• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊನೆಗೂ ಆ ಪುಟ್ಟ ಮಗನ ಆಸೆ ಈಡೇರಲೇ ಇಲ್ಲ !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ಗುಳ್ಳೆ ಒಡೆದಿದೆ!

ಎರಡು ಮೂರು ವರ್ಷ ಅವರೆಲ್ಲ ಬರೀ ಗುಳ್ಳೆಗಳನ್ನೇ ನಂಬಿ ಬದುಕಿದರಾ ? ಹಗಲುಗನಸಿನ ಮೇಲೆ ಸವಾರಿ ಮಾಡಿದರಾ? ಮರೀಚಿಕೆಯನ್ನು ನಿಜವೆಂದು ಭಾವಿಸಿದರಾ ? ವೆನಿಲ್ಲಾ ಬೆಳೆದ ರೈತ ಕಂಗಾಲು ಬಡಿದು ಕಮಂಗಿಯಂತಾಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ. ಅವನು ಕಟ್ಟಿದ ಕನಸಿನ ಸೌಧ ಅವನ ಮುಂದೇ ಕುಸಿದು ಬಿದ್ದಿದೆ. ವೆನಿಲ್ಲಾ ರೈತನ ಮನೆಯ ಜಗುಲಿಯಲ್ಲಿ ವಿಚಿತ್ರ ದುಗುಡ, ಅಸಹನೀಯ ಆತಂಕ, ಅಪಥ್ಯವಾಗುವಷ್ಟು ಮೌನ ಹಾಸಿಕೊಂಡಿದೆ.

ಎರಡು ವರ್ಷದ ಹಿಂದೆ ತೀರ್ಥಹಳ್ಳಿ ಸನಿಹದ ಸ್ನೇಹಿತನ ಮನೆಗೆ ಹೋದಾಗ ಆತನ ಆರು ವರ್ಷದ ಮಗ ಅಪ್ಪನ ತೊಡೆಯ ಮೇಲೆ ಕುಳಿತು, ‘ಅಂಕಲ್‌, ನಮ್ಮಪ್ಪ ವೆನಿಲ್ಲಾ ಬೆಳೀತಿದಾರೆ. ಮುಂದಿನ ವರ್ಷ ನಾವು ಒಂದು ಕಾರನ್ನು ತೆಗೆದುಕೊಳ್ತೇವೆ ಗೊತ್ತಾ ?’ ಎಂದು ಬೊಚ್ಚು ಬಾಯಿ ಬಿಡುತ್ತಾ ಸಂಭ್ರಮಿಸಿದ್ದ. ಅಪ್ಪ ವೆನಿಲ್ಲಾ ಜತೆಗೆ ಮಗನಲ್ಲಿ ಕನಸುಗಳನ್ನೂ ಬಿತ್ತಿದ್ದ . ಇಂದು ಅವನ ಮನೆಯ ಅಂಗಳದಲ್ಲಿ ನಿಂತರೆ ಕೊಳ್ಳುವವರೇ ಇಲ್ಲದ ವೆನಿಲ್ಲಾ ಬಳ್ಳಿಗಳ ರಾಶಿ ರಾಶಿ. ಕನಸುಗಳು ಒಣಗಿ ಮಲಗಿವೆ. ಆಸೆಗಳು ಬತ್ತಿ ಹೋಗಿವೆ.

