• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿ ನವೆಂಬರ್‌ನಲ್ಲೂ ಕನ್ನಡದ ಅಂಗಳವೇಕೆ ಶೋಕಾಚರಣೆಯ ಬಯಲಾಗುತ್ತದೆ?

By Staff
|
Vishweshwar Bhat ವಿಶ್ವೇಶ್ವರ ಭಟ್‌
ನವೆಂಬರ್‌ ಬಿಸಾತು, ರಾಜ್ಯೋತ್ಸವದ ಖುಷಾಮತ್ತು ಮುಗಿದಿವೆ. ಈ ವರ್ಷದ ಕನ್ನಡದ ಋಣವನ್ನು ತೀರಿಸಿದ್ದಾಗಿದೆ. ನವೆಂಬರ್‌ ಕನ್ನಡ ಪ್ರೀತಿಯನ್ನು ನವೆಂಬರ್‌ಗೇ ಬಿಟ್ಟು ಡಿಸೆಂಬರ್‌ಗೆ ಬಂದಿದ್ದೇವೆ. ಮುಂದಿನ ನವೆಂಬರ್‌ ಬರೋ ತನಕ ಬೇಪರವಾಯಿ ಆದ್ರೆ, ಕನ್ನಡಕ್ಕೆ ಹೈಗೈ ಆದ್ರೆ ಚಿಂತೆಯಿಲ್ಲದೇ ಮಲಗಿಬಿಡುವ ನಾವು, ಕನ್ನಡವನ್ನು ನವೆಂಬರ್‌ ‘ಫಸ್ಟ್‌’ ಮಾತ್ರ ಸೀಮಿತವಾಗಿಟ್ಟುಕೊಂಡಿರುವ ನಾವು, ನವೆಂಬರ್‌ನಲ್ಲಿ ಮಾತ್ರ ಕನ್ನಡ ಅಂತ ಬಾತಖಾನಿ ಮಾಡುವ ನಾವು, ಅನಂತರ ಕನ್ನಡವನ್ನು ಮುಂದಿನ ನವೆಂಬರ್‌ಗೆ ವಿಚಾರಿಸಿಕೊಳ್ಳುವ ನಾವು ಈ ಸಲದ ರಾಜ್ಯೋತ್ಸವವನ್ನು ಹೇಗೆ ಆಚರಿಸಿದೆವು? ಈ ಸಲದ ರಾಜ್ಯೋತ್ಸವದಲ್ಲಿ ಕನ್ನಡ. ಕನ್ನಡದಲ್ಲಿ ರಾಜ್ಯೋತ್ಸವ ಇತ್ತಾ ಎಂಬುದನ್ನು ಯೋಚಿಸಬೇಕಿದೆ. ಇಲ್ಲದಿದ್ದರೆ ಮುಂದಿನ ವರ್ಷವೂ ನಾವು ಇದೇ ರೀತಿಯ ರಾಜ್ಯೋತ್ಸವ ಮಾಡಿ ಮುಗಿಸುತ್ತೇವೆ. ಕಾರಣ ಇಲ್ಲಿಯವರೆಗೆ ನಾವು ರಾಜ್ಯೋತ್ಸವ ಆಚರಿಸಿದ್ದು ಹೀಗೇ ತಾನೆ?

