• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಯಿಗಾಗಿ ವರ್ಷಗಟ್ಟಲೆ ತಲೆಕೆಡಿಸಿಕೊಂಡ ಅಧಿಕಾರಶಾಹಿ !

By Staff
|
Vishweshwar Bhat ವಿಶ್ವೇಶ್ವರ ಭಟ್‌
ಅರುಣ್‌ ಶೌರಿ ಅಧಿಕಾರ ಕಳೆದಕೊಂಡ ನಾಲ್ಕು ತಿಂಗಳುಗಳಲ್ಲಿ ಒಂದು ಸೊಗಸಾದ ಪುಸ್ತಕ ಬರೆದಿದ್ದಾರೆ. Governance and the sclerosis that has set in ಅಂತ ಪುಸ್ತಕದ ಹೆಸರು.‘ಮಾಡಲೇನೂ ಕೆಲಸವಿಲ್ಲದಾಗ ಬರೆಯುತ್ತೇನೆ. ಅದೂ ಇಲ್ಲದಾಗ ಪ್ರೊಫ್‌ರೀಡ್‌ ಮಾಡುತ್ತೇನೆ’ ಎಂದು ಎನ್‌ಡಿಎ ಸರಕಾರ ಪತನವಾದಾಗ ಅಲ್ಲಿ ಮಂತ್ರಿಯಾಗಿದ್ದ ಶೌರಿ ಹೇಳಿದ್ದರು. ಈಗ ಅವೆರಡೂ ಕೆಲಸಗಳನ್ನು ಮುಗಿಸಿದ್ದಾರೆ.

ಈ ದೇಶ ಕಂಡ ಉತ್ತಮ ಪತ್ರಕರ್ತರಲ್ಲಿ ಶೌರಿ ಕೂಡ ಒಬ್ಬರು. ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಸಂಪಾದಕರಾಗಿ ಶೌರಿ ಬೆಳೆದ ಎತ್ತರವನ್ನು ಎಲ್ಲರೂ ನೋಡಿದ್ದಾರೆ. ಸರಕಾರವನ್ನು ಮೈಮೇಲೆ ಎಳೆದುಕೊಂಡು ಕಾದಾಡಿದ ಶೌರಿ, ಎ.ಆರ್‌.ಅಂಟುಳೆ, ರಾಜೀವ್‌ ಗಾಂಧಿಗೆ ಯಪ್ಪಾಯಮ್ಮಾ ಕಾಡಿದ್ದನ್ನು ಯಾರೂ ಮರೆಯುವಂತಿಲ್ಲ. ಭ್ರಷ್ಟಾಚಾರದ ಬಗ್ಗೆ ಸದಾ ದನಿಯೆತ್ತುತ್ತಲೇ ಬಂದ ಶೌರಿ, ಎದುರಿಗಿದ್ದವ ಯಾರೇ ಆಗಿರಲಿ ಸೊಪ್ಪು ಹಾಕಲಿಲ್ಲ. ದಮಡಿ ದರಕರಿಸಲಿಲ್ಲ.‘ಬನ್ನಿ, ನಿಮ್ಮ ಜತೆ ಸ್ವಲ್ಪ ಮಾತಾಡಬೇಕು’ ಎಂದು ಇಂದಿರಾಗಾಂಧಿ ಹಾಗೂ ಅನಂತರ ರಾಜೀವ್‌ಗಾಂಧಿ ಹೇಳಿಕಳಿಸಿದರೆ ‘ನನಗೆ ಅದರ ಅಗತ್ಯ ಕಾಣುತ್ತಿಲ್ಲ’ ಎಂದು ಖಡಾಖಡಿ ಹೇಳಿ ಆಮಂತ್ರಣ ನಿರಾಕರಿಸಿದ್ದರು. ಶೌರಿ ತನಿಖಾ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ಕೊಟ್ಟವರು. ಶೌರಿ ಏನೇ ಬರೆಯಲಿ ಆಧಾರ, ಸಾಕ್ಷ್ಯಗಳಿಲ್ಲದೇ ಬರೆಯುವುದಿಲ್ಲ. ಏನೇ ಬರೆದಾಗಲೂ ಒಂದಿಷ್ಟು ಸುದ್ದಿ, ವಿವಾದ ಎಬ್ಬಿಸದೇ ಹೋಗುವುದಿಲ್ಲ. ಪುಸ್ತಕ ಬರೆದಾಗಲೂ ಶೌರಿ ವಿವಾದಗ್ರಸ್ತರಾದರು. Worshipping False God ಬರೆದಾಗ ದೇಶಾದ್ಯಂತ ಅವರ ಪ್ರತಿಕೃತಿ ಸುಡಲಾಯಿತು. ಆದರೆ ಅವರು ಎತ್ತಿದ ಪ್ರಶ್ನೆಗಳಿಗೆ ಯಾರೂ ಸಮರ್ಪಕ ಉತ್ತರ ಕೊಡಲಿಲ್ಲ. ಶೌರಿ ತಪ್ಪೆಂದು ಯಾರಿಗೂ ಸಾಬೀತುಪಡಿಸಲು ಆಗಲಿಲ್ಲ.

