• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಲವರು ಕಾನೂನಿಗೆ ತಲೆಬಾಗಬೇಕು, ಉಳಿದವರಿಗೆ ಕಾನೂನೇ ತಲೆಬಾಗುತ್ತದೆ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಬಹುಶಃ ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇಂಥ ಘಟನೆ ನಮ್ಮಲ್ಲಿ ಅಲ್ಲದೇ ಮತ್ತೆಲ್ಲೂ ನಡೆಯಲು ಸಾಧ್ಯವಿಲ್ಲ.

ಹಿಂದುಗಳ ಭಕ್ತಿ-ಶ್ರದ್ಧೆ ಹಾಗೂ ಧಾರ್ಮಿಕ ಕೇಂದ್ರವಾಗಿರುವ ಕಂಚಿಕಾಮಕೋಟಿ ಮಠದ ಪೀಠಾಧಿಪತಿ ಜಯೇಂದ್ರ ಸರಸ್ವತಿ ಸ್ವಾಮೀಜಿ ಕೊಲೆಗಾರರು ಎಂಬ ಅನುಮಾನವನ್ನು ಸಾರ್ವಜನಿಕರಲ್ಲಿ ಮೂಡಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಸ್ವಾಮೀಜಿ ಕೊಲೆಗಾರರು ಹೌದೋ ಅಲ್ಲವೋ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ ಬಿಡಿ. ವಿಷಯ ಅದಲ್ಲ. ಆದರೆ ಸ್ವಾಮೀಜಿಯವರನ್ನು ಇಂಥ ಪ್ರಶ್ನೆಗಳ ಕೂಪಕ್ಕೆ ತಳ್ಳಿದ್ದೇವಲ್ಲ ಹಾಗೂ ಅವರೇ ಕೊಲೆಗಾರರು ಎಂಬಂತೆ ನಡೆಸಿಕೊಳ್ಳಲಾಗುತ್ತಿದೆಯಲ್ಲ ಅದು ಮುಖ್ಯವಿಷಯ.

Kanch seers arrest : A study in contrastಹೇಳಿ, ಬಹುಸಂಖ್ಯಾತರಿರುವ ದೇಶದಲ್ಲಿ ಬಹುಸಂಖ್ಯಾತ ಸಮಾಜದ ಧರ್ಮಗುರುವನ್ನು ಹೀನಾಯವಾಗಿ ನಡೆಸಿಕೊಳ್ಳುವ ಕೆಟ್ಟ ಸಂಪ್ರದಾಯ ನಮ್ಮಲ್ಲಲ್ಲದೇ ಬೇರೆಲ್ಲಿ ಕಾಣಲು ಸಾಧ್ಯ ?

ಭರತವರ್ಷದಲ್ಲಿ ಸಾಕ್ಷಾತ್‌ ಶಂಕರಾಚಾರ್ಯರಿಂದ ಸ್ಥಾಪಿತವಾದ ಕಂಚಿಕಾಮಕೋಟಿ ಮಠದ ಸ್ವಾಮೀಜಿಯವರನ್ನು ರಾತ್ರೋರಾತ್ರಿ ಬಂಧಿಸಿದ್ದು, ಅದೂ ದೀಪಾವಳಿಯ ದಿನವೇ ಪೂಜೆ ನಿರತವಾಗಿದ್ದಾಗಲೇ ಎಬ್ಬಿಸಿಕೊಂಡು ಮಧ್ಯರಾತ್ರಿ ನೂರಾರು ಮೈಲು ಪ್ರಯಾಣ ಮಾಡಿಸಿಕೊಂಡು