ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಪನೆಗೆ ನಿಲುಕದ್ದು , ಲೆಕ್ಕಕ್ಕೆ ಸಿಕ್ಕದ್ದು , ತೆಕ್ಕೆಗೂ ದಕ್ಕದ್ದು !

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಮನಸ್ಸು ಮತಗಟ್ಟೆಯಾಗಿ ಚುನಾವಣೆಯನ್ನು ಎದುರು ನೋಡುತ್ತಿದೆ. ಪ್ರಜಾಪ್ರಭುತ್ವವೆಂಬ ದೇಗುಲಕ್ಕೆ ಈ ಚುನಾವಣೆಯೇ ಗರ್ಭಗುಡಿ. ಐದು ವರ್ಷಕ್ಕೊಮ್ಮೆ- ಕೆಲವು ಸಲ ಅದಕ್ಕೂ ಮೊದಲು- ಚುನಾವಣೆ ನಮ್ಮ ಮುಂದೆ ನಿಂತಾಗ ಬೇಕೋ, ಬೇಡವೋ, ಸ್ವಾಗತಿಸಲೇಬೇಕು. ಅಂಥ ಒಂದು ಮಹಾಚುನಾವಣೆ ಈಗ ನಮ್ಮ ಮುಂದಿದೆ.

ಚುನಾವಣೆಯ ಪ್ರಮುಖ ಪಾತ್ರಧಾರಿಗಳಾದ ರಾಜಕಾರಣಿಗಳನ್ನು ಚುನಾವಣೆಯ ಬಗ್ಗೆ ಕೇಳಿ ನೋಡಿ. ಹತ್ತಾರು ಬಾರಿ ಆಯ್ಕೆಯಾದ ಶಾಸಕ, ಸಂಸದನಿಗೆ ಕೂಡ ಮತದಾರನ ಮನಸ್ಸಿನಲ್ಲಿ ಏನಿದೆಯೆಂಬುದು ಗೊತ್ತಾಗುವುದಿಲ್ಲ. ಮೊದಲ ಬಾರಿಗೆ ಗೆಲ್ಲುವಾಗಲೂ ಆತನಿಗೆ ಇದೇ ದುಗುಡ, ಆತಂಕ, ಅನುಮಾನಗಳಿದ್ದವು. ಈಗಲೂ ಅದೇ ಅನುಮಾನದ ಹುತ್ತ ಅವನ ಸುತ್ತ ಆವರಿಸಿದೆ. ಲಕ್ಷ ಮತಗಳ ಅಂತರದಿಂದ ಆರಿಸಿ ಬರಲಿ. ಮತಪೆಟ್ಟಿಗೆ ತೆರೆಯುವ ತನಕ ಆರಿಸಿ ಬರುವುದರ ಬಗ್ಗೆ ಸಂದೇಹಗಳು ಇರುತ್ತವೆ. ಮೊನ್ನೆ ಅರುಣ್‌ ಜೇಟ್ಲಿ ಹೇಳಿದ ಮಾತುಗಳನ್ನು ಕೇಳಿರಬಹುದು- ನಮ್ಮೆಲ್ಲ ಲೆಕ್ಕಾಚಾರಗಳು ತಲೆಕೆಳಗಾಗುವುದು ಚುನಾವಣೆಯಲ್ಲಿ ಮಾತ್ರ.

ನೆನಪಿರಬಹುದು, ವಿನ್‌ಸ್ಟನ್‌ ಚರ್ಚಿಲ್‌ ಅವರ ಚುನಾವಣೆ ಸೆಣಸು. ಚರ್ಚಿಲ್‌ ಬ್ರಿಟನ್‌ನ ಪ್ರಧಾನಿಯಾದವರು. ಯುರೋಪ್‌ ಕಂಡ ಧೀಮಂತ ನಾಯಕರಲ್ಲೊಬ್ಬರು. ವಿಶ್ವದ ಹತ್ತು ಶ್ರೇಷ್ಠ ಮುತ್ಸದ್ದಿಗಳಲ್ಲಿ ಒಬ್ಬರೆಂದು ಪರಿಗಣಿತರಾದವರು. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಬಿಟನ್‌ನ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದವರು. ಈ ಸಂದರ್ಭದಲ್ಲಿ ಮೆರೆದ ನಾಯಕತ್ವದಿಂದಾಗಿ ಜಾಗತಿಕ ಮನ್ನಣೆಗೆ ಪಾತ್ರರಾದರು.

