ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಸ್ಸೆಂಬ ಡಾರ್ಕ್‌ರೂಮಿನಲ್ಲಿ ನೆಗೆಟಿವ್‌ಗಳನ್ನು ಇಟ್ಟವರ್ಯಾರು?

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಮನಸ್ಸು ಬಿಡಿಸುವ ಚಿತ್ರಗಳನ್ನು ಅಳಿಸಲಾಗುವುದಿಲ್ಲ!

ಯಾಕೋ ಏನೋ ನಾವು ಕೆಲವರ ಬಗ್ಗೆ ವಿಚಿತ್ರ ಅಭಿಪ್ರಾಯಗಳನ್ನು ರೂಪಿಸಿಕೊಂಡಿರುತ್ತೇವೆ. ನಮಗೆ ಅವರ ಕುರಿತು ಅಷ್ಟಾಗಿ ಗೊತ್ತಿರುವುದಿಲ್ಲ. ಆದರೂ ಅವರದ್ದೊಂದು ಚಿತ್ರ ಮನಸ್ಸಿನ ಮೂಲೆಯಲ್ಲಿ ಕುಳಿತಿರುತ್ತದೆ, ಏನೇ ಮಾಡಿ ಈ ಚಿತ್ರಣವನ್ನು ಮನಸ್ಸಿನಿಂದ ಹರಗೀಸು ಅಳಿಸಿ ಹಾಕಲು ಆಗುವುದಿಲ್ಲ. ಅವರನ್ನು ನೆನಪಿಸಿಕೊಂಡಾಗಲೆಲ್ಲ ಈ ಚಿತ್ರಣವೇ ಮನಸ್ಸಿನಲ್ಲಿ ಧರಣಿ ಕುಳಿತಿರುತ್ತದೆ. ಮನೆಯ ಮುಂದಿನ ಹುಡುಗಿಯ ಚಿತ್ರಣವೇ ಇರಬಹುದು, ಅದ್ಯಾವುದೋ ದೇಶದ ಮುಗಾಬೆ ಎಂಬ ಮನಹಾರಿಯಿರಬಹುದು, ಅವರನ್ನು ನೆನಸಿಕೊಂಡಾಗಲೆಲ್ಲ ಮನಸ್ಸಿನಲ್ಲಿದ್ದ ನೆಗೆಟಿವ್‌ ತನ್ನಷ್ಟಕ್ಕೇ ಡೆವಲಪ್‌ ಆಗುತ್ತಾ ಒಂದು ಚಿತ್ರ ಮುಂದೆ ಬರುತ್ತದೆ. ಯಾರು ಬಂದು ಈ ನೆಗೆಟಿವ್‌ ಅನ್ನು ಮನಸ್ಸಿನಲ್ಲಿ ಇಟ್ಟು ಹೋದರೋ ಗೊತ್ತಿಲ್ಲ. ಮನಸ್ಸೆಂಬ ಡಾರ್ಕ್‌ರೂಮಿನಲ್ಲಿ ಅದು ಹವ್ವಾಹವ್ವಿ ಸುಮ್ಮನೆ ಕುಳಿತಿರುತ್ತದೆ.

