• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೋವು, ಹಿಂಸೆಗಿಂತ ಬದುಕೇ ದೊಡ್ಡದೆಂದ ಅಮ್ಮಂದಿರ ಕುರಿತು...

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಆಕೆ ಎರಡೂವರೆ ಸಾವಿರ ದಿನಗಳ ಕಾಲ ಜೈಲಿನಲ್ಲಿ ನೋವು, ಆಘಾತಗಳಿಂದ ತೊಪ್ಪೆಯಾಗಿ ಕುಸಿದುಬಿದ್ದಿದ್ದಳು!

ದೇಹದ ತುಂಬಾ ಸುಟ್ಟಗಾಯಗಳು. ಮಂಡಿಯಲ್ಲಿ ಹರಿದ ಚರ್ಮಗಳು. ಕಣ್ಣುರೆಪ್ಪೆಯ ಮೇಲೆ ರಕ್ತ ಹೆಪ್ಪುಗಟ್ಟಿ ಕಣ್ಣುಗಳನ್ನು ತೆರೆಯಲಾಗದಂಥ ಸ್ಥಿತಿ. ಪಾದಗಳ ಮೇಲೆ ಬಾಸುಂಡೆ. ಬೆನ್ನಿನ ಹುರಿ ನೋನ ಉಂಡೆ. ಅಕ್ಷರಶಃ ಜೀವಚ್ಛವವಾಗಿ ಆಕೆ ಜೈಲಿನಲ್ಲಿ ಅನಾಥವಾಗಿ ಬಿದ್ದಿದ್ದಳು.

ಜೈಲು ಅಧಿಕಾರಿಗಳಿಗೆ ಕೊಟ್ಟ ಆದೇಶವೇ ಹಾಗಿತ್ತು. ಪ್ರತಿದಿನ ಆಕೆಗೆ ಬೆತ್ತದ ರುಚಿ ತೋರಿಸಬೇಕು. ನೋವು ಮಾಯವಾಗಲು ಬಿಡಬಾರದು. ಒಂದೆಡೆ ಗಾಯ ನಿಂತರೆ ಮತ್ತೊಂದೆಡೆ ಅದು ಎದ್ದು ಕಾಣಬೇಕು. ಆ ರೀತಿ ಹೊಡೆಯಬೇಕು. ಆಕೆ ನೋವಿನಿಂದ ಚೀರದಿದ್ದರೆ ಹೋಗಿ ಒದ್ದು ಬರಬೇಕು. ಆಗಲೂ ಕೂಗದಿದ್ದರೆ ಮತ್ತಷ್ಟು ಒದೆಯಬೇಕು. ಚೀರಾಟ ನಿರಂತರವಾಗಿರಬೇಕು.

Nean Chengಆಕೆ ಈ ಎಲ್ಲ ಹಿಂಸೆ, ಭರ್ತ್ಸನೆಯನ್ನು ಅನುಭವಿಸಿದಳು. ಹೊಡೆತ ತಿಂದು ತಿಂದು ಮೈ ಕೈ ಎಲ್ಲ ಜಿಡ್ಡುಗಟ್ಟಿತ್ತು. ನರನಾಡಿಗಳೆಲ್ಲ ನೋವೆಂಬ ಸಂವೇದನೆಯನ್ನು ಮರೆಯಲಾರಂಭಿಸಿದ್ದವು. ಆರೂವರೆ ವರ್ಷಗಳ ಕಾಲ ಏಕಾಂಗಿಯಾಗಿ, ಜೈಲು ಗೋಡೆಯ ನಡುವೆ, ಅಲ್ಲಿನ ನರಕಯಾತನೆಯ ಮಧ್ಯೆ ಮನಸ್ಸನ್ನು ಕಲ್ಲಾಗಿಸಿಕೊಂಡು ಬದುಕಿದಳು. ನೋವು, ಹಿಂಸೆಗಿಂತ ಬದುಕು ದೊಡ್ಡದೆಂದು ಯಾತನೆಯನ್ನೆಲ್ಲವನ್ನು ಸಹಿಸಿಕೊಂಡಳು. ಆಕೆಯ ಮೇಲೆ ಯಾವ ಆಪಾದನೆಯಿತ್ತೋ ಅವನ್ನು ಸುಳ್ಳೆಂದು ಸಾಬೀತುಪಡಿಸಲು ನೋವನ್ನೆಲ್ಲ ನುಂಗಿದಳು.