Winston Churchill : The master statesman stood alone against fascismವಿಷಯ ಅದಲ್ಲ. ಇಂಥ ಚರ್ಚಿಲ್‌ ಮುಂದಿನ ಚುನಾವಣೆಗೆ, ಅಂದರೆ ಮಹಾ ಯುದ್ಧ ಮುಗಿದ ಮರುವರ್ಷ ನಡೆಯುವ ಚುನಾವಣೆಗೆ ನಿಲ್ಲುತ್ತಾರೆ. ಇಡೀ ರಾಷ್ಟ್ರಕ್ಕೆ ಗೌರವ, ಘನತೆ, ವಿಜಯ ದೊರಕಿಸಿಕೊಟ್ಟ ಮಹಾನ್‌ ನಾಯಕ ಚುನಾವಣೆಗೆ ನಿಂತರೆ ಅವರ ಗೆಲುವಿನ ಸಾಧ್ಯತೆಯ ಬಗ್ಗೆ ಅನುಮಾನಗಳೇಕೆ? ಹಾಗೆಂದು ಎಲ್ಲರೂ ಭಾವಿಸಿದ್ದರು. ಸ್ವತಃ ಚರ್ಚಿಲ್‌ ಕೂಡ.

ಆದರೆ ಆಗಿದ್ದೇನು? ಮತಪೆಟ್ಟಿಗೆ ಒಡೆದರೆ..... ಅಚ್ಚರಿ, ಆಘಾತ. ಚರ್ಚಿಲ್‌ ದಯನೀಯವಾಗಿ ಸೋತಿದ್ದರು! ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು.

ಇಂದಿರಾಗಾಂಧಿಯಿರಬಹುದು, ಅಟಲ್‌ ಬಿಹಾರಿ ವಾಜಪೇಯಿ ಇರಬಹುದು, ರಾಮಕೃಷ್ಣ ಹೆಗಡೆ ಇರಬಹುದು, ದೇವೇಗೌಡರಿರಬಹುದು, ಎಸ್‌. ಎಂ. ಕೃಷ್ಣ ಇರಬಹುದು, ಜೆ.ಎಚ್‌. ಪಟೇಲರಿರಬಹುದು, ರಾಜಕಾರಣದಲ್ಲಿ