ಈ ಡಾರ್ಕ್‌ ರೂಮಿನಿಂದ ಕನ್ನಡ ಶಾಲೆಯ ಮಾಸ್ತರರು ಬಂದರೆ ಸುಮ್ಮನೆ ಬರುವುದಿಲ್ಲ. ಕೈಯಲ್ಲೊಂದು ಮಾರುದ್ದದ ಬೆತ್ತ ಹಿಡಿದೇ ಬರುತ್ತಾರೆ. ಕಾಣಾ ಕಾಣಾ ನರಪೇತಲನಾಗಿರಲಿ, ಆತ ರಾಜಕಾರಣಿಯಾದರೆ ಅವನನ್ನು ಪಿಚಂಡಿಲನಂಥ ದೊಡ್ಡ ಹೊಟ್ಟೆಯವನಂತೆ ಕಲ್ಪಿಸಿಕೊಳ್ಳುತ್ತೇವೆ. ಎಷ್ಟೇ ಹೃತ್ಕಂಪು ಬೀರುವ ಮಡದಿಯಾಗಿರಲಿ, ಹೆಂಡತಿಯೆಂದರೆ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಕೈಯಲ್ಲೊಂದು ಲಟ್ಟಣಿಗೆ ಹಿಡಿದು ಗಂಡನನ್ನು ರುಬ್ಬಲು ಹಚ್ಚುವ ಘಟವಾಣಿಯ ಚಿತ್ರವನ್ನು ಫ್ರೇಮು ಹಾಕಿ ಮನಸ್ಸಿನಲ್ಲಿ ತೂಗು ಹಾಕಿಕೊಂಡಿರುತ್ತೇವೆ. ಇನ್ನು ಪತ್ರಕರ್ತರೆಂದರೆ ಕುರುಚಲು ಗಡ್ಡ, ಕೆದರಿ ಕೂದಲು, ಜುಬ್ಬಾ, ಹೆಗಲಿಗೊಂದು ಬಗಲುಚೀಲ, ದೊಗಳೆ ಪೈಜಾಮು ಇರಲೇ ಬೇಕು. ಪ್ರೇಯಸಿಗೆ ನಮ್ಮ ಮನಸ್ಸಿನಲ್ಲಿ ತೊಡಿಸುವುದು ಮಿನಿ, ಮಿಡಿ, ಹೆಂಡತಿ ಸಿಡಿಮಿಡಿ. ಪೊಲೀಸರಿಗೆ ಗುಡಾಣದ ಹೊಟ್ಟೆ, ಅಲ್ಲಿಗೆ ಏರಲಾಗದ ಕುಸಿದುಬಿದ್ದ ಬೆಲ್ಟು!

Mind is a dark room !ಈ ಚಿತ್ರಗಳಲ್ಲಿ ಸ್ವಲ್ಪ ಏರುಪೇರಾದರೂ ಅರ್ಥ ಹೆಚ್ಚು ಕಮ್ಮಿ. ಟ್ರಿಮ್ಮಾಗಿ ದಾಡಿಮಾಡಿ, ಕೋಟು, ಟೈ, ಬೂಟು ಧರಿಸಿ, ಕೈಯಲ್ಲೊಂದು ಟಾಕಾಯಿಸುವ ಬ್ರೀಫ್ಕೇಸ್‌ ಹಿಡಿದ ಶರೀರ ಮುಂದೆ ಬಂದರೆ, ಅದು ತಾನೊಬ್ಬ ಕನ್ನಡ ಪತ್ರಿಕೆಯ ಜಿಲ್ಲಾ ವರದಿಗಾರ ಎಂದು ಹೇಳಿದರೆ ಖಂಡಿತವಾಗಿಯೂ ನಮ್ಮ ಮನಸ್ಸು ನಂಬುವುದಿಲ್ಲ. ಅದೇ ನಮ್ಮ ಮುಕುಡ್ಯಾ ಬಾಬ್ಯಾ ಚಿಂಚನಸೂರಿನ ರೀತಿ ಗರಿಗರಿ ಬಿಳಿಬಿಳಿ ಮಿರಿಮಿರಿ ಧಿರಿಸು ತೊಟ್ಟು ಪಿಳಿಪಿಳಿ ಕಣ್ಣುಬಿಟ್ಟು ‘ಐ ಎಂ ಅ ಮೈಕ್ರೊಸೊಫ್ಟ್‌ ಸಿಇಒ’ ಎಂದು ಪರಿಚಯಿಸಿಕೊಂಡು ಕೈ ಕುಲುಕಿದರೆ ಮನಸ್ಸು ಮೊಕಮಡಿ ಬಿದ್ದು ‘ಈ ಸುಳ್ಳುಬುರುಕನ ಚಡಂಗವನ್ನು ನಂಬಬೇಡ’ ಎಂದು ಪಾಠ ಹೇಳುತ್ತದೆ’ ಎಂದು ಪಾಠ ಹೇಳುತ್ತದೆ. ಆತ ಮೈಕ್ರೊಸೊಫ್ಟ್‌ ಮುಖ್ಯಸ್ಥನೇ ಇದ್ದರೂ ಅವನನ್ನು ಮನಸ್ಸು ಒಳಗೆ ಬಿಟ್ಟುಕೊಟ್ಟಿರುವುದಿಲ್ಲ. ಆತ ಈ ಡ್ರೆಸ್‌ ಬಿಚ್ಚಿ ಬಿಲ್‌ಗೇಟ್ಸ್‌ನಂತೆ ಡ್ರೆಸ್‌ ಹಾಕಿಕೊಂಡು ಬರುವ ತನಕ ಮನಸ್ಸಿನ ಹೊರಗೇ ನಿಲ್ಲಬೇಕು. ಅನಂತರವೇ ಪ್ರವೇಶ.

