• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊಲೀಸ್‌ ಅಧಿಕಾರಿಗಳು ಆಕೆಯ ಮುಂದೆ ‘ಪ್ಯಾದೆ’ಗಳಂತೆ ನಿಂತಿದ್ದರು

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಶಿವಕಾಶಿ ಜಯಲಕ್ಷ್ಮಿ!

ಈಕೆಯ ಹೆಸರನ್ನು ಹೇಳಿದರೆ ತಮಿಳುನಾಡಿನ ಪೊಲೀಸ್‌ ಅಧಿಕಾರಿಗಳೆಲ್ಲ ಹಾವು ತುಳಿದವರಂತೆ ಬೆಕ್ಕಾ ಬೆಚ್ಚಿಬೀಳುತ್ತಾರೆ. ದುಃಸ್ವಪ್ನ ಕಂಡವರಂತೆ ಹೌಹಾರುತ್ತಾರೆ. ಈಕೆ ಬಾಯಿಬಿಟ್ಟರೆ ಸಾಕು, ಯಾರದಾದರೂ ಹೆಸರು ಹೇಳಿದರೆ ಸಾಕು ಗ್ರಹಚಾರ ಕೆಟ್ಟಿತೆಂದೇ ಅರ್ಥ. ಕಾನ್‌ಸ್ಟೇಬಲ್‌ನಿಂದ ಹಿಡಿದು ಎಸ್‌ಪಿ, ಐಜಿಪಿ ಮಟ್ಟದ ಅಧಿಕಾರಿಗಳೆಲ್ಲ ಈಕೆಯ ತೆಕ್ಕೆಯಲ್ಲಿದ್ದಾರೆಂದರೆ ಶಿವಕಾಶಿ ಜಯಲಕ್ಷ್ಮಿ ಎಂಬ ಸಾಮಾನ್ಯ ಹೆಂಗಸು , ಕೇವಲ ಏಳನೇ ತರಗತಿಯವರೆಗೆ ಓದಿದ ಪರಪುಟ್ಟ ಮಹಿಳೆ ಅದೆಂಥ ಹಿಕ್ಮತ್ತಿನಿಂದ ಬಲೆ ಬೀಸಿರಬಹುದು, ಗಾಳ ಹಾಕಿರಬಹುದು ಎಂಬುದನ್ನು ಊಹಿಸಬಹುದು.

ಇಡೀ ತಮಿಳನಾಡು ಪೊಲೀಸ್‌ ಪಡೆ ಥರಥರಗುಟ್ಟುತ್ತಿದೆ. ಸುಮಾರು ಮೂವತ್ತೆಂಟು ಪೊಲೀಸರು ಆಕೆಯ ಸಖ್ಯ ಬೆಳೆಸಿ, ದೇಹಸುಖವುಂಡಿದ್ದಾರೆ. ಈಕೆಯೂ ಪೊಲೀಸರ ಸಖ್ಯ ಸುಖ ಅನುಭವಿಸಿ, ಅವರನ್ನು ದಾಳಗಳನ್ನಾಗಿ ಉಪಯೋಗಿಸಿಕೊಂಡು ಮಾಡಬಾರದ ಕೆಲಸ ಮಾಡಿದ್ದಾಳೆ. ಈಕೆಯ ಸೆರಗಿನೊಳಗೆ ಅನೇಕ ಪೊಲೀಸ್‌ ಅಧಿಕಾರಿಗಳು ಇದ್ದಿರಬಹುದೆಂದು ಶಂಕಿಸಲಾಗಿದೆ. ಜಯಲಕ್ಷ್ಮಿ ಪೊಲೀಸರನ್ನು ವಂಚಿಸಿದಳಾ ಅಥವಾ ಪೊಲೀಸರು ಆಕೆಯನ್ನು ವಂಚಿಸಿದರಾ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ.

