ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಕದಲ್ಲಿ ಅವನಿ(ಳಿ)ರಲು ಯಾರಿಗೆ ಬೇಕು ಮದುವೆ?

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

‘ಈ ಮದ್ವೆ ಅಂದ್ರೆ ಗೋಳು. ಆರು ತಿಂಗಳು ಆದ ಮೇಲೆ ಬೋರೋ ಬೋರು. ಅದರಲ್ಲೂ ಮಕ್ಕಳು ಆದ ನಂತರ ಸಂಸಾರವೆಂಬ ತಾಪತ್ರಯ. ಜೀವನವೆಂಬುದು ಸಂಕಷ್ಟಗಳ ಗಿರಮಿಟ್ಟು. ಯಾಕಾದ್ರೂ ಈ ಬಂಧನದಲ್ಲಿ ಸಿಲುಕಿಕೊಂಡು ತೊಳಲಾಡುತ್ತಿರುವೆನೋ? ಈ ಮದ್ವೆ ಎಂಬ ಸಂಬಂಧವನ್ನು ಕಡಿದುಕೊಳ್ಳಲಿಕ್ಕೂ ಆಗುವುದಿಲ್ಲ, ಮುಂದುವರಿಸಲಿಕ್ಕೂ ಆಗುವುದಿಲ್ಲ. ಮದ್ವೆಯಾಗಿ ದೊಡ್ಡ ತಪ್ಪು ಮಾಡಿಬಿಟ್ಟೆ’.

ಯಾವುದೇ ಟಿವಿ ಚಾನಲ್‌ ತಿರುಗಿಸಿದರೂ ಚಿರಾಪುಂಜಿಯಂತೆ ಹರಿಯುವ ಧಾರಾವಾಹಿಗಳಲ್ಲಿ ಈ ಡೈಲಾಗು ಕೇಳಿ ಬರುತ್ತದೆ. ಮಧ್ಯಮ ವರ್ಗದವರ ಮನೆಯ ಅಡುಗೆಮನೆಗಳಿಂದ ಈ ಮಾತು ತೇಲಿ ಬರುತ್ತದೆ. ಇಬ್ಬರು ಖಾಸಾ ಸ್ನೇಹಿತರು ಮನಸ್ಸು ಬಿಚ್ಚಿ ಮಾತಿಗೆ ಕುಳಿತಾಗಲೂ ಈ ಮಾತುಗಳು ತೊಟ್ಟಿಕ್ಕುತ್ತವೆ. ಮನೆಯಲ್ಲಿ ಗಂಡ- ಹೆಂಡತಿ ಮಧ್ಯೆ ಚಿಕ್ಕದೊಂದು ತಾಲಿಬಾನು ಕದನ ನಡೆದರೂ ಈ ಅಣಿಮುತ್ತುಗಳು ಉದುರಲೇಬೇಕು.

‘ಹಾಗಾದ್ರೆ ಮದ್ವೆ ಅಂದ್ರೆ ಗೋಳಾ? ಮದ್ವೆ ಅಂದ್ರೆ Inviting trouble ಅಂತಾನಾ? ಮದ್ವೆ ಅಂದ್ರೆ ಸಹಿಸಲು ಅಸಾಧ್ಯವಾಗುವ ಸಂಬಂಧವಾ?’