ಮೂರು ಲಕ್ಷ ಮಂದಿಯನ್ನು ನಿಷ್ಕರುಣೆಯಿಂದ ದಾರುಣವಾಗಿ ಕೊಂದ ಇದಿ ಅಮಿನ್‌ ಅಂತ ಇದ್ದನಲ್ಲ. ಆತ ಪ್ರತಿದಿನ ಎರಡು ತಾಸು ಧ್ಯಾನಸ್ಥನಾಗಿ ಕುಳಿತು ದೇವರ ಪ್ರಾರ್ಥನೆ ಮಾಡುತ್ತಿದ್ದ. ಹೆಂಡತಿ ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ. ತನ್ನ ಮುದ್ದಿನ ನಾಯಿ ಸತ್ತಾಗ ಸೋ ಸೋ ಎಂದು ಅತ್ತು ಎರಡು ದಿನ ಊಟ ಬಿಟ್ಟು ಕುಳಿತಿದ್ದ, ನಾಯಿಗಾಗಿ ಚಿನ್ನದ ಬೆಲ್ಟು ಮಾಡಿಸಿದ್ದ, ಕಷ್ಟದಲ್ಲಿರುವ ಅಮಾಯಕರಿಗೆ ಕೈ ತುಂಬಾ ದಾನ ಮಾಡುತ್ತಿದ್ದ, ಆಗಾಗ ಬಡವರ ಗುಡಿಸಲುಗಳಿಗೆ ಹೋಗಿ ಊಟ ಮಾಡಿ ಅವರೊಂದಿಗೆ ಹರಟೆ ಹೊಡೆದು ಬರುತ್ತಿದ್ದ ಎಂದು ಇದಿ ಅಮಿನನ ಬಗ್ಗೆ ಹೇಳಿ, ನಿಮ್ಮನ್ನು ಕ್ಯಾಕರಿಸಿ ನೋಡಿ ‘ಹಾಗಲವಾಡಿ ಸಂಸ್ಥಾನದ ಸೋಟೆ ಹರುಕ ಬಂದಾ ನೋಡು’ ಎಂದು ಗೇಲಿ ಮಾಡುತ್ತಾರೆ. ಹುರಳಿಯಾಳಗಿನ ಮಿರಳಿಯಂತೆ ನೋಡುತ್ತಾರೆ.