ಆಕೆಯ ಹೆಸರು ನಿಯಾನ್‌ ಚೆಂಗ್‌.

ಸಾಮಾನ್ಯ ಮಹಿಳೆಯ ಅಸಾಮಾನ್ಯ ಸಾಹಸ ಕಥೆಯನ್ನು ನೆನಪು ಮಾಡಿಕೊಳ್ಳುವಾಗ ಚೆಂಗ್‌ ಅನಾಯಾಸವಾಗಿ ಕಣ್ಮುಂದೆ ಹಾದು ಹೋಗುತ್ತಾಳೆ. ಅವಳದ್ದೊಂದು ಹೋರಾಟದ ಬದುಕು. ನಿಯಾನ್‌ ಚೆಂಗ್‌ ಹುಟ್ಟಿದ್ದು ಚೀನಾದ ಬೀಚಿಂಗ್‌ನಲ್ಲಿ (1915). ಕಡುಬಡತನದ ಜತೆಗೆ ಮನೆಮಂದಿಗೆಲ್ಲ ಒಂದಿಲ್ಲೊಂದು ರೋಗರುಜಿನ. ನಿಯಾನ್‌ ಚೆಂಗ್‌ ಮಾತ್ರ ಇದ್ದುದರಲ್ಲಿಯೇ ಗಟ್ಟಿಮುಟ್ಟು. ಕಷ್ಟಪಟ್ಟು ಓದಿ ಡಿಗ್ರಿ ಪಾಸು ಮಾಡಿದಳು. ಸ್ಕಾಲರ್‌ಶಿಪ್‌ ಸಿಕ್ಕಿತು. ಲಂಡಲ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡಿದಳು. ಇದೇ ಸಮಯದಲ್ಲಿ ಚೀನಾ ಸರಕಾರದಲ್ಲಿ ರಾಜತಾಂತ್ರಿಕನಾಗಿದ್ದ ಡಾ. ಕಾಂಗ್‌ ಚಿ ಚೆಂಗ್‌ ಜತೆ ವಿವಾಹವಾಯಿತು. ಅವರಿಗೊಂದು ಹೆಣ್ಣು ಮಗು ಜನಿಸಿತು.

ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಚೀನಾದಲ್ಲಿ ಪರಿವರ್ತನೆಯ ಕಾಲ. ಮಾವೋ ಝೆಡಾಂಗ್‌ ನೇತೃತ್ವದಲ್ಲಿ ದೇಶ ಸಾಂಸ್ಕೃತಿಕ ಕ್ರಾಂತಿಗೆ ತೆಗೆದುಕೊಳ್ಳುತ್ತಿದ್ದ ಸಂದರ್ಭವದು. ಇದೇ ಸಮಯದಲ್ಲಿ ಡಾ. ಚೆಂಗ್‌ ಬ್ರಿಟಿಷ್‌ ಮೂಲದ ಷೆಲ್‌ ಪೆಟ್ರೋಲಿಯಂ ಕಂಪನಿಯಲ್ಲಿ ಜನರಲ್‌ ಮ್ಯಾನೇಜರ್‌ ಆಗಿ ಸೇರಿದ. ಕೈತುಂಬಾ ಕೆಲಸ, ಕೈ ತುಂಬಾ ಸಂಬಳ. ಚೆಂಗ್‌ ದಂಪತಿಗಳ ಜೀವನದಲ್ಲಿ ನಿತ್ಯ ವಸಂತೋತ್ಸವ. ಆದರೆ ವಿಧಿ ಬೇರೆಯ ಅಂಕವನ್ನೇ ಬರೆಯತ್ತಿದ್ದ. ಡಾ. ಚೆಂಗ್‌ ರಕ್ತದೊಳಗೆ ಕ್ಯಾನ್ಸರ್‌ ಕಣಗಳು ಹರಿಯಲಾರಂಭಿಸಿದ್ದವು. ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ. ಡಾ. ಚೆಂಗ್‌ ನಿಧನನಾದ. ನಿಯಾನ್‌ ಚೆಂಗ್‌ಗೆ ಎಲ್ಲವೂ ಶೂನ್ಯವಾದ ಅನುಭವ. ಮಗಳೊಬ್ಬಳನ್ನು ಕಟ್ಟಿಕೊಂಡು ಎಲ್ಲಿಗೆ ಅಂತ ಹೋಗೋದು? ಏನು ಮಾಡೋದು? ಅನುಕಂಪದ ಆಧಾರದಿಂದ ಷೆಲ್‌ ಕಂಪನಿಯಲ್ಲಿ ಕೆಲಸವೇನೋ ಸಿಕ್ಕಿತು. ಆದರೆ ಗಂಡನಿಲ್ಲದ ಬದುಕನ್ನು ತಳ್ಳಿಕೊಂಡು ಎಷ್ಟು ದಿನ ಅಂತ ಹೋಗುವುದು ಎಂಬ ವಿಚಾರ ಕೊರೆಯತೊಡಗಿದರೆ ಮನಸ್ಸಿನಲ್ಲಿ ಕತ್ತಲು ಕತ್ತಲು.

ಝೆಡಾಂಗ್‌ನ ಕಮ್ಯುನಿಸ್ಟ್‌ ಪಕ್ಷದ ಆಡಳಿತ ಇಡೀ ದೇಶದಲ್ಲಿ ಬಯ, ಅನಿಶ್ಚಿತತೆಯನ್ನು ಮೂಡಿಸಿತ್ತು. ಜನಸಾಮಾನ್ಯರ ಮೇಲಿನ ಹಿಡಿತ ನಿಧಾನವಾಗಿ ದುರಾಡಳಿತದಿಂದ ತಪುತ್ತಿದ್ದಂತೆ ಝೆಡಾಂಗ್‌ ಕಂಗಾಲಾದ. ಎಲ್ಲರನ್ನು ಅನುಮಾನಿಸತೊಡಗಿದ. ತನಗೆ ಆಗದವರನ್ನು ಕಿರುಕುಳ ಕೊಟ್ಟು ಸಾಯಿಸತೊಡಗಿದ. ಸಣ್ನ ಗುಮಾನಿಯೂ ಹಿಂಸಾಚಾರದಲ್ಲಿ ಕೊನೆಗೊಳ್ಳುತ್ತಿತ್ತು. ಚೆಂಗ್‌ಗೆ ಷೆಲ್‌ ಕಂಪನಿಯಲ್ಲಿ ಕೆಲಸ ಸಿಕ್ಕದ್ದೇ ಮುಳುವಾಯಿತು. ಝೆಡಾಂಗ್‌ನ ಹೆಂಡತಿ ಕಟ್ಟಿದ ರೆಡ್‌ ಗಾರ್ಡ್‌ನ ಕಾರ್ಯಕರ್ತರು ಚೆಂಗ್‌ಳನ್ನು ಸಂಶಯಿಸತೊಡಗಿದರು. ಈಕೆ ಬ್ರಿಟಿಷ್‌ ಗೂಢಚಾರಿಣಿಯಿರಬಹುದೇ ಎಂಬ ಸಂಶಯದ ಗುಂಗಿಹುಳ ಅವರ ತಲೆಯಾಳಗೆ ಹೊಕ್ಕಿತು. ಪ್ರತಿ ದಿನ ಮನೆಗೆ