ಮೇಲ್ನೋಟಕ್ಕೆ ಒಬ್ಬ ಸಾಮಾನ್ಯ ಹೆಂಗಸು ಪೊಲೀಸರೊಂದಿಗೆ ನಡೆಸಿದ ಮಾಮೂಲು ಹಾದರ ಎಂದು ಅನಿಸಿದರೂ, ಈ ಹಾದರದ ಚಾದರದೊಳಗೆ ಮುಚ್ಚಿಹಾಕಿಕೊಂಡವರನ್ನು ನೋಡಿದರೆ ಇಡೀ ವ್ಯವಸ್ಥೆ ಎಷ್ಟೊಂದು ಬೊಕ್ಕಬೋರಲಾಗಿದೆಯೆಂಬುದು ಗೊತ್ತಾಗುತ್ತದೆ. ಪಮೇಲಾ ಬೋರ್ಡೆಸ್‌ ಅಥವಾ ಕ್ರಿಸ್ಟೀನ್‌ ಕೀಲರ್‌ ಲೈಂಗಿಕ ಹಗರಣಗಳನ್ನು ನೆನಪಿಸುವ ಜಯಲಕ್ಷ್ಮಿ ಕತೆ ಪೊಲೀಸ್‌ ವ್ಯವಸ್ಥೆಯ ಲೋಪದೋಷಗಳನ್ನು ಗುಡಿಸಿ ಗುಮ್ಮಟ ಕಟ್ಟಿದಂತಾಗಿದೆ.

Jayalakshmi Shivakashi, nightmare of Tamilnadu Police !ಜಯಲಕ್ಷ್ಮಿ ಕತೆ ಆರಂಭವಾಗುವುದು ತಮಿಳುನಾಡಿನ ವಿರುಧುನಗರ ಜಿಲ್ಲೆಯ ಕೋವಿಲಪಟ್ಟ ಎಂಬ ಪುಟ್ಟ ಹಳ್ಳಿಯಲ್ಲಿ. ಏಳನೆ ತರಗತಿವರೆಗೆ ಓದಿದ ಈಕೆ ಅನಂತರ ಶಾಲೆ ಕಡೆ ಮುಖ ಹಾಕಲಿಲ್ಲ. ಹೇಳಿಕೊಳ್ಳುವಂತಹ ಸೌಂದರ್ಯ, ರೂಪ, ಆಕರ್ಷಣೆ , ವಿದ್ಯಾಭ್ಯಾಸ, ಶ್ರಿಮಂತಿಕೆಯೂ ಇಲ್ಲದ ಈ ಹೆಂಗಸು ತನ್ನ ಪಾಡಿಗೆ ಮನೆ ಕೆಲಸ ಮಾಡಿಕೊಂಡಿದ್ದಳು. ವಯಸ್ಸಿಗೆ ಬಂದಾಗ ಬಟ್ಟೆ ಗಿರಣಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪಕ್ಕದ ಥೇಣಿ ಎಂಬ ಊರಿನ ಕೇಶವನ್‌ ಎಂಬುವನ ಜತೆ ಜಯಲಕ್ಷ್ಮಿಯ ಮದುವೆ ಆಯಿತು. ಮದುವೆಗೆ 50-60 ಮಂದಿ ಬಂದಿದ್ದಿರಬಹುದು. ಅನಂತರ ಜಯಲಕ್ಷ್ಮಿ ಗಂಡನ ಜತೆಗೆ ಸಂಸಾರ ಮಾಡಿಕೊಂಡಿದ್ದಳು. ಮದುವೆಯಾಗಿ ಮೂರು ವರ್ಷಗಳಲ್ಲಿ ಆಕೆ ಎರಡು ಮಕ್ಕಳ ತಾಯಿಯಾದಳು.

ಇಲ್ಲಿಯವರೆಗೆ ಎಲ್ಲಾ ಸರಿಯಾಗಿಯೇ ಇತ್ತು. ಗಂಡ ಕೆಲಸಕ್ಕೆ ಹೋದಾಗ, ಮನೆಯಲ್ಲಿ ಮಕ್ಕಳಿಬ್ಬರೂ ಮಲಗಿದಾಗ ಮನೆಯ ಮುಂದೆ ವಾಹನಗಳು ನಿಲ್ಲತೊಡಗಿದವು. ಅಡ್ಡ ಹೊತ್ತಿನಲ್ಲಿ ಮನೆಯ ಬಾಗಿಲುಗಳನ್ನು ಬಡಿದ ಸಪ್ಪಳ ಕೇಳಿಬರತೊಡಗಿದವು. ತನ್ನ ಹೆಂಡತಿ ಅಂಥವಳಲ್ಲ ಎಂದು ಗಂಡ ತನಗೇ ಸಮಾಧಾನ ಹೇಳಿಕೊಂಡ. ಅಷ್ಟೊತ್ತಿಗೆ ಬಾಗಿಲ ಸಪ್ಪಳಕ್ಕಿಂತ ಜನರ ಮಾತಿನ ಸಪ್ಪಳವೂ ಕಿವಿಮೇಲೆ ಬೀಳತೊಡಗಿದವು. ಇದರಿಂದ ಕಂಗೆಟ್ಟು ಒಂದೆರಡು ದಿನ ಮನೆಯ ಸನಿಹವೇ ಕೇಶವನ್‌ ಹೊಂಚುಹಾಕಿ ಕುಳಿತ. ತಾನಿಲ್ಲದ ಸಮಯದಲ್ಲಿ ಬಾಗಿಲುಗಳೇಕೆ ಸಪ್ಪಳ ಮಾಡುತ್ತವೆಂಬುದು ಅವನಿಗೆ ಗೊತ್ತಾಗಿ ಹೋಯಿತು. ಇಂಥ ಹೆಂಡತಿ ಜತೆ ಸಂಸಾರ ಮಾಡಲು ಸಾಧ್ಯವಿಲ್ಲವೆಂದು ಆತ ವಿಚ್ಛೇದನ ಪಡೆದ. ಅನಂತರ ಕೆಮ್ಮುರೋಗದಿಂದ ಸತ್ತ.

