ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣ್ಣಿನ ನೆನಪು ಕೈ ಹಿಡಿದು ಕಾಡುತ್ತೆ-ಗಾಢವಾಗಿ, ನಿಗೂಢವಾಗಿ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಬೇರೆ ದಾರಿಯೇ ಇರಲಿಲ್ಲ .

ಅವರೆಲ್ಲ ಮನೆಗಳನ್ನು ಖಾಲಿ ಮಾಡಲೇಬೇಕಿತ್ತು . ನೀರು ನಿಧಾನವಾಗಿ ಹೆಜ್ಜೆ ಹಾಕುತ್ತಾ ಮೆಲ್ಲಮೆಲ್ಲ ಮೇಲಕ್ಕೆ ಬರುತ್ತಿತ್ತು . ನೀರು ಬರುವ ಧಾವಂತದಲ್ಲಿ ಮಣ್ಣಿನ ಕಣಕಣಗಳು ತೇವಗೊಂಡು ನಗುತ್ತಿದ್ದವು. ನೀರಿನ ಜತೆಯಲ್ಲಿ ಸಣ್ಣ ತೆರೆಯೂ ಸಂಗಾತಿಯಾಗಿತ್ತು . ಬೆಳಗು ನಿರಾಳವಾಗಿ ಹಾಸಿ ಕುಳಿತುಕೊಳ್ಳುವ ಸಮಯದಲ್ಲಿ ಮನೆಗಳನ್ನು ಖಾಲಿ ಮಾಡದಿದ್ದರೆ ಅವುಗಳೊಳಗೆ ನೀರು ಹೊಕ್ಕಿ ನುಂಗುವುದು ನಿಶ್ಚಿತವಾಗಿತ್ತು . ವಾರದ ಮೊದಲೇ ಜಿಲ್ಲಾಡಳಿತ ಊರಿನ ಎಲ್ಲರಿಗೂ ಎಚ್ಚರಿಕೆ ನೀಡಿ ಸುರಕ್ಷಿತ ಜಾಗಕ್ಕೆ ಹೋಗುವಂತೆ ಸೂಚಿಸಿತ್ತು .

ಮನೆಯೇನು ಊರಿಗೆ ಊರೇ ತಣ್ಣಗೆ ಮುಳುಗುವುದೆಂದು ಆ ಊರಿನ ಎಲ್ಲರಿಗೂ ಆರು ವರ್ಷಗಳ ಮೊದಲೇ ಗೊತ್ತಾಗಿತ್ತು . ಆದರೆ ಅವರೆಲ್ಲ ನಿಶ್ಚಿಂತೆಯಿಂದ ಇದ್ದರು. ಒಂದು ದಿನ ನೀರು ಜುಳುಜುಳು ರಾಗ ಬಿಟ್ಟು ಸರಬರ ಎಂದು ಮನೆಯ ಹೊಸ್ತಿಲೊಳಗೆ ಹೇಳದೇ ಕೇಳದೇ ನುಗ್ಗಿ ಬರುವುದೆಂದು ಅವರ್ಯಾರೂ ನಿರೀಕ್ಷಿಸಿರಲಿಲ್ಲ . ಬೆಂಕಿ ಸುಡಲಿಕ್ಕಿಲ್ಲವೆಂದು ಗಾಢವಾಗಿ ನಂಬಿದವನು ಬೆಂಕಿಗೆ ಮುತ್ತಿಕ್ಕಲು ಹೋಗುತ್ತಾನೆ. ನೀರು ಮುಳುಗಿಸಲಿಕ್ಕಿಲ್ಲವೆಂದು ನಂಬುವವನು ಅದು ಪ್ರವಾಹೋಪಾದಿಯಲ್ಲಿ ಎದುರಿಗೆ ನಿಂತಾಗ ಬಿದ್ದಾಕುಟ್ಟಿ ಓಡಿಹೋಗುವುದಿಲ್ಲ . ಆ ಊರಿನ ಜನರ ಮನಃಸ್ಥಿತಿಯೂ ಹಾಗೆಯೇ ಆಗಿತ್ತು . ಹೀಗಾಗಿ ಅವರು ಮನೆಗಳನ್ನು ಖಾಲಿ ಮಾಡಿರಲಿಲ್ಲ .