Arun Shouries new book creates waves of hot debateಅಂಥ ಶೌರಿ ಏಕಾಏಕಿ ರಾಜ್ಯಸಭಾ ಸದಸ್ಯರಾಗಿ (ಬಿಜೆಪಿ) ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಿ ಕುಳಿತಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಜೀವನವಿಡೀ ಸರಕಾರ ಹಾಗೂ ಆಡಳಿತ ವ್ಯವಸ್ಥೆ ಬಗ್ಗೆ ಹೋರಾಡಿದ ಶೌರಿ, ಈಗ ಅದೇ ವ್ಯವಸ್ಥೆಯ ಭಾಗವಾಗಿ, ಎಲ್ಲ ಅಹಿತಕರ ಬೆಳವಣಿಗೆಗಳಲ್ಲಿ ಷಾಮೀಲಾಗಿ ಪತ್ರಕರ್ತ ಶೌರಿ ಕಳೆದು ಹೋಗಬಹುದಾ ಎಂದು ಅನೇಕರು ಆತಂಕಪಟ್ಟಿದ್ದರು. ಆದರೆ ಮಂತ್ರಿಯಾಗಿ ಕುಳಿತಾಗ ಅಧಿಕಾರ ಅವರ ತಲೆಗೇರಲಿಲ್ಲ. ಅವರ ಭುಜದ ಮೇಲೆಯೇ ತಲೆಯಿತ್ತು. ‘ಪತ್ರಕರ್ತ ಶೌರಿ’ ಹಾಗೂ ಮಂತ್ರಿ ಶೌರಿಗೆ ಹೆಚ್ಚಿನ ಫರಕು ಇರಲಿಲ್ಲ.

ಮೂರು ವರ್ಷಗಳ ಹಿಂದೆ ನಾನು, ಸ್ನೇಹಿತ ರವಿ ಬೆಳಗೆರೆಯವರೊಂದಿಗೆ ಶೌರಿಯನ್ನು ಭೇಟಿ ಮಾಡಲು ಅವರ ದಿಲ್ಲಿಯ ಕಚೇರಿಗೆ ಹೋದಾಗ, ನಮ್ಮನ್ನು ಬರಮಾಡಿಕೊಳ್ಳಲು ಶೌರಿ ಬಾಗಿಲಿಗೆ ಬಂದಿದ್ದರು. ‘ನೀವು ನನ್ನ ವೃತ್ತಿಬಾಂಧವರು’ ಎಂದೇ ಮಾತಿಗೆ ಮುನ್ನುಡಿಯಿಟ್ಟರು. ಹೋಗುವಾಗಲೂ ಬಾಗಿಲತನಕ ಬಂದು ಬೀಳ್ಕೊಟ್ಟಿದ್ದರು. ಇದೇನು ಮಹಾ ಎಂದೆನಿಸಬಹುದು. ದಿಲ್ಲಿಯಲ್ಲಿ ಕುಳಿತ ಕೇಂದ್ರಮಂತ್ರಿ ಅಧಿಕಾರದ ತೊಟ್ಟು ನೀರು ಕುಡಿದು ಕುಳಿತರೆ ನಮಗೆ ಎಷ್ಟೇ ಹತ್ತಿರನಾಗಿದ್ದರೂ ಆತ ವರ್ತಿಸುವ ರೀತಿಯೇ ಬೇರೆ. ಆದರೆ ಮಂತ್ರಿಯಾದಾಗಲೂ ಶೌರಿ ತೀರಾ ಸರಳವಾಗಿದ್ದರು. ಮನೆತುಂಬಾ ಆಳುಕಾಳುಗಳು, ಕೈಗೆ ಕಾಲಿಗೆ ಸಹಾಯಕರನ್ನು ಬಿಟ್ಟುಕೊಳ್ಳಲಿಲ್ಲ. ಕಚೇರಿಗೆ ಹೊರಡುವ ಮೊದಲು ತಮ್ಮ ಏಕೈಕ ಬುದ್ಧಿಮಾಂದ್ಯ ಮಗನಿಗೆ ಸ್ನಾನ ಮಾಡಿಸಿ, ಬಟ್ಟೆಹಾಕಿ, ತಿಂಡಿ ತಿನಿಸಿ, ತಲೆ ನೇವರಿಸಿ ಮುದ್ದು ಮಾಡುತ್ತಿದ್ದರು. Courts and their judgements ಪುಸ್ತಕವನ್ನು ಬುದ್ಧಿಮಾಂದ್ಯ ಮಗನಿಂದ ಬಿಡುಗಡೆ ಮಾಡಿಸಿ ಆತನಿಂದಲೇ ಮೊದಲ ಪ್ರತಿಯನ್ನು ಪ್ರಧಾನಿಗೆ ಕೂಡಿಸಿದರು. ತೀರಾ ಮೃದು, ಸಂಕೋಚ, ಸಜ್ಜನಿಕೆಯ ಶೌರಿ, ಬರೆಯಲು ಕುಳಿತರೆ ಯಾರನ್ನೂ ಬಿಡುವುದಿಲ್ಲ. ಆಗ ಈ ಆರ್ದ್ರತೆ ಮಾಯವಾಗಿರುತ್ತದೆ.

