ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವೊಮ್ಮೆ ಸೋಲೆಂಬುದೂ ಗೆಲುವನ್ನು ಸೋಲಿಸಿಬಿಡುತ್ತೆ

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌
[email protected]

ಗೆಲುವೊಂದೇ ಸರ್ವಸ್ವ. ಗೆಲುವೇ ಎಲ್ಲರ ಗುರಿ. ಪ್ರತಿಯಾಬ್ಬ ವ್ಯಕ್ತಿಯ ಅಸ್ತಿತ್ವದ ಮೊದಲ ಹಾಗೂ ಕೊನೆಯ ಗುರಿ ಗೆಲುವಿಗಾಗಿ ಹೋರಾಟ. ಯಾವತ್ತು ಇದು ಸಿಗುವುದಿಲ್ಲವೆಂದು ನಿಕ್ಕಂಟಿಯಾಗುವುದೋ ಅಂದೇ ಅಂತಿಮ. ಏನೇ ಆಗಲಿ ಗೆಲುವು ಸಾಧಿಸಬೇಕು. ಯಾಕೆಂದರೆ ಗೆಲುವಿಗಿಂತ ಮಿಗಿಲಾದ ಸಾಧನೆ ಇನ್ನೊಂದಿಲ್ಲ.

ಹಾಗಂತ ನಾವು ತಿಳಿದುಕೊಂಡಿದ್ದೇವೆ. ವ್ಯಕ್ತಿತ್ವ ವಿಕಸನ (Personality Development)ಗುರುಗಳ ಮುಂದೆ ನಿಂತರೆ ಅವರೂ ಸಹ ಹೀಗೇ ಎತ್ತೆತ್ತಲೋ ಸುತ್ತಿಸುತ್ತಾರೆ. ಏರಾ ಇಳಿಸಿ ಗೆಲುವಿನ ಬಗ್ಗೆ ಕೊರೆಯುತ್ತಾರೆ. ಹೀಗೇ ಕೊರೆಯುತ್ತಾ ಕೊರೆಯುತ್ತಾ ಗೆಲುವಿನ ಬಗ್ಗೆ ಮನಸ್ಸಿನಲ್ಲಿ ಒಂದು ದಿವ್ಯ ಜಡತ್ವವನ್ನು ಸೃಷ್ಟಿಸಿಬಿಡುತ್ತಾರೆ. ಅಂಥ ಸಂದರ್ಭದಲ್ಲೆಲ್ಲ ಜೀವನೋತ್ಸಾಹ ಪ್ರತೀಕವಾದ, ಖೇಳಾಮೇಳದ, ಸಂಕೇತವಾದ ಗೆಲುವು ಕೂಡ ಒಮ್ಮೊಮ್ಮೆ ಕಿಲುಬು ಖೀಡುಖೂಡಿ ಎಂದೆನಿಸಿಬಿಡುತ್ತದೆ.

Some defeats more triumphant than victoriesಗೆಲುವಿನ ಎಲ್ಲ ರೋಚಕತೆ, ವಿಸ್ಮಯ, ಛಬುಕು, ಚಮತ್ಕಾರ, ಉಲುಕು ಕುಲುಕು, ಅಚ್ಚರಿ ಸೋಜಿಗವೆಲ್ಲ ಕೆಲವೊಮ್ಮೆ ಸೋಲು ಎಂಬ ‘ಕೀಳುಮುಂಡೆ’ ಮುಂದೆ ಜಟಕಾ ಮುರಕೊಂಡು ಬಿದ್ದು ಬಿಡುತ್ತದೆ. ಸೋಲು ಸಹ ಅಪ್ಯಾಯಮಾನವಾಗುವುದು, ಹೃದಯಂಗಮವಾಗುವುದು ಕೂಡ ಗೆಲುವಿನ ಜಡತ್ವಕ್ಕೆ ಹೊಡೆಯುವ ತಪರಾಕಿ. ಅದಕ್ಕೇ ಹೇಳುವುದು- ಕೆಲವು ಸಲ ಗೆಲುವಿನ ಕಹಳೆಗಿಂತ ಸೋಲಿನ ಕೇಕೆ ಜೋರಾಗಿ ಕೇಳಿಸುತ್ತದೆ. ಇದನ್ನೇ ಚಿಂತಕ ಮೈಕೆಲ್‌ ಡಿ. ಮಾಂಟೆನ್‌ There are some defeats more triumphant than victories ಎಂದು ಹೇಳಿರುವುದು. ಸೋಲು ಸಹ ಸುಖದ ಸಖಿಯಂತೆ ಸಂತೃಪ್ತಿ ತರಬಹುದು. ಸೋಲು ಕೂಡ ಎದೆ ಗೂಡಲ್ಲಿ ಬೆಚ್ಚನೆಯ ಹಕ್ಕಿಯಂತೆ ಸಾಂತ್ವನದ ಮೊಟ್ಟೆಗೆ ಕಾವು ಕೊಟ್ಟು ಖುಶಿಯ ಮರಿಗಳನ್ನು ಕೈಯಲ್ಲಿಡಬಹುದು. ಆದರೆ ಆಪ್ತವಾಗುವ ಸೋಲು ಕದಕದಿಸಿ ಪಡೆದ ಗೆಲುವಿಗಿಂತ ದೊಡ್ಡದು.

