• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಹಬ್ಬದಲ್ಲಿ ‘ಹಬ್ಬ’ವಿದೆ, ಆದರೆ ಬೆಂಗಳೂರೇ ಇಲ್ಲ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ನಡೆದಿತ್ತು. ಬಹಳ ಅದ್ದೂರಿ ಕಾರ್ಯಕ್ರಮ. ಅದರ ಅಂಗವಾಗಿ ಒಂದು ರಾತ್ರಿಅಶೋಕ ಹೋಟೆಲ್‌ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಹಿರಿಯ ಪತ್ರಕರ್ತ ವೈಯೆನ್ಕೆ ನಟ ಅನಂತನಾಗ್‌ ಜತೆಗೂಡಿ ಅಲ್ಲಿಗೆ ಹೋಗಿದ್ದರು. ಔತಣಕೂಟ ಆರಂಭವಾಗಿ ಸಾಕಷ್ಟು ಸಮಯವಾಗಿತ್ತು. ಸಾಕಷ್ಟು ಜನರೂ ಜಯಾಯಿಸಿದ್ದರು. ಆದರೆ ಮಕ್ಕಳ್ಯಾರೂ ಇರಲಿಲ್ಲ. ಇದನ್ನು ಕಂಡು ಅನಂತನಾಗ್‌,‘ಏನ್‌ ವೈಯೆನ್ಕೆ, ಮಕ್ಕಳ ಚಲನಚಿತ್ರೋತ್ಸವದ ಔತಣಕೂಟವಾದ ಇಲ್ಲಿ ಮಕ್ಕಳೇ ಇಲ್ಲವಲ್ಲಾ?’ ಎಂದರು. ಅದಕ್ಕೆ ವೈಯೆನ್ಕೆ ಹೇಳಿದರು-‘ಇದ್ದಾರಲ್ರೀ ಮಕ್ಳು...ಕಳ್‌ ನನ್ಮಕ್ಳು.’

ಈಗ ನಡೆಯುತ್ತಿರುವ ‘ಬೆಂಗಳೂರು ಹಬ್ಬ’ ನೋಡಿ ಯಾಕೋ ವೈಯೆನ್ಕೆ ಜೋಕು ನೆನಪಾಯಿತು. ಬೆಂಗಳೂರು ಹಬ್ಬ ಹೆಸರಿಗೆ ಮಾತ್ರ. ಅದರಲ್ಲಿ ಹಬ್ಬವೂ ಇಲ್ಲ. ಬೆಂಗಳೂರು ಇಲ್ಲ. ಇಂಥ ಐಡಿಯಾಗಳನ್ನು ಯಾರು ಕೊಡುತ್ತಾರೋ ಗೊತ್ತಿಲ್ಲ . ಅಥವಾ ಐಡಿಯಾ ಹೊಳೆದ ತಕ್ಷಣ ಹೇಗೆ ಕಾರ್ಯರೂಪಕ್ಕೆ ಇಳಿಸುತ್ತಾರೋ ಗೊತ್ತಿಲ್ಲ. ಬೆಂಗಳೂರು ಹಬ್ಬವೆಂಬುದು ಕೆಲವರಿಗೆ ಮಾತ್ರ ಹಬ್ಬವಾಗಿ, ಇನ್ನುಳಿದವರಿಗೆ ಕೇವಲ ಕರ್ಕಶ ಅಬ್ಬರವಾಗಿ, ಇನ್ನು ಕೆಲವರಿಗೆ ಅಸಂಬದ್ಧ, ತಿರಸಟ ಕಸರತ್ತಾಗಿ, ದಂಗಾಮಸ್ತಿಯಾಗಿ ಕಾಣುತ್ತಿದೆ. ಹಾಗೇ ಹೇಳುವುದಾದರೆ ಈ ಹಬ್ಬದಲ್ಲಿ ಇರಲೇ ಬೇಕಾಗಿದ್ದು