ಬಂದು ಕಾಡಲಾರಂಭಿಸಿದರು. ಅಷ್ಟಕ್ಕೆಲ್ಲ ಆಕೆ ಮನಿಯದಿದ್ದಾಗ ಹಿಡಿದೆಳೆದು ತಂದು ಜೈಲಿಗೆ ಹಾಕಿದರು. ಮನೆಯಲ್ಲಿರುವ ಒಬ್ಬಳೇ ಮಗಳನ್ನು ಹಿಂಸಿಸಿದರು. ‘ನಿನ್ನ ತಾಯಿ ಗೂಢಚಾರಿಣಿ ಹೌದೋ ಅಲ್ಲೋ? ’ ಎಂದು ಗದರಿದರು. ಆಕೆ ಪರಿಪರಿಯಾಗಿ ಬೇಡಿಕೊಂಡರೂ ಕೇಳಲಿಲ್ಲ. ‘ನೀವು ಎಷ್ಟೇ ಹೊಡೆಯಿರಿ ನನ್ನ ತಾಯಿ ಮಾತ್ರ ಗೂಢಚಾರಿಣಿ ಅಲ್ಲ, ಅಲ್ಲ, ಅಲ್ಲ’ ಎಂದು ಕಿರುಚುತ್ತಿದ್ದರೆ ಹೊಡೆತಗಳು ಒಂದರ ಮೇಲೊಂದು ಬೀಳುತ್ತಿದ್ದವು. ಅತ್ತ ಜೈಲಿನಲ್ಲಿ ತಾಯಿ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದಳು. ತನ್ನ ಒಂದೇ ಕರುಳ ಕುಡಿಯನ್ನು ನೋಡಲು ಅವಕಾಶ ಕೊಡಿ ಎಂಬ ನಿಯಾನ್‌ ಚೆಂಗ್‌ಳ ಮನವಿಯನ್ನು ಯಾರೂ ದರಕರಿಸಲಿಲ್ಲ. ದೈಹಿಕ ಹಿಂಸೆ, ಮಗಳು ಅನುಭವಿಸುವ ಯಾತನೆಯಿಂದ ಮಾನಸಿಕವಾಗಿ ಜರ್ಝರಿತಳಾದ ಚೆಂಗ್‌ ಬುದುಕುಲಿದದ್ದೇ ಹೆಚ್ಚು.

ಈ ಮಧ್ಯೆ ನಿಯಾನ್‌ಳಂತೆ ಜೈಲು ಸೇರಿದ ಸಾವಿರಾರು ಮಂದಿ ಮಡದಿರುವ ಪ್ರಮಾದಕ್ಕೆ ಕ್ಷಮೆಯಾಚಿಸಿದ್ದರಿಂದ ಝೆಡಾಂನ್‌ ಆಡಳಿತ ಅವರನ್ನೆಲ್ಲ ಬಂಧಮುಕ್ತರನ್ನಾಗಿಸಿತ್ತು. ‘ಗೂಢಚಾರಿಣಿಯೆಂದು ಒಪ್ಪಿಕೊಂಡರೆ ನಿನ್ನನ್ನು ಬಿಡುತ್ತೇವೆ. ನಿನ್ನ ಮಗಳನ್ನೂ ಬಿಡುತ್ತೇವೆ’ ಎಂದು ಜೈಲು ಅಧಿಕಾರಿಗಳು ಗದರಿದರು. ನಿಯಾನ್‌ ಕದಲಲಿಲ್ಲ. ಎಷ್ಟೇ ಹಿಂಸೆ ನೀಡಿದರೂ ಬಾಯಿಬಿಡಲಿಲ್ಲ. ತನ್ನದಲ್ಲದ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಜೈಲು ಅಧಿಕಾರಿಗಳೇ ಕೈಚೆಲ್ಲಿದರು. ನಿಯಾನ್‌ಳನ್ನು ಬಿಡುಗಡೆ ಮಾಡಿದರು.!

ಜೈಲಿನಿಂದ ಹೊರಬಿದ್ದು ಮನೆಗೆ ಹೋದರೆ ಖಾಲಿಖಾಲಿ. ಆಘಾತ ಕಾದಿತ್ತು. ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸನಿಹದ ಪೊಲೀಸ್‌ ಠಾನೆಯಲ್ಲಿ ಹೇಳಿದರು. ಆಸರೆಯಾಗುವ ಒಬ್ಬಳೇ ಮಗಳು ಇಲ್ಲದೇ ಬದುಕುವುದಾದರೂ ಹೇಗೆ? ಮಗಳು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ರೆಡ್‌ಗಾರ್ಡ್‌ ಕಾರ್ಯಕರ್ತರು ಹೊಡೆದು ಸಾಯಿಸಿದ್ದರು. ಆಕೆಗೆ ಇದಕ್ಕೂ ಹೆಚ್ಚಿನ ಆಘಾತ ನೀಡಿ ಯಾರೂ ಹಿಂಸಿಸುವುದು ಸಾಧ್ಯವಿರಲಿಲ್ಲ. ಆಕೆಯ ಸ್ಥಿತಿಯಲ್ಲಿ ಬೇರಾರಾದರೂ ಇದ್ದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಇಲ್ಲವೇ ಊರನ್ನು ಬಿಟ್ಟು ಹೋಗುತ್ತಿದ್ದರು. ನಿಯಾನ್‌ ಚೆಂಗ್‌ ಸುಮ್ಮನಾಗಲಿಲ್ಲ. ಮಾವೋ ಆಡಳಿತದ ದುಷ್ಕೃತ್ಯ, ಹಿಂಸಾಚಾರ, ಅನ್ಯಾಯದ ವಿರುದ್ಧ ಹೊರಾಡಲು ಕೋರ್ಟ್‌ ಮೆಟ್ಟಲನ್ನು ಏರಲು ನಿರ್ಧರಿಸಿದಳು. ಇಂಥ ಹೋರಟ ಬೇಡವೆಂದು ಹಿತೈಷಿಗಳು ಬೇಡಿಕೊಂಡರೂ ಆಕೆ ಕೇಳಲಿಲ್ಲ. ಐದು ವರ್ಷಗಳ ಕಾಲ ವಿಚಾರಣೆ ನಡೆದು ಅಂತಿಮವಾಗಿ ನಿಯಾನ್‌ ಚೆಂಗ್‌ ನಿರಪರಾಧಿ ಎಂದು ಕೋರ್ಟ್‌ ತೀರ್ಪು ನೀಡಿತು.

Nean Chengs Life and Death in Shanghaiಆಕೆ ಚೀನಾ ಬಿಡಲು ನಿರ್ಧರಿಸಿದ್ದು ಆಗ. ಅಲ್ಲಿಂದ ಕೆನಡಾಕ್ಕೆ ಹೋದಳು. ಸಮಾಜ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಆಕೆ ಕೊನೆಗೆ ಅಮೆರಿಕದಲ್ಲಿ ನೆಲೆಯೂರಲು ನಿರ್ಧರಿಸಿದಳು. ಅಲ್ಲಿ ಕುಳಿತು Life and Death in Shanghai ಎಂಬ ಆತ್ಮಕಥೆ ಬರೆದಳು. ಜಗತ್ತಿನ 30 ಭಾಷೆಗಳಲ್ಲಿ ಅನುವಾದವಾಗಿರುವ ಈ ಕೃತಿ, ಕಷ್ಟಗಳನ್ನು ಮೆಟ್ಟಿ ನಿಂತು ಬದುಕನ್ನು ಸಾರ್ಥಕಪಡಿಸಿಕೊಂಡ ಸಾಮಾನ್ಯ ಮಹಿಳೆಯಾಬ್ಬಳ ಧೀಮಂತ, ಧೀರೋದಾತ್ತ ಕತೆಯನ್ನು ಹೃದಯ ಕಲ್ಲವಿಲಗೊಳ್ಳುವಂತೆ ಸಾದರಪಡಿಸುತ್ತದೆ.

