• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವನ ಸಾವಿಗಲ್ಲ , ಅಯೋಗ್ಯ ರಾಜಕಾರಣಿಗಳನ್ನು ಕಂಡು ಶೋಕಿಸಬೇಕಿದೆ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ವೀರಪ್ಪನ್‌ ಸತ್ತಿದ್ದಾನೆ. ಕೊನೆಗೂ ಎರಡು ದಶಕಗಳ ಹಿಂಸೆ, ಅಟ್ಟಹಾಸಕ್ಕೆ ತೆರೆ ಬಿದ್ದಿದೆ. ಹಾಗೆಯೇ ಸುಳ್ಳಿನ ಕಂತೆಗೂ. ಈ ಅವಧಿಯಲ್ಲಿ ವೀರಪ್ಪನ್‌ ಕರಾಳ ಚರಿತ್ರೆ ಮೇಲೆ ಕೈಯಾಡಿಸಿದರೆ ಅಂಟಿಕೊಳ್ಳುವುದು ರಕ್ತಕಣ ಹಾಗೂ ಸುಳ್ಳಿನ ಹುಡಿ. ನಮ್ಮ ಮಂತ್ರಿಗಳು, ರಾಜಕಾರಣಿಗಳು, ಪೊಲೀಸರು, ಅಧಿಕಾರಿಗಳು ನಮ್ಮನ್ನು ಇಷ್ಟು ವರ್ಷ ಸುಳ್ಳು ಹೇಳಿಯೇ ನಂಬಿಸಿದರು. ಅವರು ಯಾವ ಪ್ರಮಾಣದಲ್ಲಿ ಹಸಿಹಸಿ ಸುಳ್ಳುಗಳನ್ನು ಹೇಳಿದರೆಂದರೆ, ಅವುಗಳೆಲ್ಲ ನಿಜವಾಗಿದ್ದರೆ ವೀರಪ್ಪನನ್ನು ಹಿಡಿದು ಹದಿನೈದಿಪ್ಪತ್ತು ವರ್ಷಗಳಾಗಬೇಕಿತ್ತು. ಈಗ ಎಸ್‌ಟಿಎಫ್‌ ಪೊಲೀಸರು ಒಂದು ಸಂಗತಿಯನ್ನಂತೂ ನಿಜಗೊಳಿಸಿದ್ದಾರೆ. ಅದೇನೆಂದರೆ ವೀರಪ್ಪನ್‌ನನ್ನು ಏನೇ ಮಾಡಿದರೂ ಜೀವಂತ ಹಿಡಿಯಲು ಸಾಧ್ಯವಿಲ್ಲ ಹಾಗೂ ಒಮ್ಮೆ ಜೀವಂತ ಸಿಕ್ಕರೆ ಪೊಲೀಸರು ಅವನ ಜೀವ ಉಳಿಸುವುದಿಲ್ಲ. ಇದು ಬಿಟ್ಟರೆ ಉಳಿದಿದ್ದೆಲ್ಲ ಬರೀ ಸುಳ್ಳಿನ ಕಂತೆ!