ಎಂಥ ಚತುರಮತಿಯೇ ಇರಬಹುದು ಅವರೆಲ್ಲರ ಲೆಕ್ಕಾಚಾರಗಳು ಬುಡಮೇಲಾಗುವುದು ಚುನಾವಣೆಯಲ್ಲಿ. ಪ್ರಧಾನಿಗಳ ಪೈಕಿ ಮೊರಾರ್ಜಿ ದೇಸಾಯಿ, ಗುಲ್ಜಾರಿಲಾಲ್‌ ನಂದಾ, ಪಿ.ವಿ. ನರಸಿಂಹರಾವ್‌ ಹಾಗೂ ದೇವೇಗೌಡರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಉತ್ತರಪ್ರದೇಶದಿಂದಲೇ ಚುನಾಯಿತರಾದವರು. ಮೊರಾರ್ಜಿ ದೇಸಾಯಿ ಗುಜರಾತಿನ ಸೂರತ್‌, ಗುಲ್ಜಾರಿ ಲಾಲ್‌ ನಂದಾ ಗುಜರಾತಿನ ಸಬರಕಾಂತ, ನರಸಿಂಹರಾವ್‌ ನಂದ್ಯಾಲ್‌ದಿಂದ ಸ್ಪರ್ಧಿಸಿ ಗೆದ್ದರು. ದೇವೇಗೌಡರು ರಾಜ್ಯಸಭೆಯ ಮೂಲಕ ಸಂಸತ್ತನ್ನು ಪ್ರವೇಶಿಸಿದರು. 1977ರಲ್ಲಿ ಸೋಲನ್ನುಂಡ ಇಂದಿರಾಗಾಂಧಿ ಉತ್ತರಪ್ರದೇಶದ ರಾಯ್‌ಬರೇಲಿ ಬಿಟ್ಟು ಕರ್ನಾಟಕದ ಚಿಕ್ಕಮಗಳೂರಿಗೆ ಬರಬೇಕಾಯಿತು. ಮುಂದಿನ ಚುನಾವಣೆಯಲ್ಲಿ ಇಂದಿರಾ ಪುನಃ ಕಣ ಬದಲಾಯಿಸಿದರು. ಆಂಧ್ರದ ಮೇಡಕ್‌ ಹಾಗೂ ರಾಯ್‌ ಬರೇಲಿಗೆ ಹೋದರು. ಜವಾಹರಲಾಲ್‌ ನೆಹರು ಮೊದಲ ಬಾರಿಗೆ ಅಲಹಾಬಾದ್‌ನಿಂದ(1952) ಸ್ಪರ್ಧಿಸಿದರು. 1957ರ ಚುನಾವಣೆಯಲ್ಲಿ ನೆಹರೂಗೆ ಅಲಹಾಬಾದ್‌ನಿಂದ ಗೆದ್ದು ಬರುವ ವಿಶ್ವಾಸವಿರಲಿಲ್ಲ. ಹೀಗಾಗಿ ಅವರು ಪೂಲ್‌ಪುರದಿಂದ ನಾಮಪತ್ರ ಸಲ್ಲಿಸಿದರು. ಅವರ ವಿರುದ್ಧ ಮಸುರಿಯಾದಿನ್‌ ಸ್ಪರ್ಧಿಸಿದ್ದ. ನೆಹರೂಗೆ ಏನೋ ಅನುಮಾನ ಕಾಡತೊಡಗಿತು. ಅವರು ಕೊನೆಯ ದಿನದಂದು ಚೈಲ್‌(ಉ.ಪ್ರ.)ನಿಂದ ನಾಮಪತ್ರ ಸಲ್ಲಿಸಿದರು. ಮಸುರಿಯಾದಿನ್‌ ಅಲ್ಲಿಗೂ ಬಂದ. ಎರಡೂ ಕ್ಷೇತ್ರಗಳಿಂದ ನೆಹರು ಚುನಾಯಿತರಾಗಿದ್ದು ಬೇರೆ ಮಾತು. ಬಲ್ಲಿಯಾ ಕ್ಷೇತ್ರದಿಂದ 1977 ಹಾಗೂ 1980 ರಲ್ಲಿ ಚುನಾಯಿತರಾದ ಚಂದ್ರಶೇಖರ್‌ 1984ರಲ್ಲಿ ಜೆ. ಚೌಧರಿ ಎದುರು ಪರಾಭವ ಅನುಭವಿಸಿದರು. ಮುಂದಿನ ಚುನಾವಣೆಯಲ್ಲಿ (1989) ಅವರಿಗೆ ಬಲ್ಲಿಯಾದಿಂದ ಆರಿಸಿ ಬರುವ ವಿಶ್ವಾಸವಿರಲಿಲ್ಲ. ಹೀಗಾಗಿ ಬಿಹಾರದ ಮಹರಾಜಗಂಜ್‌ನಿಂದ ಸಹ ಸ್ಪರ್ಧಿಸಿದರು. ಆದರೆ ಎರಡೂ ಕಡೆಗಳಿಂದ ಚುನಾಯಿತರಾದರು. ಈ ಚುನಾವಣೆಯೆಂಬ ಜೂಜು ಎಂಥೆಂಥವರ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿರಬಹುದು. ಆದರೆ ಬಾಬು ಜಗಜೀವನರಾಮ್‌ ಇದ್ದಿದ್ದರಲ್ಲಿ ವಾಸಿ. ಜಗಜೀವನ್‌ ರಾಂ ಯಾವತ್ತೂ ತಾವು ಸೋಲಿಲ್ಲದ ಸರದಾರ ಎಂದು ಬೀಗುತ್ತಿದ್ದರು. ಅವರನ್ನು ಚುನಾವಣೆಯಲ್ಲಿ ಸೋಲಿಸುವುದು ಸಾಧ್ಯವೇ ಇರಲಿಲ್ಲ. ಬಿಹಾರದ ಸರಸಮ್‌ನಿಂದ 1962ರಿಂದ 1984ರವರೆಗೆ ನಡೆದ 6 ಚುನಾವಣೆಗಳಲ್ಲಿ ಸತತವಾಗಿ ಅವರು ಗೆಲುವನ್ನು

ಸಾಧಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಅವರು ಕ್ಷೇತ್ರದಲ್ಲಿ ಮತ ಯಾಚಿಸಿದ್ದು ಕಡಿಮೆ. ಗೆಲ್ಲುವ ಕುದುರೆಗೆ ತಾಲೀಮು ಬೇಕೆ ಎಂದೇ ಅವರು ಪ್ರಚಾರ ಮಾಡುತ್ತಿದ್ದರು. ಜಗಜೀವನ ರಾಮ್‌ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಮಹಾವೀರ ಪಾಸ್ವಾನ್‌ ಅವರನ್ನು ನಾಲ್ಕು ಬಾರಿ ನಿಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಇದೇ ಜಗಜೀವನ ರಾಂ ತಮ್ಮ ಜೀವನದ ಮೊಟ್ಟಮೊದಲ ಚುನಾವಣೆಯಲ್ಲಿ (1952) ಬಿಹಾರದ ಅರ್ರಾ ಕ್ಷೇತ್ರದಿಂದ ರಾಮ್‌ಸುಬಾಗ್‌ ಸಿಂಗ್‌ ಎಂಬ ಸಾಮಾನ್ಯ ಅಭ್ಯರ್ಥಿಯೆದುರು ಸೋಲನ್ನು ಉಂಡಿದ್ದರು. ಈ ಕ್ಷೇತ್ರ ಬೇಡವೆಂದು ಜಗಜೀವನ ರಾಮ್‌ ಸಸರಾಮ್‌ ಕ್ಷೇತ್ರಕ್ಕೆ ಬಂದರು. ರಾಮ್‌ಸುಬಾಗ್‌ಸಿಂಗ್‌ ಕೂಡ ಅವರನ್ನು ಬೆನ್ನಟ್ಟಿದರು. ಮತ್ತೆ ಜಗಜೀವನ ರಾಂ ಸೋತರು. ಅನಂತರ ಅವರು ಜೀವನದಲ್ಲಿ ಚುನಾವಣಾ ಸೋಲನ್ನು ಅನುಭವಿಸಲಿಲ್ಲ.