ಹಾಗೂ ಇರದಿರುವುದು ಒಂದೇ. ಅದು ಬೆಂಗಳೂರು! ಹೀಗಿರುವಾಗ ಅದೆಂಥ ಬೆಂಗಳೂರು ಹಬ್ಬವಾದೀತು? ನೋಡಿ ಅದ್ಯಾರೋ ನಾಲ್ಕು ಮಂದಿಗೆ ಹಬ್ಬ ಮಾಡ್ಬೇಕು ಅಂತ ಅನ್ನಿಸುತ್ತದೆ. ಅದಕ್ಕೆಬೆಂಗ್ಳೂರು ಹಬ್ಬ ಅಂತ ಹೆಸರಿಡಬೇಕು ಅಂತ ಅನ್ನಿಸುತ್ತದೆ. ಹಾಗೆ ಹೆಸರಿಟ್ಟರೆ ಕನ್ನಡಿಗರಿಂದ, ಕನ್ನಡೇತರರಿಂದ ಹಣ ಪಡೆಯಬಹುದೆಂದು ಅನ್ನಿಸುತ್ತದೆ. ಸಾಕಷ್ಟು ಕಲಾವಿದರನ್ನು ಪ್ರಮೋಟ್‌ ಮಾಡಬಹುದು ಅಂತನ್ನಿಸುತ್ತದೆ. ಐದು ದಿನ ಇಂಥ ಹಬ್ಬ ಮಾಡಿಬಿಟ್ರೆ ಬೆಂಗಳೂರಿನಲ್ಲಿ ಕಲೆ, ಸಂಸ್ಕೃತಿ ಎದ್ದು ನಿಂತು ಬಿಡುತ್ತದೆ. ಅದಕ್ಕಾಗಿ ಇಂಥ ಅಪದ್ಧ ಉತ್ಸವಕ್ಕಾಗಿ ತಜವೀಜು ಮಾಡುತ್ತಾರೆ.

Bangalore Habba : A cultural perspectiveಈ ಹಬ್ಬದ ಹಿಂದಿರುವವರು ಸಾಮಾನ್ಯರೇನಲ್ಲ. ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳನ್ನು ತಮ್ಮ ಪಡಖಾನೆಗೆ ಕರೆಯಿಸಿಕೊಳ್ಳಬಲ್ಲರು. ಮಂತ್ರಿಗಳನ್ನು ತಾಬಡೆತೋಬ ಭೇಟಿಯಾಗಬಲ್ಲರು. ಹಬ್ಬದ ಕಲ್ಪನೆ ಮನಸೋಕ್ತ ಮಾಡಬಲ್ಲರು. ಮುಖ್ಯಮಂತ್ರಿಯೂ ಇವರಿಗಾಗಿ ಸವಡು ಮಾಡಿಕೊಳ್ಳಬಲ್ಲರು. ಅಷ್ಟೇ ಅಲ್ಲ. ಅವರು ಕೇಳಿದಷ್ಟು ಹಣವನ್ನೂ ಕೊಡಬಲ್ಲರು. ಒಂದು ವಾರದಲ್ಲಿ ‘ಬೆಂಗಳೂರು ಹಬ್ಬ’ದ ನೆಪದಲ್ಲಿ ನಾಲ್ಕೈದು ಕೋಟಿ ರೂ. ತರತರೀತ ಅಂತ ಹುಡಿಯಾಗಿ ಬಿಡುತ್ತದೆ.‘ಯಾರ್ದೋ ದುಡ್ಡು, ಯಲ್ಲಮ್ಮನ ಜಾತ್ರೆ’. ಆದರೆ ಬೆಂಗಳೂರು ಹಾಗೇ ಇರುತ್ತದೆ. ಬೆಂಗಳೂರಿಗರು ಹಾಗೇ ಇರುತ್ತಾರೆ. ಕೆಲವರು ಮಾತ್ರ ‘ ಹಬ್ಬ’ ಮಾಡಿಕೊಂಡಿರುತ್ತಾರೆ. ಇವರ ಬುದ್ಧಿಗೊಂದಿಷ್ಟು....!

