆಲೆ ಬಿಡದಂತೆ ಕಟ್ಟಪ್ಪಣೆ. ತಂಬೆ ಮನೆ ಕಡೆ ನೋಡುವಂತಿಲ್ಲ.

ಡಿಸೆಂಬರ್‌ 3, 1971. ಭಾರತ-ಪಾಕ್‌ ಯುದ್ಧ ಘೋಷಣೆಯಯಿತು. ದುಗುಡಗೊಂಡ ದಮಯಂತಿ ವಾಯುನೆಲೆಯ ಅಂಗಳಕ್ಕೆ ಹೋಗಿ ಗಂಡನನ್ನು ಭೇಟಿ ಮಾಡಿ ಅವನಿಗೊಂದು ಶುಭ ಹಾರೈಕೆ ಹೇಳಿ ಭಾರವಾದ ಹೃದಯದಿಂದ, ಒಲ್ಲದ ಮನಸ್ಸಿನಿಂದ ಯುದ್ಧಕ್ಕೆ ಕಳಿಸಿಕೊಟ್ಟಳು. ಅದೇ ಕೊನೆ. ಅಂದಿನಿಂದ ಈ ದಿನದ ತನಕ ಆಕೆ ತನ್ನ ಗಂಡನನ್ನು ನೋಡಲೇ ಇಲ್ಲ.

ಅಂಬಾಲಾ ವಾಯುನೆಲೆಯಿಂದ ತಂಬೆ ಸುಕೋಯ್‌-7 ಯುದ್ಧ ವಿಮಾನವನ್ನು ಏರಿ ಪಾಕಿಸ್ತಾನದ ಮುಲ್ತಾನ್‌ ಕಡೆಗೆ ಹಾರಿದ. ಎರಡು ದಿನ ವೈರಿಪಡೆಗಳ ಮೇಲೆ ಸತತ ದಾಳಿ. ತಂಬೆ ಮೆರೆದ ಸಾಹಸ, ಸಾಧನೆ ಅಪ್ರತಿಮವಾದುದು. ನೂರಾರು ಯೋಧರು ತಂಬೆಯಿಂದ ಹತರಾಗಿದ್ದರು. ಮೂರನೆ ದಿನ ತಂಬೆ ವಿಮಾನವನ್ನೇರಿದ ಅರ್ಧಗಂಟೆಯಲ್ಲಿ ತಾಂತ್ರಿಕ ದೋಷ ಕಂಡುಬಂದದ್ದರಿಂದ ಮುಲ್ತಾನ್‌ ಸನಿಹ ವಿಮಾನವನ್ನು ಹಠಾತ್‌ ಧರೆಗಿಳಿಸಿದ. ತಕ್ಷಣ ಪಾಕ್‌ ಯೋಧರು ಸುತ್ತುವರಿದರು. ಸೆಣಸುವಂತಿರಲಿಲ್ಲ. ತಂಬೆಯನ್ನು ಯುದ್ಧ ಕೈದಿಯಾಗಿ ಸೆರೆಹಿಡಿದರು. ತಂಬೆಯಂತೆ ನಾಲ್ಕೈದು ಪೈಲಟ್‌ಗಳನ್ನು ಸಹ ಯುದ್ಧ ಕೈದಿಗಳನ್ನಾಗಿ ಬಂಧಿಸಲಾಯಿತು. ಯುದ್ಧಭೂಮಿಯಿಂದ ಕ್ಷಣಕ್ಷಣಕ್ಕೆ ವಾರ್ತೆಗಳು ಬಿತ್ತರವಾಗುತ್ತಿದ್ದವು. ವಿಜಯ ತಂಬೆಯನ್ನು ಬಂಧಿಸುವ ಸುದ್ದಿ ರೇಡಿಯೋದಲ್ಲಿ ಪ್ರಸಾರವಾಯಿತು.