ಉತ್ತರ ಪ್ರದೇಶದ ಸಹರಾನ್‌ಪುರ ಕ್ಷೇತ್ರದಲ್ಲಿ ಸುಂದರಲಾಲ್‌ ಎಂಬ ಕಾಂಗ್ರೆಸ್‌ ಅಭ್ಯರ್ಥಿಯಿದ್ದ. ತನ್ನ ವಿರುದ್ಧ ಂುೂರೆ ನಿಂತರೂ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಆತ ಪ್ರಚಾರ ಮಾಡುತ್ತಿದ್ದ. ಆತ ಮತ ಕೇಳಲು ಬೀದಿಗಿಳಿದಿದ್ದನ್ನು ನೋಡಿದವರಿಲ್ಲ. ತನ್ನ ಮುಂದೆ ಗೆಲ್ಲುವ ಎದೆಗಾರಿಕೆಯಿದ್ದವರು ಬರಲಿ ಎಂದೇ ಹೂಂಕರಿಸುತ್ತಿದ್ದ. ಹಾಗಂತ ಅವನೇನೂ ವರ್ಚಸ್ವಿ ನಾಯಕನಾಗಿರಲಿಲ್ಲ. ಭಾಷಣಕಾರನಾಗಿರಲಿಲ್ಲ. ಸಾವಿರಾರು ಎಕರೆ ಭೂಮಾಲೀಕನೆಂಬ ಪೊಗರು ಬಿಟ್ಟರೆ ಸಾರ್ವಜನಿಕ ಜೀವನದಲ್ಲಿ ಕಡಿದು ಕಟ್ಟೆ ಹಾಕಿದ್ದು ಅಷ್ಟಕ್ಕಷ್ಟೆ. ಇಂಥ ಸುಂದರಲಾಲ್‌ 1952ರಿಂದ 1977ರವರೆಗೆ ನಡೆದ ಆರು ಲೋಕಸಭಾ ಕ್ಷೇತ್ರಗಳಲ್ಲಿ ಆರಿಸಿ ಬಂದ. ಅವನ ವಿರುದ್ಧ ಅಜಿತ್‌ಪ್ರಸಾದ್‌ ಜೈನ್‌, ರಾಂ ಸಿಂಗ್‌ನಂಥವರು ನೆಗೆದು ಬಿದ್ದರು. ಅಷ್ಟಾಗಿಯೂ ಸುಂದರಲಾಲ್‌ ಮುಂದಿನ ಚುನಾವಣೆಯಲ್ಲಿ ಹೂಂಕರಿಸುವುದನ್ನು ಬಿಡಲಿಲ್ಲ. ಆದರೆ ಮತದಾರರು ಅವನನ್ನು ತಿಪ್ಪೆಗೆಸೆದಿದ್ದರು. ಸುಂದರ ಲಾಲ್‌ನ ಇಡಗಂಟು ಜಪ್ತಾವಾಗಿತ್ತು. ಇಂಥ ವರ್ಗಕ್ಕೆ ಸೇರುವ ಮತ್ತೊಬ್ಬ ಆಸಾಮಿಯೆಂದರೆ ಆಂಧ್ರದ ಶ್ರೀಕಾಕುಲಂನಿಂದ ನಿಂತು ಸತತ ಏಳು ಬಾರಿ ಆಯ್ಕೆಯಾದ ಆರ್‌. ಬೊದ್ದೆಪಲ್ಲಿ. ಮೊದಲ ಚುನಾವಣೆಯಿಂದ 1980ರವರೆಗೆ ಈತ ಸೋತಿದ್ದೇ ಇಲ್ಲ. ಮೊದಲ ಬಾರಿಗೆ ಪಕ್ಷೇತರನಾಗಿ ಆಯ್ಕೆಯಾದ ಈತ ಮೂರು ಬಾರಿ ಪಕ್ಷ ತ್ಯಜಿಸಿದರೂ ಗೆಲುವು ಮಾತ್ರ ಈತನನ್ನು ತ್ಯಜಿಸಲಿಲ್ಲ. ಬೊದ್ದೆಪಲ್ಲಿಯ ವಿರುದ್ಧ ಎನ್‌. ಜಿ. ರಂಗ, ಸುಗ್ಗು ರೆಡ್ಡಿಯಂಥವರು ನೆಲಕಚ್ಚಿಹೋದರು. ಈ ಮಾತು ಪಶ್ಚಿಮ ಬಂಗಾಲದ ಬೆಹರಾಂಪುರ ಕ್ಷೇತ್ರದಿಂದ 1952ರಿಂದ 1980ರವರೆಗೆ ಸತತ ಏಳು ಬಾರಿ ಗೆದ್ದ ಹಾಗೂ ಪ್ರತಿ ಸಲವೂ ಬೇರೆಬೇರೆ ಪಕ್ಷಗಳಿಂದ ಗೆದ್ದ ತ್ರಿದಿಬ್‌ಚೌಧರಿ ಅವರಿಗೂ ಅನ್ವಯಿಸುತ್ತದೆ.