ಕರೆದುಕೊಂಡು ಹೋಗಿದ್ದು, ಒಬ್ಬ ಯಕಃಶ್ಚಿತ ಕೈದಿಯಂತೆ ಜೈಲಿನಲ್ಲಿಟ್ಟುರುವುದು, ಗೃಹಬಂಧನದ ಕೋರಿಕೆಯನ್ನು ತಳ್ಳಿಹಾಕಿ ಸಾಮಾನ್ಯ ಕೈದಿಯಂತೆ ನಡೆಸಿಕೊಂಡಿರುವುದು, ದ್ರಾವಿಡ ಪಕ್ಷಗಳು ಈ ಎಲ್ಲ ಘಟನಾವಳಿತಗಳಿಗೆ ವಿಜಯೋತ್ಸವ ಆಚರಿಸುತ್ತಿರುವುದು..... ಇವೆಲ್ಲ ವ್ಯವಸ್ಥಿತ ಹೂಟದಂತೆ ಕಾಣುತ್ತವೆ. ಒಬ್ಬ ಹಿರಿಯ, ಗೌರವಾನ್ವಿತ, ಪ್ರಮುಖ ಮಠವೊಂದರ ಪೀಠಾಧಿಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಅನುಸರಿಸಬೇಕಾದ ಸರಳ ಸಾಮಾನ್ಯ ಸಜ್ಜನಿಕೆಯನ್ನೂ ಪ್ರದರ್ಶಿಸದಿರುವುದು ನೋವಿನ ಸಂಗತಿ. ಇಡೀ ಪ್ರಕರಣದಲ್ಲಿ ಬೇಸರದ ಸಂಗತಿಯೂ ಅದೇ.

ಈ ದೇಶದಲ್ಲಿ ಯಾರ್ಯಾರೋ ಏನೇನೋ ಆಗಿ ಹೋಗಿದ್ದಾರೆ. ಹಾಡಹಗಲೇ ಮಚ್ಚು ಹಿಡಿದು ಸಾವಿರಾರು ಜನರ ಎದುರೇ ಕೊಲೆ ಮಾಡಿ, ಸುಮ್ಮನೆ ನಿಟ್ಟುಸಿರುಬಿಟ್ಟು ಕೈತೊಳೆದು ಊಟ ಮಾಡಿ ಎದ್ದು ಹೋದವರಿದ್ದಾರೆ. ಅವರ ಜಾತಿ, ಧರ್ಮ ನೋಡಿ ಸರಕಾರ ಅಸಹಾಯಕವಾಗಿ ಸುಮ್ಮನೆ ಕುಳಿತುಕೊಳ್ಳುತ್ತದೆ. ಬಹುಕೋಟಿ ನಕಲಿ ಛಾಪಾ ಕಾಗದ ಕರ್ಮಕಾಂಡದ ಮುಖ್ಯ ರೂವಾರಿ ಕರೀಂಲಾಲಾ ತೆಲಗಿಯಂಥ ಕ್ರಿಮಿನಲ್‌ನನ್ನು ಬಂಧನದಲ್ಲಿಟ್ಟರೂ ಆತ ಐಷಾರಾಮವಾಗಿ ಪಂಚತಾರಾ ಹೋಟೆಲ್‌ನ ಭಕ್ಷ್ಯಗಳನ್ನು ಸೇವಿಸುತ್ತಾನೆ, ಮೊಬೈಲ್‌ ಫೋನಿನಿಂದಲೇ ತನ್ನೆಲ್ಲ ಕಾರ್ಯಾಚರಣೆಗಳನ್ನು ನೆರವೇರಿಸಿಕೊಳ್ಳುತ್ತಾನೆ. ಆತ ಹೀಗೆಲ್ಲ ಮಾಡುತ್ತಿದ್ದಾನೆಂಬುದು ನಮ್ಮ ಸರಕಾರಕ್ಕೆ ಗೊತ್ತಿರುತ್ತದೆ. ಸರಕಾರಕ್ಕೆ, ಮಂತ್ರಿಗಳಿಗೆ, ಅಧಿಕಾರಿಗಳಿಗೆ ತಿಳಿಸಿಯೇ ಆತ ಈ ಎಲ್ಲ ಕಾರ್ಯಗಳನ್ನು ಈಡೇರಿಸಿಕೊಳ್ಳುತ್ತಾನೆ. ಪಕ್ಕಾ ಕ್ರಿಮಿನಲ್‌ನ ಕೂದಲು ಸಹ ಕೊಂಕುವುದಿಲ್ಲ.