ವೀರಪ್ಪನ್‌ ಸತ್ತ ನಂತರ ಈ ಸುಳ್ಳಿನ ಕಂತೆಯನ್ನು ಸ್ವಲ್ಪ ಬಿಚ್ಚಿ ನೋಡುವುದು ಅಗತ್ಯ. ನಾವು ಇಷ್ಟು ವರ್ಷಗಳ ಕಾಲ ಇಂಥ ಜನರನ್ನು ನಂಬಿ ಕೂತೆವಲ್ಲಾ, ನಮ್ಮ ವಿಶ್ವಾಸ, ಭರವಸೆಗಳನ್ನು ಗಂಟುಕಟ್ಟಿ ನಮ್ಮ ಮಂತ್ರಿ ಅಧಿಕಾರಿಗಳ ಕೈಯಲ್ಲಿ ಕೊಟ್ಟೆವಲ್ಲಾ ಎಂಬುದನ್ನು ಚಿಂತಿಸುವುದಕ್ಕೂ ಇದು ಸಕಾಲ. ಇಡೀ ವೀರಪ್ಪನ್‌ ಪ್ರಕರಣ ನಮಗೆ ಎಂಥ ಪಾಠ ಕಲಿಸಿದೆ? ನಿಜಕ್ಕೂ ನಾವು ಪಾಠ ಕಲಿತಿದ್ದೇವಾ? ಮುಂದೆ ಮತ್ತೊಬ್ಬ ವೀರಪ್ಪನ್‌ ಹುಟ್ಟಿಕೊಳ್ಳುವುದಿಲ್ಲವೆನ್ನಲು ಏನು ಗ್ಯಾರಂಟಿ? ಅವನನ್ನು ಸಹ ನಾವು ಈ ವೀರಪ್ಪನ್‌ನಂತೆ ಬೆಳೆಸುವುದಿಲ್ಲ ಎಂಬುದಕ್ಕೆ ಖಾತ್ರಿಯೇನು? ಮುಂತಾದ ಹತ್ತಾರು ಪ್ರಶ್ನೆಗಳು ನಮ್ಮ ಮುಂದಿವೆ. ಒಬ್ಬ ಸಾಮಾನ್ಯ, ಯಕಃಶ್ಚಿತ್‌ ಕಾಡುಗಳ್ಳ Bandit king ಮಟ್ಟಕ್ಕೇರಿದನಲ್ಲಾ , ಹಾಗೇರಲು ಬಿಟ್ಟೆವಲ್ಲಾ , ಅದು ನಮಗೇ ಕೇಳಿಕೊಳ್ಳಬೇಕಾದ ಮುಖ್ಯ ಹಾಗೂ ಮೊದಲ ಪ್ರಶ್ನೆ.

We have enough reasons to worry about urban Veerappansಈ ಕ್ಷಣಕ್ಕೆ ಮನಸ್ಸಿನಲ್ಲಿ ಮೂಡಿದ್ದನ್ನೇ ಮುಂದಿಡೋಣ. 1980ರ ಹೊತ್ತಿಗೆ ವೀರಪ್ಪನ್‌ ಒಬ್ಬ ಚಳ್ಳೆಪಿಳ್ಳೆ. ಸಣ್ಣಪುಟ್ಟ ಕಳ್ಳತನ, ಕಳ್ಳನಾಟ ಸಾಗಾಣಿಕೆ, ಕಾಡುಪ್ರಾಣಿಗಳ ಹತ್ಯೆ, ಚರ್ಮ ಮಾರಾಟದಲ್ಲಿ ತೊಡಗಿದ್ದ. ಅವನನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ವೀರಪ್ಪನ್‌ ಸಮಾಜ ಕಂಟಕ ಶಕ್ತಿಯಾಗಿ ಬೆಳೆದಿದ್ದ. ಮುಂದೊಂದು ದಿನ ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಬಹುದೆಂದು ಎಲ್ಲ ಆತಂಕಗಳನ್ನು ಮೂಡಿಸಿದ್ದ. ಆದರೆ ಯಾರೂ ಏನೂ ಮಾಡಲಿಲ್ಲ. ಅಲ್ಲಿಯೇ ಅವನಿಗೊಂದು ಶಾಸ್ತಿ ಮಾಡಿದ್ದರೆ ಮುಗಿದಿರುತ್ತಿತ್ತು. ಆದರೆ ವೀರಪ್ಪನ್‌ನನ್ನು ಬೆಳೆಯಲು ಬಿಟ್ಟೆವು. ಕೆಲವು ರಾಜಕಾರಣಿಗಳು ಅವನ ಜತೆ ಸಖ್ಯ ಬೆಳೆಸಿದರು. ಅವನ ಕರಾಳ ವ್ಯವಹಾರಗಳಲ್ಲಿ ಷಾಮೀಲಾದರು. ವೀರಪ್ಪನ್‌ ಬರಬರುತ್ತಾ ಇಡೀ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಚೆನ್ನಾಗಿ ಅರಿತುಕೊಂಡ. ಆನೆಗಳ ಕೊಂದು ದಂತ ಮಾರಿ ಹಣ ಸಂಪಾದಿಸುವುದನ್ನು ಕಲಿತ. ಪೊಲೀಸ್‌ ಅಧಿಕಾರಿಗಳು, ಅಮಾಯಕರನ್ನು ಕೊಂದು ಹಾಕಿದ. ಗಣ್ಯವ್ಯಕ್ತಿಗಳನ್ನು ಅಪಹಕರಿಸಿದರೆ (ಕು) ಖ್ಯಾತಿ ಹಾಗೂ ಹಣ ಗಳಿಸಬಹುದೆಂದು ಮನವರಿಕೆಯಾದ ಬಳಿಕ ಅಪಹರಣವನ್ನೇ ಕಾಯಕ ಮಾಡಿಕೊಂಡ. ಉಳಿದೆಲ್ಲಕ್ಕಿಂತ ಅಪಹರಣ ಲಾಭದಾಯಕ ದಂಧೆಯೆಂದು ಅವನಿಗೆ ಅನ್ನಿಸಿತು. ಈ ಹೊತ್ತಿಗೆ ಕರ್ನಾಟಕ, ತಮಿಳುನಾಡು ಸರಕಾರಗಳು ವೀರಪ್ಪನ್‌ ಮುಂದೆ ಅಬ್ಬೇಪಾರಿಯಂತೆ ನಿಂತಿದ್ದವು.

