• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಗಳ ಮಡಿಲು ತುಂಬಲು ಅಮ್ಮನೇ ‘ಬಾಡಿಗೆ ತಾಯಿ’ಯಾದಳು !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಬಾಡಿಗೆಗೆ ತಾಯಂದಿರು ಸಿಗುತ್ತಾರೆ ! ಆಶ್ಚರ್ಯಪಡಬೇಕಿಲ್ಲ .

ತಾಯಂದಿರು ಮಾತ್ರ ಅಲ್ಲ ಅಜ್ಜಿಯಂದಿರೂ ಸಿಗುತ್ತಾರೆ ಗೊತ್ತಾ ಎಂದು ಕೇಳುವ ಕಾಲವಿದು. ಕೆಲ ತಿಂಗಳುಗಳ ಹಿಂದೆ ಹಾಗೆಯೇ ಆಯಿತು. ಗುಜರಾತಿನ ಗಾಂಧಿನಗರ ನಿವಾಸಿಗಳಾದ ಧರತಿ ಹಾಗೂ ಆಕಾಶ್‌ ಐದು ವರ್ಷಗಳ ಹಿಂದೆ ಲಂಡನ್‌ಗೆ ಹೋಗಿ ನೆಲೆಸಿದರು. ಧರತಿಯ ತಂದೆ-ತಾಯಿಗಳು ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿ ಸ್ವಿಜರ್‌ಲ್ಯಾಂಡ್‌ಗೆ ಮಧುಚಂದ್ರಕ್ಕೆ ಕಳುಹಿಸಿದ್ದರು. ಮಗಳ ಮೇಲೆ ವಿಚಿತ್ರ ಮೋಹ, ಪ್ರೀತಿ. ಕಂಪ್ಯೂಟರ್‌ ಎಂಜಿನಿಯರ್‌ ಆಕಾಶ್‌ ಪಟೇಲ್‌ಗೆ ಲಂಡನ್‌ನಲ್ಲಿ ಕೈತುಂಬಾ ಹಣದ ನೌಕರಿ. ಮದುವೆಯಾಗಿ ನಾಲ್ಕು ತಿಂಗಳ ಬಳಿಕ ಧರತಿಯನ್ನು ನೋಡಲು ತಾಯಿ ರೇಖಾಬೆನ್‌ ಲಂಡನ್‌ಗೆ ಹೋದಳು. ಆಗತಾನೆ ಮದುವೆಯಾದ ಮಗಳ ಹೊಟ್ಟೆಯನ್ನು ನೇವರಿಸುತ್ತಾ ‘ಏನಾದರೂ ವಿಶೇಷ ಇದೆಯಾ?’ ಅಂತ ಕೇಳಿದ್ದಕ್ಕೆ ಧರತಿ ಸಂಕೋಚದಿಂದ ‘ಏನೂ ಇಲ್ಲ ಅಂಥದ್ದು’ ಎಂದು ಹೇಳಿದ್ದಳು.

ಮದುವೆಯಾಗಿ ಒಂದು ವರ್ಷ ಆಯಿತು. ಆದರೆ ಧರತಿಯ ಒಡಲು ತುಂಬಲಿಲ್ಲ . ರೇಖಾಬೆನ್‌ಳಿಂದ ಒಂದೆ ಸಮನೆ ಒತ್ತಾಯ ‘ಯಾವಾಗ ನಾನು ಅಜ್ಜಿಯಾಗೋದು?’. ಅಳಿಯ ಆಕಾಶ್‌ ಪಟೇಲ್‌ ಆರಂಭದಲ್ಲಿ ತಮಾಷೆಯಿಂದಲೇ ಅತ್ತೆಗೆ ಹಾರಿಕೆ ಉತ್ತರ ಕೊಟ್ಟ . ಅವನ ಅಪ್ಪ-ಅಮ್ಮನ ಕಡೆಯಿಂದಲೂ ‘ಏನಾದರೂ ವಿಶೇಷ ಇದೆಯಾ?’ ಎಂಬ ಕುತೂಹಲದ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ . ಅತ್ತೆ, ಮಾವ, ಅಮ್ಮ, ಅಪ್ಪನ ವರಾತ ನಿಧಾನವಾಗಿ ಜಾಸ್ತಿಯಾಗಲಾರಂಭಿಸಿತು.

