• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾದಿ ತಪ್ಪಿದ ಹೆಂಡತಿಗೆ ಆತ ಮದುವೆ ಮಾಡಲು ನಿಂತ !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ತನ್ನ ಹೆಂಡತಿಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಆತ ಪ್ರಿಯಕರನನ್ನು ಗುಂಡಿಟ್ಟು ಸಾಯಿಸಿದ!

ಇಂಥ ಒಂದು ನಿರ್ದಯಿ ವಾಕ್ಯದಲ್ಲಿ ಪ್ರೇಮಕತೆ ಮುಗಿದು ಹೋಗುತ್ತದೆ.

ಅದೊಂದು ವಿಚಿತ್ರ ಪ್ರೇಮಗಾಥೆ. ತ್ರಿಕೋಣ ಪ್ರೇಮ. ಕರುಣಾಜನಕ ಕತೆ. ಹೃದಯಚಲ್ಲಾಂತ ಪ್ರೇಮ ಪ್ರಕರಣ. ಅರವತ್ತರ ದಶಕದಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ ಘಟನೆ. ಅದನ್ನು ಪೊಲೀಸರು ತಮ್ಮ ಕಡತದಲ್ಲಿ ನಾನಾವತಿ ಮಾಡಿದ ಕೊಲೆ ಪ್ರಕರಣ ಅಂತಾರೆ. ಕಾನೂನು ಪುಸ್ತಕಗಳಲ್ಲಿ ಪ್ರೇಂ ಅಹುಜಾ ಕೊಲೆ ಪ್ರಕರಣ ಅಂತಾರೆ. ಮುಂಬೈ ನಗರದ ಜನರ ಪಾಲಿಗೆ ಇದು ಪತಿ, ಪತ್ನಿ ಔರ್‌ ಪ್ರೇಂ ಅಹುಜಾ. ಇನ್ನು ಕೆಲವರ ದೃಷ್ಟಿಯಲ್ಲಿ ಇದೊಂದು ಲವ್‌ ಸ್ಟೋರಿ. ಇನ್ನು ಕೆಲವರಿಗೆ ಇಂದಿಗೂ ಅರ್ಥವಾಗದ ನಿಗೂಢ ಕತೆ.

Commander Kavat Nanavatiಆತನ ಹೆಸರು ಕಾವಸ್‌ ನಾನಾವತಿ. ಭಾರತೀಯ ನೌಕಾಪಡೆಯಲ್ಲಿ ಕಮಾಂಡರ್‌. ಸ್ಫುರದ್ರೂಪಿ ತರುಣ. ಸದಾ ಲವಲವಿಕೆಯ ಶರೀರ. ಹದಿಮೂರು ಕಿ.ಮೀ. ಈಜಿ ಹುಡುಗಿಯಾಬ್ಬಳನ್ನು ರಕ್ಷಿಸಿದ ಸಾಹಸಿ. ನೌಕಾಪಡೆಯಲ್ಲಿ ನಾನಾವತಿ ಬಗ್ಗೆ ಎಲ್ಲಿಲ್ಲದ ಗೌರವ. ಈತನ ಸೌಂದರ್ಯಕ್ಕೆ ಮರುಳಾಗದವರೇ ಇರಲಿಲ್ಲ. ನೌಕಾ ಶಿಬಿರದಲ್ಲಿ ಅವನ ರೂಪು, ಸ್ವಭಾವ, ಹಾವಭಾವದ ಬಗ್ಗೆ ಯಾವತ್ತೂ ಒಂದು ಒಳ್ಳೆಯ ಮಾತು ಕೇಳಿ ಬರುತ್ತಿತ್ತು. ನಾನಾವತಿ ನೌಕಾಪಡೆಯ ವಿವಿಧ ಹುದ್ದೆಗಳಲ್ಲಿ ಬಹುಬೇಗನೆ ಹೆಸರು ಮಾಡಿದ. ನಾನಾವತಿ ಇಂಗ್ಲೆಂಡಿಗೆ ತರಬೇತಿ ಹೋದಾಗ ಹದಿನೆಂಟರ ಹರೆಯದ ಸಿಲ್ವಿಯಾಳನ್ನು ಆಕಸ್ಮಿಕವಾಗಿ ಭೇಟಿಯಾದ. ಅದು ಮೊದಲ ನೋಟದ ಪ್ರೇಮಾಂಕುರ. ಪರಿಚಯ ಬಹುಬೇಗನೆ ಮದುವೆಯೆಂಬ ದಡಕ್ಕೆ ಬಂದು ನಿಂತಿತ್ತು. ಇಂಗ್ಲೆಂಡಿನಲ್ಲಿಯೇ ಅವರ ಮದುವೆ ನೆರವೇರಿತು.