ವೀರಪ್ಪನ್‌ ಈ ಪರಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ ಅವನನ್ನು ಹಿಡಿಯಲು ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಿದ್ದಕ್ಕಿಂತ ಪ್ರಾಮಾಣಿಕವಾಗಿ ಸುಳ್ಳುಹೇಳಿದ್ದೇ ಜಾಸ್ತಿ. ಡಾ.ರಾಜ್‌ಕುಮಾರ್‌ ಅಪಹರಣವಾಗುವ ತನಕ ವೀರಪ್ಪನ್‌ನನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಜನರನ್ನು ನಂಬಿಸಲು ಎಸ್‌ಟಿಎಫ್‌ ಎಂಬ ‘ರಕ್ಷಾ ಕವಚ’ ನಿರ್ಮಿಸಲಾಗಿತ್ತೇ ಹೊರತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದನ್ನು ವೀರಪ್ಪನ್‌ ಸೆರೆಹಿಡಿಯುವ ರಣಸೇವೆಯಾಗಿ ರೂಪಿಸಲೇ ಇಲ್ಲ. ಪ್ರತಿಬಾರಿ ವೀರಪ್ಪನ್‌ ದಾಳಿ ಮಾಡಿ ಪೊಲೀಸ್‌ ಅಧಿಕಾರಿಗಳನ್ನು ಕೊಂದಾಗ ಎಸ್‌ಟಿಎಫ್‌ ಮೈ ಕೊಡವಿಕೊಂಡು ಏಳುತ್ತಿತ್ತು. ಕೆಲ ದಿನಗಳ ನಂತರ ಘಟನೆ ಮರೆತು ಹೋದ ಬಳಿಕ ತಣ್ಣಗಾಗುತ್ತಿತ್ತು. ಹಾಗಂತ ಎಸ್‌ಟಿಎಫ್‌ ಸಂಪೂರ್ಣ ನಿಷ್ಕಿೃಯವಾಗಿತ್ತು ಎಂದಲ್ಲ. ಕೆಲ ದಕ್ಷ ಅಧಿಕಾರಿಗಳು ಆ ಪಡೆಗೊಂದು ಕಾಯಕಲ್ಪ ಕೊಡಲು ಮುಂದಾದರು. ವೀರಪ್ಪನ್‌ಗೆ ಚುರುಕು ಮುಟ್ಟಿಸಿದರು. ಆದರೆ ಅಂಥವರು ಅಲ್ಲಿ ಹೆಚ್ಚು ದಿನ ಮುಂದುವರಿಯಲಿಲ್ಲ.

