• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಮಡಗಿದಂಗೆ ಇರು’ -ಇದು ಭಾರತದ ರಾಜಕೀಯ ಶಿವ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ನಿಜ ಬಣ್ಣ ನಿಧಾನವಾಗಿ ಬಯಲಾಗುತ್ತಿದೆ. ಯಾರನ್ನು ನಿಸ್ವಾರ್ಥಿ, ಮಹಾತ್ಯಾಗಿ, ಸನ್ಯಾಸಿನಿ, ವಿರಾಗಿ ಎಂದೆಲ್ಲ ಕೆಲದಿನಗಳ ಹಿಂದೆ ಹೊಗಳಿ ಮಹಾವ್ಯಕ್ತಿಯನ್ನಾಗಿ ಅಟ್ಟಕ್ಕೇರಿಸಿದ್ದೆವೋ ಅವರ ನಿಜ ಬಣ್ಣ ಬಯಲಾಗುತ್ತಿದೆ. ಮಹಾತ್ಯಾಗಿಯ ಮನಸ್ಸಿನೊಳಗೆ ಮಲಗಿದ್ದ ಮಹಾಸ್ವಾರ್ಥದ ಹೆಬ್ಬಾವು ನಿಧಾನವಾಗಿ ಮೈಮುರಿದು ಮೇಲಕ್ಕೆದ್ದಿದೆ. ಹಾಗೆ ನೋಡಿದರೆ ಆ ಹೆಬ್ಬಾವು ಮಲಗೇಯಿರಲಿಲ್ಲ. ಮಲಗಿದಂತೆ ಕೆಲಕಾಲ ಸುಮ್ಮನಿತ್ತು.

ಕಳೆದ ಒಂದು ತಿಂಗಳ ದಿಲ್ಲಿಯ ವಿದ್ಯಮಾನಗಳ ಗಮನಿಸಿದರೆ ಸೋನಿಯಾ ಗಾಂಧಿ ಎಂಬ ಮಹಾತ್ಯಾಗಿ ಇಡೀ ಕೇಂದ್ರ ಸಂಪುಟವನ್ನು ಮನಬಂದಂತೆ ಆಡಿಸುತ್ತಿದ್ದಾರೆಂಬ ಸಂಗತಿ ವೇದ್ಯವಾಗುತ್ತದೆ. ಸೋನಿಯಾಗಾಂಧಿಯನ್ನು sainthood ಗೆ ಏರಿಸಿದ್ದ, sonia or saint? ಎಂದು ಬರೆದಿದ್ದ ಪತ್ರಿಕೆಗಳೆಲ್ಲ ಈಗ 10, ಜನಪಥ್‌ ರಸ್ತೆಯಿಂದ ಹೊರಬರುತ್ತಿರುವ ಕಮಟು ವಾಸನೆಯಿಂದ ಅಚ್ಚರಿ, ಆಘಾತಗಳಿಗೆ ಒಳಗಾಗಿವೆ. ಸೋನಿಯಾ ಬಗ್ಗೆ ಸಣ್ಣ ಅಪಸ್ವರ ಈಗ ಹೊರಟಿದೆ. ಸುಖಾಸುಮ್ಮನೆ ಮಹಾತ್ಯಾಗಿ, ಸನ್ಯಾಸಿನಿ ಎಂದೆಲ್ಲ ಹೊಗಳಿ ಬುರುಡೆ ಬಿಟ್ಟೆವಾ ಎಂದು ಮುಖಮುಖ ನೋಡಿಕೊಳ್ಳುತ್ತಿವೆ. ಸೋನಿಯಾ ಗುಣಗಾನ ಮಾಡಿದ್ದನ್ನು ಪತ್ರಿಕೆಗಳಿಗೆ ಈಗ ನುಂಗಿಕೊಳ್ಳಲು ಆಗುತ್ತಿಲ್ಲ.