Why the month of November has become so notorious for Karnataka?ನಮ್ಮ ಸರಕಾರಕ್ಕಾಗಲಿ, ಮುಖ್ಯಮಂತ್ರಿಗಾಗಲಿ ಕನ್ನಡ ರಾಜ್ಯೋತ್ಸವಕ್ಕೂ, ಯಾರದೋ ಪುಣ್ಯತಿಥಿಗೂ ಇರುವ ವ್ಯತ್ಯಾಸವೇ ಗೊತ್ತಿಲ್ಲ. ಏಕೆಂದರೆ ಈ ಎರಡರ ಆಚರಣೆಯಲ್ಲಿ ಸ್ವಲ್ಪವೂ ವ್ಯತ್ಯಾಸವೇ ಇಲ್ಲ. ಮುಖ್ಯಮಂತ್ರಿಯಾದವರು ಕನ್ನಡ ಕುರಿತು ತಮ್ಮ ಆದ್ಯತೆಗಳನ್ನು ಗಮನಿಸದೇ ಯಾರೋ ಬರೆದುಕೊಟ್ಟ ಭಾಷಣವನ್ನು ಓದುತ್ತಾರೆ. ಯಾವತ್ತೂ ಜಾರಿಯಾಗದ, ಜಾರಿ ಮಾಡಲೇಬಾರದೆಂದು ನಿರ್ಧರಿಸಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡುತ್ತೇನೆಂದು ಘೋಷಿಸುತ್ತಾರೆ. ಕನ್ನಡದ ನೆಲ, ಜಲ, ಗಡಿ ಕಾಯಲು ಬದ್ಧ ಎಂದು ಛೋಡುತ್ತಾರೆ. ಕನ್ನಡಿಗರಿಗೆ ಉದ್ಯೋಗ ನೇಮಕಾತಿಯಲ್ಲಿ ಆದ್ಯತೆ ನೀಡುತ್ತೇವೆ ಎಂದು ಸುಳ್ಳು ಹೇಳುತ್ತಾರೆ. ಈ ಸುಳ್ಳುಗಳ ಸಾಲಿಗೆ ಈ ವರ್ಷದಿಂದ ಹೊಸತೊಂದು ಸೇರ್ಪಡೆಯಾಗಿದೆ- ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಘೋಷಿಸುವಂತೆ ಪ್ರಧಾನಿಯವರನ್ನು ಒತ್ತಾಯಿಸುತ್ತೇವೆ ಎಂಬುದು. ಈ ಮಾತುಗಳಲ್ಲಿ ಅಜೀಬಾತು ಸತ್ಯ ಇಲ್ಲವೆಂಬುದು ನಮ್ಮೆಲ್ಲರಿಗೂ ಗೊತ್ತು. ಮೊಟ್ಟ ಮೊದಲನೆಯದಾಗಿ ರಾಜ್ಯದ ಮುಖ್ಯಮಂತ್ರಿಯಾದವನು ಕರ್ನಾಟಕದಲ್ಲಿ ಕನ್ನಡ ಕಡ್ಡಾಯ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಎಂದು ಹೇಳುವುದೇ ನಾಚಿಕೆಗೇಡು. ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮಾಡದೇ ಬೇರೆ ಭಾಷೆಯನ್ನು ಕಡ್ಡಾಯ ಮಾಡಲು ಸಾಧ್ಯವಾ? ಇದು ಗೊತ್ತಿದ್ದೂ ಕನ್ನಡವನ್ನು ಕಡ್ಡಾಯ ಮಾಡಿಲ್ಲ ಅಂದ್ರೆ, ರಾಜ್ಯೋತ್ಸವ ಆಚರಿಸಲು ಶುರು ಮಾಡಿ ನಲವತ್ತೊಂಬತ್ತು ವರ್ಷಗಳ ನಂತರವೂ ಕನ್ನಡ ಕಡ್ಡಾಯ ಮಾಡ್ತೇವೆ ಎಂದು ಹೇಳುವುದಿದೆಯಲ್ಲ ಅದು