• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದಿರಾ ಹತ್ಯೆಗೆ ಶೋಕಿಸುವವರಿಗೆ ಸಿಖ್‌ ನರಮೇಧ ನೆನಪಾಗುವುದಿಲ್ಲವೇಕೆ ?

By Staff
|
Vishweshwar Bhat ವಿಶ್ವೇಶ್ವರ ಭಟ್‌

ಮೊನ್ನೆ ಅಕ್ಟೋಬರ್‌ 31ಕ್ಕೆ ಇಂದಿರಾಗಾಂಧಿ ಹತ್ಯೆಯಾಗಿ ಬರೋಬ್ಬರಿ ಇಪ್ಪತ್ತು ವರ್ಷಗಳಾದವು. ದೇಶಾದ್ಯಂತ ಇಂದಿರಾ ಶ್ರದ್ಧಾಂಜಲಿ, ಸ್ಮರಣೆ, ಗುಣಗಾನ ಕಾರ್ಯಕ್ರಮಗಳು ಜರುಗಿದವು. ಕೆಲವು ಪತ್ರಿಕೆಗಳು ವಿಶೇಷ ಪುರವಣಿ, ಲೇಖನ ಪ್ರಕಟಿಸಿದವು. ಕಾಂಗ್ರೆಸ್‌ ನಾಯಕರಂತೂ ಇನ್ನೂ ಶೋಕದಿಂದ ಚೇತರಿಸಿಕೊಂಡಿಲ್ಲವೇನೋ ಎಂಬಂತೆ ಕಣ್ಣೀರು ಹಾಕಿದರು. ಒಂದೆರಡು ದಿನ ದೇಶದೆಲ್ಲೆಡೆ ಇಂದಿರಾ ಜಪ! ತಪ್ಪಿಲ್ಲ ಬಿಡಿ. ಇಂದಿರಾ ಎಷ್ಟೆಂದರೂ ಕಾಂಗ್ರೆಸ್ಸಿಗರ ಆರಾಧ್ಯ ದೈವ, ಕಾಂಗ್ರೆಸ್ಸಿಗರು ಆದರ್ಶ, ಸ್ಫೂರ್ತಿ ಎಳೆದುಕೊಳ್ಳುವುದೇ ಇಂದಿರಾರಿಂದ.

Riots in Delhi against Sikhsವಿಷಯ ಇದಲ್ಲ. ಇಂದಿರಾಗಾಂಧಿ ಸತ್ತ ಮರುದಿನ ಅಂದರೆ ನವೆಂಬರ್‌ ಒಂದರಂದು ಸಿಖ್‌ರ ಮಾರಣಹೋಮವಾಯಿತಲ್ಲ , ಇಂದಿರಾ ಹತ್ಯೆ ಮಾಡಿದ ಸಿಖ್‌ರನ್ನು ಕಂಡಕಂಡಲ್ಲಿ ಅಟ್ಟಾಡಿಸಿ ಕಾಂಗ್ರೆಸ್ಸಿಗರು ಸಾಯಿಸಿದರಲ್ಲ , ಅವರ ಮನೆಗಳಿಗೆ ಬೆಂಕಿ ಹಚ್ಚಿದರಲ್ಲ , ಸಿಖ್‌ ಹೆಣ್ಣುಮಕ್ಕಳನ್ನು ನಿರ್ದಯವಾಗಿ ಮಾನಭಂಗ ಮಾಡಿದರಲ್ಲ , ದೇಶಾದ್ಯಂತ ಸಿಖ್‌ರ ಮೇಲೆ ನಡೆದ ಅಮಾನುಷ , ಪೈಶಾಚಿಕ ಹಿಂಸಾಚಾರದಲ್ಲಿ ಏನಿಲ್ಲವೆಂದರೂ ಐದು ಸಾವಿರ ಮಂದಿ ಸತ್ತರಲ್ಲ , ಲಕ್ಷಾಂತರ ಮಂದಿ ತಬ್ಬಲಿಗಳು, ನಿರ್ಗತಿಕರಾದರಲ್ಲ, ಅವರ ಬಗ್ಗೆ ಒಬ್ಬೇ ಒಬ್ಬ ಕಾಂಗ್ರೆಸ್‌ ನಾಯಕರೂ ಕಂಬನಿ ಮಿಡಿಯಲಿಲ್ಲ. ಒಳದನಿಯಲ್ಲಾದರೂ ಸಾಂತ್ವನದ ಮಾತುಗಳನ್ನು ಸಹ ಹೇಳಲಿಲ್ಲ. ಇಡೀ ದೇಶಕ್ಕೆ ದೇಶವೇ ಹೆಮ್ಮೆ ಪಡುವಂಥ ಜನಾಂಗವೆಂದರೆ ಸಿಖ್‌ರು. ಈ ದೇಶ ರಕ್ಷಣೆಯಲ್ಲಿ ಅವರು ಮೆರೆದ ಸಾಹಸ, ಶೌರ್ಯ ಅಪ್ರತಿಮವಾದುದು. ಅಂಥ ಸಿಖ್‌ರನ್ನು ಇಪ್ಪತ್ತು ವರ್ಷಗಳ ಹಿಂದೆ ದೆಲ್ಲಿ-ಯ ಬೀದಿ-ಬೀ-ದಿ-ಗ-ಳ-ಲ್ಲಿ ಬರ್ಬರವಾಗಿ ಹತ್ಯೆ ಮಾಡ-ಲಾ-ಯಿ-ತು. ಒಂದೇ ಒಂದು ಕಂಬನಿ ಸಹ ಉದುರಲಿಲ್ಲ.