ಕೇರಳದ ಕೈಗಾರಿಕಾ ಸಚಿವ ಕುಂಞಯಾಲ ಕುಟ್ಟಿಯ ಪ್ರಕರಣ ಗಮನಿಸಿ. ಈತ ಸೆಕ್ಸ್‌ ಕರ್ಮಕಾಂಡದಕಲ್ಲಿ ಪಾಲ್ಗೊಂಡಿರುವ ಬಗ್ಗೆ ಅನುಮಾನಗಳೇ ಇಲ್ಲ. ನೂರಾರು ಸಾಕ್ಷ್ಯಗಳಿಂದ ಅವನ ಅಪರಾಧ ಸಾಬೀತಾಗಿದೆ. ಆತನ ಹೇಯ ಕೃತ್ಯಗಳನ್ನು ಗಮನಿಸಿದ ಯಾವುದೇ ಸಮಾಜವಾದರೂ ಅವನನ್ನು ಒಂದು ಕ್ಷಣವಾದರೂ ಮಂತ್ರಿ ಎಂದು ಇಟ್ಟುಕೊಳ್ಳುವುದಿಲ್ಲ. ಅವನ ಅಪರಾಧಗಳಿಗೆ ತೀರ್ಪು ನೀಡಲು ಯಾವ ಕೋರ್ಟ್‌ ಕೂಡ ಬೇಕಾಗಿಲ್ಲ. ಆದರೆ ಈ ಮಂತ್ರಿಯನ್ನು ಯಾರೂ ಮುಟ್ಟಿಲ್ಲ. ಇಲ್ಲಿಯತನಕ ಆತನನ್ನು ಅಧಿಕಾರದಿಂದ ಕೆಳಗಿಳಿಸಲು ಆಗಿಲ್ಲ. ಈತನ ವಿರುದ್ಧ ಮಾತೃಭೂಮಿ ಪತ್ರಿಕೆ ನಿರಂತರವಾಗಿ ಬರೆದರೆ ಆ ಪತ್ರಿಕೆಯ ವರದಿಗಾರ ಹಲ್ಲೆಗೊಳಗಾಗುತ್ತಾನೆ. ಛಾಯಾಗ್ರಹಕನನ್ನು ಅಟ್ಟಿಸಿಕೊಂಡು ಹೋಗಿ ಬಡಿಯುತ್ತಾರೆ. ಈ ಮಂತ್ರಿಯ ರಾಜೀನಾಮೆ ಕೇಳಲು ಮುಖ್ಯಮಂತ್ರಿ ಬಾಯಿಂದ ಮಾತೇ ಹೊರಡುವುದಿಲ್ಲ. ಏನೇ ಆಗಲಿ ಈತನನ್ನು ರಕ್ಷಿಸಲೇಬೇಕು, ಈತನ ವಿರುದ್ಧ ಕೈಗೊಳ್ಳುವ ಸಣ್ಣ ಕ್ರಮ ಕೂಡ ನಮ್ಮ ಪ್ರತಿಷ್ಠೆಗೆ ಧಕ್ಕೆ ಎಂದು ಮುಸ್ಲಿಂ ಲೀಗ್‌ ನಿರ್ಧರಿಸಿಬಿಟ್ಟಿದೆ. ಹೀಗಾಗಿ ಏನೇ ಬೊಂಬಡ ಬಜಾಯಿಸಿದರೂ ಏನೂ ಆಗುತ್ತಿಲ್ಲ. ಕುಟ್ಟಿಯ ತಲೆ ಮೇಲೆ ಕುಟ್ಟುವವರು ಯಾರೂ ಇಲ್ಲ. ಇದ್ಯಾವ ನ್ಯಾಯ? ಇದೆಲ್ಲಿಯ ಪ್ರಜಾಸತ್ತೆ?

