ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಟಂಗಿತನ ಒಂದು ಪರಿಪೂರ್ಣ ಕಲೆ !

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಕಾಂಗ್ರೆಸ್ಸಿಗರು ಮತ್ತೊಮ್ಮೆ ಇದನ್ನು ರುಜುವಾತು ಪಡಿಸಿದ್ದಾರೆ. ಕಾಂಗ್ರೆಸ್ಸಿನ ಮಿತ್ರ ಪಕ್ಷಗಳ ನಾಯಕರೂ ತಾವು ಕಡಿಮೆ ಯೇನಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಸಲದ ಚುನಾವಣಾ ಫಲಿತಾಂಶ ಏನೇ ಇರಲಿ, ಭಟ್ಟಂಗಿತನ ಮಾತ್ರ ಎಲ್ಲ ಕಾಲಕ್ಕೂ ಸಲ್ಲುವ ಕಲೆ ಹಾಗೂ ಕಾಂಗ್ರೆಸಿಗರಿಗೆ ಅದು ಗೆಲ್ಲುವ ಕಲೆ ಎಂದು ಸಾಬೀತಾಗಿದೆ. ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ಸಿಗರ ಕೊಡುಗೆ ಅಸಾಧಾರಣ. ಅದರಲ್ಲೂ ಭಟ್ಟಂಗಿತನವನ್ನು ಒಂದು Fine craft ಆಗಿ ರೂಪಾಂತರಿಸುವುದಿದೆಯಲ್ಲ ಅದು ಅವರ ಮಹಾನ್‌ ಕಾಣಿಕೆ. ಈ ಒಂದು ಕಾರಣದಿಂದ ಆದರೂ ಅವರು ರಾಜಕೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗುತ್ತಾರೆ.

ಮೊನ್ನೆ ಪಾರ್ಲಿಮೆಂಟಿನ ಸೆಂಟ್ರಲ್‌ ಹಾಲ್‌ನಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯ ಕಲಾಪಗಳನ್ನು ನೋಡಿರಬಹುದು. ಒಬ್ಬೊಬ್ಬ ಸಂಸದ ಹೇಗೆ ಬೊಬ್ಬೆ ಹೊಡೆದರು ಎಂಬುದನ್ನು ನೋಡಬೇಕಿತ್ತು. ಸೋನಿಯಾ ಮುಂದೆ ಅವರ ಕಲಾವಂತಿಕೆ, ಅಭಿನಯದ ಪ್ರದರ್ಶನ ಎಂಥಾ ಹುಟ್ಟಾ ಕಲಾವಿದನನ್ನೂ ನಾಚಿಸುವಂತಿತ್ತು. ತನ ್ನ ರಾಜಕೀಯ ಆಯುಷ್ಯದ ಅರ್ಧ ಜೀವನವನ್ನು ಕಾಂಗ್ರೆಸ್‌ ವಿರುದ್ಧ ತಪ್ಪಾತರ ಬಯ್ಯುವುದರಲ್ಲಿ ಕಳೆದ ರೇಣುಕಾ ಚೌಧರಿ ಮೇಡಂ ಮುಂದೆ ಬಿಕ್ಕಿಬಿಕ್ಕಿ ಅಳುತ್ತಿದ್ದರು. ತೆಲುಗು ದೇಶಂ ಪಕ್ಷದಲ್ಲಿದ್ದಾಗ ಖಮ್ಮಮ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸೋನಿಯಾ ಗಾಂಧಿಯನ್ನು ‘ನೀಚ ಹೆಂಗಸು, ವಿಧವೆ, ಬಿಳಿ ತೊಗಲಿನ ಕ್ಷುಲ್ಲಕ ಹೆಂಗಸು’ ಎಂದೆಲ್ಲ ನಾಲಿಗೆ ನಿಯಂತ್ರಣ ಕಳೆದುಕೊಂಡು ಬಡಬಡಿಸಿದ್ದರು. ಈ ಬೈಗಳುಗಳನ್ನೇ ಬಂಡವಾಳ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಅದೇ ರೇಣುಕಾ ಚೌಧರಿ ಈಗ ಸೋನಿಯಾ ಗಾಂಧಿ ಮುಂದೆ ನಿಂತು ಅಂಬೋ ಎಂದು ಅಳುತ್ತಿದ್ದರು. ‘ಮೇಡಂ ಒಲ್ಲೆ ಎನ್ನಬೇಡಿ ನಾವೆಲ್ಲ ನಿಮ್ಮ ಹೆಸರು ಹೇಳಿಕೊಂಡು ಮತ ಕೇಳಿದ್ದೇವೆ. ನೀವು ಪ್ರಧಾನಿಯಾಗುತ್ತೀರೆಂದು ಜನರು ನಮಗೆ ಮತ ಹಾಕಿದ್ದಾರೆ. ಈಗ ನೀವು ಪ್ರಧಾನಿ ಹುದ್ದೆಯಿಂದ ಹಿಂದೆ ಸರಿದರೆ ನಾವು ಹೋಗಿ ಜನರಿಗೆ ಮುಖ ತೋರಿಸುವುದು ಹೇಗೆ? ಮೇಡಂ ಪ್ಲೀಸ್‌ ಒಪ್ಪಿಕೊಳ್ಳಿ. ನಮ್ಮನ್ನು ಅನಾಥರನ್ನಾಗಿ ಮಾಡಬೇಡಿ’ ಎಂದು ಕಣ್ಣೀರು ಸುರಿಸುತ್ತಾ ಆರ್ತನಾದಗೈದರು.