ಸದಾ ಗೆಲುವಿನ ಬಗ್ಗೆ ಮಾತನಾಡುವ ವ್ಯಕ್ತಿತ್ವ ವಿಕಸನ ಗುರು ಶಿವಖೆರ ಅಂದು ಸೋಲಿನ ಆನಂದ, ಸಂತೃಪ್ತಿಯ ಬಗ್ಗೆ ಹೇಳತೊಡಗಿದ್ದ. ಒಂದು ಸಣ್ಣ ಸೋಲು ಸಹ ಎಂಥ ಪ್ರೇರಣೆ, ಆತ್ಮವಿಶ್ವಾಸ, ಅದಮ್ಯ ಚೇತನವನ್ನು ಹುಟ್ಟಿಸಬಹುದೆಂದು ಹೇಳುತ್ತಿದ್ದ. ಅವನ ಮುಂದೆ ರೂಬನ್‌ ಗೊಂಜಾಲಸ್‌ನ ಆತ್ಮಕತೆಯಿತ್ತು. ನಿಮಗೂ ಗೊತ್ತಿರಬಹುದು ಈ ರೂಬನ್‌. ಈತ ಬ್ಯಾಡ್ಮಿಂಟನ್‌(ರಾಕೆಟ್‌ ಬಾಲ್‌ ಪ್ರವೀಣ ಕೂಡ) ಆಟಗಾರ. ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡವ. ರೂಬನ್‌ ಪಂದ್ಯ ಆರಂಭಿಸುವ ಮೊದಲೇ ಎದುರಾಳಿಯ ಜಂಘಾಬಲ ಉಡುಗಿಸುತ್ತಿದ್ದ. ಅವನ ಚಿಮ್ಮುವ ಉತ್ಸಾಹವೇ ಪ್ರತಿಸ್ಪರ್ಧಿಗೆ ಚಲ್ಲೊಹಿಲ್ಲೆಯಾಗುತ್ತಿತ್ತು. ರೂಬನ್‌ ತಾಲೀಮಿಗೆ ನಿಂತಿದ್ದಾನೆಂಬ ಪೋರ್ಕಿ ಸುದ್ದಿ ಕೂಡ ಅವನ ಮುಂದೆ ನಿಂತು ಆಡುವವನ ಆತ್ಮವಿಶ್ವಾಸಕ್ಕೆ ಢಿಕ್ಕಿ ಹೊಡೆದಂತಾಗುತ್ತಿತ್ತು.