Vanilla market collapsesಹಿಂದಿನ ವರ್ಷ ಉತ್ತರಕನ್ನಡ, ದಕ್ಷಿಣಕನ್ನಡ, ಮಲೆನಾಡಿನ ಯಾವುದೇ ಊರಿಗೆ ಹೋದರೂ ಅಲ್ಲಿನವರಿಗೆ ವೆನಿಲ್ಲಾ ಹೊರತಾಗಿ ಮಾತನಾಡಲು ಬೇರೆ ವಿಷಯಗಳೇ ಇರಲಿಲ್ಲ . ಹೊತ್ತಲ್ಲದ ಹೊತ್ತಲ್ಲಿ ಮಲೆನಾಡಿನ ಯಾವುದೇ ಮನೆಯ ಬಾಗಿಲಿಗೆ ಹೋದಗರೂ ಸವಿಮಾತಿಗೆ, ಸವಿಯೂಟಕ್ಕೆ ಕೊರತೆಯಿರಲಿಲ್ಲ . ‘ನೀವು ಸೌಖ್ಯಾನಾ, ಮನೆಯಲ್ಲಿ ಎಲ್ಲರೂ ಆರಾಮಾ’ ಎಂದೇ ಮಾತುಕತೆ ಆರಂಭವಾಗುತ್ತಿದ್ದವು. ಕ್ರಮೇಣ ಆ ಜಾಗದಲ್ಲಿ ವೆನಿಲ್ಲಾ ಬಂದು ಕೂತಿತು. ವೆನಿಲ್ಲಾ ಬೆಳೆಯದವರನ್ನು ಯಾರೂ ಕಣ್ಣೆತ್ತಿ ನೋಡದ ಸ್ಥಿತಿ ನಿರ್ಮಾಣವಾಯಿತು. ಅಪರೂಪಕ್ಕೆ ನೆಂಟರು ಮನೆಗೆ ಹೋದರೆ, ಹೋದವರ ಕಥೆಗಳನ್ನು ಯಾರೂ ಕೇಳುತ್ತಿರಲಿಲ್ಲ . ಬರೀ ವೆನಿಲ್ಲಾ ಎಂಬ ‘ಚಿನ್ನದ ಬೆಳೆ’ಯ ರೋಚಕ ಕಥೆ, ಕಟ್ಟುಕಥೆಗಳನ್ನು ಕೇಳಿ ಮೇಲೆದ್ದು ಬರಬೇಕಾಗುತ್ತಿತ್ತು . ಎಲ್ಲರ ಮನೆಗಳಲ್ಲಿ , ಮನಗಳಲ್ಲಿ ವೆನಿಲ್ಲಾ ವೆನಿಲ್ಲಾ ! ಮನೆಯ ಹೆಂಗಸರು ಲಕ್ಷಣವಾಗಿ ಮನೆಗೆ ಬರುವ ಅತಿಥಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಅದನ್ನೆಲ್ಲ ಬಿಟ್ಟು ಮನೆಯ ಹೆಂಗಸರು, ‘’ನಿಮ್ಮ ವೆನಿಲ್ಲಾ ಬಳ್ಳಿಗಳು ಚೆನ್ನಾಗಿವೆಯಾ? ಎಷ್ಟು ಉದ್ದ ಬೆಳೆಯುತ್ತಿದೆ? ಹೂವು ಬಿಟ್ಟಿದೆಯಾ? ಕೋಡು ಮೂಡುತ್ತಿದೆಯಾ’ ಎಂದೇ ಮಾತಿಗೆ ಅಡಿಯಿಡತೊಡಗಿದರು. ಇಬ್ಬರು ಹೆಂಗಸರು ಸಿಕ್ಕಾಗ ಮಕ್ಕಳ ಬಗ್ಗೆ , ಧಾರಾವಾಹಿಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಈ ಬಳ್ಳಿಯ ಬಗ್ಗೆ ಮಾತುಕತೆಯನ್ನು ಹರಡಿಕೊಳ್ಳಲಾರಂಭಿಸಿದ್ದರು. ನೆಂಟರ ಮನೆಗೆ, ತವರಿಗೆ ನಾಲ್ಕೈದು ದಿನ ಹೋಗಿ ಉಳಿದುಬರುತ್ತಿದ್ದ ಹೆಂಗಸರು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದರು. ಹಿತ್ತಲಲ್ಲಿ ನೆಟ್ಟ ಮುದ್ದಿನ ವೆನಿಲ್ಲಾ ಬಳ್ಳಿಯನ್ನು ಯಾರಾದರೂ ಕದ್ದೊಯ್ದಾರು ಎಂಬ ಆತಂಕ.