ಹೇಸಿಗೆ, ರೇಜಿಗೆ ಹುಟ್ಟಿಸುವಂಥದ್ದು. ಕನ್ನಡ , ಭುವನೇಶ್ವರಿಯ ಹೆಸರಿನಲ್ಲಿ ಆಣೆ ಮಾಡಿ ಸುಳ್ಳು ಹೇಳುತ್ತಾ ಬಂದಿರುವ ನಮ್ಮ ಮುಖ್ಯಮಂತ್ರಿಯನ್ನಾಗಲಿ, ಮಂತ್ರಿಯಾಗಲಿ, ಮಂತ್ರಿಯಾಗಲಿ ತಮಿಳರೂ ಅಲ್ಲ, ಮಲಯಾಳಿಗಳೂ ಅಲ್ಲ. ಅವರು ನಮ್ಮವರೇ. ಅಪ್ಪಟ ಕನ್ನಡಿಗರೇ. ಆದರೂ ಇವರು ಕನ್ನಡ ಕಡ್ಡಾಯ ಮಾಡುವುದಿಲ್ಲ. ಕನ್ನಡದ ಬಗ್ಗೆ ತಿರಸ್ಕಾರ ಧೋರಣೆ ತಾಳುವ ಅಧಿಕಾರಿಗಳ ಕಿವಿ ಹಿಂಡುವುದಿಲ್ಲ. ಕನ್ನಡದ ಇಜ್ಜತ್‌ ಮೂರಾಬಟ್ಟೆ ಮಾಡುವ ಅನ್ಯ ಭಾಷಿಕರಿಗೆ ಲಗಾಮು ಹಾಕುವುದಿಲ್ಲ. ಕನ್ನಡದ ಬಗ್ಗೆ ತಿರಸ್ಕಾರ ಧೋರಣೆ ತಾಳುವ ಅಧಿಕಾರಿಗಳ ಕಿವಿ ಹಿಂಡುವುದಿಲ್ಲ. ಕನ್ನಡದ ಇಜ್ಜತ್‌ ಮೂರಾಬಟ್ಟೆ ಮಾಡುವ ಅನ್ಯಭಾಷಿಕರಿಗೆ ಲಗಾಮು ಹಾಕುವುದಿಲ್ಲ. ಕನ್ನಡದ ವಿರುದ್ಧ ಮಾತೆತ್ತಿದರೆ ಖಬರ್‌ದಾರ್‌ ಎಂದು ಸಮಜೂತು ಹೇಳುವುದಿಲ್ಲ. ನವೆಂಬರ್‌ನಲ್ಲೇ ಈ ಮಾತು ಹೇಳದಿದ್ದರೆ ಇನ್ನ್ಯಾವಾಗ ಆಣಿಮುತ್ತು ಹೊರಬಿದ್ದೀತು? ಬಸ್‌ಸ್ಟ್ಯಾಂಡಿನಲ್ಲಿ ನಿಂತ ಏಳೆಂಟು ಜನ ಭ್ರಷ್ಟಚಾರ, ಕರ್ಮಕಾಂಡ, ಲಂಚದ ಬಗ್ಗೆ ಖಾರವಾಗಿ ಖಡಾಖಡಿ ಮಾತಾಡಿ, ಅನಂತರ ಬಸ್‌ ಬರುತ್ತಿದ್ದಂತೆ ಅದನ್ನೇರಿ ಟಿಕೆಟ್‌ ಇಲ್ಲದೇ ಪಯಣಿಸಿ ಊರು ಸೇರಿದ ಹಾಗಾಯಿತು ನಮ್ಮ ಕತೆ. ‘ಟಿಕೆಟ್‌ ಇಲ್ಲದೇ ಪಯಣಿಸಿ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕ ಹಕ್ಕುಇದೆಯೇನ್ರಿ’ ಅಂತ ಅವರನ್ನು ಕೇಳಿದರೆ, ‘ಸ್ವಾಮಿ, ನಾವು ಕಾಯ್ತಾ ಇದ್ದ ಬಸ್‌ ಬರಲಿಲ್ಲ. ಟೈಂಪಾಸಿಗೆ ಅಂತ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾ ಇದ್ವಿ. ಸುಮ್ನೆ ಹೋಗ್ರಿ’ ಅಂತ ಹೇಳುತ್ತಾರೆ. ಕನ್ನಡದ ಬಗ್ಗೆ ನಮ್ಮ ಅಭಿಮಾನ , ಕಳವಳಿ ಹಾಗೂ ಪ್ರೀತಿ ಕೂಡ ಈ ಹಂತಕ್ಕೆ ಬಂದು ತಲುಪಿಬಿಟ್ಟಿದೆಯಾ? ‘ಇಲ್ಲ’ ಅಂತ ಹೇಳಲಿಕ್ಕೆ ಧೈರ್ಯ ಇಲ್ಲ.