ಅಂದು ರೂಬನ್‌ ಮಹತ್ವದ ಸೆಣಸಿಗೆ ನಿಂತಿದ್ದ. ಇಡೀ ಜಗತ್ತೂ ಆ ಪಂದ್ಯವನ್ನು ನೋಡಲು ಎದ್ದು ಕುಳಿತಿತ್ತು. ರೂಬನ್‌ ನ ಈ ಎಲ್ಲ ಧಡಕಿಗಳನ್ನು ಸಹಿಸಿಕೊಳ್ಳುವ ಪ್ರಬಲ ಆಟಗಾರ ಅವನ ಮುಂದೆ ನಿಂತಿದ್ದ. ಪಂದ್ಯ ಶುರು ಆಯಿತು. ಇಬ್ಬರದೂ ಒಂದೇ ವೇಗ, ಒಂದೇ ಓಘ. ಇಬ್ಬರದೂ ಒಂದೇ ತಟ್ಟು, ಒಂದೇ ಪಟ್ಟು. ಪಂದ್ಯ ಸಮಸಮ. ನಾಲ್ಕು ಸೆಟ್ಟು ಕೂಡ ಸಮಸಮ. ನಂತರ ಬಂತು ನಿರ್ಣಾಯಕ ಹಂತ. ಅಂತಿಮ ಪಂದ್ಯ. ಅಲ್ಲೂ ಸಹ ಇಬ್ಬರದೂ ಏಕ ಏಕ ಹೊಡೆತ. ಮಜಾ ಅಂದ್ರೆ ಇಬ್ಬರೂ ಸೋಲಲೊಲ್ಲರು. ಅಂತೂ ಬಂತು ಉಸಿರು ಬಿಗಿ ಹಿಡಿದುಕೊಳ್ಳುವ ಕ್ಷಣ- ಮ್ಯಾಚ್‌ ಪಾಯಿಂಟ್‌! ರೂಬನ್‌ ಹೊಡೆದ ರಭಸಕ್ಕೆ ಕಾರ್ಕ್‌ ಗೆರೆಯೆ ಮೇಲೆ ಬಿತ್ತು. ಲೈನ್‌ ಅಂಪೈರ್‌ ಹಾಗೂ ರೆಫರಿ ರೂಬನ್‌ ಪರವಾಗಿ ತೀರ್ಪು ನೀಡಿದರು. ರೂಬನ್‌ ಜಯಶಾಲಿ ಎಂದು ಇಡೀ ಕ್ರೀಡಾಂಗಣ ಕುಣಿದು ಕುಪ್ಪಳಿಸಿತು. ಆದರೆ ರೂಬನ್‌ ಎದುರಾಳಿಯನ್ನು ಕರೆದು ತನ್ನದು Fault Shot, ಗೆರೆ ದಾಟಿದ ಹೊಡೆತ ಎಂದು ಘೋಷಿಸಿಬಿಟ್ಟ! ಯಾರೂ ನಿರೀಕ್ಷಿಸದ ಘಟನೆ ನಡೆದು ಬಿಟ್ಟಿತು. ಲೈನ್‌ ಅಂಪೈರ್‌, ರೆಫರಿ ನೀಡಿದ ನಿರ್ಣಯಕ್ಕೆ ವ್ಯತಿರಿಕ್ತವಾಗಿ ರೂಬನ್‌ ಸ್ವಯಂ ಸೋಲನ್ನು ಘೋಷಿಸಿಕೊಂಡ. ಹೊರ ನಡೆಯುತ್ತಿದ್ದ ಎದುರಾಳಿಯನ್ನು ಮೈದಾನದ ಮಧ್ಯಕ್ಕೆ ಕರೆದು ಬಿಗಿದಪ್ಪಿದ. ಇಡೀ ಕ್ರೀಡಾ ಜಗತ್ತು ರೂಬನ್‌ ಕ್ರೀಡಾಭಾವದ ಜಗುಲಿಯ ಮುಂದೆ ಜಯಘೋಷಗಳ ಝಂಡಾ ಹಿಡಿದು ನಿಂತಿತ್ತು. ಆ ಸೋಲಿನಲ್ಲೂ ಆತ ಗೆದ್ದು ವಿಜೃಂಭಿಸಿದ.

ಈ ಮಾತು ಹೇಳಿದಾಗ ತಟ್ಟನೆ ನೆನಪಾದವನು ನಮ್ಮವನೇ ಆದ ಕುಳ್ಳ ವಿಶ್ವನಾಥ್‌ ಅರ್ಥಾತ್‌ ಜಿ.ಆರ್‌.ವಿಶ್ವನಾಥ್‌.