ಇತ್ತ ದಮಯಂತಿ ಭಯ, ಆತಂಕದಿಂದ ತತ್ತರಗೊಂಡಿದ್ದಳು. ಮತ್ತೊಂದು ಮಗ್ಗುಲಿಗೆ ಸಣ್ಣ ಸಮಾಧಾನ, ನಿರಾಳ. ಗಂಡ ಬದುಕಿದನಲ್ಲಾ ಎಂಬ ಸಂತಸ. ಪಾಕಿಸ್ತಾನದ ಪತ್ರಿಕೆಗಳು ವಿಜಯ ತಂಬೆ ಯುದ್ಧ ಕೈದಿಯಾಗಿ ಸಿಕ್ಕಿಬಿದ್ದಿರುವ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದರು. ಒಂದು ವಾರದ ನಂತರ ಅಲ್ಲಿನ ಜೈಲಿನ ಕಂಬಿಗಳ ಹಿಂದೆ ತಂಬೆ ನಿಂತಿರುವ ಚಿತ್ರವೂ ಪ್ರಕಟವಾಗಿತ್ತು. ಈ ಪತ್ರಿಕೆಗಳನ್ನು ದಮಯಂತಿಯ ಸಂಬಂಧಿಕರು ಆಕೆಗೆ ತಲುಪಿಸಿದ್ದರು. ತಂಬೆ ಎಂಬುವವರನ್ನು ಬಂಧಿಸಿರುವುದಾಗಿ ಅಲ್ಲಿನ ಸರಕಾರವೂ ಹೇಳಿಕೆ ನೀಡಿತು. ಅಬ್ಬಾ ಗಂಡ ಎಲ್ಲಿಯೇ ಇರಲಿ ಸುಖವಾಗಿರಲಿ. ಜೈಲಿನಲ್ಲಿ ಸುಖವಾಗಿದ್ದಾನಲ್ಲ ಅಷ್ಟೇ ಸಾಕು ಎಂದುಕೊಂಡಳು ದಮಯಂತಿ. ಇಂದು ಬಂದಾನು, ನಾಳೆ ಬಂದಾನು, ಬರದೇ ಎಲ್ಲಿಗೆ ಹೋದಾನು ಎಂಬ ಆಕೆಯ ನಿರೀಕ್ಷೆಯ ಲೆಕ್ಕಾಚಾರ ಅಲ್ಲಿಂದ ಆರಂಭವಾಯಿತು!

ಯುದ್ಧ ಮುಗಿಯಿತು. ತಂಬೆ ಬರಲಿಲ್ಲ. 1972ರ ಜುಲೈನಲ್ಲಿ ಶಿಮ್ಲಾ ಒಪ್ಪಂದವಾಯಿತು. ಆ ಪ್ರಕಾರ ಎರಡೂ ದೇಶಗಳು ತಮ್ಮ ವಶದಲ್ಲಿರುವ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದವು. ಭಾರತವು 90 ಸಾವಿರ ಕೈದಿಗಳನ್ನು ಬಿಡುಗಡೆ ಮಾಡಿತು. ಪಾಕಿಸ್ತಾನ 40 ಸಾವಿರ ಮಂದಿಯನ್ನು ಬಿಟ್ಟಿತು.