ಚುನಾವಣೆಯ ಲೆಕ್ಕಾಚಾರ, ಅದರ ಮರ್ಮ ತಮಗೆ ಇಂದಿಗೂ ಸೋಜಿಗವೇ ಎಂದು ಅಟಲ್‌ ಬಿಹಾರಿ ವಾಜಪೇಯಿ ಹಿಂದೊಮ್ಮೆ ಹೇಳಿದ್ದರು. 1957ರಿಂದ ಇಲ್ಲಿಯವರೆಗೆ ಸಂಸತ್ತಿನ ಒಂದಿಲ್ಲೊಂದು ಸದನದ ಸದಸ್ಯರಾಗಿರುವ(1985 ರಿಂದ 86ರವರೆಗೆ ಮಾತ್ರ ಯಾವುದೇ ಸದನದ ಸದಸ್ಯರಾಗಿರಲಿಲ್ಲ) ವಾಜಪೇಯಿ ಕೂಡ ಮೂರು ಬಾರಿ ದಯನೀಯವಾಗಿ ಸೋತಿದ್ದರು. ಮೊದಲಬಾರಿಗೆ ಲಖನೌ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದರು. ಅವರಿಗೆ ಗೆಲ್ಲುವ ಯಾವ ಸಾಧ್ಯತೆಯೂ ಇರಲಿಲ್ಲ. 1957ರಲ್ಲಿ ಜನಸಂಘದಿಂದ ಲಖನೌ, ಮಥುರಾ ಹಾಗೂ ಬಲರಾಮಪುರದಿಂದ ಸ್ಪರ್ಧಿಸಿದರು. ವಾಜಪೇಯಿ ಅವರ ಮಾತಿನ ಮೋಡಿ ಎಂಥ ಕೆಲಸ ಮಾಡಿತೆಂದರೆ ಕಾಂಗ್ರೆಸ್‌ನ ಹೈದರ್‌ಹುಸೇನ್‌ ಅವರ ವಿರುದ್ಧ ಹತ್ತು ಸಾವಿರ ಮತಗಳಿಂದ ಆರಿಸಿ ಬಂದರು. ಉಳಿದೆರಡು ಕ್ಷೇತ್ರಗಳಲ್ಲಿ ಸೋತರು. 1862ರ ಚುನಾವಣೆಯಲ್ಲಿ ವಾಜಪೇಯಿ ಬಲರಾಮಪುರದಿಂದ ಮಾತ್ರ ಸ್ಪರ್ಧಿಸಿದರು. ಐದು ವರ್ಷಗಳಲ್ಲಿ, ಸದನದ ಒಳಗೆ ಹಾಗೂ ಕ್ಷೇತ್ರದಲ್ಲಿನ ಸಾಧನೆಯಿಂದ ವಾಜಪೇಯಿ ಬಹುಬೇಗ ಜನಪ್ರಿಯರಾಗಿದ್ದರು. ಕ್ಷೇತ್ರದಲ್ಲಿ ಅವರ ಅಲೆ ಎಲ್ಲೆಡೆ ಕಂಡುಬಂದಿತ್ತು. ಸ್ವತಃ ಪ್ರಧಾನಿ ಜವಾಹರಲಾಲ್‌ ನೆಹರು ಬಲರಾಮಪುರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿ, ವಾಜಪೇಯಿ ಬಗ್ಗೆ ಉತ್ತಮ ಅಭಿಪ್ರಾಯವಿರುವುದನ್ನು ಕಂಡು ಭಾಷಣ ಮಾಡದೇ ವಾಪಸು ಹೋಗಿದ್ದರು. ತಮ್ಮ ನಿಕಟವರ್ತಿಗಳ ಮುಂದೆ ವಾಜಪೇಯಿ ಅಂಥವರು ಲೋಕಸಭೆಯಲ್ಲಿ ಇರಬೇಕು. ಲೋಕಸಭೆಯಲ್ಲಿ ಅವರ ಐದು ವರ್ಷದ ಸಾಧನೆಯನ್ನು ಗಮನಿಸಿದ್ದೇನೆ. ಉತ್ತಮ ಸಂಸದೀಯ ಪಟುವಿನ ಗುಣಗಳನ್ನು ಮೆರೆದಿದ್ದಾರೆ. ಅವರ ವಿರುದ್ಧ ಮಾತನಾಡಲಾರೆ. ನಾನು ಪ್ರಚಾರ ಮಾಡಿಯೂ ಅವರು ಆರಿಸಿ ಬಂದರೆ ನನ್ನ ಘನತೆಗೆ ತಕ್ಕುದಲ್ಲ ಎಂದು ನೆಹರು ಹೇಳಿದ್ದರು. ಎದುರಾಳಿಯ ಅಭ್ಯರ್ಥಿ ಕೂಡ ದುರ್ಬಲ. ವಾಜಪೇಯಿ ಗೆದ್ದೇ ಗೆಲ್ಲುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ ಆಗಿದ್ದೇನು?