ಒಂದು ವಾರ ಹತ್ತಾರು ಕಲಾವಿದರು, ಕಲಾತಂಡಗಳನ್ನು ಕರೆಯಿಸಿ ಧಾಂಧೂಂ ಮಾಡಿದರೆ ಯಾವ ಕಲೆಯೂ ಬರಕತ್ತು ಆಗುವುದಿಲ್ಲ. ಸಂಸ್ಕೃತಿ ಅರಳುವುದಿಲ್ಲ. ಹೊರಗಿನ ಕಲಾವಿದರು ಬೆಂಗಳೂರಿಗೆ ಬಂದು ಕುಣಿದರೆ ಅದು ಬೆಂಗಳೂರು ಹಬ್ಬವೂ ಆಗುವುದಿಲ್ಲ. ಇದರಿಂದ ಈ ಕಾರ್ಯಕ್ರಮ ನೋಡಿದರೆ ಕೆಲವೇ ಸಾವಿರ ಮಂದಿಗೆ ತಾತ್ಕಾಲಿಕ ಮನರಂಜನೆ, ಕಲಾವಿದರಿಗೊಂದಷ್ಟು ಹಣ ಜಮಾವಟ್ಟು ಆಗಬಹುದೇ ಹೊರತು ಮತ್ತೇನೂ ಆಗುವುದಿಲ್ಲ. ಸಂಘಟಕರಿಗೆ ಕಾಸು, ಪ್ರಚಾರ, ಒಂದಿಷ್ಟು ಇತರ ಬನಾವಟ್ಟುಗಳಾಗಬಹುದು. ಇದರಿಂದ ಕಲೆ, ಸಂಸ್ಕೃತಿಗೆ ಮಣ್ಣು ಮಶಿ ಪ್ರಯೋಜನವಿಲ್ಲ. ಇಷ್ಟಕ್ಕೇ ಕಲೆ , ಸಂಸ್ಕೃತಿ ಉದ್ಧಾರವಾಗುವ ಹಾಗಿದ್ದರೆ ರಸ್ತೆ ಪಕ್ಕ ಕುಣಿಯುವ ದೊಂಬರಾಟ ಮಹಾನ್‌ ಕಲೆಯಾಗಬೇಕಿತ್ತು.

ಜಾಗತೀಕರಣದ ಹೊಡೆತದಿಂದ ಬೆಂಗಳೂರು ದಿನೇ ದಿನೆ ಕಾಸ್ಮೋಪಾಲಿಟನ್‌ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಂಗಳೂರು ಹಬ್ಬದಲ್ಲಿ ಎಲ್ಲ ಭಾಷೆ, ಎಲ್ಲ ಸಂಸ್ಕೃತಿಯ ಕಲಾವಿದರ ಪ್ರದರ್ಶನ ಏರ್ಪಾಡು ಮಾಡಲಾಗಿದೆಯೆಂದು ಸಂಘಟಕರು ಸಮಜಾಯಿಶಿ ಕೊಡುತ್ತಾರೆ. ಅಂದರೆ ಬೆಂಗಳೂರಿನ ಮೂಲ ಸೊಗಡನ್ನು ಎತ್ತಿ ತೋರಿಸುವುದು ಈ ಹಬ್ಬದ ಉದ್ದೇಶ ಅಲ್ಲ ಅಂದಂತಾಯಿತು. ಬೆಂಗಳೂರು ಕನ್ನಡಿಗರಿಂದ ಕೈಜಾರಿ ಹೋಗುತ್ತಿದೆ. ಅಸಲಿ ಬೆಂಗಳೂರನ್ನು ತೋರಿಸುವುದು ಉದ್ದೇಶ ಅಲ್ಲ ಅಂದ ಮೇಲೆ ಇದೊಂದು ರೀತಿಯಲ್ಲಿ ಬೆಂಗಳೂರು ವಿರೋಧಿ ಹಬ್ಬವೇ ಆಗುತ್ತದೆ.

ಬೆಂಗಳೂರು ಈಗಾಗಲೇ ವಲಸಿಗರ ನೆಲೆವೀಡಾಗಿದೆ. ಒಂದೊಂದು ಬೀದಿಯಲ್ಲಿ ಹೊಸ ಭಾಷೆ, ಸಂಸ್ಕೃತಿಯ ವಸಾಹತುಗಳು ತಲೆಯೆತ್ತಿ ನಿಲ್ಲುತ್ತಿವೆ. ಈ ವಸಾಹುತುಶಾಹಿಯಾಗಿ, ಅವರು ನೀಡುವ ಪ್ರಾಯೋಜಿತ ಹಣಕ್ಕಾಗಿ ಈ ಹಬ್ಬ ಏರ್ಪಾಟಾಗಿಯೇ ಹೊರತು ಬೆಂಗಳೂರಿನ ಸೊಗಡು, ಸಂಸ್ಕೃತಿ, ಕಲೆ, ಪರಂಪರೆ, ಜನಜೀವನ, ಸಮಾಜ ಜೀವನವನ್ನು ಷೋಕೇಸ್‌ ಮಾಡುವುದಕ್ಕೆ ಅಲ್ಲ. ವಲಸಿಗರು ಹಾಗೂ ವಸಾಹತು ಸಂಸ್ಕೃತಿಯನ್ನು ಪರೋಕ್ಷವಾಗಿ ಬಿಂಬಿಸುವ ಈ ಹಬ್ಬವನ್ನು ವಿರೋಧಿಸುವುದು ಅನಿವಾರ್ಯವೂ ಹೌದು.