ಇಪ್ಪತ್ತು ವರ್ಷಗಳ ಹಿಂದೆ ಏನಾಯಿತೆಂಬುದನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿ. ಮೈ ಕೊರೆಯುವ ಚಳಿಯಿಂದ ದಿಲ್ಲಿಯೆಂಬ ಮಾಯಾನಗರಿ ನೆಟಿಗೆ ಮುರಿದುಕೊಂಡು ಆಕಳಿಸಿ ಎದ್ದು ಕುಳಿದುಕೊಳ್ಳುತ್ತಿದ್ದಂತೆ ಆಗಬಾರದ ಘಟನೆ ಸಂಭವಿಸಿಬಿಟ್ಟಿತ್ತು. ಪ್ರಧಾನಿ ಇಂದಿರಾಗಾಂಧಿಯವರನ್ನು ಅವರ ಅಂಗರಕ್ಷಕರಾದ ಸತ್ವಂತ್‌ ಸಿಂಗ್‌ ಹಾಗೂ ಬಿಯಾಂತ್‌ ಸಿಂಗ್‌ ಗುಂಡು ಹೊಡೆದು ಹತ್ಯೆಗೈದಿದ್ದರು. ಇದಕ್ಕೂ ಐದು ತಿಂಗಳ ಮೊದಲು (ಜೂನ್‌ 5)ಇಂದಿರಾಗಾಂಧಿ ಅಮೃತ ಸರದ ಸ್ವರ್ಣ ಮಂದಿರದಲ್ಲಿ ನಡೆಸಿದ ನೀಲಿನಕ್ಷತ್ರ ಕಾರ್ಯಾಚರಣೆಗೆ ಪ್ರತೀಕಾರವಾಗಿ ಅಂಗರಕ್ಷಕರಿಬ್ಬರು ಪ್ರಧಾನಿಯನ್ನೇ ಹೊಡೆದುರುಳಿಸಿದ್ದರು! ಬೆಳಗ್ಗೆ ಇಂದಿರಾ ಹತ್ಯೆಯಾದರೆ ಆಕಾಶವಾಣಿ ಹಾಗೂ ದೂರದರ್ಶನ ಸಾಯಂಕಾಲ ಆರು ಗಂಟೆ ಹೊತ್ತಿಗೆ ಅವರ ಸಾವಿನ ಸುದ್ದಿಯನ್ನು ಖಾತ್ರಿಪಡಿಸಿ ಬಿತ್ತರಿಸಿದವು. ಅಷ್ಟರೊಳಗೆ ರಾಜೀವಗಾಂಧಿ ಮುಂದಿನ ಪ್ರಧಾನಿಯಾಗಬೇಕೆಂಬುದು ನಿರ್ಧರಿತವಾಗಿತ್ತು. ವಿದೇಶ ಪ್ರವಾಸದಲ್ಲಿದ್ದ ಜೈಲ್‌ಸಿಂಗ್‌ ಹಠಾತ್‌ ಆಗಮಿಸಿದಾಗ ಅವರ ಕಾರಿನ ಮೇಲೂ ಕಾಂಗ್ರೆಸ್‌ ಕಾರ್ಯಕರ್ತರು ಕಲ್ಲುಗಳನ್ನೆಸೆದು ಬರಲಿರುವ ಅನಾಹುತದ ಕ್ಷಣಗಳಿಗೆ ಸೂಚನೆ ಕೊಟ್ಟಿದ್ದರು.