ಅಂಥ ಶೌರಿ ಮಂತ್ರಿಗಿರಿ ಹೋದ ಬಳಿಕ ಸರಕಾರದಲ್ಲಿ ತಾವು ಕಂಡ ಕೆಲವು ಕಟುಸತ್ಯಗಳನ್ನು ಈಗ ಕಟ್ಟಿಕೊಟ್ಟಿದ್ದಾರೆ. ಅಧಿಕಾರಿಗಳು ಫೈಲ್‌ಗಳ ಮೇಲೆ ಕೆಂಪು ಅಥವಾ ಕಪ್ಪು ಶಾಯಿ (ಇಂಕ್‌) ಪೆನ್ನಿನಿಂದ ಷರಾ ಬರೆದು ಸಹಿ ಮಾಡಬಹುದೇ ಎಂಬ ‘ಕ್ಷುಲಕ’ ವಿಷಯದ ಬಗ್ಗೆ ಅಧಿಕಾರಿಗಳ ಮಧ್ಯೆ ನಡೆದ ಕಾಲಕ್ಷೇಪ, ಪತ್ರವ್ಯವಹಾರವನ್ನು ಶೌರಿ ಸ್ವಾರಸ್ಯಕರವಾಗಿ ಬಣ್ಣಿಸಿದ್ದಾರೆ. ನಮ್ಮ ಸರಕಾರವನ್ನು ಆವರಿಸಿರುವ ಆಲಸ್ಯಕ್ಕೆ, ಅಧಿಕಾರಿಗಳ ಜಾಡ್ಯಕ್ಕೆ, ದೇಶ ಅನುಭವಿಸುತ್ತಿರುವ ಹಿನ್ನಡೆಗೆ ಇದೊಂದು ಪ್ರಸಂಗ ಸಾಕು. ಭಲೇ ತಮಾಷಿಯಾಗಿದೆ. ಓದಿ.