Sonia Gandhi - De facto PMಸೋನಿಯಾ ಈಗ ಕೇವಲ ಸೋನಿಯಾ ಗಾಂಧಿ ಅಲ್ಲ. ಕಾಂಗ್ರೆಸ್‌ ಅಧ್ಯಕ್ಷೆ, ಯುನೈಟೆಡ್‌ ಪ್ರೊಗ್ರೆಸಿವ್‌ ಅಲೈಯನ್ಸ್‌(ಯುಪಿಎ) ಅಧ್ಯಕ್ಷೆ. ಯುಪಿಎ ಸರಕಾರ ಹಾಗೂ ಎಡರಂಗ ಸಮನ್ವಯ ಸಮಿತಿ ನಾಯಕಿ, ಸಂಸತ್ತಿನಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕಿ, ಕ್ಯಾಬಿನೆಟ್‌ ಸಚಿವ ಸ್ಥಾನಮಾನವುಳ್ಳ ರಾಷ್ಟ್ರೀಯ ಸಲಹಾಮಂಡಲಿ ಅಧ್ಯಕ್ಷೆ. ಅಲ್ಲದೇ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಬಾಸ್‌! ಅಂದರೆ ಕೇಂದ್ರ ಸರಕಾರದ ಅನಭಿಷಿಕ್ತ ನಾಯಕಿ! ಅಂದರೆ ಕೇಂದ್ರಸರಕಾರ ಸೋನಿಯಾ ಆಣತಿ ಮೇರೆಗೆ ನಡೆಯುತ್ತದೆ.

ಈಗ ಹೇಳಿ ಸೋನಿಯಾ ಗಾಂಧಿ ಮಹಾತ್ಯಾಗಿಯಾ? ವೈರಾಗಿಯಾ? ಸನ್ಯಾಸಿಯಾ? ಯಾವತ್ತು ಪ್ರಧಾನಿ ಸ್ಥಾನವನ್ನು‘ಅಂತರಂಗ’ದ ಮಾತು ಕೇಳಿ ಮನಮೋಹನ್‌ ಸಿಂಗ್‌ಗೆ ಒಪ್ಪಿಸಿದರೋ, ಅ ಕ್ಷಣದಿಂದಲೇ ಸಿಂಗ್‌ ಕೂಡ ಇಡೀ ಸರಕಾರವನ್ನು ಸೋನಿಯಾ ಪದತಲಕ್ಕೆ ಒಪ್ಪಿಸಿಬಿಟ್ಟರು. ಸೋನಿಯಾ ಆದೇಶದ ಮೇರೆಗೆ ಯಾರೇ ಪ್ರಧಾನಿಯಾದರೂ ಅದನ್ನೇ ಮಾಡಬೇಕಿತ್ತು. ಸಿಂಗ್‌ ಅದನ್ನು ಶಿಸ್ತಿನಿಂದ ಮಾಡಿದ್ದಾರೆ. ಯಾರಿಗೆ ಆಗಲಿ ಇದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಸಂವಿಧಾನದ ಕಣ್ಣಿಗೆ, ದೇಶದ ಜನತೆ ಮುಂದೆ ಡಾ.ಸಿಂಗ್‌ ಪ್ರಧಾನಿಯಾಗಿರಬಹುದು. ಆದರೆ ಸೂಪರ್‌ ಪ್ರಧಾನಿ ಸೋನಿಯಾ ಎಂಬುದು ಸರಕಾರ ಅಸ್ತಿತ್ವಕ್ಕೆ ಬಂದು ನೂರು ದಿನ ತುಂಬುವುದರೊಳಗೆ ಸ್ಪಷ್ಟವಾಗಿದೆ. ಸೋನಿಯಾ ತ್ಯಾಗಮಾಡಿದ್ದು ಪಟ್ಟವನ್ನೇ ಹೊರತು ಅಧಿಕಾರವನ್ನಲ್ಲ ಎಂಬುದು ಎಲ್ಲರಿಗೂ ಮನವರಿಕೆಯಾಗುತ್ತಿದೆ.