Sycophancy Jindabaad!!ಮೊನ್ನೆ ಮೊನ್ನೆ ವರೆಗೆ ವಾಜಪೇಯಿ ಸಂಪುಟದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ಬಾಳಾ ಸಾಹೇಬ್‌ ವಿಖೇ ಪಾಟೀಲ್‌, ‘ಸೋನಿಯಾಜಿ ಇಡೀ ದೇಶದಲ್ಲಿ ನಿಮ್ಮ ಅಲೆಯಿದೆ. ಜನಾದೇಶ ನಿಮ್ಮ ಪರವಾಗಿದೆ. ಈ ದೇಶದ ಘನತೆ ಎತ್ತಿಹಿಡಿದ ಪಕ್ಷ ಕಾಂಗ್ರೆಸ್‌. ಆ ಪಕ್ಷದ ನಾಯಕಿಯಾಗಿ ನೀವು ಪ್ರಧಾನಿ ಪದವಿ ಅಲಂಕರಿಸಿ ರಾಷ್ಟ್ರದ ಗೌರವ ಹೆಚ್ಚಿಸಬೇಕು. ಈ ಸಂದರ್ಭದಲ್ಲಿ ಹಿಂದಕ್ಕೆ ಸರಿದರೆ ನಾವು ಅಬ್ಬೇಪಾರಿಗಳು’ ಎಂದು ಎದೆ ಎದೆ ಬಡಿದುಕೊಳ್ಳುತ್ತಿದ್ದರು. ಇದೇ ಬಾಳಾಸಾಹೇಬ್‌ ಹಿಂದಿನ ಚುನಾವಣೆಯಲ್ಲಿ ‘ಸೋನಿಯಾ ಪ್ರಧಾನಿಯಾಗುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಸೋನಿಯಾ ಈ ದೇಶಕ್ಕೆ ಅಂಟಿದ ಶಾಪ ’ ಎಂದು ಅಬ್ಬರಿಸಿದ್ದರು. ಇವರ ನಂತರ ಮಾತನಾಡಿದ ಪ್ರತಿಯಾಬ್ಬ ನಾಯಕನ ಬಾಯಿಂದ ಮೊಳಗಿದ್ದು ಸೋನಿಯಾ ಪ್ರಶಂಸೆಯ ಧಾರೆ. ಅತಿಯಾದ ಪ್ರಶಂಸೆಗಳನ್ನು ಕೇಳಿದರೆ ಮೂರ್ಛೆ ಬಂದು ಬೀಳುತ್ತಾರೆ ಎಂಬ ಶಾರೀರಿಕ ನಿಯಮವೇನಾದರೂ ಇದ್ದಿದ್ದರೆ ಸೋನಿಯಾ ಅನಾಮತ್ತು ಐದು ವರ್ಷ ಕೋಮಾದಲ್ಲಿ ಇರುವಷ್ಟು ಪ್ರಶಂಸೆ, ಭಟ್ಟಂಗಿತನ ಪ್ರದರ್ಶಿತಗೊಂಡವು.