ಕೆಲ ತಿಂಗಳುಗಳ ಹಿಂದೆ ಗ್ರಾಮೀಣ ಮಹಿಳೆಯರಲ್ಲಿ ಸಾಕ್ಷರತೆ ಹಾಗೂ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಲು ದಿಲ್ಲಿ ಮೂಲದ ಸ್ವಯಂಸೇವಾ ಸಂಸ್ಥೆಯಾಂದು ಬೆಂಗಳೂರಿನ ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಸಿದ್ದು ನೆನಪಿಗೆ ಬರುತ್ತದೆ. ಈ ಕಾರ್ಯಗಾರದಲ್ಲಿ ಪಾಲ್ಗೊಳ್ಳಲೆಂದು ರಾಜ್ಯದ 68ಹಳ್ಳಿಗಳಿಂದ 300 ಅನಕ್ಷರಸ್ಥ ಮಹಿಳೆಯರನ್ನು ಕರೆತಂದು ಅವರನ್ನು ಫೈವ್‌ಸ್ಟಾರ್‌ಹೋಟೆಲ್‌ನಲ್ಲಿ ಉಳಿಸಿದ್ದರು! ಹೋಟೆಲ್‌ನ ಒಂದು ಮಹಡಿಯಲ್ಲಿ ಅಡಕೆ ಸೋಗೆಯ ಚಪ್ಪರ, ಚಾವಡಿ, ಒಡೆದ ಮಡಕೆ, ಚಕ್ಕಡಿಗಾಲಿ ಇಟ್ಟು ಮರಗಳ ಟೊಂಗೆ ಕಟ್ಟಿ ಗ್ರಾಮೀಣ ಬದುಕನ್ನು ನೆನಪಿಸುವ ಗಿಲೀಟು, ಕಣ್‌ಕಟ್ಟು ದೃಶ್ಯವನ್ನು ಬಿಂಬಿಸಿದ್ದರು. ಹಾಗೆ ಮಾಡುವ ಮೂಲಕ ತಾವು ಯಾವುದೋ ಕುಗ್ರಾಮದಲ್ಲಿ ಆ ಕಾರ್ಯಕ್ರಮ ಏರ್ಪಡಿಸಿದ್ದೇವೆಂದು ಸಂಘಟಕರು ಭಾವಿಸಿದ್ದರು. ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ಗ್ರಾಮೀಣ ನೈರ್ಮಲ್ಯದ ಬಗ್ಗೆ ಕೊರೆಯುವುದು- ಅದೂ ಮೂರು ದಿನ- ಎಂಥ ಮೂರ್ಖತನವಿದ್ದಿರಬಹುದು. ಯೋಚಿಸಿ, ಒಂದು ಪಾರ್ಶ್ವದಿಂದ ನೋಡಿದರೆ ಈ ಬೆಂಗಳೂರು ಹಬ್ಬವೂ ಹಾಗೇ. ವಿದೇಶಿ ಹಿಪ್ಪಿಗಳೇ ತುಂಬಿರುವ ಗೋಕರ್ಣದ ಓಂ ಬೀಚಿನಲ್ಲಿ ಮೈಕಲ್‌ ಜಾಕ್ಸನ್‌, ರಿಕಿ ಮಾರ್ಟಿನ್‌ ಕರಕೊಂಡು ಹೋಗಿ ಕುಣಿಸಿ ಸ್ಥಳೀಯ ಕಲೆ, ಸಂಸ್ಕೃತಿ ಉತ್ತೇಜಿಸಿದ್ದೇವೆ ಎಂದು ಬೀಗಿದಂತೆ. ಶುದ್ಧ ನಾನ್‌ಸೆನ್ಸ್‌ !