ಅಂಪೈರ್‌ ಔಟ್‌ ಎಂದು ತೀರ್ಪು ಕೊಟ್ಟರೂ ಇಂಗ್ಲೆಂಡಿನ ಜಾನ್‌ ಟೈಲರ್‌ನನ್ನು ಪುನಹ ಬ್ಯಾಟಿಂಗಿಗೆ ಕರೆದು ಆಡಲು ಬಿಟ್ಟು ಹಿಗ್ಗಮುಗ್ಗ ಹೊಡೆಸಿಕೊಂಡು ಇಡೀ ಪಂದ್ಯವನ್ನು ವಿಶ್ವನಾಥ್‌ ಕೈ ಬಿಡಲಿಲ್ಲವೇ? ಆ ಇಡೀ ಪಂದ್ಯದಲ್ಲಿ ವಿಜೃಂಭಿಸಿ ಎತ್ತರಕ್ಕೆ ನಿಂತವನು ಈ ಕುಳ್ಳನೇ. ಸೋಲು ಹೇಗೆ ಗೆಲುವನ್ನು ಕಂಗಿರಿ ಮಂಗಿರಿ ಮಾಡಿ ಪ್ರಯೋಜನಕ್ಕೆ ಬಾರದಂತೆ ಮಾಡಬಹುದೆಂಬುದಕ್ಕೆ ಶಿವಖೇರ ಹೇಳಿದ ಮತ್ತೊಂದು ಘಟನೆಯನ್ನು ಹೇಳಬೇಕು. ಕಂಪನಿಯಾಂದರ ಐವರು ನಿರ್ದೇಶಕರು ಕಾರ್ಯ ನಿಮಿತ್ತ ಬೆಂಗಳೂರಿನಿಂದ ದಿಲ್ಲಿಗೆ ಹೋಗಿದ್ದರು. ಅವರು ಮೂರು ದಿನಗಳ ನಂತರ ಬೆಂಗಳೂರಿಗೆ ವಾಪಸ್ಸಾಗಬೇಕಾಗಿತ್ತು. ಆದರೆ ಚೇರ್‌ಮನ್‌ ಐವರಿಗೂ ತಾಪ್ಡ್‌ ತೋಪ್‌ ಬರಲು ಸೂಚಿಸಿದ. ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಿರುವುದರಿಂದ ತಟ್ಟನೆ ಹೊರಡಲು ಹೇಳಿದ. ಸಾಯಂಕಾಲಕ್ಕಿರುವುದು ಒಂದೇ ವಿಮಾನ. ಏನೇ ಆಗಲಿ, ಅದನ್ನು ಹಿಡಿಯಲೇ ಬೇಕು. ಹಾಗೂ ಹೀಗೂ ಟಿಕೆಟ್‌ ಪಡೆದು ಐವರೂ ವಿಮಾನ ನಿಲ್ದಾಣದತ್ತ ದೌಡಾಯಿಸಿದರು. ಇನ್ನೇನು ನಿಲ್ದಾಣ ಬಂತು ಎನ್ನುವಷ್ಟರಲ್ಲಿ ಅವರು ಕುಳಿತಿದ್ದ ಕಾರು ರಸ್ತೆಯ ತಿರುವಿನಲ್ಲಿ ನಿಂತಿದ್ದ ಹಣ್ಣಿನ ತಳ್ಳುಗಾಡಿಗೆ ಉಜ್ಜಿಕೊಂಡು ಹೋಯಿತು. ತಳ್ಳುಗಾಡಿಯಲ್ಲಿದ್ದ ಹಣ್ಣುಗಳೆಲ್ಲ ರಸ್ತೆಯಲ್ಲಿ ಚೆಲ್ಲಾ ಪಿಲ್ಲಿಯಾದವು. ಅವನ್ನು ಮಾರುತ್ತಿದ್ದ ಹೆಂಗಸು ಜೋರಾಗಿ ಕಿರುಚಲಾರಂಭಿಸಿದಲು. ಆಕೆಯ ಆ ದಿನದ ದುಡಿಮೆ ರಸ್ತೆಗೆ ಬಿದ್ದಿತ್ತು. ನಾಲ್ವರು ನಿರ್ದೇಶಕರು ಬಡಬಡನೆ ತಮ್ಮ ಸೂಟ್‌ಕೇಸ್‌ಗಳನ್ನು ಹಿಡಿದು ವಿಮಾನವೇರಲು ಓಡಲಾರಂಭಿಸಿದರು. ಆಗ ಐದನೆಯವನು ಹಣ್ಣು ಮಾರುವ ಹೆಂಗಸಿನತ್ತ ಧಾವಿಸಿ ರಸ್ತೆಗೆ ಬಿದ್ದ ಹಣ್ಣುಗಳನ್ನು ಆರಿಸಿ ಆಕೆಯ ತಳ್ಳುಗಾಡಿಯಲ್ಲಿ ಹಾಕಲಾರಂಭಿಸಿದನು. ಅವನಿಗೆ ಚೆನ್ನಾಗಿ ಗೊತ್ತಿತ್ತು. ವಿಮಾನ ಹೊರಟು ಹೋಗುತ್ತದೆಂಬುದು. ಅದನ್ನು ಲೆಕ್ಕಿಸದೇ ದಿನದ ದುಡಿಮೆಯನ್ನು ಕಳೆದುಕೊಂಡ ನಾಲ್ವರು ಮಕ್ಕಳ ಹೆಂಗಸಿನ ನೆರವಿಗೆ ಧಾವಿಸಿದ್ದ. ಕುರುಡು ಹೆಂಗಸಿಗೆ ಏನು ನಡೆಯುತ್ತಿದೆಯೆಂಬುದೇ ಗೊತ್ತಾಗಲಿಲ್ಲ. ಯಾವುದೋ ಗಂಡಸಿನ ಬೂಟಿನ ಸಪ್ಪಳ ಮಾತ್ರ ಆಕೆಗೆ ಕೇಳಿಸುತ್ತಿತ್ತು. ಚೆಲ್ಲಾ ಪಿಲ್ಲಿಯಾದ ಹಣ್ಣಿನ ಬಾಬ್ತು 200 ರೂಪಾಯಿಗಳನ್ನು ಆಕೆಯ ಕೈಯಲ್ಲಿಟ್ಟು ಹೊರಡಬೇಕೆನ್ನುವಷ್ಟರಲ್ಲಿ ಆಕೆ ಹೇಳಿದ್ದು ಈತನಿಗೆ ಕೇಳಿಸಿತು- ‘ನೀನು ಯಾರು? ದೇವರಾ? ಖಂಡಿತವಾಗಿಯೂ ದೇವರೇ ಇರಬೇಕು’.