ಆದರೆ ತಂಬೆ ಮಾತ್ರ ಬರಲಿಲ್ಲ. ಅವನ ಜತೆ 55 ಮಂದಿ ಪಾಕ್‌ ಜೈಲಿನಲ್ಲಿಯೇ ಉಳಿದರು. ಟೈಂ ಮ್ಯಾಗಜಿನ್‌ ಪ್ರಕಟಿಸಿದ ಲೇಖನವೊಂದರಲ್ಲಿ ತಂಬೆ ಹೆಸರು ಪ್ರಸ್ತಾಪವಾಗಿತ್ತು. ಭುಟ್ಟೋ: ಟ್ರೈಲ್‌ ಆ್ಯಂಡ್‌ ಎಕ್ಸಿಕ್ಯೂಶನ್‌ ಪುಸ್ತಕ ಬರೆದ ವಿಕ್ಟೋರಿಯಾ ಷೋಫಿಲ್ಡ್‌ ಕೂಡ ಜೈಲಿನಲ್ಲಿರುವ ಭಾರತೀಯ ಯುದ್ಧ ಕೈದಿಗಳ ಬಗ್ಗೆ ಪ್ರಸ್ತಾಪಿಸುವಾಗ ವಿಜಯ ತಂಬೆಯ ಕುರಿತು ಬರೆದಿದ್ದಳು. ಅಂದರೆ ತಂಬೆ ಜೈಲಿನಲ್ಲಿ ಜೀವಂತವಾಗಿರುವ ಬಗ್ಗೆ ಅನುಮಾನಗಳಿರಲಿಲ್ಲ.

ಈ ಅಂಶ ಖಾತ್ರಿಯಾಗುತ್ತಿದ್ದಂತೆ ದಮಯಂತಿಯ ಯಾತ್ರೆ ಆರಂಭವಾಯಿತು. ಗಂಡನನ್ನು ಮರಳಿ ಬರುವಂತೆ ಮಾಡಲು ಕಂಡಕಂಡವರ ಮುಂದೆ ಗೋಳು ತೋಡಿಕೊಂಡಳು. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದಳು. ಪ್ರಯೋಜನವಾಗಲಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿ ಮಾಡಿದಳು. ಉಹುಂ... ಏನೂ ಆಗಲಿಲ್ಲ. 1972ರಿಂದ ಈ ತನಕ ಅಧಿಕಾರಕ್ಕೆ ಬಂದ ಪ್ರಧಾನಿಗಳು, ರಾಷ್ಟ್ರಪತಿಗಳು, ವಿದೇಶಾಂಗ ಸಚಿವರು, ಪಾಕಿಸ್ತಾನದ ಹೈಕಮಿಷನರುಗಳು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ವಿಶ್ವಸಂಸ್ಥೆ ಮಾನವ ಹಕ್ಕು ವಿಭಾಗ, ಪಾಕ್‌ ಪ್ರಧಾನಿ ಹೀಗೆ ಎಲ್ಲರಿಗೂ ಬರೆದಳು. ಪತ್ರ ತಲುಪಿದ್ದಕ್ಕೆ ಸ್ವೀಕೃತಿ ಉತ್ತರ ಬಿಟ್ಟರೆ ಮತ್ತೇನೂ ಬರಲಿಲ್ಲ. ಇನ್ನು ಗಂಡ ಹೇಗೆ ಬಂದಾನು?

1983ರಲ್ಲಿ ದಮಯಂತಿಯ ಆಸೆ ಗರಿಗೆದರಿತು. ಎರಡೂ ದೇಶಗಳಲ್ಲಿರುವ ಯುದ್ಧ ಕೈದಿಗಳನ್ನು ಭೇ ಟಿ ಮಾಡಿ ಗುರುತಿಸಲು ಅವರ ಸನಿಹ ಸಂಬಂಧಿಗಳಿಗೆ ಅವಕಾಶ ಮಾಡಿಕೊಡಲು ಉಭಯ ಸರಕಾರಗಳು ನಿರ್ಧರಿಸಿದವು. ದಮಯಂತಿ ಮುಲ್ತಾನ್‌ ಜೈಲಿಗೆ ಹೋಗಲು ಇಸ್ಲಾಮಾಬಾದ್‌ಗೆ ತೆರಳಿದಳು. ಪಾಕ್‌ನಿಂದ ಕೆಲವರು ಪಟಿಯಾಲ ಜೈಲಿಗೆ ಆಗಮಿಸಿದರು. ಮುಲ್ತಾನ್‌ಗೆ ಹೊರಡುವ ದಿನ ಪಾಕ್‌ನಲ್ಲಿನ ಭಾರತೀಯ ಹೈಕಮಿಶನರ್‌ ಕಚೇರಿಗೆ ಸಂದೇಶ ಬಂದಿತು- ಭಾರತ ಸರ್ಕಾರ ತನ್ನ ಮಾತನ್ನು ಹಿಂದಕ್ಕೆ ಪಡೆದಿದೆ. ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ದಮಯಂತಿ ತತ್‌ಕ್ಷಣ ಬರುವಂತಾಯಿತು. ಪಾಕ್‌ಗೆ ಹೋಗಿಯೂ ಗಂಡನನ್ನು ಭೇಟಿ ಮಾಡುವ ಅವಕಾಶವೂ ಕೈ ತಪ್ಪಿ ಹೋಯಿತು.