ನಾನಾವತಿಯ ತರಬೇತಿ ಮುಗಿದ ಬಳಿಕ ದಂಪತಿಗಳು ಮುಂಬೈಗೆ ಹೊರಟು ನಿಂತರು. ಮುಂಬೈ ಜೀವನದ ಬಗ್ಗೆ ಸಿಲ್ವಿಯಾಗೆ ವಿಚಿತ್ರ ಕಲ್ಪನೆಗಳಿದ್ದವು. ನಾನಾವತಿ ಅವಳಲ್ಲಿ ಭರವಸೆ ತುಂಬಿ ಹೆಂಡತಿಯನ್ನು ತನ್ನ ತವರಿಗೆ ಕರೆತಂದು ಹೊಸ ಜೀವನ ಆರಂಭಿಸಿದ. ಹೆಂಡತಿ ಮುಂಬೈಗೆ ಹೊಂದಿಕೊಳ್ಳುತ್ತಾಳೋ ಇಲ್ಲವೋ ಎಂಬ ಬಗ್ಗೆ ನಾನಾವತಿಗೆ ಸಂದೇಹಗಳಿದ್ದವು. ಅವನಿಗೆ ಮುಂಬೈಯ ಹೈ ಸೊಸೈಟಿಯಲ್ಲಿ ವಿಶೇಷ ಗೌರವ, ಸ್ಥಾನಮಾನಗಳಿದ್ದವು. ಮೂಲತಃ ಶ್ರೀಮಂತ. ನೌಕಾಪಡೆಯ ಕಮಾಂಡರ್‌ ಬೇರೆ. ಇದಕ್ಕಿಂತ ಹೆಚ್ಚಾಗಿ ಪರಮ ಸುಂದರ. ಅವನನ್ನೊಮ್ಮೆ ನೋಡಿದರೆ ಸಾಕು ಜೀವನವಿಡೀ ನೆನಪಿನಲ್ಲಿ ಶೇಖರವಾಗುವಂಥ ಮೈಕಟ್ಟು, ಮಾತು, ನಗೆ.

ಹಾಗಿತ್ತು ಅವನ ವ್ಯಕ್ತಿತ್ವ. ಜೊತೆಯಲ್ಲಿ ದಂತದ ಬೊಬೆಯಂತಹ ಹೆಂಡತಿ. ಮುಂಬೈಯ ಯಾವುದೇ ಪಾರ್ಟಿಯಲ್ಲಿ ನಾನಾವತಿ ದಂಪತಿಗಳು ನಡೆದು ಬರುತ್ತಿದ್ದರೆ ಎಲ್ಲರ ಕಂಗಳು ಅವರ ಮೇಲೆ ವಕ್ಕರಿಸಿಕೊಂಡು ಕುಳಿತಿರುತ್ತಿದ್ದವು! ಯಾವುದೇ ಪ್ರತಿಷ್ಠಿತ ಪಾರ್ಟಿಯಿರಲಿ ಇವರಿಗೊಂದು ಆಮಂತ್ರಣವಿರುತ್ತಿತ್ತು. ಈ ಕಾರಣದಿಂದ ಇವರು ಮುಂಬೈಯ ಸೋಶಿಯಲ್‌ ಸರ್ಕೀಟ್‌ನಲ್ಲಿ ಬಹಳ ಬೇಗನೆ ಪರಿಚಿತರಾದರು. ಖರೇ ಅಂದ್ರೆ ಆ ದಿನಗಳಲ್ಲಿ ನಾನಾವತಿ-ಸಿಲ್ವಿಯಾ ಇಲ್ಲದ ಪಾರ್ಟಿಗಳೇ ಇರುತ್ತಿರಲಿಲ್ಲ.