1999 ರ ಜನವರಿಯಲ್ಲಿ ಕೇಂದ್ರ ಸರಕಾರದ ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಅಧಿಕೃತ ಫೈಲಿನ ಮೇಲೆ ಷರಾ ಬರೆದಿದ್ದರು. ಆ ಫೈಲು ಮತ್ತೊಂದು ಟೇಬಲ್‌ಗೆ ಹೋಯಿತು. ಅಲ್ಲಿದ್ದ ಅಧಿಕಾರಿಗೆ ಒಂದು ಯೋಚನೆ ಹೊಳೆಯಿತು -ಒಬ್ಬರು ಕೆಂಪು , ಮತ್ತೊಬ್ಬರು ನೀಲಿ ಇಂಕ್‌ನಲ್ಲಿ ಸಹಿ ಮಾಡಿದ್ದಾರಲ್ಲ , ಹಾಗೆ ಮಾಡಬಹುದಾ? ಆತ ಆಡಳಿತಾತ್ಮಕ ಸುಧಾರಣಾ ಇಲಾಖೆ ಹಾಗೂ ಸಾರ್ವಜನಿಕ ಕುಂದುಕೊರತೆ ಇಲಾಖೆಗೆ ‘ನೀಲಿ ಹಾಗೂ ಕಪ್ಪು ಇಂಕ್‌ ಹೊರತಾಗಿ ಬೇರೆ ಇಂಕ್‌ನ್ನು ಅಧಿಕಾರಿಗಳು ಸಹಿ ಮಾಡಲು ಬಳಸಬಹುದಾ ಎಂದು ಸಚಿವಾಲಯ ತಿಳಿಯಬಯಸುತ್ತದೆ’ ಎಂದು ಅಧಿಕೃತ ಪತ್ರ ಬರೆದ. ಈ ಎರಡು ಇಲಾಖೆಗಳ ಕಟ್ಟಡ ಉಕ್ಕು ಸಚಿವಾಲಯದ ಅಕ್ಕಪಕ್ಕದಲ್ಲಿಯೇ ಇದ್ದರೂ ಪತ್ರ ಆರು ದಿನಗಳ ನಂತರ ತಲುಪಿತು. ಪತ್ರ ಸಿಕ್ಕ ತಕ್ಷಣ ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಮೀಟಿಂಗ್‌ ಕರೆದರು. ಇಂಥದೇ ಮೀಟಿಂಗ್‌ ಕುಂದುಕೊರತೆ ಇಲಾಖೆಯಲ್ಲೂ ಏರ್ಪಾಡಾಯಿತು. ಯಾವುದೇ ನಿರ್ಧಾರಕ್ಕೆ ಬರಲಾಗದೇ ಮುಂದಿನ ವಾರಕ್ಕೆ ಸಭೆಯನ್ನು ಮುಂದೂಡಲಾಯಿತು. ಮುಂದಿನ ವಾರ ಸೇರಿದ ಸಭೆಯಲ್ಲಿ, ಇದು ಇಂಕ್‌ಗೆ ಸಂಬಂಧಿಸಿದ ವಿಷಯವಾದ್ದರಿಂದ ಮುದ್ರಣ ನಿರ್ದೇಶನಾಲಯದ ಸಲಹೆ, ಮಾರ್ಗದರ್ಶನ ಪಡೆಯಬೇಕು ಎಂದು ಆಡಳಿತ ಸುಧಾರಣಾ ಇಲಾಖೆ ನಿರ್ಣಯ ಅಂಗೀಕರಿಸಿತು!

ಮೇ 3, 1999 ರಂದು ಆಡಳಿತ ಸುಧಾರಣಾ ಇಲಾಖೆ ಬರೆದ ಅಧಿಕೃತ ಪತ್ರ ಮುದ್ರಣ ನಿರ್ದೇಶನಾಲಯ ತಲುಪಿತು. ನಿರ್ದೇಶನಾಲಯದ ಮುಖ್ಯಸ್ಥರು ಹಿರಿಯ ಅಧಿಕಾರಿಗಳ ಸಭೆ ಕರೆದು ಪತ್ರದ ವಿಷಯ ಪ್ರಸ್ತಾಪಿಸಿದರು. ಅವರೆಲ್ಲ ರೂ ಲಾಬುಕ್‌ಗಳನ್ನು ತಡಕಾಡಿದರು. ಪುನಃ ಮೂರು ಬಾರಿ ಸಭೆ ಸೇರಿದರು. ಇಷ್ಟಕ್ಕೆ ಮೂರು ವಾರಗಳ ಕಾಲಕ್ಷೇಪ ಮಾಡಿ ಯಾವ ಇಂಕ್‌ನಲ್ಲಿ ಸಹಿ ಮಾಡಬೇಕೆಂಬ ಬಗ್ಗೆ ನಿರ್ದೇಶನಾಲಯದಲ್ಲಿ ನಿಶ್ಚಿತ ನಿಯಮ ಇಲ್ಲದ್ದರಿಂದ ಈ ಅಂಶದ ಬಗ್ಗೆ ಹೆಚ್ಚಿನ ಮಾರ್ಗದರ್ಶನ ಕೋರಿ ಗೃಹ ಸಚಿವಾಲಯದ ಸಿಬ್ಬಂದಿ, ತರಬೇತಿ ಇಲಾಖೆಗೆ ಪತ್ರ ಬರೆಯಲು ಮುದ್ರಣ ನಿರ್ದೇಶನಾಲಯ ನಿರ್ಧರಿಸಿತು.