Procession of submerged memories!ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ . ಆ ಊರಿನ ಮುಖಂಡ ಒಂದು ದಿನ ಎಲ್ಲರನ್ನೂ ಕರೆದು ಸಭೆ ಮಾಡಿದ- ಈ ಊರು ನಮಗೆ ಜನ್ಮ ನೀಡಿದ ತಾಣ. ನಮ್ಮ ಬೇರು ಇಲ್ಲಿದೆ. ಬೊಗಟೆ ಇಲ್ಲಿದೆ. ನಮ್ಮ ತಾತಾ, ತಾತಾತಾ, ಮುತ್ತಾತ, ಮುಮುಮುತ್ತಾ ತಂದಿರೆಲ್ಲ ಈ ಊರಿನಲ್ಲಿಯೇ ಬೇಳೆದವರು. ಊರನ್ನು ಬೆಳೆಸಿದವರು. ಇಲ್ಲಿನ ಕಂಬಗಳು, ಕಾಲುವೆಗಳು, ಕೋಟೆಗಳು, ಕೊತ್ತಲಗಳನ್ನು ಕಟ್ಟಿದ್ದಾರೆ. ಶ್ರದ್ಧೆಯ ತಾಣಗಳಾದ ದೇಗುಲಗಳನ್ನು ನಿರ್ಮಿಸಿದ್ದಾರೆ. ಇಲ್ಲಿನ ಹೊಲ ಗದ್ದೆಗಳು ಲಕ್ಷಾಂತರ ಜಠರಾಗ್ನಿಗೆ ಬಿದ್ದ ಹಸಿವಿನ ಬೇಗೆಯನ್ನು ನಂದಿಸಿವೆ. ಇಡೀ ಊರಿನ ಕಟ್ಟೆಗಳು, ತಂಗುದಾಣಗಳು, ಕಲ್ಲು ಚಪ್ಪಡಿಗಳು, ಮರಗಿಡಗಳು, ರಸ್ತೆಯ ಮುರ್ಕಿಗಳು ಮನೆಯ ಜಗಲಿಯಲ್ಲಿನ ಸಾಮಾನುಗಳಷ್ಟೇ ಪರಿಚಿತ. ಪ್ರತಿ ಹೆಜ್ಜೆಯೂ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಷ್ಟು ಆಪ್ತವಾಗುತ್ತಿವೆ. ಊರಿನ ಜನರೆಲ್ಲ ಮನೆಮಂದಿಯಷ್ಟೇ ಸಲುಗೆ ಬಲುಗೆ. ಊರ ಹೆಬ್ಬಾಗಿಲಲ್ಲಿರುವ ಅಶ್ವತ್ಥಮರ ಆ ನೆಲದ ಇತಿಹಾಸಕ್ಕೆ ಹಾಕಿದ ಚೌಕಟ್ಟು .

ಇಂಥ ಊರನ್ನು ಬಿಟ್ಟು ಸರಕಾರ ಕೊಡುವ ಯಾವುದೋ ಪಾಳುಭೂಮಿಯಲ್ಲಿ ಸಂಸಾರವನ್ನು ಹೊಸದಾಗಿ ಸಾಕುತ್ತಾ ಆರಂಭಿಸುವುದಿದೆಯಲ್ಲ ಅದನ್ನು ಯೋಚಿಸುವುದಕ್ಕೆ ಸಹ ಆಗುವುದಿಲ್ಲ .

ಹಾಗೆಂದು ಆ ಊರಿನ ಮುಖಂಡ ತನ್ನ ಮನದಲ್ಲಿ ನಂಬುಗೆಯ ಚಪ್ಪರ ಕಟ್ಟಿದ್ದ . ಆತ ಹೇಳುವುದರಲ್ಲಿ ತಪ್ಪೇನೂ ಇರಲಿಲ್ಲ . ಆತ ಅವರೆಲ್ಲರ ಅಂತರಂಗದ ಬುದುಬುದುಗಳಿಗೆ ಮಾತಾಗಿದ್ದ ಅಷ್ಟೇ. ಸರಕಾರವೆಂಬ ಗೊಡ್ಡು ವ್ಯವಸ್ಥೆಗೆ ಇಂಥ ಅಂತರಂಗದ ಮಾತುಗಳಾಗಲಿ, ಜನರ ಆರ್ತನಾದವಾಗಲಿ ಕೇಳುವುದಿಲ್ಲ .