ಯಾವುದೇ ಪಕ್ಷದ ಸದಸ್ಯರಿಗೆ, ಸಂಸದರಿಗೆ ಅವರ ನಾಯಕರೆಂದರೆ ಅಪಾರ ಗೌರವ, ಪ್ರೀತಿ ಇರುವುದು ಸ್ವಾಭಾವಿಕ. ನಾಯಕರಿಗಾಗಿ ಜೀವವನ್ನೇ ತ್ಯಾಗ ಮಾಡುವವರೂ, ಮಾಡಿದವರೂ ಇದ್ದಾರೆ. ಆದರೆ ಅಂಥ ನಾಯಕರು ತಮ್ಮ ಅನುಯಾಯಿಗಳ ಪ್ರೀತಿ, ತ್ಯಾಗಕ್ಕೆ ಅರ್ಹರೆನ್ನಿಸಿಕೊಳ್ಳುವ ಎತ್ತರದ ಸ್ತರದಲ್ಲಿರುತ್ತಾರೆ. ಆದರೆ ಸೋನಿಯಾ ಗಾಂಧಿ ಅವರನ್ನು ಬೈಯುತ್ತಲೇ, ಟೀಕಿಸುತ್ತಲೇ ಅಧಿಕಾರ ಹಿಡಿದು ಈಗ ಅವರ ಪಾದಕ್ಕೆ ಒಪ್ಪಿಸಿಕೊಂಡು ಸ್ವತಃ ಸೋನಿಯಾ ಅವರಿಗೂ ಕಿರಿಕಿರಿಯಾಗುವಷ್ಟು ಭಟ್ಟಂಗಿತನ ಪ್ರದರ್ಶಿಸುವುದಿದೆಯಲ್ಲ. ಅದು ಜನರಿಗೆ ಹಾಗೂ ಪ್ರಜಾತಂತ್ರಕ್ಕೆ ಎಸಗುವ ಅಪಚಾರವೇ ಸರಿ.

ಕಾಂಗ್ರೆಸ್‌ ಈ ದೇಶಕ್ಕೆ ಕೊಟ್ಟಿರುವ ಮಹಾನ್‌ ಕೊಡುಗೆ ಭಟ್ಟಂಗಿತನ. ಆ ಪಕ್ಷದಲ್ಲಿ ಮುಂದಕ್ಕೆ, ಮೇಲಕ್ಕೆ ಬರಬೇಕೆಂದಿದ್ದರೆ ಭಟ್ಟಂಗಿಯಾಲೇ ಬೇಕು. ದುರ್ದೈವೆಂದರೆ ಅದೊಂದು ಆಗಿದ್ದರೂ ಸಾಕು. ಈ ಒಂದು ಗುಣವಿದ್ದರೆ ಬೇರೆ ಯಾವ ಅರ್ಹತೆಗಳೂ ಬೇಕಿಲ್ಲ ಅಥವಾ ಬೇರೆ ಅರ್ಹತೆಗಳು ಕೆಲಸಕ್ಕೆ ಬರುವುದಿಲ್ಲ. ಈ ಕಲೆಯನ್ನು ಕರಗತ ಮಾಡಿಕೊಂಡು ಪಾಂಗಿತರಾಗುವವರು ಬೇಗ ಮೇಲೆ ಮೇಲಕ್ಕೆ ಹೋಗಬಹುದು. ಇದನ್ನೇ ಒಂದು ಸುಂದರ ಕಲೆ, ಅನುಭೂತಿ, ಪರಿಣತಿ ಮಾಡಿಕೊಂಡರೆ ಮುಗೀತು. ಯಶಸ್ಸು ಗ್ಯಾರೆಂಟಿ.

ಈ ಗುಣವನ್ನು ಮೈಗೂಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ನೀವು ಮೊತ್ತ ಮೊದಲು ಮರ್ಯಾದೆಯನ್ನು ಬಿಡಬೇಕಾಗುತ್ತದೆ. ಅನಂತರ ಸ್ವಾಭಿಮಾನವನ್ನು ಬಲಿಕೊಡಬೇಕಾಗುತ್ತದೆ. ಬಳಿಕ ಆತ್ಮ ಗೌರವ, ಆತ್ಮನಿಷ್ಠೆ, ಸ್ವಂತಿಕೆ , ಮಾನ, ನಾಚಿಕೆ, ತನ್ನತನವನ್ನು ಬಿಡುತ್ತಾ ಹೋಗಬೇಕಾಗುತ್ತದೆ. ಭಟ್ಟಂಗಿಗಳಾಗಿ ಮೇಲ್ದರ್ಜೆಗೆ ಹೋಗುತ್ತಾ ಹೋದಂತೆ ಈ ಎಲ್ಲವುಗಳ ಒಂದೊಂದನ್ನು ತ್ಯಜಿಸುತ್ತಾ ಕೊನೆಗೆ ನಾಯಕನ ಮುಂದೆ ಬರಿದಾಗಿ ಸಮರ್ಪಿಸಿಕೊಳ್ಳಬೇಕಾಗುತ್ತದೆ. ಆಗಲೇ ಭಟ್ಟಂಗಿತನದಲ್ಲಿ ಪರಿಪೂರ್ಣ ಪರಿಣತಿಯ ಸಾಧನೆ!

ವಿಚಾರ ಮಾಡಿ ಇದೇನು ಸಾಮಾನ್ಯತ್ಯಾಗವೇ? ಮಾನ ಮರ್ಯಾದೆಯೆಲ್ಲವನ್ನೂ ಬಿಡುವುದಿದೆಯಲ್ಲ ಅದೇನು ಸಣ್ಣ ತ್ಯಾಗವಲ್ಲ. ಇದಕ್ಕೆ ಭಾರಿ ಎದೆಗಾರಿಕೆ ಬೇಕು. ಹುಂಬತನ ಬೇಕು. ಭಂಡ ಧೈರ್ಯ ಬೇಕು. ಈ ಸಲ ಆ ವಿಷಯದಲ್ಲಿ ಕಾಂಗ್ರೆಸ್ಸಿಗರು ತಮ್ಮ ತ್ಯಾಗ ಗುಣಗಳನ್ನು ಧಾರಾಳವಾಗಿ ಮೆರೆದಿದ್ದಾರೆ. ಇದಕ್ಕಾಗಿ ಅವರು ಸಮಸ್ತ ದೇಶವಾಸಿಗಳ ಪ್ರಶಂಸೆಗೆ ಅರ್ಹರು!

ಈ ವಿಷಯದಲ್ಲಿ ಕಾಂಗ್ರೆಸ್‌ನ ಮೈತ್ರಿಕೂಟದಲ್ಲಿರುವ ಹಾಗೂ ಮಿತ್ರಪಕ್ಷಗಳಲ್ಲಿರುವ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ದ ಶರದ್‌ ಪವಾರ್‌, ಡಿಎಂಕೆಯ ಕರುಣಾನಿಧಿ, ರಾಷ್ಟ್ರೀಯ ಜನತಾ ದಳದ ಲಾಲೂ ಪ್ರಸಾದ್‌ ಯಾದವ್‌, ಲೋಕ ಜನಶಕ್ತಿ ಪಕ್ಷದ ರಾಮ್‌ ವಿಲಾಸ್‌ ಪಾಸ್ವಾನ್‌, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌ , ಬಹುಜನ ಸಮಾಜ ಪಕ್ಷದ ಮಾಯಾವತಿ, ಕಮ್ಯೂನಿಸ್ಟ್‌ ಪಕ್ಷದ ಸೀತಾರಾಂ ಯೆಚೂರಿ, ಸೋಮನಾಥ್‌ ಚಟರ್ಜಿ, ಹರಿಕಿಶನ್‌ಸಿಂಗ್‌ ಸುರ್ಜಿತ್‌, ಎ.ಬಿ. ಬರ್ಧನ್‌ ಮುಂತಾದವರ ‘ತ್ಯಾಗ’ ವನ್ನು ಮರೆಯುವಂತಿಲ್ಲ. ಈ ಎಲ್ಲ ನಾಯಕರು ಒಂದಿಲ್ಲೊಂದು ಸನ್ನಿವೇಶದಲ್ಲಿ , ಕಾಲಘಟ್ಟದಲ್ಲಿ ಸೋನಿಯಾ ಗಾಂಧಿ ಅವರನ್ನು ವಾಚಾಮಗೋಚವಾಗಿ ಉಗಿದು ಉಪ್ಪು ಹಾಕಿದವರೇ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ನಾಯಕರು ಕಕ್ಕಾಬಿಕ್ಕಿಯಾಗುವಷ್ಟು ಸೋನಿಯಾ ಮೇಲೆ ಮುಗಿಬಿದ್ದವರೇ.