ಜುಲೈ 6, 1999ರಂದು ಸಿಬ್ಬಂದಿ, ತರಬೇತಿ ಇಲಾಖೆ ಅಧಿಕಾರಿಗಳು ಸಭೆ ಸೇರಿ ಈ ವಿಷಯವನ್ನು ಆಡಳಿತ ಸುಧಾರಣಾ ಇಲಾಖೆಗೆ ಕಳಿಸಲು ನಿರ್ಧರಿಸಿದರು. ಯಾವ ಇಲಾಖೆ ಸಲಹೆ ಕೇಳಿತ್ತೋ, ಅಲ್ಲಿಗೇ ಪುನಃ ತಿರುಗಿ ಬಂದಿತ್ತು! ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಪುನಃ ಸಭೆ ಸೇರಿದರು. ಅಲ್ಲಿ ಅವರೊಂದು ನಿರ್ಧಾರ ಅಂಗೀಕರಿಸಿದರು-‘ಯಾವ ಇಂಕ್‌ನಲ್ಲಿ ಸಹಿ ಮಾಡಬೇಕೆಂಬುದು ವಿಷಯವನ್ನು ಆಧರಿಸಿರುತ್ತದೆ. ಕೆಲವು ಫೈಲ್‌ಗಳನ್ನು ಶಾಶ್ವತವಾಗಿ ರಕ್ಷಿಸಿಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಸಹಿ ಮಾಡಿದ ಇಂಕ್‌ ಅಳಿಸಿ ಹೋಗಬಾರದು.ಆದ್ದರಿಂದ ಈ ವಿಷಯದ ಬಗ್ಗೆ ಇನ್ನಷ್ಟು ಚರ್ಚೆ ಅಗತ್ಯ’.

ಮುಂದಿನವಾರ ಆಡಳಿತ ಸುಧಾರಣಾ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಕರೆಯಿತು. ಕೆಲವು ಪರಿಣತರನ್ನು ಆ ಸಭೆಗೆ ಕರೆಯಲಾಗಿತ್ತು. ಅಲ್ಲೊಂದು ನಿರ್ಣಯ ಸ್ವೀಕರಿಸಲಾಯಿತು-‘ಫೈಲಿನ ಮಹತ್ವ ನೋಡಿ ಬಾಲ್‌ಪೆನ್‌ನಿಂದ ಸಹಿ ಮಾಡಬೇಕೋ, ಇಂಕ್‌ಪೆನ್‌ನಿಂದ ಸಹಿ ಮಾಡಬೇಕೋ ಎಂಬುದನ್ನು ನಿರ್ಧರಿಸಬೇಕು. ಇದನ್ನು ಪರಿಗಣಿಸಿ ಇಂಕಿನ ಬಣ್ಣ ತೀರ್ಮಾನಿಸಬೇಕು. ಫೈಲಿನ ಸಂರಕ್ಷಣೆ ಅಂಶ ಪ್ರಮುಖವಾಗಿರುವುದರಿಂದ ಸರಕಾರಿ ದಾಖಲೆಗಳನ್ನು ಕಾಪಾಡುವ ರಾಷ್ಟ್ರೀಯ ಪತ್ರಾಗಾರ (ಆರ್‌ಕೈವ್ಸ್‌)ದ ಸಲಹೆ ಪಡೆಯಬೇಕು.

ಸರಿ, 12 ಆಗಸ್ಟ್‌ 1999ರಂದು ರಾಷ್ಟ್ರೀಯ ಪತ್ರಾಗಾರದ ಮಹಾನಿರ್ದೇಶಕರಿಗೆ ಆಡಳಿತ ಸುಧಾರಣಾ ಇಲಾಖೆ ಮುಖ್ಯಸ್ಥರು ಪತ್ರ ಬರೆದರು. ಆವರು ಸಹ ಸಭೆ ಕರೆದು ತಮ್ಮ ಅಭಿಪ್ರಾಯವನ್ನು ಆಗಸ್ಟ್‌ 29, 1999 ರಂದು ಕಳಿಸಿದರು. ಅದರಲ್ಲಿ ಪತ್ರಾಗಾರ ಮಹಾ ನಿರ್ದೇಶಕರು ಹೀಗೆ ಬರೆದಿದ್ದರು-‘ಬಾಲ್‌ಪಾಯಿಂಟ್‌ ಅಥವಾ ಇಂಕ್‌ಪೆನ್‌ ಬಳಸಿ ಫೈಲುಗಳನ್ನು ಶಾಶ್ವತವಾಗಿಡಬಹುದು. ಆದರೆ ಬಳಸಿದ ಇಂಕ್‌ ಐಎಸ್‌ಐ ಗುಣಮಟ್ಟ ಹೊಂದಿರಬೇಕು’.

ಇಷ್ಟೆಲ್ಲ ಬರೆದ ಬಳಿಕ ಮಹಾನಿರ್ದೇಶಕರು ಕೊನೆಯಲ್ಲೊಂದು ವಾಕ್ಯ ಬರೆದಿದ್ದರು-‘ಫೈಲುಗಳ ಶಾಶ್ವತತೆಗೂ ಇಂಕಿನ ಬಣ್ಣಕ್ಕೂ ಯಾವುದೇ ಸಂಬಂಧ ಇಲ್ಲ ’.

ಈ ಪತ್ರ ಆಡಳಿತ ಸುಧಾರಣಾ ಇಲಾಖೆಗೆ ಬಂತು. ಇಲಾಖೆಯ ಮುಖ್ಯಸ್ಥರು ಪುನಃ ಸಭೆ ಕರೆದರು. ಅಲ್ಲಿ ರಾಷ್ಟ್ರೀಯ ಪತ್ರಾಗಾರದಿಂದ ಬಂದ ಪತ್ರದ ಬಗ್ಗೆ ಚರ್ಚೆ ನಡೆಯಿತು. ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ಭಾರತೀಯ ಸೇನೆಯ ಬೇರೆ ಬೇರೆ ಗ್ರೇಡ್‌ನ ಅಧಿಕಾರಿಗಳು ಬೇರೆ ಬೇರೆ ಬಣ್ಣದ ಇಂಕನ್ನು ಬಳಸುವುದರಿಂದ ಅವರ ಸಲಹೆ ಕೋರಿ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಉತ್ತರ ಬರೆದರು- ‘ಸೇನೆಯಲ್ಲಿ ಮಹಾದಂಡನಾಯಕರು ಕೆಂಪು, ಹಿರಿಯ ಅಧಿಕಾರಿಗಳು ಹಸಿರು ಹಾಗೂ ಇತರ ಅಧಿಕಾರಿಗಳು ಬೇರೆ ಬೇರೆ ಬಣ್ಣದ ಇಂಕನಲ್ಲಿ ಸಹಿ ಮಾಡುತ್ತಾರೆ. ಆದರೂ ಈ ವಿಷಯದ ಬಗ್ಗೆ ಸಿಬ್ಬಂದಿ, ತರಬೇತಿ ಇಲಾಖೆ ಸಲಹೆ ಪಡೆಯವುದು ಉತ್ತಮ’. ಅಷ್ಟಕ್ಕೆ ಸಮ್ಮನಾಗದ ಅವರು ಒಂದು ಪ್ರತಿಯನ್ನು ಸಿಬ್ಬಂದಿ ತರಬೇತಿ ಇಲಾಖೆಗೂ ಕಳಿಸಿದರು. ಅಷ್ಟರೊಳಗೆ ಈ ಇಲಾಖೆಗೆ ಇದೇ ವಿಷಯ ಕುರಿತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕುಂದುಕೊರತೆ ಇಲಾಖೆ ಕನಿಷ್ಠ ಹದಿನೈದು ಬಾರಿ ಸಭೆ ಕರೆದು ಚರ್ಚಿಸಿದ್ದವು.