Once upon a time.........!ಈ ಮಾತನ್ನು ಕೇಳಿದರೆ ಸಂಪ್ರದಾಯವಾದಿಗಳು ಸ್ತಬ್ಧ , ಸ್ತಬ್ಧ ಎಂದು ಬೊಬ್ಬಿಡಬಹುದು. ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಿವಿ ಹಿಂಡಬಹುದು. ಮದುವೆ ಬಗ್ಗೆ ಹೀಗೆಲ್ಲ ಮಾತನಾಡಿದರೆ ನಮ್ಮ ಅಜ್ಜ -ಅಜ್ಜಿಯರು ಹಣೆಹಣೆ ಚಚ್ಚಿಕೊಳ್ಳಬಹುದು. ‘ಮದುವೆಯೆಂದರೆ ಯಾರೂ ಮುರಿಯದ ಬಂಧನ. ಏಳೇಳು ಜನುಮಕ್ಕೂ ಸಾಗುವ ಅನುಬಂಧ. ಒಂದು ಗಂಡು, ಒಂದು ಹೆಣ್ಣು ಗಂಡ-ಹೆಂಡತಿಯಾಗಲು ಸಾಕ್ಷಾತ್‌ ಭಗವಂತನ ಅಪ್ಪಣೆ ಬೇಕು. ಅಂಥ ಸಂಬಂಧದ ಬಗ್ಗೆ ಲಘುವಾಗಿ ಮಾತಾಡಬಾರದು. ಸಂಸಾರ ಅಂದ ಮೇಲೆ ಒಂದು ಮಾತು ಬರುತ್ತದೆ, ಹೋಗುತ್ತದೆ. ಅಷ್ಟು ಮಾತ್ರಕ್ಕೆ ಮದುವೆ ಗೋಳಾದೀತಾ? ’ ಎಂದು ಹಿರಿಯರು ಬುದ್ಧಿವಾದ ಹೇಳಬಹುದು. ‘ಮದುವೆಯಾಗೋರ ಪೈಕಿ ಕೆಲವರು ವಿಚ್ಛೇದನ ಪಡೀತಾರೆ ಅಂತ ಉಳಿದೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಾ ಇಲ್ಲವಾ’ ಎಂದು ಮತ್ತೊಂದು ಷರಾ ಬರೆದು ಮದುವೆಯೆಂಬುದು ಗೋಳಲ್ಲ ಎಂಬ ಚರ್ಚೆಗೆ ತೆರೆ ಎಳೆಯಬಹುದು.

ಮೊನ್ನೆ ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ಅರವತ್ತು ಹುಡುಗಿಯರು ಮದುವೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳುತ್ತಿದ್ದರೆ, ನಾನೆಲ್ಲಿ ನ್ಯೂಯಾರ್ಕು, ಇಂಗ್ಲೆಂಡಿನಲ್ಲಿ ಕುಳಿತಿದ್ದೆನೇನೋ ಎಂದೆನಿಸಿತು. ಇತ್ತೀಚೆಗೆ ತಾನೆ ಐವತ್ತು ವರ್ಷಗಳ ದಾಂಪತ್ಯ ಜೀವನ ಪೂರೈಸಿದ ಆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ದಂಪತಿಗಳು ಈ ಹುಡುಗಿಯರಿಗೆ ಚೇಷ್ಠೆಯ ವಸ್ತುವಾಗಿ ಕಾಣಿಸುತ್ತಿದ್ದರು. ಹಾಗೆಂದು ಈ ಹುಡುಗಿಯರೆಲ್ಲ ಬಹಳ ಶ್ರೀಮಂತರ ಮನೆಯ ಮಕ್ಕಳೇನೂ ಅಲ್ಲ. ಐವತ್ತು ವರ್ಷ ಸತಿ-ಪತಿಗಳಾಗಿದ್ದವರು ತಮ್ಮ ದಾಂಪತ್ಯದ ಬಂಧದ ಬಗ್ಗೆ ಮಾತಾಡುತ್ತಿದ್ದರೆ, ಅವರ ಸುತ್ತ ಕುಳಿತಿದ್ದ ಈ ಹುಡುಗಿಯರು ‘highly unromantic couples, ಐವತ್ತು ವರ್ಷಗಳ ಕಾಲ ಒಬ್ಬರ ಜತೇನೇ ಬಾಳುವೆ ಮಾಡಿದ್ದಾರಲ್ಲ. ಅದೆಷ್ಟು unromantic ಇದ್ದಿರಬಹುದು’ ಎಂದು ಗಟ್ಟಿಯಾಗಿಯೇ ಮಾತಾಡಿಕೊಳ್ಳುತ್ತಿದ್ದರು. ಅವರ ಪೈಕಿ ಒಬ್ಬಳು ಎದ್ದು ನಿಂತು ಹೇಳಿಯೇ ಬಿಟ್ಟಳು- ‘Marriage is bullshit. ಅದರ ಕಲ್ಪನೆಯೇ ಜೀವನ ವಿರೋಧಿ. ಈ ಬದುಕು ಇರೋದು enjoy ಮಾಡಲಿಕ್ಕೆ. ಬದುಕಿನ ಬುನಾದಿಯಿರುವುದು ಬದಲಾವಣೆಯಲ್ಲಿ. ಒಬ್ಬನ ಜತೆಯಲ್ಲಿ ನಲವತ್ತು-ಐವತ್ತು ವರ್ಷ ಬದುಕೋದು ಅಂದ್ರೆ ಅದರಲ್ಲಿ ಎಂಥ ಸುಖವಿದೆ? ಅದಕ್ಕಾಗಿ ಮದುವೆಯೆಂಬ ಬಂಧದಲ್ಲಿ ಯಾಕೆ ಸಿಲುಕಿಕೊಂಡಿರಬೇಕು?’ ಈಕೆಯ ಮಾತಿಗೆ ಮತ್ತೊಬ್ಬಳು ದನಿಗೂಡಿಸಿದಳು- ‘ಮದುವೆಯೆಂಬುದು ವ್ಯವಹಾರ. ಅಲ್ಲಿ ಬದ್ಧತೆ ಬೇಕು. ಕಾನೂನಿನ ವ್ಯಾಪ್ತಿಗೆ ಒಳಪಡಬೇಕು. ಮದುವೆಯಾಗಿದ್ದೇವೆಂಬ ಕಾರಣಕ್ಕೆ ಗಂಡ-ಹೆಂಡತಿಯರು ಸಂಬಂಧವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವಳೆಲ್ಲಿಗೆ ಹೋಗ್ತಾಳೆ ಬಿಡು, ಮನೆಯಲ್ಲಿ ಬಿದ್ದಿರ್ತಾಳೆ ಅಂತ ಗಂಡ ಭಾವಿಸುತ್ತಾನೆ. ಆತ ಹೀಗೆ ಯೋಚಿಸಲು ಕಾರಣ ಮದುವೆಯ ಬಂಧದಲ್ಲಿ ಆತನಿಗಿರುವ ಕೆಲವು ಅನುಕೂಲಗಳು. ಹೆಣ್ಣು ಅಬಲೆಯೆಂಬ ಅಭಿಪ್ರಾಯ. ಹೆಣ್ಣನ್ನು ಅಬಲೆಯಾಗಿ ಮಾಡಿದ್ದು ಗಂಡಸಲ್ಲ, ಮದುವೆಯೆಂಬ ವ್ಯವಸ್ಥೆ’.