ಕಂಡ ಕಂಡ ದೇವರಿಗೆ ಅತ್ತೆ ಪೂಜೆ ಕೊಡಲಾರಂಭಿಸಿದಳು. ನಾಟಿ ಔಷಧ, ಬೇರು ಬೊಗಟೆಗಳನ್ನು ಮಗಳಿಗೆ ಕಳುಹಿಸಿದಳು. ಅವಳು ಲಂಡನ್‌ನಿಂದ ತವರಿಗೆ ಬಂದಾಗ ಕೆಲವು ವೈದ್ಯರಿಗೂ ತೋರಿಸಿದಳು. ಅವರು ಹೇಳಿದ ಔಷಧ ಪ್ರಯೋಗವೂ ಆಯಿತು. ಧರತಿ ಗರ್ಭವತಿಯಾಗಲಿಲ್ಲ .

Tale of a surrogate motherನಾಲ್ಕು ವರ್ಷಗಳ ನಂತರ ಲಂಡನ್‌ನ ವೈದ್ಯರೊಬ್ಬರು ‘ಧರತಿಯ ಗರ್ಭಕೋಶದಲ್ಲಿ ತೊಂದರೆಯಿರುವುದರಿಂದ ಆಕೆ ತಾಯಿಯಾಗಲು ಸಾಧ್ಯವಿಲ್ಲ’ ಎಂದಾಗ ಎರಡೂ ಕುಟುಂಬಗಳಲ್ಲಿ ಆತಂಕ ದಿಗಿಲು ದಿಮ್ಮಿಯಾಗಿತ್ತು . ಮುದ್ದಿನ ಮಗಳು ಬಂಜೆಯೆಂಬ ಮಾತು ಕೇಳಿ ತಾಯಿ ರೇಖಾಬೆನ್‌ ಕುಸಿದುಹೋದಳು. ಮಗಳ ಬಾಳು ತಾಳಪಾಟಾದರೆ ಗತಿಯೇನು, ಅಳಿಯ ಮತ್ತೊಂದು ಮದುವೆಗೆ ಯೋಚಿಸಿದರೇನು ಮಾಡುವುದು. ಧರತಿಯ ಮುಂದಿನ ಜೀವನ ಎಂತು.... ಎಂದು ರೇಖಾಬೆನ್‌ ಚಿಂತೆಗೆ ಬಿದ್ದಳು. ಎಷ್ಟೇ ಖರ್ಚಾದರೂ ಸರಿ, ಮಗಳ ಹೊಟ್ಟೆಯಲ್ಲಿ ‘ಹೂವು’ ಅರಳಬೇಕು. ಅದಕ್ಕೆ ಏನಾದರೂ ಸೈ ಎಂದು ನಿರ್ಧರಿಸಿದ ಆಕೆ, ಅಳಿಯನೊಂದಿಗೆ ಈ ವಿಷಯ ಚರ್ಚಿಸಿದಳು. ಅಷ್ಟೇ ಅಲ್ಲ , ಭಾರತದಲ್ಲಿನ ಪ್ರಖ್ಯಾತ ಬಂಜೆತನ ನಿರ್ಮೂಲನ ಪರಿಣತ ವೈದ್ಯರನ್ನು ಭೇಟಿಯಾದಳು.

ಗಾಂಧಿನಗರದ ವೈದ್ಯರೊಬ್ಬರು ಮುಂಬೈ ಆಸ್ಪತ್ರೆಯಾಂದರ ವಿಳಾಸ ಕೊಟ್ಟರು. ರೇಖಾಬೆನ್‌ ಮಗಳು ಅಳಿಯನೊಂದಿಗೆ ಅಲ್ಲಿಗೆ ಹೋದಾಗ, ‘ಧರತಿ ತಾಯಿಯಾಗುವುದು ಕಷ್ಟವೇನಲ್ಲ . ಆಕೆ ಹಡೆಯದೇ ತಾಯಿಯಾಗಬಹುದು. ಆದರೆ ಆಕೆಯ ಗರ್ಭವನ್ನು ಹೊರುವ ಮತ್ತೊಬ್ಬ ಹೆಂಗಸು ಬೇಕು ಅಷ್ಟೇ. ಅಂಥ ಹೆಂಗಸು ಸಿಕ್ಕರೆ ಹೇಳಿ ಧರತಿಯನ್ನು ತಾಯಿಯಾಗಿ ಮಾಡಬಹುದು’ ಎಂದು ವೈದ್ಯರು ಹೇಳಿದಾಗ ಇವರಿಗೆ ಏನೂ ಅರ್ಥವಾಗಲಿಲ್ಲ . ಕಣಿ ಕೇಳುವವನ ಮುಂದೆ ಗೋಣು ಹಾಕುವವರಂತೆ ತಲೆಯಾಡಿಸುತ್ತಿದ್ದರು.