ತಲತಲಾಂತರಗಳಿಂದ ಅಡಕೆ, ತೆಂಗು, ಭತ್ತ, ಬಾಳೆ ಬೆಳಎದು ನೆಮ್ಮದಿಯಾಗಿದ್ದ ರೈತನ ಬದುಕಿನಲ್ಲಿ ಯಾವಾಗ ವೆನಿಲ್ಲಾ ಪ್ರವೇಶಿಸಿತೋ ಅಂದಿನಿಂದ ಅವನ ಚಿಂತನೆ, ಲೆಕ್ಕಾಚಾರ ಬೇರೆ ದಿಕ್ಕು ಹಿಡಿಯಿತು. ರೈತನ ಸಾಮಾಜಿಕ ಜೀವನವೂ. ಕೇವಲ ಎರಡು ವರ್ಷಗಳಲ್ಲಿ ಎಲ್ಲವೂ ಬದಲು. ಅಡಸಲು ಬಡಸಲು. ಮಲೆನಾಡಿನ ಚಿತ್ರವೇ ತಾಪ್ಡತೋಡ್‌ ಬದಲಾಗಿಬಿಟ್ತಿು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ . ನಮ್ಮ ರೈತನ ಮನದೊಳಗೆ ವೆನಿಲ್ಲಾ ಯಾವ ಪರಿ ಹೊಕ್ಕಿ ಕುಳಿತಿತೆಂದರೆ, ಇದನ್ನು ಬಿಟ್ಟು ಬೇರೆಯದನ್ನು ಯೋಚಿಸಲೂ ಆತನಿಗೆ ಆಸಕ್ತಿ ಇರಲಿಲ್ಲ . ಪುರುಸೊತ್ತೂ ಇರಲಿಲ್ಲ . ಮದುವೆಯಂಥ ಕಾರ್ಯಕ್ರಮಕ್ಕೆ ನೂರಾರು ಜನರನ್ನು ಸೇರಿಸಬೇಕಿದದ್ರೆ ಅಲ್ಲೊಂದು ವೆನಿಲ್ಲಾ ಗೋಷ್ಠಿ ಅಥವಾ ಭಾಷಣ ಏರ್ಪಡಿಸಬೇಕಿತ್ತು . ಎಂಥ ವಿಚಿತ್ರ ನೋಡಿ. ಮಲೆನಾಡಿನಲ್ಲಿ ಹೈನುಗಾರಿಕೆ ಕುರಿತು ವಿಚಾರ ಸಂಕಿರಣ ಏರ್ಪಡಿಸಿದರೆ, ಕೊನೆಗೊಂದು ಗೋಷ್ಠಿ ವೆನಿಲ್ಲಾ ಬಗ್ಗೆ ಇಡಬೇಕಿತ್ತು . ಇಲ್ಲದಿದ್ದರೆ ಜನರೇ ಬರುತ್ತಿರಲಿಲ್ಲ . ಹಳ್ಳಿಹಳ್ಳಿಗಳಲ್ಲಿ ವೆನಿಲ್ಲಾ ಬಗ್ಗೆ ಕಾರ್ಯಕ್ರಮ ಇಟ್ಟುಕೊಂಡರೆ ಯಕ್ಷಗಾನ, ತಾಳಮದ್ದಲೆಗೆ ಸೇರುವಂತೆ ಜನರು ಮುಕುರಿಕೊಳ್ಳತೊಡಗಿದರು. ರಸ್ತೆಯಲ್ಲಿ , ಪೇಟೆಯಲ್ಲಿ , ತಂಗುದಾಣದಲ್ಲಿ , ಮದುವೆ ಚಪ್ಪರದಲ್ಲಿ ನಾಲ್ಕು ಜನ ಸೇರಿದ್ದಾರೆಂದರೆ ಅಲ್ಲೊಂದು ವೆನಿಲ್ಲಾ ಗೋಷ್ಠಿ ನಡೆಯುತ್ತಿದೆಯೆಂದೇ ಅರ್ಥ.