ಪ್ರಧಾನಿ ರಾಜೀವ್‌ ಗಾಂಧಿ ಅಮೆರಿಕಕ್ಕೆ ಭೇಟಿ ಕೊಟ್ಟಾಗ(ಮೊನ್ನೆ ನಿಧನರಾದ) ಅಧ್ಯಕ್ಷ ರೋನಾಲ್ಡ್‌ ರೇಗನ್‌ ಭೋಜನ ಕೂಟ ಸಂದರ್ಭದಲ್ಲಿ ಈ ಪುಸ್ತಕದ ಬಗ್ಗೆ ಪ್ರಸ್ತಾಪಿಸಿದರಂತೆ. ಇದನ್ನು ಓದಿಲ್ಲವೆಂದು ರಾಜೀವ್‌ ಹೇಳಿದಾಗ ‘ಓದಲೇ ಬೇಕಾದ ಕೃತಿಯಿದು’ ಎಂದು ರೇಗನ್‌ ಹೇಳಿದರಂತೆ. ರಾಜೀವ್‌ ತಲೆಯಾಡಿಸಿದರು.

ನಿಯಾನ್‌ ಚೆಂಗ್‌ ಬಗ್ಗೆ ಯೋಚಿಸಿದ ಮುಂದಿನ ಕ್ಷಣದಲ್ಲಿ ಮನಸ್ಸು ಹೋಗಿ ನಿಲ್ಲುವುದು ಬೆಟ್ಟಿ ಮೆಹಮೂದಿ ಮುಂದೆ. ಈಕೆಯೂ ಸಾಮಾನ್ಯ ಮಹಿಳೆ. ಅಮೆರಿಕದ ಮಿಚಿಗನ್‌ನಲ್ಲಿ ಹುಟ್ಟಿದ ಈಕೆ ನಾಲ್ಕು ವರ್ಷದ ಮಗಳು ಮೆಹತೋಬ್‌ ಜತೆ ಗಂಡನ ಮನೆಗೆಂದು ಇರಾನ್‌ಗೆ ಹೋಗುತ್ತಾಳೆ. ಟೆಹರಾನ್‌ನಲ್ಲಿ ವಾಸವಾಗಿದ್ದ ಬೆಟ್ಟಿಯ ಗಂಡ ಶುದ್ಧ ಆಲಸಿ. ಲೋಲುಪ ಹಾಗೂ ಪತ್ನಿಪೀಡಕ. ಆದರೆ ಬೆಟ್ಟಿಯ ಜತೆಗೆ ಒಪ್ಪಂದ ಮಾಡಿಕೊಂಡಿದ್ದ , ಜಗಳವಾಡುವುದಿಲ್ಲವೆಂದು ಪ್ರಮಾಣ ಮಾಡಿಕೊಂಡಿದ್ದ. ಅದೇ ಭರವಸೆಯಿಂದ ಆಕೆ ಟೆಹರಾನ್‌ಗೆ ಬಂದಿದ್ದಳು. ಗಂಡನ ಮನೆಯಲ್ಲಿ ಎರಡು ವಾರ ಕಳೆದಿರಬದು, ಶುರುವಾಯಿತು ಕಾಟ, ಆರಂಭವಾಯಿತು ಬಡಿದಾಟ. ಹೆಂಡತಿ, ಮಗಳನ್ನು ಗೃಹಬಂಧನದಲ್ಲಿರಿಸಿದ. ಇಬ್ಬರನ್ನೂ ಉಪವಾಸ ಹಾಕಿದ. ವೇಶ್ಯಾವೃತ್ತಿ ಮಾಡಿ ತನ್ನ ಹೊಟ್ಟೆ ಹೊರೆಯುವಂತೆ ಪೀಡಲಾರಂಭಿಸಿದ. ಕಾನೂನೇ ಇಲ್ಲದ ನೆಲದಲ್ಲಿ ಯಾರ ಮುಂದೆ ಗೋಳು ಹೇಳಿಕೊಳ್ಳುವುದು? ಅದರಲ್ಲೂ ಇರಾನ್‌ನಲ್ಲಿ ಮಹಿಳೆಯರೆಂದರೆ ಕಾನೂನು ಕವುಚಿ ಮಲಗುತ್ತದೆ. ಹೆಂಡತಿಯನ್ನು ಮತ್ತಷ್ಟು ಪೀಡಿಸಿ ಸರಿದಾರಿಗೆ ತರಲು ಆಕೆಯ ಗಂಡ, ತಾಯಿಯಿಂದ ಮಗಳನ್ನು ಬೆರೆ ಇಟ್ಟ. ಮನೆಬಿಟ್ಟು ಓಡಿ ಹೋಗುವ ಪ್ರಯತ್ನ ಮಾಡಿದರೆ ಕೊಲ್ಲುವ ಬೆದರಿಕೆ ಹಾಕಿದ.