Kanch seers arrest : A study in contrastಕಂಚಿ ಸ್ವಾಮೀಜಿಯವರ ಬಂಧನದ ಹಿನ್ನೆಲೆಯಲ್ಲಿ , ‘ಎಲ್ಲರೂ ಕಾನೂನಿನ ಮುಂದೆ ತಲೆಬಾಗಲೇಬೇಕು. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅದೆಷ್ಟೇ ಉನ್ನತ ವ್ಯಕ್ತಿಯಾದರೂ ಕಾನೂನಿನ ಮುಂದೆ ಕೈಕಟ್ಟಿಕೂರಲೇಬೇಕು’ ಎಂಬ ಮಾತು ಕೇಳಿ ಬರುತ್ತಿದೆ. ತಪ್ಪಿಲ್ಲ ಬಿಡಿ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಎದ್ದು ನಿಂತರೆ ಉಳಿದವರೆಲ್ಲ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಲೇಬೇಕು. ಆದರೆ ಈ ಕಾನೂನು ಎಲ್ಲರಿಗೂ ಅನ್ವಯವಾಗಬೇಕು. ನಮ್ಮಲ್ಲಿ ಆಗುತ್ತಿರುವುದೇನು? ಜಾಮಾ ಮಸೀದಿಯ ಇಮಾಮ್‌ ವಿರುದ್ಧ ಅರ್ಧ ಡಜನ್‌ ಸಮನ್ಸ್‌ ಹೊರಡಿಸಿದರೂ ಅವರು ಕೋರ್ಟ್‌ ಮುಂದೆ ಹಾಜರಾಗುವುದಿಲ್ಲ. ಅವರ ಬಂಧನಕ್ಕೆ ವಾರಂಟು ಹೊರಡಿಸಿದರೂ ಅದು ಜಾರಿಯಾಗುವುದಿಲ್ಲ. ಅದನ್ನೇಕೆ ಜಾರಿಗೊಳಿಸಿಲ್ಲವೆಂದು ಯಾರೂ ಕೇಳುವುದಿಲ್ಲ. ಕೇಳಿದರೂ ಪ್ರಯೋಜನವಾಗುವುದಿಲ್ಲ. ಕಾರಣ ಕಾನೂನಿನ ಮುಂದೆ ಎಲ್ಲರೂ ತಲೆಬಾಗಲೇಬೇಕೆಂಬ ಕಾನೂನೇ ತಲೆಬಾಗಿಬಿಡುತ್ತದೆ. ಪಾರ್ಲಿಮೆಂಟ್‌ ಭವನದ ಮೇಲೆ ಬಾಂಬ್‌ ದಾಳಿ ಮಾಡಿದ ಪಾತಕಿಗಳು ಯಾರೆಂಬುದು ಗೊತ್ತಿದೆ. ಸರಕಾರಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿವೆ. ಟೆಲಿಫೋನ್‌ ಸಂಭಾಷಣೆಯ ಧ್ವನಿಮುದ್ರಿಕೆಗಳು ದೊರೆತಿವೆ. ಆದರೆ ಈ ಘಟನೆಯಲ್ಲಿ ಭಾಗಿಯಾಗಿರುವವರು ಯಾರೆಂಬುದು ಗೊತ್ತಿರುವುದರಿಂದ, ಈ ಪ್ರಕರಣದಲ್ಲಿ ಕೂಡ ಕಾನೂನೇ ತಲೆಬಾಗಿಬಿಟ್ಟಿದೆ.