ಈ ಮಧ್ಯೆ ಸಿಲ್ವಿಯಾ ಎರಡು ಗಂಡು, ಒಂದು ಹೆಣ್ಣು ಮಗುವಿನ ತಾಯಿಯಾದಳು. ಹಾಗಂತ ಅವರಿಗೆ ಬೇಡಿಕೆ ಕಡಿಮೆಯಾಗಿರಲಿಲ್ಲ. ನಾನಾವತಿಗೆ ಕೈತುಂಬಾ ಕೆಲಸ. ಅವನ ಕೆಲಸವೂ ಹಾಗಿತ್ತು. ಹಡಗನ್ನೇರಿ ಹೊರಟನೆಂದರೆ ಒಂದೆರಡು ತಿಂಗಳಾದ ನಂತರವೇ ಮನೆಗೆ ಬರುತ್ತಿದ್ದ. ಅಲ್ಲದೇ ನೌಕಾಪಡೆಯಲ್ಲಿ ಜವಾಬ್ದಾರಿಯೂ ಹೆಚ್ಚಿತ್ತು. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇದ್ದವು.

ಅದ್ಯಾವ ಗಳಿಗೆಯಲ್ಲಿ ನಾನಾವತಿ ತನ್ನ ಹೆಂಡತಿಯನ್ನು ಅವನಿಗೆ ಪರಿಚಯಿಸಿದನೋ ಏನೋ, ಅವನ ಜೀವನ ನೌಕೆ ಹಾಗೆ ತತ್ತರಿಸಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ.

ಆತ ಪ್ರೇಂ ಭಗವಾನ್‌ ದಾಸ್‌ ಅಹುಜಾ!

ಮುಂಬೈ ಗಣ್ಯ ವಲಯದಲ್ಲಿ ಪ್ರೇಂ ಎಂದೇ ಪರಿಚಿತ. ಮುಂಬೈಯ ಸಿಂಧಿಗಳಲ್ಲೇ ಭಾರೀ ಕುಳ. ಪ್ರೇಂನ ಪರ್ಸನಾಲಿಟಿಯೇ ಹಾಗಿತ್ತು. ಒಂಥರ ಪ್ಲೇ ಬಾಯ್‌ ತರಹ ಇದ್ದ. ಹೊಸ ಕಾರು, ನಮುನಮೂನೆಯ ಫ್ಯಾಷನ್‌, ವಿಚಿತ್ರ ಡ್ರೆಸ್‌ ಮಾಡಿಕೊಂಡು ಪ್ರೇಂ ಬಂದರೆ ಥೇಟಾನುಥೇಟು ಶೋಕಿ ಲಾಲ! ಅವನಿಗೆ ವಿದೇಶಿ ಪ್ರವಾಸ ಖಯಾಲಿ. ಪ್ರತಿ ಸಲ ವಿದೇಶಕ್ಕೆ ಹೊರಟರೆ ಜತೆಯಲ್ಲಿ ಹೊಸ ಹುಡುಗಿ ಅವನ ಭುಜ ಸವರುತ್ತಿದ್ದಳು. ಹೀಗಾಗಿ ಅವನ ವಿದೇಶಿ ಪ್ರವಾಸವನ್ನು ಎದುರು ನೋಡುವ ದೊಡ್ಡ ಸಖಿಯರ ಗುಂಪೇ ಇತ್ತು. ಕೊನೆ ಕೊನೆಗೆ ಆತ ನಾಲ್ಕೈದು ಸುಂದರ ಯುವತಿಯರನ್ನು ಕಟ್ಟಿಕೊಂಡು ಫಾರಿನ್‌ ಟೂರ್‌ ಮಾಡುತ್ತಿದ್ದ. ಆತನಿಗೆ ಮಾಡಲು ಏನೂ ಕೆಲಸಗಳಿರಲಿಲ್ಲ. ಅಪ್ಪ ಗಳಿಸಿದ ಹೇರಳ ಹಣ, ಆಸ್ತಿಪಾಸ್ತಿಗಳಿದ್ದವು. ಮುಂಬೈಯಲ್ಲಿ ಅವನಿಗೆ ಐವತ್ತಕ್ಕಿಂತ ಹೆಚ್ಚಿನ ಮನೆಗಳಿದ್ದವು. ಹತ್ತು ಜನ್ಮ ಕುಂತು ತಿಂದರೂ ಕರಗದ ಗಂಟು! ಪ್ರೇಂಗೆ ರಾತ್ರಿಯ ಪಾರ್ಟಿ ಅಂದ್ರೆ ಪಂಚಪ್ರಾಣ. ಯಾಕೆಂದ್ರೆ ಅವನಿಗೆ ಗೊತ್ತಿದ್ದದ್ದು ಅದೊಂದೇ ಕಸುಬು.