ಆ ದಿನ ರಾತ್ರಿ ಪ್ರಾಯಶಃ ಕಾಂಗ್ರೆಸ್‌ ಕಾರ್ಯಕರ್ತರು, ಪುಡಿ ನಾಯಕರು ಮಲಗಲೇ ಇಲ್ಲ. ರಾತ್ರಿ ಹಾಸಿಕೊಳ್ಳುತ್ತಿದ್ದಂತೆ ಇಡೀ ದಿಲ್ಲಿಯ ನೆತ್ತಿಯ ಮೇಲೆ ದಟ್ಟ ವದಂತಿಗಳ ಕಾರ್ಮೋಡ.‘‘ಇಂದಿರಾ ಹತ್ಯೆಯನ್ನು ಸಿಖ್‌ರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರಂತೆ, ಎಲ್ಲ ಸಿಖ್‌ ಮನೆಗಳಲ್ಲಿ ಹಬ್ಬದ ವಾತಾವರಣವಂತೆ, ಗುರುದ್ವಾರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆಯಂತೆ, ಸಿಖ್‌ ಉಗ್ರಗಾಮಿಗಳು ದಿಲ್ಲಿಯಾಳಗೆ ನುಸುಳಿ ಬಂದಿದ್ದಾರಂತೆ, ಎಲ್ಲೆಡೆ ಸಿಖ್‌ರು ವಿಜಯೋತ್ಸವ ಆಚರಿಸುತ್ತಿದ್ದಾರಂತೆ’’ಎಂಬ ಗಾಳಿಸುದ್ದಿ, ವದಂತಿಗಳು ದಿಲ್ಲಿಯ ಗಲ್ಲಿಗಲ್ಲಿಗಳನ್ನು ತಲುಪಿದ್ದವು. ಈ ವದಂತಿಗಳೆಲ್ಲ ಕಾವು ಪಡೆದು ಮರುದಿನ ಸ್ಫೋಟಗೊಳ್ಳಲು ಸಿದ್ಧವಾಗಿದ್ದವು.

ನವೆಂಬರ್‌ ಒಂದು!