ಉತ್ತಮ ಭಾಷಣಕಾರನ ನಂತರ ಮಾತನಾಡುವವನ ಮಾತು ಮಸುಕಾದಂತೆ, ವಾಜಪೇಯಿ ನಂತರ ಯಾರೇ ಪ್ರಧಾನಿಯಾದರೂ ಆ ಹುದ್ದೆಗೆ ಹೊಂದಿಕೊಂಡು, ಫಿಟ್‌ ಆಗಿ, ಆ ಹುದ್ದೆಯನ್ನು ನಿಜವಾದ ಅರ್ಥದಲ್ಲಿ ಅಲಂಕರಿಸಲು ಸಾಕಷ್ಟು ಸಮಯಬೇಕು ಎಂಬುದು ಸರ್ವತ್ರ ಕೇಳಿಬರುತ್ತಿರುವ ಮಾತು. ಆದರೆ ಬರಬರುತ್ತಲೇ ಡಮ್ಮಿ ಪ್ರಧಾನಿಯಾಗಿ ಬಂದ ಡಾ.ಸಿಂಗ್‌ಗೆ ಆ ಹುದ್ದೆಯ ಎತ್ತರಕ್ಕೆ ಬರಲು ಇನ್ನು ಸಾಧ್ಯವಾಗಿಲ್ಲ. ಯಾಕೆ ಸಾಧ್ಯವಾಗಿಲ್ಲ ಅಂದರೆ ಆ ಎತ್ತರಕ್ಕೆ ಏರಿದರೆ ಮುಳುವಾದೀತೇನೋ ಎಂಬ ಭಯವೂ ಅವರನ್ನು ಕಾಡುತ್ತಿರಬೇಕು. ಅದಕ್ಕಾಗಿ ಅವರು ‘ಮಡಗಿದಂಗೆ ಇರು ಶಿವಾ’ ಎಂಬ ರೀತಿಯಲ್ಲಿದ್ದಾರೆ. ಹಾಗೆಂದು ಸಿಂಗ್‌ ಅಸಮರ್ಥರು ಎಂದಲ್ಲ . ನಿಜಕ್ಕೂ ಅವರು ಪ್ರಾಮಾಣಿಕ, ನಿಸ್ವಾರ್ಥ ವ್ಯಕ್ತಿ, ಉತ್ತಮ ಆರ್ಥಿಕತಜ್ಞ, ಹಣಕಾಸು ಸಚಿವರಾಗಿ ಕೈಗೊಂಡ ಕ್ರಮಗಳು ಶ್ಲಾಘನೀಯ. ಅವರ integrity ಯನ್ನಂತೂ ಪ್ರಶ್ನಿಸುವಂತಿಲ್ಲ.

Is Manmohan a Puppet PM ?ಸೋನಿಯಾ ಇಂಥ ವ್ಯಕ್ತಿಯನ್ನು ಪ್ರಧಾನಿ ಹುದ್ದೆಗೆ ಹೆಸರಿಸಿದಾಗ ಸ್ವಾಭಾವಿಕವಾಗಿ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿದ್ದವು. ಸಿಂಗ್‌ ಉತ್ತಮ ಆಯ್ಕೆ ಎಂದೇ ಭಾವಿಸಲಾಗಿತ್ತು. ಅಷ್ಟರಮಟ್ಟಿಗೆ ಸೋನಿಯಾ ಕೂಡ ಪ್ರಶಂಸೆಗೆ ಪಾತ್ರರಾಗಿದ್ದರು.