ನಾನಾವತಿ-ಸಿಲ್ವಿಯಾ ಬರುತ್ತಿದ್ದ ಪಾರ್ಟಿಗೆ ಪ್ರೇಂ ಕೂಡ ಬರುತ್ತಿದ್ದ. ನಾನಾವತಿ ತನ್ನ ಹೆಂಡತಿಯನ್ನು ಪ್ರೇಂಗೆ ಪರಿಚಯಿಸಿದ. ಅಂದಿನಿಂದ ಅವರ ಮೂವರ ಜೀವನ ಮೊದಲಿನಂತೆ ಇರಲಿಲ್ಲ. ಪ್ರೇಂ ಹೆಂಗಸರ ವಿಷಯದಲ್ಲಿ ಕಟ್ಟುನಿಟ್ಟು- ಯಾವಳನ್ನಾದರೂ ಆಸೆ ಪಟ್ಟರೆ ಬಿಡುವವನಲ್ಲ. ಮನೆಯಲ್ಲಿ ಒಬ್ಬಳೇ ಇರುವ, ಗಂಡನಿಂದ ದೂರವಾದ, ಗಂಡನೊಂದಿಗೆ ಜಗಳವಾಡುವ ಹೆಂಗಸರೊಂದಿಗೆ ಆತ ಸಖ್ಯ ಬೆಳೆಸುತ್ತಿದ್ದ. ಗಂಡ ಮನೆಯಲ್ಲಿಲ್ಲದ ಸಮಯ ನೋಡಿ ಒಳಗೆ ಕಾಲಿಡುತ್ತಿದ್ದ. ಸೀರೆ, ಒಡವೆ ಕೊಟ್ಟು ಅವರನ್ನು ಸೆಳೆಯುತ್ತಿದ್ದ.

ಮೊದಲ ಬಾರಿಗೆ ಸಿಲ್ವಿಯಾಳನ್ನು ಕಂಡ ಪ್ರೇಂ ಅವಳ ಸೌಂದರ್ಯ ಕಂಡು ಮೂರ್ಛೆ ಹೋಗುವುದೊಂದು ಬಾಕಿ ಉಳಿದಿತ್ತು. ತನ್ನ ಮನದ ಇಂಗಿತವನ್ನು ಆತ ಗುಟ್ಟಾಗಿ ಪ್ರಕಟಿಸಿಯೂ ಇದ್ದ. ಇಂಥ ಮುನ್ನುಡಿಯಾಂದಿಗೆ ಆರಂಭವಾಗುವ ಗೆಳೆತನದಲ್ಲಿ ಸಲುಗೆ ಉಚಿತವಾಗಿ ಜತೆಯಲ್ಲೇ ಬರುತ್ತದೆ. ಸಿಲ್ವಿಯಾ ವಿಷಯದಲ್ಲೂ ಹಾಗೇ ಆಯಿತು. ನಾನಾವತಿ ಎರಡು-ಮೂರು ತಿಂಗಳು ಹಡಗನ್ನೇರಿ ಹೊರಟು ಹೋಗುತ್ತಿದ್ದರೆ ಸಿಲ್ವಿಯಾ ತೆಕ್ಕೆಯಲ್ಲಿ ಪ್ರೇಂ ನಿತ್ಯ ಅತಿಥಿ!