ನೋಡನೋಡುತ್ತಿದ್ದಂತೆ ರಾಕ್ಷಸ ಗಾತ್ರದ ಅಣೆಕಟ್ಟು ಬಂದು ಮಲಗಿಬಿಟ್ಟಿತು. ನೀರು ಮೇಲೇರಲಾರಂಭಿಸಿತು. ಒಂದೊಂದೇ ಮನೆ, ಗ್ರಾಮ, ಊರು, ಹೋಬಳಿ ಮುಳುಗಲಾರಂಭಿಸಿತು.

ಕೊನೆಗೆ ಬಾಕಿರ್ದ್‌ ಎಂಬ ಊರಿನ ಮುಂದೆ ನೀರು ಬಂದು ನಿಂತಿತು. ಬಾಕಿರ್ದ್‌ ಪಂಜಾಬಿನ ಪುಟ್ಟಗ್ರಾಮ. ಇಪ್ಪತ್ತೆಂಟು ಮನೆಗಳಿರುವ ಸುಸಂಸ್ಕೃತ ಗ್ರಾಮ. ಭಾಕ್ರಾ ನಂಗಲ್‌ ಅಣೆಕಟ್ಟು ಅಡ್ಡ ಮಲಗಿದ ಬಳಿಕ ಕಟ್ಟ ಕಡೆಗೆ ತಿಂದು ಹಾಕಿದ್ದು ಬಾಕಿರ್ದನ್ನು . ಅಂದು ಬೆಳಗಿನ ಜಾವ ನೀರಿನಿಂದ ತೊಪ್ಪೆಯಾದ ಊರನ್ನು ಯಾರೂ ನೋಡಿಯೇ ಇಲ್ಲ . ಏಳೆಂಟು ನೂರು ವರ್ಷಗಳಿಂದ ಇಲ್ಲಿ ಬದುಕಿದ ಇಲ್ಲಿನ ಜನರೆಲ್ಲ ಇಪ್ಪತ್ತೆೈದು ಕಿಮೀ ದೂರದ ಗುಡ್ಡದ ತಪ್ಪಲಿನಲ್ಲಿ ವಾಸಿಸುತ್ತಿದ್ದಾರೆ. ಅಂದು ನಂದಿಹೋದ ಬೆಳಕು ಮತ್ತೆ ಉರಿಯುವ ಲಕ್ಷಣಗಳು ಇಲ್ಲವೆಂಬಂತೆ ನಿಸ್ತೇಜರಾಗಿ ಇಲ್ಲಿನ ಜನ ಬದುಕು ಸವೆಸುತ್ತಿದ್ದಾರೆ. ಬೇಸಿಗೆಯಲ್ಲಿ ಅಣೆಕಟ್ಟಿನ ನೀರಿನ ಮಟ್ಟ ಕಡಿಮೆಯಾದಾಗ ತಂಡ ಕಟ್ಟಿಕೊಂಡು, ಟ್ರ್ಯಾಕ್ಟರ್‌ಗಳನ್ನು ಸಿಂಗರಿಸಿಕೊಂಡು, ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯಗಳನ್ನು ಕಟ್ಟಿಕೊಂಡು ಒಂದು ಕಾಲದಲ್ಲಿ ತಾವು ಹುಟ್ಟಿ ಬೆಳೆದ ಊರಿನಲ್ಲಿನ ತಮ್ಮ ಹೆಜ್ಜೆ , ಬೇರುಗಳನ್ನು ಹುಡುಕಿಕೊಂಡು ಸಂಭ್ರಮದಿಂದ ಹೋಗುತ್ತಾರೆ. ಇಲ್ಲಿ ನಮ್ಮ ಮನೆಯಿತ್ತು , ಇಲ್ಲಿ ಹಜಾರವಿತ್ತು , ಇದು ಮಲಗುವ ಕೋಣೆಯಾಗಿತ್ತು , ಚಾರುಪಾಯಿ ಇಲ್ಲಿತ್ತು , ನೀನು ಹುಟ್ಟಿದ್ದು ಇದೇ ಕೋಣೆಯಲ್ಲಿ , ತಾತನ ಖಜಾನೆ ಇಲ್ಲಿತ್ತು ಎಂದು ಚಿಕ್ಕಮಕ್ಕಳಂತೆ ಕಣ್ಣಾಮುಚ್ಚೆ ಆಟದಂತೆ ನೀರಿನಿಂದ ಬಟಾಬಯಲಾದ ಭೂಮಿಯಲ್ಲಿ ನಿಂತು ತಟ್ಟಾಡುತ್ತಾರೆ. ಇರುಳು ಕವಿಯ್ತುತಿದ್ದಂತೆ ಸಂಭ್ರಮ ಆವರಿಸಿಕೊಂಡ ಜಾಗದಲ್ಲಿ ವಿಷಾದ, ಬೇಸರ, ಬೇಗುದಿ, ಕೀರುನೋವು, ದುಃಖ ಉಮ್ಮಳಿಸಿ ಬರುತ್ತದೆ.