ಆದರೆ ಈಗ ನೋಡಿದರೆ ಅಂದು ಮಾಡಿದ್ದು, ಮುಂಬರುವ ದಿನಗಳಲ್ಲಿ ಹಮ್ಮಿಕೊಂಡ ದೊಡ್ಡ ಸಂಚು ಅನಿಸುತ್ತದೆ. ಇಂದು ಅಕ್ಷರಶಃ ಸಿಂಗ್‌ರ ಕೈಗಳನ್ನು ಕಟ್ಟಿ ಹಾಕಲಾಗಿದೆ. ಯಾವುದೇ ಪ್ರಮುಖ ವಿಷಯದಲ್ಲೂ ಆವರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲಾಗುತ್ತಿಲ್ಲ. ಅನೇಕ ನಿರ್ಧಾರಗಳನ್ನು ಅವರಿಗೆ ಗೊತ್ತಿಲ್ಲದಂತೆ ತೆಗೆದುಕೊಳ್ಳಲಾಗುತ್ತಿದೆ. ನದಿನೀರು ವಿವಾದಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರವಿರಬಹುದು, ಮುಸ್ಲಿಮರಿಗೆ ಮೀಸಲಾತಿ ನೀಡುವ ಆಂಧ್ರ ಮುಖ್ಯಮಂತ್ರಿ ತೀರ್ಮಾನವಿರಬಹುದು, ಪ್ರಧಾನಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಈ ಎರಡು ವಿಷಯಗಳ ಬಗ್ಗೆ ವಿವಾದದ ಬಿಸಿ ಜಾಸ್ತಿಯಾದಾಗಲೂ ಪ್ರಧಾನಿ ತುಟಿ ಪಿಟಕ್ಕೆನ್ನಲಿಲ್ಲ. ಪತ್ರಿಕೆಯಲ್ಲಿ ಅಚ್ಚಾಗಿದ್ದನ್ನು ನೋಡಿದ ಮೇಲೆಯೇ ಈ ಸಂಗತಿ ಪ್ರಧಾನಿಗೆ ಗೊತ್ತಾಯಿತು. ಒಬ್ಬ ಪ್ರಧಾನಿಗೆ ಎಂಥ ಸ್ಥಿತಿ ಬಂತು ನೋಡಿ.

ಕಾಂಗ್ರೇಸ್‌ ಸಚಿವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪ್ರಧಾನಿಯವರಿಗೆ ತಿಳಿಸುವುದೇಯಿಲ್ಲ. ಆದರೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಅವರಿಗೆ(ಅರ್ಥವಾಗದಿದ್ದರೂ?) ವಿವರಿಸುತ್ತಾರೆ. ಅವರ ಅನುಮತಿ ಪಡೆಯುತ್ತಾರೆ. ಅನಂತರ ಕಾಟಾಚಾರಕ್ಕೆಂದು ಪ್ರಧಾನಿಗೆ ತಿಳಿಸುತ್ತಾರೆ. ಒಮ್ಮೆ ತಿಳಿಸದಿದ್ದರೂ ಏನೂ ಪ್ರಮಾದವಾಗುವುದಿಲ್ಲವೆಂಬುದು ಅವರಿಗೆ ಗೊತ್ತು. ಎಡಪಕ್ಷ ಗಳ ನಾಯಕರು, ಪ್ರಧಾನಿಯನ್ನು ಭೇಟಿಮಾಡುವ, ಅವರೊಂದಿಗೆ ಸರಕಾರದ ನೀತಿ, ನಿಯಮಗಳನ್ನು ಚರ್ಚಿಸುವ ಶಿಷ್ಟಾಚಾರವನ್ನೇ ಇನ್ನೂ ಬೆಳೆಸಿಕೊಂಡಿಲ್ಲ. ಅವರದೇನಿದ್ದರೂ ನೇರವಾಗಿ ಸೋನಿಯಾ ಜತೆ ವ್ಯವಹಾರ. ಅವರದು ಭಲೇ ಲೆಕ್ಕಾಚಾರ-ಇಂಥ ಮಹತ್ವದ ವಿಷಯಗಳ ಬಗ್ಗೆ ಸಿಂಗ್‌ ಜತೆ ಚರ್ಚಿಸಬೇಕು, ಅನಂತರ ಅದೇ ವಿಷಯಗಳನ್ನು ಸೋನಿಯಾ ಮುಂದೆಯಿಡುತ್ತಾರೆ. ಅವರು ಹೇಳುವುದಕ್ಕೆಲ್ಲ ತಲೆಯಾಡಿಸಿ, ಸೋನಿಯಾ ನಿರ್ಧಾರವನ್ನು ನಮಗೆ ತಿಳಿಸುತ್ತಾರೆ. ಸಿಂಗ್‌ಗೆ ಯಾಕೆ ಪೋಸ್ಟ್‌ಮನ್‌ ಕೆಲಸ ಹಚ್ಚಬೇಕು. ಸುಮ್ಮನೆ ಸಮಯ ಹಾಳು. ಇಂಥ ನೇರ ವ್ಯವಹಾರಗಳು ಪ್ರಧಾನಿಗೆ ಗೊತ್ತಾಗುವುದಿಲ್ಲ.