ಬರುಬರುತ್ತಾ ಸಿಲ್ವಿಯಾ ವರ್ತನೆ ಕಂಡು ನಾನಾವತಿಗೆ ಅನುಮಾನ ಮೊಳಕೆಯಾಡೆಯಿತು. ಹೆಂಗಸರೇ ಹೀಗೆ ಎಂದು ಕೊಡವಿ ಸುಮ್ಮನಾದ. ಮನೆಯ ಫೋನು ಯಾವತ್ತೂ ಎಂಗೇಜ್‌ ಆಗತೊಡಗಿತು. ರಾತ್ರಿಯ ಪಾರ್ಟಿಗೂ ಸಿಲ್ವಿಯಾ ಎಂಗೇಜ್‌ ಆಗಿರುತ್ತಿದ್ದಳು. ಗಂಡನನ್ನು ಬಿಟ್ಟು ಪಾರ್ಟಿಗೆ ಹೋಗದ ಸಿಲ್ವಿಯಾ ಪ್ರೇಂ ಜತೆಗೆ ನಿತ್ಯವೂ ಕಾಣಿಸಿಕೊಳ್ಳತೊಡಗಿದಳು. ಮನೆಯ ಫೋನ್‌ ಏಕೆ ಎಂಗೇಜ್‌ ಆಗಿರುತ್ತದೆಂಬುದು ಅವನಿಗೆ ಗೊತ್ತಾಯಿತು. ಹಾಗೆಂದು ಹೆಂಡತಿ ಮುಂದೆ ಜಗಳಕ್ಕೆ ನಿಲ್ಲಲಿಲ್ಲ. ತನ್ನ ಹೆಂಡತಿ ಬೇರೊಬ್ಬನ ಜತೆಯಲ್ಲಿ ಕಾಣಿಸಿಕೊಳ್ಳುವ ಗುಸುಗುಸು ಬಹಿರಂಗವಾದಾಗ ನಾನಾವತಿ ಮೊದಲ ಬಾರಿಗೆ ಸಿಲ್ವಿಯಾ ಮುಂದೆ ಪ್ರಸ್ತಾಪಿಸಿದ.

‘ಹೌದು, ನಾವಿಬ್ಬರೂ ಮದುವೆಯಾಗಬೇಕೆಂದು ನಿರ್ಧರಿಸಿದ್ದೇವೆ’ ಎಂದು ಬಿಟ್ಟಳು ಸಿಲ್ವಿಯಾ. ಬೇರೆಯವರಾಗಿದ್ದರೆ ಹೆಂಡತಿಗೆ ತಪರಾಕಿ ಹೊಡೆದುಬಿಡುತ್ತಿದ್ದರೋ ಏನೋ? ನಾನಾವತಿ ಆಕೆಯ ಉತ್ತರ ನಿರೀಕ್ಷಿಸಿದ್ದಿರಬೇಕು. ಗಂಭೀರವಾಗಿ ‘ಮಕ್ಕಳ ಗತಿಯೇನು?’ ಎಂದು ನಾನಾವತಿ ಕೇಳಿದ. ಸಿಲ್ವಿಯಾ ಮಾತನಾಡಲಿಲ್ಲ.