ಕಾಂಗ್ರೆಸ್‌ ಘೋಷಣೆ ಕೂಗುತ್ತಾ ಕೈಯಲ್ಲಿ ಕಬ್ಬಿಣದ ಸಲಾಕೆ, ಲಾಠಿ, ಚೈನು, ಪೆಟ್ರೋಲ್‌ ಬಾಂಬ್‌ ಹಿಂಡಿದ ಸಾವಿರಾರು ಕಾರ್ಯ ಕರ್ತರು ಸಿಖ್‌ ಮನೆಗಳು ಜಾಸ್ತಿಯಿರುವ ಪ್ರದೇಶ, ಬಡಾವಣೆಗಳ ಮೇಲೆ ಏಕಾಏಕಿ ದಾಳಿ ಮಾಡಿದರು. ಪೇಟಾ ಧರಿಸಿದ, ಉದ್ದ ದಾಡಿ ಬಿಟ್ಟ ಸಿಖ್‌ರನ್ನು ಕಂಡಕಂಡಲ್ಲಿ ಸಾಯಿಸಿದರು. ಸಿಖ್‌ರು ಜಾಸ್ತಿಯಾಗಿ ವಾಸಿಸುವ ತ್ರಿಲೋಕಪುರಿ ಮೇಲೆ ದೊಂಬಿಕೋರರು ಯಾವ ರೀತಿಯಲ್ಲಿ ಆಕ್ರಮಣ ನಡೆಸಿದ್ದರೆಂದರೆ ಕೆಲವೇ ಕೆಲವು ಕ್ಷಣಗಳಲ್ಲಿ ಇಡೀ ಪ್ರದೇಶ ಧಗಧಗಿಸಿ ಹೊತ್ತಿ ಉರಿದುಹೋಯಿತು. ಸಾವಿರಾರು ಸ್ಕೂಟರ್‌ ಹಾಗೂ ಬೈಕ್‌ಗಳಲ್ಲಿ ಕಾರ್ಯಕರ್ತರು ಕ್ಯಾನ್‌ಗಳಲ್ಲಿ ಪೆಟ್ರೋಲ್‌, ಸೀಮೆಎಣ್ಣೆಗಳನ್ನು ಹೊತ್ತೊಯ್ದು ಸಿಖ್‌ರ ಮನೆಗಳ ಮೇಲೆ ಸುರಿದು ಬೆಂಕಿಯಿಡುತ್ತಿದ್ದರೆ ಬೀದಿಗೆ ಬೀದಿ ಅಗ್ನಿಕುಂಡಗಳಾಗಿದ್ದವು. ಹಿಂದಿನ ದಿನ ರಾತ್ರಿ ನೂರಾರು ಕಾರ್ಯಕರ್ತರು ಸಿಖ್‌ರ ಮನೆಗಳ ಮುಂದೆ ಚಾಕ್‌ಪೀಸ್‌ನಲ್ಲಿ ಗುರುತು ಹಾಕಿದ್ದರಿಂದ ಧ್ವಂಸ ಕಾರ್ಯ ಸುಲಲಿತವಾಯಿತು. ಗಡ್ಡಧಾರಿ ಸಿಖ್‌ರನ್ನು ಮನೆಯಿಂದ ಹೊರಗೆಳೆದು ತಂದು ಬೀದಿಯಲ್ಲಿ ಇರಿದು ಸಾಯಿಸಲಾಯಿತು. ಕೆಲವರ ಮನೆಗಳಿಗೆ ಬೀಗ ಹಾಕಿ ಪೆಟ್ರೋಲ್‌ ಸುರಿದು ಒಳಗಿದ್ದವರನ್ನು ಸುಟ್ಟು ಜೀವಂತ ಸಮಾಧಿ ಮಾಡಲಾಯಿತು. ನೂರಾರು ಹೆಂಗಸರು ಬೀದಿಗಳಲ್ಲಿ ಮಾನಭಂಗಕ್ಕೊಳಗಾದರು. ಒಂದು ಘಟನೆಯಲ್ಲಂತೂ ಹದಿನೇಳು ವರ್ಷದ ಹುಡುಗನೆದುರೇ ಆತನ ತಾಯಿಯನ್ನು ಮಾನಭಂಗ ಮಾಡಿದ ದಂಗೆಕೋರರು, ನಂತರ ಆತನನ್ನು ಅಲ್ಲಿಯೇ ಸುಟ್ಟು ಹಾಕಿದರು.