ವೀರಪ್ಪನ್‌ನನ್ನು ಹಿಡಿಯಲು ನಮ್ಮ ಪೊಲೀಸರು ಹದಿನೆಂಟು ವರ್ಷ ಹರಸಾಹಸ ಮಾಡಿದರೂ ಅವನ ಕೂದಲು ಕೊಂಕಿಸಲಾಗಿರಲಿಲ್ಲ. ಪೊಲೀಸರಿಗೆ ಸದಾ ತಿನ್ನಿಸಲೆಂದೇ ಆತ ತನ್ನ ಬಳಿ ಚಳ್ಳೇಹಣ್ಣು ಇಟ್ಟುಕೊಂಡಿರುತ್ತಿದ್ದ. ವೀರಪ್ಪನ್‌ ತಿಂದು ಹೋದ ಹಲಸಿನ ಹಣ್ಣು , ಮಾವಿನ ಗೊರಟೆ, ಒಡೆದ ಮಡಿಕೆ ಚೂರುಗಳನ್ನು ನಮ್ಮ ಪೊಲೀಸರು ಕಂಡರೇ ಹೊರತು ವೀರಪ್ಪನ್‌ನನ್ನು ಮಾತ್ರ ಕಾಣಲಿಲ್ಲ. ಪತ್ರಕರ್ತ ಶಿವಸುಬ್ರಣ್ಯ, ಆರ್‌.ಆರ್‌.ಗೋಪಾಲರನ್ನು ವೀರಪ್ಪನ್‌ ಯಾವಾಗ ಬೇಕಾದಾಗ ಕರೆಯಿಸಿಕೊಳ್ಳುತ್ತಿದ್ದ. ವೀರಪ್ಪನ್‌ ಮುಂದೆ ಕುಳಿತು ಗೋಪಾಲನಂತೂ ಹರಿಕಥೆ ಮಾದರಿಯಲ್ಲಿ ಪಟ್ಟಾಂಗ ಹೊಡೆದು ಬರುತ್ತಿದ್ದ. ನಡುರಾತ್ರಿಯಲ್ಲಿ ನೆಡುಮಾರನ್‌, ಸುಕುಮಾರನ್‌, ಕೊಳತ್ತೂರು ಮಣಿ ನಡೆದು ಹೋಗಿ ಬರುತ್ತಿದ್ದರು. ಭಾನು ಅಂಥ ಸಾಮಾನ್ಯ ಹೆಂಗಸು ಕೂಡ ಡಾಕ್ಟರ್‌ ನೆಪದಲ್ಲಿ ವೀರಪ್ಪನ್‌ ಅಂಗಳಕ್ಕೆ ಹೋಗಿ ಬರುತ್ತಿದ್ದವು. ನಡುರಾತ್ರಿಯಲ್ಲಿ ನೆಡುಮಾರನ್‌, ಸುಕುಮಾರನ್‌, ಕೊಳತ್ತೂರು ಮಣಿ ನಡೆದು ಹೋಗಿ ಬರುತ್ತಿದ್ದರು. ಭಾನು ಅಂಥ ಸಾಮಾನ್ಯ ಹೆಂಗಸು ಕೂಡ ಡಾಕ್ಟರ್‌ನೆಪದಲ್ಲಿ ವೀರಪ್ಪನ್‌ ಅಂಗಳಕ್ಕೆ ಹೋಗಿ ಬರುತ್ತಿದ್ದಳು. ಪೊನ್ನಾಚಿಯಂತವರೂ ಒಂದೆರಡು ರೌಂಡು ಹೋಗಿ ಬರುವುದಕ್ಕೆ ಸಾಧ್ಯವಾಗಿತ್ತು . ಇವರೆಲ್ಲರು ವೀರಪ್ಪನ್‌ ಜತೆ ಉಂಡು ಅಲೆದು ವೀಳ್ಯ ಸ್ವೀಕರಿಸಿ ಬರುವಾಗೊಂದು ಗ್ರೂಪ್‌ ಫೋಟೊ ತೆಗೆಸಿಕೊಳ್ಳುತ್ತಿದ್ದರು. ವೀರಪ್ಪನ್‌ ಇಂದು ಯಾವ ಮಗ್ಗುಲಿಗೆ ಎದ್ದ, ಏನೇನು ಮಾಡಿದನೆಂಬ ಸಣ್ಣ ಸಣ್ಣ ಸಂಗತಿಗಳು ಚೆನ್ನೈಯಲ್ಲಿ ಕುಳಿತ ಗೋಪಾಲನಿಗೆ ಗೊತ್ತಾಗುತ್ತಿತ್ತು. ಆತನೊಂದಿಗೆ ನಿತ್ಯ ನಿಕಟ ಸಂಪರ್ಕವಿತ್ತು.