ವಿಜಯಲಕ್ಷ್ಮಿಗೆ ಹಾದಿ ಸುಗಮವಾಯಿತು. ಈ ಹೊತ್ತಿಗೆ ಈಕೆಯ ತಲೆಯಾಳಗೆ ದುಡ್ಡು ಮಾಡಬೇಕು, ಐಷಾರಾಮಿ ಜೀವನ ಸಾಗಿಸಬೇಕೆಂಬ ಹುಳು ಹೊಕ್ಕಿ ಕೊರೆಯತೊಡಗಿತು. ಮಕ್ಕಳಿಬ್ಬರನ್ನು ತಂದೆಯ ಮನೆಗೆ ಕಳುಹಿಸಿ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡುವ ದಂಧೆ ಆರಂಭಿಸಿದಳು. ಮೊದಮೊದಲು ಈ ದಂಧೆ ಕೈ ಹತ್ತಲಿಲ್ಲ. ಇನ್ನೇನು ಈ ವೃತ್ತಿ ಬಿಡಬೇಕನ್ನುವಷ್ಟರಲ್ಲಿ ಪೊಲೀಸ್‌ ಅಧಿಕಾರಿಯಾಬ್ಬನ ಪರಿಚಯವಾಯಿತು. ಇದು ಸ್ನೇಹಕ್ಕೆ ತಿರುಗಿತು. ಕೆಳಮುಖ ಹಿಡಿದಿದ್ದ ಅವಳ ದಂಧೆಯೂ ಮೇಲ್ಮುಖಕ್ಕೆ ತಿರುಗಿತು. ಒಂದೆರಡು ವರ್ಷಗಳಲ್ಲಿ ಆಕೆಯ ಅದೃಷ್ಟ ಬದಲಾಗಿಬಿಟ್ಟಿತು. ಪೊಲೀಸ್‌ ಅಧಿಕಾರಿ ಮುಂದಿಟ್ಟುಕೊಂಡು ಮಾಡಿದ ವ್ಯಾಪಾರದಿಂದ ಬಹುಬೇಗನೆ ಹಣ ಹರಿದಾಡಲಾರಂಭಿಸಿತು. ಈ ಮಧ್ಯೆ ಅದೇ ಪೊಲೀಸ್‌ ಅಧಿಕಾರಿಯಾಂದಿಗೆ ಆಕೆಯ ಮದುವೆಯೂ ಆಯಿತು.

ಜಯಲಕ್ಷ್ಮಿಗೆ ಈ ಹೊತ್ತಿಗೆ ಒಂದು ಸಂಗತಿ ಸ್ವಷ್ಟವಾಗಿತ್ತು- ಮದುವೆಯಾಗಿ ಹೆಂಡತಿಯಾಗಿರುವುದಕ್ಕಿಂತ ಹೆಂಗಸಾಗಿ ಒಬ್ಬಂಟಿಯಾಗಿದ್ದರೆ ಹೆಚ್ಚು ಸುಖ, ಷೋಕಿ ಮಾಡಬಹುದು.