ರಾಜ್ಯಾದ್ಯಂತ ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಕಾರ್ಯಕ್ರಮಗಳ ಬಹುತೇಕ ವರದಿಗಳು ನನ್ನ ಮೇಜಿನ ಮೇಲಿವೆ. ನೂರಾರು ಮಂದಿ ಈ ಸಂದರ್ಭದಲ್ಲಿ ಹೇಳಿದ ಮಾತುಗಳಿವೆ. ಇವನ್ನೆಲ್ಲ ಗಮನಿಸಿದರೆ ಒಂದು ಸಂಗತಿ ವೇದ್ಯ. ನಾವು ರಾಜ್ಯೋತ್ಸವವೆಂಬ ಕನ್ನಡ ಹಬ್ಬ ಆಚರಿಸುತ್ತಿದ್ದೇವಾ ಅಥವಾ ಕನ್ನಡಕ್ಕೆ ಒದಗಿಬಂದ ಸ್ಥಿತಿಗತಿ ಬಗ್ಗೆ ಮರುಗುತ್ತಾ ಶೋಕ ಆಚರಿಸುತ್ತಿದ್ದೇವಾ ಎಂಬುದು ಗೊತ್ತಾಗುವುದಿಲ್ಲ. ಒಬ್ಬರಲ್ಲೂ ಉತ್ಸಾಹದ ಮಾತುಗಳಿಲ್ಲ. ಎಲ್ಲರ ಗಂಟಲಲ್ಲೂ ಕಳವಳ, ಡುಗಡುಗಿ. ಕನ್ನಡದ ಮನೆಯಲ್ಲಿ ಸೂತಕದ ಛಾಯೆ. ಕನ್ನಡಕ್ಕೆ ಎಲ್ಲೆಡೆಯಿಂದ ಅಪಾಯ ಒದಗಿಬರುತ್ತಿದೆಯೆಂಬ ಆತಂಕ. ಪರಿಸ್ಥಿತಿ ಹೀಗೇ ಮುಂದುವರಿದರೆ ಕನ್ನಡಕ್ಕೆ ಕುತ್ತು ಕಟ್ಟಿಟ್ಟದ್ದು ಎಂಬುದೇ ಎಲ್ಲರ ರಾಗ. ಎಲ್ಲರ ಮಾತುಗಳನ್ನು ಕೇಳಿದರೆ ಕನ್ನಡ ರಾಜ್ಯೋತ್ಸವವೆಂದರೆ ಕನ್ನಡದ ಶೋಕಾಚರಣೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ. ದುರಂತವೆಂದರೆ ಕಳೆದ ಮೂರ್ನಾಲ್ಕು ದಶಕಗಳಿಂದ ನಾವು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಇಂಥವೇ ಶೋಕಭರಿತ ಮಾತುಗಳನ್ನು ಕೇಳುತ್ತಾ ಬಂದಿದ್ದೇವೆ. ಅಂದರೆ ಇಷ್ಟು ವರ್ಷಗಳಲ್ಲಿ ಕನ್ನಡದ ಬಗ್ಗೆ ಖುಷಿಪಡುವ, ರಾಜ್ಯೋತ್ಸವ ಬಂದರೆ ಹಬ್ಬ ಮಾಡುವಂಥ ಸಂದರ್ಭವೇ ನಮಗೆ ಬಂದಿಲ್ಲ ಅಂದಂತಾಯಿತು. ಇದು ನಿಜ ಕೂಡ. ಕನ್ನಡದ ಬಗ್ಗೆ ಅಂಥ ಅಭಿಮಾನಪಡುವ ಕೆಲಸವೇನಾಗಿದೆ ಹೇಳಿ? ಅಭಿಮಾನಪಡುವ ಸಂಗತಿಗಳನ್ನು ಪಟ್ಟಿ ಮಾಡುವ ವೇಳೆಯಲ್ಲಿ ಕನ್ನಡದ ಬಗ್ಗೆ ಅಪಮಾನದಿಂದ ತಲೆತಗ್ಗಿಸುವಂಥ ಅಸಂಖ್ಯ ಸಂಗತಿಗಳೇ ನಮಗೆ ಗೋಚರಿಸುತ್ತವೆ. ಹೀಗಾಗಿ ರಾಜ್ಯೋತ್ಸವವನ್ನು ಕನ್ನಡಿಗರ ಹಬ್ಬ ಅಂತ ತಿಳಿದುಕೊಂಡು ಆಚರಿಸೋಣ ಅಂತ ಅಂದ್ರೆ ಸೂತಕ, ಸಂತಾಪದ ಚಿತ್ರಣಗಳೇ ಕಣ್ಮುಂದೆ ಬರುತ್ತವೆ. ಹೀಗಾಗಿ ನಮಗೆ ಯಾವುದು ಸುಗ್ಗಿಯಾಗಬೇಕಿತ್ತೋ, ಯಾವುದು ಸೆಲೆಬ್ರೇಶನ್‌ ಆಗಬೇಕಿತ್ತೋ ಅದು ಹುಬೇಹೂಬ್‌ ಶೋಕವಾಗುತ್ತಿದೆ. ಸಂತಸವಿದ್ದರೆ ತಾನೆ ಹಬ್ಬ ಮಾಡೋದು. ‘ಅಪ್ಪನನ್ನು ತೋರಿಸು. ಇಲ್ಲದಿದ್ದರೆ ಶ್ರಾದ್ಧ ಮಾಡು’ ಎಂಬಂತಾಗಿದೆ ನಮ್ಮ ಪಾಡು. ಈ ಸಲದ ರಾಜ್ಯೋತ್ಸವ ಕೂಡ ಅದರ ಮುಂದುವರಿದ ಭಾಗವಾಗಿತ್ತು ಅಷ್ಟೆ.