ಆದರೆ ನಮ್ಮ ಪೊಲೀಸರಿಗೆ ಮಾತ್ರ ವೀರಪ್ಪನ್‌ ಗೋಚರಿಸುತ್ತಿರಲಿಲ್ಲ. ಅವರೇನಾದರೂ ವೀರಪ್ಪನ್‌ನನ್ನು ನೋಡಿದ್ದರೆ ಗೋಪಾಲ ತಂದ ವಿಡಿಯೋ ಕ್ಯಾಸೆಟ್‌ಗಳಲ್ಲಿ ಹಾಗೂ ತೆಗೆದ ಫೋಟೊಗಳಲ್ಲಿ ಮಾತ್ರ! ಎರಡೂ ರಾಜ್ಯಗಳ ಎರಡು ಸಾವಿರ ಪೊಲೀಸರು ಹದಿನೈದು ವರ್ಷಗಳ ಕಾಲ ಒಬ್ಬ ವ್ಯಕ್ತಿಗಾಗಿ ಮೈಯೆಲ್ಲಾ ಕಣ್ಣಾಗಿ ಹುಡುಕಿದರೂ ವೀರಪ್ಪನ್‌ ಮಾತ್ರ ಕಣ್ಣಿಗೆ ಬೀಳಲಿಲ್ಲ. ಆತ ಇರುವ ತಾಣವೊಂದನ್ನು ಬಿಟ್ಟು ಉಳಿದೆಲ್ಲ ಜಾಗವನ್ನೂ ಪೊಲೀಸರು ಗುಡಿಸಿ ಹಾಕಿದರು. ಹೀಗಿರುವಾಗ ಆತ ಹೇಗೆ ಸಿಗಬೇಕು? ರಾಜ್ಯ ಸರಕಾರ ಏನಿಲ್ಲ ವೆಂದರೂ ನೂರೈವತ್ತು ಕೋಟಿ ರೂ. ಗಳನ್ನು ವೀರಪ್ಪನ್‌ ಬೇಟೆಗಾಗಿ ಸುರಿದಿದೆ. ಇದರಲ್ಲಿ ಆತನಿಗೆ ಕೃಷ್ಣ ಸರಕಾರ ಸಲ್ಲಿಸಿದ ಕಪ್ಪ ಕಾಣಿಕೆ ಸೇರಿಲ್ಲ. ನೂರಾರು ಪೊಲೀಸರನ್ನು ಬಲಿಕೊಟ್ಟಿದೆ. ಇಷ್ಟಾದರೂ ವೀರಪ್ಪನ್‌ ಸಿಗಲಿಲ್ಲವೆಂದರೆ ನಮ್ಮ ಸರಕಾರ, ಪೊಲೀಸರು ಹೇಗೆ ಕೆಲಸ ಮಾಡಿರಬಹುದು ತುಸು ಯೋಚಿಸಿ.

ಇನ್ನು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು, ಪೊಲೀಸು ಅಧಿಕಾರಿಗಳು ವೀರಪ್ಪನ್‌ ವಿಷಯದಲ್ಲಿ ಹೇಳಿದ್ದೆಲ್ಲ ಬರೀ ಸುಳ್ಳು. ಹಿಡಿತೇವೆ, ಇನ್ನೇನು ಹಿಡಿದೇ ಬಿಡುತ್ತೇವೆ, ಹದಿನೈದು ದಿನಗಳಲ್ಲಿ ಹಿಡಿತೇವೆ ಎಂಬ ಧಾಟಿಯಲ್ಲಿಯೇ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು. ಗೃಹಸಚಿವರ ಮಾತಿನ ವರಸೆಯೂ ಇದೇ ರೀತಿಯಿರುತ್ತಿತ್ತು. ಕೃಷ್ಣ ಸರಕಾರದಲ್ಲಿ ಗೃಹಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರು ನಾಲ್ಕೂವರೆ ವರ್ಷ ವೀರಪ್ಪನ್‌ ವಿಷಯದಲ್ಲಿ ಹಸಿ ಹಸಿ ಸುಳ್ಳುಗಳನ್ನು ಹೇಳಿದರು. ಪತ್ರಕರ್ತರು ಅವರನ್ನು ಕೇಳಿದಾಗಲೆಲ್ಲ ‘‘ನಮ್ಮವರು ವೀರಪ್ಪನ್‌ನನ್ನು ನಾಲ್ಕೂ ಕಡೆಯಿಂದ ಕಾರ್ನರ್‌ ಮಾಡಿದ್ದಾರೆ. ಸದ್ಯದಲ್ಲಿಯೇ ಹಿಡಿಯುತ್ತೇವೆ’’ ಎಂದು ಹೇಳುತ್ತಾ ಎದ್ದು ಹೋದರು. ಈ ನಾಲ್ಕೂವರೆ ವರ್ಷ ನಮ್ಮ ಪೊಲೀಸರು ಕಾರ್ನರ್‌ ಮಾಡಿದರಾ, ಕಾರ್ನರ್‌ ಮೀಟಿಂಗ್‌ ಮಾಡಿದರಾ ಎಂಬ ಬಗ್ಗೆ ಖರ್ಗೆ ಸಾಹೇಬರೇ ಹೇಳಬೇಕು. ಇವರ ಹಿಂದೆ ಅದೇ ಕುರ್ಚಿಯಲ್ಲಿ ಕುಳಿತರು ಮಾಡಿದ್ದನ್ನೇ ಇವರೂ ಮಾಡಿದರು. ಅವರಿಗೂ ಖರ್ಗೆಯವರಿಗೂ ಇದ್ದ ವ್ಯತ್ಯಾಸವೆಂದರೆ ವೀರಪ್ಪನ್‌ ಕುರಿತು ಉಳಿದವರು ಅನೇಕ ಸುಳ್ಳುಗಳನ್ನು ಹೇಳಿದರೆ ಖರ್ಗೆಯವರು ಒಂದೇ ಸುಳ್ಳನ್ನು ಅನೇಕ ಸಲ ಹೇಳಿದರು.

ಡಾ.ರಾಜ್‌ಕುಮಾರ್‌ ಅಪಹರಣವಾಗಿ ಅವರು ಸುರಕ್ಷಿತವಾಗಿ ಮರಳಿ ಬಂದ ನಂತರವಾದರೂ ಸರಕಾರ ಕಾರ್ಯಾಚರಣೆ ಚುರುಕುಗೊಳಿಸಬೇಕಿತ್ತು. ಹಾಗೆ ಆಗಲಿಲ್ಲ. ಕಾರ್ಯಾಚರಣೆ ಮಾಡಿದಾಗಲೆಲ್ಲ ಸಿಕ್ಕಿದ್ದು ವೀರಪ್ಪನ್‌ ತಿಂದು ಎಸೆದ ಬೀಜ, ಗೊರಟೆ, ಉಂಡು ಬಿಸಾಕಿದ ಮಡಿಕೆ ಚೂರುಗಳು! ಮಾಜಿ ಸಚಿವ ನಾಗಪ್ಪ ಅಪಹರಣವಾದಾಗ ಹಾಗೂ ಅವರ ಹತ್ಯೆಯಾದಾಗ ಸರಕಾರ ಎಚ್ಚೆತ್ತುಕೊಂಡಾಗ ಸ್ವಲ್ಪ ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು. ಆಗಲೂ ಸರಕಾರದ ಪ್ರತಿಕ್ರಿಯೆ ನೀರಸವೇ ಆಗಿತ್ತು. ಯಾವ ಮುಖ್ಯಮಂತ್ರಿಯೂ ವೀರಪ್ಪನ್‌ಗೆ ಬೆವರು ಇಳಿಸುವ ಕೆಲಸ ಮಾಡಲಿಲ್ಲ. ಇದ್ದುದರಲ್ಲಿ ಕೃಷ್ಣ ಆ ಕೆಲಸ ಮಾಡಬಹುದಿತ್ತು. ಆದರೆ ವೀರಪ್ಪನ್‌ನೇ ಅವರ ಬೆವರನ್ನು ಸಾಕಷ್ಟು ಇಳಿಸಿದ್ದ.