ಶರದ್‌ ಪವಾರ್‌ ಅವರಂತೂ ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ದೊಡ್ಡ ರಂಪ ಮಾಡಿ, ರಚ್ಚೆಗೆ ಬಿದ್ದವರಂತೆ ಅದನ್ನೇ ದೇಶದ ಸೂರು ಹಾರಿಹೋಗುವಂತೆ ಕೂಗಾಡಿ ಕಾಂಗ್ರೆಸ್‌ ನಿಂದ ಹೊರಗೆ ಬಿದ್ದವರು. ಸೋನಿಯಾ ತೊಲಗಿದರೆ ಮಾತ್ರ ಕಾಂಗ್ರೆಸ್‌ಗೆ ಭವಿಷ್ಯವಿದೆ, ದೇಶಕ್ಕೆ ಭವಿಷ್ಯವಿದೆಯೆಂದು ಷರಾ ಬರೆದವರು. ‘ಕಾಂಗ್ರೆಸ್‌ಗೆ ಆಕೆ ಅರ್ಬುದ ರೋಗ ’ ಎಂದು ಮಣ್ಣು ಸೋಕಿ ಬಂದು ಹೊಸ ಪಕ್ಷ ಕಟ್ಟಿದವರು. ಈಗ ಸೋನಿಯಾ ಪಕ್ಕದಲ್ಲಿ ನಿಂತು ‘ಸುಭಗ ಸುಬ್ಬರಾಯ’ ನಂತೆ ಹಲ್ಲು ಗಿಂಜುತ್ತಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಶಾಪ ಹೊಡೆದು ಹೆಚ್ಚು ಸ್ಥಾನಗಳನ್ನು ಪಡೆದ ಮುಲಾಯಂ, ಸೋನಿಯಾ ಕರೆಯದಿದ್ದರೂ ಅವರ ಮನೆಯ ಜಗಲಿಯೇರಿ ಬರುತ್ತಾರೆ. ಆಕೆ ಮಹಾನ್‌ ನಾಯಕಿ ಎಂದು ತಿದಿಯೂದುತ್ತಾರೆ. ಕರುಣಾನಿಧಿ, ಲಾಲೂ, ಯಚೂರಿ, ಸುರ್ಜಿತ್‌ ಅವರಂತೂ ಸೋನಿಯಾ ಸೀರೆ ಜುಂಗು ಹಿಡಿಯಲು ಹಟಕ್ಕೆ ಬಿದ್ದವರಂತೆ ರೊಳ್ಳೆ ತೆಗೆಯುತ್ತಾರೆ. ‘ನಾನು ಒಲ್ಲೆ ’ ಎಂದು ಸೋನಿಯಾ ಹೇಳುತ್ತಿದ್ದಂತೆ, ‘ನಾನು ಆಕೆಯ ಮನವೊಲಿಸುತ್ತೇನೆ ’ ಎಂದು ಪಾಸ್ವಾನ್‌ ಗಡ್ಡ ಕೆರೆದುಕೊಳ್ಳುತ್ತಾರೆ. ಈ ಎಲ್ಲಾ ನಾಯಕರು ತಾವೇ ಕಾಂಗ್ರೆಸ್‌ ವಕ್ತಾರರಂತೆ, ಸೋನಿಯಾ ಗಾಂಧಿ ಅವರ ಮುಖವಾಣಿಯಂತೆ ಹೇಳಿಕೆ ಕೊಡುತ್ತಾರೆ. ಇವರೆಲ್ಲರಿಗೂ ಗೊತ್ತು ಈ ಸಮಯದಲ್ಲಿ ತಾವು ಹೆಚ್ಚು ಹೆಚ್ಚು ತ್ಯಾಗ ಮಾಡಿದಷ್ಟು ಸೋನಿಯಾಗೆ ಅಂದರೆ ಅಧಿಕಾರ ಕೇಂದ್ರಕ್ಕೆ ಗಟ್ಟಿಯಾಗಬಹುದು ಎಂದು. ಹೀಗಾಗಿ ಭಟ್ಟಂಗಿ ಸ್ಪರ್ಧೆಯಲ್ಲಿ ಕಾಂಗ್ರೆಸ್ಸಿಗರ ಜತೆಯಲ್ಲಿಯೇ ಪೈಪೋಟಿಗೆ ನಿಲ್ಲುತ್ತಾರೆ.