Jayalakshmi Shivakashi, nightmare of Tamilnadu Police !ಪೊಲೀಸ್‌ ಅಧಿಕಾರಿಯಾಂದಿಗಿನ ಮದುವೆ ಮುರಿದು ಬಿತ್ತು. ಆ ವೇಳೆಗೆ ಪೊಲೀಸ್‌ ಇಲಾಖೆಯವರ ಜತೆ ಗೆಳೆತನ ಬೆಳೆಸುವುದರಲ್ಲಿ ಎಂಥ ಲಾಭವಿದೆಯೆಂಬುದು ಅವಳಿಗೆ ಮನವರಿಕೆಯಾಗಿತ್ತು . ಹೀಗಾಗಿ ತನ್ನ ದಂಧೆಯನ್ನು ಬೆಳೆಸಲು ಪೊಲೀಸ್‌ ಠಾಣೆ ಮೊರೆ ಹೋದಳು. ಈ ಸಂದರ್ಭ ಆಕೆಗೆ ಪರಿಚಯವಾದವನು ರಾಜಶೇಖರ್‌ ಎಂಬ ಡಿ ಎಸ್‌ ಪಿ. ಈ ಭೂಪ ಮೊದಲ ನೋಟದಲ್ಲೇ ಯಾವ ಪರಿ ಯಾಮಾರಿದನೆಂದರೆ ಆಕೆಗೆ ಪೊಲೀಸು ಕ್ವಾರ್ಟರ್ಸ್‌ನಲ್ಲಿ ಯೇ ಮನೆಯಾಂದನ್ನು ಕೊಡಿಸಿದ. ಈತನ ಹೆಂಡತಿ ಅನುಮಾನಾಸ್ಪದವಾಗಿ ಸತ್ತಳು. ಆತ ಎರಡು ಹನಿ ಕಣ್ಣೀರನ್ನು ಚೆಲ್ಲಲಿಲ್ಲ. ಜಯಲಕ್ಷ್ಮಿಯ ಮೋಡಿಗೆ ಪೂರ್ತಿ ವಶವಾಗಿದ್ದ ರಾಜಶೇಖರ್‌, ಕ್ರಮೇಣ ಆಕೆಯನ್ನು ಬಳಸಿಕೊಂಡು ಪ್ರಮೋಶನ್ನು ಗಿಟ್ಟಿಸಿಕೊಳ್ಳಲು ಹೆಣಗಿದ, ಯಶಸ್ವಿಯೂ ಆದ. ಕ್ರಮೇಣ ರಾಜಶೇಖರ್‌ ಮುಯ್ಯಿ ತೀರಿಸಿಕೊಳ್ಳಲು ಜಯಲಕ್ಷ್ಮಿ ವಿರುದ್ಧ ವೇಶ್ಯಾವಾಟಿಕೆ ಕೇಸು ಜಡಿದು ಬಂಧಿಸಿದ.

ಜಯಲಕ್ಷ್ಮಿ ಸಾಮಾನ್ಯಳಲ್ಲ. ಭಲೇ ಘಟವಾಣಿ. ಈ ಹೊತ್ತಿಗೆ ರಾಜಶೇಖರ್‌ನಂಥ ಅದೆಷ್ಟು ಖಾಕಿ ತೊಟ್ಟವರನ್ನು ನೋಡಿದ್ದಳೋ ಏನೋ? ಅವನಿಗಿಂತ ಮೇಲಿನ ಅಧಿಕಾರಿಗೆ ಸೆರಗು ಹಾಸಿ ರಾಜಶೇಖರ್‌ನನ್ನು ಯಾವುದೋ ಚಿಲ್ಲರೆ ಪ್ರಕರಣದಲ್ಲಿ ಫಿಟ್‌ ಮಾಡಿಸಿ ಸಸ್ಪೆಂಡ್‌ ಮಾಡಿಸಿದಳು!