ಹಪಾಹಪಿಗೆ ಹೆಸರುವಾಸಿಯಾದ ಖಜ್ಜಾ ಖೋರ ಹಿಟ್ಲರ್‌ ಇದ್ದಾನಲ್ಲ, ಆತ ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತವಾಗಿ ನಿತ್ಯ ದೇವರ ಮುಂದೆ ನಿಂತು ಪಾಪ ನಿವೇದನೆ ಮಾಡಿಕೊಳ್ಳುತ್ತಿದ್ದ, ಸುದಾಮ ದರಿದ್ರರಿಗೆ ಕೈತುಂಬಾ ಹಣ ಕೊಡುತ್ತಿದ್ದ, ಅವನಿಗೊಂದು ದೊಡ್ಡ ಸ್ನೇಹಿತರ ಬಲವಿತ್ತು, ಅವರನ್ನು ಕಟ್ಟಿಕೊಂಡು ತಿಂಗಳಗಟ್ಳೆ ವಿಹಾರಕ್ಕೆ ಹೋಗುತ್ತಿದ್ದ, ಸಾರ್ವಜನಿಕವಾಗಿ ಖದರು ಖದರು ಧಿರಿಸು ತೊಟ್ಟರೂ ಖಾಸಗಿಯಾಗಿದ್ದ ಸಾಮಾನ್ಯ ಬಟ್ಟೆ ತೊಡುವ ಜೀವಿಯಾಗಿದ್ದ, ಸಣ್ಣ ದಢಕಿಗಳನ್ನು ಸಹಿಸಿಕೊಳ್ಳಲು ಆಗದೇ ಚಿಕ್ಕಮಕ್ಕಳಂತೆ ಅಳುತ್ತಿದ್ದ ಅಂತ ಹೇಳಿ. ಯಾರೂ ನಿಮ್ಮನ್ನು ನಂಬುವುದಿಲ್ಲ. ಯಾರೂ ಕೇಳದ, ಓದದ ಹೊಸ ಸಂಗತಿಯನ್ನು ಈತನಿಗೆ ಯಾರು ಹೇಳಿದರಪ್ಪಾ ಎಂದು ಮುಸುಡಿ ತಿರುವುತ್ತಾರೆ.

ನಮ್ಮ ಈ ‘ಡಾರ್ಕ್‌ ರೂಂ’ನಲ್ಲಿ ಯಾರು ಯಾವಾಗ ಒಳಹೊಕ್ಕು ಯಾವ ನೆಗೆಟಿವ್‌ ಗಳನ್ನು ಇಟ್ಟು ಬರುತ್ತಾರೋ ಗೊತ್ತಿಲ್ಲ. ಒಮ್ಮೆ ನೆಗೆಟಿವ್‌ಗಳು ಹೊಕ್ಕವೆಂದರೆ ಅಲ್ಲಿಯೇ ಕುಳಿತು ಡೆವಲಪ್ಪಾಗಿ ಪ್ರಿಂಟು ಬೀಳುತ್ತಿರುತ್ತವೆ. ನೆಗೆಟಿವ್‌ ಬದಲಾಗದಿರುವುದರಿಂದ ಹೊಸ ಪ್ರಿಂಟು ಹಾಕುವುದಾದರೂ ಹೇಗೆ?

ಮುಕ್ತ ಕಾಮ ಪ್ರತಿಪಾದಕ ಓಶೋ ರಜನೀಶ್‌ ಇದ್ದಾನಲ್ಲ. ಅಂವ ಮಹಾ ಬುದ್ಧಿವಂತ, ಸರಿಸುಮಾರು ಆರುನೂರು ಪುಸ್ತಕ ಬರೆದಿದ್ದಾನೆ, ಹತ್ತುಸಾವಿರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾನೆ, ಆತ ಮುಟ್ಟದಿರುವ ವಿಷಯಗಳೇ ಇಲ್ಲ, ಅಂವ ಒರಿಜಿನಲ್‌ ಥಿಂಕರ್‌ ಎಂದು ಖುಶವಂತ್‌ ಸಿಂಗ್‌ ಪ್ರಶಂಸೆ ಮಾಡಿದ್ದಾರೆ, ಧರ್ಮದ ಬಗ್ಗೆ ರಜನೀಶನಷ್ಟು ಸರಳವಾಗಿ ವ್ಯಾಖ್ಯಾನಿಸಿದಷ್ಟು ಬೇರೆ ಯಾರೂ ಮಾಡಿಲ್ಲ. ಆತ ಬರೆದಿದ್ದು ಹೇಳಿದ್ದರ ಪೈಕಿ ಕಾಮಕ್ಕೆ ಸಂಬಂಧಿಸಿದ್ದು ಕೇವಲ ಶೇ. ಎರಡರಷ್ಟು, ಕಾಮಕ್ಕಿಂತ ಉಪನಿಷತ್‌ ಬಗ್ಗೆ ನೂರು ಪಟ್ಟು ಹೆಚ್ಚು ಹೇಳಿದ್ದಾನೆ, ರಜನೀಶ ನಮ್ಮ ದೇಶದ ಮಹಾನ್‌ ಚಿಂತಕ ಎಂದು ಹೇಳಿ, ಸಿಳ್ಳಿಮಿಳ್ಳಿ(ಟ್ರೇಶ್‌) ಅಂತಾರೆ. ಮನಸ್ಸಿಗೆ ಬಂದಂತೆ ಒದರುತ್ತಾನೆ ಅಂತ ಕೂಡೆಕೂಡೆ ಟೀಕಿಸುತ್ತಾರೆ. ‘ಗೊತ್ತು ಕಣಲಾ, ಆತ ಅದೆಂಥ ಲಂಪಟನಾಗಿದ್ದ ಗೊತ್ತಾ? ನೂರಾರು ಹುಡುಗಿಯರ ಸುತ್ತ ಸುತ್ತುತ್ತಿದ್ದ, ನೂರಾರು ರೋಲ್ಸ್ರಾಯ್‌ ಕಾರು ಇಟ್ಟುಕೊಂಡಿದ್ದ ಅಂವಂಗೆ ಧರ್ಮದ ಬಗ್ಗೆ ಮಾತಾಡಲು ಎಂಥ ನೈತಿಕತೆ ಇದೆ?’ ಎಂದು ತಿದಿ ಒತ್ತುತ್ತಾರೆ. ತಮ್ಮ ಹಂಡಬಂಡ ವಿಚಾರಗಳ ಮಧ್ಯದೊಳಗೆ ಢಿಕ್ಕಿ ಹೊಡೆಯುತ್ತಾ ಅಲ್ಲಿಯೇ ಇರುತ್ತಾರೆ. ಸಿವಾಯ್‌ ಮುಂದೆ ಬಂದು ಮತ್ತೊಂದು ವಿಚಾರವನ್ನು ಪಕ್ಕಾಕ್ಕೆ ಇಟ್ಟುಕೊಳ್ಳುವುದಿಲ್ಲ. ನೂರಾರು ಹುಡುಗಿಯರನ್ನು ಭೋಗಿಸಿದ ಲಂಪಟ, ಧರ್ಮ, ಉಪನಿಷತ್ತು, ವೇದ, ಭಗವದ್ಗೀತೆ ಬಗ್ಗೆ ಹೇಳಿದನೆಂದರೆ ನಂಬುವುದಾದರೂ ಹೇಗೆ? ಎಂದು ಕೇಳುತ್ತಾ ಈ ವಿಚಾರಗಳು ಒಳಬರದಂತೆ ‘ಡಾರ್ಕ್‌ ರೂಮಿ’ನ ಬಾಗಿಲನ್ನು ಹಾಕಿಬಿಡುತ್ತೇವೆ. ರಜನೀಶ ಮುಕ್ತ ಕಾಮದ ಪ್ರತಿಪಾದಕನಾಗಿರಬಹುದು, ಆದರೆ ಆತ ಅದೊಂದೇ ಅಲ್ಲ, ಅದಕ್ಕಿಂತ ಹೆಚ್ಚು, ಇನ್ನೂ ಏನೇನೋ, ಹಾಗಂತ ಹೇಳಿದರೂ ಅವರಿಗೆ ಸಮಾಧಾನವಾಗುವುದಿಲ್ಲ. ರಜನೀಶ ಹುಡುಗಿಯರ ಸುತ್ತ ಡಾನ್ಸ್‌ ಮಾಡುವ ನೆಗೆಟಿವ್‌ ಡೆವಲಪ್ಪಾಗುತ್ತಿರುತ್ತದೆ. ಇಂದಿಗೂ ಕೂಡ ನಾವು ಬಹುವಾಗಿ ತಪ್ಪಾಗಿ ತಿಳಿದುಕೊಂಡಿರುವ ಚಿಂತಕರಲ್ಲಿ ರಜನೀಶ ಕೂಡ ಒಬ್ಬ ಎಂದು ವಾದ ಮುಂದುವರಿಸಿದರೆ ನಿಮ್ಮ ಬಗೆಗೇ ಸಂಶಯ ಮೆತ್ತಿಕೊಳ್ಳಲಾರಂಭಿಸುತ್ತದೆ. ಈ ಕಾರಣದಿಂದ ಆತ ಇಂದಿಗೂ ಕಾಮ ಪಿಪಾಸು, ಮುಕ್ತ ಕಾಮ ಪ್ರತಿಪಾದಕನಂತೆ ಗೋಚರಿಸುತ್ತಾನೆ. ನಿಜವಾದ ರಜನೀಶನ ದರ್ಶನವಾಗುವುದೇ ಇಲ್ಲ.