ಕಾಂಗ್ರೆಸ್‌ ಹಿರಿಯ ಸಂಪುಟ ಸದಸ್ಯರು ರಾಜಕೀಯವಾಗಿ, ಅನುಭವದಲ್ಲಿ ಸಿಂಗ್‌ಗಿಂತ ಹಿರಿಯರು. ಆಧಿಕಾರ ರಾಜಕಾರಣದಲ್ಲಿ ಪಳಗಿದವರು. ಸಿಂಗ್‌ ರಾಜಕೀಯಕ್ಕೆ ಬರುವದಕ್ಕಿಂತ ನಲವತ್ತು, ಐವತ್ತು ವರ್ಷಗಳ ಮೊದಲೇ ಅಧಿಕಾರ ಉಂಡವರು. ಈಗ ಸಿಂಗ್‌ ಪ್ರಧಾನಿಯಾಗಿರಬಹುದು. ಆದರೆ ನಿಜವಾದ ಅಧಿಕಾರ ಕೇಂದ್ರ ಎಲ್ಲಿದೆಯೆಂಬುದು ಅವರಿಗೆಲ್ಲ ಗೊತ್ತು. ಬ್ರೆಡ್ಡಿನ ಯಾವ ಮಗ್ಗುಲಿಗೆ ಬೆಣ್ಣೆ ಸವರಬೇಕೆಂಬುದು ಅವರಿಗೆ ಹೇಳಿಕೊಡ ಬೇಕೇನು? ಹೀಗಾಗಿ ಅರ್ಜುನಸಿಂಗ್‌, ಪ್ರಣಬ್‌ ಮುಖರ್ಜಿ, ನಟವರ್‌ಸಿಂಗ್‌, ಕಮಲ್‌ನಾಥ್‌, ಶಿವರಾಜ್‌ ಪಾಟೀಲ್‌ ಮುಂತಾದವರು ಸಿಂಗ್‌ಗೆ ಕ್ಯಾರೆ ಎನ್ನುವುದಿಲ್ಲ. ಏನೆಲ್ಲಾ ದಕ್ಷಿಣೆಗಿಂತ ಸೋನಿಯಾ ಸುತ್ತ ಪ್ರದಕ್ಷಿಣೆಯಿಂದ ಎಲ್ಲ ಕೆಲಸವಾಗುತ್ತದೆ ಎಂಬುದನ್ನು ಅವರು ಚೆನ್ನಾಗಿ ಬಲ್ಲರು. ಈ ಕಾರಣದಿಂದ ಅವರು ಪ್ರಧಾನಿ ಮುಂದೆ ಸುಳಿಯುವುದಿಲ್ಲ.