ಕನ್ನಡಕ್ಕೆ ನಿಜವಾಗಿಯೂ ಅಂಥ ಸ್ಥಿತಿ ಬಂದಿದೆಯಾ? ಅಂಥ ಸ್ಥಿತಿ ಬರೋದೇನು, ಬಂದು ಕುಳಿತು ಎಷ್ಟೋ ವರ್ಷಗಳಾಗಿವೆ. ಇಂದು ನಾವು ಆಡುವ ಕನ್ನಡ ಪೂರ್ತಿ ಕನ್ನಡವಾಗಿ ಉಳಿದಿಲ್ಲ. ಶೇ. 30-40 ಇಂಗ್ಲಿಷು ಆವರಿಸಿದೆ. ಕನ್ನಡದ ಮಧ್ಯೆ ಮಧ್ಯೆ ಇಂಗ್ಲಿಷು ಪದ ಸೇರಿಸುವುದು ಫ್ಯಾಶನ್‌. ಅದಕ್ಕಿಂತ ಹೆಚ್ಚಾಗಿ ಇಂಗ್ಲಿಷು ಪದಗಳನ್ನು ಬಳಸದೇ ಕನ್ನಡ ಮಾತಾಡೋದು ಸವಾಲು. ಅಪ್ಪಟ ಕನ್ನಡದಲ್ಲಿ ಮಾತಾಡೋದು ಅರ್ಥವಾಗಲಿಕ್ಕಿಲ್ಲವೇನೋ ಎಂದು ನಾವೇ ಇಂಗ್ಲಿಷಿನಲ್ಲಿ ಹೇಳಬೇಕಾದ ಅನಿವಾರ್ಯತೆ. ಅನ್ನ ತಗೊಂಬಾ ಅಂತ ಹೋಟೆಲ್‌ನಲ್ಲಿ ಮಾಣಿಯನ್ನು ಕೂಗಿದರೆ, ‘ಏನ್‌ ಸಾರ್‌ ರೈಸ್‌ ಬೇಕಾ?’ ಅಂತ ಕೇಳುತ್ತಾನೆ. ‘ಹೌದಪ್ಪ ವೈಟ್‌ ರೈಸ್‌ ಬೇಕು’ ಅಂದರೆ ಆತನಿಗೆ ಅರ್ಥವಾಗುತ್ತದೆ. ರಾಜೀನಾಮೆ ಕೊಟ್ಟರು ಎಂದು ಹೇಳುವಾಗಲೆಲ್ಲ ನಾವು ‘ರಿಸೈನ್‌ ಮಾಡಿದರು’ ಅಂತಾನೆ ಹೇಳುತ್ತೇವೆ. ಬೆಂಗಳೂರಿನಲ್ಲಿ ಕನ್ನಡ ಮಾತಾಡೋದನ್ನ ಕೇಳಬೇಕು. ಆ ತಾಯಿ ಭುವನೇಶ್ವರಿಗೇ ಪ್ರೀತಿ. ‘ಸಾರ್‌ ಮದ್ರಾಸ್‌ ಮೇಲ್‌ ಟ್ರೇನು ಟೆನ್‌ ಮಿನಿಟ್ಸು ಲೇಟ್‌ ಕಮಿಂಗಂತೆ, ಕರೆಕ್ಟಾ?’ ಅಂತಾರೆ. ಕನ್ನಡವನ್ನು ದುರ್ಬೀನು ಹಿಡಿದು ಹುಡುಕಬೇಕಾಗುತ್ತದೆ. ಬೆಂಗಳೂರಲ್ಲಿ ಕಾಲೇಜು ಹುಡುಗ ಹುಡುಗಿಯರು ಮಾತಾಡೋದೇ ಹೀಗೆ. ಅವರ ಮುಂದೆ ಶುದ್ಧ ಕನ್ನಡದಲ್ಲಿ ಮಾತಾಡಿದರೆ ನಮ್ಮ ಕನ್ನಡವನ್ನು ಅವರ ಕನ್ನಡಕ್ಕೆ (ಅಂದ್ರೆ ಕಂಗ್ಲಿಷಿಗೆ) ತರ್ಜುಮೆ ಮಾಡಿ ಹೇಳಬೇಕಾಗುತ್ತದೆ. I cant speak kannada, I cant read kannada. But I can understand kannada ಎಂಬುದು ಬೆಂಗಳೂರಿನಾದ್ಯಂತ ಕೇಳಿಬರುತ್ತಿರುವ ಹೊಸ ಘೋಷಣೆ. ಇನ್ನೂ ಕೆಲವರಿಗೆ ಕನ್ನಡವೆಂದರೆ ಗ್ರೀಕು. ನಮ್ಮ ಪತ್ರಿಕೆಯಲ್ಲಿ ಬಹುಭಾಷಾ ವಿದ್ವಾಂಸ ಡಾ. ಶತಾವಧಾನಿ ಆರ್‌.ಗಣೇಶ್‌ ಅಂಕಣ ಬರೆಯುತ್ತಿದ್ದುದು ನಿಮಗೆ ಗೊತ್ತಿದೆ. ಅವರದು ಶುದ್ಧಾತಿಶುದ್ಧ ಕನ್ನಡ. ಜತೆಯಲ್ಲಿ ಸಂಸ್ಕೃತದ ಲಾಲಿತ್ಯ. ಬಹುತೇಕ ಕನ್ನಡಿಗರ ಒಂದೇ ಅಳಲು-‘ಶತಾವಧಾನಿಗಳ ಕನ್ನಡ ಅರ್ಥವಾಗುವುದಿಲ್ಲ. ಕಾರಣ ಅವರು ಅಪ್ಪಟ, ಶುದ್ಧ ಕನ್ನಡದಲ್ಲಿ ವ್ಯಾಕರಣ ಬದ್ಧವಾಗಿ ಬರೆಯುತ್ತಾರೆ! ಅವರ ಕನ್ನಡವನ್ನು ಕನ್ನಡಕ್ಕೇ ಅನುವಾದ ಮಾಡಿಕೊಂಡು ಓದಬೇಕಾಗುತ್ತದೆ. ನೋಡಿ ಇದೆಂಥ ಕರ್ಮ? ಇದೆಂಥ ವಿಪರ್ಯಾಸ? ಶುದ್ಧವಾಗಿ ಕನ್ನಡ ಬರೆದರೆ ಕನ್ನಡಿಗರಿಗೆ ಅರ್ಥವೇ ಆಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಹಾಗೆ ಬರೆಯುವುದೇ ಅಪರಾಧ ಎಂದು ಪರಿಗಣಿಸಿರುವುದು. ಶತಾವಧಾನಿಗಳು ಒಂದೇ ಶಿಸ್ತು, ಬದ್ಧತೆಯಿಂದ ಬರೆದರು. ನಮ್ಮ ಕನ್ನಡ ಎಷ್ಟು ಮಲಿನವಾಗಿದೆಯೆಂದರೆ ಅವರು ಶುದ್ಧ ಭಾಷೆಯಲ್ಲಿ ಬರೆದರೆ ಅದನ್ನು ಓದಲು, ಅರ್ಥಮಾಡಿಕೊಳ್ಳಲು ಆಗದಷ್ಟು.

ಇಲ್ಲೊಂದು ಪ್ರಸಂಗ ಹೇಳಬೇಕು. ರಾಜ್ಯೋತ್ಸವದ ನಿಮಿತ್ತ ಬೆಂಗಳೂರಿನ ಪ್ರತಿಷ್ಠಿತ ಹೈಸ್ಕೂಲೊಂದರಲ್ಲಿ ಸ್ಪರ್ಧೆಯಾಂದನ್ನು ಏರ್ಪಡಿಸಲಾಗಿತ್ತು. ಶುದ್ಧ ಕನ್ನಡದಲ್ಲಿ ಬರೆಯುವ ಹಾಗೂ ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆ. ಕನ್ನಡ ಮಾಧ್ಯಮದಲ್ಲಿ ಕಲಿಸುವ ಶಾಲೆಯಲ್ಲಿ ಕನ್ನಡದ ಬಗ್ಗೆ ನಡೆಸುವ ಸ್ಪರ್ಧೆಯಿದು! ದುರ್ದೈವ ಇದಲ್ಲ. ಎರಡು ಸಾವಿರ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದವರು ಕೇವಲ ಹದಿಮೂರು ಮಂದಿ. ಎರಡೂ ಸ್ಪರ್ಧೆಗಳಲ್ಲಿ ಆರು ಬಹುಮಾನಗಳನ್ನಿಟ್ಟರೆ ಪಡೆದವರು ನಾಲ್ವರು ಮಾತ್ರ. ಮೊದಲ ಬಹುಮಾನಕ್ಕೆ ಅರ್ಹರಾಗುವ ಅಭ್ಯರ್ಥಿಗಳೇ ಇರಲಿಲ್ಲ. ನಮ್ಮ ಮಕ್ಕಳೂ ಕನ್ನಡದ ಬಗ್ಗೆ ಎಂಥ ಅನಾದರ ತೋರುತ್ತಿದ್ದಾರೆಂಬುದಕ್ಕೆ ಇದು ತೋರುಬೆರಳು.

ನಮ್ಮ ಮಾತು, ಬರಹ ಹಾಗೂ ಕೃತಿಗಳಲ್ಲಿ ಕನ್ನಡ ನಿಧಾನವಾಗಿ ಕ್ಷೀಣಿಸುತ್ತಿದೆ. ಕನ್ನಡ ಬಿಟ್ಟು ಬೇರೆ ಭಾಷೆ (ಇಂಗ್ಲೀಷು ಅಂತ ಓದಿಕೊಳ್ಳಿ)ಬರೊಲ್ಲ ಅಂದ್ರೆ ಅಂಥವರನ್ನು ಅಬ್ಬೇಪಾರಿಗಳಂತೆ ಕ್ಯಾಕರಿಸಿ ನೋಡುತ್ತೇವೆ. ಇಂಗ್ಲಿಷಿನಲ್ಲಿ ಮಾತಾಡುವವರು ಧರೆಗಿಳಿದು ಬಂದವರಂತೆ ತೋರುತ್ತಾರೆ. ಯಾರೇ ಅಪರಿಚಿತರು ಎದುರಾದಾಗ ಇಂಗ್ಲಿಷಿನಲ್ಲೇ (ಅದೆಷ್ಟೇ ಕೆಟ್ಟದಾಗಿರಲಿ) ಮಾತಿಗೆ ಶುರುವಿಡುತ್ತೇವೆ, ನಮ್ಮ ಮುಂದಿರುವವನಿಗೆ ಕನ್ನಡ ಗೊತ್ತು ಎಂಬುದು ಗೊತ್ತಿದ್ದರೂ. ನಮ್ಮ ದೃಷ್ಟಿಯಲ್ಲಿ ಕನ್ನಡವೆಂದರೆ ಭಾಷೆ. ಇಂಗ್ಲಿಷು ಅಂದ್ರೆ ಜ್ಞಾನ. ಇಂಗ್ಲಿಷು ಗೊತ್ತಿದ್ದರೆ ಅದೇ ಬ್ರಹ್ಮಜ್ಞಾನ ಎಂಬ ಚಕಣಾಚೂರು ತಿಳಿವಳಿಕೆ ನಮ್ಮದು. ಹೀಗಾಗಿ ಕನ್ನಡದಲ್ಲಿ ಯಾವನಾದರೂ ಮಾತಿಗಾರಂಭಿಸಿದರೆ ನಮಗೆ ಅವನ ಬಗ್ಗೆ ಅಭಿಮಾನದ ಬದಲು ಅನುಕಂಪ ಮೂಡುತ್ತದೆ. ಹಾಗಂತ ನಮ್ಮ ಭಾಷೆಯನ್ನು ತಿರಸ್ಕಾರದಿಂದ ನೋಡಿ ಅಂತ ಯಾವನೋ ಅಂಗ್ರೇಜಿ ಬಿಳಿಯ ಬಂದು ಹೇಳಲಿಲ್ಲ. ಎಂಥ ದುರಂತ!