ಈತ ವಿಮಾನ ತಪ್ಪಿಸಿಕೊಂಡಿದ್ದ ! ಪರವಾಗಿಲ್ಲ, ಆ ಕ್ಷಣಿಕ ಸೋಲಿನಲ್ಲೂ ಶಾಶ್ವತ ಧನ್ಯತೆ ತುಂಬಿಕೊಂಡಿತ್ತು. ಕೃತಾರ್ಥ ಭಾವ ಅವರಿಸಿಕೊಂಡಿತ್ತು.

I won in defeat ಅಂತ ಹೇಳಿ ಶಿವಖೇರ ಸುಮ್ಮನಾದ. ಅದು ಲಾರೆನ್ಸ್‌ ಲೀ ಮಿಕ್ಸ್‌ ನ ಆತ್ಮಕಥೆಯ ಹೆಸರು. ಇದು ಗೆಲುವು ಎಂಥ ನಿರ್ದಯಿ ಎಂದು ಹೇಳುವುದಷ್ಟೇ ಅಲ್ಲ, ಸೋಲಿನಲ್ಲೂ ಸಾರ್ಥಕ್ಯ ಅರಸುವಂತೆ ಪ್ರೇರೇಪಿಸುವ ಕೃತಿ. ಲಾರೆನ್ಸ್‌ ಮಿಕ್ಸ್‌ ಮಹಾನ್‌ ಓಲಂಪಿಕ್ಸ್‌ ಪಟು. ದೋಣಿ ಸ್ಪರ್ಧೆಯಲ್ಲಿ ಈತನನ್ನು ಮೀರಿಸುವವರಿಲ್ಲ. ಎರಡು ಚಿನ್ನದ ಪದಕಗಳನ್ನುಗೆದ್ದ ಹೆಗ್ಗಳಿಕೆ ಅವನದು. ಅಂದು ಮೂರನೇ ಚಿನ್ನದ ಪದಕದ ಬೇಟೆಗೆ ಲಾರೆನ್ಸ್‌ ನಿಂತಿದ್ದ. ದೋಣಿ ಸ್ಪರ್ಧೆ ಶುರುವಾಯಿತು. ಹದಿನೆಂಟು ಮಂದಿ ಸ್ಪರ್ಧಾಳುಗಳು. ಲಾರೆನ್ಸ್‌ ಆರಂಭದಲ್ಲಿಯೇ ಲೀಡ್‌ ಗಳಿಸಿದ್ದ. ಮುಂದೆ ಮುಂದೆ ಸಾಗುತ್ತಿದ್ದಾಗ ಇತರ ಸ್ಪರ್ಧಿಗಳು ಎಲ್ಲಿದ್ದಾರೆಂಬುದನ್ನು ಗಮನಿಸಲು ಹಿಂದಕ್ಕೆ ತಿರುಗಿದರೆ ಆಘಾತ ಕಾದಿತ್ತು. ನಡು ನೀರಿನಲ್ಲಿ ಸೆಳವಿಗೆ ಸಿಕ್ಕ ದೋಣಿ ಮುಳುಗಲಾರಂಭಿಸಿತ್ತು. ದೋಣಿ ಮುಗುಚಿದ್ದೇ ತಡ, ಅದರಲ್ಲಿದ್ದ ಸ್ಪರ್ಧಿಯ ಕಾಲು ಹಾಯಿಯ ಚಿಲಕದೊಳಕ್ಕೆ ಸಿಲುಕಿಹಾಕಿಕೊಂಡಿತ್ತು. ದೋಣಿ ಮುಳುಗಿದರೂ ಈಜಿ ಬಚಾವಾಗುವಂತಿರಲಿಲ್ಲ. ಆತ ಸಹಾಯಕ್ಕಾಗಿ ಕಿರುಚಿಕೊಳ್ಳುತ್ತಿದ್ದ. ಇತರ ಸ್ಪರ್ಧಾಳುಗಳಿಗೆ ಈತನ ಮೊರೆತ ಕೇಳಿಸಿದರೂ ಅವರ್ಯಾರೂ ಗೆಲ್ಲುವ ಧಾವಂತದಲ್ಲಿ ಇವನತ್ತ ಕತ್ತೆತ್ತಿ ನೋಡಲೂ ಇಲ್ಲ. ಈತನ ಪಾಡನ್ನು ಲಾರೆನ್ಸ್‌ ಗಮನಿಸಿದ. ಮುಂದಕ್ಕೆ ಸಾಗುತ್ತಿದ್ದ ದೋಣಿಯನ್ನು ಹಿಂದಕ್ಕೆ ತಿರುಗಿಸಿದ. ಮುಳುಗುತ್ತಿದ್ದ ಪ್ರತಿಸ್ಪರ್ಧಿಯ ನೆರವಿಗೆ ಕೈ ಚಾಚಿದ. ಕಾಲು ಬಡಿಯಲಾಗದೇ ನೀರು ಕುಡಿಕುಡಿದು ಇನ್ನೇನು ಮುಳುಗಿ ಹೋದನೆಂದುಕೊಳ್ಳುತ್ತಿರುವಾಗ ಲಾರೆನ್ಸ್‌ ಅವನನ್ನು ಮೇಲೆತ್ತಿದ. ಅದೇ ಅವಕಾಶ ಎಂದುಕೊಂಡು ಮಿಕ್ಕವರು ದೋಣಿಗಳನ್ನು ಓಡಿಸಿದರು. ಆ ಸ್ಪರ್ಧೆಯಲ್ಲಿ ಗೆದ್ದರು. ಲಾರೆನ್ಸ್‌ ಕೊನೆಯವನಾಗಿ ಗುರಿ ತಲುಪಿದ. ಆ ಸ್ಪರ್ಧೆ ಯಲ್ಲಿ ಸೋತು ಜಯಶಾಲಿಯಾದ! ಇಡೀ ವಿಶ್ವವೇ ಲಾರೆನ್ಸ್‌ ನ ಕ್ರೀಡಾ ಮನೋಭಾವ ಕಂಡು ಬೆಕ್ಕಸಬೆರಗಾಯ್ತು. ಲಾರೆನ್ಸ್‌ ಆ ಸ್ಪರ್ಧೆ ಯಲ್ಲಿ ಗೆದ್ದಿದ್ದರೆ ಆ ಪರಿ ಮನೆಮಾತು ಆಗುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ಸೋತು ಜಗದ್ವಿಖ್ಯಾತನಾದ. ದೇಶ ದೇಶಗಳ ರಾಜ, ಮಹಾರಾಜರು, ಪ್ರಧಾನಿಗಳು, ಅಧ್ಯಕ್ಷರು ಲಾರೆನ್ಸ್‌ ನನ್ನು ಕರೆದು ಬಿಗಿದಪ್ಪಿ ಸನ್ಮಾನ ಮಾಡಿದರು. ಓಲಂಪಿಕ್ಸ್‌ ಕ್ರೀಡೆಯ ನಿಜವಾದ ಸಂದೇಶವನ್ನು ಆತ ಚಿರಸ್ಥಾಯಿಯಾಗಿಸಿದ್ದ. ತನ್ನ ಸೋಲಿನಲ್ಲಿ, ಇಂದಿಗೂ ಓಲಂಪಿಕ್ಸ್‌ ಕ್ರೀಡೆ ಆರಂಭವಾಗುವುದಕ್ಕೆ ಮೊದಲು ಸಾಂಪ್ರದಾಯಿಕವಾಗಿ ಲಾರೆನ್ಸ್‌ ನ ಚಿತ್ರ ಸ್ಮೃತಿ ಪಟಲದ ಮುಂದೆ ಹಾದು ಹೋಗುತ್ತದೆ. ಸಮಸ್ತ ವಿಶ್ವ ಆತನನ್ನು ನೆನಪಿಸಿಕೊಳ್ಳುತ್ತದೆ.