ವೈದ್ಯರು ವಿವರಿಸುತ್ತಿದ್ದರು- ಗರ್ಭಕೋಶದ ತೊಂದರೆಯಿಂದ ನಿಮ್ಮ ಮಗಳು ಮಕ್ಕಳಾಗುವುದಿಲ್ಲವೆಂದು ಕೊರಗಬೇಕಿಲ್ಲ . ಬಂಜೆಯೆಂದು ಕವಕವ ಎನ್ನಬೇಕಿಲ್ಲ . ಧರತಿಯ ಅಂಡಾಣು ಹಾಗೂ ನಿಮ್ಮ ಅಳಿಯನ ವೀರ್ಯಾಣುಗಳನ್ನು ಒಟ್ಟುಗೂಡಿಸಿ ಬೇರೊಬ್ಬ ಹೆಂಗಸಿನ ಗರ್ಭಕೋಶದೊಳಗೆ ಇಡುತ್ತೇವೆ. ಆಕೆ ಬಸಿರಾಗಿ ನಿಮ್ಮ ಮಗಳು-ಅಳಿಯನಿಗಾಗಿ ಹಡೆದುಕೊಡುತ್ತಾಳೆ. ಹುಟ್ಟುವ ಮಗು ಥೇಟ್‌ ನಿಮ್ಮ ಅಳಿಯ-ಮಗಳಂತೇ ಇರುತ್ತದೆ. ಆ ಬಗ್ಗೆ ಸಂದೇಹ ಬೇಡ. ಸಮಸ್ಯೆಯೇನೆಂದರೆ ಇಂಥ ಬಸಿರನ್ನು ಹೊರುವ ಹೆಂಗಸನ್ನು ನೀವೇ ಹುಡುಕಿ ತರಬೇಕು. ಅಂಥ ಹೆಂಗಸು ಸಿಕ್ಕರೆ ಹೇಳಿ ನಿಮಗೊಂದು ಮೊಮ್ಮಗನನ್ನು ಕೊಡುವ ಜವಾಬ್ದಾರಿ ನಮ್ಮದು.

ರೇಖಾಬೆನ್‌ ಹೊಟ್ಟೆಯಾಳಗೆ ಏನೋ ವಿಚಿತ್ರ ಸಂತಸದ ಪುಟಿತ. ಮನಸ್ಸಿನಲ್ಲಿ ಸಮಾಧಾನದ ಕುಶಾಮತ್ತು . ವೈದ್ಯರು ವಿವರಿಸುತ್ತಿದ್ದರೆ ರೇಖಾಬೆನ್‌ ಮನಸ್ಸು ಅಂಥ ಹೆಂಗಸಿನ ಹುಡುಕಾಟದಲ್ಲಿ ಬಿದ್ದಿತ್ತು . ಮಗಳ ಬಸಿರನ್ನು ಹೊರುವ ಹೆಂಗಸನ್ನು ಎಲ್ಲಿಂದ ತರುವುದು? ಅಂಥ ಬಾಡಿಗೆ ತಾಯಿಯಾಗಲು ಒಪ್ಪುವ ಮಹಾತಾಯಿ ಎಲ್ಲಿ ಸಿಕ್ಕಿಯಾಳು? ಬೇರೆ ಯಾರದೋ ಪಿಂಡವನ್ನು ಯಾರು ಹೊತ್ತಾರು? ಈ ಪ್ರಶ್ನೆಗೆಲ್ಲ ಒಂದೊಂದಾಗಿ ಸರಿದುಹೋಗುತ್ತಿದ್ದರೆ, ರೇಖಾಬೆನ್‌ ಮನಸ್ಸು ಜಾಬಾಳವಾಗಿ ಕುಳಿತಿತ್ತು. ಹಾಗೆಂದು ಕೈ ಚೆಲ್ಲಿ ಕುಳಿತುಕೊಳ್ಳುವಂತಿರಲಿಲ್ಲ . ಮುರಿದುಹೋಗುವ, ಕಿಲುಸಾರೆದ್ದು ಹೋಗುವ ಮಗಳ ಸಂಸಾರದಲ್ಲಿ ಆಕೆಗೆ ಹೊಸ ಕುಡಿ ನೆಡಲೇಬೇಕಾದ ಅಗತ್ಯವಿತ್ತು .

ಅಂಥ ಹೆಂಗಸಿನ ಶೋಧಕ್ಕೆ ಹೊರಡುವ ಮೊದಲು ರೇಖಾಬೆನ್‌ಗೆ ಅಂಥ ಹೆಂಗಸು ಹೇಗಿರಬೇಕೆಂಬುದನ್ನು ವೈದ್ಯರು ಮನವರಿಕೆ ಮಾಡಿಕೊಟ್ಟರು. ಬಾಡಿಗೆ ತಾಯಿಯಾಗುವವಳು ಮದುವೆಯಾಗಿರಬೇಕು, ಆಕೆಗೆ ಇಪ್ಪತ್ತೆೈದರಿಂದ ನಲವತ್ತು ವರ್ಷ ವಯಸ್ಸಾಗಿರಬೇಕು, ಬೇರೆಯವರ ಪಿಂಡ ಹೊರಲು, ಹೆರಲು ಗಂಡನ ಅನುಮತಿ ಪಡೆಯಬೇಕು, ಹೆತ್ತ ನಂತರ ಮಗು ಬೇಕೆಂದು ಹಠ ಹಿಡಿಯಬಾರದು, ಹೀಗೆ ಬೇರೆಯವರಿಗಾಗಿ ಮಗುವನ್ನು ಹೆರುವ ಬಾಡಿಗೆ ತಾಯಿಗೆ ಮಕ್ಕಳಾಗಿರಬೇಕು, ವೈದ್ಯಕೀಯವಾಗಿ ಗಟ್ಟಿ‘ಮುಟ್ಟಾ’ಗಿರಬೇಕು, ಯಾವುದೇ ರೋಗಪೀಡಿತೆಯಾಗಿರಕೂಡದು, ಹೆತ್ತ ನಂತರ ದಂಪತಿಗಳ ಅನುಮತಿಯಿಲ್ಲದೇ ಮಗುವನ್ನು ಸಂಪರ್ಕಿಸಬಾದು, ಯಾವುದೇ ಭಾವನಾತ್ಮಕ ಸಂಪರ್ಕ ಇಟ್ಟುಕೊಳ್ಳಬಾರದು......

‘ಇಂಥ ಹೆಂಗಸು, ಮಹಾತಾಯಿ ಸಿಕ್ಕರೆ ಕರೆತನ್ನಿ , ನಿಮ್ಮ ಮಗಳಿಗಾಗಿ ಮಗುವನ್ನು ಹೆತ್ತುಕೊಡಬಹುದು’ ಎಂದು ವೈದ್ಯರು ಮಾತು ಮುಗಿಸಿ ಮೇಲೆದ್ದರು. ರೇಖಾಬೆನ್‌ ಸ್ಥಿತಿ ಕಲಬತ್ತಿನಲ್ಲಿ ಹಾಕಿ ಕುಟ್ಟಿದಂತಾಗಿತ್ತು . ‘ಯಾರಾದರೂ ಇದ್ದಾರಾ ಅಂಥವರು?’ ಸ್ನೇಹಿತರು, ಬಂಧುಗಳ ಮುಂದೆ ಕೇಳಿದಳು. ಪತ್ರಿಕೆಯಲ್ಲೊಂದು ಜಾಹಿರಾತು ಕೊಟ್ಟಳು. ಉತ್ತರಕ್ಕಾಗಿ ಕಾದಳು. ರೇಖಾಬೆನ್‌ ಯಾರನ್ನಾದರೂ ಹುಡುಕಿ ತರಬಹುದೆಂದು ವೈದ್ಯರು ಕಾದರು. ಮೂರ್ನಾಲ್ಕು ತಿಂಗಳಾದರೂ ಆಕೆ ಬರಲಿಲ್ಲ . ಹಾಗೆಂದು ಆ ಅವಡುಸವಡನ್ನು ಸಹಿಸಿಕೊಳ್ಳುವಂತಿರಲಿಲ್ಲ . ಮಗಳ ಭವಿತವ್ಯದ ಪ್ರಶ್ನೆ. ಬಾಡಿಗೆ ತಾಯಿಯಾಗಲು ಯಾರೂ ಬರದಿದ್ದಾಗ ವೈದ್ಯರ ಬಳಿ ಹೋಗಿ ‘ನೀವೇ ಯಾರನ್ನಾದರೂ ಹುಡುಕಿ’ ಎಂದು ಗೋಗರೆದಳು. ವೈದ್ಯರು ಒಪ್ಪಲಿಲ್ಲ .

ಬೇರೆ ದಾರಿಯೇ ಇರಲಿಲ್ಲ .

‘ನಾನೇ ಏಕೆ ಬಾಡಿಗೆ ತಾಯಿಯಾಗಬಾರದು?’ ಹತಾಶಳಾದ ರೇಖಾಬೆನ್‌ ವೈದ್ಯರ ಮುಂದೆ ಈ ಪ್ರಶ್ನೆಯಿಟ್ಟರೆ ಅವರೂ ಒಂದು ಕ್ಷಣ ಕಕ್ಕಾಬಿಕ್ಕಿ. ಮಗಳ ಪಿಂಡವನ್ನು ತಾಯಿಯೇ ಹೊರುವುದೇ? ಮಗಳಿಗಾಗಿ ಬಾಡಿಗೆ ತಾಯಿಯಾಗುವುದೇ? ಮಗಳಿಗಾಗಿ ಮಗುವನ್ನು ಹೆತ್ತುಕೊಡುವುದೇ? ಎಲ್ಲಾದರೂ ಉಂಟಾ? ವೈದ್ಯರಲ್ಲಿ ಅನೇಕ ಪ್ರಶ್ನೆಗಳು ಹೆರಲಾರಂಭಿಸಿದವು.

ಹಾಗೆಂದು ರೇಖಾಬೆನ್‌ಳನ್ನು ಬಾಡಿಗೆ ತಾಯಿಯಾಗುವಂತೆ ತಡೆಯುವ ಯಾವ ಅಂಶಗಳೂ ವೈದ್ಯರನ್ನು ಕಾಡಲಿಲ್ಲ . ಬಾಡಿಗೆ ತಾಯಿಯಾಗಲು ಬೇಕಾದ ಎಲ್ಲ ಅರ್ಹತೆಗಳನ್ನು ರೇಖಾಬೆನ್‌ ಹೊಂದಿದ್ದಳು. ವೈದ್ಯರಲ್ಲಿ ಚರ್ಚಿಸಿದ ವಿಷಯವನ್ನು ಮಗಳು, ಅಳಿಯ, ಗಂಡ, ಮಕ್ಕಳು ಹಾಗೂ ಬಂಧುಗಳ ಮುಂದಿಟ್ಟಾಗ ಅವರೆಲ್ಲರಿಗೂ ಅಚ್ಚರಿ. ಕೆಲವರಂತೂ ಬೇಡವೇ ಬೇಡ ಎಂದರು, ಇನ್ನು ಕೆಲವರು, ಮುಂದೆ ಇದು ಬೇರೆ ಸಮಸ್ಯೆ ತಂದೊಡ್ಡಬಹುದೆಂದು ಹೆದರಿಸಿದರು. ‘ಧರತಿಯನ್ನು ಹೆತ್ತವಳಾದ ನಾನು, ಅವಳ ಮಗುವನ್ನು ಏಕೆ ಹೆರಬಾರದು? ಅದರಲ್ಲೇನು ತಪ್ಪಿದೆ? ನೀವ್ಯಾರೂ ‘ಫಲ್‌ಹಾಲ್‌’ ಸಿನಿಮಾ ನೋಡಿಲ್ವಾ? ಮಗ ಬಂಜೆಯಾಗಿ ಕೊರಗುವುದಕ್ಕಿಂತ ಇದೇ ಎಷ್ಟೋ ಪಾಲು ವಾಸಿ. ದತ್ತು ಸ್ವೀಕಾರಕ್ಕಿಂತ ಇದೇ ಮೇಲು. ನಾನಂತೂ ಮಗಳಿಗಾಗಿ ಗರ್ಭ ನೀಡಲು ಸಿದ್ಧ’ ಎಂದುಬಿಟ್ಟಳು ರೇಖಾಬೆನ್‌. ಅಂತಿಮವಾಗಿ ಒಪ್ಪಬೇಕಾದವರು ಧರತಿ ಹಾಗೂ ಆಕಾಶ್‌, ಅವರೂ ಒಪ್ಪಿದರು.