Vanilla flowerಈ ಮಧ್ಯೆ ರೈತನ ತೋಟದಲ್ಲಿ ವೆನಿಲ್ಲಾ ಬಳ್ಳಿಗಳು ತಣ್ಣನೆಯ ವಾತಾವರಣದಲ್ಲಿ ಬೆಚ್ಚಗೆ ಬೆಳೆಯಲಾರಂಭಿಸಿದವು. ದಿನದಿನವೂ ಚೋಟುದ್ದ ಬೆಳೆಯುತ್ತಾ ಮೋಟುದ್ದ ಚಾಚಿಕೊಳ್ಳುವ ಬಳ್ಳಿಗಳನ್ನು ಕಂಡರೆ ಸಾಕ್ಷಾತ್‌ ದುಡ್ಡಿನ ಗಿಡದಲ್ಲಿ ಹಣದ ಝಣ ಝಣ! ಬಳ್ಳಿ ಬಳ್ಳಿಗೂ ರೂಪಾಯಿ ಖದರು! ‘ಮಲೆನಾಡಿನ ಕುಗ್ರಾಮದಲ್ಲಿ ವೆನಿಲ್ಲಾ ಕದಿಯುತ್ತಿದವನ ಬಂಧನ’ ಎಂಬ ಸಣ್ಣ ಸುದ್ದಿ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಅದರ ಬೆನ್ನಿಗೇ ಅಂಥ ನೂರಾರು ಪ್ರಕರಣಗಳು ವರದಿಯಾಗತೊಡಗಿದವು. ಅಲ್ಲಿಯತನಕ ಮಲೆನಾಡ ರೈತನಿಗೆ ತೋಟಕ್ಕೆ ಬೇಲಿ ಹಾಕಿಕೊಂಡು ಕಾಯುವ ಪ್ರಸಂಗ ಬಂದಿರಲಿಲ್ಲ . ಆದರೆ ಕಳ್ಳತನದ ಸುದ್ದಿ ಬರಲಾರಂಭಿಸಿದಾಗ ರಾತ್ರಿಯಿಡೀ ನಿದ್ದೆಯಿಲ್ಲ . ಎಲ್ಲರ ಮೇಲೂ ಸಂಶಯ, ಅಪನಂಬಿಕೆ. ತೋಟದ ಬದುವನ್ನು ಬಳಸಿ ಹೋಗುವ ದಾರಿಹೋಕನನ್ನು ಕಂಡರೆ ್ಫವೆನಿಲ್ಲಾ ಕಳ್ಳನಿರಬಹುದಾ ಎಂಬ ಗುಮಾನಿ. ಅಡಕೆಗೆ ಚಿನ್ನದ ಬೆಳೆ ಬಂದಾಗ ಅದನ್ನು ಮರವೇರಿ ಕದ್ದೊಯ್ಯಬಹುದೆಂಬ ಸಂದೇಹ ಕಾಡಿರಲಿಲ್ಲ . ಈಗ ವೆನಿಲ್ಲಾ ತೋಟದ ಸುತ್ತ ಸರ್ಪಗಾವಲು. ಶಿರಸಿಯಲ್ಲಿ ವೆನಿಲ್ಲಾ ಕಳ್ಳನನ್ನು ಹಿಡಿದಾಗ ಒಸಾಮಾ ಬಿನ್‌ ಲಾಡೆನ್‌ ಸಿಕ್ಕಿಬಿದ್ದರೆ ಆಗುವಂಥ ಕೋಲಾಹಲವಾಗಿತ್ತು . ಮನೆಯ ತಿಜೋರಿಗೆ ಬೀಗ ಹಾಕದ ರೈತ ಇಡೀ ತೋಟಕ್ಕೆ ಬೀಗ ಹಾಕಿ ಕಾಯುವಂಥ ಸ್ಥಿತಿ ನಿರ್ಮಾಣವಾಯಿತು!