ಲಾಲು ಪ್ರಸಾದ್‌ಯಾದವನನ್ನೇ ತೆಗೆದುಕೊಳ್ಳಿ. ಕಳೆದ ಹದಿನೈದು ವರ್ಷಗಳಲ್ಲಿ ಬಿಹಾರವನ್ನು ಬೆಂಗಾಡನ್ನಾಗಿ ಮಾಡಿದ ಕೀರ್ತಿ ಅವನಿಗೇ ಸಲ್ಲಬೇಕು. ದನಗಳು ತಿನ್ನುವ ಮೇವನ್ನೂ ಲಾಲು ಬಿಟ್ಟವನಲ್ಲ. ಇವನು ಮೇವಿನಲ್ಲಿ ಸಹ- ಸತ್ಯ ಮೇವು ಜಯತೆ-ಕಂಡವ. ಮನುಷ್ಯರ ಆಹಾರಕ್ಕೆ ಕೈಯಿಟ್ಟರೆ ಎಲ್ಲರಿಗೂ ಗೊತ್ತಾದೀತೆಂದು ಮೂಕಪ್ರಾಣಿಗಳ ಮೇವಿಗೆ ಬಾಯಿ ಹಾಕಿದವ. ಸೇವಿಸುವಾಗ ಗೊತ್ತಾಗಲಿಲ್ಲ. ಮೇವಿಗಾಗಿಟ್ಟ ಹಣ ಖರ್ಚಾದಾಗ ಗೊತ್ತಾಯಿತು. ಆದರೆ ಏನೂ ಆಗಲಿಲ್ಲ. ಈಗ ಗೊತ್ತಾಗಿದೆ ಏನೂ ಆಗುವುದಿಲ್ಲ ಎಂದು. ಈತನನ್ನು ಜೈಲಿಗೆ ಹಾಕಿ ಎಂದು ಕೋರ್ಟ್‌ ಆದೇಶಿಸಿತು. ಖುಷಿಖುಷಿಯಿಂದ ಜೈಲಿಗೆ ಹೋಗಿ ಬಂದ. ಆ ಜೈಲಾದರೂ ಹೇಗಿತ್ತು ಅಂತೀರಿ, ಭವ್ಯಬಂಗಲೆ! ಅಲ್ಲಿ ಸಕಲ ಸವಲತ್ತುಗಳಿದ್ದವು, ಸೌಕರ್ಯಗಳಿದ್ದವು. ದೇಖರೇಖಗಳನ್ನು ನೋಡಿಕೊಳ್ಳಲು ಆಳುಕಾಳುಗಳಿದ್ದರು. ಇಡೀ ಜೈಲು ಹವಾನಿಯಂತ್ರಿತವಾಗಿತ್ತು. ಪ್ರತಿದಿನ ಮನೆಯಿಂದ ಊಟ ಬರುತ್ತಿತ್ತು. ಖಾಸಾ ಹೆಂಡತಿ ಅರ್ಥಾತ್‌ ರಾಜ್ಯದ ಮುಖ್ಯಮಂತ್ರಿ ರಾಬ್ಡಿದೇವಿ ಊಟ ಸಿದ್ಧಪಡಿಸಿ ಗಂಡನಿಗೆಂದು ಊಟ ಕಟ್ಟಿಕೊಂಡು ಬಂದು ಅಕ್ಕರೆಯಿಂದ ಬಡಿಸಿ ಹೋಗುತ್ತಿದ್ದಳು. ಜೈಲಿನಲ್ಲಿ ಮೂರು ಹೊತ್ತು ಗಂಡನ ಸೇವೆಗೆ ಆಕೆ ನಿಂತಿದ್ದರೆ ಕಾನೂನು ತಲೆಬಾಗಿ ನಿಂತಿತ್ತು. ಆತನಿಗೆ ಅದೆಂಥ ರೊಚ್ಚಿತ್ತೆಂದರೆ ತನ್ನ ಮನೆಯಲ್ಲಿದ್ದ ಎಲ್ಲ ವ್ಯವಸ್ಥೆಯನ್ನೂ ಜೈಲಿಗೆ ವರ್ಗಾಯಿಸಿಕೊಂಡು ಬಂಗಲೆಯಾಗಿ ಮಾರ್ಪಡಿಸಿಕೊಂಡಿದ್ದ. ಈ ಜೈಲಿಗೆ ಯಾರು ಬೇಕಾದರೂ ಬಂದು ಹೋಗಬಹುದಿತ್ತು. ಅಧಿಕಾರಿಗಳನ್ನು