ಗುರುದ್ವಾರಗಳಲ್ಲಿ ಸಿಖ್‌ರು ಅಡಗಿ ಕುಳಿತಿರಬಹುದೆಂದು ಭಾವಿಸಿದ ಗಲಭೆಕೋರರು ಅಲ್ಲಿಯೂ ಹೊಕ್ಕರು. ದಿಲ್ಲಿಯಲ್ಲಿರುವ 450 ಗುರುದ್ವಾರಗಳಲ್ಲಿ ನೆತ್ತರು ಚೆಲ್ಲಿದವು. ಹೊಟ್ಟೆಪಾಡಿಗಾಗಿ ಸೈಕಲ್‌ ರಿಕ್ಷಾ, ಬೈಕ್‌ರಿಕ್ಷಾ, ಕಾರುಗಳನ್ನು ಓಡಿಸುತ್ತಿದ್ದ ಸಿಖ್‌ರ ಸಾವಿರಾರು ವಾಹನಗಳು ಬೆಂಕಿಗೆ ಆಹುತಿಯಾದವು. ನವೆಂಬರ್‌ ಒಂದರ ರಾತ್ರಿ 10ಗಂಟೆಯಾಳಗೆ 2 ಸಾವಿರಕ್ಕೂ ಹೆಚ್ಚು ಜನರು ಸತ್ತಿದ್ದರು. ಲಕ್ಷಾಂತರ ಮಂದಿ ಮನೆ, ಮಠ ಬಿಟ್ಟು ಜೀವ ಉಳಿಸಿಕೊಳ್ಳಲೆಂದು ದಿಲ್ಲಿ ಬಿಟ್ಟು ಓಡಿ ಹೋದರು. ಕೆಲವರು ಧಾರ್ಮಿಕ ಭಾವನೆಯನ್ನು ಮೀರಿ ಗಡ್ಡ ಕತ್ತರಿಸಿಕೊಂಡರು. ಪೇಟಾ ಎಸೆದರು. ಜೀವ ಉಳಿಸಿಕೊಂಡರೆ ಸಾಕೆಂದು ಸಕಲವನ್ನೂ ತೊರೆದು ಓಡಿಹೋದರು.

ಮೂರು ದಿನಗಳ ಕಾಲ ದಿಲ್ಲಿ ನಿಗಿನಿಗಿ ಹೊತ್ತಿ ಉರಿದುಹೋಯಿತು!

ದಿಲ್ಲಿಯಷ್ಟೇ ಅಲ್ಲ , ಗುರುಗಾಂವ್‌, ಕಾನ್‌ಪುರ, ಬೊಕಾರೊ, ಇಂದೋರ್‌, ಭೋಪಾಲ್‌, ಅಹಮದ್‌ನಗರ, ಸೂರತ್‌ ಮುಂತಾದ ನಗರದಲ್ಲಿ ಸಹ ನೂರಾರು ಸಿಖ್‌ರು ಸತ್ತರು. ಪಂಜಾಬ್‌ ಮೂಲದ ಟ್ರಕ್‌ಗಳಿಗೆ ಕರ್ನಾಟಕದಲ್ಲಿ ಸಹ ಬೆಂಕಿಯಿಡಲಾಯಿತು. ವಾರಪೂರ್ತಿ ಸಿಖ್‌ರ ಮೇಲೆ ಹಲ್ಲೆ, ದಾಳಿ ನಡೆದ ಪ್ರಸಂಗಗಳು ದೇಶದ ಒಂದಿಲ್ಲೊಂದು ಭಾಗಗಳಿಂದ ಬರುತ್ತಲೇ ಇದ್ದವು. ದಿಲ್ಲಿಯಲ್ಲೊಂದೇ 2,733 ಮಂದಿಯನ್ನು ಕೊಲ್ಲ-ಲಾ-ಯಿ-ತು. ರಾಜೀ-ವ್‌-ಗಾಂಧಿ ಸರ್ಕಾ-ರ ಕೇವ-ಲ 450 ಮಂದಿ ಪ್ರಾಣ ಕಳೆದುಕೊಂಡರೆಂದು ಹೇಳಿ ಸುಮ್ಮನಾಯಿತು. ಆ ಮೂರು ದಿನ ದಿಲ್ಲಿಯ ಬೀದಿಗಳನ್ನು ನೋಡಬೇಕಿತ್ತು. ಅರೆಬೆಂದ ಶವಗಳು, ಸುಟ್ಟು ಕರಕಲಾದ ದೇಹಗಳು, ಸುಟ್ಟುಹೋದ ವಾಹನಗಳ ‘ಅಸ್ತಿಪಂಜರ’ಗಳು, ಹೊಗೆಯುಗುಳುವ ಟೈರುಗಳು, ಅರ್ಧಸುಟ್ಟ ಮನೆಗಳು, ಎಲ್ಲೆಡೆ ಕಣ್ಣಿಗೆ ರಾಚುತ್ತಿದ್ದವು. ಮನೆಮಂದಿ, ಬಂಧುಮಿತ್ರರನ್ನು ಕಳೆದುಕೊಂಡವರ ಆಕ್ರಂದನ, ನರಳಾಟ, ಚೀರಾಟ ಎಂಥ ಕಲ್ಲು ಹೃದಯವನ್ನೂ ಕದಲಿಸುವಂತಿತ್ತು.