ಒಂದು ದಿನ ಕುಡಿದು ಗೊರಕೆ ಹೊಡೆಯುತ್ತಿದ್ದಾಗ ಬೆಟ್ಟಿ ಓಡಿ ಹೋಗಿ ಅಮೆರಿಕದ ರಾಜತಾಂತ್ರಿಕ ಕಚೇರಿಯನ್ನು ಸಂಪರ್ಕಿಸಿದಳು. ‘ಇರಾನಿ ಪ್ರಜೆಯನ್ನು ಮದುವೆಯಾಗಿರುವುದರಿಂದ ಇಲ್ಲಿನ ಕಾನೂನಿನ ಪ್ರಕಾರ ನೀನೂ ಇರಾನಿನವಳು. ಈಗ ನಾವೇನೂ ಮಾಡಲಾರೆವು ’ಎಂದು ಅಲ್ಲಿನ ಅಧಿಕಾರಿಗಳು ಕೈಚೆಲ್ಲಿದರು. ಆದರೆ ಆಕೆಯ ದಯನೀಯ ಸ್ಥಿತಿ ಕಂಡು ಸಹಾಯ ಮಾಡಲು ಮುಂದಾದರು. ಮಗಳನ್ನು ಗಂಡನಲ್ಲೇ ಬಿಟ್ಟು ಪರಾರಿಯಾಗಲು ಸೂಚಿಸಿದರು. ಆದರೆ ಬೆಟ್ಟಿ ಕೇಳಲಿಲ್ಲ. ‘ಇಲ್ಲಿರಲಿ, ಅಲ್ಲಿರಲಿ ಅಥವಾ ಎಲ್ಲಿಗೆ ಹೋಗುವುದಿರಲಿ, ಮಗಳು ನನ್ನ ಜತೆಯಲ್ಲೇ ಇರುತ್ತಾಳೆ’ ಎಂದ ಬೆಟ್ಟಿ, ಅಲ್ಲಿಂದ ಪಾರಾಗಲು ಬೇರೆ ಸ್ಕೆಚ್‌ ಹಾಕತೊಡಗಿದಳೂ.

ಆದರೆ ಅದು ಅಷ್ಟು ಸುಲಭವಲ್ಲ. ಎರಡು ಸಾವಿರ ಮೈಲಿ ನಡೆಯಬೇಕು. ಅದು ದುರ್ಗಮ ಪ್ರದೇಶ. ಯಾರ ಕಣ್ಣಿಗೂ ಬೀಳಬಾರದು. ಇರಾನ್‌-ಟರ್ಕಿ ಗಡಿ ಪ್ರದೇಶದಲ್ಲಿ ಹಿಮಾಚ್ಛಾದಿತ ಪರ್ವತವನ್ನೇರಬೇಕು. ಪರ್ವತಾರೋಹಿಗಳಿಗೂ ಕಠಿಣತಮ ಕೆಲಸ. ಒಂಟಿ ಹೆಣ್ಣು ಕಂಡರೆ ದುರುಗುಟ್ಟಿ ನೋಡುವ ಹೆಣ್ಣುಬಾಕಗಳು. ಹಗಲಲ್ಲಿ ನಡೆಯುವಂತಿಲ್ಲ. ರಾತ್ರಿಯಲ್ಲಿ ಹಿಮಪ್ರಾಣಿಗಳ ಕಾಟ. ಜನವಸತಿ ಇಲ್ಲದ ತಾಣವಾಗಿದ್ದರಿಂದ ದಿನಕ್ಕೆ ನಲವತ್ತು ಮೈಲು ನಡೆದು ಸುರಕ್ಷಿತ ತಾಣ ಸೇರಬೇಕು. ಗಂಡ ಪೊಲೀಸರಿಗೆ ತಿಳಿಸಿದರೆ ಅವರು ಜಾಲ ಬೀಸಿದರೆ, ಸಿಕ್ಕಿಬಿದ್ದರೆ ಮುಗೀತು ಕಥೆ.