ಇಷ್ಟೊತ್ತಿಗೆ ವೆನಿಲ್ಲಾ ಬೆಳೆದ ಸಾಗರದ ಯಾವುದೋ ಹೆಗಡೆ ಒಂದು ಕೋಟಿ ರೂ. ಸಂಪಾದಿಸಿದನಂತೆ, ಶಿವಮೊಗ್ಗದ ಇನ್ನೊಬ್ಬ ಎರಡು ಕೋಟಿ ರೂ. ಮೊಗೆದನಂತೆ, ಪಕ್ಕದ ಊರಿನ ರೈತ ಎಂಬತ್ತು ಲಕ್ಷ ರೂ. ಗಳಿಸಿದನಂತೆ ಎಂಬ ಸುದ್ದಿಗಳು ಪ್ರತಿನಿತ್ಯ ಕಿವಿಗೆ ಅಪ್ಪಳಿಸುತ್ತಿದ್ದರೆ, ಎಲ್ಲರೂ ಅವರಂತೆ ದಿಢೀರ್‌ ಶ್ರೀಮಂತರಾಗಲು ವೆನಿಲ್ಲಾ ಬಳ್ಳಿಯ ಹಿಂದೆ ಓಡಲಾರಂಭಿಸಿದ್ದರು. ಈ ಹೊತ್ತಿಗೆ ಎಲ್ಲ ರೈತರ ಅಂಗಳದಲ್ಲಿ ವೆನಿಲ್ಲಾ ಸೊಕ್ಕಿನಿಂದ, ಕಕ್ಕುಲಾತಿಯಿಂದ ಬೆಳೆಯಲಾರಂಭಿಸಿತ್ತು .

ಅತ್ತ ತೋಟದಲ್ಲಿ ವೆನಿಲ್ಲಾ ಬಳ್ಳಿ ಕ್ಷಣಕ್ಷಣಕ್ಕೆ ಈಟೀಟೇ ಉದ್ದ ಬೆಳೆಯುತ್ತಿದ್ದರೆ, ಇತ್ತ ವೆನಿಲ್ಲಾ ‘ಮಾಫಿಯಾ’ ಚುರುಕಾಗಿ ಕಾರ್ಯ ಪ್ರವೃತ್ತವಾಯಿತು. ಬಳ್ಳಿಯನ್ನು ಮಾರಾಟ ಮಾಡುವ ಜಾಲ ಹಳ್ಳಿಹಳ್ಳಿಗಳಲ್ಲಿ ಹುಟ್ಟಿಕೊಂಡಿತು. ವೆನಿಲ್ಲಾ ಬಗ್ಗೆ ಮಾಹಿತಿ ನೀಡುವವರು, ಕಾರ್ಯಾಗಾರ ಮಾಡುವವರು, ಪುಸ್ತಕ ಬರೆಯುವವರು ಹುಟ್ಟಿಕೊಂಡರು. ವೆನಿಲ್ಲಾ ಬಗ್ಗೆ ತಪ್ಪು ಮಾಹಿತಿ ಕೊಡುವರು, ರೋಚಕ ಕಥೆಗಳನ್ನು ಹೇಳುವವರೂ ಹುಟ್ಟಿಕೊಂಡರು. ಕಳುವು ಮಾಡುವ ಜಾಲವವೂ ಉದ್ಭವವಾಯಿತು. ಇವರಿಗೆ ಕೇರಳದ ಮಾಫಿಯಾ ಸಂಪರ್ಕ ಬೆಳೆಯಿತು. ಅಲ್ಲಲ್ಲಿ ವೆನಿಲ್ಲಾ ಕ್ಲಬ್‌, ಬೆಳೆಗಾರರ ಸಂಘ ಹುಟ್ಟಿಕೊಂಡವು. ಈ ಎಲ್ಲ ವಿಷಯಗಳನ್ನು ಪತ್ರಿಕೆಗಳು ವರ್ಣರಂಜಿತವಾಗಿ ಪ್ರಕಟಿಸಿದವು. ಈ ವೇಳೆಗೆ ವೆನಿಲ್ಲಾ ಭೂತ ಎಲ್ಲರೊಳಗೆ ಹೊಕ್ಕಿತ್ತು . ಜೀವನಾರಭ್ಯ ಅಡಕೆ, ತೆಂಗು, ಬಾಳೆ, ಏಲಕ್ಕಿ, ಕಾಳುಮೆಣಸು ಬೆಳೆಯುತ್ತಿದ್ದ ಕೃಷಿಕ ಕೂಡ ಫಟಾಫಟ್‌ ಹಣ ಮಾಡಲು ವೆನಿಲ್ಲಾ ಬೆಳೆಯಲು ನಿರ್ಧರಿಸಿದ್ದ .