ಕಲೆ, ಸಂಸ್ಕೃತಿ, ಪರಂಪರೆ, ಬದುಕು, ಬದನೆಕಾಯಿ ಎಂದೆಲ್ಲ ಮಾತನಾಡುವವರು ನಮ್ಮ ಕಲಾವಿದರು, ಕವಿಗಳು ಹಾಗೂ ಸಾಹಿತಿಗಳನ್ನು ಹೇಗೆ ನಡೆಸಿಕೊಂಡಿದ್ದೇವೆ ಎಂಬುದನ್ನು ಗಮನಿಸಬೇಕು. ಇವರಿದ್ದರೆ ಮಾತ್ರ ಕಲೆ, ಸಂಸ್ಕೃತಿ ತಾನೇ? ಇವರನ್ನೇ ಸರಿಯಾಗಿ ನಡೆಸಿಕೊಳ್ಳದಿದ್ದರೆ ಕಲೆ, ಸಂಸ್ಕೃತಿ ಬಗ್ಗೆ ಮಾತಾಡಿ ಪ್ರಯೋಜನವೇನು ? ಕನ್ನಡದ ಹೆಮ್ಮೆಯ‘ಮೈಸೂರು ಮಲ್ಲಿಗೆ’ ಖ್ಯಾತಿಯ ಮಲ್ಲಿಗೆ ಮನಸ್ಸಿನ ಕೆ. ಎಸ್‌.ನರಸಿಂಹಸ್ವಾಮಿಯವರನ್ನು ನಾವು ಹೇಗೆ ನಡೆಸಿಕೊಂಡೆವು ಹೇಳಿ. ನಾಚಿಕೆಯಾಗಬೇಕು. ಯಾವುದೇ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರ್ರಿ ಎಂದು ಅವರನ್ನು ಕರೆಯಲು ಹೋದರೆ ‘ನಂಗೆ ಹಾರ, ಶಾಲು ಬೇಡ. ಫಲ ತಾಂಬೂಲವೂ ಬೇಡ. ಉಡುಗೊರೆಯಾಗಿ ವಿಗ್ರಹಗಳೂ ಬೇಡ. ಅವೆಲ್ಲ ನನ್ನ ಮನೆಯಲ್ಲಿ ಸಾಕಷ್ಟಿವೆ. ಅವುಗಳಿಗೆ ಖರ್ಚು ಮಾಡುವ ಹಣವನ್ನು ನನಗೆ ಕೊಟ್ಟು ಬಿಡಿ’ ಅಂತಿದ್ರು. ಅವರ ಆರ್ಥಿಕ ಸ್ಥಿತಿ ಹಾಗಿತ್ತು. ಯಾರಾದರೂ ಇಂದು ಕಾರ್ಯಕ್ರಮಕ್ಕೆ ಕರೀತಾರಾ ಅಂತ ಕಾಯ್ತಾ ಕುಳಿತಿರುತ್ತಿದ್ದರು. ಕರೆಯಲು ಬಂದವರ ಮುಂದೆ ಈ ವರಾತ ಮಂಡಿಸುತ್ತಿದ್ದರು. ಪಾಪ ಕವಿ ಮನಸ್ಸು ನಾಚಿಕೆ ಬಿಟ್ಟು ಮನಸ್ಸನ್ನು ಮುದ್ದೆ ಮಾಡಿಕೊಂಡು ಹಾಗೆ ಕೇಳುತ್ತಿತ್ತು. ಎಷ್ಟು ಹಿಂಸೆಯಾಗುತ್ತಿತ್ತೋ ಅವರಿಗೆ ? ಇಂಥ ಅಪರೂಪದ ಕವಿಗೆ ಸಲ್ಲಬೇಕಾದುದನ್ನು ಸಲ್ಲಿಸದೇ ಜಿಕಿಜಿಕಿ ಜಿಪುಣತನ ಮೆರೆದವರು ನಾವು. ನಾನೂರಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದ ಎನ್‌.