ಈ ದೇಶ ಹಲವಾರು ಪ್ರಧಾನಿಗಳನ್ನು ಕಂಡಿದೆ. ಇಡೀ ದೇಶವನ್ನು ಕೈಯಲ್ಲಿಟ್ಟುಕೊಂಡ ನೆಹರು, ಇಂದಿರಾಗಾಂಧಿಯಂಥ ಪ್ರಧಾನಿಗಳನ್ನು ಕಂಡಿದೆ. ನಾಮ್‌ಕಾವಸ್ತೆ ಪ್ರಧಾನಿಗಳಾದ ಚರಣ್‌ಸಿಂಗ್‌, ಚಂದ್ರಶೇಖರ್‌, ಗುಜ್ರಾಲ್‌, ದೇವೇಗೌಡ ಇವರ್ಯಾರು ಕಾಂಗ್ರೆಸ್‌ನವರಾಗಿರಲಿಲ್ಲ. ಆದರೆ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್‌ನ ಸಿಂಗ್‌ ಅವರಲ್ಲಿ ದುರ್ಬಲ, ಅಸಹಾಯಕ ಪ್ರಧಾನಿಯನ್ನು ಕಾಣುವಂತಾಗಿದೆ. ಪ್ರಾಯಶಃ ಮೊದಲ ಬಾರಿಗೆ ಈ ದೇಶ ಕೈಲಾಗದ, ಕೈಕಟ್ಟಿರುವ ಪ್ರಧಾನಿಯನ್ನು ಸಹಿಸಿಕೊಳ್ಳಬೇಕಾಗಿದೆ. ಎಲ್ಲಾ ಅಧಿಕಾರ ಹೊಂದಿ ಯಾವ ಅಧಿಕಾರ ಚಲಾಯಿಸದ ದಯನೀಯ ಸ್ಥಿತಿಯಲ್ಲಿ ಸಿಂಗ್‌ಯಿದ್ದಾರೆ. ಸರ್ವತಂತ್ರ ದೇಶದ ಪ್ರಧಾನಿಯೆಂಬ ಪ್ರಧಾನಿಯೇ ಹಾಗೆ ಪರತಂತ್ರರಾಗಿಬಿಟ್ಟಿದ್ದಾರೆ. ಇದೆಂಥ ದುರಂತ? ಇಡೀ ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹವಲ್ಲವೇ ಇದು? ಸಮಸ್ತ ದೇಶವಾಸಿಗಳು ಅಸಹಾಯಕರಾಗಿ ನೋಡುತ್ತ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗಿರುವ ವಿಚಿತ್ರ ಸ್ಥಿತಿ ನಿರ್ಮಾಣವಾಗಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ?

ಇಂದು ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳಿಗೂ ಸೋನಿಯಾ ಮನೆಯೇ ಹತ್ತಿರ. ಪ್ರಧಾನಿಯವರ ಜೊತೆ ಏನಿದ್ದರೂ ಸೌಜನ್ಯದ ಭೇಟಿ ಅಷ್ಟೆ, ಅದೂ ಸಮಯವಿದ್ದರೆ(ಸಮಯ ಪ್ರಧಾನಿಗಲ್ಲ, ಮುಖ್ಯಮಂತ್ರಿಗಳಿಗೆ). ವಿದೇಶಿ ಗಣ್ಯರನ್ನು ಪ್ರಧಾನಿ ಬರಮಾಡಿಕೊಂಡರೂ ಮಹತ್ವದ ಮಾತುಕತೆಯೆಲ್ಲ ಸೋನಿಯಾ ಜತೆಗೇ ನಡೆಯುತ್ತದೆ. ಯಾವ ವಿದೇಶಿ ಗಣ್ಯರು ಸೋನಿಯಾರನ್ನು ಭೇಟಿಯಾಗದೇ ಹೋಗುವುದಿಲ್ಲ. ವಿದೇಶಗಳಿಗೆ ಆಮಂತ್ರಣವೂ ಪ್ರಧಾನಿಗಿಂತ ಹೆಚ್ಚು ಸೋನಿಯಾಗೆ.

ಅಧಿಕಾರಿಗಳಿಗೆ ಕೂಡ ಇವೆಲ್ಲ ಚೆನ್ನಾಗಿ ಗೊತ್ತು. ಅವರು ಸಹಾ ತಮಗೆ ಬೇಕಾದ ಪ್ರಮುಖ ಹುದ್ದೆಗಳಿಗಾಗಿ ಸೋನಿಯಾರನ್ನೇ ಎಡತಾಕುತ್ತಾರೆ. ಪ್ರಧಾನಿ ಕಚೇರಿಯಲ್ಲಿ ಜಾಗ ಪಡೆಯುವುದೆಂದರೆ ಅಧಿಕಾರಿಗಳಿಗೆ ಪ್ರತಿಷ್ಟೆಯ ವಿಚಾರವಾಗಿತ್ತು. ಅದಕ್ಕಾಗಿ ಸಾಕಷ್ಟು ಲಾಬಿ ಮಾಡುತ್ತಿದ್ದರು. ಸಾಧ್ಯವಿರುವ ಎಲ್ಲ ಸರ್ಕಸ್‌ ಮಾಡುತ್ತಿದ್ದರು. ಪ್ರಭಾವ ಬಳಸುತ್ತಿದ್ದರು. ಈಗೇನಾಗಿದೆ ನೋಡಿ, ಪ್ರಧಾನಿ ಕಚೇರಿಗೆ ಯಾವ ಅಧಿಕಾರಿಯು ಹೋಗಲು ಮನಸ್ಸು ಮಾಡುತ್ತಿಲ್ಲ. ಅಲ್ಲಿ ಕೆಲಸ ಮಾಡುವುದಕ್ಕಿಂತ ಅಂಬಿಕಾ ಸೋನಿ ಕಾರ್ಯದರ್ಶಿಯಾಗುವುದು ಎಷ್ಟೋ ಮೇಲು ಎಂಬುದು ಅಧಿಕಾರಿಗಳ ವಲಯದಲ್ಲಿನ ಗೇಲಿ. ಇದು ನಿಜ ಕೂಡ. ಹೀಗಾಗಿ ಪ್ರಧಾನಿ ಕಚೇರಿ ಇನ್ನೇನು ನಿವ್ತುತ್ತರಾಗಲಿರುವ ಅಧಿಕಾರಿಗಳಿಂದ ತುಂಬಿದೆ.