ಈ ಮಧ್ಯೆ ದೈನಂದಿನ ಜೀವನ ದುರ್ಬರವಾದಾಗ ದಿಲ್ಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಶಾರೀರಿಕ ಶಿಕ್ಷಣ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿಕೊಂಡಳು. ಅರ್ಜುನ್‌ ಪ್ರಶಸ್ತಿ ನೌಕರಿ ಅವಕಾಶವನ್ನು ಸುಗಮಗೊಳಿಸಿತು. ಈ ನಡುವೆ ಮಗನ ಚಿಂತೆಯನ್ನು ಮನಸ್ಸಿಗೆ ಹಚ್ಚಿಕೊಂಡ ತಂಬೆಯ ತಂದೆ ಕೊರಗಿಕೊರಗಿಯೇ ಸತ್ತು ಹೋದ. ತಾಯಿಯ ಆರೋಗ್ಯವೂ ಹದಗೆಟ್ಟಿಹು. ಆದರೆ ದಮಯಂತಿಯ ಛಲ, ಸಹನೆ ಮಾತ್ರ ಕೊಂಚವೂ ಕದಲಲಿಲ್ಲ.

1989ರಲ್ಲಿ ವಿಜಯ ತಂಬೆಯ ಚಿಕ್ಕಪ್ಪ ಜಯಂತ್‌ ಜಾಟರ್‌ 19 ವರ್ಷದೊಳಗಿನ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಆಗಿ ಪಾಕಿಸ್ತಾನಕ್ಕೆ ಹೋದಾಗ ಔತಣಕೂಟದಲ್ಲಿ ಭೇಟಿಯಾದ ಆಗಿನ ಪಂಜಾಬ್‌ ಗವರ್ನರ್‌ ಜನರಲ್‌ ಟಿಕ್ಕಾ ಖಾನ್‌ ಪ್ರಭಾವ ಬಳಸಿ ಫೈಸಲಾಬಾದ್‌ನಲ್ಲಿನ ಜೈಲಿಗೆ ಹೋಗಿ ವಿಜಯ ತಂಬೆಯನ್ನು ಭೇಟಿ ಮಾಡಿದ. ಕುರುಚಲು ಗಡ್ಡ, ಕೆದರಿದ ಕೂದಲು ಬಿಟ್ಟುಕೊಂಡು ಕತ್ತಲ ಕೋಣೆಯ ಮೂಲೆಯಲ್ಲಿ ಬಿದ್ದುಕೊಂಡಿದ್ದ ವಿಜಯ ತಂಬೆಯನ್ನು ಪ್ರಯಾಸಪಟ್ಟು ಪತ್ತೆ ಹಚ್ಚಿದ. ತಂಬೆಗೆ ತನ್ನ ಚಿಕ್ಕಪ್ಪನ ಗುರುತು ತುಸು ತಡವಾಗಿ ಗೋಚರವಾಯಿತು. ನಿಗದಿಪಡಿಸಲಾದ ಇಪ್ಪತ್ತು ನಿಮಿಷಗಳ ಪೈಕಿ ತಂಬೆಯನ್ನು ಪತ್ತೆ ಮಾಡಲು ಜಾಠರ್‌ಗೆ ಸಮಯ ಹಿಡಿದಿದ್ದರಿಂದ ಮಾತನಾಡಲು ಆಗಲೇ ಇಲ್ಲ. ಜೈಲು ಅಧಿಕಾರಿಗಳು ಸಮಯ ವಿಸ್ತರಿಸಲು ನಿರಾಕರಿಸಿದರು. ತಂಬೆಯನ್ನು ಭೇಟಿ ಮಾಡಿಯೂ ಜಾಠರ್‌ ಬರಿಗೈಲಿ ಬಂದ.