ಅನಂತರ ಶುರುವಾಯಿತು ನೋಡಿ ಜಯಲಕ್ಷ್ಮಿಯ ಹೋಳಿಯಾಟ. ತಮಿಳುನಾಡಿನ ಆರು ಜಿಲ್ಲೆಗಳ ಪೊಲೀಸ್‌ ವ್ಯವಸ್ಥೆ ಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಟ್ಟಳು. ಅವಳ ಪ್ರಭಾವವಿದ್ದರೆ ಪೊಲೀಸ್‌ ಠಾಣೆಯಲ್ಲಿ ಯಾವ ಕೆಲಸ ಬೇಕಾದರೂ ಮಾಡಿಸಿಕೊಳ್ಳಬಹುದು ಎಂಬ ಮಾತು ಕೇಳಿಬರತೊಡಗಿದವು. ಜಯಲಕ್ಷ್ಮಿ ಠಾಣೆಯನ್ನು ವಸೂಲಿ ಅಂಗಡಿಗಳನ್ನಾಗಿ ಮಾಡಿಕೊಂಡುಬಿಟ್ಟಳು. ಮಲೈಚಾಮಿ ಎಂಬ ಇನ್‌ಸ್ಪೆಕ್ಟರ್‌ ಸ್ವತಃ ಹಣಕೊಟ್ಟು ಈಕೆಗೊಂದು ಮಾರುತಿ ಎಸ್ಟೀಮ್‌ ಕಾರು ಖರೀದಿಸಿದ. ಈ ಪುಟ್ಟ ಕಾಣಿಕೆ ನೀಡಿದ್ದು ಮುಖ್ಯಮಂತ್ರಿ ಪದಕ ಪಡೆಯುವುದಕ್ಕಾಗಿ. ಜಯಲಕ್ಷ್ಮಿ ಆತನಿಗೆ ಅತ್ಯುತ್ತಮ ಪೊಲೀಸ್‌ ಅಧಿಕಾರಿಗಳಿಗೆ ನೀಡುವ ಮುಖ್ಯಮಂತ್ರಿ ಪದಕ ಕೊಡಿಸಿದಳು. ಪದಕ ಸ್ವೀಕರಿಸಲು ಚೆನ್ನೈಗೆ ಈಕೆಯಾಂದಿಗೇ ಹೋದ. ಇಬ್ಬರೂ ಒಂದೇ ರೂಮಿನಲ್ಲಿ ಉಳಿದು ಪದಕದೊಂದಿಗೆ ವಾಪಸಾದರು. ಜಯಲಕ್ಷ್ಮಿ ವೃತ್ತಾಂತ ಇಲ್ಲಿಗೇ ಮುಗಿಯುವುದಿಲ್ಲ. ಕಳೆದ ಆರು ವರ್ಷಗಳಲ್ಲಿ , ಮೊದಲ ವಿವಾಹ ವಿಚ್ಛೇದನದ ಬಳಿಕ ಡಿಎಸ್‌ಪಿ ಸೇರಿದಂತೆ ನಾಲ್ವರು ಪೊಲೀಸ್‌ ಅಧಿಕಾರಿಗಳನ್ನು ಮದುವೆಯಾಗಿದ್ದಾಳೆ. ಯಾವನೊಂದಿಗೂ ಆರು ತಿಂಗಳಿಗಿಂತ ಜಾಸ್ತಿ ಸಂಸಾರ ಹೂಡಿಲ್ಲ. ಪೊಲೀಸ್‌ ಕಾನ್‌ಸ್ಟೇಬಲ್‌ನನ್ನೇ ತನ್ನ ಕಾರಿನ ಚಾಲಕನನ್ನಾಗಿ ಇಟ್ಟುಕೊಂಡಿದ್ದಾಳೆ. ನೂರಾರು ಪೇದೆಗಳು ಅವಳ ಮನೆ ಡ್ಯೂಟಿ ಮಾಡಿದ್ದಾರೆ. ಮುಸುರೆ ತಿಕ್ಕಿದ್ದಾರೆ, ಕಸ ಗುಡಿಸಿದ್ದಾರೆ, ಬಟ್ಟೆ ತೊಳೆದಿದ್ದಾರೆ, ಆಕೆಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಒಬ್ಬೊಬ್ಬ ಪೊಲೀಸ್‌ ಅಧಿಕಾರಿಯೂ ಆಕೆಯ ಬ್ಯಾಂಕ್‌ ಅಕೌಂಟ್‌ಗೆ ಲಕ್ಷಾಂತರ ಸುರಿದಿದ್ದಾರೆ. ಕಾರು, ಬಂಗಲೆ ತೆಗೆಸಿಕೊಟ್ಟಿದ್ದಾರೆ. ಆಕೆಯನ್ನು ಖುಷಿಪಡಿಸಲು ಕಟ್ಟಿಕೊಂಡ ಅಸಲಿ ಹೆಂಡರ ಜೀವನವನ್ನು ಮೂರಾಬಟ್ಟೆ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿಯಾಂದಿಗೆ ಲೈಂಗಿಕ ಸಂಬಂಧ ಹೊಂದಿದ ಬಳಿಕ ತಾನು ಗರ್ಭವತಿಯಾಗಿರುವುದಾಗಿ ಅವರನ್ನು ಹೆದರಿಸಿ, ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷಾಂತರ ರೂಪಾಯಿ ಪೀಕಿದ್ದಾಳೆ. ಏಕಕಾಲದಲ್ಲಿಯೇ ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ಪ್ರೀತಿಸುವ ನಾಟಕವಾಡಿ ಇಬ್ಬರೂ ಈಕೆಯ ಹಿಂದೆ ಬಿದ್ದು , ಅವರವರಲ್ಲಿಯೇ ಜಗಳವೆಬ್ಬಿಸಿ, ನಡುರಸ್ತೆಯಲ್ಲಿಯೇ ಅವರಿಬ್ಬರೂ ಹೊಡೆದುಕೊಂಡು ಕೊನೆಗೆ ಇಬ್ಬರ ಮುಂಡಾಮೋಚಿ ಪರಾರಿಯಾಗಿದ್ದಾಳೆ. ಚಲನಚಿತ್ರ ನಿರ್ಮಾಪಕರಿಗೆ ಸಾಲ ಕೊಡುವ ದಂಧೆಗೂ ಕೈ ಹಾಕಿದ ಜಯಲಕ್ಷ್ಮಿ, ಪೊಲೀಸರನ್ನಿಟ್ಟುಕೊಂಡು ಕೆಲವು ನಿರ್ಮಾಪಕರಿಗೂ ವಂಚಿಸಿದ್ದಾಳೆ.