ದೇಶದ ರಾಜಕಾರಣದಲ್ಲಿ ಭಟ್ಟಂಗಿತನವನ್ನು ಒಂದು ಅರ್ಹತೆಯಾಗಿ ಜಾರಿಗೆ ತಂದ ಶ್ರೇಯಸ್ಸು ಕಾಂಗ್ರೆಸ್‌ಗೇ ಸಲ್ಲಬೇಕು. ಅದಕ್ಕಾಗಿ ನಾವೆಲ್ಲ ಆ ಪಕ್ಷಕ್ಕೆ ಋಣಿಯಾಗಿರಲೇಬೇಕು. ಜವಾಹರ್‌ ಲಾಲ್‌ ನೆಹರು ಅವರು ತಮ್ಮ ಪಕ್ಕದಲ್ಲಿ ಸದಾ ಭಟ್ಟಂಗಿಗಳ ತಂಡವನ್ನೇ ಇಟ್ಟುಕೊಂಡಿದ್ದರು. ಆದರೆ ಅವರನ್ನು ಸದಾ ಇಂಗ್ಲೀಷ್‌ನಲ್ಲಿಯೇ ಹೊಗಳಬೇಕಾಗುತ್ತಿತ್ತು. ಅವರ ಪುತ್ರಿ ಇಂದಿರಾಗಾಂಧಿ ಈ ಕಲೆಯನ್ನು ಎಲ್ಲ ಭಾಷೆಗಳಿಗೆ ವಿಸ್ತರಿಸಿದರು. ಅಷ್ಟೇ ಅಲ್ಲ ಅದಕ್ಕೊಂದು ‘ಅಖಿಲ ಭಾರತೀಯ ಮಾನ್ಯತೆ’ಯನ್ನು ತಂದುಕೊಟ್ಟರು. ಈ ಕಾರಣದಿಂದಾಗಿಯೇ ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಸಂಸ್ಕೃತಿ ಜಾರಿಯಲ್ಲಿರುವುದು. ಇಂದಿರಾಗಾಂಧಿ ಈ ವ್ಯವಸ್ಥೆಗೆ ತಾತ್ವಿಕ ಮುದ್ರೆಯಾತ್ತಿದ್ದರು. ದೇವಕಾಂತ ಬರೂವನಂಥ ಸಾಮಾನ್ಯ ವ್ಯಕ್ತಿ ‘ಇಂದಿರಾ ಅಂದ್ರೆ ಇಂಡಿಯಾ ಅಂದ್ರೆ ಇಂಡಿಯಾ’ ಎಂದು ಹೇಳುವ ಮೂಲಕ ಭಟ್ಟಂಗಿತನದ ಹೊಸ ಸಾಧ್ಯತೆಯ ರೋಚಕತೆಯನ್ನು ಮೆರೆದ. ಇಂದಿರಾ ಗಾಂಧಿ ಹೆಲಿಕಾಪ್ಟರ್‌ ಇಳಿದು ನಡೆದು ಬರುತ್ತಿದ್ದರೆ ಈ ದೇವಕಾಂತ ಬರೂವ ಆಕೆಯ ಪಾದ ಧೂಳಿಯನ್ನು ತಲೆಮೇಲೆ ಇಟ್ಟುಕೊಂಡ . ಅವನ ಭಟ್ಟಂಗಿಗಳು ಆ ಧೂಳಿಯಲ್ಲಿ ಹೊರಳಾಡಿದರು. ತಾಸುಗಟ್ಟಲೆ ಇಂದಿರಾ ಮನೆಯಲ್ಲಿ ಕುಕ್ಕರಬಡಿದಿರುತ್ತಿದ್ದ, ಆಕೆಯ ಮನೆಯಲ್ಲಿ ಜವಾನನ ಕೆಲಸವನ್ನೂ ಮಾಡುವುದರಲ್ಲಿ ಧನ್ಯತೆ ಕಂಡಿದ್ದ. ಈತನ ‘ಅರ್ಹತೆ’ಗೆ ಮೆಚ್ಚಿ ಇಂದಿರಾಗಾಂಧಿ ಸಚಿವ ಹುದ್ದೆ ಕರುಣಿಸಿದಳು. ಕೆಲ ಕಾಲ ಈತ ಕಾಂಗ್ರೆಸ್‌ ಅಧ್ಯಕ್ಷನೂ ಆಗಿದ್ದ!