ಸರಿ, ಧರತಿಯ ಅಂಡಾಣು, ಆಕಾಶ್‌ನ ವೀರ್ಯಾಣುಗಳನ್ನು ಜೋಡಿಸಿ, ಪಿಂಡೀಕರಿಸಿ ವೈದ್ಯರು ರೇಖಾಬೆನ್‌ ಗರ್ಭಕೋಶದೊಳಗೆ ಬೆಚ್ಚಗೆ ಇಟ್ಟರು. ನಿಧಾನವಾಗಿ ಬಸಿರು ಬೆಳೆಯತೊಡಗಿತು. ಉಸಿರು ಮೊಳೆಯತೊಡಗಿತು. ಮಗಳು ತಾಯಿಯ ಹೊಟ್ಟೆಗೆ ಮುಖ ಹಚ್ಚಿ ಕುಳಿತು ಕಂದನ ಆಗಮನಕ್ಕಾಗಿ ನಿರೀಕ್ಷೆಯ ಬಸಿರು ಹೊದ್ದು ಕುಳಿತಳು. ದಿನದಿಂದ ದಿನಕ್ಕೆ ಕುತೂಹಲ. ಕ್ಷಣಕ್ಷಣಕ್ಕೂ ತಳಮಳ. ಭಾವನೆಗಳ ಹುಯ್ದಾಟ, ರೇಖಾಬೆನ್‌ ಗರ್ಭದೊಳಗೆ ವಿಸ್ಮಯಗಳ ಗಟ್ಟಿ ಗರ್ಭ.

ನವಮಾಸಗಳು ಪೂರ್ತಿಯಾದವು. ರೇಖಾಬೆನ್‌ ಅಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಅಂದವಾದ, ಹಾಲುಬಣ್ಣದ ಇಬ್ಬರು ಕಂದಮ್ಮಗಳಿಗೆ ಜನ್ಮ ನೀಡಿದಳು! ಅದೆಂಥ ಸಂಭ್ರಮ ಅಂತೀರಿ. ಮನೆಯಲ್ಲಿ ಆನಂದ, ಸಡಗರದ ಸುಗ್ಗಿ, ಕಂಗಳಲ್ಲಿ ಆನಂದಭಾಷ್ಪ. ಭಾವನೆಗಳ ಪ್ರವಾಹದಲ್ಲಿ ಆಕಾಶ್‌ ಒದ್ದೆ ಒದ್ದೆ.

ಈ ಸುದ್ದಿ ಜಾಗತಿಕ ಮಟ್ಟದಲ್ಲಿ ವರದಿಯಾದಾಗ ಅನೇಕ ಮಕ್ಕಳಾಗದ ದಂಪತಿಗಳ ಬತ್ತಿಹೋದ ಬಯಕೆಗಳು ಮತ್ತೆ ಆಸೆಯಿಂದ ಬಸಿಯಲಾರಂಭಿಸಿದವು.

ಇದಾಗಿ ಒಂದು ವರ್ಷ ಆಯಿತು. ಈಗ ‘ಬಾಡಿಗೆ ತಾಯಂದಿರು ಬೇಕು’ ಎಂದು ಜಾಹೀರಾತು ಕೊಟ್ಟರೆ ಹೆಂಗಸರು ಸಾಲು ಹಚ್ಚಿ ನಿಲ್ಲತೊಡಗಿದ್ದಾರೆ. ಗುರುತು ಪರಿಚಯ ಇಲ್ಲದವರಿಗಾಗಿ ಮಕ್ಕಳನ್ನು ಹೆತ್ತು ಕೊಡುವ ಅಸಂಖ್ಯ ಬಾಡಿಗೆ ತಾಯಂದಿರು ಹುಟ್ಟಿಕೊಂಡಿದ್ದಾರೆ. ಒಂದು ಮಗು ಹೆತ್ತುಕೊಟ್ಟರೆ ಒಂದರಿಂದ ಐದು ಲಕ್ಷ ರೂ.ವರೆಗೆ ಆದಾಯ! ಹೆರಿಗೆಯಾಗಿ ಮೂರು ತಿಂಗಳವರೆಗೆ ಊಟ, ಬಟ್ಟೆ, ಔಷಧ ಖರ್ಚು ಪ್ರತ್ಯೇಕ. ದೇಶದ ಮಹಾನಗರಗಳಲ್ಲಿ ಈಗ ಬಾಡಿಗೆ ತಾಯಿಯಾಗುವುದು ದೊಡ್ಡ ದಂಧೆ. ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಹೆಂಗಸರಿಗೆ ಇದೊಂದು ಹೊಸ ಉದ್ಯೋಗ. ತಮಾಷೆಯೆಂದರೆ ಕೆಲವು ಗಂಡಸರೇ ತಮ್ಮ ಪತ್ನಿಯರನ್ನು ಬಾಡಿಗೆ ತಾಯಿಯಾಗುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವರು ಸಂಬಂಧದೊಳಗೆ ಮಾನವೀಯ ದೃಷ್ಟಿಯಿಂದ ಪುಕ್ಕಟೆಯಾಗಿ ತಮ್ಮ ಗರ್ಭಕೋಶದೊಳಗೆ ಬಸಿರು ತುಂಬಿಕೊಳ್ಳುತ್ತಿದ್ದಾರೆ.