ಐವತ್ತರ ದಾಂಪತ್ಯ ಜೀವನ ಸಾಗಿಸಿದ ದಂಪತಿಗಳು ಮುಖ-ಮುಖ ನೋಡಿಕೊಂಡು ನಗುತ್ತಿದ್ದರು!

Once upon a time.........!ಮದುವೆಯ ಬಗ್ಗೆ ಅಲ್ಲಿರುವ ಎಲ್ಲ ಹುಡುಗಿಯರ ಅಭಿಪ್ರಾಯ ಹೆಚ್ಚೂ ಕಮ್ಮಿ ಇದೇ ಆಗಿತ್ತು. ‘ಮದುವೆಯೆಂಬ ಗೋಳು’ ಎಂದೇ ಎಲ್ಲರೂ ಮಾತಿಗೆ ನಾಂದಿ ಹಾಕುತ್ತಿದ್ದರು. ‘ಈಗಿನ ಮದುವೆಯೆಂಬ ವ್ಯವಸ್ಥೆಯ ಬಗ್ಗೆ ನಿಮಗೆ ಸಮಾಧಾನ, ಸಮ್ಮತಿ ಇಲ್ಲದಿದ್ದರೆ ಬಿಟ್ಹಾಕಿ. ನಿಮಗೆಂಥ ಮದುವೆ ಬೇಕು’ ಎಂದು ಕೇಳಿದೆ. ಅವರೆಲ್ಲರ ಒಕ್ಕೊರಲಿನ ಉತ್ತರ ‘ನಮಗೆ ಮದುವೆಯೇ ಬೇಡ’. ಇದೇನು ಇವರೆಲ್ಲ ಸನ್ಯಾಸಿನಿಯರಾಗಲು ಬಯಸಿದ್ದಾರಾ? ಉಹುಂ... ಇಲ್ಲ ಇಲ್ಲ. ಇವರಿಗೆ ಮದುವೆ ಬೇಡ. ಆದರೆ ಸಂಬಂಧ ಬೇಕು. ಮನಸ್ಸಿಗೆ ಒಪ್ಪಿತವಾಗುವ ಹುಡುಗನ ಜತೆ ಸಂಬಂಧ ಬೇಕು. ಇದನ್ನು ಅವರು live-in relationship(ಅನುಕೂಲದ ಸಂಬಂಧ) ಅಂತಾರೆ. ಒಬ್ಬ ಹುಡುಗ- ಒಬ್ಬಳು ಹುಡುಗಿಯ ಜತೆ ಪರಸ್ಪರರಿಗೆ ಒಪ್ಪಿತವಾಗುವ ಜೀವನ ಶೈಲಿಯಲ್ಲಿ, ಒಪ್ಪಿತವಾಗುವಷ್ಟು ಕಾಲ ಒಟ್ಟಿಗೆ ಇರುವುದು. ಅನಂತರ ಪರಸ್ಪರರು ಬೇರೆ ಬೇರೆಯಾಗುವುದು. ಬೇರೆಯಾದ ನಂತರವೂ ಉತ್ತಮ ಸ್ನೇಹಿತರಾಗಿಯೇ ಇರುವುದು. ಒಟ್ಟಿಗಿರುವಷ್ಟು ಕಾಲ ದೈಹಿಕ ಸಂಬಂಧವನ್ನು ಹೊಂದಿಯೂ ಮಕ್ಕಳನ್ನು ಪಡೆಯದಿರುವುದು- ಇವು live-in relationshipನ ಷರತ್ತು ಅಥವಾ ಲಕ್ಷಣಗಳು.