ಎದೆಗೂಡಿನ ಸಂಭ್ರಮ, ಬಿರು ವಿಷಾದಗಳನ್ನೆಲ್ಲ ವನ್ನೂ ಹರಡಿಕೊಂಡು ಪಂಜಾಬಿ ಬರಹಗಾರ, ಪತ್ರಕರ್ತ ಮನಪ್ರೀತ್‌ಸಿಂಗ್‌ ಚಿದ್ವಿ ಕಣ್ಣಮುಂದೆಯೇ ಕಳೆದುಹೋದ ತನ್ನ ಊರಿನ ಕತೆಯನ್ನು ಬರೆಯುತ್ತಾ ಲಕ್ಷಾಂತರ ಪಂಜಾಬಿಗಳಲ್ಲಿ ಹುಚ್ಚು ವಿಷಣ್ಣತೆಯನ್ನು ಎಬ್ಬಿಸುತ್ತಾನೆ. ಪ್ರತಿ ವರ್ಷ ಬಾಕಿರ್ದ್‌ ಆ ಒಂದು ದಿನ ತನ್ನ ಮೈಮೇಲೆ ನಡೆದಾಡಿದ ಜನರ ಸ್ಪರ್ಶಕ್ಕಾಗಿ ಕೈಚಾಚಿ ಕರೆಯುತ್ತದೆ. ಆ ದಿನಕ್ಕಾಗಿ ಅವರೆಲ್ಲ ತಿಂಗಳ ಮೊದಲೇ ಕಾದು ಕುಳಿತಿರುತ್ತಾರೆ.

ಹದಿನೈದು ವರ್ಷಗಳ ಹಿಂದಿನ ಮಾತು. ಊರಿನ ಜನರೆಲ್ಲ ತಂಡೋಪತಂಡವಾಗಿ ಮುಳುಗಿಹೋದ ಬಾಕಿರ್ದ್‌ ನೋಡಲು ಹೋಗಿದ್ದರು. ಮಕ್ಕಳು ಜತೆಯಲ್ಲಿದ್ದರು. ಅವರಿಗೆ ತಾವು ಬದುಕಿ ಬಾಳಿದ ನೆಲವನ್ನು ತೋರಿಸುತ್ತಿದ್ದರು. ಇಡೀ ದಿನವೆಲ್ಲ ಕಳೆದಿದ್ದಾಯಿತು. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅರವತ್ತು ವರ್ಷದ ವಿಧವೆ ಹರವಿಂದರ್‌ ಕೌರ್‌ ನಾಪತ್ತೆ ! ಊರಿಗೆ ನೀರು ನುಗ್ಗುವ ಒಂದು ವರ್ಷ ಮೊದಲು ಗಂಡನನ್ನು ಕಳೆದುಕೊಂಡು ವ್ಯಾಕುಲಗೊಂಡಿದ್ದ ಹರವಿಂದರ್‌ಗೆ ತನ್ನ ಊರನ್ನು ಕಂಡ ತಕ್ಷಣ ಏನನ್ನಿಸಿತೋ ಏನೇ ದಡದಡನೆ ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು. ಬಾಳಿನ ಭೂಮಿಯ ಅಂಗಳದಲ್ಲಿ ಹರವಿಂದರ್‌ ಅಂಗಾತ ಮಲಗಿದ್ದಳು. ಊರಿನ ಅಗಲಿಕೆಯ ನೋವು ಅವಳನ್ನು ಹಿಂಜಿ ಹಿಪ್ಪಲಿ ಮಾಡಿದ್ದಿರಬೇಕು. ಬಾಕಿರ್ದ್‌ನ್ನು ಕಂಡ ತಕ್ಷಣ ಬಾಲ್ಯದ ಚಿತ್ರಗಳೆಲ್ಲ ಸ್ಮೃತಿದೃಶ್ಯಗಳಂತೆ ಹರಿದುಹೋದಾಗ, ಬುದ್ಧಿ ಸವಾರಿ ಮಾಡಲಾರಂಭಿಸಿದಾಗ ಹರವಿಂದರ್‌ ಅಸಹಾಯಕಳಾಗಿ ನೀರಿಗೆ ಇಳಿದಿದ್ದಳು!