ಆ ಸಾಯಂಕಾಲ ಮಕ್ಕಳೊಂದಿಗೆ ಸಿನಿಮಾಕ್ಕೆ ಹೊರಡಲು ಸಿದ್ಧವಾಗುವಂತೆ ಹೇಳಿದ. ಗಂಡನ ವರ್ತನೆ ಸಿಲ್ವಿಯಾಗೆ ವಿಚಿತ್ರವಾಗಿ ಕಂಡಿತು. ಆದರೂ ಸಿನಿಮಾಕ್ಕೆ ಸಿದ್ಧಳಾದಳು. ಮಕ್ಕಳು, ಹೆಂಡತಿಯನ್ನು ಥಿಯೇಟರ್‌ನಲ್ಲಿ ಬಿಟ್ಟು, ನಾನಾವತಿ ನೇರವಾಗಿ ಪ್ರೇಂ ಅಹುಜಾ ಮನೆಗೆ ಹೋದ!

ಆಶ್ಚರ್ಯ! ತನ್ನ ಪ್ರೇಯಸಿಯ ಗಂಡ ಬಾಗಿಲಲ್ಲಿ ನಿಂತಿದ್ದಾನೆ!

ನಾನಾವತಿ ನೇರವಾಗಿ ವಿಷಯಕ್ಕೆ ಬಂದ. ‘ನನ್ನ ಹೆಂಡತಿಯಾಂದಿಗಿನ ನಿನ್ನ ಸಂಬಂಧ ನನಗೆ ಗೊತ್ತು. ತಪ್ಪಿಲ್ಲ. ಆಕೆಯನ್ನು ನನಗೇ ಬಿಟ್ಟುಬಿಡು ಹೇಳೋಣವೆಂದರೆ ನೀವಿಬ್ಬರೂ ಬಹಳ ಮುಂದುವರಿದಿದ್ದೀರಿ. ಆದರೆ ನನ್ನದೊಂದು ಮನವಿ. ದಯವಿಟ್ಟು ನನ್ನ ಹೆಂಡತಿಯನ್ನು ಮದುವೆಯಾಗು. ಅವಳನ್ನು ಕಾಮುಕತೆಗೆ ಮಾತ್ರ ಬಳಸಿಕೊಳ್ಳಬೇಡ. ಅವಳಿಗೊಂದು ಬಾಳು ಕೊಡಿ. ನಾನು ನನ್ನ ಮಕ್ಕಳೊಂದಿಗಿರುತ್ತೇನೆ’ ಎಂದು ಆತ ಅಂಗಲಾಚಿದ.

ಪ್ರೇಂ ಮಹಾ ಗರ್ವಿಷ್ಟ. ಆತನಿಗೆ ಸುಖ ಮಾತ್ರ ಬೇಕು, ಜವಾಬ್ದಾರಿ ಬೇಡ. ಸಂಸಾರ ಕೂಡದು. ಅಂಥ ಆಸೆಯಿದ್ದರೆ ಆತ ಮದುವೆಯಾಗುತ್ತಿದ್ದ. ನಾನಾವತಿಯನ್ನು ತನ್ನ ಮನೆಯಲ್ಲಿ ಕಂಡಾಗಲೇ ಸಿಡಿಮಿಡಿಗೊಂಡ ಪ್ರೇಂ, ಅವನ ಸಲಹೆ ಕೇಳಿ ಆಕ್ರೋಶಗೊಂಡ. ಆಗಲೂ ಸಮಾಧಾನದಿಂದಲೇ ‘ಪ್ರೇಂ ನನ್ನ ಹೆಂಡತಿಗೊಂದು ಬಾಳು ಕೊಡು. ನಿನ್ನ ಕಾಮವಾಂಛೆಗೆ ಆಕೆಯನ್ನು ಮೋಸ ಮಾಡಬೇಡ. ಪ್ಲೀಸ್‌... ಅವಳನ್ನು ಮದುವೆಯಾಗು. ಆಕೆ ನಿನ್ನನ್ನು ಮದುವೆಯಾಗಲು ಸಿದ್ಧವಾಗಿದ್ದಾಳೆ ’ಎಂದು ಮನವೊಲಿಸಲು ನಾನಾವತಿ ಯತ್ನಿಸಿದ.