‘ಎಲ್ಲಾದರೂ ಉಂಟಾ? ’ ಎಂದು ಕೇಳಬೇಡಿ. ಬೆಂಗಳೂರಿನಲ್ಲಿ ಈ ಸಂಬಂಧ ನಿಧಾನವಾಗಿ ಯುವಜನರಲ್ಲಿ ಚಾಲ್ತಿಗೆ ಬರುತ್ತಿದೆ. ಅನುಕೂಲಕ್ಕೊಬ್ಬ ಗಂಡ ಹೆಂಡತಿಯಾಗುವ ಕಲ್ಪನೆ ಅವರಲ್ಲಿ ಹೊಸ ಹುರುಪನ್ನು ಮೂಡಿಸುತ್ತಿದೆ.

ಹಾಗೆ ನೋಡಿದರೆ ಈ ಅನುಕೂಲದ ಸಂಬಂಧ ಹೊಸತೇನೂ ಅಲ್ಲ. ಮುಂಬೈ-ದಿಲ್ಲಿಯಂಥ ನಗರಗಳಲ್ಲಿ ಸರ್ವೇಸಾಮಾನ್ಯ. ಕೆಲದಿನಗಳ ಹಿಂದೆ ದಿಲ್ಲಿಯಲ್ಲಿ ಖುಷವಂತ್‌ಸಿಂಗ್‌ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದೆ. ಅದೇ ಸಂದರ್ಭದಲ್ಲಿ ಅವರ ಮಗ, ಪತ್ರಕರ್ತ ರಾಹುಲ್‌ಸಿಂಗ್‌ ಅವರೂ ಅಲ್ಲಿಯೇ ಇದ್ದರು. ಉಭಯ ಕುಶಲೋಪರಿಯ ಬಳಿಕ ರಾಹುಲ್‌ ಸಿಂಗ್‌ ಅವರನ್ನು ‘ಈಗ ಎಲ್ಲಿದ್ದೀರಿ? ನಿಮ್ಮ ಸಂಸಾರ ಎಷ್ಟು ದೊಡ್ಡದು?’ ಎಂದು ಕೇಳಿದಾಗ ಅವರು ಬಹಳ ಸರಳವಾಗಿ ‘ಈಗ ದುಬೈನಲ್ಲಿ ನನ್ನ ಗರ್ಲ್‌ಫ್ರೆಂಡ್‌ ಜತೆ ಇದ್ದೇನೆ. ಭಾರತದಲ್ಲಿನ ಗರ್ಲ್‌ಫ್ರೆಂಡ್‌ ದುಬೈಗೆ ಬರುವುದಿಲ್ಲವೆಂದು ಹೇಳಿದ್ದರಿಂದ ದುಬೈನಲ್ಲಿ ಮತ್ತೊಬ್ಬಳನ್ನು ಆಯ್ಕೆ ಮಾಡಿಕೊಳ್ಳಲು ಬಹಳ ಕಷ್ಟವಾಯಿತು. ಈಗ ಪರವಾಗಿಲ್ಲ ’ ಎಂದರು. ಮಗ ರಾಹುಲ್‌ಸಿಂಗ್‌ ಈ ಮಾತನ್ನು ಹೇಳುವಾಗ ತಂದೆ ಖುಷವಂತ್‌ಸಿಂಗ್‌ ಮುಗುಳ್ನಗುತ್ತಿದ್ದರು. ರಾಹುಲ್‌ಸಿಂಗ್‌ ಕಳೆದ ಹದಿನೈದಿಪ್ಪತ್ತು ವರ್ಷಗಳಿಂದ ಕಾಲಕಾಲಕ್ಕೆ ಅನುಕೂಲಕ್ಕೊಬ್ಬ ಹೆಂಡತಿಯಾಂದಿಗೆ ಬದುಕುತ್ತಿದ್ದಾರೆ.