ಮನಸ್ಸು ಮಾಡಿದ್ದರೆ ದಿಲ್ಲಿಯ ಕಾನೂನು ಹಾಗೂ ಸುವ್ಯವಸ್ಥೆ ಹೊಣೆ ಹೊತ್ತಿದ್ದ ಅಂದಿನ ಕೇಂದ್ರ ಗೃಹಸಚಿವ ನರಸಿಂಹರಾಯರು ಈ ಸಿಖ್‌ ನರಮೇಧವನ್ನು ತಡೆಯಬಹುದಿತ್ತು. ಸೇನೆಯನ್ನು ಕ್ಷಣಾರ್ಧದಲ್ಲಿ ಕರೆಯಿಸಿದ್ದರೆ ದಂಗೆಕೋರರು ಬಾಲಮುಡುಗಿ ಕುಳಿತಿರುತ್ತಿದ್ದರು. ರಾಯರು ಏನೂ ಮಾಡಲೇ ಇಲ್ಲ. ನವೆಂಬರ್‌ ಒಂದರ ಮಧ್ಯಾಹ್ನ ಎರಡೂವರೆ ಗಂಟೆಗೆ ಸೇನೆಗೆ ಬುಲಾವ್‌ ಬಂತು. ಸೇನೆಯ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಲೆಫ್ಟನೆಂಟ್‌ ಗವರ್ನರ್‌ ಆದೇಶಕ್ಕೆಂದು ಅವರ ಬಾಗಿಲಿಗೆ ಹೋದರೆ, ಸಾಹೇಬರನ್ನು ಭೇಟಿಯಾಗಲು ಆಗಲೇ ಇಲ್ಲ. ಅಂತೂ ಇಂತೂ ಸಾಯಂಕಾಲ ಏಳು ಗಂಟೆಗೆ ಸೇನೆಗೆ ಅನುಮತಿ ಸಿಕ್ಕಿತು. ಅವರು ಬೀದಿಗೆ ಇಳಿಯವಷ್ಟರಲ್ಲಿ ಮಾರಣಹೋಮಕ್ಕೆ ಮೂಕ ಪ್ರೇಕ್ಷಕರಾಗುವುದನ್ನು ಬಿಟ್ಟರೆ ಅವರು ಮಾಡುವಂಥದ್ದೇನೂ ಉಳಿದಿರಲಿಲ್ಲ. ಪೂರ್ವದಿಲ್ಲಿಗೆ ಸೇನೆ ಮರುದಿನ ಮಧ್ಯಾಹ್ನ ಬಂದಾಗಲೂ ದಂಗೆಕೋರರು ತಮ್ಮ ಕೆಲಸ ಮುಗಿಸಿ ಹತ್ತು ತಾಸುಗಳಾಗಿದ್ದವು. ಇಂದಿರಾ ಗಾಂಧಿ ಅಂತ್ಯಸಂಸ್ಕಾರ ಮುಗಿಯುವವರೆಗೆ ದೊಂಬಿ, ನರಮೇಧ ತಡೆಯುವ ಪಿಳ್ಳೆ ಪ್ರಯತ್ನವೂ ನಡೆಯಲಿಲ್ಲ. ಕಾಂಗ್ರೆಸ್‌ ನಾಯಕರೆಲ್ಲ ಯಾರು ಪ್ರಧಾನಿಯಾರಾಗುತ್ತಾರೆ, ಯಾರಾದರೆ ತಮಗೊಳಿತು, ತಾವೇನಾಗಬಹುದೆಂಬ ಲೆಕ್ಕಾಚಾರದಲ್ಲಿ ಮುಳುಗಿದ್ದರೇ ಹೊರತು ಮಾರಣಹೋಮ ತಡೆಯಲು ಕ್ರಮ ಕೈಗೊಳ್ಳಲೇ ಇಲ್ಲ. ದೇಶದ ಗಡಿಯಲ್ಲಿ ಚಳಿ, ಗಾಳಿ, ಬಿಸಿಲೆನ್ನದೇ ಗಡಿ ಕಾಯುತ್ತಾ ದೇಶರಕ್ಷಣೆಯಲ್ಲಿ ತಮ್ಮನ್ನು ಸಮರ್ಪಿಕೊಂಡ, ದೇಶವೇ ಅಭಿಮಾನದಿಂದ ಹೆಮ್ಮೆಪಡುವ ಸಿಖ್‌ರು, ಅವರ ಕುಟುಂಬದವರು ಯಕಃಶ್ಚಿತವಾಗಿ, ತಮ್ಮದಲ್ಲದ ತಪ್ಪಿಗೆ ಬೀದಿ ಹೆಣವಾಗಿ ಸತ್ತಿದ್ದರು.