ಅಧಿಕಾರಕ್ಕೆ ಬಂದ ರಾಜಕಾರಣಿಗಳೆಲ್ಲ ತಮ್ಮ ಹಿಂದಿನವರನ್ನು ಬೈಯುತ್ತವೇ ಕಾಲ ಕಳೆದರೇ ಹೊರತು ವೀರಪ್ಪನ್‌ನನ್ನು ಹಿಡಿಯಲು ಉತ್ಸಾಹ ತೋರಲಿಲ್ಲ. ಪ್ರತಿಪಕ್ಷಗಲ್ಲಿದ್ದವರು ಆಡಳಿತ ಪಕ್ಷದವರನ್ನು ದೂರಿದರು. ಮುಂದಿನ ಸಲ ಅವರೇ(ಪ್ರತಿಪಕ್ಷದವರು) ಅಧಿಕಾರಕ್ಕೆ ಬಂದಾಗ ತಾವು ಪ್ರತಿಪಕ್ಷದಲ್ಲಿದ್ದಾಗ ಹೇಳಿದ್ದನ್ನು ಮರೆತರು. ತಾವು ಆಗ ಅಧಿಕಾರದಲ್ಲಿದ್ದಾಗ ಮಾಡಲಾಗದ್ದನ್ನು ಈಗ ಅವರು (ಅಧಿಕಾರದಲ್ಲಿರುವವರು ) ಮಾಡಬೇಕೆಂದು ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತರು ಉಪದೇಶಿಸತೊಡಗಿದರು. ಅವರನ್ನು ಇವರು, ಇವರನ್ನು ಅವರು ಪರಸ್ಪರ ಬೈಯ್ದುಕೊಂಡು ತಮ್ಮ ತಮ್ಮನ್ನೇ ‘ಹಲ್ಕಾ’ಮಾಡಿಕೊಂಡರೇ ಹೊರತು ವೀರಪ್ಪನನ್ನು ಮಾತ್ರ ಹಿಡಿಯಲಿಲ್ಲ.

ಇನ್ನು ಪೊಲೀಸ್‌ ಅಧಿಕಾರಿಗಳು ಮಾಡಿದ್ದೂ ಇದನ್ನೇ. ವೀರಪ್ಪನ್‌ ಕಾರ್ಯಚರಣೆಗೆಂದು ಹೋಗಿ ಬಂದ ಅಧಿಕಾರಿಗಳೆಲ್ಲ ಅವನನ್ನು ಹಿಡಿಯುವುದು ಎಷ್ಟು ಕಷ್ಟ ಎಂದೇ ವಿವರಿಸುತ್ತಿದ್ದರು. ಅವನನ್ನು ಹಿಡಿಯುವುದು ಹೇಗೆ, ಯಾವಾಗ ಎಂದು ಕೇಳಿದಾಗಲೆಲ್ಲ ಅದು ಹೇಗೆ ಅಸಾಧ್ಯ ಎಂದೇ ಹೇಳುತ್ತಿದ್ದರು. ವೀರಪ್ಪನ್‌ ಅಡಗಿ ಕುಳಿತ ತಾಣ ದುರ್ಗಮವಾಗಿದ್ದರಿಂದ, ದಟ್ಟ ಅರಣ್ಯವಾಗಿದ್ದರಿಂದ ಆತನನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದೇ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದರು. ನರಹಂತಕ ಅಂಥ ಪ್ರದೇಶಗಳಲ್ಲಿರುವುದರಿಂದಲೇ ತಮಗೆ ಬಂದೂಕು ಕೊಟ್ಟು ಕಳಸಿದೆ, ಜತೆಗೆ ಸಾವಿರಾರು ಮಂದಿಯನ್ನು ನಿಯೋಜಿಸಿದೆ, ವರ್ಷವರ್ಷ ಕೋಟಿ ಕೋಟಿ ರೂಪಾಯಿ ಸುರಿಯುತ್ತಿದೆ, ಆತನೇನಾದರೂ ಕಲಾಸಿಪಾಳ್ಯದುರ್ಗದ ಬೈಲಿನಲ್ಲಿದ್ದರಿಂದ ಇಷ್ಟೆಲ್ಲ ಕಷ್ಟ ಪಡಬೇಕಿರಲಿಲ್ಲ ಎಂಬ ಸಾಮಾನ್ಯ ಸಂಗತಿ, ಕಾಮನ್‌ಸೆನ್ಸ್‌ ಕೂಡ ಇಲ್ಲದವರಂತೆ ಮಾತಾಡುತ್ತಿದ್ದರುಭ ವೀರಪ್ಪ್‌ನನ್ನು ಹಿಡಿಯುವುದಕ್ಕಿಂತ ಹಿಡಿಯುತ್ತೇವೆಂದು ಹೇಳುವುದೇ ಲಾಭದಾಯಕವಾಗಿತ್ತು. ಕಾರಣ ವೀರಪ್ಪನ್‌ ಕಾರ್ಯಾಚರಣೆಗೆ ಸರಕಾರ ಕೇಳಿದಷ್ಟು ಹಣ ಕೊಡುತ್ತಿತ್ತು. ವೀರಪ್ಪನ್‌ ತನ್ನ ಸುತ್ತುವರಿದವರಿಗೂ ಕಾಮಧೇನುವಾಗಿದ್ದ. ಎಸ್‌ಟಿಎಫ್‌ ಇರುವತನಕ ವೀರಪ್ಪನ್‌ಗೆ ಭಯವಿಲ್ಲ, ಆತ ಸುರಕ್ಷಿತ ಎಂಬ ಭಾವನೆ ಮೊಳೆತಿತ್ತು.