ಈ ಎಲ್ಲ ವಿದ್ಯಮಾನಗಳ ನಡುವೆ ಬಾಡಿಗೆ ತಾಯಿ ಮಗುವನ್ನು ಕೂಡಲು ನಿರಾಕರಿಸುವುದು, ಹಡೆಯಲು ಕೆಲವೇ ದಿನಗಳಿರುವಾಗ ಜಾಸ್ತಿ ಹಣ ಕೀಳಲು ಬಾಡಿಗೆ ತಾಯಿ ಬ್ಲ್ಯಾಕ್‌ಮೇಲ್‌ ಮಾಡುವುದು, ಹೆರಿಗೆ ಎರಡು ತಿಂಗಳಿರುವಾಗ ಮಕ್ಕಳಾಗದ ಹೆಂಗಸು ತೀರಿಹೋಗಿ ಹೊಸ ಬಿಕ್ಕಟ್ಟನ್ನುಂಟು ಮಾಡುವುದು, ಬಾಡಿಗೆ ತಾಯಿಯಿಂದ ಪಡೆದ ಮಗುವನ್ನು ದಂಪತಿಗಳ ತಂದೆ-ತಾಯಿ ನಿರಾಕರಿಸಿ ಮಗ-ಸೊಸೆಯನ್ನು ಹೊರಹಾಕುವುದು..... ಇತ್ಯಾದಿ ಘಟನೆಗಳು ಬ(ಉ)ಸಿರುಗಟ್ಟಿಸುವ ವಾತಾವರಣ ನಿರ್ಮಾಣವನ್ನು ಸೃಷ್ಟಿಸಬಹುದಾ?

ಈ ಮಧ್ಯೆ ಮೊನ್ನೆ ದಿಲ್ಲಿ ಪತ್ರಿಕೆಯಾಂದರಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು - ಆಸ್ಪತ್ರೆಯಿಂದ ನರ್ಸ್‌ ನಾಪತ್ತೆ ! ಆ ನರ್ಸ್‌ ಬಾಡಿಗೆ ತಾಯಿಯಾಗಲು ಹೋದಳಾ ಎಂದು ಯೋಚಿಸುತ್ತಿರುವಾಗಲೇ ಇಂದಿನ ಪತ್ರಿಕೆಯಿಂದ ಅದು ನಿಜವೆಂದು ಗೊತ್ತಾಯಿತು.

ಹೆತ್ತ ಮಗುವನ್ನು ಕೊನೆಗೆ ಬೇರೆಯವರಿಗೊಪ್ಪಿಸಬೇಕಾಗಿರುವುದರಿಂದ ಬಾಡಿಗೆ ತಾಯಿಯಾಗುವುದಕ್ಕೂ ಎಂಥ ಧೈರ್ಯ ಬೇಕು ?

ಅದೆಲ್ಲಾ ಇರಲಿ, ಮನೆ, ಸೈಕಲ್‌, ಪಂಪ್‌ಸೆಟ್‌ ಥರ ಗರ್ಭಕೋಶವೂ ಬಾಡಿಗೆಗೆ ಸಿಗುವ ಕಾಲ ಬಂತಲ್ಲ !?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more