ಮಹಮ್ಮದ್‌ ಜಿಯಾ-ಉಲ್‌-ಹಕ್‌ನ ಬಗೆಗೂ ನಾವು ನಮ್ಮದೇ ಆದ ಅಭಿಪ್ರಾಯ ಹೊಂದಿದ್ದೇವೆ. ಮಿಲಿಟರಿ ಆಡಳಿತಗಾರ, ದರ್ಪದ ಮೂಟೆ, ಜಂಬದ ಕೋಳಿ, ನಿರ್ದಯಿ, ಕ್ರೂರಿ, ವಂಚಕ, ಸರ್ವಾಧಿಕಾರಿ, ನಿಷ್ಕರುಣಿ, ಅಹಂಕಾರದ ಪ್ರತಿಷ್ಠಾನ, ಸಿಟ್ಟಿನ ಸುಬೇದಾರ ಎಂಬ ಚಿತ್ರಣಗಳು ಜಿಯಾನನ್ನು ನೆನೆದಾಗ ಪಥಸಂಚಲನ ಹೊರಡುತ್ತವೆ. ಮೂಲ ಕುಬಿ ಏನೆಂದರೆ ಜಿಯಾ ಹಾಗಿರಲಿಲ್ಲ. ತನ್ನ ಬಗ್ಗೆ ತಾನೇ ತಪ್ಪು ಸಂದೇಶ ರವಾನೆಯಾಗುವಂಥ ವ್ಯಕ್ತಿತ್ವ, ಹಾವಭಾವ, ನಡವಳಿಕೆಗಳನ್ನು ಬೆಳೆಸಿಕೊಂಡಿದ್ದ. ಅದು ಅವನಿಗೆ ಅನಿವಾರ್ಯವೂ ಆಗಿತ್ತು. ಪೆಡದಾದ ಮೀಸೆ, ವರಚು ಕಣ್ಣು, ತೇಲು ನೋಟ, ಎದೆ ಹಾಗೂ ಹೆಗಲ ಮೇಲಿನ ಮಿಲಿಟರಿ ಖಡ್ಗ, ಬಂದೂಕು, ಭರ್ಚಿಯಂಥ ಬ್ಯಾಚುಗಳು, ಪಠಾಣನಂಥ ಶರೀರ, ಗಂಭೀರವದನ ಜಿಯಾನನ್ನು ನೋಡಿದ ತಕ್ಷಣ ಯಾವನಿಗಾದರೂ ಸಣ್ಣ ನಡುಕ ಕುಂಯ್‌ ಗುಟ್ಟುತ್ತಿತ್ತು. ಜಿಯಾ ಪಾಕ್‌ ಅಧ್ಯಕ್ಷನಾಗಿದ್ದಾಗ ‘ದ ಜನರಲ್‌ ವಿಲ್‌ ಈಸ್‌ ದ ವಿಲ್‌ ಆಫ್‌ ದ ಜನರಲ್‌’ ಎಂಬ ಮಾತು ಚಾಲ್ತಿಯಲ್ಲಿತ್ತು. ಅಷ್ಟೇ ಅಲ್ಲ, ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲಿ ಸೈನಿಕರನ್ನು ನಿಲ್ಲಿಸಿದ. ಆತನ ಆಡಳಿತದ ಖದರು ಕಂಡು ‘ಪಾಕಿಸ್ತಾನ ಛ ಮೌಜನ್‌ -ಇ-ಮೌಜನ್‌ ಜಿತ್ತೇ ದೇಖೋ ಉತ್ತೇ ಫೌಜನ್‌-ಇ-ಫೌಜನ್‌’ ಎಂಬ ಮಾತು ಕೂಡ ಜಾರಿಯಲ್ಲಿತ್ತು.