ಸಿಖ್‌ ನರಮೇಧದ ಕುರಿತು ತನಿಖೆಗೆ ರಾಜೀವ್‌ ಸರಕಾರ ರಂಗನಾಥ ಮಿಶ್ರಾ ಆಯೋಗ ನೇಮಿಸಿತು. ಈ ಆಯೋಗ ಅದೇನು ವಿಚಾರಣೆ ನಡೆಸಿತೋ ಆ ಭಗವಂತನೇ ಬಲ್ಲ. ಆಯೋಗ ಸಲ್ಲಿಸಿದ ಆಫಿಡವಿಟ್‌ ಹಾಗೂ ಮನವಿಗಳ ಪ್ರತಿಗಳನ್ನು ನರಮೇಧದಲ್ಲಿ ಷಾಮೀಲಾಗಿದ್ದಾರೆನ್ನಲಾದ ವ್ಯಕ್ತಿಗಳಿಗೇ ಗುಟ್ಟಾಗಿ ಕಳಿಸಿಕೊಟ್ಟು ಅವರನ್ನು ಬಚಾವ್‌ ಮಾಡುವ ಪ್ರಯತ್ನ ನಡೆಯಿತು. ಹತ್ಯಾಕಾಂಡದಲ್ಲಿ ಕಾಂಗ್ರೆಸ್‌ ಮುಖಂಡ ಸಜ್ಜನಕುಮಾರ್‌ ಭಾಗಿಯಾಗಿದ್ದಾರೆಂದು ನೊಂದವರು ಆಫಿಡವಿಟ್‌ ಸಲ್ಲಿಸಿದರು. ಕೆಲ ದಿನಗಳ ಬಳಿಕ ಸಜ್ಜನಕುಮಾರ್‌ ಮನೆಯಲ್ಲಿ ಆಯೋಗಕ್ಕೆ ಸಂಬಂಧಪಟ್ಟ ಮಹತ್ವದ ದಾಖಲೆ, ಕಾಗದ ಪತ್ರಗಳು ಸಿಕ್ಕವು. ಆಯೋಗದ ವಿಚಾರಣೆ ಕಲಾಪದಿಂದ ಪತ್ರಿಕೆಗಳನ್ನು ಹೊರಗಿಡಲಾಯಿತು. ಪ್ರತಿಪಕ್ಷಗಳು ತೀವ್ರ ಒತ್ತಡದಿಂದ ಮಿಶ್ರಾ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದರೆ ಅದರಲ್ಲಿ ಗೋಚರಿಸಿದ್ದು ಅಡಕವಾಗಿದ್ದು ಬದನೇಕಾಯಿ! ಮೂರು ದಿನಗಳಲ್ಲಿ ಎರಡೂ ಮುಕ್ಕಾಲು ಸಾವಿರ ಮಂದಿ ಸತ್ತರೆ ಅದಕ್ಕೆ ಕಾರಣವಾದ ಒಬ್ಬೇ ಒಬ್ಬನ ಮೇಲೆ ಹೊಣೆಗಾರಿಕೆ ಫಿಕ್ಸ್‌ ಮಾಡಲು ಆಯೋಗಕ್ಕೆ ಸಾಧ್ಯವಾಗಲಿಲ್ಲ.