ತೆಂಗು, ಕಾಳುಮೆಣಸಿಗೆ ತಟ್ಟಿದ ರೋಗ ಬಾದೆ ಹಾಗೂ ಅಡಕೆ, ಬಾಳೆ ದರ ಕುಸಿತದಿಂದ ರೈತ ಹಿಂಜಿಹಿಪ್ಪಲಿಯಾಗಿದ್ದ . ಆತನ ಮುಂದೆ ಆಯ್ಕೆಗಳಿರಲಿಲ್ಲ . ಸರಿಯಾದ ಸಮಯಕ್ಕೆ ವೆನಿಲ್ಲಾ ಬಂತು. ಆನ್‌ಲೈನ್‌ ಲಾಟರಿ, ಹಣ ವರ್ತುಲ (money circulating scheme) ಯೋಜನೆಂತೆ ಶೀಘ್ರ ಶ್ರೀಮಂತರಾಗಲು ನಮ್ಮ ರೈತರು ನಿರ್ಧರಿಸಿದರು. ಅಡಕೆ ರೇು ರಸಾತಳ ತಲುಪಿದಾಗ ‘ಲವಂಗ ಬೆಳೆಯಿರಿ, ಪಚೋಲಿ ನೆಡಿ, ಕಚ್ಚೂರ ಕೃಷಿ ಮಾಡಿ, ಸ್ಟೀರಿಯಾ ಬೆಳೆಯಿರಿ, ಕೈತುಂಬಾ ಹಣ ಗಳಿಸಿ’ ಎಂದು ರೈತರ ಮನಸ್ಸಿನೊಳಗೆ ಬಣ್ಣಬಣ್ಣದ ಕನಸುಗಳನ್ನು ಬಿತ್ತಲಾಗಿತ್ತು . ಈ ಎಲ್ಲ ಬೆಳೆಗಳೂ ಬಂದಷ್ಟೇ ಬೇಗ ಹೊರಟುಹೋದವು. ಆಗಲೂ ಕೆಲವು ರೈತರು ಈ ವಾಣಿಜ್ಯ ಬೆಳೆಗಳಿಗೆ ಮಾರುಹೋಗಿ ಕೈಸುಟ್ಟುಕೊಂಡಿದ್ದರು. ವೆನಿಲ್ಲಾ ಬಂದಾಗ ಹಿಂದಿನ ಅನುಭವವಾದರೂ ಎಚ್ಚರಿಸಬೇಕಿತ್ತು . ಆದರೆ ಹಣದ ಥೈಲಿಯ ದೃಶ್ಯಗಳೇ ಹಾದುಹೋಗುವಾಗ ಎಚ್ಚರದ ಮಾತುಗಳಾದರೂ ಯಾರಿಗೆ ಕೇಳೀತು?