ಭಾಕ್ರಾ ನಂಗಲ್‌ ಬಾಕಿರ್ದ್‌ನಂಥ ಐದು ಸಾವಿರ ಹಳ್ಳಿಗಳನ್ನು ಒಂದೇ ಹೊಡೆತಕ್ಕೆ ಆಪೋಶನ ತೆಗೆದುಕೊಂಡಿದೆ. ಮನೆ, ಮಠ, ಹೊಲಗಳನ್ನು ಕಳೆದುಕೊಂಡು ಜತನವಾಗಿರಿಸಿಕೊಂಡು ಬದುಕುತ್ತಿರುವ ಸಾವಿರಾರು ಜನರ ಭಾವನೆಯ ಕದತಟ್ಟಿರುವ ಚಿದ್ವಿ ನೀರಿನಲ್ಲಿ ನೆಲೆ ಕಳೆದುಕೊಂಡವರ ಬದುಕನ್ನು ಹೆಕ್ಕಿ ತೆಗೆದಿದ್ದಾರೆ. ಇದು ಅಣೆಕಟ್ಟು ಅಡ್ಡ ಮಲಗಿದಾಗ ಮುಳುಗಿಹೋದ ಎಲ್ಲ ಊರುಗಳ ಬಾಳನೆಲೆಯನ್ನು ಕಳಕೊಂಡವರ ಕರುಣಾಜನಕ ಕತೆಯೂ ಹೌದು. ಹಾಗೆಂದು ಇದು ಎಲ್ಲರ ಗೋಳು, ಅದರಲ್ಲೇನು ಮಹಾ ಎಂದು ಸಾಮಾನ್ಯೀಕರಿಸುವಂತಿಲ್ಲ . ಎಲ್ಲರ ಹೊಟ್ಟೆಯಲ್ಲಿ ಹುಟ್ಟುವ ಭಾವಬೆಂಕಿಯ ತಾಪಮಾನ ಒಂದೇ ಇರುವುದಿಲ್ಲ . ಒಬ್ಬೊಬ್ಬರ ಬೇಗೆ ಒಂದೊಂದು ರೀತಿ.

ಮೊನ್ನೆ ಬಾಗಲಕೋಟೆಯಲ್ಲಿ ನಿಂತಾಗ ಚಿದ್ವಿಯ ಸಾಲುಗಳು ಕಣ್ಣ ಮುಂದೆ ಜ್ಞಾಪಕ ಚಿತ್ರಪಟದಂತೆ ಸಾಗಿಹೋಗುತ್ತಿದ್ದವು. ಬಾಗಲಕೋಟೆಯೆಂಬ ಅಪ್ಪಟ ಅಮಾಯಕ ಊರಿನ ಕೋಟೆ ಮುರಿದು ನೀರು ಬಂದು ನಿಂತಿದೆ. ಅರ್ಧಕ್ಕಿಂತ ಹೆಚ್ಚು ಊರನ್ನು ನುಂಗಿ ಹಾಕಿದೆ. ಈಗ ಹಾವಿನ ಬಾಯಲ್ಲಿ ಅರ್ಧಕ್ಕೆ ಸಿಲುಕಿಹಾಕಿಕೊಂಡ ಕಪ್ಪೆಯಂತೆ ಇಡೀ ಊರು ಕಾಣುತ್ತಿದೆ. ಮೇಲೆ ಬಂದ ನೀರು ಸಾವಿರಾರು ಮನೆಗಳನ್ನು ಕೆಡವಿಹಾಕಿದೆ. ಪಕ್ಕದ ಮನೆಗೆ ನುಗ್ಗಿದ ನೀರು ನಾಳೆ ನಮ್ಮ ಮನೆಗೂ ಬಂದೀತೆಂಬ ಭೀತಿ ನೀರಿನಿಂದ ಬಚಾವಾದವರನ್ನು ಕಾಡುತ್ತಿದೆ. ಐದು ಸಾವಿರಕ್ಕಿಂತ ಹೆಚ್ಚು ಮನೆಗಳು ಇನ್ನು ಮುಂದೆ ಕುರುಹು ಕೂಡ ಇಲ್ಲದಂತೆ ನೀರಿನ ಗರ್ಭ ಸೇರುತ್ತವೆ. ಕ್ರಮೇಣ ಇಡೀ ಊರು ಜನರ ಹಾಯಿಸಾಲಿನಿಂದ ಹಕನಾಶಿ ಮರೆಯಾಗುತ್ತದೆ. ಆ ಊರನ್ನು ಭೂಪಟದಿಂದ ಅಳಿಸಿಹಾಕಬೇಕಾಗುತ್ತದೆ.