ಅನಂತರ ಕಳೆದ ಹದಿನೈದು ವರ್ಷಗಳಲ್ಲಿ ದಮಯಂತಿ ದಿಲ್ಲಿಯ ಸರಕಾರದ ಕಂಬಕಂಬವನ್ನು ಮುಟ್ಟಿ ಬಂದಿದ್ದಾಳೆ. ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳ ಕಾಲಿಗೆ ಬಿದ್ದಿದ್ದಾಳೆ. ದೇಶಕ್ಕಾಗಿ ಹೋರಾಡಿದ ತನ್ನ ಗಂಡನನ್ನು ವಾಪಸ್‌ ಕರೆತರುವಂತೆ ಗೋಗರೆದಿದ್ದಾಳೆ. ನಡುಬೀದಿಯಲ್ಲಿ ನಿಂತು ರೋದಿಸಿದ್ದಾಳೆ. ಬಿರುಬಿಸಿಲಿನಲ್ಲಿ ನಿಂತು ಪರಿಪರಿಯಗಿ ಬೇಡಿಕೊಂಡಿದ್ದಾಳೆ.

ನಮ್ಮ ರಾಜಕಾರಣಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಅವಳ ಕೂಗು ಕೇಳಿಸಿಯೇ ಇಲ್ಲ. ಫಳಗುಡುವ ಅವಳ ಕಣ್ಣೀರು ಕಾಣಿಸಿಯೇ ಇಲ್ಲ. ಹೊಟ್ಟೆಯಲ್ಲಿ ಮಡುಗಟ್ಟಿದ ವೇದನೆ ತುಸ ಅರ್ಥವಾಗಿಲ್ಲ.

ಗಂಡ ನಾಳೆ ಬರಬಹುದೆಂದು, ಹೊಸ ಬದುಕು ಆರಂಭಿಸಬಹುದೆಂದು ಇತ್ತ ದಮಯಂತಿ ಏಕಾಂಗಿಯಾಗಿ ದಿನ ದಿನ ಹೊಸ ನಿರೀಕ್ಷೆಯಾಂದಿಗೆ ಬದುಕು ಸವೆಸುತ್ತಿದ್ದಾಳೆ. ಬಾರದ ಗಂಡನಿಗೆ ಚಿಂತಿಸದೇ ಬೇರೆ ಮದುವೆಯಾಗುವಂತೆ ಒತ್ತಾಯಿಸಿದ ಸಂಬಂಧಿಕರ ಕೋರಿಕೆಯನ್ನು ಧಿಕ್ಕರಿಸಿ ಮೂವತ್ಮೂರು ವರ್ಷಗಳ ನಿರೀಕ್ಷೆಯ ಮೊಟ್ಟೆಗೆ ಕಾವು ಕೊಡುತ್ತಿದ್ದಾಳೆ.

ಪಾಕ್‌ ಜೈಲಿನಿಂದ ವಿಜಯ ತಂಬೆ ನಾಳೆ ಬರುತ್ತಾನಾ? ಮಾಡದ ಅಪರಾಧಕ್ಕಾಗಿ ಜೀವ ಸವೆಸುತ್ತಿರುವ ತಂಬೆ ಬಂದಾನಾ?

ಗೊತ್ತಿಲ್ಲ .

ದಮಯಂತಿಯ ಸಹನೆ, ನಿಷ್ಠೆಗೊಂದು ಸಲಾಮು ಇರಲಿ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more