ಹೀಗೆ ಹೇಳುವಾಗ ಯುದ್ಧ ಭೂಮಿಯಲ್ಲಿ ನರಳುತ್ತಾ ಬಿದ್ದ ಸ್ನೇಹಿತನನ್ನು ನೋಡಲು ಹೊರಟ ಸರ್ದಾರ್‌ ಕರ್ತಾರ್‌ ಸಿಂಗ್‌ ಮೇಳ್ವಿ ಸಹ ನೆನಪಾಗುತ್ತಾನೆ. ತನ್ನ ಜೀವದ ಗೆಳೆಯ ನೆತ್ತರ ಮಡುವಿನಲ್ಲಿ ಬಿದ್ದಿದ್ದಾನೆಂಬ ಕೆಟ್ಟ ಸುದ್ದಿ ಕಿವಿಗೆ ಬಿದ್ದಿದ್ದೇ ತಡ- ಮೇಳ್ವಿ ಮೇಜರ್‌ ಜನರಲ್‌ ಮುಂದೆ ನಿಂತು ಅವನ ನೆರವಿಗೆ ಹೋಗುವುದಾಗಿ ಒಂದೇ ಸಮನೆ ಪೀಡಿಸುತ್ತಾನೆ. ‘ಅಲ್ಲಿ ಗುಂಡಿನ ಧಾರೆಯಾಗುತ್ತಿದೆ. ನಿನ್ನ ಸ್ನೇಹಿತನಂತೂ ಮರಳಿ ಬರಲಾರ. ನೀನು ಹೋದರೆ ಅವನಿಗೆ ಒದಗಿದ ಸ್ಥಿತಿ ನಿನಗೂ ಬರಬಹುದು. ನಿನ್ನನ್ನು ಕಳೆದುಕೊಳ್ಳಲು ನಾನು ಸಿದ್ಧನಿಲ್ಲ. ನೀನು ಹೋಗುವಂತಿಲ್ಲ’ ಎಂದು ಮೇಜರ್‌ ಹೇಳುತ್ತಾನೆ. ಮೇಳ್ವಿ ಕೇಳುವುದಿಲ್ಲ. ಮತ್ತೆ ರೊಚ್ಚಿಗೆ ನಿಲ್ಲುತ್ತಾನೆ. ಮನಸ್ಸಿಲ್ಲದ ಮನಸ್ಸಿನಿಂದ ಮೇಜರ್‌ ಹೂಂ ಅನ್ನುತ್ತಾನೆ.