ಬೆಂಗಳೂರಿನ ಸಿಟಿ ಬಸ್‌ನಲ್ಲಿ ಒಬ್ಬಕನ್ನಡಪ್ರೇಮಿ ಕಂಡಕ್ಟರ್‌ ಇದ್ದಾನೆ. ಆತನ ನಾಲಗೆಯಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆ ಹೊರಳಾಡುವುದಿಲ್ಲ. ಆತ ಅಚ್ಚ ಕನ್ನಡದಲ್ಲೇ ಮಾತಾಡುತ್ತಾನೆ. ‘ಪ್ರಯಾಣಿಕರೇ ರಸೀತಿ ಪಡೆಯಿರಿ, ಪ್ರಯಾಣಿಕರೇ ಚಿಲ್ಲರೆ ಕೊಡಿ, ನಿಲ್ದಾಣ ಬಂತು ಇಳಿಯಿರಿ, ದಂಡು ಪ್ರದೇಶ ಬಂತು, ಚಾಲಕರೇ ನಿಲ್ಲಿಸಿ, ಇದು ಆಂಜನೇಯ ದೇಗುಲದ ತಿರುವು ನಿಲ್ದಾಣ’ ಎಂದು ಹೇಳುತ್ತಾ ಆತ, ಪ್ರಯಾಣಿಕರಿಗೆ ಸೂಚಿಸಿದರೆ ಬಸ್ಸಿಗೆ ಬಸ್ಸೇ ಗೊಳ್ಳೆಂದು ನಗುತ್ತಿರುತ್ತದೆ. ಆತನ ಮಾತು ಮನರಂಜನೆ. ಅಪ್ಪಟಾಪ್ಪಟ ಕನ್ನಡದಲ್ಲಿ ಮಾತಾಡಿದರೆ ಜನ ಆತನನ್ನು ಮುಶಂಡಿಯಂತೆ, ಗುಗ್ಗುವಿನಂತೆ ನೋಡುತ್ತಾರೆ. ಅಂಗ್ರೇಜಿ ಬಳಸದೇ ಪೂರ್ತಿ ಕನ್ನಡದಲ್ಲಿ ಮಾತನಾಡುವವನನ್ನು ನಾವು ಜೋಕರ್‌ ಥರಾ ನೋಡುತ್ತೇವೆ.‘ಯು ನೋ, ಹಿಸ್‌ ಕನ್ನಡ ಈಸ್‌ ಎಕ್ಸಲೆಂಟ್‌’ ಎಂದು ಶಹಬ್ಭಾಷ್‌ ಕೊಡುತ್ತೇವೆ.

ಹೇಳಿ, ಯಾರನ್ನು ದೂರೋಣ ಅಥವಾ ನಮ್ಮ ದೂರನ್ನು ಯಾರಿಗೆ ಹೇಳೋಣ ? ಉಡದಾರ ತೊಡದವನ ಮುಂದೆ ಲಂಗೋಟಿ ತೊಟ್ಟಿಲ್ಲವೆಂದು ದೂರು ಹೇಳಿದಂತಾಯಿತು ನಮ್ಮ ಸ್ಥಿತಿ. ಅದೇನೇ ಇರಲಿ, ಕನ್ನಡ ರಾಜ್ಯೋತ್ಸವ ಮಾತ್ರ ನಡೆಯುತ್ತಿರುತ್ತದೆ. ಅಲ್ಲಿ ಭಾಷಣ, ಆರ್ಕೆಸ್ಟ್ರಾಗಳಿರುತ್ತವೆ. ಇರದಿರುವುದು ಹಾಗೂ ಇರಲೇ ಬೇಕಾಗಿದ್ದು ಕನ್ನಡ ಮಾತ್ರ.

(ಸ್ನೇಹಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more