ಪ್ರಧಾನಿ ಹುದ್ದೆಗಿದ್ದ ಆಕರ್ಷಣೆ, ಮಹತ್ವ, ಅಂದಚೆಂದ, ಗತ್ತು ಗೈರತ್ತು, ಸಾರ್ವಭೌಮ ಅಧಿಕಾರಗಳೆಲ್ಲ ಹೊಸ ಸರಕಾರ ಬಂದ ನೂರು ದಿನದೊಳಗೆ ಕಿತ್ತುಕೊಂಡು ಹೋಗಿವೆ. ಮನಮೋಹನ್‌ ಸಿಂಗ್‌ ಪ್ರಧಾನಿ ಕುರ್ಚಿಗೊಂದು ವರ್ಚಸ್ಸು, ಕಳೆ ತರಬಹುದೆಂಬ ಯಾವ ಆಶಾಭಾವನೆಯೂ ಸದ್ಯಕ್ಕಂತೂ ಬರುವುದಿಲ್ಲವೇನೋ ಎನಿಸುತ್ತದೆ. ಪ್ರಧಾನಿಗಿಂತ ಅವರನ್ನು ನೇಮಿಸಿದವರೇ ಹೆಚ್ಚು ಪವರ್‌ಫುಲ್‌ ಆಗಿರುವುದರಿಂದ ಆವರೇ ಸೂಪರ್‌ ಪ್ರಧಾನಿಯಾಗಿದ್ದಾರೆ.

ಈ ಎಲ್ಲಾ ವಿಚಿತ್ರ, ಅಸಹ್ಯ, ವಾಕರಿಕೆ ಹುಟ್ಟಿಸುವ ಬೆಳವಣಿಗೆಗಳನ್ನು ಕಂಡು ದೇಶದ ಜನತೆಗೆ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವುದನ್ನು ಬಿಟ್ಟರೆ ಮತ್ತೇನೂ ಮಾಡದ ಪರಿಸ್ಥಿತಿ. ಒಬ್ಬ ಕೇಂದ್ರ ಮುಂತ್ರಿ ನಾಪತ್ತೆಯಾದರೆ, ಕೇಂದ್ರ ಸರಕಾರದ ಮುಖ್ಯಸ್ಥರಾಗಿರುವ ಪ್ರಧಾನಿ ಎಲ್ಲಿದ್ದಾರೆ? ದಯವಿಟ್ಟು ಹುಡುಕಿಕೊಡಿ ಎಂದು ಕೇಳುವಂತಾಗಿದೆ. ನಾಳೆ ಅದೇ ಪ್ರಧಾನಿ ಕೆಂಪು ಕೋಟೆ ಮೇಲಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ನಾವು ಕೇಳುತ್ತೇವೆ. ಮಹಾತ್ಯಾಗಿ ನಗುತ್ತಾಳೆ ! ಎಲ್ಲಿಗೆ ಬಂತ್ರಿ ನಮ್ಮ ದೇಶ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more