ನರಸಿಂಹಯ್ಯನವರನ್ನು ನೋಡಿ. ಅವರದೂ ದಯನೀಯ ಬದುಕು. ಸ್ವಂತಕ್ಕೊಂದು ಮನೆಯಿಲ್ಲ. ಇರುವ ಮನೆಗೆ ನೆಟ್ಟಗೆ ಬಾಡಿಗೆ ಕಟ್ಟಲು ಆಗುತ್ತಿಲ್ಲ. ನಾವೆಲ್ಲ ಅಕ್ಷರ ಕಲಿಯುವ ಹಂತದಲ್ಲಿ ಅವರ ಪುಸ್ತಕಗಳನ್ನು ಎದೆಗವುಚಿಕೊಂಡು ಓದಿದವರು. ಅಂಥ ನರಸಿಂಹಯ್ಯನವರನ್ನು ಬೇಕಾಬಿಟ್ಟಿಯಾಗಿ ನಡೆಸಿಕೊಂಡವರು ನಾವು. ಕನ್ನಡಕ್ಕೆ ಅಪರೂಪದ , ಗಟ್ಟಿ ಕತೆಗಳನ್ನು ಕೊಟ್ಟ ರಾಘವೇಂದ್ರ ಖಾಸನೀಸರ ಬಡತನದ ಬದುಕಿಗೆ ನಾವೆಂದೂ ಸಾಂತ್ವನವಾಗಲಿಲ್ಲ. ಕನ್ನಡದ ಕತೆಗಾರರಾಗಲಿ, ಸಾಹಿತಿಗಳಾಗಲಿ ಶ್ರೀಮಂತರೇನೂ ಅಲ್ಲ. ಅವರಿಗೆ ಅವರು ನೆಚ್ಚಿಕೊಂಡ ಬರಹ ಹೊಟ್ಟೆ ಪೂರ್ತಿ ತುಂಬಿಸಲಿಲ್ಲ. ಅದು ಅವರಿಗೆ ಗೊತ್ತಿಲ್ಲವೆಂದಲ್ಲ. ಹಾಗೆಂದು ಅವರು ಬರೆಯುವುದನ್ನು ಬಿಡಲಿಲ್ಲ. ಇವೆಲ್ಲ ಗೊತ್ತಿದ್ದೂ ಬರಹವನ್ನೇ ಬದುಕಾಗಿಸಿಕೊಂಡರು. ದಮಡಿ ಕಾಸಿನ ಪ್ರಯೋಜನವಿಲ್ಲವೆಂಬುದು ಗೊತ್ತಿದ್ದೂ ಕವನಗಳನ್ನು ಬರೆಯುವ, ಬರೆದಿದ್ದನ್ನು ಪ್ರಿಂಟು ಹಾಕಿಸಿ ಪುಕ್ಕಟೆಯಾಗಿ ವಿತರಿಸುವ ಕವಿಗಳು ನಮ್ಮ ಮಧ್ಯೆಹುಡುಕಿದರೆ ಸಾವಿರ ಸಿಗುತ್ತಾರೆ. ಇವರಿಗೆ ಯಾರೂ ಪ್ರೋತ್ಸಾಹಿಸದಿದ್ದರೂ ಅವರು ಬರೆಯುವುದನ್ನು ಬಿಡುವುದಿಲ್ಲ.