ಈಗಾಗಲೇ ನಾಲ್ಕು ಸಲ ಜೈಲಿಗೆ ಹೋಗಿ ಬಂದಿರುವ ಜಯಲಕ್ಷಿ ್ಮಗೆ ಪೊಲೀಸ್‌ ಠಾಣೆ, ಜೈಲುವಾಸ ಮನೆಯ ಜಗುಲಿಯಷ್ಟೇ ಸಲೀಸು. ಸದ್ಯ ಮಧುರೈ ಜೈಲಿನಲ್ಲಿರುವ ಈಕೆ ಯಾವುದೇ ಕ್ಷಣದಲ್ಲೂ ಹೊರಬರಬಹುದು. ಬಿಡುಗಡೆಯಾದ ಕೂಡಲೇ ಬಂಧನಕ್ಕೆ ಕಾರಣರಾದ ಇನ್‌ಸ್ಪೆಕ್ಟರ್‌ ಯಾವನೇ ಇರಲಿ, ಅವನ ಗ್ರಹಚಾರಕ್ಕೆ ಸಂಚಕಾರ ಆಗಬಹುದು. ಹಾಗಂತ ಜನರೇ ಮಾತಾಡಿಕೊಳ್ಳುತ್ತಿದ್ದಾರೆ.‘ಜಯಲಕ್ಷ್ಮಿ ಬಂಧಿಸಿ ಯಾವನೂ ಬಚಾವಾಗಿಲ್ಲ. ಯಾಕೆ ಸುಮ್ನೆ ಉಸಾಬರಿ ಮೈ ಮೇಲೆ ಎಳೆದುಕೊಳ್ಳುತ್ತೀರಿ’ ಎಂಬ ಮಾತು ಪೊಲೀಸರ ಜಂಘಾಬಲವನ್ನೇ ಉಡುಗಿಸಿಬಿಟ್ಟಿದೆ. ಆಕೆ ಜೈಲಿನಿಂದ ಬಂದರೆ ಪ್ರತಿಕಾರ ತೀರಿಸಿಕೊಳ್ಳದೇ ಬಿಡಲಾರಳು. ಅದರಲ್ಲಿ ಅತಿಶಯೋಕ್ತಿಯೇನಿಲ್ಲ. ಕಾರಣ ಪೊಲೀಸ್‌ ಇಲಾಖೆಯಲ್ಲಿ ಆಕೆಯ ಪ್ರಭಾವವೇ ಅಂಥದ್ದು.

ಯಾಕೋ ಗೊತ್ತಿಲ್ಲ . ತಮಿಳನಾಡಿಗೆ ‘ಜಯ’ ಎಂದು ಹೆಸರಿಟ್ಟುಕೊಂಡವರು ಈ ಪರಿ ವರ್ತಿಸಲೇಬೇಕೆಂಬ ನಿಯಮವೇನಾದರೂ ಇದೆಯಾ?