ಆರಂಭದಿಂದಲೂ ಮಿಲಿಟರಿಯಲ್ಲಿದ್ದ ಜಿಯಾನನ್ನು ಪಾಕಿಸ್ತಾನದ ಪ್ರಧಾನಿ ಭುಟ್ಟೋ 1975ರಲ್ಲಿ ಲೆಫ್ಟನಂಟ್‌ ಜನರಲ್‌ ಎಂದು ನೇಮಿಸಿದ. ಭುಟ್ಟೋನಿಗೆ ಮೊದಲಿನಿಂದಲೂ ಜಿಯಾನ ಮೇಲೆ ಅದೇನೋ ಸೆಳೆತ. ಮುಂದಿನ ವರ್ಷವೇ ಪಾಕ್‌ ಸೇನಾ ಮುಖ್ಯಸ್ಥನನ್ನಾಗಿ ನೇಮಿಸಿದ. ಅಂದಿಗೆ ಅವನ ವರ್ತನೆಯೇ ಬದಲಾಯಿತು ಅಥವಾ ಆ ರೀತಿ ಅಭಿಪ್ರಾಯವನ್ನು ಮೂಡಿಸಿದ. ಎರಡೇ ವರ್ಷಗಳಲ್ಲಿ ತನ್ನ ಮೇಲೆ ವಿಶ್ವಾಸವಿರಿಸಿ ಆ ಜಾಗದಲ್ಲಿ ಕುಳ್ಳಿರಿಸಿದ ಭುಟ್ಟೋನನ್ನು ರಕ್ತರಹಿತ ಕ್ರಾಂತಿಯಲ್ಲಿ ಕಿತ್ತೆಸೆದು ತಾನೇ ಕುಳಿತುಬಿಟ್ಟ. ಇದಾಗಿ ಎರಡು ವರ್ಷದಲ್ಲಿ ಭುಟ್ಟೋನನ್ನೊ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಸಿ ನೇಣು ಹಾಕಿದ!

ಇಂಥ ಮನುಷ್ಯನನ್ನು ನೋಡಿದರೆ ಎಂಥವನೂ ಜಿಯಾನ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ ಮೂಲತಃ ಜಿಯಾ ಅಂಥ ಕಟುಕ ಸ್ವಭಾವದವನಾಗಿರಲಿಲ್ಲ. ಆರ್ದ್ರ ಹೃದಯಿ, ಸುಸಂವೇದಿ. ಹೃದಯ ಹಿಂಡುವ ಕತೆಗೆ ನಿಂತಲ್ಲೇ ಕಣ್ಣೀರು ಕುಕ್ಕುವ ಮೆದು ಸ್ವಭಾವದವನಾಗಿದ್ದ. ಅಂದರೆ ಯಾರಿಗೂ ನಂಬಿಕೆ ಹುಟ್ಟುವುದಿಲ್ಲ. ಮಿಲಿಟರಿ ದಿರಿಸು ತೊಟ್ಟಾಗಿನ ಜಿಯಾನೇ ಬೇರೆ. ಸ್ನೇಹಿತರ ಸಂಗದಲ್ಲಿ ದೇಶ ಕಾರ್ಯವನ್ನೆಲ್ಲ ಮರೆತು ನಾಲ್ಕೈದು ತಾಸು ಹರಟೆ ಹೊಡೆದು ರಂಜಿಸುತ್ತಿದ್ದ. ಆತನಿಗೆ ಜೋಕು ಹೇಳುವುದೆಂದರೆ ಭಲೇ ಪ್ರೀತಿ. ಒಮ್ಮೆ ಹೊತ್ತಿಕೊಂಡರೆ ಜೋಕಿನ ಸರಪಟಾಕಿಗಳು ಎರಡು ಮೂರು ತಾಸು ಪಟಗುಡುತ್ತಿದ್ದವು. ಒಬ್ಬನೇ ಸೈನಿಕ ಮಗನನ್ನು ಕಳೆದುಕೊಂಡ ತಾಯಿಯ ಉಮ್ಮಳಿಸಿ ಬಂದ ದುಃಖವನ್ನು ಕಂಡು ಕಳೇಬರದ ಮುಂದೆ ಜನರಲ್‌ ಜಿಯಾ ಕುಸಿದು ಬಿದ್ದು ಅಲ್ಲಿದ್ದವರನ್ನು ದಂಗು ಬಡಿಸುತ್ತಾನೆ. ಆ ಮುಗ್ಧೆ, ಅಮಾಯಕ ತಾಯಿಯನ್ನು ಎದೆಗೆ ಹಚ್ಚಿಕೊಂಡು ಗೋಳೋ ಅಂತ ಅಳುತ್ತಾನೆ. ಹೊಸದಿಲ್ಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ತನ್ನೊಂದಿಗೆ ಓದಿದ ಅಗಸ್ಟೈನ್‌ ಪಾಲ್‌ ಎಂಬ ಭಾರತೀಯ ಸ್ನೇಹಿತನ ಹೆಸರು ಇದ್ದಕ್ಕಿದ್ದಂತೆ ನೆನಪಾದಾಗ ಆತನ ಬ್ಯಾಂಕಾಕ್‌ ವಿಳಾಸಕ್ಕೆ ತನ್ನ ಹಸ್ತಾಕ್ಷರವಿರುವ ಫೋಟೊ ಕಳಿಸಿ ಶುಭಾಶಯ ಹೇಳುತ್ತಾನೆ.

ಕಾಲೇಜಿನ ಇನ್ನೊಬ್ಬ ಸ್ನೇಹಿತ ಮಹೇಂದರ್‌ ಸಿಂಗ್‌ನ ಮಗಳ ಮದುವೆಗೆ ಜಿಯಾ ಲಂಡನ್‌ಗೆ ಹೋಗುತ್ತಾನೆ. ತಾನು ಒಂದು ದೇಶದ ಮಿಲಿಟರಿ ಮುಖ್ಯಸ್ಥ, ಅದಕ್ಕಿಂತ ಹೆಚ್ಚಾಗಿ ಒಂದು ದೇಶದ ಅಧ್ಯಕ್ಷ ಎಂಬುದನ್ನೂ ಮರೆತು ಫೌಜಿ ಸ್ನೇಹಿತನ ಸನ್ಮಾನ ಸಮಾರಂಭದಲ್ಲಿ ಆಲಂಗಿಸಿ ಕಣ್ಣೀರಿಗರೆಯುತ್ತಾನೆ. ಭುಟ್ಟೋನ ಹೆಂಡತಿ ನುಸರತ್‌ ಕಾಮಾಲೆ ಪೀಡಿತಳಾದಾಗ ಅವಳ ಮನೆಗೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬರುತ್ತಾನೆ. ಚಿಕಿತ್ಸೆಯ ವೆಚ್ಚವನ್ನು ತಾನೇ ಭರಿಸುತ್ತಾನೆ! ತಾನು ಅಧ್ಯಕ್ಷನೆಂಬುದನ್ನೂ ಮರೆತು, ತನ್ನ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗದವರ ಕುಟುಂಬವನ್ನು ಕರೆದು ಸ್ವತಃ ಅವರಿಗೆ ಊಟ ಬಡಿಸುತ್ತಾನೆ. ಹೊಸ ಬಟ್ಟೆ ಹಂಚಿ ಅವರ ನಗುವಿನಲ್ಲಿ ಆತ್ಮತೃಪ್ತಿ ಕಾಣುತ್ತಾನೆ.

ಆದರೂ ಜಿಯಾನ ಚಿತ್ರ ಮುಂದೆ ನಿಂತುಕೊಂಡರೆ ಮನಸ್ಸು ಗಿಯರ್‌ನ್ನು ಬದಲಿಸುತ್ತದೆ. ತನಗೆ ಬೇಕಾದ ಮಾರ್ಗದಲ್ಲಿ ಓಡತೊಡಗುತ್ತದೆ.

ಕಾರಣ ಅದಕ್ಕೇನಿದ್ದರೂ ಬಿಡಿಸುವುದು ಗೊತ್ತು , ಅಳಿಸುವುದಲ್ಲ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X