ಓಡೋಡುತ್ತಾ ಯುದ್ಧ ಭೂಮಿಗೆ ಹೋದರೆ ಗೆಳೆಯ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾನೆ. ಮೇಳ್ವಿಯನ್ನು ಕಂಡಿದ್ದೇ ಆತನಿಗೆ ಅಮಿತಾನಂದವಾಗುತ್ತದೆ. ಆ ಖುಷಿಯಲ್ಲಿ ಆ ಹೊತ್ತಿಗೆ ಏನು ಹೇಳಬೇಕು ಎಂದು ಗೊತ್ತಾಗುವುದಿಲ್ಲ. ‘ನನಗೆ ಗೊತ್ತಿತ್ತು ನೀನು ಬಂದೇ ಬರ್ತೀಯಾ ಅಂತ’ ದನಿ ಕ್ಷೀಣಿಸುತ್ತಾ ಹೇಳಿದ ಮಾತುಗಳು ದಿಢೀರ್‌ ನಿಂತುಹೋದವು. ಮೇಳ್ವಿಯ ತೊಡೆಯ ಮೇಲೆ ಆತ ಪ್ರಾಣ ಬಿಟ್ಟಿದ್ದ. ಕೊನೆಯುಸಿರೆಳೆಯಲು ಸ್ನೇಹಿತನ ಆಗಮನಕ್ಕೆ ಆತ ಕಾದಿದ್ದಿರಬೇಕು. ಸ್ನೇಹಿತನ ಹೆಣವನ್ನು ಹೆಗಲ ಮೇಲೆ ಹೊತ್ತು ಬರುತ್ತಿರುವಾಗ ಮೇಳ್ವಿಯ ಬಲ ತೊಡೆ, ಭುಜಕ್ಕೆ ಶತ್ರು ಪಾಳೆಯದಿಂದ ಸಿಡಿದ ಗುಂಡುಗಳು ನೆಟ್ಟವು. ಆದರೂ ಮೇಳ್ವಿ ಹೆಣವನ್ನು ಬಿಸಾಕಿ ಬರಲಿಲ್ಲ. ಕುಂಟುತ್ತಾ ತೆವಳುತ್ತಾ ಮೇಜರ್‌ ಇದ್ದಲ್ಲಿಗೆ ಬಂದಿದ್ದ. ‘ನಿನಗೆ ಹೇಳಲಿಲ್ಲವೇ ನಾನು? ನಿನ್ನ ಸ್ನೇಹಿತ ಬದುಕಿರುವುದಿಲ್ಲ ಅಂತ. ಆದರೂ ಹೋದೆ. ನೀನೂ ಗಾಯಾಳುವಾದೆ. ಇಷ್ಟು ಮಾಡಿ ಏನು ಸಾಧಿಸಿದೆ ಹೇಳು?’ ಎಂದು ಮೇಜರ್‌ ಗದರಿದ. ಅದಕ್ಕೆ ಮೇಳ್ವಿ ಹೇಳಿದ್ದು- ‘ನಾನು ಹೋಗದಿದ್ದರೆ ಜೀವನದಲ್ಲೇ ದೊಡ್ಡ ತಪ್ಪನ್ನು ಮಾಡುತ್ತಿದ್ದೆ. ಆತ ನನ್ನ ತೊಡೆಯ ಮೇಲೆ ಪ್ರಾಣವನ್ನು ಬಿಟ್ಟ.’

ಮೇಳ್ವಿ ರಕ್ತಸಿಕ್ತನಾಗಿ ಗಾಯಗೊಂಡಿರಬಹುದು. ಗೆಳೆತನದ ವಿಸ್ತಾರ ಅವನಲ್ಲಿ ಸಾರ್ಥಕ್ಯ, ಧನ್ಯತೆಯನ್ನು ಮೂಡಿಸಿದ್ದವು.

ಸೋಲಿನಲ್ಲಿ ಕಾಣುವ ಗೆಲುವು, ಗೆದ್ದಾಗ ಕಾಣುವ ಜಯಕ್ಕಿಂತ ರೋಚಕವಾಗಿರುತ್ತದೆ. ಸೋಲು ಕೂಡ ಅವಿಸ್ಮರಣೀಯವಾಗೋದು ಬದುಕಿನ ಈ ರೀತಿಯ ತಿರುವುಗಳಲ್ಲಿ. ಸೋಲೂ ಸಹ್ಯವಾಗುವುದು ಹೀಗೇ!

ಕೆಲವೊಮ್ಮೆ ಸೋಲೆಂಬುದು ಗೆಲುವನ್ನೂ ಸೋಲಿಸಿ ಬಿಡುತ್ತೆ ಅಲ್ಲವೇ?

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X