ಆದರೆ ಬಾಗಲಕೋಟೆಯ ಪಾಲಿಗೆ ಹಾಗಾಗಿಲ್ಲ . ಪಕ್ಕದಲ್ಲಿಯೇ ನವನಗರ ಎದ್ದು ನಿಲ್ಲುತ್ತಿದೆ. ರಸ್ತೆಗಳು ಅಗಲವಾಗಿ ಹರವಿಕೊಳ್ಳುತ್ತಿವೆ. ರಸ್ತೆಯ ಮೈಮೇಲೆ ದೀಪದ ಕಂಬಗಳನ್ನು ನಿಲ್ಲಿಸಲಾಗುತ್ತಿದೆ. ಚರಂಡಿಗಳು ಹರಡಿಕೊಳ್ಳುತ್ತಿವೆ. ಗುಡ್ಡದ ಮೇಲೆ ಜಿಲ್ಲಾಧಿಕಾರಿ ಮನೆ, ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜುಗಳು ತಲೆಯೆತ್ತುತ್ತಿವೆ. ಆಸ್ಪತ್ರೆಯ ಕಟ್ಟಡ ಗಮನ ಸೆಳೆಯುತ್ತದೆ. ಜೋಳದ ಹೊಲದಲ್ಲಿ ಬಿಸಿ ಕಾರುತ್ತಿದ್ದ ಗುಡ್ಡಗಳಲ್ಲಿ ಮೆಲ್ಲಗೆ ಒಂದು ಊರು ನೆಟಿಗೆ ಮುರಿದು ಮೇಲೇಳುತ್ತಿದೆ.

ರಸ್ತೆಯಿಲ್ಲದ, ಒಳಚರಂಡಿ ಇಲ್ಲದ, ದೀಪಗಳಿಲ್ಲದ, ಮೂಲಭೂತ ಸೌಕರ್ಯಗಳಿಲ್ಲದ, ಹಂದಿ ಹಾಯುತ್ತಿದ್ದ , ಗಬ್ಬು ನಾರುತ್ತಿದ್ದ ಊರು ಮುಳುಗಿದ್ದು ಒಂದು ದೃಷ್ಟಿಯಲ್ಲಿ ಒಳ್ಳೆಯದೇ ಆಯಿತಲ್ವಾ ? ಈಗ ಅದರ ಪಕ್ಕದಲ್ಲಿ ಎಲ್ಲ ಸೌಲಭ್ಯವಿರುವ ಲಕಲಕ ಮಿರುಗುವ ನವನಗರ ತಲೆಯೆತ್ತುತ್ತಿದೆಯಲ್ವ ? ಎಂದು ಯಾರನ್ನಾದರೂ ಕೇಳಿನೋಡಿ, ನೀವು ನಿರೀಕ್ಷಿಸಿದ ಸಂತಸದ ಪ್ರತಿಕ್ರಿಯೆ ಸಿಗುವುದಿಲ್ಲ . ನವನಗರದ ಯಾವ ಆಡಂಬರ, ಹೊಸತನ, ಮೆರುಗು ಅವರಲ್ಲಿ ಯಾವ ಸಡಗರ, ಉಲ್ಲಾಸವನ್ನೂ ಹುಟ್ಟಿಸುವುದಿಲ್ಲ . ನವನಗರದ ಬಗ್ಗೆ ಮಾತನಾಡಲಾರಂಭಿಸಿದಂತೆಲ್ಲ ಮನಸ್ಸು ಹಿಂದಹಿಂದಕ್ಕೆ ಹೋಗುತ್ತದೆ. ಅದೇ ಹಿಂಬರ್ಕಿಯಲ್ಲಿ ತಮ್ಮ ಮನೆಯ ನಾಗಂತಿಕೆಯಲ್ಲಿ , ಮನೆಯ ಹೆಬ್ಬಾಗಿಲಿನಲ್ಲಿ , ನಡುಮನೆಯ ಕತ್ತಲಕೋಣೆಯಲ್ಲಿ, ಅಜ್ಜನ ಚಿತ್ರದ ಹಿಂಬದಿಯ ಗುಬ್ಬಚ್ಚಿ ಗೂಡಿನಲ್ಲಿ ಹೋಗಿ ನಿಂತು ಏನನ್ನೋ ಅರಸಲಾರಂಭಿಸುತ್ತದೆ. ನವನಗರದಲ್ಲಿ ಎಲ್ಲವೂ ಸಿಗಬಹುದು, ಹೊಸ ಮನೆಯ ಸಮೇತ. ಹೊಸ ಬದುಕಿನ ಸಮೇತ. ಆದರೆ ಅಲ್ಲಿ ಇರಬೇಕಾದುದೇ ಇಲ್ಲ .