ಕಟ್ಟಕಡೆಗೆ ಆಡಳಿತ ಸುಧಾರಣಾ ಇಲಾಖೆ ಏಪ್ರಿಲ್‌ 5, 2000 ರಂದು ಉಕ್ಕು ಸಚಿವಾಲಯಕ್ಕೆ ಪತ್ರ ಬರೆಯಿತು- ಕಪ್ಪು ಅಥವಾ ನೀಲಿ ಇಂಕನ್ನು ಎಲ್ಲ ಸಿಬ್ಬಂದಿ ಹಾಗೂ ಅಧಿಕಾರಿಗಳು ಬಳಸಬಹುದು. ಅಪರೂಪದ ಸಂದರ್ಭಗಳಲ್ಲಿ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ಹಾಗೂ ಮೇಲಿನ ಅಧಿಕಾರಿಗಳು ಹಸಿರು ಅಥವಾ ಕೆಂಪು ಇಂಕ್‌ನಲ್ಲಿ ಸಹಿ ಮಾಡಬಹುದು. ಕರಡು ಪ್ರತಿ ಕಪ್ಪು ಅಥವಾ ನೀಲಿ ಇಂಕಿನಲ್ಲಿರಬಹುದು. ಯಾವುದೇ ತಿದ್ದುಪಡಿ ಮಾಡಬೇಕೆನಿಸಿದಾಗ ಹಸಿರು ಅಥವಾ ಕೆಂಪು ಇಂಕ್‌ ಬಳಸಬಹುದು. ಇದರಿಂದ ತಿದ್ದುಪಡಿ ಮಾಡಿದ್ದು ಗೊತ್ತಾಗುತ್ತದೆ.

ಸುಮಾರು ನೂರಕ್ಕೂ ಹೆಚ್ಚು ಅಧಿಕಾರಗಳು (ಐಎಎಸ್‌ ಅಧಿಕಾರಿಗಳು ಸೇರಿ) ಒಂದೂವರೆ ವರ್ಷಗಳ ಕಾಲ ಸಭೆ, ಸಮಾಲೋಚನೆ ಮಾಡಿ ಯಾವ ಬಣ್ಣದ ಇಂಕಿನಲ್ಲಿ ಸಹಿ ಮಾಡಬೇಕೆಂಬ ಬಗ್ಗೆ ಅಂತಿಮವಾಗಿ ತೆಗೆದುಕೊಂಡ ನಿರ್ಧಾರವಿದು! ನಮ್ಮ ಅಧಿಕಾರಶಾಹಿ, ಸರಕಾರ ಹೇಗೆ ಕೆಲಸ ಮಾಡುತ್ತವೆ ನೋಡಿ. ನಮ್ಮ ದುಡ್ಡಿನಲ್ಲಿ ಸಂಬಳ ತಿನ್ನುವ ಈ ಅಧಿಕಾರಿಗಳನ್ನು ಕೇಳುವವರು ಯಾರೂ ಇಲ್ಲ. ಸರಕಾರವೆಂಬ ದಪ್ಪ ಚರ್ಮದ ಪ್ರಾಣಿ ಕೆಲಸ ಮಾಡುವುದೇ ಹೀಗೆ. ಈ ಪ್ರಾಣಿ ಇಷ್ಟು ವರ್ಷಗಳ ಕಾಲ ಕೆಲಸ ಮಾಡಿರುವುದು, ಮುಂದೆ ಮಾಡುವುದೇ ಹೀಗೇನೆ.

ಯಾವ ಬಣ್ಣದ ಇಂಕಿನಲ್ಲಿ ಸಹಿ ಮಾಡಬೇಕೆಂಬ ವಿಷಯ ಇಲ್ಲಿಗೇ ಇತ್ಯರ್ಥವಾಯಿತೆಂದು ಭಾವಿಸಬೇಕಿಲ್ಲ. ರಾಷ್ಟೀಯ ಪತ್ರಾಗಾರದ ಮಹಾನಿರ್ದೇಶಕನ ಪ್ರಕಾರ ಶಾಶ್ವತವಾಗಿ ಕಾದಿಡುವ ಫೈಲ್‌ನಲ್ಲಿ ಐಎಸ್‌ಐ ಗುರುತಿರುವ ಇಂಕನ್ನು ಬಳಸಬೇಕಾಗಿರುವುದರಿಂದ, ಆ ಗುರುತಿರದ ಇಂಕಿನಿಂದ ಸಹಿ ಮಾಡುವುದು ಸರಿಯಲ್ಲ ಎಂದು ಯಾರಾದರೂ ತಗಾದೆ ತೆಗೆಯಬಹುದು.

ಇಂಥ ಕಾನೂನು, ಆಡಳಿತ ವ್ಯವಸ್ಥೆಯನ್ನು ನೆಚ್ಚಿಕೊಂಡು, ಕುಳಿತಿದ್ದೇವಲ್ಲಾ ನಾವೆಂಥಾ ಗಾಂಪರು ಮಾರಾಯ್ರೇ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more