ವೀರಪ್ಪನ್‌ಗೆ ಈ ಜಗದ ಕೋಟಾ ಮುಗಿದಿತ್ತು ಎನಿಸುತ್ತದೆ, ಸತ್ತಿದ್ದಾನೆ. ಖಂಡಿತ ಪಶ್ಚಾತ್ತಾಪವಿಲ್ಲ. ಬೇಸರವಾಗುವುದು ನಮ್ಮ ಭ್ರಷ್ಟ ವ್ಯವಸ್ಥೆ ಕಂಡು. ಅದಕ್ಷ, ಅಯೋಗ್ಯ ಮುಖ್ಯಮಂತ್ರಿ, ಮಂತ್ರಿಗಳನ್ನು ಕಂಡು. ಈ ಹೊತ್ತಿನಲ್ಲಿ ನಾವೇನಾದರೂ ಶೋಕಿಸುವುದಾದರೆ ಇವರಿಗೆ. ನಾವೆಂದೂ ಪ್ರತ್ಯಕ್ಷ ನೋಡದ ವೀರಪ್ಪನ್‌ಗಿಂತ ನಿತ್ಯವೂ ನಮ್ಮ ಮುಂದೆ ಕಾಣಿಸಿಕೊಳ್ಳುವ ಇವರು ಇನ್ನೂ ಭಯಂಕರರು. ಯಾಕೆಂದರೆ ನಾವು ನಂಬಿದ್ದು, ನೆಚ್ಚಿಕೊಂಡಿದ್ದು ವೀರಪ್ಪನ್‌ನನ್ನಲ್ಲ , ಇವರನ್ನು. ಹೀಗಾಗಿ ನಮಗೆ ವೀರಪ್ಪನ್‌ ಎಂದೂ ಮುಖ್ಯವಾಗಿರಲಿಲ್ಲ. ಏಕೆಂದರೆ ಆತ ಕಾಡಿನಲ್ಲಿದ್ದ. ಈ ಕಾರಣದಿಂದ ವೀರಪ್ಪನ್‌ ಸತ್ತಾಗ ಆತ ಸತ್ತಿದ್ದಾನೆ ಎಂಬ ಸಂತಸಕ್ಕಿಂತ ನಮ್ಮ ಮುಂದಿನ ಈ ಭಯಂಕರ ವ್ಯವಸ್ಥೆ ಇನ್ನೂ ಜೀವಂತವಾಗಿದೆಯಲ್ಲ ಎಂಬುದೇ ಮುಖ್ಯವಾಗುತ್ತದೆ.

ವೀರಪ್ಪನ್‌ನೇನೋ ಸತ್ತ. ಆದರೆ ನಮ್ಮ ಭ್ರಷ್ಟ ವ್ಯವಸ್ಥೆಗೆ ಸಾವು ಯಾವಾಗ ?

(ಸ್ನೇಹಸೇತು : ವಿಜಯ ಕರ್ನಾಟಕ)

ಕಣ್ಣಾಡಿಸಿ- ವೀರಪ್ಪನ್‌ ಶಿಕಾರಿ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more