ಜೈಲಿಗೇ ಕರೆಯಿಸಿಕೊಂಡು ಆದೇಶ ನೀಡುತ್ತಿದ್ದ. ಕಾನೂನು ಕೈಕಟ್ಟಿ ಕುಳಿತಿತ್ತು. ತನ್ನ ಆದಾಯಕ್ಕಿಂತ ಸಾವಿರಾರು ಪಟ್ಟು ಹೆಚ್ಚಿನ ಆದಾಯ ಹೊಂದಿದ್ದ ಲಾಲು ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಇನ್‌ಕಮ್‌ಟ್ಯಾಕ್ಸ್‌ ಇಲಾಖೆ ಅಧಿಕಾರಿಗಳಿಗೆ ಸುಮ್ಮನಿರುವಂತೆ ಸೂಚನೆ ನೀಡಲಾಯಿತು.

ಜಯೇಂದ್ರ ಸರಸ್ವತಿಯವರು ನೇಪಾಳಕ್ಕೆ ಓಡಿಹೋಗುವ ತರಾತುರಿಯಲ್ಲಿದ್ದುದರಿಂದ ಅವರನ್ನು ಏಕಾಏಕಿ ಬಂಧಿಸಲಾಯಿತೆಂದು ತಮಿಳುನಾಡು ಪೊಲೀಸರು ಹೇಳುತ್ತಾರೆ. ವಯೋವೃದ್ಧ, ಅನಾರೋಗ್ಯ ಪೀಡಿತ ಸ್ವಾಮೀಜಿ ವಿರುದ್ಧ ಕೊಲೆ ಆರೋಪ ಹೊರಿಸಿ ಅವರು ವಿದೇಶಕ್ಕೆ ಪಲಾಯನಗೈಯಲು ಸಿದ್ಧತೆ ನಡೆಸಿದ್ದರೆಂದರೆ ಅದನ್ನು ನಂಬುವುದಾದರೂ ಹೇಗೆ? ಸ್ವಾಮೀಜಿಯವರೇನು ದಾವೂದ್‌ ಇಬ್ರಾಹಿಮ್ಮಾ? ಅಬು ಸಲೇಮಾ? ಟೈಗರ್‌ ಮೆಮನ್ನಾ? ಹೀನಾತಿಹೀನ ಅಪರಾಧಗೈದ ದಾವೂದ್‌ನನ್ನು ಹಿಡಿಯದೇ ವಿದೇಶಕ್ಕೆ ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟವರು ನಾವು. ಆತ ಯಾವ ದೇಶದಲ್ಲಿ , ಯಾವ ಊರಿನಲ್ಲಿ , ಯಾರ ರಕ್ಷಣೆಯಲ್ಲಿದ್ದಾನೆಂಬುದು ಗೊತ್ತಿದ್ದೂ , ಅವನನ್ನು ಹಿಡಿಯಲು ಪ್ರಯತ್ನಿಸದವರು ನಾವು. ಅದಕ್ಕಿಂತ ಮುಖ್ಯವಾಗಿ ನಿರಾತಂಕವಾಗಿ ನಮ್ಮ ದೇಶದ ವಿರುದ್ಧವೇ ಆತ ಸಂಚು ರೂಪಿಸುತ್ತಿದ್ದರೆ ಅವನಿಗೆ ಅವಕಾಶ ಮಾಡಿಕೊಟ್ಟವರು ನಾವು. ಮುಂಬೈ ಸರಣಿ ಬಾಂಬ್‌ ಸ್ಫೋಟವಾಗಿ ಹತ್ತು ವರ್ಷಗಳಾದರೂ ಆ ಘಟನೆಯ ರೂವಾರಿ ದಾವೂದ್‌ ಎಲ್ಲಿದ್ದಾನೆಂಬುದು ಗೊತ್ತಿದ್ದರೂ ಹಿಡಿಯಲು ಆಗದೇ, ಅಥವಾ ಹಿಡಿಯಲೇಬಾರದೆಂದು ತೀರ್ಮಾನಿಸಿ ಕುಳಿತವರು ನಾವು. ಭಾರತದ ವಿರುದ್ಧ ಸದಾ ಕಾರ್ಯಪ್ರವೃತ್ತರಾಗಿರುವ ದೇಶವಿರೋಧಿ ಶಕ್ತಿಗಳನ್ನು ಅವರ ಪಾಡಿಗೆ ಬಿಟ್ಟರೆ ನಮಗೇನೂ ಅನಿಸುವುದಿಲ್ಲ. ಜೀವನದಲ್ಲಿ ಎಂದಿಗೂ ವಿದೇಶ ಪ್ರವಾಸ ಮಾಡದ, ವಿದೇಶ ಪ್ರಮಾಣ ಧಾರ್ಮಿಕವಾಗಿ ವರ್ಜ್ಯವೆಂದು ಭಾವಿಸಿರುವ ಜಯೇಂದ್ರರು ಅನ್ಯರ ಸಹಾಯವಿಲ್ಲದೇ ನಾಲ್ಕು ಮಾರು ದೂರ ಸಹ ಹೋಗುವಂಥ ಸ್ಥಿತಿಯಲ್ಲಿ ಇಲ್ಲ. ಅಂಥವರು ವಿದೇಶಕ್ಕೆ ಓಡಿಹೋಗಬೇಕೆಂದು ಬಯಸಿದ್ದರೆಂದರೆ ಅದನ್ನು ಹೇಗೆ ಸಹಿಸಿಕೊಳ್ಳುವುದು?

ಜಯೇಂದ್ರರ ವಿರುದ್ಧ ಡಿಎಂಕೆ ಕಳೆದ 30 ವರ್ಷಗಳಿಂದ ನಿಂದನೆ, ಟೀಕೆ, ಮೂದಲಿಕೆಯನ್ನು ಜಾರಿಯಲ್ಲಿಟ್ಟುಕೊಂಡಿದೆ. 1971ರಲ್ಲಿ ಜಯೇಂದ್ರರು ಚೆನ್ನೈನ ಸಯೀದಪೇಟೆಯಲ್ಲಿ ಹೋಗುತ್ತಿದ್ದಾಗ ಕರುಣಾನಿಧಿಯವರ ಆದೇಶದ ಮೇರೆಗೆ ಡಿಎಂಕೆ ಕಾರ್ಯಕರ್ತರು ಕಲ್ಲೆಸೆದಿದ್ದನ್ನು, ಸಗಣಿ ಎರಚಿದ್ದನ್ನು ಯಾರೂ ಮರೆಯಲಿಕ್ಕಿಲ್ಲ. ಅಂದಿನಿಂದ ಇಲ್ಲಿಯವರೆಗೆ ಕಂಚಿಮಠಕ್ಕೆ ಕಳಂಕ ತರುವ ಯಾವ ಅವಕಾಶವನ್ನೂ ಡಿಎಂಕೆ ಬಿಟ್ಟಿಲ್ಲ. ಚುನಾವಣೆಗೆ ಮೊದಲು ಜಯಲಲಿತಾ, ಸ್ವಾಮೀಜಿ ಸೂಚನೆ ಮೇರೆಗೆ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದಿದ್ದಾಗಿ ಕರುಣಾನಿಧಿ ಹುಯಿಲೆಬ್ಬಿಸಿದ್ದರು. ಚುನಾವಣೆಯ ನಂತರ ಜಯಲಲಿತಾ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸಿದರು. ಅಲ್ಪ ಸಂಖ್ಯಾತರ ಮತಗಳಿಲ್ಲದೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾನು ಧೂಳೀಪಟವಾಗಬಹುದೆಂಬ ಭೀತಿ ಜಯಲಲಿತಾರನ್ನು ಆವರಿಸಿದೆ. ಕೊಲೆ ಪ್ರಕರಣದಲ್ಲಿ ಜಯಲಲಿತಾರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಕರುಣಾನಿಧಿ ಉದ್ದೇಶವಿರಬೇಕು. ಜಯೇಂದ್ರರನ್ನು ಬಂಧಿಸದಿದ್ದರೆ ಜಯಲಲಿತಾಗೆ ಸನಾತನಿ ಪಟ್ಟ ಕಟ್ಟಿ ದ್ರಾವಿಡ ಹೋರಾಟ ಪುನಾರಂಭಿಸುವುದು ಅವರ ಗುರಿಯಾಗಿತ್ತು. ಒಮ್ಮೆ ಜಯಲಲಿತಾ ಸ್ವಾಮೀಜಿಯವರನ್ನು ಬಂಧಿಸಿದರೆ ಹಿಂದು ಮತಗಳು ಕೈತಪ್ಪಿಹೋಗುತ್ತದೆಂಬುದು ಕರುಣಾನಿಧಿ ಲೆಕ್ಕಾಚಾರ. ಈ ಎರಡೂ ಸಂದರ್ಭಗಳಲ್ಲಿ ಕರುಣಾನಿಧಿಗೇ ಲಾಭ. ವೀರಪ್ಪನ್‌ ಹತ್ಯೆಬಳಿಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜಯಲಲಿತಾ ಜನಪ್ರಿಯತೆ ಡಿಎಂಕೆಯನ್ನು ಕಂಗೆಡಿಸಿತ್ತು. ಹೊಸ ರಾಜ್ಯಪಾಲರ ನೇಮಕದಿಂದ ಏನಾದರೊಂದು ನೆಪದಲ್ಲಿ ತನ್ನನ್ನು ವಜಾ ಮಾಡಬಹುದೆಂಬ ನಡುಕ ಜಯಲಲಿತಾರನ್ನು ಕಾಡುತ್ತಿರುವುದರಿಂದ ಕರುಣಾನಿಧಿಯವರನ್ನು ಬೀದಿಗಿಳಿಯಲು ಬಿಡದೇ, ತಾನೇ ದ್ರಾವಿಡ ನಾಯಕಿಯಾಗುವ ಹಂಬಲದಿಂದ ಜಯೇಂದ್ರರನ್ನು ಬಂಧಿಸಲು ಮುಂದಾಗಿದ್ದಾರೆ. ತಮಿಳುನಾಡಿನ ಸದ್ಯದ ರಾಜಕೀಯವನ್ನು ಗಮನಿಸಿದರೆ ಇದು ನಿಜವೆನಿಸುತ್ತದೆ.

ಈ ದ್ರಾವಿಡ ಪ್ರಾಣಾಯಾಮದಲ್ಲಿ ನಿಜಕ್ಕೂ ಬಲಿಪಶುವಾಗಿರುವುದು ಮಾತ್ರ ಹಿಂದೂ ಧರ್ಮ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ದೊಡ್ಡವರ ಮುಂದೆ ಯಾವ ಕಾನೂನೂ ಇಲ್ಲ. ಈಗ ಹೇಳಿ, ಬಹುಸಂಖ್ಯಾತರೇ ಹೆಚ್ಚಿರುವ ಈ ದೇಶದಲ್ಲಿ ಅವರೆಷ್ಟು ಸುರಕ್ಷಿತರು?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more