ಲಜ್ಜೆಗೇಡಿ ಹೆಣ್ಣು ನಾಗರಿಕ ಸಮಾಜದ ಎಲ್ಲಾ ಶಿಷ್ಟಾಚಾರಗಳನ್ನು ಗಾಳಿಗೆ ತೂರಿದಾಗ, ಇಂಥ ಹೆಣ್ಣಿನ ತೆಕ್ಕೆಗೆ ಮಾನಗೇಡಿ, ಹೊಣೆಗೇಡಿ ಅಧಿಕಾರಿಗಳು ಅನಾಯಾಸವಾಗಿ ಬಿದ್ದು ದಾಸರಾದಾಗ ಎಂಥ ದುರಂತ ಸಂಭವಿಸುತ್ತದೆ ಎಂಬುದಕ್ಕೆ ಜಯಲಕ್ಷ್ಮಿ ಸಾಕ್ಷಿಯಾಗಿ ನಿಂತಿದ್ದಾಳೆ. ಒಬ್ಬ ಸಾಮಾನ್ಯ ಹೆಂಗಸು ಇಡೀ ವ್ಯವಸ್ಥೆಯನ್ನು ಬೇಕಾಬಿಟ್ಟಿ ಅಲ್ಲಾಡಿಸುತ್ತಾಳೆಂದರೆ ನಾವು ನಂಬಿಕೊಂಡಿರುವ ಈ ವ್ಯವಸ್ಥೆ ಅದೆಷ್ಟು ದುರ್ಬಲವಾಗಿರಬಹುದು?

ಮುಕ್ತ ಸೆಕ್ಸ್‌ನ ಅತಿರೇಕವಾಗಿರುವ ಅಮೆರಿಕ, ಬ್ರಿಟನ್‌ಗಳಂಥ ದೇಶಗಳಲ್ಲಿ ಅಧಿಕಾರಿಯಾಗಲಿ, ಅಧಿಕಾರದಲ್ಲಿರುವವರಾಗಲಿ ಸೆಕ್ಸ್‌ ಹಗರಣದಲ್ಲಿ ಸಿಲುಕಿದ್ದಾರೆಂಬ ಸಣ್ಣ ಆರೋಪ ಬಂದರೆ ಹುದ್ದೆ ತ್ಯಜಿಸುವುದು ಬಿಟ್ಟು ಅವರಿಗೆ ಬೇರ್ಯಾವ ದಾರಿಗಳೇ ಇರುವುದಿಲ್ಲ. ಇಂಥ ಹಗರಣಕ್ಕೆ ಸಿಲುಕಿದವರು ನಲುಗಿ ಹೋಗುತ್ತಾರೆ. ಆದರೆ ಭಾರತದಲ್ಲಿ ಇಂಥವರು ಮೇಲ ಮೇಲಕ್ಕೇರಲು, ಇನ್ನಷ್ಟು ದುಷ್ಟರಾಗಿ ಅಧಿಕಾರ ಹಿಡಿಯಲು ಇದೇ ಅರ್ಹತೆಯಾಗುತ್ತದೆ. ಬಿಹಾರದಲ್ಲಾದರೆ ಮಂತ್ರಿಗಿರಿಗೆ ಅರ್ಹತೆಯಾಗುತ್ತದೆ. ಅರ್ಹತೆಯಷ್ಟೇ ಅಲ್ಲ ಯೋಗ್ಯತೆಯಾಗುತ್ತದೆ.

ಇದ್ದುದರಲ್ಲಿ ನಮ್ಮ ರಾಜ್ಯದ ಪೊಲೀಸರೇ ವಾಸಿ. ಅವರು ಜಯಲಕ್ಷ್ಮಿಯಷ್ಟು ಸದರಾಗಿರುವ ಹೆಂಗಸಿನ ಹಿಂದೆ ಬೀಳುವಷ್ಟು ನಿಕೃಷ್ಟರಲ್ಲ. ಜೈಲಿನಿಂದ ಹೊರಬಂದರೆ ಜಯಲಕ್ಷ್ಮಿಕತೆ ಮುಂದುವರಿಯುತ್ತದೆ. ಈಗ ಮಧ್ಯಂತರ!

(ಸ್ನೇಹಸೇತು : ವಿಜಯಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more