ಇನ್ನು ಕಲಾವಿದರ ಕತೆಯೂ ಭಿನ್ನವಾಗಿಲ್ಲ. ಅವರದೂ ಸದಾ ಬವಣೆಯ ಬದುಕು. ನೂರೆಂಟು ತಾಪತ್ರಯಗಳು. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನದಂಥ ಶ್ರೀಮಂತ ಕಲೆಯನ್ನು ಆರಾಧಿಸಿ ಪೋಷಿಸಿ, ಅಭಿನಯಿಸಿ, ಉಸಿರಾಗಿಸಿ, ವ್ರತವಾಗಿಸಿಕೊಂಡು ಬರುತ್ತಿರುವ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಲಿಯನ್ನು ನಾವಾಗಲಿ, ನಮ್ಮ ಸರಕಾರವಾಗಲಿ ಹೇಗೆ ನಡೆಸಿಕೊಂಡಿದೆ ? ಈ ಮಂಡಲಿಯ ಅಧ್ವರ್ಯು, ಮಹಾಮೇರು ಯಕ್ಷಗಾನ ತಾರೆ ಕರೆಮನೆ ಶಂಭು ಹೆಗಡೆಯಂಥವರು ತಮ್ಮ ಬಾಳನ್ನು ಈ ಕಲೆಗಾಗಿ ಮುಡಿಪಾಗಿಟ್ಟು ಈಗ ಬಾಳ ಸಂಜೆಯಲ್ಲಿ ಅಸಹಾಯಕರಾಗಿ ಕುಳಿತಿದ್ದಾರೆ. ಯಕ್ಷಗಾನವನ್ನೇ ಮನಸ್ಸು , ದೇಹ, ರಕ್ತಗಳಲ್ಲಿ ತುಂಬಿಕೊಂಡಿರುವ ಹೆಗಡೆಯವರು ಈ ಕಲೆಯನ್ನು ಕೊಂಡೊಯ್ಯದ ಊರು, ದೇಶಗಳಿಲ್ಲ. ಯಕ್ಷಗಾನ ಕಲೆ ಶಾಶ್ವತವಾಗಿರಬೇಕು, ಮುಂದಿನ ಪೀಳಿಗೆಯೂ ಈ ಕಲೆಯನ್ನು ವೃತ್ತಿಯಾಗಿ ಆಚರಿಸಬೇಕು. ಹಾಗಾಗಬೇಕಾದರೆ ಯಕ್ಷಗಾನ ಕಲಿಯಲು ಜನರು ಮುಂದೆ ಬರಬೇಕು, ಹಾಗೆ ಬಂದವರಿಗೊಂದು ಯಕ್ಷಗಾನ ಶಾಲೆ ತೆರೆಯಬೇಕು ಎಂದು ಹೆಗಡೆಯವರು ಕನಸು ಕಂಡರೆ ಯಾರೂ ಸಹಾಯಮಾಡುವುದಿಲ್ಲ. ತಮ್ಮ ಕನಸನ್ನು ತಾವೇ ದುಡ್ಡು ಹಾಕಿ ನನಸಾಗಿಸಿ, ಸ್ವಲ್ಪವಾದರೂ ಸರಕಾರದ ಸಹಾಯ ಸಿಗಬಹುದೆಂದು ಯೋಚಿಸಿ ಕನ್ನಡ ಸಂಸ್ಕೃತಿ ಇಲಾಖೆ ಮುಂದೆ ನಿಂತರೆ ಅಲ್ಲಿರುವ ಅಧಿಕಾರಿಗಳು ಈ ಮಹಾನ್‌ಕಲಾವಿದನಿಗೆ ‘ಸ್ವಾಮಿ ಕುಳಿತುಕೊಳ್ಳಿ’ ಅಂತಾನೂ ಹೇಳುವುದಿಲ್ಲ. ಕೃಷ್ಣ , ಮೋಹನ ಅಂತ ‘ಮುದ್ದು’ ರಾಗ ಹಾಡಬೇಕು. ಅವರ ದರ್ಶನಕ್ಕಾಗಿ ದಿನವಿಡೀ ಕಾಯಬೇಕು. ಒಬ್ಬ ಕಲಾವಿದನಿಗೆ ಇದಕ್ಕಿಂತ ಅವಮಾನ, ಹಿಂಸೆ ಇನ್ನೊಂದಿದೆಯಾ ? ಇವೆಲ್ಲ ನುಂಗಿಕೊಂಡು ಕಲೆಗಾಗಿ ಮರ್ಯಾದೆ ಬಿಟ್ಟು ಬೊಗಸೆಯಾಡ್ಡಿದರೆ ಸರಕಾರ ಒಂದಷ್ಟು ಕೊಟ್ಟು ಅನಂತರ ಕೊಡದೇ ಸತಾಯಿಸುತ್ತದೆ. ಮಂತ್ರಿಗಳ, ಅಧಿಕಾರಿಗಳ ಮರ್ಜಿ ಕಾಯದೇ ಜಿಂದಗಾನಿ ಆಗುವುದಿಲ್ಲ. ಕಲೆಯನ್ನು ಜೀವನವಾಗಿಸಿಕೊಂಡ ಪ್ರತಿಯಾಬ್ಬನ ಒಡಲ ಉರಿಯಿದು. ಯಾವ ಸರಕಾರ ಇಂಥವರ ನೆರವಿಗೆ ಬಂದಿದೆ ಹೇಳಿ? ಯಾವ ಮಂತ್ರಿಇವರನ್ನೆಲ್ಲ ಕರೆದು ನೀವೆಲ್ಲ ಹ್ಯಾಗಿದ್ದೀರಿ ಎಂದು ಕೇಳಿದ್ದಾನಾ? ನಿಮಗಾಗಿ ನಾನೇನು ಮಾಡಬಹುದು ಅಂತ ಕೇಳಿದ್ದಾನಾ? ‘ಹೌದಾ’ ಅಂತ ಯಾವನಾದರೂ ಮಂತ್ರಿಹೇಳಲಿ ನೋಡೋಣ. ಇದು ಯಕ್ಷಗಾನ ಕಲಾವಿದನ ಬೇಗುದಿಯ ಕತೆಯಲ್ಲ. ನಾಟಕ, ಸಂಗೀತ, ನಾಟ್ಯ, ಕಲೆಗಳನ್ನು ಬದುಕಾಗಿಸಿಕೊಂಡವರ ಬಾಳಿನ ಗೋಳಿನ ಕತೆಯೂ ಇದೇ. ಕಲಾವಿದರನ್ನು ಗೌರವಿಸದ, ಪೋಷಿಸದ ಯಾವ ಕಲೆ, ಸಂಸ್ಕೃತಿಯೂ ಉಳಿಯುವುದಿಲ್ಲ. ಕಲೆ, ಸಂಸ್ಕೃತಿ ಪ್ರೋತ್ಸಾಹಿಸಬೇಕೆಂದು ಹೇಳಿ ಕಲಾವಿದರನ್ನು ನಿಕೃಷ್ಟವಾಗಿ ಕಂಡರೆ ಗಂಗೋತ್ರಿಯಲ್ಲೇ ಗಂಗೆಯನ್ನು ಮಲಿನಗೊಳಿಸಿ ಕಾಶಿಗೆ ಬಂದು ಗಂಗೆಯನ್ನು ಶುದ್ಧಗೊಳಿಸಬೇಕು ಎಂದು ಹೇಳಿದಂತೆ.

ಜನರ ನಡುವೆ ಅರಳುವುದೇ ಕಲೆ. ಅದನ್ನು ಸಲಹುವುದೇ ಸಂಸ್ಕೃತಿ. ಇದನ್ನು ಬಿಟ್ಟು ಒಂದು ವಾರ ಹಬ್ಬಮಾಡಿದರೆ ಅದು ಬುರ್ನಾಸು ಆಡಂಬರವಾದೀತು. ಕೆಲವೇ ಕೆಲವು ಜನರಿಗಷ್ಟೇ ಹಬ್ಬವಾದೀತು. ಕಲೆ, ಸಂಸ್ಕೃತಿ ಹೆಸರಿನಲ್ಲಿ ನಡೆಸುವ ದಡಪಶಾಹಿತನ ಸಾಂಸ್ಕೃತಿಕ ಮಾಫಿಯಾ ಆಗಿ ಪರಿಣಮಿಸಬಹುದು. ಇಂಥವರು ಸರಕಾರದ ಆಶ್ರಯ, ಪ್ರಭಾವದಿಂದ ತಾವು ನಡೆಸುವ ದುಪಳಿಯನ್ನೇ ಸಂಸ್ಕೃತಿ ಎಂದು ಭಾವಿಸುವ ಅಪಾಯವಿದೆ. ಕಲೆಯನ್ನು ಉಳಿಸುವುದೆಂದರೆ ಕಲಾವಿದರನ್ನು ಉಳಿಸುವುದೇ ಆಗಿದೆ. ಮೊದಲು ಕನ್ನಡದ, ಕನ್ನಡಿಗರ ಹಬ್ಬವಾಗಬೇಕು. ಬೆಂಗಳೂರಿನ ಮೂಲ ಸೆಲೆಯಿರುವುದೇ ಅಲ್ಲಿ. ಎಲ್ಲ ಸರಿಯಿದ್ದರೆ ತಾನೇ ಹಬ್ಬ. ಶೋಕದ ಮನೆಯಲ್ಲಿ ಹಬ್ಬ ಮಾಡಬಾರದು. ಗೊತ್ತಿರಲಿ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more