ಕ್ರಮೇಣ ಈ ಭಟ್ಟಂಗಿತನ ರಾಜಕಾರಣದಲ್ಲಿ ಒಂದು ಡಿಗ್ರಿಯಾಗಿ, ಯೋಗ್ಯತೆಯಾಗಿ ಸ್ಥಾನ ಪಡೆಯಿತು. ಕಾಂಗ್ರೆಸ್‌ನ ಈ ಕೊಡುಗೆಯನ್ನು ಬೇರೆ ಪಕ್ಷಗಳೂ ಎರವಲು ಪಡೆದುಕೊಂಡವು. ಈ ಪೈಕಿ ಹೆಚ್ಚಿನ ಪಾಲು ಜಯಲಲಿತಾರ ಎಐಡಿಎಂಕೆಗೆ ಹೋಯಿತು. ಮಿಕ್ಕುಳಿದವನ್ನು ಬೇರೆ ಬೇರೆ ಪಕ್ಷಗಳು ಸಮವಾಗಿ ಹಂಚಿಕೊಂಡವು.

ತನ್ನನ್ನು ಹೊಗಳಲೆಂದೇ ಐನೂರು ಜನ ವಂಧಿಮಾಗಧರನ್ನು ನೇಮಿಸಿಕೊಂಡ ಹನ್ನೆರಡನೆ ಶತಮಾನದ ಇರಾನಿನ ಸುಲ್ತಾನ ಸುಲೈಮಾನ್‌ ಷಾನನ್ನು ನಾಚಿಸುವಂಥ ಭಟ್ಟಂಗಿಗಳು ಇರುವುದರಿಂದ ಹಾಗೂ ಅವರ ತ್ಯಾಗದ ಫಲದಿಂದ ನಾಯಕರ ಸಾಮನ್ಯ ನಡುವಳಿಕೆಗಳು ನಮಗೆ ಅದ್ಭುತವಾಗಿ ಗೋಚರಿಸುತ್ತವೆ. ಅವರು ಮಹಾತ್ಮರಂತೆ, ಹುತಾತ್ಮರಂತೆ ಕಾಣುತ್ತಾರೆ.

ಭಾರತದಲ್ಲಿ ಪ್ರಜಾ ಪ್ರಭುತ್ವ ಗಟ್ಟಿಯಾಗಿರಲು ಭಟ್ಟಂಗಿತನ ಚಿರಾಯುವಾಗಲಿ!

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X