ವಾಜಪೇಯಿ ಸೋತು ಹೋದರು, ಎರಡು ಸಾವಿರ ಮತಗಳಿಂದ!

ಸೋಲೇ ಇಲ್ಲದ ಸರದಾರ ಎಂದೇ ಹೇಳುತ್ತಿದ್ದ ಚಿಕ್ಕೋಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಂಕರಾನಂದ ಸತತ ಏಳು ಗೆಲುವಿನ ನಂತರ ಸೋತಿದ್ದು, ಸೋಲು ಕಾಣದ ರಾಜಕಾರಣಿಯೆಂದೇ ಖ್ಯಾತರಾಗಿರುವ ಬಂಗಾರಪ್ಪ ಶಿವಮೊಗ್ಗದಲ್ಲಿ ಸೋತಿದ್ದು, ಪ್ರತಿ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಕ್ಷೇತ್ರವನ್ನು ಬದಲಿಸುತ್ತಿದ್ದುದು, ದೇವೇಗೌಡರಂಥ ದೇವೇಗೌಡರೇ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಮಣ್ಣು ಮುಕ್ಕಿದ್ದು, ತುರ್ತು ಸ್ಥಿತಿಯ ನಂತರ ದೇಶಾದ್ಯಂತ ಇಂದಿರಾ ವಿರೋಧಿ, ಕಾಂಗ್ರೆಸ್‌ ವಿರೋಧಿ ಗಾಳಿ ಬೀಸಿ ಆ ಪಕ್ಷ ಧೂಳೀಪಟವಾದರೆ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ ಭದ್ರಕೋಟೆಗೆ ಕಿಂಚಿತ್ತೂ ಘಾಸಿಯಾಗದೇ ಇದ್ದಿದ್ದು... ಇವನ್ನೆಲ್ಲ ನೋಡಿದರೆ ಚುನಾವಣೆ ಯಾರ ಊಹೆ, ಕಲ್ಪನೆಗೆ ನಿಲುಕುವಂಥದ್ದಲ್ಲ , ಯಾರ ತೆಕ್ಕೆಗೂ ಸಿಗುವಂಥದ್ದಲ್ಲ ಎಂಬ ನಿರ್ಧಾರಕ್ಕೆ ಬರಬಹುದು.

ಹಾಗಾದರೆ ಚುನಾವಣೆಯೆಂದರೆ ಏನು? ಪಕ್ಷದ ವರ್ಚಸ್ಸಾ, ಅಭ್ಯರ್ಥಿಯ ಇಮೇಜಾ, ಪಕ್ಷ-ಅಭ್ಯರ್ಥಿ ಯ ಸಾಧನೆಯಾ, ಅಭ್ಯರ್ಥಿಗಳ ಜಾತಿಯಾ, ಹಣಬಲವಾ, ಪ್ರಚಾರದ ಅಬ್ಬರವಾ, ಅನುಕಂಪ-ಸಹಾನುಭೂತಿಯಾ ಅಥವಾ ಇವೆಲ್ಲವುಗಳ ಮಿಶ್ರಣವಾ?

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X