ಇದು ಕೇವಲ ವೆನಿಲ್ಲಾ ಬೆಳೆಗಾರರ ಕಥೆಯಲ್ಲ . ನಮ್ಮ ರೈತಾಪಿ ವರ್ಗದ ಪಾಡು ಇದು. ಟೊಮೆಟೋ, ಆಲೂಗಡ್ಡೆ, ಮೆಣಸಿನಕಾಯಿ ಬೆಳೆದ ರೈತನ ಕಥೆಯೂ ಇದೇ. ಇಲ್ಲಿ ಒಂದು ಸಂಗತಿಯನ್ನು ಗಮನಿಸಬೇಕು. ತಾತ, ಮುತ್ತಾತನ ಕಾಲದಿಂದ ಅನುಸರಿಸಿಕೊಂಡ ಕೃಷಿ ಪದ್ಧತಿ ಕೇವಲ ಕೃಷಿ ಪದ್ಧತಿ ಮಾತ್ರವಲ್ಲ . ನಮ್ಮ ರೈತರಿಗೆ ಅದು ಜೀವನ ಪದ್ಧತಿಯೂ ಹೌದು. ಅದು ಜನಜೀವನ ಮಾತ್ರವಲ್ಲ , ಸಂಸ್ಕೃತಿಯೂ ಹೌದು. ರೈತನ ಕ್ಷಣ ಕ್ಷಣದ ಬದುಕು ಕೃಷಿ ಅಥವಾ ಆತ ಬೆಳೆಯುವ ಬೆಳೆಗಳೊಂದಿಗೆ ದಟ್ಟವಾಗಿ ಬೆಸೆದುಕೊಂಡಿದೆ. ಅಡಕೆ ಬೆಳೆಗಾರನ ಪಾಲಿಗೆ ಅಡಕೆ ಕೇವಲ ಒಂದು ಬೆಳೆಯಲ್ಲ . ಅವನ ಜೀವನ, ವಿಚಾರ, ಸಂಸ್ಕೃತಿ, ಸೊಗಡು, ಬದುಕಿನ ಕ್ರಮವನ್ನ ನಿರ್ದೇಶಿಸುವ ಪಾರಂಪರಿಕ ಸಂಗತಿ. ಅವನ ಜೀವನ ಅಡಕೆಯ ಸುತ್ತ ಸುತ್ತುತ್ತಿರುತ್ತದೆ. ಈ ಕೃಷಿಯ ಹಿಂದೆ ಆತನ ಇತಿಹಾಸ, ಮನೆತನದ ಇತಿಹಾಸ ಅಡಗಿದೆ. ಹೀಗಿರುವಾಗ ಏಕಾಏಕಿ ದುಡ್ಡಿನ ಆಸೆಗಾಗಿ ಎಲ್ಲ ಬಿಟ್ಟು ವೆನಿಲ್ಲಾ ಬೆಳೆದರೆ ಏನಾದೀತು ? ಹಾಗ ನೋಡಿದರೆ ಇಂಥ ಪ್ರಯೋಗ ಹೊಸತೇನಲ್ಲ . ಪಾರಂಪರಿಕವಾಗಿ ಆಚರಿಸಿಕೊಂಡು ಬಂದ ಕೃಷಿ ಬಿಟ್ಟು ಆಮಿಷಕ್ಕಾಗಿ ಬೇರೆ ಕೃಷಿ ನೆಚ್ಚಿಕೊಂಡಾಗ ಮಲೆನಾಡಿನಲ್ಲಿ , ‘ಎಲ್ಲ ಬಿಟ್ಟ ಬಂಗಿ ನೆಟ್ಟ’ ಎಂಬ ಗಾದೆ ಹೇಳುತ್ತಾರೆ.

ಇಂದು ವೆನಿಲ್ಲಾ ಬೆಳೆದವನ ಪಾಡು ಇದೇ ಆಗಿದೆ. ‘ಹಣ ವರ್ತುಲ ಯೋಜನೆ’ಯಲ್ಲಾಗುವಂತೆ ಮೊದಲು ವೆನಿಲ್ಲಾ ಬೆಳೆದವ ದುಡ್ಡು ಮಾಡಿಕೊಂಡಿದ್ದಾನೆ. ಬಳ್ಳಿ ಮಾರಿದವ ಹಣ ಎಣಿಸಿದ್ದಾನೆ. ಮೋಸ ಹೋದವನು ಮಾತ್ರ ಸಾಮಾನ್ಯ ರೈತ. ಆತ ಬೆಳೆದ ಮಾಲು ಮಾರುಕಟ್ಟೆ ತಲುಪುವ ಹೊತ್ತಿಗೆ ಮಾರುಕಟ್ಟೆಯೇ ಎದ್ದು ಹೊರಟುಹೋಗಿದೆ. ಎರಡೇ ವರ್ಷಗಳಲ್ಲಿ ಆಸೆ ಅಂಗಾತ ಮಲಗಿದೆ.