ಅದೆಲ್ಲಿತ್ತೋ ಸಿಟ್ಟು. ‘ಕಾವಸ್‌ ನಾನಾವತಿ Get out. I don’t know your wife. How can I marry every women I sleep with’ ಎಂದು ಪ್ರೇಂ ಎಗ್ಗಾಬರಿ ಕಿರುಚಿದ.

ತನ್ನ ಹೆಂಡತಿಯನ್ನು ಮನಬಂದಂತೆ ಬಳಸಿಕೊಂಡು ಈಗ ಆಕೆಯ ಬಗ್ಗೆ ಇಷ್ಟು ಲಘುವಾಗಿ ಮಾತಾಡಿದ ಪ್ರೇಂ ವಿರುದ್ಧ ನಾನಾವತಿಗೆ ರೋಷ ಉಕ್ಕಿ ಬಂತು. ನಾನಾವತಿ ಅಕ್ಷರಶಃ ಅಗ್ನಿಪರ್ವತವಾಗಿದ್ದ. ಕೊತ ಕೊತ ಸಿಟ್ಟಿನಿಂದ ಕುದ್ದು ಹೋದ. ಹಿಂದೆ ಮುಂದೆ ನೋಡದೇ ಕಿಸೆಯಿಂದ ರಿವಾಲ್ವರ್‌ ತೆಗೆದವನೇ ಢಂ ಢಂ ಢಂ ಎಂದು ಗುಂಡು ಹಾರಿಸಿಬಿಟ್ಟ. ಮನ್ಮಥರೂಪಿ ಪ್ರೇಂ ಅಲ್ಲಿಯೇ ಹೆಣವಾಗಿ ಬಿದ್ದುಬಿಟ್ಟ. ನಾನಾವತಿ ನೇರವಾಗಿ ನಡೆದು ಪೊಲೀಸರಿಗೆ ಶರಣಾದ.

ಈ ಪ್ರಕರಣ ಅನೇಕ ವರ್ಷಗಳ ಕಾಲ ಕೋರ್ಟ್‌ನಲ್ಲಿ ವಿಚಾರಣೆಯಾಗಿ ನಾನಾವತಿಗೆ ಜೀವಾವಧಿ ಶಿಕ್ಷೆಯಾಯಿತು. ಐದಾರು ವರ್ಷ ಜೈಲು ಶಿಕ್ಷೆಯೂ ಆಯಿತು. ಮಹಾರಾಷ್ಟ್ರದ ಅಂದಿನ ರಾಜ್ಯಪಾಲ ವಿಜಯಲಕ್ಷ್ಮಿ ಪಂಡಿತ್‌ ಕೃಪೆಯಿಂದ ಆತನಿಗೆ ಅಚ್ಚರಿಯೆಂಬಂತೆ ಕ್ಷಮಾದಾನ ದೊರೆಯಿತು.

ಅಂದು ಸಿಲ್ವಿಯಾ ಹಾಗೂ ಮಕ್ಕಳೊಂದಿಗೆ ನಾನಾವತಿ ದೇಶಬಿಟ್ಟು ಹೋದವ ಈಗ ಎಲ್ಲಿದ್ದಾನೆಂದು ಗೊತ್ತಿಲ್ಲ. ನಲವತ್ತೈದು ವರ್ಷಗಳ ಹಿಂದೆ ಏಕಾಏಕಿ ಹೋದ ನಾನಾವತಿ ಪುನಃ ಭಾರತಕ್ಕೆ ಕಾಲಿಟ್ಟಿಲ್ಲ.

ಎಪ್ಪತ್ತೊಂಭತ್ತು ವರ್ಷದ ನಾನಾವತಿಯಂತೆ ಕಾಣುವ ವ್ಯಕ್ತಿಯಾಬ್ಬ ಕೆನಡಾದಲ್ಲಿ ಕಾಣಿಸಿಕೊಂಡಿದ್ದಾನೆಂಬ ಸುದ್ದಿಯಾಂದನ್ನು ಪತ್ರಿಕೆಯಲ್ಲಿ ಓದಿದಾಗ ಇವೆಲ್ಲ ನೆನಪಾದವು.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more