ಐದು ವರ್ಷಗಳ ಹಿಂದೆ ಇಂಗ್ಲೆಂಡ್‌ಗೆ ಹೋದಾಗ ಬಿಬಿಸಿ ಹಿಂದಿ ವಿಭಾಗದಲ್ಲಿ ವರದಿಗಾರ್ತಿಯಾಗಿದ್ದ ಅರ್ಚನಾ ತ್ರಿವೇದಿ ತಮ್ಮ ಮನೆಗೆ ಆಹ್ವಾನಿಸಿದ್ದರು. ಅರ್ಚನಾ ಜತೆಯಲ್ಲಿ ಸುಂದರ ಯುವಕನಿದ್ದ. ‘ಈತ ಡೇವಿಡ್‌ ಹಾಲ್‌. ನನ್ನ ಸಂಗಾತಿ’ ಎಂದು ಅರ್ಚನಾ ಪರಿಚಯಿಸಿದಳು. ಸಂಗಾತಿ ಅಂದರೆ ಬಾಳ ಸಂಗಾತಿ ಇರಬಹುದೆಂದು ಭಾವಿಸಿ ‘ನಿನ್ನ ಗಂಡನಾ?’ ಎಂದು ಕೇಳಿದೆ. ಆ ಪ್ರಶ್ನೆ ಕೇಳಬಾರದಿತ್ತು. ತಟ್ಟನೆ ನಾಲಿಗೆ ಕಚ್ಚಿದೆ. ಅರ್ಚನಾ ಹಾಗೂ ಡೇವಿಡ್‌ ನನ್ನನ್ನೇ ಸಂತೈಸಿದರು. ‘ನಾವು ಒಂಥರಾ ಗಂಡ-ಹೆಂಡತಿ. ಇನ್ನೊಂದು ರೀತಿಯಲ್ಲಿ ಅಲ್ಲ. ನಮಗಿಬ್ಬರಿಗೂ ಸರಿ ಬರುವಷ್ಟು ದಿನ ಒಟ್ಟಿಗೇ ಇರ್ತೇವೆ. ನಂತರ ಗೊತ್ತಿಲ್ಲ ’ ಎನ್ನುತ್ತಾ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡರು. ಇದೇ ಅರ್ಚನಾ ಹಿಂದಿನ ವರ್ಷ ಬೆಂಗಳೂರಿಗೆ ಬಂದಿದ್ದಳು. ಬಗಲಲ್ಲಿ ಮತ್ತೊಬ್ಬನಿದ್ದ. ಆತನನ್ನು ನೋಡುತ್ತಿದ್ದಂತೆ ನನ್ನ ಮುಖದ ಗೆರೆಗಳು ಹುಯ್ದಾಡುವುದನ್ನು ಕಂಡು ಅರ್ಚನಾ, ‘ನಿನ್ನ ಸಮಸ್ಯೆಯೇನೆಂಬುದು ನನಗೆ ಗೊತ್ತು. ಈತ ನನ್ನ ನೂತನ ಬಾಯ್‌ಫ್ರೆಂಡ್‌. ಡೇವಿಡ್‌ ಹಾಲ್‌ ನನ್ನ ಜತೆಗಿಲ್ಲ. ತಿಂಗಳಿಗೊಮ್ಮೆ ಆತನನ್ನು ಭೇಟಿ ಮಾಡುತ್ತೇನೆ. ದಿನಾಲೂ ಫೋನ್‌ ಮಾಡಿ ವಿಚಾರಿಸಿಕೊಳ್ಳುತ್ತಾನೆ. I miss him a lot’ ಎಂದಳು. ಬಗಲಲ್ಲಿದ್ದ ನೂತನ ಬಾಯ್‌ಫ್ರೆಂಡ್‌ ಮದುಮಗನಂತೆ ಕಂಗೊಳಿಸುತ್ತಿದ್ದ. ಅರ್ಚನಾಳ ಮಾತನ್ನು ಕೇಳಿ ಸಣ್ಣಗೆ ನಕ್ಕ. ಪರವಾಗಿಲ್ಲ sportive ಆಗಿದ್ದಾನೆ ಅಂದುಕೊಳ್ಳುತ್ತಿರುವಾಗ ಅರ್ಚನಾಳೇ ಹೇಳಿದಳು ಹಿಂದಿಯಲ್ಲಿ- ‘ಆತನಿಗೆ ನಾನು ಎರಡನೆಯ ಗರ್ಲ್‌ಫ್ರೆಂಡ್‌’. ಇದಾದ ಬಳಿಕ ಅರ್ಚನಾ ಸಿಕ್ಕಿಲ್ಲ. ಮುಂದಿನ ಸಲ ಸಿಕ್ಕರೆ ಬಗಲಲ್ಲಿ ಯಾವನಿರುತ್ತಾನೋ ಗೊತ್ತಿಲ್ಲ.