Betty Mehmudis Not Without My Daughterಬೆಟ್ಟಿ ಬಿಡಲಿಲ್ಲ. ಮಗಳನ್ನು ಕಟ್ಟಿಕೊಂಡು ಕಾಡುಮೇಡು ಹಳ್ಳ ಕೊಳ್ಳ-ಗುಡ್ಡ ದಾಟಿದಳು. ಕಾಲಿನಿಂದ ರಕ್ತ ಸುರಿದರೂ ಲೆಕ್ಕಿಸಲಿಲ್ಲ. ಬೊಕ್ಕೆಗಳೆದ್ದ್ರೂ ಹೂಂ ಹಾಂ ಎನ್ನಲಿಲ್ಲ. ಬೆಟ್ಟದಿಂದ ಇಳಿಯುವಾಗ ಮುಗ್ಗರಿಸಿ ಬಿದ್ದು ಕೈಮುರಿದುಕೊಂಡರೂ ಜಪ್ಪಯ್ಯ ಎನ್ನಲಿಲ್ಲ. ಗಂಡನ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳುವುದರ ಜತೆಗೆ ಸ್ವಾಭಿಮಾನವನ್ನು ಕಪಾಡಿಕೊಳ್ಳುವ ಹಠ. ಅವಳಲ್ಲಿ ಭುಗಿಲ್ಲೆದ್ದಿತು. ಆ ರಾತ್ರಿ ತಪ್ಪಿಸಿಕೊಂಡ ಬೆಟ್ಟಿ ಎಪ್ಪತ್ತೆರಡು ದಿನಗಳ ನಂತರ ಹಾಗೋ ಹೇಗೋ ಅಮೆರಿಕ ಸೇರಿದಳು! ತನ್ನ ಗೋಳಗಳನ್ನೆಲ್ಲ ನೆನಪು ಮಾಡಿಕೊಂಡು Not without my Daughter ಎಂಬ ಪುಸ್ತಕ ಬರೆದಳು. ಅದಕ್ಕೆ ಪುಲಿಟ್ಜರ್‌ ಪ್ರಶಸ್ತಿಯೂ ಬಂತು.

ಅದೇ ಭೋಜನಕೋಟದಲ್ಲಿ ‘ಈ ಪುಸ್ತಕವನ್ನು ಓದಿದ್ದೀರಾ.. ’ ಎಂದು ರಾಜೀವ್‌ ಕೇಳಿದರೆ, ರೇಗನ್‌ ‘ಇಲ್ಲ , ಇಲ್ಲ ’ಎಂದರು. ‘ದಯವಿಟ್ಟು ಓದಿ, ಎಲ್ಲರೂ ಓದಲೇಬೇಕಾದ ಕೃತಿ’ ಎಂದರು ರಾಜೀವ್‌. ರೇಗನ್‌ ತಲೆಯಾಡಿಸಿದರು.

ಮೊನ್ನೆ ರೇಗನ್‌ ನಿಧನರಾದಾಗ ಅದ್ಯಾಕೋ ಈ ಇಬ್ಬರು ಹೆಣ್ಣು ಮಕ್ಕಳ ಅಮ್ಮಂದಿರ ಬಗ್ಗೆ ಓದಿದ ಕತೆಗಳು ನೆನಪಾದವು.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more