ಅಡಕೆ, ಬಾಳೆ, ತೆಂಗಿಗೆ ರೇಟಿಲ್ಲ ಅಂದರೆ ಬೆಳೆಗಾರ ಟೊಮೊಟೊ ಕೃಷಿಕನಂತೆ ರಸ್ತೆಯಲ್ಲಿ ಚೆಲ್ಲಿ ಕಂಗಾಲಾಗಿ ಕುಳಿತುಕೊಳ್ಳಬೇಕಾಗಿಲ್ಲ . ಏನೇ ರೇಟಿಲ್ಲ ಅಂದರೂ ಖರೀದಿಸುವವರಿದ್ದಾರೆ. ಅಷ್ಟೇ ಅಲ್ಲ ಅವುಗಳನ್ನು ಯಾವಾಗ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಆದರೆ ವೆನಿಲ್ಲಾದ ಕಥೆಯೇನಾಗಿದೆ ನೋಡಿ. ಈಗ ವೆನಿಲ್ಲಾ ಬೇಕು ಅನ್ನೋರೇ ಇಲ್ಲ . ಕೊಳ್ಳುವವರು ನಾಪತ್ತೆ . ಬಳ್ಳಿ ಮಾರುವವರ ಅಡ್ರೆಸ್ಸೇ ಇಲ್ಲ. ಈ ಎಲ್ಲ ಅಪಸವ್ಯಗಳ ನಡುವೆ ‘ಇವೆಲ್ಲ ತಾತ್ಕಾಲಿಕ ಹಿನ್ನಡೆ, ರೇಟು ಬರುತ್ತದೆ ನೋಡ್ತಾ ಇರಿ’ ಎಂದು ಕೆಲವು ವೆನಿಲ್ಲಾ ಸಂಸ್ಥೆಗಳು, ಏನೆಲ್ಲಾ ಹೇಳಿ ನಂಬಿಸುತ್ತಿವೆ. ಆದರೆ ನಂಬಿಕೆಯ ಪಸೆಯೇ ಇಂಗಿಹೋದ ಮೇಲೆ ಆ ಜಾಗದಲ್ಲಿ ಹೊಸ ನಂಬಿಕೆ ಚಿಗುರೀತಾ ?

ಏಕಾಏಕಿ ಶ್ರೀಮಂತರಾಗುವ ಭರದಲ್ಲಿ ನಮ್ಮ ರೈತರು ಯಾಮಾರಿಬಿಟ್ಟರಾ? ಹೀಗೆ ಯಾಮಾರಿಸುವ ಹಿಂದೆ ಯಾರದಾದರೂ ಕೈವಾಡವಿದೆಯಾ? ದುರುದ್ದೇಶವಿದೆಯಾ? ಗೊತ್ತಾಗುತ್ತಿಲ್ಲ .

ಮೊನ್ನೆ ಉಪ್ಪಿನಂಗಡಿಗೆ ಹೋದಾಗ ಸ್ನೇಹಿತ ಗೋಪಾಲಕೃಷ್ಣ ಕುಂಟನಿ ಹೇಳಿದ ಮಾತು ಮಾರ್ಮಿಕವಾಗ್ತಿತು- ‘ದುಂಬಿ ಕೂರದ ಹೂವು ಅಂತ ಇದ್ದರೆ ಅದು ವೆನಿಲ್ಲಾ. ಬೇರೆಲ್ಲಾ ಹೂವುಗಳಿಗೂ ದುಂಬಿ ಬೇಕು. ವೆನಿಲ್ಲಾಕ್ಕೆ ಬೇಕಿಲ್ಲ . ಸೂರ್ಯೋದಯಕ್ಕೆ ಮುನ್ನ ಮನುಷ್ಯನೇ ವೆನಿಲ್ಲಾಕ್ಕೆ ಪರಾಗಸ್ಪರ್ಶ ಮಾಡಿಸಬೇಕು. ವೆನಿಲ್ಲಾ ಅಂಥ ಅನೈಸರ್ಗಿಕ, ಅಪ್ರಾಕೃತಿಕ ಸಸ್ಯ. ನಮ್ಮ ರೈತರು ಇದನ್ನು ನಂಬಿದರಲ್ಲಾ . ಛೆ!’

ಕೊನೆಗೂ ತೀರ್ಥಹಳ್ಳಿಯ ಸ್ನೇಹಿತನ ಪುಟ್ಟ ಮಗನ ಆಸೆ ಈಡೇರಲೇ ಇಲ್ಲ .

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X