ಕೆಲ ದಿನಗಳ ಹಿಂದೆ ನಟ ಕಬೀರ್‌ ಬೇಡಿಯ ಮಗ ಅಡಮ್‌ ಬೇಡಿಯ ಸಂದರ್ಶನ ಪ್ರಕಟವಾಗಿತ್ತು. ಆತ ತನ್ನ ನೂತನ ಗರ್ಲ್‌ಫ್ರೆಂಡ್‌ ನಿಶಾ ಹರಳೆ ಜತೆಗೆ ಕಳೆದ ಆರು ತಿಂಗಳಿನಿಂದ ಸಂಸಾರ ಸಾಗಿಸುತ್ತಿರುವ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದ. (ಅಡಮ್‌ ಬೇಡಿ ಪ್ರೋತಿಮಾ ಬೇಡಿಗೆ ಹುಟ್ಟಿದವನಲ್ಲ. ಕಬೀರ್‌ ಬೇಡಿಯ ಅಮೆರಿಕನ್‌ ಗರ್ಲ್‌ಫ್ರೆಂಡ್‌ಗೆ ಹುಟ್ಟಿದವ.) ನಿಶಾ ಹರಳೆ ಅಪ್ಪಟ ಮಹಾರಾಷ್ಟದ ಮಧ್ಯಮವರ್ಗದ ಹುಡುಗಿ. ಕೂದಲು ಕತ್ತರಿಸಿಕೊಂಡರೆ, ಸ್ಕರ್ಟ್‌ ತೊಟ್ಟುಕೊಂಡರೆ ಗುಟುರು ಹಾಕುವ ಅಪ್ಪ-ಅಮ್ಮಂದಿರು. ಯಾವಾಗ ನಿಶಾ ಮಿಸ್‌ ಮುಂಬೈ ಆದಳೋ ಅವಳ ಜೀವನವೇ ಬದಲಾಗಿಬಿಟ್ಟಿತು. ಯಾವುದೋ ಪಾರ್ಟಿಯಲ್ಲಿ ಅಡಮ್‌ನ ಪರಿಚಯವಾಯಿತು. ಇಬ್ಬರೂ ಮದುವೆಯಾಗದೇ ಅನುಕೂಲಕ್ಕೆ ಗಂಡ-ಹೆಂಡತಿಯರಾಗಲು ನಿರ್ಧರಿಸಿ ಒಟ್ಟಿಗೆ ಜೀವಿಸಲು ನಿರ್ಧರಿಸಿದರು. ಅಂಡಮಾನ್‌ಗೆ ಹೊದಾಗ ಹೋಟೆಲ್‌ನಲ್ಲಿ ಗಂಡ-ಹೆಂಡತಿಯರಲ್ಲದವರಿಗೆ ಪ್ರವೇಶ ಕೊಡುವುದಿಲ್ಲ ಎಂದಾಗ ‘ಗಂಡ-ಹೆಂಡತಿಯರಾಗದೇ ನಾವು ಹೀಗೆಯೇ ಇರಲು ನಿರ್ಧರಿಸಿದ್ದೇವೆ. ಒಂದು ಹೆಣ್ಣು, ಒಂದು ಗಂಡು ಮದುವೆಯಾದರೆ ಮಾತ್ರ ಒಟ್ಟಿಗಿರಬೇಕೆಂದು ಯಾವ ಕಾನೂನಿನಲ್ಲಿ ಬರೆದಿದೆ? ’