ಹಳೇ ನೆನಪುಗಳು, ಸಾಗಿದ ಹೆಜ್ಜೆಗಳು, ಮಣ್ಣಿನಲ್ಲಿ ಹೂತುಕೊಂಡ ತಾಯಿಬೇರೆಂಬ ಜೀವಸೆಲೆ ಅಲ್ಲಿಲ್ಲ .

ಅದೇ ಇಲ್ಲದೇ ಹೋದರೆ ಬದುಕಿಗೆ ಅರ್ಥವಾದರೂ ಏನು? ಹಾಗಂತ ಮನಸ್ಸು ಒಳಗಿಂದೊಳಗೇ ಟ್ಯೂಶನ್‌ ಹೇಳಲು ಆರಂಭಿಸುತ್ತದೆ. ನವನಗರದತ್ತ ಹೆಜ್ಜೆ ಹಾಕುತ್ತಿದ್ದರೆ ಯಾರೋ ಹಿಂಬರ್ಕಿಯಿಂದ ಹಿಡಿದು ಎಳೆದಂತಾಗುತ್ತದೆ, ಜಗ್ಗಿದಂತಾಗುತ್ತದೆ.

ಡಾಲರ್‌ ಕನಸೆಂಬ ಚಾದರ ಹೊದ್ದು ಮಲಗುವ ನಮ್ಮವರು ಅಮೆರಿಕದ ಐಷಾರಾಮಿ ಜೀವನಕ್ಕೆ ತಮ್ಮೆಲ್ಲವನ್ನೂ ಅರ್ಪಿಸಿಕೊಂಡ ನಂತರ, ಊರು ಎಂಬ ನೆನಪು ಬಗಲೊಳಗೇ ಹೊಕ್ಕು, ಕೊರೆಯುವ ಚಳಿಯಂತೆ ಕಾಡಲಾರಂಭಿಸುತ್ತದೆ. ಒಮ್ಮೆ ಇದು ಹೊಕ್ಕಿತೋ ಇದು ಎಂದೆಂದಿಗೂ ಶಮನವಾಗದ ಶೀತ. ಹೀಗಾಗಿ ಡಾಲರ್‌ ಕನಸು ಕಂಡವರೆಲ್ಲ ವರ್ಷಕ್ಕೊಮ್ಮೆ ಊರಿನ ಮಣ್ಣಿಗೆ ಹಣೆ ಹಚ್ಚಿಕೊಂಡು ಹೋಗುತ್ತಾರೆ. ಹೋಗುವಾಗ ಪುನಃ ಅಗಲಿಕೆಯ ನೋವು ಹಿಂಬರ್ಕಿಯಲ್ಲಿ ಕೈಹಿಡಿದು ಜಗ್ಗುತ್ತದೆ.

ಮಣ್ಣಿನ ನೆನಪು ಒಮ್ಮೊಮ್ಮೆ ಹೀಗೆ ಕದಡುತ್ತದೆ, ಗಾಢವಾಗಿ, ನಿಗೂಢವಾಗಿ!

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X