ಇದಾದ ಬಳಿಕ ಜೈನ್‌-ಬ್ಯಾನರ್ಜಿ ಸಮಿತಿ ರಚಿಸಲಾಯಿತು. ಅದೂ ವರದಿ ಸಲ್ಲಿಸಿತು. ಅದೇ ಬದನೇಕಾಯಿ. ಕಪೂರ್‌-ಮಿಟ್ಟಲ್‌ ಸಮಿತಿ ಬಂತು. ಅದು ಕಡಿದದ್ದೂ ಬದನೇಕಾಯಿಯನ್ನೇ, ಸತ್ತವರೆಷ್ಟು ಮಂದಿ ಎಂಬುದನ್ನು ಲೆಕ್ಕ ಹಾಕಲು ಅಹುಜಾ ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿ 2733 ಮಂದಿ ಸತ್ತಿದ್ದಾರೆಂದು ಹೇಳಿತು. ಈ ಮೊದಲು 425 ಮಂದಿ ಸತ್ತಿದ್ದಾರೆಂದು ಸುಳ್ಳು ಹೇಳಿದ ರಾಜೀವ್‌ಗಾಂಧಿ ದೇಶದ ಕ್ಷಮೆ ಯಾಚಿಸಲಿಲ್ಲ. ಸಣ್ಣ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಲಿಲ್ಲ ಬಿಡಿ.

ಕಳೆದ 20 ವರ್ಷಗಳಲ್ಲಿ ಆಯೋಗ ಹಾಗೂ ಸಮಿತಿಗಳು ವಿಚಾರಣೆಯೆಂಬ ಅಣಕವಾಡಿ ಹೋಗಿವೆ. ಕಿತ್ತಿದ್ದೇನೂ ಇಲ್ಲ. ಸಜ್ಜನಕುಮಾರ್‌, ಎಚ್‌.ಕೆ.ಎಲ್‌ ಭಗತ್‌, ಜಗದೀಶ್‌ ಟೈಟ್ಲರ್‌ ಈ ನರಮೇಧದ ರೂವಾರಿಗಳೆಂದು ಸಾಕಷ್ಟು ಸಾಕ್ಷ್ಯ, ಪ್ರತ್ಯಕ್ಷದರ್ಶಿಗಳಿಂದ ದೃಢಪಟ್ಟಿದೆ. ಆದರೆ ಅವರ ವಿರುದ್ಧ ಯಾರಿಗೂ ಏನೂ ಕ್ರಮ ಕೈಗೊಳ್ಳಲಾಗಲಿಲ್ಲ. ಸಜ್ಜನಕುಮಾರ್‌ ಈಗ ಲೋಕಸಭಾ ಸದಸ್ಯ ಅಲ್ಲದೇ ಮತ್ತಷ್ಟು ಬಲಿಷ್ಠ . ಜಗದೀಶ್‌ ಟೈಟ್ಲರ್‌ ಈಗಿನ ಕೇಂದ್ರ ಸರಕಾರದಲ್ಲಿ ಮಂತ್ರಿ. ಇವರಿಬ್ಬರನ್ನು ಯಾರು ಮುಟ್ಟಿಯಾರು?

ಇಂದಿರಾಗಾಂಧಿ ಸತ್ತ ದಿನ ದೇಶಕ್ಕೆ ದೇಶವೇ ಮರುಗುತ್ತದೆ. ಶೋಕ ಮಾರ್ದನಿಗೊಳ್ಳುತ್ತದೆ. ಆದರೆ ಇಂದಿರಾ ಹತ್ಯೆ ಪ್ರತೀ-ಕಾ-ರ-ವಾ-ಗಿ ನಾಲ್ಕಾರು ಸಾವಿರ ನಿರಪರಾಧಿ, ನಿರುಪದ್ರವಿಗಳು ಸತ್ತರಲ್ಲ ಅವರ ಹಿಡಿ ನೆನಪನ್ನು ಮಾಡಿಕೊಳ್ಳುವುದಿಲ್ಲ. ಬೇಸರವಾಗುವುದು ಇದಕ್ಕೆ. ಮೇರಾ ಭಾರತ್‌ ಮಹಾನ್‌!

(ಸ್ನೇಹಸೇತು : ವಿಜಯಕರ್ನಾಟಕ )

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more