ಎಂದು ವಾದಕ್ಕಿಳಿದರು. ಕಬೀರ್‌ ಬೇಡಿಗೆ ಅವರ ಸ್ನೇಹಿತನೊಬ್ಬ ‘ನಿನ್ನ ಮಗ ಯಾವಳೋ ಜತೆ ಇದ್ದಾನಂತೆ. ನೀನಾದರೂ ಬುದ್ಧಿ ಹೇಳಬಾರದಾ? ’ ಎಂದು ಕೇಳಿದ. ಕಬೀರ್‌ ಜೋರಾಗಿ ನಕ್ಕುಬಿಟ್ಟ- ‘ನೀನು ಯಾವ ಕಾಲದಲ್ಲಿ ಇದ್ದೀಯಾ? ಮದುವೆಯೆಂಬುದು ಹಳೇ ಫ್ಯಾಷನ್‌. ಅದು ನನ್ನ ಅಜ್ಜನ ಕಾಲಕ್ಕೇ ಮುಗಿಯಿತು’.

ಇತ್ತೀಚೆಗೆ ನಗರದ ಆಂಗ್ಲ ಪತ್ರಿಕೆಯಾಂದರಲ್ಲಿ ಚಿಕ್ಕ ವರ್ಗೀಕೃತ ಜಾಹೀರಾತೊಂದು ಪ್ರಕಟವಾಗಿತ್ತು. ‘ಇಪ್ಪತ್ತರಿಂದ ಇಪ್ಪತ್ತೈದು ವರ್ಷದ ಸುಂದರ ತರುಣಿಯರು ನನ್ನ ಆಧುನಿಕ ಫ್ಲಾಟ್‌ನಲ್ಲಿ ಉಚಿತವಾಗಿ ಉಳಿದುಕೊಳ್ಳಬಹುದು. ಪರಸ್ಪರ ಹೊಂದಾಣಿಕೆ ಅವಲಂಬಿಸಿ ಅವರು ಉಳಿದುಕೊಳ್ಳುವ ಅವಧಿ ನಿರ್ಧರಿಸಲಾಗುವುದು’. ಕಂಪ್ಯೂಟರ್‌ ಎಂಜಿನಿಯರ್‌ಗೆ ಅನುಕೂಲಕ್ಕೊಬ್ಬ ಹೆಂಡತಿ ಬೇಕಾಗಿದ್ದಳು.

ಮದುವೆಯೆಂಬ ಸಂಬಂಧ ಎಲ್ಲಿಗೆ ಬಂದು ನಿಲ್ಲುತ್ತಿದೆ ನೋಡಿ. ಬೆರಳುಂಗುರ, ಕಾಲ್ಗೆಜ್ಜೆ, ಮಂಗಳಸೂತ್ರವಿಲ್ಲದ ಹುಡುಗಿಯಾಬ್ಬಳು ವರ್ಷಗಟ್ಟಳೆ ಯಾವನೋ ಹುಡುಗನ ಜತೆಗೆ ತಮಗಿಷ್ಟ ಬಂದಂತೆ ಜೀವಿಸುತ್ತಾ, ಹೊರ ಜಗತ್ತಿಗೆ ಗಂಡ-ಹೆಂಡತಿಯರಂತೆ ಬಾಳುತ್ತಾ ಬೇಡವೆಂದಾಗ ಬೈ ಬೈ ಹೇಳಿ ಅನ್ಯರ ಕಣ್ಣಿಗೆ ಕನ್ಯತ್ವವನ್ನು ಉಳಿಸಿಕೊಳ್ಳುತ್ತಾ, ಹಾಗೇ ಮತ್ತೊಬ್ಬನ ಕೈಹಿಡಿಯಲು ಹಾತೊರೆಯುವುದು ಹೊಸ ಜನಾಂಗದ ಖಯಾಲಿ ಮದುವೆಯೆಂಬ ವ್ಯವಸ್ಥೆಯನ್ನೇ ಅಣಕಿಸುವಂತಿದೆ.

‘ಮದುವೆಯಾಗದಿರುವುದೇ ಗೋಳು’ ಎಂಬ ದಿನಗಳು ಹತ್ತಿರ ಬರುತ್ತಿವೆಯಾ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X